ಸ್ವಾಮಿ ಚಿದಾನಂದ ವೈಎಸ್ಎಸ್/ಎಸ್ಆರ್‌ಎಫ್ ನ ಚುನಾಯಿತ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರು

Swami Chidananda President and Spiritual Head of YSS/SRF.ಜನವರಿ 2011 ರಿಂದ ಕಳೆದ ತಿಂಗಳು ನಿಧನರಾಗುವವರೆಗೂ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ (ವೈಎಸ್ಎಸ್/ಎಸ್ಆರ್‌ಎಫ್) ನ ಅಧ್ಯಕ್ಷೆ ಮತ್ತು ಆಧ್ಯಾತ್ಮಿಕ ಮುಖ್ಯಸ್ಥೆಯ ಸ್ಥಾನದಲ್ಲಿ ಸೇವೆ ಸಲ್ಲಿಸಿದ ಶ್ರೀ ಮೃಣಾಲಿನಿ ಮಾತಾರವರ ಉತ್ತರಾಧಿಕಾರಿಯಾಗಿ ಸ್ವಾಮಿ ಚಿದಾನಂದ ಗಿರಿ ಅವರು ಆಯ್ಕೆಯಾಗಿದ್ದಾರೆ ಎಂಬ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ ನಿರ್ದೇಶಕರ ಮಂಡಳಿ ಸಂತೋಷಪಡುತ್ತದೆ. ಆಗಸ್ಟ್ 30, 2017 ರ ಬುಧವಾರ ಎಸ್ಆರ್‌ಎಫ್ ನಿರ್ದೇಶಕರ ಮಂಡಳಿಯಿಂದ ಸರ್ವಾನುಮತದಿಂದ ಅವರ ನೇಮಕಾತಿಯನ್ನು ಮಾಡಲಾಯಿತು.

ಎಸ್ಆರ್‌ಎಫ್‌ನ ಅಧ್ಯಕ್ಷೆ ದಿವಂಗತ ಶ್ರೀ ದಯಾ ಮಾತಾರವರು 2010 ರಲ್ಲಿ ನಿಧನರಾಗುವ ಮೊದಲು, ಮೃಣಾಲಿನಿ ಮಾತಾರವರಿಗೆ, ಸ್ವಾಮಿ ಚಿದಾನಂದರು ಮೃಣಾಲಿನಿ ಮಾತಾರವರ ಉತ್ತರಾಧಿಕಾರಿಯಾಗಿ ವೈಎಸ್ಎಸ್/ಎಸ್ಆರ್‌ಎಫ್‌ನ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾಗಬೇಕೆಂದು ತಮ್ಮ ದೃಢ ನಿಲುವನ್ನು ವ್ಯಕ್ತಪಡಿಸಿದ್ದರು. ಆಗಸ್ಟ್ 3, 2017 ರಂದು, ಮೃಣಾಲಿನಿ ಮಾತಾರವರು ನಿಧನರಾಗುವ ಕೆಲವು ತಿಂಗಳುಗಳ ಮೊದಲು ಇದನ್ನು ಪುಷ್ಟೀಕರಿಸಿದರು ಮತ್ತು ದಯಾ ಮಾತಾರವರ ಶಿಫಾರಸಿಗೆ ತಮ್ಮ ಒಪ್ಪಿಗೆಯನ್ನು ನಿರ್ದೇಶಕರ ಮಂಡಳಿಗೆ ದೃಢಪಡಿಸಿದರು.

ಸ್ವಾಮಿ ಚಿದಾನಂದರು ನಲವತ್ತು ವರ್ಷಗಳಿಂದ ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್‌ನ ಸನ್ಯಾಸಿಯಾಗಿದ್ದಾರೆ ಮತ್ತು ಕಳೆದ ಎಂಟು ವರ್ಷಗಳಿಂದ ಎಸ್ಆರ್‌ಎಫ್ ಮತ್ತು ವೈಎಸ್ಎಸ್ ನಿರ್ದೇಶಕರ ಮಂಡಳಿಯ ಸದಸ್ಯರಾಗಿದ್ದಾರೆ. ತಮ್ಮ ಸಂನ್ಯಾಸಿ ಜೀವನದ ಆರಂಭದಿಂದಲೂ, ಅವರು ಶ್ರೀ ಮೃಣಾಲಿನಿ ಮಾತಾರವರೊಂದಿಗೆ ನಿಕಟವಾಗಿ ಕೆಲಸ ಮಾಡಿದರು ಹಾಗೂ ಶ್ರೀ ಶ್ರೀ ಪರಮಹಂಸ ಯೋಗಾನಂದರ ಕೃತಿಗಳು ಮತ್ತು ಇತರ ಎಸ್‌ಆರ್‌ಎಫ್‌ ಪ್ರಕಟಣೆಗಳ ಸಂಪಾದನೆ ಮತ್ತು ಪ್ರಕಟಣೆಯಲ್ಲಿ ಅವರಿಗೆ ಸಹಾಯಮಾಡುತ್ತ ಅವರ ಗುರುವಿನೊಂದಿಗೆ ಶ್ರುತಿಗೂಡಿದ ಜ್ಞಾನಪೂರಿತ ತರಬೇತಿಯನ್ನು ಪಡೆದರು.

ಭಗವಂತ ಮತ್ತು ಎಸ್ಆರ್‌ಎಫ್‌ನ ಸೇವೆ ಮಾಡುವ ಪ್ರೇರಣೆ

ಸ್ವಾಮಿ ಚಿದಾನಂದರು 1953 ರಲ್ಲಿ ಮೇರಿಲ್ಯಾಂಡ್‌ನ ಅನಾಪೊಲಿಸ್‌ನಲ್ಲಿ ಜನಿಸಿದರು. ಅವರು 1970ರ ದಶಕದ ಆರಂಭದಲ್ಲಿ ಸ್ಯಾನ್ ಡಿಯಾಗೊದಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರ ಮತ್ತು ತತ್ತ್ವಶಾಸ್ತ್ರದ ವಿದ್ಯಾರ್ಥಿಯಾಗಿ ಎನ್‌ಸಿನಿಟಾಸ್‌ನಲ್ಲಿದ್ದಾಗ ಅವರಿಗೆ ಶ್ರೀ ಶ್ರೀ ಪರಮಹಂಸ ಯೋಗಾನಂದರ ಬೋಧನೆಗಳ ಮತ್ತು ಅವರ ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ನ ಪರಿಚಯವಾಯಿತು. ಭಾರತದ ಆಧ್ಯಾತ್ಮಿಕತೆಯ ಕಡೆಗಿನ ದೀರ್ಘಕಾಲದ ಆಸಕ್ತಿಯ ಸೆಳೆತದಿಂದ ಎನ್‌ಸಿನಿಟಾಸ್‌ನಲ್ಲಿರುವ ವಿಶ್ವವಿದ್ಯಾಲಯದ ಆವರಣದ ಉತ್ತರದಲ್ಲಿರುವ ಎಸ್‌ಆರ್‌ಎಫ್ ಆಶ್ರಮದ ಕೇಂದ್ರವನ್ನು ಭೇಟಿ ಮಾಡಿದರು, ಈ ಎಸ್‌ಆರ್‌ಎಫ್ ಆಶ್ರಮವು ಸಮೀಪದಲ್ಲಿರುವ ಕರಾವಳಿ ಪ್ರದೇಶದ ಸಮುದಾಯಗಳಲ್ಲಿ ವಾಸಿಸುತ್ತಿದ್ದ ಹಲವಾರು ವಿದ್ಯಾರ್ಥಿಗಳಿಗೆ ಸುಪರಿಚಿತ ಹೆಗ್ಗುರುತಾಗಿತ್ತು.

ಕೆಲವು ತಿಂಗಳುಗಳ ನಂತರ, ಅವರಿಗೆ ಅಕಸ್ಮಾತ್ತಾಗಿ ಯೋಗಿಯ ಆತ್ಮಕಥೆಯ ಪ್ರತಿ ಸಿಕ್ಕಿತು ಮತ್ತು ಅದರ ಪುಟಗಳಿಂದ ಹೊರಹೊಮ್ಮಿದ ಅಸಾಧಾರಣ ಜ್ಞಾನ ಮತ್ತು ದೈವಿಕ ಪ್ರಜ್ಞೆಯಿಂದ ಅವರು ಕೂಡಲೇ ಆಕರ್ಷಿತರಾದರು. ವಿಶ್ವವಿದ್ಯಾಲಯದ ಕೊನೆಯ ವರ್ಷದಲ್ಲಿ, ಅವರು ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ ಪಾಠಗಳಿಗೆ ನೋಂದಾಯಿಸಿಕೊಂಡರು ಮತ್ತು ಎನ್‌ಸಿನಿಟಾಸ್ ನಲ್ಲಿ ಎಸ್‌ಆರ್‌ಎಫ್ ಸತ್ಸಂಗಗಳಲ್ಲಿ ಭಾಗವಹಿಸಲು ಆರಂಭಿಸಿದರು. ಆಗ ಅಲ್ಲಿನ ಸನ್ಯಾಸಿಗಳಾಗಿದ್ದ ಸ್ವಾಮಿ ಆನಂದಮೊಯಿಯವರ ಭಾಷಣಗಳಿಂದ ಅವರು ಆಳವಾಗಿ ಪ್ರೇರಿತರಾದರು ಮತ್ತು ಸ್ವಾಮಿ ಆನಂದಮೊಯಿಯವರ ವೈಯಕ್ತಿಕ ಸಲಹೆಯಿಂದ ಪ್ರಯೋಜನವನ್ನೂ ಪಡೆದುಕೊಂಡರು. ಅವರು-ಪರಮಹಂಸರ ಸ್ಪಂದನಗಳಿಂದ ತುಂಬಿ ತುಳುಕುತ್ತಿದ್ದ ಈ ಪವಿತ್ರ ಪರಿಸರದಲ್ಲಿ- ವಾಸಿಸುತ್ತಿದ್ದ ಸನ್ಯಾಸಿಗಳು ಮತ್ತು ಸನ್ಯಾಸಿನಿಯರಿಂದ ಗಾಢವಾಗಿ ಪ್ರಭಾವಿತರಾದರು ಹಾಗೂ ಭಗವಂತನನ್ನು ಅರಸಲು ಮತ್ತು ಸನ್ಯಾಸಿ ಶಿಷ್ಯರಾಗಿ ಶ್ರೀ ಶ್ರೀ ಪರಮಹಂಸ ಯೋಗಾನಂದರ ಕಾರ್ಯಗಳಿಗೆ ಸೇವೆ ಸಲ್ಲಿಸಲು ತಮ್ಮ ಜೀವನವನ್ನು ಸಂಪೂರ್ಣವಾಗಿ ಮುಡಿಪಾಗಿಡುವ ಬಯಕೆ ಅವರಲ್ಲಿ ತಕ್ಷಣವೇ ಜಾಗೃತಗೊಂಡಿತು.

ನವೆಂಬರ್ 19, 1977 ರಂದು ಎನ್‌ಸಿನಿಟಾಸ್ ನಲ್ಲಿರುವ ಸನ್ಯಾಸಿಗಳ ಪ್ರವೇಶಾರ್ಥಿ ಆಶ್ರಮವನ್ನು ಪ್ರವೇಶಿಸಿದ ಸ್ವಾಮಿ ಚಿದಾನಂದರು ಯುವ ಸನ್ಯಾಸಿಗಳಿಗೆ ತರಬೇತಿ ನೀಡುವ ಉಸ್ತುವಾರಿ ವಹಿಸಿಕೊಂಡಿರುವ ಸಂತ ಸಮಾನರಾದ ಸ್ವಾಮಿ ಪ್ರೇಮಮೊಯಿಯವರ ಕಟ್ಟುನಿಟ್ಟಾದ ಮತ್ತು ಪ್ರೀತಿಯ ಮಾರ್ಗದರ್ಶನದಲ್ಲಿ ಒಂದೂವರೆ ವರ್ಷ ಕಳೆದರು. ಈ ಯುವ ಸನ್ಯಾಸಿಯನ್ನು ಎಸ್‌ಆರ್‌ಎಫ್ ನ ಸಂಪಾದಕೀಯ ವಿಭಾಗಕ್ಕೆ ತೆಗೆದುಕೊಳ್ಳುವ ಬಗ್ಗೆ ಪರಿಗಣಿಸುವಂತೆ ಶ್ರೀ ಮೃಣಾಲಿನಿ ಮಾತಾರವರಿಗೆ ಮೊದಲ ಬಾರಿ ಸಲಹೆ ನೀಡಿದವರು ಸ್ವಾಮಿ ಪ್ರೇಮಮೊಯಿಯವರೇ. ಏಪ್ರಿಲ್ 1979 ರಲ್ಲಿ, ತಮ್ಮ ಪ್ರವೇಶಾರ್ಥಿಯ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಸ್ವಾಮಿ ಚಿದಾನಂದರನ್ನು ಮೌಂಟ್ ವಾಷಿಂಗ್ಟನ್‌ನಲ್ಲಿರುವ ಎಸ್ಆರ್‌ಎಫ್‌ನ ಅಂತರರಾಷ್ಟ್ರೀಯ ಪ್ರಧಾನ ಕಚೇರಿಗೆ ವರ್ಗ ಮಾಡಲಾಯಿತು ಮತ್ತು ತಕ್ಷಣವೇ ಪ್ರಕಾಶನ ವಿಭಾಗದಲ್ಲಿ ಮೃಣಾಲಿನಿ ಮಾತಾ ಮತ್ತು ಅವರ ಪ್ರಧಾನ ಸಹ-ಸಂಪಾದಕಿ ಸಹಜ ಮಾತಾರವರ ಅಡಿಯಲ್ಲಿ ಸಂಪಾದಕೀಯ ಕೆಲಸಕ್ಕೆ ನಿಯೋಜಿಸಲಾಯಿತು, ಇವರಿಬ್ಬರೂ ಭವಿಷ್ಯದ ಪ್ರಕಟಣೆಗಾಗಿ ಗುರುಗಳ ಬರಹಗಳನ್ನು ಮತ್ತು ಭಾಷಣಗಳನ್ನು ಸಂಪಾದಿಸಲು ಅವರಿಂದ ವೈಯಕ್ತಿಕವಾಗಿ ತರಬೇತಿ ಪಡೆದಿದ್ದರು.

1996ರಲ್ಲಿ ಸಹಜ ಮಾತಾ ಅವರ ನಿಧನದ ಸ್ವಲ್ಪ ಸಮಯದಲ್ಲೇ, ಸ್ವಾಮಿ ಚಿದಾನಂದರನ್ನು ಆಗಿನ ಅಧ್ಯಕ್ಷರಾದ ಶ್ರೀ ದಯಾ ಮಾತಾರವರು ವೈಎಸ್ಎಸ್/ಎಸ್ಆರ್‌ಎಫ್ ಅಂತಾರಾಷ್ಟ್ರೀಯ ಪ್ರಕಾಶನ ಮಂಡಳಿಗೆ ನೇಮಿಸಿದರು, 2010ರಲ್ಲಿ ದಯಾ ಮಾತಾಜಿಯ ನಿಧನದವರೆಗೂ ಅವರು ದಯಾ ಮಾತಾ ಮತ್ತು ಮೃಣಾಲಿನಿ ಮಾತಾರವರೊಂದಿಗೆ ಅದರಲ್ಲಿ ಸೇವೆ ಸಲ್ಲಿಸಿದರು. ಈ ಸಮಯದಲ್ಲಿ, ಅವರು ಗುರುಗಳ ಈ ಇಬ್ಬರು ಹಿರಿಯ ನೇರ ಶಿಷ್ಯರಿಗೆ ಅನೇಕ ಕೃತಿಗಳನ್ನು ಸಿದ್ಧಪಡಿಸಲು ಮತ್ತು ಪ್ರಕಟಿಸಲು ಸಹಾಯ ಮಾಡಿದರು, ಇದರಲ್ಲಿ ಪರಮಹಂಸಜಿಯವರ ಬೃಹತ್ ಗ್ರಾಂಥಿಕ ವ್ಯಾಖ್ಯಾನಗಳು (ಗಾಡ್ ಟಾಕ್ಸ್ ವಿತ್ ಅರ್ಜುನ: ದ ಭಗವದ್ಗೀತ ಮತ್ತು ದ ಸೆಕೆಂಡ್ ಕಮಿಂಗ್ ಆಫ್ ಕ್ರೈಸ್ಟ್: ದ ರಿಸರೆಕ್ಷನ್ ಆಫ್ ದ ಕ್ರೈಸ್ಟ್ ವಿದಿನ್ ಯು) ಹಾಗೂ 1980ರಿಂದ ಪ್ರಸ್ತುತದವರೆಗೂ ಬಿಡುಗಡೆಗೊಂಡ ಎಲ್ಲಾ ಎಸ್‌ಆರ್‌ಎಫ್ ಪ್ರಕಟಣೆಗಳೂ ಸೇರಿವೆ. ದಯಾ ಮಾತಾ, ಮೃಣಾಲಿನಿ ಮಾತಾ ಮತ್ತು ಸಹಜ ಮಾತಾರವರಿಂದ ವರ್ಷಗಳಿಂದ ಆಳವಾದ ತರಬೇತಿ ಪಡೆದ ನಂತರ, ಮೃಣಾಲಿನಿ ಮಾತಾರವರು ಸ್ವಾಮಿ ಚಿದಾನಂದರನ್ನು ತಮ್ಮ ಉತ್ತರಾಧಿಕಾರಿಯಾಗಿ ವೈಎಸ್ಎಸ್/ಎಸ್ಆರ್‌ಎಫ್ ಪ್ರಕಟಣೆಗಳ ಮುಖ್ಯ ಸಂಪಾದಕರಾಗಿ ನೇಮಿಸಿದರು.

1997ರಲ್ಲಿ ಶ್ರೀ ದಯಾ ಮಾತಾರವರು ಸ್ವಾಮಿ ಚಿದಾನಂದರವರಿಗೆ ಅಂತಿಮ ಸನ್ಯಾಸ ದೀಕ್ಷೆಯನ್ನು ನೀಡಿದರು. ಅವರ ಸನ್ಯಾಸಾಶ್ರಮದ ಹೆಸರು ಚಿದಾನಂದ, ಇದರ ಅರ್ಥ “ಅನಂತ ದೈವೀ ಪ್ರಜ್ಞೆಯ(ಚಿತ್) ಮೂಲಕ ಪರಮಾನಂದ.” ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ನ ದೀಕ್ಷೆ ಪಡೆದ ಸನ್ಯಾಸಿಯಾದ ಇವರು, ಅಮೇರಿಕಾ, ಕೆನಡಾ, ಯುರೋಪ್ ಮತ್ತು ಭಾರತದಲ್ಲಿ ಉಪನ್ಯಾಸಗಳು ಮತ್ತು ಧ್ಯಾನ ಶಿಬಿರ ಕಾರ್ಯಕ್ರಮಗಳಲ್ಲಿ—ಹಾಗೂ ಲಾಸ್ ಎಂಜಲೀಸ್‌ನಲ್ಲಿ ನಡೆವ ವಾರ್ಷಿಕ ಎಸ್ಆರ್‌ಎಫ್‌ನ ವಿಶ್ವ ಘಟಿಕೋತ್ಸವಗಳಲ್ಲಿ ಶ್ರೀ ಶ್ರೀ ಪರಮಹಂಸ ಯೋಗಾನಂದರ ಬೋಧನೆಗಳನ್ನು ಹಂಚಿಕೊಂಡಿದ್ದಾರೆ. 2009ರಲ್ಲಿ ಶ್ರೀ ದಯಾ ಮಾತಾರವರು ಸ್ವಾಮಿ ಚಿದಾನಂದರನ್ನು ವೈಎಸ್ಎಸ್ ಮತ್ತು ಎಸ್ಆರ್‌ಎಫ್‌ನ ನಿರ್ದೇಶಕರ ಮಂಡಳಿಯ ಸದಸ್ಯರನ್ನಾಗಿ ನೇಮಿಸಿದರು ಮತ್ತು ಅವರು ಅನೇಕ ವರ್ಷಗಳವರೆಗೆ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಎಸ್ಆರ್‌ಎಫ್‌ನ ಅಸಂಖ್ಯಾತ ಚಟುವಟಿಕೆಗಳು ಮತ್ತು ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡುವ ನಿರ್ವಹಣಾ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು.

 “ಎಲ್ಲರೂ ಸೇರಿ ನಮ್ಮ ಆತ್ಮಗಳ ಏಕೈಕ ಪ್ರಿಯತಮನಾದ ದೇವರನ್ನು ಹುಡುಕುವುದು…”

ತಮ್ಮ ಆಯ್ಕೆಯ ಘೋಷಣೆಯಾದ ನಂತರ ವೈಎಸ್ಎಸ್/ಎಸ್ಆರ್‌ಎಫ್‌ನ ಸನ್ಯಾಸಿಗಳನ್ನು ಕುರಿತು ಮಾತನಾಡುತ್ತಾ ಸ್ವಾಮಿ ಚಿದಾನಂದರವರು ಹೀಗೆ ಹೇಳಿದರು: “ನಮ್ರತೆಯಿಂದ, ಮತ್ತು ಗುರುದೇವ ಪರಮಹಂಸ ಯೋಗಾನಂದರೇ ಯಾವಾಗಲೂ ಈ ಸಂಸ್ಥೆಯ ಮುಖ್ಯಸ್ಥರಾಗಿರುತ್ತಾರೆ ಎಂಬ ಪ್ರಜ್ಞೆಯೊಂದಿಗೆ, ನಮ್ಮ ಪ್ರೀತಿಯ ಶ್ರೀ ದಯಾ ಮಾತಾ ಮತ್ತು ಶ್ರೀ ಮೃಣಾಲಿನಿ ಮಾತಾರವರ ಕೋರಿಕೆಯನ್ನು ನೆರವೇರಿಸಲು ಮತ್ತು ಅವರ ಹೆಜ್ಜೆ ಗುರುತುಗಳಲ್ಲಿ ಮುನ್ನಡೆಯಲು ನಿಮ್ಮೆಲ್ಲರ ಪ್ರಾರ್ಥನೆಗಳು ಮತ್ತು ಸಹಾಯವನ್ನು ಕೋರುತ್ತೇನೆ. ಗುರುದೇವರ ಪ್ರೀತಿಯ ಶುದ್ಧ ವಾಹಿನಿಗಳಾಗಿರಬೇಕೆಂಬ ಅವರ ಬದ್ಧತೆ—ಪ್ರತಿ ಆಲೋಚನೆ, ತೀರ್ಮಾನ ಮತ್ತು ಕಾರ್ಯಗಳನ್ನು ಅವರ ಇಚ್ಛೆ ಮತ್ತು ಮಾರ್ಗದರ್ಶನಕ್ಕೆ ಅನುಗುಣವಾಗಿರಲು ಪ್ರಯತ್ನಿಸುವ ಅವರ ದೈವಿಕ ಮಾದರಿಯು ನನಗೆ ಆಶ್ರಮದಲ್ಲಿ ಜೀವನದುದ್ದಕ್ಕೂ ಪ್ರೇರಣೆಯಾಗಿತ್ತು; ಮತ್ತು ಆ ಪವಿತ್ರ ಜವಾಬ್ದಾರಿಯ ಪ್ರಜ್ಞೆಯೊಂದಿಗೆ ನಾನು ನಿಮ್ಮೆಲ್ಲರ ಸಹಾಯ, ಪ್ರಾರ್ಥನೆ, ಸದ್ಭಾವನೆ ಮತ್ತು ದೈವೀ ಸ್ನೇಹದಲ್ಲಿ ವಿಶ್ವಾಸವಿಟ್ಟು ಮುಂಬರುವ ವರ್ಷಗಳಲ್ಲಿ ದೇವರು ಮತ್ತು ಗುರುಗಳ ಈ ಮಹಾನ್ ಕಾರ್ಯಕ್ಕೆ ಸೇವೆ ಸಲ್ಲಿಸಲು ಎದುರು ನೋಡುತ್ತಿದ್ದೇನೆ.

“ನಿಮ್ಮಲ್ಲಿ ಪ್ರತಿಯೊಬ್ಬರೂ ಗುರುಗಳಿಂದಲೇ ಆರಿಸಲ್ಪಟ್ಟ ಶಿಷ್ಯರು, ಮತ್ತು ನಿಮ್ಮ ಪಾದಧೂಳಿಯನ್ನು ಸಾಕ್ಷಿಯಾಗಿ ಸ್ವೀಕರಿಸುತ್ತಾ, ಗುರುಗಳ ಶಿಷ್ಯರಾದ ನಾವೆಲ್ಲ ಒಂದು ಏಕೀಕೃತ ಆಧ್ಯಾತ್ಮಿಕ ಕುಟುಂಬವಾಗಿ, ಜೊತೆಗೆ ಮುಂದುವರಿದರೆ ಮಾತ್ರ ಗುರುಗಳು ನಮ್ಮೆಲ್ಲರಿಗೆ ಆಜ್ಞಾಪಿಸಿದಂತೆ ಆ ದೈವಿಕ ಮನೋಭಾವಗಳಾದ ಪ್ರೀತಿ, ಆನಂದ ಮತ್ತು ಸ್ವಯಂ ಶರಣಾಗತಿಯ ಮೂಲಕ ದೇವರನ್ನು ನಮ್ಮ ಆತ್ಮಗಳ ಏಕೈಕ ಪ್ರೀತಿಪಾತ್ರನಾಗಿ ಅರಸಬಹುದು, ಅದು ಸಾರ್ವಕಾಲಿಕವಾಗಿ ಅವರ ಸಂಸ್ಥೆಯ ಜೀವ ಮತ್ತು ಶಕ್ತಿಯಾಗಿರುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದರು. ಜೈ ಗುರು! ಜೈ ಮಾ!”

ವಿಶ್ವಾದ್ಯಂತದ ವೈಎಸ್ಎಸ್/ಎಸ್ಆರ್‌ಎಫ್‌ ಆಧ್ಯಾತ್ಮಿಕ ಕುಟುಂಬಕ್ಕೆ, ಸ್ವಾಮಿ ಚಿದಾನಂದರು ಈ ಕೆಳಗಿನ ಸಂದೇಶವನ್ನು ತಿಳಿಸಲು ಬಯಸುತ್ತಾರೆ:

“ಪ್ರಿಯರೇ, ದೇವರು ಮತ್ತು ಗುರುವಿನ ಪ್ರೀತಿಯಿಂದ ನಾನು ನಿಮ್ಮೆಲ್ಲರಿಗೂ ಶುಭ ಕೋರುತ್ತೇನೆ ಮತ್ತು ನಾವು ಕ್ರಿಯಾಯೋಗ ಧ್ಯಾನದ ಈ ಪವಿತ್ರ ಮಾರ್ಗದಲ್ಲಿ ನಡೆಯುತ್ತಿರುವಾಗ ಮತ್ತು ಪರಮಹಂಸ ಯೋಗಾನಂದರು ನಮಗೆ ತಂದ ದೈವಿಕತೆಯೊಂದಿಗೆ ಶ್ರುತಿಗೊಂಡು ಬದುಕುತ್ತಿರುವಾಗ ನಮ್ಮೆಲ್ಲರ ಮೇಲೆ ಅವರ ನಿರಂತರ ಆಶೀರ್ವಾದವನ್ನು ಕೋರುತ್ತೇನೆ. ಎಲ್ಲಾವೈಎಸ್ಎಸ್/ಎಸ್ಆರ್‌ಎಫ್‌ ಆಶ್ರಮಗಳಲ್ಲಿನ ಎಲ್ಲಾ ಸನ್ಯಾಸಿಗಳು ಮತ್ತು ಸನ್ಯಾಸಿನಿಗಳಂತೆಯೇ ಗುರುಗಳ ಹೆಸರಿನಲ್ಲಿ ನಾನೂ ನಿಮ್ಮೆಲ್ಲರಿಗೆ ಸೇವೆ ಸಲ್ಲಿಸುವ ಅವಕಾಶಕ್ಕಾಗಿ ವಿನಮ್ರತೆಯಿಂದ ಕೃತಜ್ಞನಾಗಿದ್ದೇನೆ. ದೇವರನ್ನು ಅರಸುವ ಆತ್ಮಗಳ ವಿಶ್ವವ್ಯಾಪಿ ತಂಡವಾಗಿ—ಸಾಮಾನ್ಯ ಶಿಷ್ಯನಾಗಿರಲಿ ಅಥವಾ ಸನ್ಯಾಸಿ ಮಾರ್ಗದಲ್ಲಿರಲಿ—ಈ ಬೋಧನೆಗಳ ಆಧ್ಯಾತ್ಮಿಕ ಆಶೀರ್ವಾದಗಳಿಗಾಗಿ ಮತ್ತು ನಮ್ಮ ಸ್ವಂತ ಸಾಧನೆಯನ್ನು ಹಾಗೂ ದೇವರು ಮತ್ತು ಗುರುಗಳೆಲ್ಲರೊಂದಿಗೆ ಸಂಸರ್ಗವನ್ನು ಆಳಗೊಳಿಸುವ ಸಂಕಲ್ಪದಲ್ಲಿ ನಾವು ಕೃತಜ್ಞತೆಯಿಂದ ಒಗ್ಗೂಡೋಣ. ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಗುರುಗಳ ನಿರಂತರ ಆಶೀರ್ವಾದದ ಅನುಭವವಾಗಲಿ. ಜೈ ಗುರು!”

ಇದನ್ನು ಹಂಚಿಕೊಳ್ಳಿ