ಪ್ರಾರ್ಥನೆಯ ಶಕ್ತಿಯನ್ನು ಉಪಯೋಗಿಸುವುದು

ಪರಮಹಂಸ ಯೋಗಾನಂದರ ಬರಹಗಳಿಂದ ಆಯ್ದ ಭಾಗಗಳು

Diya and incense used in prayers.ಈ ಹಿಂದೆ ನಿಮ್ಮ ಪ್ರಾರ್ಥನೆಗಳಿಗೆ ಉತ್ತರ ದೊರೆಯದೆ ನೀವು ನಿರಾಶರಾಗಿರಬಹುದು. ಆದರೆ ವಿಶ್ವಾಸವನ್ನು ಕಳೆದುಕೊಳ್ಳಬೇಡಿ…. ಭಗವಂತನು ಭಾವರಹಿತ ಮೂಕ ಜೀವಿಯಲ್ಲ. ಅವನು ಸಾಕ್ಷಾತ್ ಪ್ರೇಮವೇ ಆಗಿದ್ದಾನೆ. ಅವನನ್ನು ಸಂಪರ್ಕಿಸಲು ಧ್ಯಾನ ಮಾಡುವುದು ಹೇಗೆ ಎಂದು ತಿಳಿದರೆ, ಅವನು ನಿಮ್ಮ ಪ್ರೀತಿಪೂರ್ವಕ ಬೇಡಿಕೆಗಳಿಗೆ ಪ್ರತಿಕ್ರಿಯಿಸುತ್ತಾನೆ.

ಪ್ರಾರ್ಥನೆಯ ಮೊದಲನೆ ನಿಯಮವೆಂದರೆ, ನ್ಯಾಯಸಮ್ಮತ ಬಯಕೆಗಳೊಂದಿಗೆ ಮಾತ್ರ ದೇವರನ್ನು ಸಮೀಪಿಸುವುದು. ಎರಡನೆಯದು, ಅದು ಫಲಿಸಲು ಯಾಚಕನಂತಲ್ಲದೆ, ಮಗನಂತೆ ಕೋರುವುದು: “ನಾನು ನಿನ್ನ ಮಗು. ನೀನು ನನ್ನ ತಂದೆ. ನೀನು ಮತ್ತು ನಾನು ಒಂದೇ." ನೀವು ಆಳವಾಗಿ ಹಾಗೂ ಅವಿಚ್ಛಿನ್ನವಾಗಿ ಪ್ರಾರ್ಥಿಸಿದಾಗ ನಿಮ್ಮ ಹೃದಯದಲ್ಲಿ ಮಹದಾನಂದ ಉಕ್ಕೇರುವುದನ್ನು ಕಾಣುವಿರಿ. ಆ ಆನಂದ ಆವಿರ್ಭವಿಸುವವರೆಗೂ ಸಮಾಧಾನಗೊಳ್ಳದಿರಿ; ಏಕೆಂದರೆ ಆ ಸರ್ವ-ತೃಪ್ತಿಕಾರಕ ಆನಂದವು ನಿಮ್ಮ ಹೃದಯದಲ್ಲಿ ತುಂಬಿಬಂದಾಗ, ದೇವರು ನಿಮ್ಮ ಪ್ರಾರ್ಥನೆಯ ಪ್ರಸಾರಕ್ಕೆ ಶ್ರುತಿಗೊಂಡಿದ್ದಾನೆ ಎಂದು ನಿಮಗೆ ಅರಿವಾಗುತ್ತದೆ. ಆಗ ಭಗವಂತನಲ್ಲಿ ಪ್ರಾರ್ಥಿಸಿಕೊಳ್ಳಿ: "ಪ್ರಭುವೇ, ಇದು ನನ್ನ ಅವಶ್ಯಕತೆ. ಇದಕ್ಕೋಸ್ಕರ ಕೆಲಸ ಮಾಡಲು ನಾನು ಸಿದ್ಧ: ದಯವಿಟ್ಟು ನನಗೆ ಮಾರ್ಗದರ್ಶನ ನೀಡು ಮತ್ತು ಯಶಸ್ಸನ್ನು ದೊರಕಿಸುವ ಸೂಕ್ತ ಆಲೋಚನೆಗಳನ್ನು ಹೊಂದಲು ಹಾಗೂ ಸೂಕ್ತವಾದ ಕೆಲಸಗಳನ್ನು ಮಾಡಲು ನೆರವಾಗು. ನಾನು ನನ್ನ ವಿವೇಚನೆಯನ್ನು ಉಪಯೋಗಿಸುತ್ತೇನೆ, ಹಾಗೂ ದೃಢನಿಶ್ಚಯದಿಂದ ಕೆಲಸ ಮಾಡುತ್ತೇನೆ, ಆದರೆ ನೀನು ನನ್ನ ಬುದ್ಧಿಶಕ್ತಿ, ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿಯನ್ನು ನಾನು ಮಾಡಲೇಬೇಕಾದ ಆ ಸರಿಯಾದುದೆಡೆಗೆ ನಿರ್ದೇಶಿಸು.”

ನೀವು ಭಗವಂತನಲ್ಲಿ ಆತ್ಮೀಯತೆಯಿಂದ ಪ್ರಾರ್ಥಿಸಬೇಕು, ಅವನ ಮಗುವಿನಂತೆ, ಅದು ನೀವಾಗಿದ್ದೀರಿ. ನಿಮ್ಮ ಅಹಂನಿಂದ, ಅಪರಿಚಿತನಂತೆಯೋ ಅಥವಾ ಭಿಕ್ಷುಕನಂತೆಯೋ ಪ್ರಾರ್ಥಿಸಿದರೆ ಭಗವಂತನು ಬೇಡ ಎನ್ನುವುದಿಲ್ಲ, ಆದರೆ ಆ ಪ್ರಜ್ಞಾಭಾವವು ನಿಮ್ಮ ಪ್ರಯತ್ನಗಳನ್ನು ಸೀಮಿತಗೊಳಿಸುತ್ತದೆ. ಆತನ ಮಗುವಾಗಿ ನಿಮ್ಮ ಜನ್ಮಸಿದ್ಧ ಹಕ್ಕಾದ ನಿಮ್ಮದೇ ಇಚ್ಛಾಶಕ್ತಿಯನ್ನು ತ್ಯಜಿಸಬೇಕೆಂದು ಅವನು ಬಯಸುವುದಿಲ್ಲ.

ನಮ್ಮ ಅವಶ್ಯಕತೆಗಳ ಸ್ವರೂಪದ ಪ್ರಕಾರ ಖಚಿತವಾಗಿ ಹೇಗೆ ಮತ್ತು ಯಾವಾಗ ಪ್ರಾರ್ಥನೆ ಮಾಡಬೇಕು ಎಂಬುದರ ಅರಿವೇ ಇಚ್ಛಿಸಿದ ಫಲಿತಾಂಶ ದೊರೆಯುವಂತೆ ಮಾಡುವುದು. ಸರಿಯಾದ ವಿಧಾನವನ್ನು ಅನುಸರಿಸಿದಾಗ, ಅದು ಭಗವಂತನ ಯುಕ್ತವಾದ ನಿಯಮಗಳಿಗೆ ಚಾಲನೆ ಕೊಡುತ್ತದೆ; ಆ ನಿಯಮಗಳು ಕಾರ್ಯಗತಗೊಂಡಾಗ ವೈಜ್ಞಾನಿಕವಾಗಿ ಫಲಿತಾಂಶಗಳು ದೊರೆಯುತ್ತವೆ.

ಪ್ರಾರ್ಥನೆ ಬೇಡಿಕೊಳ್ಳುವ ಪ್ರಜ್ಞೆಯನ್ನು ಹೆಚ್ಚಾಗಿ ಸೂಚಿಸುತ್ತದೆ. ನಾವು ಭಗವಂತನ ಮಕ್ಕಳು, ಭಿಕ್ಷುಕರಲ್ಲ, ಆದ್ದರಿಂದ ದಿವ್ಯ ಉತ್ತರಾಧಿಕಾರಕ್ಕೆ ಅರ್ಹರು. ನಮ್ಮ ಆತ್ಮಕ್ಕೂ ಭಗವಂತನಿಗೂ ಮಧ್ಯೆ ಪ್ರೇಮ ಸಂಪರ್ಕವನ್ನು ಸಾಧಿಸಿದ ಮೇಲೆ, ನಮ್ಮ ನ್ಯಾಯಸಮ್ಮತ ಪ್ರಾರ್ಥನೆಗಳನ್ನು ನೆರವೇರಿಸುವಂತೆ ಪ್ರೇಮಪೂರ್ವಕವಾಗಿ ಕೇಳಿಕೊಳ್ಳುವುದಕ್ಕೆ ನಮಗೆ ಸಂಪೂರ್ಣ ಹಕ್ಕಿದೆ.

ಶಕ್ತಿಗುಂದದ ಉತ್ಸಾಹದಿಂದ ಮತ್ತು ಹಿಂಜರಿಯದ ಧೈರ್ಯ ಮತ್ತು ಶ್ರದ್ಧೆಯಿಂದ ಮನದಲ್ಲೇ ಪಿಸುಗುಟ್ಟಲ್ಪಟ್ಟ, ಯಾವುದೊಂದರ ಬಗೆಗಿನ ಅವಿರತ ಬೇಡಿಕೆಯು, ಕ್ರಿಯಾತ್ಮಕ ಶಕ್ತಿಯಾಗಿ ಅಭಿವೃದ್ಧಿ ಹೊಂದಿ, ಇಚ್ಛಿಸಿದ ಆ ವಸ್ತು ದೊರೆಯುವಂತೆ ಮಾನವನ ಪ್ರಜ್ಞಾ, ಸುಪ್ತಪ್ರಜ್ಞಾ ಮತ್ತು ಅತೀತಪ್ರಜ್ಞಾ ಶಕ್ತಿಗಳ ಸಮಗ್ರ ವರ್ತನೆಯ ಮೇಲೆ ಪ್ರಭಾವ ಬೀರುತ್ತದೆ. ಸೋಲುಗಳಿಗೆ ಎದೆಗುಂದದೆ ಮನಸ್ಸಿನ ಪಿಸುಗುಟ್ಟುವಿಕೆಗಳು ಅವಿರತವಾಗಿರಬೇಕು. ಆಗ ಬಯಸಿದ ವಸ್ತು ಆವಿರ್ಭವಿಸುವುದು.

ಹೆಚ್ಚಿನ ಓದುವಿಕೆ

ಇದನ್ನು ಹಂಚಿಕೊಳ್ಳಿ