ಮಹಾವತಾರ ಬಾಬಾಜಿಯವರಿಂದ ಒಂದು ಅನುಗ್ರಹ

ಭಾರತದಲ್ಲಿನ ಪರಮಹಂಸ ಯೋಗಾನಂದರ ಆಶ್ರಮಗಳಿಗೆ ನೀಡಿದ ಭೇಟಿಯಲ್ಲಿ (ಅಕ್ಟೋಬರ್ 1963 − ಮೇ 1964) ಶ್ರೀ ದಯಾ ಮಾತಾರವರು ಮಹಾವತಾರ ಬಾಬಾಜಿಯವರ ಭೌತಿಕ ಉಪಸ್ಥಿತಿಯಿಂದ ಪವಿತ್ರಗೊಂಡಿರುವ, ಹಿಮಾಲಯದ ಗುಹೆಗೆ ಪವಿತ್ರ ತೀರ್ಥಯಾತ್ರೆ ಮಾಡಿದರು. ನಂತರ, ಸ್ವಲ್ಪ ಸಮಯದವರೆಗೆ ದಯಾ ಮಾತಾರವರು, ಸಾರ್ವಜನಿಕ ಸಭೆಯಲ್ಲಿ ತಮ್ಮ ಅನುಭವದ ಬಗ್ಗೆ ಮಾತನಾಡಲು, ಒಪ್ಪಿಗೆ ನೀಡಲಿಲ್ಲ. ಆದರೆ, ಎನ್ಸಿನಿಟಾಸ್‌ನ ಸತ್ಸಂಗದಲ್ಲಿ ಒಬ್ಬ ಭಕ್ತನು ಯಾವಾಗ ಮಾತಾಜಿಯವರನ್ನು, ಬಾಬಾಜಿಯವರ ಗುಹೆಗೆ ನೀಡಿದ ಭೇಟಿಯ ಬಗ್ಗೆ ಪ್ರಶ್ನಿಸಿದಾಗ, ಆ ದಿವ್ಯ ಶಕ್ತಿ ಸಕಾರಾತ್ಮಕ ಉತ್ತರವನ್ನು ನೀಡಲು ಪ್ರೇರೇಪಿಸಿತು. ಇಲ್ಲಿ ಮುಂದಿರುವುದು ಅವರ ವಿವರಣೆ, ಎಲ್ಲರ ಸ್ಫೂರ್ತಿಗಾಗಿ.

1965 ಆಗಸ್ಟ್ 24ರಂದು, ಕ್ಯಾಲಿಫೋರ್ನಿಯದ ಎನ್‌ಸಿನಿಟಾಸ್‌ನ ಸೆಲ್ಫ್-ರಿಯಲೈಝೇಶನ್ ಫೆಲೋಶಿಪ್ ಆಶ್ರಮ ಕೇಂದ್ರದಲ್ಲಿ, ನೀಡಿದ ಉಪನ್ಯಾಸದಿಂದ.

ಪರಮಹಂಸ ಯೋಗಾನಂದರು ಮತ್ತು ಮಹಾವತಾರ ಬಾಬಾಜಿಯವರ ನಡುವೆ ಒಂದು ಅತಿ ವಿಶೇಷವಾದ ಬಾಂಧವ್ಯವಿತ್ತು. ಗುರುದೇವರು ಆಗಾಗ ಬಾಬಾಜಿಯವರ ಬಗ್ಗೆ ಹೇಳುತ್ತಿದ್ದರು ಮತ್ತು ಕಲ್ಕತ್ತಾದಲ್ಲಿ ಪರಮಹಂಸಜಿಯವರು, ಭಾರತವನ್ನು ತೊರೆದು, ಈ ದೇಶಕ್ಕೆ ಆಗಮಿಸುವ ಮೊದಲು, ಮಹಾವತಾರರು ಅವರಿಗೆ ದರ್ಶನ ಕೊಟ್ಟ ಸಂದರ್ಭದ ಬಗ್ಗೆ ಹೇಳುತ್ತಿದ್ದರು. ಮಾಸ್ಟರ್‌ ಅವರು ಮಹಾನ್ ಅವತಾರದ ಬಗ್ಗೆ ಉಲ್ಲೇಖಿಸಿದಾಗಲೆಲ್ಲಾ ಎಷ್ಟೊಂದು ಭಕ್ತಿಯಿಂದ, ಪೂಜ್ಯ ಭಾವನೆಯಿಂದ ಗೌರವದಿಂದ ತಿಳಿಸುತ್ತಿದ್ದರು ಎಂದರೆ ನಮ್ಮ ಹೃದಯಗಳು ದೈವೀ ಪ್ರೇಮ ಮತ್ತು ಹಂಬಲಿಕೆಯಿಂದ ತುಂಬಿಕೊಳ್ಳುತ್ತಿದ್ದವು. ಕೆಲವು ಸಲ, ನನ್ನ ಹೃದಯ ಬಿರಿಯುವುದೇನೋ ಅನ್ನುವಷ್ಟು ಅನುಭವಿಸುತ್ತಿದ್ದೆನು.

ಗುರೂಜಿಯವರ ದೇಹತ್ಯಾಗದ ನಂತರ, ಬಾಬಾಜಿಯವರ ಬಗೆಗಿನ ಆಲೋಚನೆಯು ನನ್ನ ಪ್ರಜ್ಞೆಯಲ್ಲಿ ಬಲವಾಗಿ ಬೆಳೆಯತೊಡಗಿತು. ಅದು ಏಕೆಂದು ಅಚ್ಚರಿಪಡತೊಡಗಿದೆ. ನಮ್ಮ ಪ್ರೀತಿಪಾತ್ರ ಎಲ್ಲಾ ಇತರ ಪರಮ ಗುರುಗಳಿಗೆಸ ಸಲ್ಲಬೇಕಾದ ಪ್ರೇಮ ಹಾಗೂ ಗೌರವಗಳಿದ್ದರೂ, ಬಾಬಾಜಿಯವರ ಬಗ್ಗೆ ನನ್ನ ಹೃದಯದಲ್ಲಿ ಒಂದು ವಿಶೇಷ ಭಾವವು ಇತ್ತು. ಅವರೊಡನೆ ಇದ್ದ ಈ ಆತ್ಮೀಯತೆಯ ಭಾವಕ್ಕೆ ನಿರ್ದಿಷ್ಟವಾಗಿ ಅವರಿಂದ ಬಂದ ಯಾವುದೋ ಪ್ರತಿಕ್ರಿಯೆ ನನ್ನಲ್ಲಿ ಪ್ರಚೋದಿಸಿದ ಬಗ್ಗೆ ನನಗೆ ಅರಿವು ಇರಲಿಲ್ಲ. ನನಗೆ ನಾನೇ ಸಂಪೂರ್ಣವಾಗಿ ಅನರ್ಹಳು ಎಂದು ಪರಿಗಣಿಸಿ, ಬಾಬಾಜಿಯವರ ಪವಿತ್ರ ಉಪಸ್ಥಿತಿಯ ವೈಯಕ್ತಿಕ ಅನುಭವವನ್ನು ಎಂದಿಗೂ ನಿರೀಕ್ಷಿಸಲಿಲ್ಲ. ಬಹುಶಃ ನನ್ನ ಮುಂದಿನ ಜೀವನದಲ್ಲಿ, ಎಂದಾದರೂ ನನಗೆ ಈ ಅನುಭವ ಬರಬಹುದೆಂದು ಆಲೋಚಿಸಿದ್ದೆ. ನಾನು ಎಂದಿಗೂ ಆಧ್ಯಾತ್ಮಿಕ ಅನುಭವಗಳಿಗಾಗಿ ಪ್ರಾರ್ಥಿಸಲೂ ಇಲ್ಲ ಅಥವಾ ಹಂಬಲಿಸಲೂ ಇಲ್ಲ. ನಾನು ಕೇವಲ ಭಗವಂತನನ್ನು ಮಾತ್ರ ಪ್ರೀತಿಸಲು ಮತ್ತು ಅವನ ಪ್ರೇಮವನ್ನು ಅನುಭವಿಸಲು ಇಚ್ಚಿಸುತ್ತಿದ್ದೆ. ನನಗೆ ಅವನಲ್ಲಿ ಪ್ರೇಮದಿಂದ ಇರುವುದರಿಂದಲೇ ಆನಂದವು ದೊರಕುತ್ತಿತ್ತು. ನಾನು ಜೀವನದಲ್ಲಿ ಮತ್ತೆ ಯಾವ ಪ್ರತಿಫಲವನ್ನೂ ಅಪೇಕ್ಷಿಸುವುದಿಲ್ಲ.

ನಾವು ಈ ಹಿಂದೆ ಭಾರತಕ್ಕೆ ಭೇಟಿ ಇತ್ತಾಗ, ಇಬ್ಬರು ಭಕ್ತರು ಬಾಬಾಜಿಯವರ ಗುಹೆಗೆ ಭೇಟಿ ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಮೊದಲು ನನಗೆ ಇದನ್ನು ನೆರವೇರಿಸಲು ಆಳವಾದ ಯಾವ ವೈಯಕ್ತಿಕ ಇಚ್ಛೆಯೂ ಇರಲಿಲ್ಲ. ಆದರೂ ನಾವು ವಿಚಾರಿಸಿದೆವು. ಗುಹೆಯು ಹಿಮಾಲಯದ ತಪ್ಪಲಿನಲ್ಲಿ ರಾಣಿಖೇತ್ ನಿಂದ ಆಚೆಗೆ, ನೇಪಾಳದ ಗಡಿಯ ಹತ್ತಿರ ಇದೆ. ದೆಹಲಿಯಲ್ಲಿನ ಅಧಿಕಾರಿಗಳು ಉತ್ತರ ದಿಕ್ಕಿನ ಗಡಿಪ್ರದೇಶಗಳು, ವಿದೇಶೀಯರಿಗೆ ಮುಚ್ಚಲ್ಪಟ್ಟಿದೆ ಎಂದು ತಿಳಿಸಿದರು. ಅಂತಹ ಯಾತ್ರೆಯು ಅಸಾಧ್ಯವೆಂದು ಕಂಡುಬಂದಿತು. ನಾನು ನಿರಾಶಳಾಗಲಿಲ್ಲ. ದಿವ್ಯ ಮಾತೆಯು ಯಾವುದೇ ಇಚ್ಛೆಯನ್ನು ಪೂರೈಸುವ ಶಕ್ತಿಯುಳ್ಳವಳು ಎಂಬುದಕ್ಕೆ, ಅನೇಕ ಪವಾಡಗಳನ್ನು ಮಾಡಿರುವುದನ್ನು ನೋಡಿರುವುದರಿಂದ, ಸಂಶಯವೇ ಇರಲಿಲ್ಲ. ಈ ಪ್ರವಾಸವನ್ನು ಮಾಡದೇ ಇರುವ ಇಚ್ಛೆ ಅವಳ ಇಚ್ಛೆಯಾಗಿದ್ದಲ್ಲಿ, ಈ ವಿಷಯದಲ್ಲಿ ನನ್ನದೇನೂ ವೈಯಕ್ತಿಕ ಬಯಕೆ ಇರಲಿಲ್ಲ.

ಒಂದೆರಡು ದಿನಗಳ ನಂತರ ಯೋಗಾಚಾರ್ಯ ಬಿನಯ್ ನಾರಾಯಣ್ ರವರು,ಬಾಬಾಜಿಯವರ ಗುಹೆಯು ಇರುವ ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿಗಳ ಸಂಪರ್ಕದಲ್ಲಿ ಇರುವರೆಂದು ತಿಳಿಸಿದರು. ಮುಖ್ಯಮಂತ್ರಿಗಳು, ಆ ಜಾಗಕ್ಕೆ ಭೇಟಿ ನೀಡಲು ನಮ್ಮ ತಂಡಕ್ಕೆ ವಿಶೇಷ ಅನುಮತಿಯನ್ನು ನೀಡಿದ್ದರು. ಎರಡು ದಿವಸಗಳಲ್ಲಿ ನಾವು ಆ ಪ್ರವಾಸಕ್ಕೆ ತಯಾರಿ ಮಾಡಿಕೊಂಡೆವು. ಪರ್ವತಗಳ ಚಳಿಯ ವಾತಾವರಣಕ್ಕೆ ಬೇಕಾದ ಯಾವ ಬೆಚ್ಚಗಿನ ವಸ್ತ್ರಗಳೂ ನಮ್ಮಲ್ಲಿ ಇರಲಿಲ್ಲ. ಕೇವಲ ಹತ್ತಿ ಬಟ್ಟೆಯ ಸೀರೆಗಳು ಮತ್ತು, ನಮ್ಮ ಭುಜದ ಸುತ್ತಲೂ ಹೊದೆಯುವ ಉಲ್ಲನ್ ಶಾಲುಗಳು ಮಾತ್ರ ಇದ್ದವು. ನಮ್ಮ ಕಾತರತೆಯಲ್ಲಿ ನಾವೆಲ್ಲರೂ ಸ್ವಲ್ಪ ಹುಚ್ಚುಸಾಹಸಿಗಳಾದೆವು.

ನಾವು ಉತ್ತರ ಪ್ರದೇಶ ರಾಜ್ಯದ ರಾಜಧಾನಿಯಾದ ಲಖನೌಗೆ ರೈಲು ಹತ್ತಿದೆವು. ಸಂಜೆ ಸುಮಾರು 8 ಗಂಟೆಗೆ ರಾಜ್ಯಪಾಲರ ಭವನದಲ್ಲಿದ್ದೆವು. ಅವರೊಡನೆ ಮುಖ್ಯಮಂತ್ರಿಗಳು ಹಾಗೂ ಇತರ ಅತಿಥಿಗಳೊಡನೆ ಭೋಜನ ಮಾಡಿದೆವು. ಮುಖ್ಯಮಂತ್ರಿಗಳ ಜೊತೆಗೆ 10 ಗಂಟೆಗೆ ನಾವು ಕಾಟ್ ಗೋಧಾಮ್ ಗೆ ಹೋಗುವ ರೈಲಿನಲ್ಲಿ ಹೊರೆಟೆವು. ಅಲ್ಲಿಂದ ನಾವು ಆ ಸಣ್ಣ ನಿಲ್ದಾಣವನ್ನು ತಲುಪಿದಾಗ ಮುಂಜಾನೆಯಾಗುವುದರಲ್ಲಿತ್ತು. ಅಲ್ಲಿಂದ ಮುಂದಕ್ಕೆ ದ್ವಾರಾಹಟ್ ಗಿರಿಧಾಮಕ್ಕೆ ಕಾರಿನಲ್ಲಿ ಪ್ರಯಾಣ ಮಾಡಬೇಕಾಗಿತ್ತು. ಅಲ್ಲಿ ನಮ್ಮಂತಹ ಯಾತ್ರಿಕರಿಗೆ ವಸತಿ ಲಭ್ಯವಿತ್ತು.

ಬಾಬಾಜಿಯವರಿಂದ ಒಂದು ದಿವ್ಯ ಸಮ್ಮತಿ

1963ರಲ್ಲಿ ರಾಣಿಖೇತ್ ಹತ್ತಿರ ಹಿಮಾಲಯದಲ್ಲಿ, ಮಹಾವತಾರ ಬಾಬಾಜಿಯವರ ಗುಹೆಯಲ್ಲಿ ,ಆಳವಾದ ದೈವೀ ಸಂಸರ್ಗದಲ್ಲಿ ದಯಾ ಮಾತಾರವರು. “ಮೌನದ ಧ್ವನಿಯು ದೈವೀ ಉಪಸ್ಥಿತಿಯ ಬಗ್ಗೆ ಜೋರಾಗಿ ನುಡಿಯಿತು. ಸಾಕ್ಷಾತ್ಕಾರದ ಅಲೆಗಳು ನನ್ನ ಪ್ರಜ್ಞೆಯ ಮೂಲಕ ಹರಿದವು; ಮತ್ತು ಆ ದಿನ ನಾನು ಸಲ್ಲಿಸಿದ ಪ್ರಾರ್ಥನೆಗಳು ಉತ್ತರಿಸಲ್ಪಟ್ಟವು.”

ಸ್ವಲ್ಪ ಸಮಯ ನಾನು ಕಾಟ್‌ಗೋಧಾಮ್ ರೈಲ್ವೆ ನಿಲ್ದಾಣದಲ್ಲಿ ಒಬ್ಬಳೇ ಕುಳಿತಿದ್ದೆನು. ಇತರ ಭಕ್ತರು ಹೊರಗಡೆ ಕಾರುಗಳಿಗಾಗಿ ಕಾಯಲು ಹೋಗಿದ್ದರು. ಒಂದು ಆಳವಾದ ಅನುಭಾವ ಮತ್ತು ಭಕ್ತಿಯಿಂದ ಭಾರತದಲ್ಲಿ ಹೇಳುವ ಜಪಯೋಗವನ್ನು ನಾನು ಅಭ್ಯಾಸ ಮಾಡುತ್ತಿದ್ದೆ. ದೇವರ ಹೆಸರನ್ನು ಮತ್ತೆ ಮತ್ತೆ ಮತ್ತೆ ಪುನರುಚ್ಚರಿಸುತಿದ್ದೆ. ಈ ಅಭ್ಯಾಸದಲ್ಲಿ ಪ್ರಜ್ಞೆಯು ಸಂಪೂರ್ಣವಾಗಿ, ಕ್ರಮೇಣ ಕೇವಲ ಒಂದೇ ಆಲೋಚನೆಯಲ್ಲಿ ಉಳಿದುದೆಲ್ಲವನ್ನೂ ದೂರಸರಿಸಿ ಲೀನವಾಯಿತು. ನಾನು ಬಾಬಾಜಿಯವರ ನಾಮವನ್ನು ಜಪಿಸುತ್ತಿದ್ದೆನು.ನನ್ನ ಯೋಚನೆಯಲ್ಲಿ ಕೇವಲ ಬಾಬಾಜಿಯವರು ಮಾತ್ರ ಇದ್ದರು. ನನ್ನ ಹೃದಯವು ಅವರ್ಣನೀಯ ರೋಮಾಂಚನದಿಂದ ಬಿರಿಯುತ್ತಿತ್ತು.

ಕೂಡಲೇ, ನಾನು ಈ ಪ್ರಪಂಚದ ಅರಿವನ್ನು ಕಳೆದುಕೊಂಡೆ. ನನ್ನ ಮನಸ್ಸು ಸಂಪೂರ್ಣವಾಗಿ ಪ್ರಜ್ಞೆಯ ಮತ್ತೊಂದು ಸ್ತರಕ್ಕೆ ಸೆಳೆಯಲ್ಪಟ್ಟಿತು. ಅತಿ ಮಧುರವಾದ ಪರಮಾನಂದದಲ್ಲಿ, ನಾನು ಬಾಬಾಜಿಯವರ ಉಪಸ್ಥಿತಿಯನ್ನು ಕಂಡೆ. ಅವಿಲಾದ ಸಂತ ತೆರೇಸಾಳು ನಿರಾಕಾರ ಯೇಸುವನ್ನು ‘ಕಂಡೆ’ ಎಂದು ಹೇಳಿದುದರ ಅರ್ಥ ಈಗ ನನಗೆ ತಿಳಿಯಿತು: ಚೇತನವು ಆತ್ಮದ ಪ್ರತ್ಯೇಕತೆಯಾಗಿ ಅಭಿವ್ಯಕ್ತವಾಗಿ, ಕೇವಲ ಅಸ್ತಿತ್ವದ ಚಿಂತನಾಸಾರದ ಮಸುಕಿನಲ್ಲಿ ಇತ್ತು. ಈ ‘ನೋಟ’ವು ಭೌತಿಕ ರೂಪಗಳ ಸ್ಥೂಲವಾದ ರೂಪ ರೇಖೆಗಳಿಗಿಂತ ಅಥವಾ ದರ್ಶನಗಳಿಗಿಂತಲೂ ಮೀರಿದ ಪ್ರಕಾಶಮಾನವಾದ ಮತ್ತು ನಿಖರತೆಯ ಗ್ರಹಿಕೆಯಾಗಿತ್ತು. ಆಂತರ್ಯದಲ್ಲಿ ನಾನು ನಮಿಸಿದೆ ಮತ್ತು ಅವರ ಪಾದ ಧೂಳಿಯನ್ನು ತೆಗೆದುಕೊಂಡೆ.

ಮಾಸ್ಟರ್‌ರವರು (ಗುರುದೇವರು) ನಮ್ಮಲ್ಲಿ ಕೆಲವರಿಗೆ ಹೇಳಿದ್ದರು, “ನಮ್ಮ ಸೊಸೈಟಿಯ ಮುಖಂಡತ್ವದ ಬಗ್ಗೆ ನೀವು ಕಾಳಜಿ ತೆಗೆದುಕೊಳ್ಳುವ ಅವಶ್ಯಕತೆಯೇ ಇಲ್ಲ. ಬಾಬಾಜಿಯವರು ಈಗಾಗಲೇ ಆ ಕೆಲಸವನ್ನು ಮುನ್ನಡೆಸಲು ಉದ್ದೇಶಿಸಿರುವವರನ್ನು ಆಯ್ಕೆ ಮಾಡಿರುತ್ತಾರೆ.” ನಾನು ಮಂಡಳಿಯಿಂದ ಆಯ್ಕೆ ಮಾಡಲ್ಪಟ್ಟಾಗ ಪ್ರಶ್ನಿಸಿದೆ, “ನನ್ನನ್ನೇ ಏಕೆ?” ಈಗ ನಾನೇ ಬಾಬಾಜಿಯವರಲ್ಲಿ ಅದರ ಬಗ್ಗೆ ಮನವಿ ಸಲ್ಲಿಸುವುದನ್ನು ಕಂಡೆ: “ಅವರು ನನ್ನನ್ನು ಆಯ್ಕೆ ಮಾಡಿದ್ದಾರೆ. ನಾನು ಅಷ್ಟು ಯೋಗ್ಯಳಲ್ಲ. ಅದು ಹೇಗೆ ಸಾಧ್ಯ?” ನಾನು ಆಂತರ್ಯದಲ್ಲೇ ಅವರ ಚರಣಗಳಲ್ಲಿ ಬಿಕ್ಕುತ್ತಿದ್ದೆ.

ಅದೆಷ್ಟು ಮಧುರವಾಗಿ ಅವರು ಉತ್ತರಿಸಿದರು: “ನನ್ನ ಮಗು, ನೀನು ನಿನ್ನ ಗುರುವನ್ನು ಸಂದೇಹಿಸಬಾರದು. ಅವರು ಸತ್ಯವನ್ನೇ ನುಡಿದಿದ್ದಾರೆ. ಅವರು ನಿನಗೆ ಹೇಳಿರುವುದು ಸತ್ಯವೇ.” ಬಾಬಾಜಿಯವರು ಹೀಗೆ ನುಡಿಯುತ್ತಿದ್ದಂತೆಯೇ, ಒಂದು ಆನಂದದಾಯಕ ಶಾಂತಿಯು ನನ್ನನ್ನು ಆವರಿಸಿತು. ನನ್ನ ಅಸ್ತಿತ್ವವೆಲ್ಲವೂ ಆ ಪ್ರಶಾಂತಿಯಲ್ಲಿ ಮಿಂದಿತು. ಅದೆಷ್ಟು ಸಮಯವೋ ನನಗೆ ಗೊತ್ತಿಲ್ಲ.

ಕ್ರಮೇಣ ನನಗೆ ಅರಿವು ಉಂಟಾದಾಗ, ನನ್ನ ತಂಡದ ಉಳಿದವರೆಲ್ಲರೂ ಆ ಕೋಣೆಯೊಳಗೆ ಬಂದಿದ್ದರು. ನನ್ನ ಕಣ್ಣುಗಳನ್ನು ನಾನು ತೆರೆದಾಗ, ನನ್ನ ಸುತ್ತಲಿನವುಗಳನ್ನು ಒಂದು ಹೊಸ ಗ್ರಹಿಕೆಯೊಂದಿಗೆ ನೋಡತೊಡಗಿದೆ. ನಾನು ಉದ್ಗರಿಸಿದುದು ನೆನಪಿದೆ, “ಓ ಸಹಜವಾಗಿಯೇ! ನಾನು ಹಿಂದೆ ಇಲ್ಲಿ ಇದ್ದೆನು.” ಪ್ರತಿಯೊಂದೂ ತಕ್ಷಣವೇ ನನಗೆ ಪರಿಚಿತವಾಗಿತ್ತು, ಹಿಂದಿನ ಜನ್ಮದ ನೆನಪುಗಳು ಪುನರ್ ಜಾಗೃತವಾಗಿದ್ದವು.

ನಮ್ಮನ್ನು ಪರ್ವತದ ಮೇಲಕ್ಕೆ ಕರೆದೊಯ್ಯಲು ಕಾರುಗಳು ಸಿದ್ಧವಾಗಿದ್ದವು. ನಾವು ಅವುಗಳಲ್ಲಿ ಕುಳಿತು, ಅಂಕುಡೊಂಕದ ಪರ್ವತದ ಮಾರ್ಗದಲ್ಲಿ ಪಯಣ ಬೆಳೆಸಿದೆವು. ಪ್ರತಿಯೊಂದು ನೋಟವೂ, ನಾ ಕಂಡ ಪ್ರತಿಯೊಂದು ದೃಶ್ಯವೂ ನನಗೆ ಪರಿಚಿತವಾಗಿದ್ದಿತು. ಕಾಟ್‌ಗೋಧಾಮ್‌ನಲ್ಲಿನ ಅನುಭವದ ನಂತರ, ಬಾಬಾಜಿಯವರ ಉಪಸ್ಥಿತಿಯು ನನ್ನಲ್ಲಿ ಅದೆಷ್ಟು ಬಲವಾಗಿತ್ತೆಂದರೆ ನಾನು ನೋಡುವ ಎಲ್ಲೆಡೆಯಲ್ಲೂ ಅವರು ಅಲ್ಲಿರುವಂತೆಯೇ ಕಾಣುತ್ತಿದ್ದರು. ನಾವು ರಾಣಿಖೇತ್‌ನಲ್ಲಿ ಸ್ವಲ್ಪ ಸಮಯ ನಿಂತೆವು. ಅಲ್ಲಿ ನಗರದ ಅಧಿಕಾರಿಗಳು, ಮುಖ್ಯಮಂತ್ರಿಗಳಿಂದ ನಮ್ಮ ಭೇಟಿಯ ಬಗ್ಗೆ ಸೂಚನೆ ಪಡೆದಿದ್ದರಿಂದ ಅವರಿಂದ ಸ್ವಾಗತಿಸಲ್ಪಟ್ಟೆವು.

ಕೊನೆಗೂ ನಾವು ದೂರದ ಒಂದು ಪುಟ್ಟ ಹಳ್ಳಿಯಾದ ಹಿಮಾಲಯದ ತಪ್ಪಲಿನಲ್ಲಿ ಎತ್ತರದ ಸ್ಥಳ, ದ್ವಾರಾಹಟ್ ನ್ನು ತಲುಪಿದೆವು. ನಾವು ಯಾತ್ರಿಕರ ಸ್ಥಳವಾದ ಒಂದು ಚಿಕ್ಕ ಸರ್ಕಾರಿ ಬಂಗಲೆಯಲ್ಲಿ ವಿರಮಿಸಿದೆವು. ಆ ರಾತ್ರಿ ಯಂದು ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶದಿಂದ ಅನೇಕ ಜನರು ನಮ್ಮನ್ನು ಭೇಟಿ ಮಾಡಲು ಬಂದರು. ಪವಿತ್ರವಾದ ಗುಹೆಯನ್ನು ಸಂದರ್ಶಿಸಲು ಅನೇಕ ಪಾಶ್ಚಿಮಾತ್ಯ ಯಾತ್ರಿಕರು ಬಂದಿದ್ದರೆಂಬುದನ್ನು ಕೇಳಿದ್ದರು. ಆ ಪ್ರದೇಶದಲ್ಲಿ ಅನೇಕರು ಬಾಬಾಜಿಯವರ ಬಗ್ಗೆ “ಪೂಜ್ಯ ತಂದೆ” ಎಂಬ ಅರ್ಥದಲ್ಲಿ ಮಾತನಾಡುತ್ತಿದ್ದರು. ಅವರು ಪ್ರಶ್ನೆಗಳ ಸುರಿಮಳೆಯನ್ನೇ ಉಂಟುಮಾಡಿದರು. ನಾವು ಈಗಿನಂತೆಯೇ ಒಟ್ಟಿಗೆ ಸತ್ಸಂಗ ನಡೆಸಿದೆವು. ಅನೇಕರು ಇಂಗ್ಲಿಷ್‌ನ್ನು ಅರ್ಥ ಮಾಡಿಕೊಂಡರು ಮತ್ತು ಹತ್ತಿರದಲ್ಲೇ ಇದ್ದ ಒಬ್ಬರು ಅದು ಅರ್ಥವಾಗದವರಿಗಾಗಿ ಅನುವಾದಿಸಿದರು.

ಮುಂಗಾಣ್ಕೆಯ ಒಂದು ದಿವ್ಯ ದರ್ಶನ

ಸತ್ಸಂಗ ಮುಗಿದ ನಂತರ ಹಳ್ಳಿಯವರು ಚದುರಿದರು. ನಾವು ಧ್ಯಾನ ಮಾಡಲು ಕುಳಿತೆವು ಮತ್ತು ನಂತರ ಬೆಚ್ಚಗಿನ ಮಲಗುವ ಚೀಲಗಳೊಳಗೆ ಏರಿ ವಿರಮಿಸಿದೆವು. ಅರ್ಧ ರಾತ್ರಿಯಲ್ಲಿ ನನಗೆ ಒಂದು ಅತೀಂದ್ರಿಯ ಅನುಭವ ಉಂಟಾಯಿತು. ಒಂದು ದೊಡ್ಡ ಕಪ್ಪು ಮೋಡ ಇದ್ದಕ್ಕಿದ್ದಂತೆ ನನ್ನ ಮೇಲೆ ಎರಗಿತು. ನನ್ನನ್ನು ಆವರಿಸಲು ಪ್ರಯತ್ನಿಸುತ್ತಿತ್ತು. ಅದು ಹಾಗೆ ಮಾಡಿದ ಕೂಡಲೇ ನಾನು ಭಗವಂತನನ್ನು ಜೋರಾಗಿ ಕರೆದೆ. ಆ ಕೋಣೆಯಲ್ಲಿ ನನ್ನ ಜೊತೆಯಲ್ಲಿದ್ದ ಆನಂದ ಮಾ ಹಾಗೂ ಉಮಾ ಮಾ ಇಬ್ಬರಿಗೂ ಎಚ್ಚರವಾಯಿತು. ಅವರು ದಿಗ್ಭ್ರಮೆ ಹೊಂದಿ ಏನಾಯಿತು ಎಂಬುದನ್ನು ಅರಿಯಲು ಇಚ್ಚಿಸಿದರು. “ನಾನು ಅದರ ಬಗ್ಗೆ ಈಗ ಮಾತನಾಡಲು ಇಚ್ಚಿಸುವುದಿಲ್ಲ.” ನಾನು ಅವರಿಗೆ ಹೇಳಿದೆನು, “ನಾನು ಸರಿಯಾಗಿದ್ದೇನೆ. ನೀವು ನಿದ್ರೆ ಮಾಡಿ.” ಧ್ಯಾನದ ಅಭ್ಯಾಸದಿಂದ ನಮ್ಮಲ್ಲಿ ಪ್ರತಿಯೊಬ್ಬರಿಗೂ ಅತೀಂದ್ರಿಯ ಪ್ರಜ್ಞೆಯ ಸರ್ವಜ್ಞತ್ವವು ವೃದ್ಧಿಯಾಗುತ್ತದೆ. ನನ್ನ ಅಂತಪ್ರಜ್ಞೆಯಿಂದ ದೈವವು ಈ ಸಾಂಕೇತಿಕ ಅನುಭವದ ಮೂಲಕ ಹೇಳುತ್ತಿರುವುದನ್ನು ಅರ್ಥ ಮಾಡಿಕೊಂಡೆ. ನಾನು ಇಷ್ಟರಲ್ಲೇ ತೀವ್ರವಾದ ರೋಗದಿಂದ ನರಳುವ ಬಗ್ಗೆ ಮುನ್ಸೂಚನೆಯಾಗಿತ್ತು ಮತ್ತು ಎಲ್ಲಾ ಮಾನವ ಜನಾಂಗದವರು ಒಂದು ಅತ್ಯಂತ ಅಂಧಕಾರದ ಸಮಯವನ್ನು ಎದುರಿಸಬೇಕಾಗುತ್ತದೆ. ಆ ಸಮಯದಲ್ಲಿ ದುಷ್ಟಶಕ್ತಿಯು ಇಡೀ ಜಗತ್ತನ್ನೇ ನುಂಗಿಬಿಡುತ್ತದೆ ಎಂದು ಸೂಚಿಸಿತು. ಆ ಮೋಡವು ಸಂಪೂರ್ಣವಾಗಿ ನನ್ನನ್ನು ಆವರಿಸದೇ ಇದ್ದುದರಿಂದ — ಅದು ನನ್ನಲ್ಲಿ ಭಗವಂತನ ಆಲೋಚನೆಗಳಿಂದ — ಹಿಮ್ಮೆಟ್ಟಿತು. ಆ ದೃಶ್ಯವು ನಾನು ಒಂದು ವೈಯಕ್ತಿಕ ಕಂಟಕವನ್ನು ದಾಟಬೇಕಾಗುವುದು ಎಂಬುದನ್ನು ಸೂಚಿಸಿತು. ಅದು ಹಾಗೆಯೇ ನಡೆಯಿತು. ಅದೇ ರೀತಿಯಲ್ಲಿ ವಿಶ್ವವೂ ಸಹ ಬೆದರಿಸುವ ಕಪ್ಪು ಮೋಡದಿಂದ, ಅಂತ್ಯದಲ್ಲಿ ಹೊರಬರುತ್ತದೆ ಎಂಬುದನ್ನು ತೋರಿಸಿತು. ಆದರೆ ಮಾನವ ಜನಾಂಗವು ಮೊದಲು ತನ್ನ ಪಾಲಿನ ಕರ್ತವ್ಯವನ್ನು, ಅಂದರೆ ಭಗವಂತನೆಡೆಗೆ ಮುಖ ಮಾಡಲೇಬೇಕಾಗುತ್ತದೆ.

ಮರುದಿನ ಬೆಳಗ್ಗೆ 9:00ಗೆ ನಾವು ಗುಹೆಯ ಕಡೆಗೆ ನಮ್ಮ ಚಾರಣವನ್ನು ಆರಂಭಿಸಿದೆವು. ಪ್ರವಾಸದ ಈ ಭಾಗದಲ್ಲಿ ನಾವು ಹೆಚ್ಚಾಗಿ ನಡೆದು ಹೋಗಬೇಕಾಗಿರುತ್ತದೆ. ಆದರೆ ಆಗಾಗ ಕುದುರೆಯ ಮೇಲೆ ಅಥವಾ ದಂಡಿಯಲ್ಲಿ ಹೋಗಬೇಕಾಗಿತ್ತು. ಅದೊಂದು ಸಣ್ಣ ಪಲ್ಲಕ್ಕಿ ತರಹದ ಗಾಡಿ, ಮರದ ಹಾಳೆಗಳಿಂದ ಒರಟಾಗಿ ಹೆಣೆದ ಗಾಡಿಯಾಗಿದ್ದು, ಅದನ್ನು ಎರಡು ಎತ್ತರದ ಕಂಬಗಳಿಂದ ಹಗ್ಗ ಹಾಕಿ ತೂಗು ಹಾಕಲಾಗಿತ್ತು. ಅದನ್ನು ನಾಲ್ಕು ಜನ ಗಂಡು ಕೂಲಿಯಾಳುಗಳು ತಮ್ಮ ಹೆಗಲುಗಳ ಮೇಲೆ ಹೊತ್ತುಕೊಳ್ಳುತ್ತಿದ್ದರು.

ನಾವು ಮೇಲಕ್ಕೆ ಹತ್ತಿದೆವು, ಹತ್ತಿದೆವು, ಮತ್ತು ಹತ್ತೇ ಹತ್ತಿದೆವು. ಕೆಲವೊಮ್ಮೆ ನಾವು ಅಕ್ಷರಶಃ ತೆವಳಿಕೊಂಡೇ ಹೋದೆವು. ಅನೇಕ ಜಾಗಗಳಲ್ಲಿ ಬಹಳ ಇಳಿಜಾರು ಇತ್ತು. ನಾವು ಕೇವಲ ಅಲ್ಪಕಾಲ ಮಾತ್ರ ದಾರಿಯಲ್ಲಿ ಎರಡು ವಿಶ್ರಾಂತಿ ಗೃಹಗಳಲ್ಲಿ ನಿಂತೆವು. ಎರಡನೆಯ ಬಾರಿ ಅದೊಂದು ಸರ್ಕಾರಿ ಬಂಗಲೆ ಆಗಿದ್ದು , ಅಲ್ಲಿ ನಾವು ಗುಹೆಯಿಂದ ಹಿಂತಿರುಗುವಾಗ ರಾತ್ರಿ ಪೂರ್ತಿ ಉಳಿದುಕೊಂಡೆವು. ಮಧ್ಯಾಹ್ನ 5 ಗಂಟೆ ಸುಮಾರಿನಲ್ಲಿ, ಸೂರ್ಯನು ಪರ್ವತಗಳ ಮೇಲೆ ಮುಳುಗಲು ಆರಂಭಿಸಿದಾಗ, ನಾವು ಗುಹೆಯನ್ನು ತಲುಪಿದೆವು. ಅದೊಂದು ಭಾಸ್ಕರನ ಪ್ರಭೆಯೇ ಅಥವಾ ಅದೊಂದು ಮತ್ತೊಂದು ಶಕ್ತಿಯ ಪ್ರಕಾಶವೇ? ಅದು ಇಡೀ ವಾತಾವರಣದಲ್ಲಿ ತುಂಬಿಕೊಂಡಿತ್ತು, ಮತ್ತು ಎಲ್ಲಾ ವಸ್ತುಗಳ ಮೇಲೆ ಮಿನುಗುವ ಸುವರ್ಣ ಪ್ರಕಾಶವು ಹೊಳೆಯುತ್ತಿತ್ತು.

ವಾಸ್ತವವಾಗಿ, ಆ ಪ್ರದೇಶದಲ್ಲಿ ಅನೇಕ ಗುಹೆಗಳು ಇವೆ. ಒಂದು ತೆರೆದಿರುವುದು, ಪ್ರಕೃತಿಯಿಂದಲೇ ಒಂದು ರಕ್ಕಸ ಬಂಡೆಯಲ್ಲಿ ಮೂಡಿರುವುದು. ಬಹುಶಃ ಅದು ಲಾಹಿರಿ ಮಹಾಶಯರು ಬಾಬಾಜಿಯವರನ್ನು ಮೊದಲ ಬಾರಿಗೆ ದರ್ಶನ ಮಾಡಿದಾಗ, ಅವರು ಅದೇ ಚಾಚು ಬಂಡೆಯ ಕಟ್ಟಿನ ಮೇಲೆ ನಿಂತಿದ್ದುದು. ನಂತರ ಅಲ್ಲಿ ಮತ್ತೊಂದು ಗುಹೆ ಇದೆ. ಅದರಲ್ಲಿ ಪ್ರವೇಶಿಸಬೇಕಾದಲ್ಲಿ ನೀವು ನಿಮ್ಮ ಕೈಗಳು ಮತ್ತು ಮೊಣಕಾಲುಗಳ ಮೇಲೆ ತೆವಳಿಕೊಂಡು ಹೋಗಬೇಕು. ಇದೊಂದು ಬಾಬಾಜಿಯವರು ಉದ್ದೇಶಪೂರ್ವಕವಾಗಿ ನೆಲೆಸಿದುದೇ ಆಗಿತ್ತು. ಅದರ ಭೌತಿಕ ರಚನೆ, ಅದರಲ್ಲೂ ವಿಶೇಷವಾಗಿ ಪ್ರವೇಶ ದ್ವಾರವು, ಬಾಬಾಜಿಯವರು ಆಕ್ರಮಿಸಿ ನೂರಾರು ವರ್ಷಗಳು ಕಳೆದುದರಿಂದ ಪ್ರಕೃತಿಯ ಸಹಜ ಶಕ್ತಿಗಳಿಂದಾಗಿ, ಬದಲಾವಣೆ ಉಂಟಾಗಿತ್ತು. ಆ ಗುಹೆಯ ಒಳಗಿನ ಕೋಣೆಯಲ್ಲಿ ನಾವು ಬಹಳ ಹೊತ್ತು ದೀರ್ಘಾವಧಿಯ ಆಳವಾದ ಧ್ಯಾನ ಮಾಡಲು ಕುಳಿತುಕೊಂಡೆವು. ಮತ್ತು ನಮ್ಮ ಗುರುಗಳ ಎಲ್ಲಾ ಭಕ್ತರಿಗಾಗಿ ಮತ್ತು ಎಲ್ಲಾ ಮಾನವ ಜನಾಂಗಕ್ಕಾಗಿ ಪ್ರಾರ್ಥನೆ ಮಾಡಿದೆವು. ಹಿಂದೆಂದೂ ಇರದಷ್ಟು ನಿಶ್ಚಲತೆ ಅಲ್ಲಿತ್ತು. ಮೌನದ ಧ್ವನಿಯು ಜೋರಾಗಿ ದಿವ್ಯ ಸನ್ನಿಧಿಯ ಬಗ್ಗೆ ಮಾತನಾಡಿತ್ತು. ಸಾಕ್ಷಾತ್ಕಾರದ ಅಲೆಗಳು ನನ್ನ ಪ್ರಜ್ಞೆಯ ಮೂಲಕ ಸ್ಫುರಿಸಿದವು; ಮತ್ತು ಆ ದಿನ ನಾನು ಸಲ್ಲಿಸಿದ ಪ್ರಾರ್ಥನೆಯು ತದನಂತರ ಉತ್ತರಿಸಲ್ಪಟ್ಟಿತು.

ನಮ್ಮ ಭೇಟಿಯ ಕುರುಹಾಗಿ ಮತ್ತು ದಿವ್ಯ ಮಹಾವತಾರರಿಗೆ ಗುರುದೇವರ ಶಿಷ್ಯರಾದ ನಮ್ಮೆಲ್ಲರ ಭಕ್ತಿ ಮತ್ತು ಗೌರವಗಳ ಗುರುತಿನ ಚಿಹ್ನೆಯಾಗಿ ನಾವು ಆ ಗುಹೆಯಲ್ಲಿ, ಒಂದು ಸಣ್ಣ ಶಿರೋವಸ್ತ್ರ (ಸ್ಕಾರ್ಫ್)ವನ್ನು, ಅದರ ಮೇಲೆ ಸೆಲ್ಫ್-ರಿಯಲೈಝೇಷನ್ [ಯೋಗದಾ ಸತ್ಸಂಗ]ನ ಲಾಂಛನವನ್ನು ಹೊಲೆದಿದ್ದು, ಅಲ್ಲಿ ಬಿಟ್ಟು ಬಂದೆವು.

ಕತ್ತಲೆಯ ನಂತರ, ನಾವು ಮನೆಯ ಕಡೆ ಚಾರಣ ಆರಂಭಿಸಿದೆವು. ಅನೇಕ ಗ್ರಾಮಸ್ಥರು ನಮ್ಮ ಯಾತ್ರೆಗೆ ಸೇರಿಕೊಂಡಿದ್ದರು ಮತ್ತು ಕೆಲವರು ಚಿಂತನಾಶೀಲರು ಮತ್ತು ಬುದ್ಧಿವಂತರು ಸೀಮೆಎಣ್ಣೆ ಲಾಟೀನುಗಳನ್ನು ಜೊತೆಯಲ್ಲಿ ತೆಗೆದುಕೊಂಡು ಬಂದಿದ್ದರು. ಪರ್ವತದಲ್ಲಿ ಕೆಳಗೆ ಇಳಿದು ಬರುವಾಗ ಭಗವಂತನ ಸಂಕೀರ್ತನೆಗಳಲ್ಲಿ ಧ್ವನಿಯು ಜೋರಾಗಿತ್ತು. ಸುಮಾರು 9 ಗಂಟೆಗೆ ನಾವು ಆ ಪ್ರದೇಶದ ಒಬ್ಬ ಅಧಿಕಾರಿಯ ಒಂದು ಸರಳ ಮನೆಯನ್ನು ತಲುಪಿದೆವು. ಅವರು ಗುಹೆಗೆ ನಮ್ಮೊಡನೆ ಬಂದಿದ್ದರು. ಆದ್ದರಿಂದ ವಿಶ್ರಮಿಸಲು ನಮ್ಮನ್ನು ಆಹ್ವಾನಿಸಲಾಗಿತ್ತು. ನಾವು ಮನೆಯ ಹೊರಗಡೆ ಒಂದು ಧಗಿಸುತ್ತಿರುವ ಬೆಂಕಿಯ ಸುತ್ತ ಕುಳಿತುಕೊಂಡೆವು. ಮತ್ತು ನಮಗೆ ಹುರಿದ ಆಲೂಗೆಡ್ಡೆಗಳು, ಕಪ್ಪು ಬ್ರೆಡ್ ಮತ್ತು ಚಹಾ ಇವುಗಳನ್ನು ಬಡಿಸಿದರು. ಬ್ರೆಡ್ ಅನ್ನು ಕೆಂಡದಲ್ಲಿ ಬೇಯಿಸಲಾಗಿತ್ತು ಮತ್ತು ಅದು ಸಂಪೂರ್ಣ ಕಪ್ಪಗಿತ್ತು. ಪವಿತ್ರ ಹಿಮಾಲಯದ ರಾತ್ರಿಯ ಚಿರುಗುಟ್ಟುವ ಗಾಳಿಯಲ್ಲಿ ಆ ಊಟ ಅದೆಷ್ಟು ಸ್ವಾದಿಷ್ಟವಾಗಿತ್ತು ಎಂದರೆ ಅದನ್ನು ಮರೆಯಲು ಎಂದಿಗೂ ಸಾಧ್ಯವಿಲ್ಲ.

ನಾವು ಗುಹೆಗೆ ಹೋಗುವ ಮಾರ್ಗದಲ್ಲಿ ವಿಶ್ರಮಿಸಿದ್ದ ಸರ್ಕಾರಿ ವಿಶ್ರಾಂತಿ ಗ್ರಹವನ್ನೇ ಹಿಂತಿರುಗುವಾಗ ತಲುಪುವಷ್ಟರಲ್ಲಿ ಮಧ್ಯರಾತ್ರಿ ಆಗಿತ್ತು. ಇಲ್ಲಿ ನಾವು ಉಳಿದ ರಾತ್ರಿಯನ್ನು ಕಳೆಯಬೇಕಾಗಿತ್ತು – ಬೇರೆ ಮಾರ್ಗವಿರಲಿಲ್ಲ! ಆನಂತರ, ಅನೇಕ ಜನರು ಆ ದಿನ ರಾತ್ರಿಯಲ್ಲಿ ಕೇವಲ ನಮ್ಮ ಶ್ರದ್ಧೆಯಷ್ಟೇ ನಮ್ಮನ್ನು ಆ ಪ್ರದೇಶದ ಮೂಲಕ ಕರೆದುಕೊಂಡು ಬಂದಿರುತ್ತದೆ, ಎಂದು ಅಭಿಪ್ರಾಯ ಪಟ್ಟರು. ಆ ಮಾರ್ಗವು ಬಹಳ ಅಪಾಯಕಾರಿಯಾದ ಸರ್ಪಗಳು, ಹುಲಿಗಳು, ಮತ್ತು ಚಿರತೆಗಳಿಂದ ತುಂಬಿತ್ತು. ಕತ್ತಲಾದ ನಂತರ ಅಲ್ಲಿ ಹೊರಗೆ ಬರುವುದನ್ನು ಯಾರೂ ಕನಸಿನಲ್ಲಿಯೂ ಊಹಿಸಲಾರರು. ಆದರೆ ಅಜ್ಞಾನವೇ ವರದಾನ ಎಂಬ ಹೇಳಿಕೆ ಉಂಟು, ನಮಗೆ ಹೆದರಿಕೆ ಅನಿಸಲೇ ಇಲ್ಲ. ಅಪಾಯಗಳ ಬಗ್ಗೆ ನಮಗೆ ತಿಳಿದಿದ್ದರೂ ಸಹ, ನಾವು ಸುರಕ್ಷಿತರು ಎಂಬುದನ್ನು ಅನುಭವಿಸುತ್ತಿದ್ದೆವು. ಆದರೂ ಸಾಮಾನ್ಯವಾಗಿ, ರಾತ್ರಿಯ ವೇಳೆಯಲ್ಲಿ ಈ ಪ್ರವಾಸವನ್ನು ಎಂದಿಗೂ ನಾನು ಶಿಫಾರಸು ಮಾಡುವುದಿಲ್ಲ.

ದಿನಪೂರ್ತಿ ಕಾಟ್‌ಗೋಧಾಮ್‌ನಲ್ಲಿನ ಬಾಬಾಜಿಯವರ ಜೊತೆಯಲ್ಲಿದ್ದ ಅನುಭವವು, ನನ್ನ ಪ್ರಜ್ಞೆಯ ಒಂದು ಭಾಗವೇ ಆಗಿದ್ದಿತು; ಅಲ್ಲದೇ ನಾನು ನನ್ನ ಭೂತಕಾಲದ ದೃಶ್ಯಗಳನ್ನು ಪುನರ್ ಜೀವಿಸುತ್ತಿದ್ದೇನೆ ಎಂಬ ಭಾವವೂ ಸಹ ಸ್ಥಿರವಾಗಿತ್ತು.

"ನನ್ನ ಸ್ವರೂಪವೇ ಪ್ರೇಮ"

ಆ ರಾತ್ರಿ ನಾನು ನಿದ್ದೆ ಮಾಡಲು ಸಾಧ್ಯವಾಗಲಿಲ್ಲ. ಧ್ಯಾನಕ್ಕೆ ಕುಳಿತಾಗ, ಇಡೀ ಕೋಣೆಯು ಇದ್ದಕ್ಕಿದ್ದಂತೆ ಸುವರ್ಣ ಪ್ರಕಾಶದಿಂದ ತುಂಬಿ ಹೋಯಿತು.ಆ ಬೆಳಕು ಒಂದು ಪ್ರಕಾಶಮಾನ ನೀಲಿಯಾಯಿತು.ಮತ್ತು ಅಲ್ಲಿ ಪುನಃ ನಮ್ಮ ಪ್ರಿಯ ಬಾಬಾಜಿಯವರ ಉಪಸ್ಥಿತಿ ಇತ್ತು! ಈ ಬಾರಿ ಅವರು ಹೇಳಿದರು: “ನನ್ನ ಮಗುವೇ, ಇದನ್ನು ತಿಳಿದುಕೋ: ಭಕ್ತರು ನನ್ನನ್ನು ಕಾಣಲು ಇದೇ ಜಾಗಕ್ಕೆ ಬರಬೇಕೆಂದಿಲ್ಲ. ಯಾರೇ ಆಗಲಿ ಆಳವಾದ ಭಕ್ತಿಯಿಂದ ನನ್ನನ್ನು ಕರೆಯುತ್ತಾ, ನಂಬಿಕೆ ಇಡುತ್ತಾ, ಆಂತರ್ಯಕ್ಕೆ ಹೋಗುವರೋ ಅವರು ನನ್ನ ಉತ್ತರವನ್ನು ಕಂಡುಕೊಳ್ಳುವರು.” ಇದು ನಿಮ್ಮೆಲ್ಲರಿಗೂ ನೀಡಿದ ಸಂದೇಶವಾಗಿತ್ತು. ಅದೆಷ್ಟು ನಿಜ. ನೀವು ಕೇವಲ ನಂಬಿಕೆ ಇಟ್ಟಲ್ಲಿ, ಕೇವಲ ಭಕ್ತಿ ಇದ್ದಲ್ಲಿ ಮತ್ತು ಮೌನ ದಿಂದ ಬಾಬಾಜಿಯವರನ್ನು ಕರೆದಾಗ, ನೀವು ಅವರ ಉತ್ತರವನ್ನು ಪಡೆಯುವಿರಿ.

ನಂತರ ನಾನು ಹೇಳಿದೆ, “ಬಾಬಾಜಿ, ನನ್ನ ಪ್ರಭುವೆ, ನಮ್ಮ ಗುರುಗಳು ನಮಗೆ ಕಲಿಸಿರುವುದು, ನಮಗೆ ಏನಾದರೂ ವಿವೇಚನಾ ಶಕ್ತಿ ಬೇಕಾದಲ್ಲಿ ನಾವು ಶ್ರೀ ಯುಕ್ತೇಶ್ವರಜಿಯವರನ್ನು ಪ್ರಾರ್ಥಿಸಬೇಕು. ಏಕೆಂದರೆ, ಅವರು ಪರಿಪೂರ್ಣ ಜ್ಞಾನ, ಸಂಪೂರ್ಣ ವಿವೇಕ; ಮತ್ತು ನಾವು ಆನಂದ ಅಥವಾ ಪರಮಾನಂದವನ್ನು ಅನುಭವಿಸಲು ಇಚ್ಚಿಸಿದಾಗ, ನಾವು ಲಾಹಿರಿ ಮಹಾಶಯರೊಡನೆ ಶ್ರುತಿಗೂಡಬೇಕು. ನಿಮ್ಮ ಸ್ವಭಾವವು ಏನು?” ನಾನು ಅದನ್ನು ಹೇಳುತ್ತಿದ್ದ ಹಾಗೆಯೇ -ಓ, ನನ್ನ ಹೃದಯವು ಆ ಪ್ರೇಮದಿಂದ ಒಡೆದುಹೋಗುವುದೋ ಎಂದೆನಿಸಿತು. ಸಹಸ್ರ ಸಹಸ್ರ ಪ್ರೇಮಗಳು ಸುರುಳಿಗೊಂಡು ಒಂದಾಯಿತೇನೋ ಎಂಬಂತೆನಿಸಿತು. ಅವರು ಪರಿಪೂರ್ಣ ಪ್ರೇಮ; ಅವರ ಸಂಪೂರ್ಣ ಸ್ವಭಾವವೇ ಪ್ರೇಮವಾಗಿದೆ (ದೈವಿಕ ಪ್ರೇಮ).

ನಿಶ್ಯಬ್ದವಿದ್ದರೂ ಸಹ, ಅತ್ಯಂತ ನಿರರ್ಗಳವಾದ ಉತ್ತರವನ್ನು ನಾನು ಗ್ರಹಿಸಲಾಗಲಿಲ್ಲ; ಆದರೂ ಬಾಬಾಜಿಯವರು ಅದನ್ನು ಮತ್ತಷ್ಟು ಮಧುರವಾಗಿ ಮತ್ತು ಅರ್ಥಗರ್ಭಿತವಾಗಿ ಮಾಡಿ ಈ ಮಾತುಗಳನ್ನು ಸೇರಿಸಿದರು, “ನನ್ನ ಸ್ವಭಾವವೇ ಪ್ರೇಮ. ಏಕೆಂದರೆ ಕೇವಲ ಪ್ರೇಮ ಮಾತ್ರ ಈ ಜಗತ್ತನ್ನೇ ಮಾರ್ಪಡಿಸಬಲ್ಲದು”.

ಮಹಾನ್ ಅವತಾರದ ಉಪಸ್ಥಿತಿಯು, ನನ್ನನ್ನು ದಿವ್ಯ ಪ್ರೇಮದಲ್ಲಿ ನನ್ನನ್ನು ಆನಂದಭರಿತವಾಗಿ ಆವರಿಸಿಟ್ಟು, ನಿಧಾನವಾಗಿ ಮಸುಕಾಗುತ್ತಿದ್ದ ನೀಲಿ ಬೆಳಕಲ್ಲಿ ಅದೃಶ್ಯವಾಯಿತು.

ಗುರುದೇವರು ತಮ್ಮ ದೇಹ ತ್ಯಾಗದ ಸ್ವಲ್ಪ ಸಮಯದ ಮೊದಲು, ನನಗೆ ಹೇಳಿದ್ದನ್ನು ನೆನಪಿಸಿಕೊಂಡೆನು. ನಾನು ಅವರನ್ನು ಪ್ರಶ್ನಿಸಿದ್ದೆನು, “ಗುರುದೇವಾ, ಸಾಮಾನ್ಯವಾಗಿ ಮುಖ್ಯಸ್ಥನು ಹೊರಟು ಹೋದಾಗ, ಒಂದು ಸಂಸ್ಥೆಯು ಮತ್ತೆಂದಿಗೂ ಬೆಳೆಯುವುದಿಲ್ಲ. ಆದರೆ ನಶಿಸಲು ಪ್ರಾರಂಭವಾಗುತ್ತದೆ. ನೀವಿಲ್ಲದೆ ನಾವು ಕಾರ್ಯನಿರ್ವಹಿಸುವುದು ಹೇಗೆ? ನೀವು ಶರೀರದಲ್ಲಿ ಇಲ್ಲದೆ ಇರುವಾಗ ನಮ್ಮನ್ನು ಹಿಡಿದಿಡುವುದು ಯಾವುದು? ಮತ್ತು ನಮ್ಮಲ್ಲಿ ಸ್ಫೂರ್ತಿ ತುಂಬುವುದು ಯಾವುದು?” ಅವರ ಉತ್ತರವನ್ನು ನಾನು ಎಂದಿಗೂ ಮರೆಯಲಾರೆ. “ನಾನು ಈ ಜಗತ್ತನ್ನು ತ್ಯಜಿಸಿದ ನಂತರ, ಕೇವಲ ಪ್ರೇಮ ಮಾತ್ರ ನನ್ನ ಜಾಗವನ್ನು ತುಂಬಬಹುದು. ಹಗಲಿರುಳೂ ದೈವಿಕ ಪ್ರೇಮದಲ್ಲಿ ಎಷ್ಟು ಉನ್ಮತ್ತಳಾಗಬೇಕೆಂದರೆ, ನಿನಗೆ ಬೇರೇನೂ ಅರಿವು ಇರಬಾರದು. ಮತ್ತು ಆ ಪ್ರೇಮವನ್ನು ಎಲ್ಲರಿಗೂ ನೀಡು.” ಬಾಬಾಜಿಯವರ ಸಂದೇಶವೂ ಇದೇ ಆಗಿತ್ತು -ಈ ಯುಗದ ಸಂದೇಶ.

ಭಗವಂತನೆಡೆಗಿನ ಪ್ರೇಮ ಹಾಗೂ ಎಲ್ಲರಲ್ಲಿರುವ ಭಗವಂತನೆಡೆಗಿನ ಪ್ರೇಮ, ಈ ಭೂಮಿಯನ್ನು ಅನುಗ್ರಹಿಸಿರುವ ಎಲ್ಲ ಆಧ್ಯಾತ್ಮಿಕ ವರಿಷ್ಠರು ಉಪದೇಶಿಸಿರುವ ಚಿರಂತನ ಭಗವದಾಜ್ಞೆ. ಈ ಸತ್ಯವನ್ನೇ, ನಾವು ನಮ್ಮ ಸ್ವಂತ ಜೀವನಗಳಲ್ಲಿ ರೂಢಿಸಿಕೊಳ್ಳಲೇ ಬೇಕು. ಈ ಸಂದರ್ಭದಲ್ಲಿ ಅದು ಎಷ್ಟು ಅಗತ್ಯವೆಂದರೆ ಮಾನವ ಜನಾಂಗಕ್ಕೆ ನಾಳೆಯ ಅಸ್ಥಿರತೆ ಇರುವಾಗ, ಆ ಸಮಯದಲ್ಲಿ ದ್ವೇಷ, ಸ್ವಾರ್ಥ, ದುರಾಸೆಗಳು ಜಗತ್ತನ್ನೇ ನಾಶ ಮಾಡಬಹುದಾದ ಸನ್ನಿವೇಶವಿದೆ. ನಾವು ಪ್ರೇಮ, ಕರುಣೆ ಮತ್ತು ವಿವೇಚನೆ ಎಂಬ ಶಸ್ತ್ರಗಳಿಂದ ಸಿದ್ಧ ರಾಗಿರುವ ದೈವೀ ಯೋಧರಾಗಿರಬೇಕು. ಇದೇ ಈಗ ಅತ್ಯವಶ್ಯಕವಾಗಿರುವುದು.

ಆದ್ದರಿಂದ, ನನ್ನ ಆತ್ಮೀಯರೇ, ನಾನು ನನ್ನ ಈ ಅನುಭವವನ್ನು ನಿಮ್ಮೊಡನೆ ಹಂಚಿಕೊಂಡಿರುವೆನೆಂದರೆ, ನೀವು ಬಾಬಾಜಿಯವರು ಜೀವಂತವಾಗಿರುವರು, ಎಂಬುದನ್ನು ತಿಳಿಯಲು. ಅವರು ನಿಶ್ಚಯವಾಗಿಯೂ ಇದ್ದಾರೆ. ಮತ್ತು ಅವರದು ದೈವೀ ಪ್ರೇಮದ ಒಂದು ಶಾಶ್ವತ ಸಂದೇಶ. ನಾನು ಸ್ವಾರ್ಥ ಭರಿತ, ಅಲ್ಪ ಮನಸ್ಸಿನ, ವೈಯಕ್ತಿಕ ಮತ್ತು ತಾನು ಮಾತ್ರ ಹೊಂದಬೇಕೆಂಬ ಸಾಮಾನ್ಯ ಮನುಷ್ಯರ ಬಾಂಧವ್ಯದ ಬಗ್ಗೆ ಹೇಳುತ್ತಿಲ್ಲ. ನಾನು ಹೇಳುವುದರ ಅರ್ಥವೆಂದರೆ, ಕ್ರಿಸ್ತನು ತನ್ನ ಶಿಷ್ಯರಿಗೆ ನೀಡಿದ ಪ್ರೇಮವನ್ನೇ ಗುರುದೇವರು ನಮಗೆ ನೀಡಿರುವ ಪ್ರೇಮ: ಅನಿರ್ಬಂಧಿತ ದಿವ್ಯ ಪ್ರೇಮ. ಈ ಪ್ರೇಮವನ್ನೇ ನಾವು ಎಲ್ಲರಿಗೂ ನೀಡಲೇ ಬೇಕಾಗಿರುವುದು. ನಾವೆಲ್ಲರೂ ಅದಕ್ಕಾಗಿಯೇ ಮೊರೆ ಇಡುತ್ತೇವೆ. ಪ್ರೇಮಕ್ಕಾಗಿ, ಆ ಅಲ್ಪ ದಯೆ ಮತ್ತು ತಿಳುವಳಿಕೆಗಾಗಿ ಕಾತರ ಪಡದೇ ಇರುವವರು ಯಾರೊಬ್ಬರೂ ಈ ಕೋಣೆಯಲ್ಲಿ ಇಲ್ಲ.

ನಾವೆಲ್ಲರೂ ಆತ್ಮ ಸ್ವರೂಪರು ಮತ್ತು ಆತ್ಮದ ಸ್ವಭಾವವೇ ಪರಿಪೂರ್ಣತೆ; ಆದ್ದರಿಂದ ನಾವೆಂದಿಗೂ, ಪರಿಪೂರ್ಣಕ್ಕಿಂತ ಕಡಿಮೆ ಇರುವ ಯಾವುದರಲ್ಲೂ ತೃಪ್ತಿ ಹೊಂದುವುದಿಲ್ಲ. ಆದರೆ ನಾವು ಪರಿಪೂರ್ಣ ಪ್ರೇಮ, ತಂದೆ, ತಾಯಿ, ಸಖ ಮತ್ತು ಪ್ರಿಯನಾದ ನಮ್ಮ ಭಗವಂತನನ್ನು ಅರಿಯುವವರೆಗೆ, ಪರಿಪೂರ್ಣತೆ ಏನೆಂಬುದನ್ನು ಎಂದಿಗೂ ಅರಿಯಲಾರೆವು.

ಇದನ್ನು ಹಂಚಿಕೊಳ್ಳಿ