ನಾನು ನಿಮ್ಮಲ್ಲಿ ಕೇವಲ ಬ್ರಹ್ಮಾನಂದವನ್ನಲ್ಲದೆ ಬೇರೇನನ್ನೂ ಕೇಳುವುದಿಲ್ಲ. ಮತ್ತು ನೀವು ನನ್ನಲ್ಲಿ ಭಗವಂತನ ಜ್ಞಾನ ಮತ್ತು ಆನಂದವನ್ನು ಮಾತ್ರ ಅರಸುವಿರಿ.
— ಪರಮಹಂಸ ಯೋಗಾನಂದ
ಗುರು: “ಅಂಧಕಾರವನ್ನು ದೂರ ಮಾಡುವವನು”
ಗುರು ಮತ್ತು ಶಿಷ್ಯರ ನಡುವಿನ ಬೆಸುಗೆ
ಪರಮಹಂಸ ಯೋಗಾನಂದರು ಗುರು-ಶಿಷ್ಯರ ಬಾಂಧವ್ಯವನ್ನು “ಬಹಳ ವೈಯಕ್ತಿಕ ಮತ್ತು ಖಾಸಗಿ ಆಧ್ಯಾತ್ಮಿಕ ಬೆಸುಗೆ… ಶಿಷ್ಯನ ಕಡೆಯಿಂದ ನಿಷ್ಠಾವಂತ ಆಧ್ಯಾತ್ಮಿಕ ಪ್ರಯತ್ನದ ಮತ್ತು ಗುರುಗಳು ನೀಡುವ ದಿವ್ಯ ಆಶೀರ್ವಾದಗಳ ಸಾಂಗತ್ಯ” ಎಂದು ವಿವರಿಸಿದ್ದಾರೆ.
ಗುರುವಿನ ನಂಬಿಕೆಗೆ ಪ್ರತಿಯಾಗಿ ಶಿಷ್ಯನು ಗುರುವಿನೆಡೆಗೆ ತನ್ನ ನಿಷ್ಠೆಯನ್ನು ಪ್ರಮಾಣ ಮಾಡುತ್ತಾನೆ. ವೈಎಸ್ಎಸ್ ಪಾಠ ಮಾಲಿಕೆಯ ವಿದ್ಯಾರ್ಥಿ ಆದವರು ಬಾಹ್ಯದಲ್ಲಾಗಲಿ ಅಥವಾ ಆಂತರಿಕವಾಗಿಯಾಗಲಿ ಅಂತಹ ವಾಗ್ದಾನ ನೀಡಲೇ ಬೇಕೆಂದಿಲ್ಲ. ಪರಮಹಂಸಜಿಯವರು ಪ್ರಬಲ ಧ್ಯಾನ ತಂತ್ರಗಳ ಜ್ಞಾನವನ್ನು ಯಾರಿಗಾದರೂ—ಅವರ ಧಾರ್ಮಿಕ ಆಚರಣೆ ಅಥವಾ ಅಭ್ಯಾಸಗಳನ್ನು ಲೆಕ್ಕಿಸದೆ—ಯಾರು ಪ್ರಾಮಾಣಿಕವಾಗಿ ಅವುಗಳನ್ನು ಕಲಿಯಲು ಇಚ್ಛಿಸುವರೋ ಮತ್ತು ಆ ಜ್ಞಾನವನ್ನು ಗೌಪ್ಯವಾಗಿ ಇಡುವ ಪ್ರಮಾಣ ಮಾಡುವರೋ, ಅಂತಹವರೆಲ್ಲರಿಗೂ ಉಚಿತವಾಗಿಯೇ ನೀಡಿರುವರು.
ಆದರೂ, ಯಾರು ತಮ್ಮನ್ನು ಭಗವಂತನ ಕಡೆಗೆ ಕರೆದೊಯ್ಯುವ ತಮ್ಮ ವೈಯಕ್ತಿಕ ಪಥವಾಗಿ ಕ್ರಿಯಾಯೋಗ ವಿಜ್ಞಾನದ ಕಡೆಗೆ ಸೆಳೆಯಲ್ಪಡುವರೋ, ಅವರಿಗೆ ಪರಮಹಂಸ ಯೋಗಾನಂದರು ಕ್ರಿಯಾಯೋಗ ತಂತ್ರದ ಅಭ್ಯಾಸಕ್ಕಾಗಿ, ದೀಕ್ಷೆಯನ್ನು ನೀಡುತ್ತಿದ್ದರು. ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಮೂಲಕ ನೀಡಲಾಗುವ ಆ ಪವಿತ್ರ ದೀಕ್ಷೆಯು ವಿದ್ಯಾರ್ಥಿ ಹಾಗೂ ಪರಮಹಂಸ ಯೋಗಾನಂದರ ನಡುವೆ ಗುರು-ಶಿಷ್ಯ ಬಾಂಧವ್ಯವನ್ನು ಸ್ಥಾಪಿಸುತ್ತದೆ.
ಒಬ್ಬ ನೈಜ ಗುರುವು ಎಂದೆಂದಿಗೂ ಜೀವಿಸಿರುವವನು, ಭೌತ ಶರೀರದಲ್ಲಿ ಇಲ್ಲದಿದ್ದರೂ ಸಹ. ಭಗವಂತನ ಸರ್ವವ್ಯಾಪಿತ್ವ ಹಾಗೂ ಸರ್ವಜ್ಞತ್ವಗಳ ಜೊತೆಗಿನ ಐಕ್ಯತೆಯ ಮೂಲಕ ಒಬ್ಬ ನೈಜ ಗುರುವು ಸದಾ ಕಾಲ ತಮ್ಮ ಶಿಷ್ಯನ ಬಗ್ಗೆ ಅರಿತಿರುತ್ತಾನೆ ಮತ್ತು ಅವನನ್ನು ಅಥವಾ ಅವಳನ್ನು ನಿರಂತರ ಪ್ರೇಮ ಹಾಗೂ ರಕ್ಷಣೆಯಿಂದ ಕಾಯುತ್ತಿರುತ್ತಾನೆ.
ಪರಮಹಂಸ ಯೋಗಾನಂದರು — ವೈಎಸ್ಎಸ್ ಗುರು ಪರಂಪರೆಯಲ್ಲಿ ಕೊನೆಯವರು
ಅವರ ದೇಹ ತ್ಯಾಗದ ಮೊದಲು ಪರಮಹಂಸ ಯೋಗಾನಂದರು, ಅವರು ವೈಎಸ್ಎಸ್/ಎಸ್ಆರ್‌ಎಫ್ ಗುರು ಪರಂಪರೆಯಲ್ಲಿ ಕೊನೆಯವರಾಗಿರಬೇಕೆಂಬುದು ಭಗವಂತನ ಇಚ್ಛೆ ಎಂದು ತಿಳಿಸಿದ್ದರು. ಅವರ ಸಂಸ್ಥೆಯಲ್ಲಿ ಮುಂಬರುವ ಯಾವುದೇ ಶಿಷ್ಯನು ಅಥವಾ ಮುಖ್ಯಸ್ಥನು ಗುರು ಎಂಬ ಉಪಾಧಿಯನ್ನು ಎಂದಿಗೂ ಹೊಂದಿರುವುದಿಲ್ಲ. ಈ ದಿವ್ಯ ಆದೇಶವು ಧಾರ್ಮಿಕ ಇತಿಹಾಸದಲ್ಲಿ ಅನನ್ಯವಾದುದೇನಲ್ಲ. ಭಾರತದಲ್ಲಿ ಸಿಖ್ ಧರ್ಮವನ್ನು ಸಂಸ್ಥಾಪಿಸಿದ ಮಹಾನ್ ಸಂತ ಗುರುನಾನಕರ ಕಾಲಾನಂತರ, ಗುರುಗಳ ಸಾಮಾನ್ಯ ಪರಂಪರೆ ಇತ್ತು. ಪರಂಪರೆಯಲ್ಲಿ ಹತ್ತನೆಯವರಾದ ಒಬ್ಬ ಗುರುಗಳು, ತಾವು ಆ ಸಾಲಿನ ಗುರುಗಳಲ್ಲಿ ಕೊನೆಯವರೆಂದೂ ಮತ್ತು ನಂತರ ಬೋಧನೆಗಳನ್ನೇ ಗುರು ಎಂದು ಪರಿಗಣಿಸಬೇಕೆಂದೂ ಘೋಷಿಸಿದರು.
ತಮ್ಮ ಕಾಲಾನಂತರ, ತಮ್ಮಿಂದ ಸಂಸ್ಥಾಪಿಸಲ್ಪಟ್ಟ ಸಂಸ್ಥೆಗಳಾದ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಶನ್ ಫೆಲೋಶಿಪ್‌ಗಳ ಮೂಲಕ ತಮ್ಮ ಕಾರ್ಯವನ್ನು ಮುಂದುವರಿಸುವುದಾಗಿ ಪರಮಹಂಸಜಿಯವರು ಭರವಸೆಯನ್ನು ನೀಡಿರುವರು. ಅವರು ಹೇಳಿರುವರು, “ನಾನು ಹೋದ ನಂತರ, ಬೋಧನೆಗಳೇ ನಿಮಗೆ ಗುರುವಾಗುತ್ತವೆ…. ಬೋಧನೆಗಳ ಮೂಲಕ ನೀವು ನನ್ನೊಂದಿಗೆ ಮತ್ತು ನನ್ನನ್ನು ಕಳುಹಿಸಿದ ಮಹಾನ್ ಗುರುಗಳೊಂದಿಗೆ ಶ್ರುತಿಗೂಡಿಕೊಂಡಿರುವಿರಿ.”