ಶ್ರೀ ಶ್ರೀ ದಯಾ ಮಾತಾ - ಒಂದು ಸ್ಮರಣೆ

(31 ಜನವರಿ, 1914 – 30 ನವೆಂಬರ್‌, 2010)
ಪ್ರೀತಿ, ನಮ್ರತೆ ಮತ್ತು ಭಗವಂತನ ಸೇವೆಗಾಗಿ ಮುಡಿಪಾದ ಒಂದು ಜೀವನ

Divine smile of Sri Daya Mata.

30 ನವೆಂಬರ್‌ 2010 ರಂದು ನಮ್ಮ ಪ್ರೀತಿಯ ಅಧ್ಯಕ್ಷರೂ ಮತ್ತು ಸಂಘಮಾತಾ ಆದ ಶ್ರೀ ಶ್ರೀ ದಯಾಮಾತಾರವರು ಈ ಐಹಿಕ ಜಗತ್ತನ್ನು ಶಾಂತವಾಗಿ ತ್ಯಜಿಸಿ ಭಗವಂತನ ಶಾಶ್ವತ ಧಾಮಕ್ಕೆ ಆನಂದವನ್ನರಸಿ ಹೊರಟುಹೋದರು. ಅವರನ್ನು, ನಮ್ಮ ಗುರುಗಳು ತಮ್ಮ ಕಾರ್ಯಗಳನ್ನು ಮುಂದುವರೆಸಲು ಮತ್ತು ಅವರ ಬೋಧನೆಗಳಿಂದ ಪ್ರಭಾವಿತರಾದವರಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಲು ಗುರುಗಳು ಆಯ್ಕೆ ಮಾಡಿದ್ದರು. ಅವರು ಯೋಗದಾ ಸತ್ಸಂಗ ಸಂಸ್ಥೆಯ ಮತ್ತು ಸೆಲ್ಫ್‌-ರಿಯಲೈಝೇಶನ್‌ ಫೆಲೋಶಿಪ್‌ ನ ಸನ್ಯಾಸಿಗಳಿಗೆ ಹಾಗೂ ಸದಸ್ಯರಿಗೆ ಸ್ಪೂರ್ತಿ, ವಿವೇಕ ಹಾಗೂ ಸಹಾನುಭೂತಿಯ ಪ್ರೇರಕಶಕ್ತಿಯಾಗಿ, ವಿಶ್ವದಾದ್ಯಂತ ಹರಡಿರುವ ಪರಮಹಂಸ ಯೋಗಾನಂದರ ಸಂಸ್ಥೆಗೆ 55 ವರ್ಷಗಳಿಂತಲೂ ಹೆಚ್ಚು ಕಾಲ ಆಧ್ಯಾತ್ಮಿಕ ಮುಖ್ಯಸ್ಥರಾಗಿದ್ದರು. ಪ್ರೀತಿ, ಸಮತಾಭಾವ ಮತ್ತು ಸಚ್ಚಾರಿತ್ರ್ಯಗಳಿಂದ ಆಧ್ಯಾತ್ಮಿಕ ಜೀವನ ಪದ್ದತಿಗೆ ಉತ್ತಮ ಉದಾಹರಣೆಯಾಗಿದ್ದ ಆಕೆ, ಯಾರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತಂದಿದ್ದರೋ, ಅವರೆಲ್ಲರಿಗೂ ಇಂದಿಗೂ ಅತ್ಯಂತ ಗಾಢವಾಗಿ ಕಾಡುತ್ತಾರೆ. ಅವರು “ದೈವೀ ಪ್ರೀತಿಯು ಈ ಬದುಕಿನ ಪರಿಧಿಯ ಆಚೆಗೂ ವಿಸ್ತರಿಸುತ್ತದೆ.” ಎಂದು ಆಗಾಗ್ಗೆ ಹೇಳುತ್ತಿದ್ದರು. ಗುರುದೇವರ ಆದರ್ಶಗಳಿಗೆ ಮಾದರಿಯಾಗಿ ಜೀವನ ಸಾಗಿಸಿದ್ದ ಮತ್ತು ಎಲ್ಲರನ್ನೂ ದೇವರ ಮಕ್ಕಳು ಎಂದೇ ಪರಿಗಣಿಸಿದ್ದ ಅವರು, ನಮ್ಮ- ನಿಮ್ಮೆಲ್ಲೆರ ಮನಸ್ಸು ಮತ್ತು ಹೃದಯಗಳಲ್ಲಿ ಸದಾ ನೆಲೆಸಿರುತ್ತಾರೆ.

ಒಂದು ಅಪೂರ್ವವಾದ ಜೀವನ

Daya Mata Standing.ಶ್ರೀ ದಯಾಮಾತಾರವರು ಒಂದು ಅಪೂರ್ವವಾದ ಜೀವನವನ್ನು ನಡೆಸಿದರು – ಸುಮಾರು 80 ವರ್ಷಗಳ ಕಾಲ ಗುರುಗಳ ಆಶ್ರಮದಲ್ಲಿ ಸನ್ಯಾಸಿನಿ ಶಿಷ್ಯಳಾಗಿ ಜೀವನ ಸವೆಸಿದರು. ಅವರ ಆಲೋಚನೆಗಳಲ್ಲಿ ಯಾವಾಗಲೂ ಭಗವಂತನ ಬಗ್ಗೆ ಪ್ರೀತಿಯು ವ್ಯಾಪಿಸಿರುತ್ತಿತ್ತು ಮತ್ತು ಅವರ ಕಾರ್ಯಗಳೆಲ್ಲ ಅವನ ಸೇವೆಗಾಗಿ ಮುಡಿಪಾಗಿರುತ್ತಿದ್ದವು. ಅವರು ಪರಮಹಂಸ ಯೋಗಾನಂದರ ಆಧ್ಯಾತ್ಮಿಕ ಹಾಗೂ ಮಾನವೀಯ ಕಾರ್ಯಗಳ ಮೇಲ್ವಿಚಾರಣೆಯ ದೊಡ್ಡ ಜವಾಬ್ದಾರಿಯನ್ನುನಿರ್ವಹಿಸುತ್ತಿದ್ದಾಗಲೂ, ಅವರ ವ್ಯಕ್ತಿತ್ವದಲ್ಲಿ ಅಪೂರ್ವವಾದ ಶಕ್ತಿ ಮತ್ತು ಎಲ್ಲರ ಬಗ್ಗೆ ಪ್ರೀತಿಯು ಹೊರಸೂಸುತ್ತಿತ್ತು. ಅವರ ಹೆಸರೇ ಸೂಚಿಸುವಂತೆ-ಅವರು ನಿಜವಾದ ಅರ್ಥದಲ್ಲಿ-ʼಕರುಣಾಮಯಿ ಮಾತೆʼಯೇ ಆಗಿದ್ದರು. ಆಕೆಯ ಸಂಪರ್ಕದಲ್ಲಿ ಬಂದು ಹೋದವರಿಗೆಲ್ಲ ‌ಅನಿರ್ಬಂಧಿತ ಪ್ರೀತಿ ಮತ್ತು ಅನುಕಂಪವನ್ನು ತೋರಿಸುತ್ತಿದ್ದರು ಮತ್ತು ಆಧ್ಯಾತ್ಮಿಕ ಸಹಾಯವನ್ನು ಬಯಸಿ ಬಂದ ಅಸಂಖ್ಯಾತ ಚೇತನಗಳಿಗಾಗಿ ನಿತ್ಯವೂ ಪ್ರಾರ್ಥಿಸುತ್ತಿದ್ದರು.

ನಮ್ರತೆಯೇ ಮೂರ್ತಿವೆತ್ತಂತಿದ್ದ ದಯಾಮಾತಾಜಿಯವರು ಯಾವಾಗಲೂ ಭಗವಂತನನ್ನು ಅವರ ಪ್ರಜ್ಞೆಯನ್ನು ಅತ್ಯಂತ ಮೇಲು ಸ್ತರದಲ್ಲಿ ಇಟ್ಟಿದ್ದರು. ಅವರು ಒಮ್ಮೆ ಹೇಳಿದರು: “ಅನೇಕ ಸಲ ನನಗೆ ನಾನೇ ಹೇಳಿಕೊಳ್ಳುತ್ತಿರುತ್ತೇನೆ: ನಾನು ಹೇಗಿರುವೆನೋ ಹಾಗೆಯೇ ಮುಚ್ಚುಮರೆಯಿಲ್ಲದೆ ದೇವರು ಮತ್ತು ಗುರುಗಳ ಮುಂದೆಯೂ ಇರುತ್ತೇನೆಂದು. ನಾನು ಪರಿಪೂರ್ಣಳು ಎಂದಾಗಲೀ ಅಥವಾ ನಾನು ಪ್ರತಿಭಾವಂತಳೆಂದಾಗಲೀ ಅಥವಾ ನನಗೆ ಅಸಾಮಾನ್ಯ ಸಾಮರ್ಥ್ಯವಿದೆಯೆಂದಾಗಲೀ ನಾನು ಎಂದೂ ತಿಳಿದುಕೊಂಡಿಲ್ಲ; ಈ ಜೀವನದಲ್ಲಿ ನನ್ನ ಪ್ರಯತ್ನವೆಲ್ಲ ಕೇವಲ ಒಂದು ವಿಷಯದಲ್ಲಿ ಪರಿಪೂರ್ಣತೆಯನ್ನು ಸಾಧಿಸುವುದಾಗಿದೆ – ಅದೇ ನನ್ನ ಭಗವಂತನ ಬಗೆಗಿರುವ ನನ್ನ ಪ್ರೀತಿಯನ್ನು”. ಈ ಗುರಿಯ ಬಗ್ಗೆ ಅವರಿಗಿರುವ ನಿಷ್ಠೆಯಿಂದಲೇ ಅವರು ಭಗವಂತನ ಪ್ರೀತಿಯನ್ನು ಎಲ್ಲಾ ಚೇತನಗಳಿಗೆ ಹರಿಸಲು ಒಂದು ಪರಿಶುದ್ಧ ವಾಹಿನಿಯಾಗಿದ್ದರು.

ಅವರ ಜೀವನವು ಸಂಪೂರ್ಣವಾಗಿ ಗುರುಗಳ ಬೋಧನೆಗಳ ಮೂಲಕ ಭಗವಂತನ ಸೇವೆಗಾಗಿ ಮತ್ತು ಮಾನವಜನಾಂಗದ ಸೇವೆಗಾಗಿ ಮೀಸಲಾಗಿತ್ತು. ಸಮತೋಲಿತ ಆಧ್ಯಾತ್ಮಿಕ ಜೀವನವನ್ನು ಹೇಗೆ ನಡೆಸಬೇಕೆಂಬುದಕ್ಕೆ ಒಂದು ಅತ್ಯುಚ್ಛ ಉದಾಹರಣೆಯಾಗಿದ್ದ ಅವರು ತಮ್ಮ ಬಿಡುವಿಲ್ಲದ ಜವಾಬ್ದಾರಿಯುತ ನಡುವೆಯೂ ಆಧ್ಯಾತ್ಮಿಕ ದಿನಚರಿಯನ್ನು ಅಚಲವಾಗಿ ಪಾಲಿಸುತ್ತಿದ್ದರು ಮತ್ತು ಅವರ ಎಡೆಬಿಡದ ಕಾರ್ಯಗಳ ಮಧ್ಯೆ ಆನಂದವನ್ನು ಹಾಗೂ ಧನ್ಯತೆಯನ್ನು ಕಂಡುಕೊಳ್ಳುತ್ತಿದ್ದರು. ಅವರು ಒಮ್ಮೆ “ನಾನು ಈ ಎಲ್ಲಾ ಕಾರ್ಯಗಳನ್ನು ಆಧ್ಯಾತ್ಮಿಕ ದಿನಚರಿಯ ಹೊರತಾಗಿ ಮಾಡುತ್ತಿರುವುದಲ್ಲ, ಬದಲಾಗಿ, ಅದರಿಂದಲೇ ನಾನು ಈ ಎಲ್ಲಾ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ. ಪರಮಹಂಸಜಿಯವರ ಬೋಧನೆಯಂತೆ – ಧ್ಯಾನವನ್ನು ಬೆಳಿಗ್ಗೆ, ಮಧ್ಯಾಹ್ನ, ಸಂಜೆ; ಹಾಗೂ ಧ್ಯಾನಗಳ ಮಧ್ಯದಲ್ಲಿ ಭಗವಂತನ ಮೇಲೆಯೇ ಮನಸ್ಸನ್ನು ಕೇಂದ್ರೀಕರಿಸುವುದರಿಂದಲೇ ನನಗೆ ಈ ಸಾಮರ್ಥ್ಯ, ಸ್ಪೂರ್ತಿ ಮತ್ತು ಮಾರ್ಗದರ್ಶನವು ಲಭಿಸುತ್ತಿದೆ.” ಎಂದು ಹೇಳಿದರು.

ಶಿಷ್ಯರ ಒಂದು ಅಪರೂಪದ ಕುಟುಂಬ

ಜನವರಿ 31, 1914 ರಂದು ಸಾಲ್ಟ್‌ ಲೇಕ್‌ ಸಿಟಿ, ಯುಟಾಹದಲ್ಲಿ ಜನಿಸಿದ ದಯಾ ಮಾತಾರ ಮೂಲ ಹೆಸರು ಫೇ ರೈಟ್‌ ಎಂದು. ದಯಾಮಾತಾರವರು ಒಂದು ಅಪರೂಪ ಕುಟುಂಬದ ವಾತಾವರಣದಲ್ಲಿ ಬೆಳೆದರು. ಅವರ ತಾಯಿ, ಸಹೋದರಿ ಮತ್ತು ಇಬ್ಬರು ಸಹೋದರರೂ ಕೂಡ ಪರಮಹಂಸಜಿಯವರ ಅನುಯಾಯಿಗಳಾಗಿದ್ದರು. ಅವರ ಸಹೋದರಿ ಆನಂದ ಮಾತಾರವರು 1933ರಲ್ಲಿ ಎಸ್ಆರ್‌ಎಫ್‌ನ ಸನ್ಯಾಸಿನಿಯಾದರು ಮತ್ತು ಎಸ್ಆರ್‌ಎಫ್‌ನ ನಿರ್ದೇಶಕರ ಮಂಡಳಿಗೆ ಕಾರ್ಯದರ್ಶಿಯಾಗಿ ಮಾತ್ತು ಖಜಾಂಚಿಯಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಅವರ ತಾಯಿ ಶ್ಯಾಮಾ ಮಾತಾ 1935ರಲ್ಲಿ ಆಶ್ರಮವನ್ನು ಸೇರಿದರು. ಈ ಇಬ್ಬರೂ ಗುರೂಜಿಯವರ ಆಪ್ತ ಶಿಷ್ಯಂದಿರ ಚಿಕ್ಕ ಗುಂಪಿನಲ್ಲಿ ತಮ್ಮ ಅಂತ್ಯಕಾಲದವರೆಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರು. ಆಕೆಯ ಸಹೋದರ, ಸಿ. ರಿಚರ್ಡ್ ರೈಟ್‌ ರವರು, 1935-36ರಲ್ಲಿ ಗುರೂಜಿಯವರ ಭಾರತದ ವಿಸ್ತೃತ ಪ್ರವಾಸದಲ್ಲಿ ಅವರ ಸಹಾಯಕರಾಗಿದ್ದರು. ಇದನ್ನು ಪರಮಹಂಸಜಿಯವರು, ತಮ್ಮ ಆಧ್ಯಾತ್ಮಿಕ ಮೇರುಕೃತಿಯಾದ ʼಯೋಗಿಯ ಆತ್ಮಕಥೆʼಯಲ್ಲಿ ಸಿ.ರಿಚರ್ಡ್‌ ರೈಟ್‌ರವರು ಆಸಕ್ತಿದಾಯಕವಾಗಿ ನಿರೂಪಿಸಿರುವ ಅವರ ಪ್ರಯಾಣದ ದಿನಚರಿಯ ಬಗ್ಗೆ ಉಲ್ಲೇಖಿಸಿದ್ದಾರೆ. ಅವರು ಮತ್ತು ಅವರ ಇನ್ನೊಬ್ಬ ಸಹೋದರ, ಡೇಲ್‌ ರೈಟ್‌ ಇಬ್ಬರೂ ಕೊನೆಯವರೆಗೂ ಎಸ್ಆರ್‌ಎಫ್‌/ವೈಎಸ್ಎಸ್ ಬೋಧನೆಗಳ ಅನುಯಾಯಿಗಳಾಗಿದ್ದರು.

ಇನ್ನೂ ಹೆಚ್ಚಿನ ಸಂತೃಪ್ತಭಾವದ ಹಂಬಲಿಕೆ

ಚಿಕ್ಕಂದಿನಿಂದಲೂ, ದಯಾ ಮಾತಾರವರಿಗೆ ದೇವರ ಬಗ್ಗೆ ಅರಿತುಕೊಳ್ಳುವ ಅತೀವವಾದ ಆಸಕ್ತಿಯಿತ್ತು. ಅವರು ಎಂಟು ವರ್ಷದವರಾಗಿದ್ದಾಗ, ಮೊಟ್ಟ ಮೊದಲ ಬಾರಿಗೆ ಶಾಲೆಯಲ್ಲಿ ಭಾರತದ ಬಗ್ಗೆ ತಿಳಿದ ಕೂಡಲೇ ಆತ್ಮ ಜಾಗೃತವಾದಂತಹ ನಿಗೂಢವಾದ ಭಾವವೊಂದು ಸುಳಿದುಹೋಯಿತು ಮತ್ತು ಭಾರತವು ಆಕೆಯ ಜೀವನದ ಸಂಪೂರ್ಣತೆಗೆ ಕೀಲಿಕೈ ಹಿಡಿದಿದೆಯೆಂಬ ದೃಢವಾದ ಅನಿಸಿಕೆಯುಂಟಾಯಿತು. ಮನೆಗೆ ಹಿಂತಿರುಗಿದಾಗ ಅವರು ತಮ್ಮ ತಾಯಿಗೆ, ತಾನು ಎಂದಿಗೂ ವಿವಾಹವಾಗಲಾರೆನೆಂದೂ ಮತ್ತು ತಾವು ಭಾರತಕ್ಕೆ ಹೋಗಲು ನಿರ್ಧರಿಸಿರುವುದಾಗಿಯೂ ತಿಳಿಸಿದರು.

ಅವರಿಗೆ ತಮ್ಮ ಚರ್ಚಿನ ಅನುಭವಗಳಲ್ಲಿ ಯಾವುದೋ ಕೊರತೆಯು ಕಾಡಲಾರಂಭಿಸಿತು ಮತ್ತು ಇನ್ನೂ ಹೆಚ್ಚಿನದೇನನ್ನೋ ಅವರ ಮನಸ್ಸು ಬಯಸತೊಡಗಿತು. ಅವರಿಗೆ ೧೫ ವರ್ಷವಾಗಿದ್ದಾಗ ಭಗವದ್ಗೀತೆಯ ಒಂದು ಪ್ರತಿಯನ್ನು ನೀಡಲಾಯಿತು. ಇದು ಅವರ ಜೀವನದಲ್ಲಿ ಗಾಢವಾದ ಪರಿಣಾಮವನ್ನು ಬೀರಿತು. ಏಕೆಂದರೆ, ಇದರಿಂದ ಅವರು, ದೇವರನ್ನು ಅರಿತುಕೊಳ್ಳಬಹುದೆಂದೂ, ಅವನು ನಮ್ಮ ಕೈಗೆಟುವಷ್ಟು ಸಮೀಪದಲ್ಲೇ ಇರುವವನೆಂದೂ ಮತ್ತು ಎಲ್ಲರೂ ಆತನ ಮಕ್ಕಳೆಂದೂ, ಸ್ವಪ್ರಯತ್ನದಿಂದ ಎಲ್ಲರೂ ತಮ್ಮ ಆಧ್ಯಾತ್ಮ ಜನ್ಮಸಿದ್ಧ ಹಕ್ಕಾದ ಆತ್ಮ ಸಾಕ್ಷಾತ್ಕಾರವನ್ನು ಹೊಂದಬಹುದೆಂದು ತಿಳಿದುಕೊಂಡರು. ಅವರು ಆಗಲೇ ತಮ್ಮ ಜೀವನವನ್ನು ಭಗವಂತನನ್ನು ಅರಸಲು ಮೀಸಲಿಡಲು ನಿರ್ಧರಿಸಿದರು.

ಪರಮಹಂಸ ಯೋಗಾನಂದರೊಂದಿಗೆ ಶ್ರೀ ದಯಾ ಮಾತಾರವರ ಪ್ರಥಮ ಭೇಟಿ

1931ರಲ್ಲಿ, ದಯಾಮಾತಾರಿಗೆ 17 ವರ್ಷಗಳಿದ್ದಾಗ, ಸಾಲ್ಟ್‌ ಲೇಕ್‌ ನಗರದ ಹೋಟೆಲ್‌ ನ್ಯೂ ಹೌಸ್ ನಲ್ಲಿ ನಡೆದ ಸಾರ್ವಜನಿಕ ಉಪನ್ಯಾಸ ಕಾರ್ಯಕ್ರಮವೊಂದಕ್ಕೆ ತನ್ನ ತಾಯಿ ಮತ್ತು ಸಹೋದರಿಯೊಡನೆ ಭಾಗವಹಿಸಿದ್ದರು. ಪರಮಹಂಸ ಯೋಗಾನಂದರೇ ಭಾಷಣಕಾರರಾಗಿದ್ದರು. ಅವರು ದೇಶಾದ್ಯಂತ ಪ್ರವಾಸ ಮಾಡಿ ಅಮೇರಿಕಾದ ಅತ್ಯಂತ ಪ್ರತಿಷ್ಠಿತ ಹಾಗೂ ಕಿಕ್ಕಿರಿದ ಸಭಾಂಗಣಗಳಲ್ಲಿ ಉಪನ್ಯಾಸಗಳನ್ನೂ ಮತ್ತು ಯೋಗ ವಿಜ್ಞಾನದ ಬಗ್ಗೆ ತರಗತಿಗಳನ್ನು ನಡೆಸುತ್ತಿದ್ದರು. ಸಂಕೋಚ ಸ್ವಭಾವದ, ಸಾಲ್ಟ್‌ ಲೇಕ್‌ ಸಿಟಿಯ ಈ ಚಿಕ್ಕ ಬಾಲಕಿಗೆ ಗುರುಗಳನ್ನು ಭೇಟಿ ಮಾಡುವ ಅವಕಾಶ ದೊರೆಯುವುದು ಅಸಂಭವವೇ ಆಗಿತ್ತು. ಆದರೆ, ದಯಾ ಮಾತಾರವರು ಬಹಳ ಕಾಲದಿಂದ ತೀವ್ರವಾದ ರಕ್ತದೋಷದಿಂದ ನರಳುತ್ತಿದ್ದರು ಮತ್ತು ಆ ಸಭೆಗೆ ತನ್ನ ಊದಿಕೊಂಡ ಮುಖವನ್ನು ಪಟ್ಟಿಯಿಂದ ಕಟ್ಟಿಕೊಂಡು ಆಗಮಿಸಿದ್ದರು. ಇದು ಆ ಶ್ರೇಷ್ಠ ಸ್ವಾಮಿಜಿಯವರ ಗಮನವನ್ನು ಅವರೆಡೆಗೆ ಸೆಳೆಯಿತು.

ದಯಾಮಾತಾರವರು ಶ್ರೀ ಯೋಗಾನಂದರ ಭೇಟಿಯನ್ನು ಹೀಗೆ ವಿವರಿಸುತ್ತಾರೆ : “ದೈವೀ ಪ್ರಜ್ಞೆ ಮತ್ತು ಪ್ರೇಮವು ನನ್ನ ಆತ್ಮವನ್ನೆಲ್ಲ ತುಂಬಿ, ಆ ದೈವಸುಧೆಯಲ್ಲಿ ತಣಿಯಿತು ಮತ್ತು ನನ್ನ ಹೃದಯ ಮತ್ತು ಮನಸ್ಸುಗಳೆನ್ನೆಲ್ಲ ಆಕ್ರಮಿಸಿತು”. ಅವರು ಆ ಶ್ರೇಷ್ಠ ಯೋಗಿಯ ಶಿಷ್ಯಳಾಗಬೇಕೆಂದು ಧೃಡನಿರ್ಧಾರ ಮಾಡಿದರು.

Play Video

ವಿಡಿಯೊ: ಶ್ರೀ ದಯಾ ಮಾತಾರವರು ಪರಮಹಂಸ ಯೋಗಾನಂದರೊಂದಿಗಿನ ಅವರ ಪ್ರಥಮ ಭೇಟಿಯನ್ನು ವಿವರಿಸುತ್ತಿರುವುದು

ಎಸ್ಆರ್‌ಎಫ್‌ / ವೈಎಸ್ಎಸ್ ಸ್ವಾಮಿ ಶ್ರೇಣಿಗೆ ಶ್ರೀ ದಯಾ ಮಾತಾರ ಸೇರ್ಪಡೆ

Paramahansa Yogananda with Daya Mata at Encinitas.ಪರಮಹಂಸಜಿಯವರು “ದೇವರು ನಿನ್ನ ಖಾಯಿಲೆಯನ್ನು ವಾಸಿಮಾಡುತ್ತಾನೆಂದರೆ ನಂಬುವೆಯಾ” ಎಂದು ಕೇಳಿದುದನ್ನು ಶ್ರೀ ದಯಾ ಮಾತಾರವರು ನೆನಪಿಸಿಕೊಳ್ಳುತ್ತಾರೆ. ಅವರು ಹೌದೆಂದು ಉತ್ತರಿಸಿದ ಕೂಡಲೇ ಪರಮಹಂಸಜಿಯವರು ಅವರ ಹುಬ್ಬುಗಳ ಮಧ್ಯಭಾಗವನ್ನು ಸ್ಪರ್ಶಿಸಿ ಅವರಿಗೆ “ಈ ದಿನದಿಂದ ನೀನು ಗುಣಮುಖಳಾಗುತ್ತೀಯೆ. ಈ ಪಟ್ಟಿಗಳನ್ನು ಇನ್ನೊಂದು ವಾರದಲ್ಲಿ ಕಳಚಬಹುದು ಮತ್ತು ಮುಂದೆಂದೂ ನಿನಗೆ ಇದರ ಅವಶ್ಯಕತೆ ಬೀಳುವುದಿಲ್ಲ ಮತ್ತು ಚರ್ಮದ ಕಲೆಗಳೂ ಕೂಡ ಮಾಯವಾಗುತ್ತವೆ.” ಎಂದು ಹೇಳಿದರು. ಅವರು ಹೇಳಿದಂತೆಯೇ ಕರಾರುವಾಕ್ಕಾಗಿ ನಡೆಯಿತು. ಇದಾದ ಕೆಲವೇ ದಿನಗಳಲ್ಲಿ, ಶ್ರೀ ದಯಾ ಮಾತಾರವರು ತಮ್ಮ ತಾಯಿಯ ಸಹಾಯದಿಂದ ಲಾಸ್‌ ಏಂಜಲೀಸ್‌ ಗೆ ಸ್ಥಳಾಂತರಗೊಂಡರು ಮತ್ತು ಸೆಲ್ಫ್‌-ರಿಯಲೈಝೇಶನ್‌ ಫೆಲೋಶಿಪ್‌ನ ಸನ್ಯಾಸ ಶ್ರೇಣಿಗೆ 19 ನವೆಂಬರ್‌, 1931ರಲ್ಲಿ ಸೇರ್ಪಡೆಯಾದರು. ಪರಮಹಂಸ ಯೋಗಾನಂದರು ಶ್ರೀ ದಯಾಮಾತಾರನ್ನು ಅತ್ಯಂತ ಉತ್ಸಾಹದಿಂದ ಹಾಗೂ ತೆರೆದ ಹೃದಯದಿಂದ ಸ್ವಾಗತಿಸಿದರು. ಗುರುಗಳ ಮಾರ್ಗದರ್ಶನವನ್ನು ಒಮ್ಮನಸ್ಸಿನಿಂದ ಒಪ್ಪಿಕೊಂಡು ಅದನ್ನು ಶ್ರದ್ಧೆಯಿಂದ ಪಾಲಿಸಿದರು. ಗುರುಗಳು ತಮ್ಮ ಧ್ಯೇಯ ಸಾಧನೆಯ ಹಾದಿಯಲ್ಲಿ ಅವರಿಗೆ ಪ್ರಮುಖ ಪಾತ್ರ ವಹಿಸುವ ಶಕ್ತಿ ಇರುವುದನ್ನು ಅರಿತುಕೊಂಡರು. ಒಮ್ಮೆ ದಯಾ ಮಾತಾರ ನವ ಗೃಹದಲ್ಲಿ ಮೊದಲ ಕ್ರಿಸ್ತಮಸ್‌ನ ಸಮಯದಲ್ಲಿ – ಮೌಂಟ್.‌ ವಾಷಿಂಗ್ಟನ್‌ ನಲ್ಲಿ ಈಗ ಎಸ್ಆರ್‌ಎಫ್/ವೈಎಸ್ಎಸ್‌ನ ಅಂತಾರಾಷ್ಟ್ರೀಯ ಕೇಂದ್ರ ಕಚೇರಿ ಮತ್ತು ಆಶ್ರಮವಿರುವ ಸ್ಥಳ – ಪರಮಹಂಸಜಿಯವರು ಗಾಜಿನಲ್ಲಿ ಮಾಡಿದ ಒಂದು ಮೊಟ್ಟೆಯನ್ನು ಅವರು ಕೂರಬಹುದಾದ ಸೋಫಾದ ಮೇಲೆ ಇಟ್ಟರು. ಅವರು ಗುರುಗಳನ್ನು ಅದನ್ನು ಇಲ್ಲಿ ಏಕೆ ಇಟ್ಟಿರೆಂದು ಪ್ರಶ್ನಿಸಿದಾಗ, ಗುರುಗಳು ಅವರಿಗೆ ಹೇಳಿದರು “ನೀನು ನನ್ನ ಮಗು. ನೀನು ಇಲ್ಲಿಗೆ ಬಂದಾಗಲೇ ನನಗೆ ತಿಳಿಯಿತು, ಇದೇ ರೀತಿ ಅನೇಕ ನಿಜವಾದ ಭಕ್ತರು ಈ ಮಾರ್ಗಕ್ಕೆ ಸೆಳೆಯಲ್ಪಡುತ್ತಾರೆ ಎಂದು.”

ಗುರು ಸೇವೆ

ಇದಾದ ಮರುವರ್ಷವೇ ಪರಮಹಂಸಜಿಯವರು ದಯಾ ಮಾತಾರಿಗೆ ಭಾರತದ ಪ್ರಾಚೀನ ಪರಂಪರೆಯಂತೆ ಸ್ವಾಮಿ ಶ್ರೇಣಿಯ (ಬ್ರಹ್ಮಚರ್ಯ, ಭೌತಿಕ ಸಂಪತ್ತಿನಡೆಗೆ ಅನಾಸಕ್ತಿ, ವಿಧೇಯತೆ ಹಾಗೂ ದೇವರು ಮತ್ತು ಗುರುವಿನೆಡೆಗೆ ನಿಷ್ಠೆ) ಸನ್ಯಾಸ ದೀಕ್ಷೆಯನ್ನು ದಯಪಾಲಿಸಿದರು. ಇದರಿಂದ ಅವರು ಸೆಲ್ಫ್‌- ರಿಯಲೈಝೇಶನ್‌ ಫೆಲೋಶಿಪ್‌/ಯೋಗದಾ ಸತ್ಸಂಗ ಸಂಸ್ಥೆಯ ಮೊಟ್ಟ ಮೊದಲ ಸನ್ಯಾಸಿನಿಯಾದರು ಮತ್ತು ಜೀವನಪರ್ಯಂತ ಹೃದಯಾಂತರಾಳದಿಂದ, ದೇವರು ಮತ್ತು ಗುರುವಿನೆಡೆಗೆ ನಿಷ್ಠೆಯಿಂದಿರುವ, ದಿನನಿತ್ಯವೂ ಧ್ಯಾನ ಮಾಡುವ ಮತ್ತು ನಿಸ್ವಾರ್ಥದಿಂದ ಎಲ್ಲರ ಸೇವೆ ಮಾಡುವ ಶಪಥವನ್ನು ಹೃತ್ಪೂರ್ವಕವಾಗಿ ಸ್ವೀಕರಿಸಿದರು.

ಮೊದಲಿನಿಂದಲೂ, ಪರಮಹಂಸ ಯೋಗಾನಂದರು ದಯಾಮಾತಾರನ್ನು ಒಂದು ಪ್ರಮುಖ ಜವಾಬ್ದಾರಿಗಾಗಿ ಅವರನ್ನು ವಿಶೇಷವಾಗಿ ಗಮನಿಸುತ್ತಿದ್ದುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ನಂತರದ ದಿನಗಳಲ್ಲಿ ಗುರುಗಳು ಅವರಿಗೆ ಹೇಳಿದ್ದುದೇನೆಂದರೆ, ತಮ್ಮ ಗುರುಗಳಾದ ಶ್ರೀ ಯುಕ್ತೇಶ್ವರರು, ಭಾರತದಲ್ಲಿರುವ ಶ್ರೀ ಯುಕ್ತೇಶ್ವರರ ಆಶ್ರಮದಲ್ಲಿ ಯಾವ ರೀತಿಯ ತರಬೇತಿಯನ್ನು ತಮಗೆ ನೀಡಿದ್ದರೋ, ಅಷ್ಟೇ ತೀವ್ರವಾದ ಆಧ್ಯಾತ್ಮಿಕ ತರಬೇತಿಯನ್ನು ದಯಾ ಮಾತಾರವರಿಗೂ ನೀಡುತ್ತಿರುವುದಾಗಿ ತಿಳಿಸಿದರು.

20 ವರ್ಷಗಳಿಗೂ ಹೆಚ್ಚಿನ ಕಾಲ, ಶ್ರೀ ದಯಾ ಮಾತಾರವರು ಪರಮಹಂಸಜಿಯವರ ಜೊತೆಯಲ್ಲಿ ಯಾವಾಗಲೂ ಇರುತ್ತಿದ್ದ ಪುಟ್ಟ ಆಪ್ತ ಶಿಷ್ಯವೃಂದದಲ್ಲಿ ಒಬ್ಬರಾಗಿದ್ದರು. ದಯಾ ಮಾತಾರವರು ಗುರುಗಳ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದುದಲ್ಲದೆ ಅವರ ಭಾಷಣಗಳು, ಉಪನ್ಯಾಸಗಳು ಮತ್ತು ತರಗತಿಗಳನ್ನು ಶೀಘ್ರಲಿಪಿಯಲ್ಲಿ ಮುದ್ರಿಸಿಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಅವರು ಧ್ಯಾನಯೋಗದ ತಂತ್ರಗಳನ್ನು ಮತ್ತು ಆಧ್ಯಾತ್ಮಿಕ ಜೀವನ ಕಲೆಯ ಬಗ್ಗೆ ಗುರುಗಳು ನೀಡಿರುವ ವಿವರವಾದ ಸೂಚನೆಗಳನ್ನು ಪಠ್ಯದಲ್ಲಿ ಅಳವಡಿಸುವುದಕ್ಕೆ ಸಹಾಯ ಮಾಡಿದರು. ಇಂದಿಗೂ ಕೂಡ ಅವೇ ಪಠ್ಯಗಳನ್ನು ಮುದ್ರಿಸಲಾಗುತ್ತಿದೆ ಮತ್ತು ಯೋಗದಾ ಸತ್ಸಂಗ ಸಂಸ್ಥೆ/ಸೆಲ್ಫ್‌-ರಿಯಲೈಝೇಶನ್‌ ಫೆಲೋಶಿಪ್ ನ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದೆ.

Daya Mata greeting devotees with pranam.“ಈಗ ನನ್ನ ಕಾರ್ಯ ಮುಕ್ತಾಯವಾಯಿತು, ನಿನ್ನದು ಪ್ರಾರಂಭವಾಗಲಿದೆ.”

ವರುಷಗಳುರುಳಿದಂತೆ, ಗುರುಗಳು ಹೆಚ್ಚಿನ ಜವಾಬ್ದಾರಿಯನ್ನು ದಯಾಮಾತಾರಿಗೆ ವಹಿಸಲಾರಂಭಿಸಿದರು ಮತ್ತು ತಮ್ಮ ಜೀವನದ ಮುಕ್ತಾಯ ಹಂತದಲ್ಲಿ, ಪ್ರಪಂಚದಾದ್ಯಂತ ಇರುವ ತಮ್ಮ ಸನ್ಯಾಸಿ ಶಿಷ್ಯರೊಡನೆ ದಯಾ ಮಾತಾರಿಗೆ ವಹಿಸಿದ ಪೂರ್ವನಿರ್ಧಾರಿತ ಪಾತ್ರದ ಬಗ್ಗೆ ಮುಕ್ತವಾಗಿ ಮಾತನಾಡಲಾರಂಭಿಸಿದರು. ಗುರುಗಳ ಜೀವನದ ನಂತರದ ದಿನಗಳಲ್ಲಿ ದಯಾಮಾತಾರ ಕರ್ತವ್ಯಗಳು ಹೆಚ್ಚುತ್ತಾ ಹೋದವು. ದಯಾಮಾತಾರಿಗೆ ತಮ್ಮ ಹೆಚ್ಚುತ್ತಿರುವ ನಾಯಕತ್ವದ ಹುದ್ದೆಯು ಒಂದು ದೊಡ್ಡ ಸವಾಲಾಗಿ ತೋರಿತು. ಅವರು ಕೇವಲ ಒಬ್ಬ ವಿನೀತ ಭಕ್ತರಂತೆ, ಗಾಢ ಮತ್ತು ದೀರ್ಘಧ್ಯಾನದ ಮೂಲಕ ಭಗವಂತನಿಗೆ ಹತ್ತಿರವಾಗಬೇಕೆಂದು ಮಾತ್ರ ಬಯಸಿದ್ದರು. ನೀವು ಯಾರನ್ನು ಮುಖ್ಯಸ್ಥರನ್ನಾಗಿ ಆಯ್ಕೆ ಮಾಡುವಿರೋ ಅವರ ಸೇವೆಯನ್ನು ಮಾಡಲು ಸಿದ್ಧವಿರುವುದಾಗಿ ಹೇಳಿ, ತನ್ನನ್ನು ಈ ಜವಾಬ್ದಾರಿಗಳಿಂದ ಮುಕ್ತವಾಗಿಸಬೇಕೆಂದು ಅವರು ಗುರುಗಳ ಬಳಿ ಪ್ರಾರ್ಥಿಸಿದರು. ಆದರೆ, ಗುರುಗಳು ತಮ್ಮ ನಿರ್ಧಾರದ ಬಗ್ಗೆ ಅಚಲರಾಗಿದ್ದರು. ಬೇರಾವುದಕ್ಕಿಂತಲೂ ಹೆಚ್ಚಾಗಿ, ಭಗವಂತನ ಮತ್ತು ಗುರುಗಳ ಆಶಯದಂತೆ, ದಯಾಮಾತಾರವರು ಅಂತರಂಗದಲ್ಲಿ ಗುರುಗಳಿಗೆ ಶರಣಾಗಿ, ಅವರು ಹೇಳಿದಂತೆ ನಡೆಯುವ ನಿರ್ಧಾರ ಮಾಡಿದರು. “ಈಗ ನನ್ನ ಕಾರ್ಯ ಮುಕ್ತಾಯವಾಯಿತು”, ಪರಮಹಂಸಜಿ ಅವರಿಗೆ ಹೇಳಿದರು. “ಈಗ ನಿನ್ನದು ಪ್ರಾರಂಭವಾಗಲಿದೆ.”

1955ರಲ್ಲಿ, ಪರಮಹಂಸ ಯೋಗಾನಂದರ ನಿರ್ಗಮನದ ಮೂರು ವರ್ಷಗಳ ನಂತರ, ದಯಾಮಾತಾರವರು ಯೋಗದಾ ಸೊಸೈಟಿ ಆಫ್‌ ಇಂಡಿಯಾ/ಸೆಲ್ಫ್‌-ರಿಯಲೈಝೇಶನ್‌ ಫೆಲೋಶಿಪ್‌ (ವೈಎಸ್ಎಸ್‌/ಎಸ್ಆರ್‌ಎಫ್)‌ ನ ಅಧ್ಯಕ್ಷರಾಗಿ, ದಿವಂಗತ ರಾಜರ್ಷಿ ಜನಕಾನಂದರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಪರಮಹಂಸಜಿಯವರ ಆಶಯದಂತೆ, ವಿಶ್ವದ ಧಾರ್ಮಿಕ ಆಂದೋಲನದ ಮೊಟ್ಟ ಮೊದಲ ಮಹಿಳಾ ಮುಖಂಡರಾಗಿ ಮತ್ತು ಭಾರತದ ಸನಾತನ ಧರ್ಮವನ್ನು ಅತ್ಯುತ್ತಮವಾಗಿ ಪರಿಪಾಲಿಸುತ್ತಿರುವ ಪಾಶ್ಚಿಮಾತ್ಯ ಮಹಿಳೆಯರಲ್ಲಿ ಮೊದಲಿಗರೆಂಬ ವ್ಯಾಪಕ ಗೌರವಕ್ಕೆ ಪಾತ್ರರಾದರು. ಶ್ರೀ ಯೋಗಾನಂದರ ಆಧ್ಯಾತ್ಮಿಕ ಉತ್ತರಾಧಿಕಾರಿಯಾಗಿ ವೈಎಸ್ಎಸ್‌/ಎಸ್ಆರ್‌ಎಫ್ ಸದಸ್ಯರುಗಳ ಆಧ್ಯಾತ್ಮಿಕ ಮಾರ್ಗದರ್ಶನದ ಮೇಲ್ವಿಚಾರಣೆಯ ಮತ್ತು ಭಾರತ, ಅಮೇರಿಕ ಮತ್ತು ಜರ್ಮನಿಯ ಎಸ್ಆರ್‌ಎಫ್/ವೈಎಸ್ಎಸ್‌ ಆಶ್ರಮಗಳಲ್ಲಿ ನೆಲೆಸಿರುವ ಸನ್ಯಾಸಿ ಶಿಷ್ಯರ ತರಬೇತಿ ಕಾರ್ಯಗಳ ಜವಾಬ್ದಾರಿಯನ್ನು ವಹಿಸಿಕೊಂಡರು. ಇದರ ಜೊತೆಗೆ, ಪ್ರಪಂಚದಾದ್ಯಂತ ಸಂಸ್ಥೆಯ ಆಧ್ಯಾತ್ಮಿಕ ಹಾಗೂ ಮಾನವೀಯ ಸೇವಾ ಕಾರ್ಯಗಳ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ನಂತರದ ವರ್ಷಗಳಲ್ಲಿ, ಅವರು ಐದು ಬಾರಿ ಭಾರತದಲ್ಲಿ ವಿಸ್ತೃತ ಪ್ರವಾಸವನ್ನು ಕೈಗೊಂಡು ಇಲ್ಲಿನ ಸಂಸ್ಥೆಯ ಕಾರ್ಯಕಲಾಪಗಳಲ್ಲಿ ಸೇವೆ ಸಲ್ಲಿಸಿದರು.

ಶ್ರೀ ದಯಾ ಮಾತಾರವರ ನಾಯಕತ್ವ

Daya Mata with SRF member at Christmas time.

ಶ್ರೀ ದಯಾ ಮಾತಾರವರ ನಾಯಕತ್ವದಲ್ಲಿ ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ/ಸೆಲ್ಫ್‌-ರಿಯಲೈಝೇಶನ್‌ ಫೆಲೋಶಿಪ್‌ ಸಂಸ್ಥೆಗಳು ಎತ್ತರಕ್ಕೆ ಬೆಳೆದು ಪ್ರಪಂಚದಾದ್ಯಂತ ವಿಸ್ತರಿಸಿದವು. ಇಂದು ಈ ಸಂಸ್ಥೆಗಳು 60 ದೇಶಗಳಲ್ಲಿ, 600ಕ್ಕೂ ಹೆಚ್ಚು ವೈಎಸ್ಎಸ್‌/ಎಸ್ಆರ್‌ಎಫ್ ಮಂದಿರಗಳು, ಧ್ಯಾನಕೇಂದ್ರಗಳು, ಧ್ಯಾನ ಶಿಬಿರಗಳು ಮತ್ತು ಅನೇಕ ಉತ್ಸಾಹಿ, ನಿಷ್ಠಾವಂತ ಸನ್ಯಾಸಿ ಮತ್ತು ಸನ್ಯಾಸಿನಿಯರ ತಂಡಗಳು, ಶ್ರೀ ಪರಮಹಂಸ ಯೋಗಾನಂದರ ಮತ್ತು ಅವರ ಶಿಷ್ಯರ ಕಾರ್ಯ ಚಟುವಟಿಕೆಗಳ ಪ್ರಕಟಣೆ, ಶ್ರೀ ಪರಮಹಂಸ ಯೋಗಾನಂದರು ವಿಶ್ವದ ಅನೇಕ ನಗರಗಳಲ್ಲಿ ನೀಡಿರುವ ಉಪನ್ಯಾಸ ಸರಣಿಗಳು ಮತ್ತು ತರಗತಿಗಳು-ಇವುಗಳ ಪ್ರಕಟಣೆಯ ಮೇಲ್ವಿಚಾರಣಾ ವಿಭಾಗ, ಅನೇಕ ದೇಶಗಳಲ್ಲಿರುವ ಸುಂದರವಾದ ಎಸ್ಆರ್‌ಎಫ್ ಧ್ಯಾನ ಶಿಬಿರಗಳು, ಜಾಗತಿಕ ಶಾಂತಿ ಹಾಗೂ ಉಪಶಮನಕ್ಕೆ ಮೀಸಲಾದ ಜಾಗತಿಕ ಪ್ರಾರ್ಥನಾ ಮಂಡಳಿ ಮತ್ತು ಇತರ ಆಧ್ಯಾತ್ಮಿಕ ಸೇವೆ ಮತ್ತು ಕಾರ್ಯಗಳು-ಇವುಗಳನ್ನು ಒಳಗೊಂಡಿದೆ.

ಸುಮಾರು 80 ವರ್ಷಗಳ ನಿಸ್ವಾರ್ಥ ಸೇವಾ ಅವಧಿಯಲ್ಲಿ ಅವರು ಎಂದಿಗೂ ಯಾವುದೇ ಪ್ರಾಮುಖ್ಯತೆಯನ್ನಾಗಲೀ, ಹುದ್ದೆಯನ್ನಾಗಲೀ ಬಯಸಲಿಲ್ಲ. ಅವರ ಏಕಮಾತ್ರ ಗುರಿಯೆಂದರೆ, ಗುರುಗಳ ಬೋಧನೆಗಳ ಪಾವಿತ್ರ್ಯತೆ ಮತ್ತು ಸಮಗ್ರತೆಯನ್ನು ಕಾಪಾಡುವುದು, ಆದರ್ಶ ಶಿಷ್ಯರ ಗುಣಗಳನ್ನು ಮೈಗೂಡಿಸಿಕೊಳ್ಳುವಲ್ಲಿ ಪರಿಪೂರ್ಣತೆಯನ್ನು ಸಾಧಿಸುವುದು ಮತ್ತು ಆಧ್ಯಾತ್ಮಿಕ ಶಕ್ತಿ ಮತ್ತು ಜ್ಞಾನವನ್ನು ಬಯಸಿ ಬರುವವರಿಗೆ ಸಹಾಯಹಸ್ತ ನೀಡುವುದೇ ಆಗಿತ್ತು. ಈ ಗುರಿಯೆಡೆಗಿನ ಅವರ ಏಕಚಿತ್ತ ನಿಷ್ಠೆಯಿಂದ ವಿಶ್ವದಾದ್ಯಂತ ಅವರೆಡೆಗೆ ಬಂದ ಅಸಂಖ್ಯಾತ ಸತ್ಯಾನ್ವೇಷಕರಿಗೆ ಸ್ಪೂರ್ತಿಯನ್ನೂ, ಆಶೀರ್ವಾದವನ್ನೂ ನೀಡಿದ್ದಾರೆ.

ಕೊನೆಯ ವರ್ಷಗಳು ಮತ್ತು ಪ್ರೀತಿಯ ಪರಂಪರೆ

ಶ್ರೀ ದಯಾಮಾತಾರವರು ವಿಶ್ವದಾದ್ಯಂತ ವೈಎಸ್ಎಸ್‌/ಎಸ್ಆರ್‌ಎಫ್ ಕುಟುಂಬದವರಿಗೆ, ಯೋಗದಾ ಸತ್ಸಂಗ/ಸೆಲ್ಫ್‌-ರಿಯಲೈಝೇಶನ್‌ ಪತ್ರಿಕೆಗೆ ನಿಯಮಿತವಾಗಿ ಲೇಖನಗಳನ್ನು ಬರೆಯುವುದರ ಮೂಲಕ, ಆಧ್ಯಾತ್ಮಿಕ ಮಾರ್ಗದರ್ಶನ ನೀಡಲು ಕಾಲೋಚಿತ ಮತ್ತು ದ್ವೈಮಾಸಿಕ ಪತ್ರಗಳನ್ನು ಬರೆಯುವುದರ ಮೂಲಕ ಮತ್ತು ಬೃಹತ್‌ ಪ್ರಮಾಣದ ಭಕ್ತರಿಗೆ ವೈಯಕ್ತಿಕವಾಗಿ ಪತ್ರ ವ್ಯವಹಾರ ನಡೆಸುವುದರ ಮೂಲಕ ಸದಾ ಸ್ಪೂರ್ತಿ, ಉತ್ಸಾಹ, ಮಾರ್ಗದರ್ಶನ ಹಾಗೂ ಆಧ್ಯಾತ್ಮಿಕ ಪ್ರೋತ್ಸಾಹವನ್ನು ನೀಡುತ್ತಿದ್ದರು. ತಮ್ಮ ಕೊನೆಯ ದಿನಗಳಲ್ಲಿ ಅವರು ಬಹುಪಾಲು ಸಮಯವನ್ನು ಧ್ಯಾನ ಮತ್ತು ತಮ್ಮ ಸಹಾಯ ಮತ್ತು ಆಶೀರ್ವಾದವನ್ನು ಬಯಸಿ ಬಂದವರಿಗಾಗಿ ಆಳವಾದ ಪ್ರಾರ್ಥನೆಯಲ್ಲಿ ಮುಳುಗಿರುತ್ತಿದ್ದರು.

ಇದೆಲ್ಲಕ್ಕಿಂತ ಮಿಗಿಲಾಗಿ, ಅವರ ಆಶಯ ಮತ್ತು ಗುರಿ ಎರಡೂ ದೈನಂದಿನ ಧ್ಯಾನದ ಮೂಲಕ ದೇವರು ಮತ್ತು ಅವನ ಮಕ್ಕಳ ಬಗ್ಗೆ ಆಳವಾದ ಪ್ರೇಮವನ್ನು ಹುಟ್ಟು ಹಾಕುವುದೇ ಆಗಿತ್ತು.

Mrinalini Mata describing Daya Ma.
Mother of compassion — Daya Mata.

ದಯಾಮಾತಾರವರು ಹೇಳುತ್ತಾರೆ: “ಪರಿಶುದ್ಧವಾದ ಮತ್ತು ಅನಿರ್ಬಂಧಿತವಾಗಿ ಪ್ರೀತಿಸುವ ಶಕ್ತಿಯು ಧ್ಯಾನದ ಮೂಲಕ, ಭಗವಂತನನ್ನು ಪ್ರೀತಿಸುವುದರ ಮೂಲಕ ಮತ್ತು ನಿಮ್ಮ ಹೃದಯದ ಭಾಷೆಯಲ್ಲಿ ಅವನೊಂದಿಗೆ ಮೌನವಾಗಿ ಸಂಭಾಷಿಸುವುದರ ಮೂಲಕ ದೊರೆಯುತ್ತದೆ. ಅವನೊಂದಿಗೆ ನಾನು ಸಂಭಾಷಿಸದ ಯಾವುದೇ ಕ್ಷಣವೂ ನನ್ನ ಜೀವನದಲ್ಲಿದೆಯೆಂದು ನಾನು ತಿಳಿಯುವುದಿಲ್ಲ. ಆತನು ನನ್ನೊಂದಿಗೆ ಮಾತನಾಡುವನೋ ಇಲ್ಲವೋ ಎಂಬುದು ನನ್ನನ್ನು ಅಷ್ಟಾಗಿ ಭಾದಿಸುವುದಿಲ್ಲ. ನಾನು ಸ್ವಲ್ಪ ವಿಲಕ್ಷಣವಾಗಿ ಯೋಚಿಸುತ್ತೇನೆಂದು ನಿಮಗನ್ನಿಸಬಹುದು. ಆದರೆ, ದೇವರೊಂದಿಗೆ ಅಂತರಂಗದಲ್ಲಿ ಸಂಭಾಷಿಸುವುದರಿಂದ ಎಂತಹ ಆನಂದವು ದೊರಕುವುದು ಎಂದು ಮಾತ್ರ ತಿಳಿದಿದ್ದೇನೆ ಮತ್ತು ಆ ಕ್ಷಣವೇ ಆ ದೈವೀ ಪ್ರೀತಿಯ ಆನಂದ, ಪರಮಸುಖ ಹಾಗೂ ಜ್ಞಾನವು ನನ್ನ ಪ್ರಜ್ಞೆಯ ಮೂಲಕ ಹರಿಯುವುದನ್ನು ನಾನು ಅನುಭವಿಸುತ್ತೇನೆ. ಆಗ ನಾನು ತಿಳಿಯುತ್ತೇನೆ: ʼಓ ದಿವ್ಯ ಮಾತೆಯೇ, ನನ್ನ ಜೀವನದಲ್ಲಿ ಏನನ್ನು ಬಯಸುತ್ತಿರುವೆನೋ ಅದನ್ನು ನೀನು ಮಾತ್ರ ನೀಡಬಲ್ಲೆ.ʼ ಭಗವಂತನೊಬ್ಬನೇ ಸತ್ಯ, ಅವನೇ ನಮ್ಮ ಜೀವನ.”

ಯಾರು ತಮ್ಮ ಜೀವನದಲ್ಲಿ ಭಗವಂತನಿಗಾಗಿ ಅಪರಿಮಿತವಾದ ಭಕ್ತಿಯನ್ನು ತೋರುವರೋ ಅಂತಹವರು ಅವರ ಜೀವಿತಾವಧಿಯನ್ನೂ ಮೀರಿದ ಉನ್ನತ ಪ್ರಭಾವವನ್ನು ಬೀರುತ್ತಾರೆ. ಇಂದಿಗೂ ಸಹ ಶ್ರೀ ದಯಾ ಮಾತಾರವರು ನಮ್ಮ ಆಧ್ಯಾತ್ಮಿಕ ಅರಸುವಿಕೆಯನ್ನು ನಿರ್ದೇಶಿಸುತ್ತ ಮತ್ತು ಪ್ರೋತ್ಸಾಹಿಸುತ್ತ ಆಶೀರ್ವದಿಸುವ ಅನುಭವವನ್ನು ಪಡೆಯಬಹುದು. ಅವರ ದಿವ್ಯ ಪ್ರೇಮ ಮತ್ತು ಕರುಣೆ ಎಂದೆಂದಿಗೂ ನಮ್ಮೊಡನಿರುವುದನ್ನು ಮನಗಂಡಿರುವ ನಾವು, ನಮ್ಮ ಹೃದಯದ ಪ್ರೀತಿ ಮತ್ತು ಕೃತಜ್ಞತೆಗಳನ್ನು ಒಟ್ಟಾಗಿ ಅವರಿಗೆ ತಲುಪಿಸುವುದಕ್ಕಾಗಿ, ದಯವಿಟ್ಟು ನೀವೂ ನಮ್ಮೊಂದಿಗೆ ಸೇರಿಕೊಳ್ಳಿ.

Daya mata giving a satsanga.

ಇದನ್ನು ಹಂಚಿಕೊಳ್ಳಿ