“ಯೋಗದ ಸಾರ್ವತ್ರಿಕತೆ” ಪರಮಹಂಸ ಯೋಗಾನಂದರಿಂದ

ಮೇ 21, 1944 ರಂದು ಎಸ್‌ಆರ್‌ಎಫ್ ಹಾಲಿವುಡ್ ಟೆಂಪಲ್‌ನಲ್ಲಿ ನೀಡಲಾದ “ದಿ ಯೂನಿವರ್ಸಾಲಿಟಿ ಆಫ್ ಯೋಗ” ದಿಂದ ಆಯ್ದ ಭಾಗಗಳು. ವೈಎಸ್ಎಸ್ ಪ್ರಕಟಿಸಿದ ಪರಮಹಂಸಜಿಯವರ ಉಪನ್ಯಾಸಗಳು ಮತ್ತು ಪ್ರಬಂಧಗಳ ಸಂಗ್ರಹದ ಮೊದಲ ಸಂಪುಟವಾದ ಮ್ಯಾನ್ಸ್ ಎಟರ್ನಲ್ ಕ್ವೆಸ್ಟ್ ನಲ್ಲಿ ಪೂರ್ಣ ಉಪನ್ಯಾಸವನ್ನು ನೋಡಬಹುದು.

ಗಮನಿಸಿ: ಪರಮಹಂಸ ಯೋಗಾನಂದರ ಪಾಠಗಳು ಮತ್ತು ಇತರ ಬರಹಗಳಲ್ಲಿ ಪುಲ್ಲಿಂಗದ ಬಳಕೆಯು ಮಾನವ ಜನಾಂಗದ ಅರ್ಧದಷ್ಟನ್ನು ಮಾತ್ರ ಸೂಚಿಸುವ ಮನುಷ್ಯ ಎಂಬ ಪದದ ಸಂಕುಚಿತವಾದ ಪ್ರತ್ಯೇಕತೆಯ ವಿಶೇಷ ಅರ್ಥದಲ್ಲಲ್ಲದೆ, ಅದರ ವಿಶಾಲವಾದ ಮೂಲ ಅರ್ಥದಲ್ಲಿ ಬೇರೂರಿದೆ; ಈ ಪದವು ಸಂಸ್ಕೃತದ ಮನಸ್‌ನ ಅದೇ ಮೂಲದಿಂದ ಬಂದಿದೆ — ತರ್ಕಬದ್ಧ ಚಿಂತನೆಗೆ ಅನನ್ಯವಾದ ಮಾನವ ಸಾಮರ್ಥ್ಯ. ಯೋಗ ವಿಜ್ಞಾನವು ಮೂಲಭೂತವಾಗಿ ಉಭಯಲಿಂಗಿಯಾದ ಆತ್ಮದ ದೃಷ್ಟಿಕೋನದಿಂದ ಮಾನವ ಪ್ರಜ್ಞೆಯನ್ನು ಕುರಿತು ಚರ್ಚಿಸುತ್ತದೆ. ಅತಿಯಾದ ಸಾಹಿತ್ಯಿಕ ಮುಜುಗರಗಳಿಲ್ಲದೆ ಈ ಮಾನಸಿಕ ಮತ್ತು ಆಧ್ಯಾತ್ಮಿಕ ಸತ್ಯಗಳನ್ನು ತಿಳಿಸುವ ಬೇರೆ ಯಾವುದೇ ಪರಿಭಾಷೆ ಇಂಗ್ಲಿಷ್‌ನಲ್ಲಿ ಇಲ್ಲದಿರುವುದರಿಂದ, ಗುರುಗಳ ಬರಹಗಳಲ್ಲಿ ಮನುಷ್ಯ ಮತ್ತು ಸಂಬಂಧಿತ ಪದಗಳ ಬಳಕೆಯನ್ನು ಉಳಿಸಿಕೊಳ್ಳಲಾಗಿದೆ.

Paramahansa Yogananda with folded hands

ಯೋಗದ ಉದ್ದೇಶ

ಯೋಗವೆಂದರೆ ಆತ್ಮವನ್ನು ಪರಮಾತ್ಮನೊಂದಿಗೆ ಸಾಯ್ಯುಜ್ಯವನ್ನು ಹೊಂದುವ ವೈಜ್ಞಾನಿಕ ಪದ್ಧತಿಗಳ ಒಂದು ಕಾರ್ಯತಂತ್ರ. ನಾವು ಭಗವಂತನಿಂದ ಕೆಳಗಿಳಿದು ಬಂದಿದ್ದೇವೆ, ಹಾಗೂ ಪುನಃ ಅವನ ಬಳಿಗೆ ಹಿಂತಿರುಗಬೇಕಾಗಿದೆ. ನಾವು ತೋರಿಕೆಯಲ್ಲಿ ಭಗವಂತನಿಂದ ಬೇರ್ಪಟ್ಟಿದ್ದೇವೆ, ಆದ್ದರಿಂದ ನಾವು ಮತ್ತೆ ಪ್ರಜ್ಞಾಪೂರ್ವಕವಾಗಿ ಅವನೊಡನೆ ಒಂದಾಗಬೇಕಿದೆ. ಈ ವಿಯೋಗದ ಭ್ರಮೆಯನ್ನು ಮೀರಿ ನಿಂತು ಭಗವಂತನೊಂದಿಗಿರುವ ನಮ್ಮ ಏಕತ್ವವನ್ನು ಹೇಗೆ ಅರಿತುಕೊಳ್ಳುವುದೆಂದು ಯೋಗ ನಮಗೆ ಕಲಿಸುತ್ತದೆ.

ಮನುಷ್ಯನ ಆತ್ಮದ ಬಗ್ಗೆ ಮತ್ತು ಪುನಃ ಅದು ಹೇಗೆ ಆನಂದಧಾಮವನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಮಿಲ್ಟನ್‌ ಕವಿ ಬರೆದಿದ್ದಾನೆ. ಅದೇ ಯೋಗದ ಉದ್ದೇಶ ಮತ್ತು ಧ್ಯೇಯ—ಅಂದರೆ ಕಳೆದುಕೊಂಡ ಆತ್ಮಪ್ರಜ್ಞೆಯ ಸ್ವರ್ಗವನ್ನು ಮರಳಿ ಪಡೆಯುವುದು, ಅಂದರೆ ಯಾವುದರಿಂದ ಮಾನವನು ತಾನು ಇಂದು ಹಾಗೂ ಎಂದೆಂದಿಗೂ ಪರಮಾತ್ಮನೊಂದಿಗೆ ಒಂದಾಗಿದ್ದೇನೆ ಎಂದು ಅರಿಯುತ್ತಾನೋ ಅದನ್ನು.

ಯೋಗವು ನೈಜ ಧರ್ಮದ ವಿಜ್ಞಾನ

ಪ್ರಪಂಚದ ವಿವಿಧ ಧರ್ಮಗಳು ಹೆಚ್ಚೂ ಕಡಿಮೆ ಮಾನವನ ನಂಬಿಕೆಗಳನ್ನು ಆಧರಿಸಿವೆ. ಆದರೆ ಧರ್ಮದ ನಿಜವಾದ ಆಧಾರವು, ಎಲ್ಲ ಭಕ್ತರೂ ನಮ್ಮ ಏಕೈಕ ಜನಕನಾದ ಭಗವಂತನನ್ನು ತಲುಪಲು ಬಳಸಬಹುದಾದ ಒಂದು ವಿಜ್ಞಾನವಾಗಿರಬೇಕು. ಯೋಗವೇ ಆ ವಿಜ್ಞಾನ. ಧರ್ಮದ ಒಂದು ವಿಜ್ಞಾನವನ್ನು ಅನುಷ್ಠಾನ ಮಾಡುವುದು ಅತ್ಯವಶ್ಯಕ.

“ಒಂದು ಮನೆಯನ್ನು ಅದರ ವಿರುದ್ಧವಾಗಿಯೇ ಒಡೆದರೆ, ಆ ಮನೆ ಸ್ಥಿರವಾಗಿ ನಿಲ್ಲಲಾರದು” ಎಂದು ಏಸುವು, ಸೂಚಿಸಿದ್ದರೂ ಸಹ ವಿಭಿನ್ನ ಮತತತ್ತ್ವಗಳ “ವಾದಗಳು” ಮನುಕುಲವನ್ನು ವಿಭಜಿಸಿವೆ (ಮಾರ್ಕ್‌ 3:25). ಆ ಧರ್ಮಗಳನ್ನು ಅನುಷ್ಠಾನ ಮಾಡುತ್ತಿರುವ ಪ್ರತಿಯೊಬ್ಬ ವ್ಯಕ್ತಿಯೂ ವಸ್ತುತಃ ಅವನ ಅಂತರಂಗದಲ್ಲಿರುವ ಭಗವಂತನನ್ನು ಅರಿತಾಗ ಮಾತ್ರ ವಿಭಿನ್ನ ಧರ್ಮಗಳ ನಡುವೆ ಐಕ್ಯತೆ ಉಂಟಾಗಲು ಸಾಧ್ಯ. ಆಗ ಭಗವಂತನ ಪಿತೃತ್ವದಡಿಯಲ್ಲಿ ಮಾನವನ ನಿಜವಾದ ಭ್ರಾತೃತ್ವ ನಮ್ಮಲ್ಲಿ ಉದಿಸುತ್ತದೆ.

ಜಗತ್ತಿನ ಮಹಾನ್‌ ಧರ್ಮಗಳು ಭಗವಂತನನ್ನು ಕಂಡುಕೊಳ್ಳುವ ಹಾಗೂ ಮಾನವರ ನಡುವಿನ ಭ್ರಾತೃತ್ವದ ಅವಶ್ಯಕತೆಯನ್ನು ಬೋಧಿಸುತ್ತವೆ; ಮತ್ತು ಎಲ್ಲವಕ್ಕೂ ಕ್ರೈಸ್ತ ಧರ್ಮದ ದಶ-ಶಾಸನಗಳಂತಹ (Ten Commandments) ನೀತಿ ಸಂಹಿತೆಗಳಿವೆ. ಹಾಗಾದರೆ ಅವುಗಳ ಮಧ್ಯೆ ಯಾವುದು ಮತಭೇದವನ್ನು ಸೃಷ್ಟಿಸುತ್ತದೆ? ಅದು ಮನುಷ್ಯರ ಮನಗಳಲ್ಲಿರುವ ಮತಾಂಧತೆ. ನಾವು ಧರ್ಮಸಿದ್ಧಾಂತಗಳ ಮೇಲೆ ಒತ್ತು ಕೊಡುವುದರಿಂದ ಭಗವಂತನನ್ನು ತಲುಪಲು ಸಾಧ್ಯವಿಲ್ಲ, ಬದಲಿಗೆ ವಾಸ್ತವಿಕ ಆತ್ಮಜ್ಞಾನದಿಂದ ಮಾತ್ರ.

ಮನುಷ್ಯರು ವಿಭಿನ್ನ ಧರ್ಮಗಳ ಅಂತರ್ನಿಹಿತ ಸಾರ್ವತ್ರಿಕ ಸತ್ಯಗಳನ್ನು ಗ್ರಹಿಸಿದಾಗ, ಧರ್ಮಸಿದ್ಧಾಂತಗಳ ಮೇಲೆ ಯಾವುದೇ ಸಮಸ್ಯೆಗಳಿರುವುದಿಲ್ಲ. ನನಗೆ ಯಹೂದಿಗಳೆಂಬುದೂ ಇಲ್ಲ, ಕ್ರೈಸ್ತರೆಂಬುದೂ ಇಲ್ಲ ಅಥವಾ ಹಿಂದೂಗಳೆಂಬುದೂ ಇಲ್ಲ; ಎಲ್ಲರೂ ನನ್ನ ಸಹೋದರರೇ. ನಾನು ಎಲ್ಲ ಮಂದಿರಗಳಲ್ಲೂ ಆರಾಧಿಸುತ್ತೇನೆ, ಏಕೆಂದರೆ, ಆ ಪ್ರತಿಯೊಂದು ಮಂದಿರವನ್ನೂ ನನ್ನ ಭಗವಂತನನ್ನು ಆರಾಧಿಸಲು ನಿರ್ಮಿಸಲಾಗಿದೆ.

ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ [ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ] ಹುಟ್ಟುಹಾಕಿದ ಆದರ್ಶದ ಮೇರೆಗೆ ನಾವು ಜಾಗತಿಕ ಐಕ್ಯತೆಯನ್ನು ಸ್ಥಾಪಿಸಲು ಆರಂಭಿಸಬೇಕು: ಒಂದು “ಸರ್ವಧರ್ಮಗಳ ಮಂದಿರ”; ಒಂದು ಸಾರಸಂಗ್ರಹವಲ್ಲ, ಬದಲಿಗೆ ಎಲ್ಲ ಧರ್ಮಗಳನ್ನೂ ಭಗವಂತನೆಡೆಗೆ ಕರೆದೊಯ್ಯುವ ವಿವಿಧ ಮಾರ್ಗಗಳೆಂದು ಗೌರವಿಸುತ್ತ. ಎಲ್ಲ ಧರ್ಮಗಳೂ ಆರಾಧಿಸುವಂತಹ ಒಬ್ಬನೇ ಪರಮಾತ್ಮನಿಗೆ ಮುಡಿಪಾಗಿಟ್ಟಂತಹ ಅಂತಹ ಮಂದಿರಗಳನ್ನು ಎಲ್ಲೆಡೆಯೂ ಕಟ್ಟಬೇಕು. ಮುಂದೊಂದು ದಿನ ಇದು ಆಗಿಯೇ ಆಗುತ್ತದೆ ಎಂದು ನಾನು ಭವಿಷ್ಯ ನುಡಿಯುತ್ತಿದ್ದೇನೆ.

ಪೂರ್ವ ಮತ್ತು ಪಶ್ಚಿಮ ದೇಶಗಳು ಭಗವಂತನ ಧಾಮಗಳಲ್ಲಿ ಸಂಕುಚಿತ ವಿಭಜನೆಗಳನ್ನು ಶಾಶ್ವತವಾಗಿ ಕೊನೆಗಾಣಿಸಬೇಕು. ಯೋಗದಿಂದ ಆತ್ಮ-ಸಾಕ್ಷಾತ್ಕಾರವನ್ನು ಹೊಂದುವುದರ ಮೂಲಕ ಜನರೆಲ್ಲರೂ ತಾವು ಒಬ್ಬನೇ ಭಗವಂತನ ಮಕ್ಕಳು ಎಂಬುದನ್ನು ಮನಗಾಣುತ್ತಾರೆ.

ಒಬ್ಬ ಕುರುಡ ಮತ್ತೊಬ್ಬ ಕುರುಡನಿಗೆ ಮಾರ್ಗದರ್ಶನ ನೀಡಲಾರ

ಯಾರು ದೈವ-ಸಾಕ್ಷಾತ್ಕಾರವನ್ನು ಹೊಂದಿರುತ್ತಾರೋ ಅಂತಹ ಮಹಾನ್‌ ಪುರುಷರಲ್ಲಿ ಅಂತಹ ಐಕ್ಯತೆಯ ಮನೋಭಾವ ವ್ಯಕ್ತವಾಗುತ್ತದೆ. ಒಬ್ಬ ಕುರುಡ ಮತ್ತೊಬ್ಬ ಕುರುಡನಿಗೆ ಮಾರ್ಗದರ್ಶನ ನೀಡಲಾರ; ಭಗವಂತನನ್ನು ಅರಿತ ಒಬ್ಬ ಗುರು ಮಾತ್ರ ಭಗವಂತನ ಬಗ್ಗೆ ಬೇರೆಯವರಿಗೆ ಸರಿಯಾಗಿ ಬೋಧಿಸಬಲ್ಲ. ಒಬ್ಬನು ತನ್ನ ದೈವತ್ವವನ್ನು ಪುನರ್‌ಪ್ರಾಪ್ತಿ ಮಾಡಿಕೊಳ್ಳಬೇಕಾದರೆ, ಅವನಿಗೆ ಅಂತಹ ಗುರುವಿರಲೇಬೇಕು.

ಒಬ್ಬ ಸದ್ಗುರುವನ್ನು ನಿಷ್ಠೆಯಿಂದ ಅನುಸರಿಸುವವನು ಅವನಂತೆಯೇ ಆಗುತ್ತಾನೆ, ಏಕೆಂದರೆ, ಗುರುವು ತನ್ನ ಶಿಷ್ಯನನ್ನು ತನ್ನದೇ ಸಾಕ್ಷಾತ್ಕಾರದ ಮಟ್ಟಕ್ಕೇರಲು ಸಹಾಯ ಮಾಡುತ್ತಾನೆ. ನನ್ನ ಗುರು ಸ್ವಾಮಿ ಶ್ರೀ ಯುಕ್ತೇಶ್ವರರು ದೊರೆತ ಮೇಲೆ ನಾನು ಅವರ ಆದರ್ಶವನ್ನು ಅನುಸರಿಸುವ ದೃಢಸಂಕಲ್ಪ ಮಾಡಿದೆ: ಅಂದರೆ ಕೇವಲ ಭಗವಂತನನ್ನು ಮಾತ್ರ ನನ್ನ ಹೃನ್ಮಂದಿರದಲ್ಲಿ ಸ್ಥಾಪಿಸುವುದು ಹಾಗೂ ಅವನನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದು.

ಅತ್ಯಂತ ಆಳವಾದ ಜ್ಞಾನವನ್ನು ಹೊಂದಬೇಕಾದರೆ, ಒಬ್ಬನು ಸರ್ವಜ್ಞವಾದ ದಿವ್ಯ ಚಕ್ಷುವಿನ ಮೂಲಕ ತನ್ನ ದೃಷ್ಟಿಯನ್ನು ಏಕಾಗ್ರಗೊಳಿಸಬೇಕು ಎಂದು ಹಿಂದೂ ಗುರುಗಳು ಕಲಿಸಿದ್ದಾರೆ. ಆಳವಾದ ಏಕಾಗ್ರತೆಯಲ್ಲಿದ್ದಾಗ ಯೋಗಿಯಲ್ಲದವನೂ ತನ್ನ ಹಣೆಯ ಭ್ರೂಮಧ್ಯೆಯ ಬಿಂದುವಿನಲ್ಲಿ ಗಂಟಿಕ್ಕುತ್ತಾನೆ—ಅದೇ ಏಕಾಗ್ರತೆಯ ಕೇಂದ್ರ ಹಾಗೂ ಗೋಲಾಕಾರದ ಆಧ್ಯಾತ್ಮಿಕ ಚಕ್ಷು, ಆತ್ಮದ ಅಂತರ್ಬೋಧೆಯ ಕೇಂದ್ರ. ಅದೇ ನಿಜವಾದ “ಕ್ರಿಸ್ಟಲ್‌ ಬಾಲ್‌” ಅದರ ಮೂಲಕವೇ ಯೋಗಿಯಾದವನು ವಿಶ್ವದ ರಹಸ್ಯಗಳನ್ನು ಅರಿಯಲೆಂದು ದೃಷ್ಟಿ ಹಾಯಿಸುತ್ತಾನೆ.

ತಮ್ಮ ಏಕಾಗ್ರತೆಯಲ್ಲಿ ಸಾಕಷ್ಟು ಆಳವಾಗಿ ಹೋಗುವವರು ಆ “ಮೂರನೆಯ” ಕಣ್ಣನ್ನು ಭೇದಿಸಿ ಭಗವಂತನನ್ನು ಕಾಣುತ್ತಾರೆ. ಆದ್ದರಿಂದ ಸತ್ಯಾನ್ವೇಷಿಗಳು ತಮ್ಮ ಗ್ರಹಣಶಕ್ತಿಯನ್ನು ಆಧ್ಯಾತ್ಮಿಕ ಚಕ್ಷುವಿನ ಮೂಲಕ ಪ್ರಕ್ಷೇಪಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಯೋಗಾಭ್ಯಾಸವು ಸಾಧಕನಿಗೆ ಅಂತರ್ಬೋಧಿತ ಪ್ರಜ್ಞೆಯ ಏಕ ಚಕ್ಷುವನ್ನು ತೆರೆಯಲು ಸಹಾಯ ಮಾಡುತ್ತದೆ.

ಅಂತರ್ಬೋಧೆ ಅಥವಾ ನೇರ ಜ್ಞಾನವು ಇಂದ್ರಿಯಗಳು ಕೊಡುವ ಯಾವುದೇ ಮಾಹಿತಿಗಳ ಮೇಲೆ ನಿರ್ಭರವಾಗಿರುವುದಿಲ್ಲ. ಆದ್ದರಿಂದಲೇ ಅಂತರ್ಬೋಧೆಯ ಸಾಮರ್ಥ್ಯವನ್ನು ಹೆಚ್ಚಾಗಿ “ಷಷ್ಠೇಂದ್ರಿಯ” ಎನ್ನುತ್ತಾರೆ. ಪ್ರತಿಯೊಬ್ಬರಲ್ಲೂ ಈ ಷಷ್ಠೇಂದ್ರಿಯ ಇರುತ್ತದೆ, ಆದರೆ ಹೆಚ್ಚಿನ ಜನರು ಇದನ್ನು ಬೆಳೆಸಿಕೊಳ್ಳುವುದಿಲ್ಲ. ಆದರೂ, ಯಾವುದೇ ಇಂದ್ರಿಯ ಪ್ರಮಾಣ ಅದನ್ನು (ಘಟನೆಯನ್ನು) ಸೂಚಿಸದಿದ್ದರೂ, ಹೆಚ್ಚೂ ಕಡಿಮೆ ಪ್ರತಿಯೊಬ್ಬರಿಗೂ ಅಂತರ್ಬೋಧೆಯ ಯಾವುದೋ ಒಂದು “ಭಾವನೆ” ಪ್ರಾಯಶಃ ಒಂದು ನಿರ್ದಿಷ್ಟ ಘಟನೆ ನಡೆಯಲಿದೆ ಎಂಬ ಅನಿಸಿಕೆಯಂತೂ ಆಗೇ ಆಗಿರುತ್ತದೆ.

ಅಂತರ್ಬೋಧೆ ಅಥವಾ ನೇರವಾದ ಆತ್ಮಜ್ಞಾನವನ್ನು ಬೆಳೆಸಿಕೊಳ್ಳುವುದು ಮುಖ್ಯ, ಏಕೆಂದರೆ, ದೈವಪ್ರಜ್ಞೆಯುಳ್ಳವನಿಗೆ ತನ್ನ ಬಗ್ಗೆ ಆತ್ಮವಿಶ್ವಾಸವಿರುತ್ತದೆ. ಅವನಿಗೆ ಅರಿವಿರುತ್ತದೆ ಹಾಗೂ ಅವನಿಗೆ ಅರಿವಿದೆ ಎಂಬ ಅರಿವು ಅವನಿಗಿರುತ್ತದೆ. ನಮಗೆ ಕಿತ್ತಳೆ ಹಣ್ಣಿನ ರುಚಿ ತಿಳಿದಿರುವಷ್ಟೇ ಖಚಿತವಾಗಿ ಭಗವಂತನ ಉಪಸ್ಥಿತಿಯ ಅರಿವಿರಬೇಕು. ಭಗವಂತನೊಂದಿಗೆ ಸಂಸರ್ಗವನ್ನು ಹೇಗೆ ಸಾಧಿಸುವುದು ಎನ್ನುವುದನ್ನು ನನ್ನ ಗುರು ತೋರಿಸಿದ ನಂತರವೇ ಹಾಗೂ ಅವನ ಉಪಸ್ಥಿತಿಯನ್ನು ಪ್ರತಿದಿನ ಅನುಭವಿಸಿದ ಮೇಲೆಯೇ ನಾನು ಇತರರಿಗೆ ಅವನ ಬಗ್ಗೆ ಹೇಳುವ ಆಧ್ಯಾತ್ಮಿಕ ಕರ್ತವ್ಯವನ್ನು ವಹಿಸಿಕೊಂಡದ್ದು.

ಪಶ್ಚಿಮವು ದೊಡ್ಡ ಆರಾಧನಾ ಮಂದಿರಗಳಿಗೆ ಒತ್ತು ನೀಡಿದೆ, ಆದರೆ ಆರಾಧಕರಿಗೆ ಭಗವಂತನನ್ನು ಪ್ರಾಪ್ತಿಸಿಕೊಳ್ಳುವುದು ಹೇಗೆ ಎಂದು ತೋರಿಸುವಂತಹವು ಕೇವಲ ಕೆಲವೇ ಕೆಲವು. ಪೂರ್ವದಲ್ಲಿ ದೈವ-ಸಾಕ್ಷಾತ್ಕಾರ ಹೊಂದಿದ ಜನರನ್ನು ಬೆಳೆಸುವುದರ ಮೇಲೆ ಒತ್ತು ನೀಡಲಾಗಿದೆ; ಆದರೆ ಅನೇಕ ಬಾರಿ ಅಂಥವರು ಎಲ್ಲೋ ದೂರದ ಏಕಾಂತವಾಸದಲ್ಲಿದ್ದುಕೊಂಡು ಆಧ್ಯಾತ್ಮಿಕ ಅನ್ವೇಷಕರ ಕೈಗೆಟುಕದಂತಿರುತ್ತಾರೆ.

ಆಧ್ಯಾತ್ಮಿಕ ಕೇಂದ್ರಗಳಲ್ಲಿ ಭಗವಂತನೊಂದಿಗೆ ಸಂಸರ್ಗ ಹೊಂದಬಹುದಾದಂತಹ ಜನರು ಹಾಗೂ ಅದನ್ನು ಹೇಗೆ ಮಾಡುವುದು ಎಂದು ತೋರಿಸುವಂತಹ ಗುರುಗಳು ಇಬ್ಬರೂ ಅವಶ್ಯಕ. ಭಗವಂತನ ಬಗ್ಗೆ ತನಗೇ ಜ್ಞಾನವಿಲ್ಲದ ಶಿಕ್ಷಕನಿಂದ ಯಾರಾದರೂ ಭಗವಂತನ ಜ್ಞಾನವನ್ನು ಹೇಗೆ ಪಡೆಯಲು ಸಾಧ್ಯ? ಬೇರೆಯವರಿಗೆ ಭಗವಂತನ ಬಗ್ಗೆ ಹೇಳುವ ಮೊದಲು ಅವನನ್ನು ನಾನು ಅರಿತಿರುವುದು ಅವಶ್ಯಕ ಎಂದು ನನ್ನ ಗುರು ನನಗೆ ಮನದಟ್ಟು ಮಾಡಿಕೊಟ್ಟರು. ಅವರಿಂದ ತರಬೇತಿ ಪಡೆದುದಕ್ಕೆ ನಾನೆಷ್ಟು ಕೃತಜ್ಞ! ಅವರು ತಾವೇ ಸ್ವತಃ ಭಗವಂತನೊಂದಿಗೆ ಸಂಸರ್ಗ ಉಳ್ಳವರಾಗಿದ್ದರು.

ಅನ್ವೇಷಕನು ಭಗವಂತನನ್ನು ತನ್ನ ದೇಹ ಮಂದಿರದಲ್ಲಿಯೇ ಮೊದಲು ಮನಗಾಣಬೇಕು. ಪ್ರತಿಯೊಬ್ಬ ಅನ್ವೇಷಕನೂ ತನ್ನ ವಿಚಾರಗಳನ್ನು ಪ್ರತಿದಿನ ಶಿಸ್ತಿಗೊಳಪಡಿಸಬೇಕು ಹಾಗೂ ತನ್ನ ಆತ್ಮದ ವೇದಿಕೆಯ ಮೇಲೆ ಭಕ್ತಿಯ ವನಸುಮಗಳನ್ನು ಅರ್ಪಿಸಬೇಕು.

ಯಾರು ತನ್ನೊಳಗೇ ಭಗವಂತನನ್ನು ಕಂಡುಕೊಳ್ಳುತ್ತಾನೋ ಅವನಿಗೆ ತಾನು ಪ್ರವೇಶಿಸುವ ಪ್ರತಿ ಚರ್ಚಿನಲ್ಲೂ ಅಥವಾ ಪ್ರತಿ ಮಂದಿರದಲ್ಲೂ ಅವನ ಸಾನ್ನಿಧ್ಯವನ್ನು ಅನುಭವಿಸಲು ಸಾಧ್ಯವಾಗುತ್ತದೆ.

ಯೋಗವು ತಾರ್ಕಿಕ ವಿಶ್ಲೇಷಣೆಯನ್ನು ಪ್ರಾಯೋಗಿಕ ಅನುಭವವನ್ನಾಗಿ ಬದಲಾಯಿಸುತ್ತದೆ

ಯೋಗವು ಮಾನವನಿಗೆ ಎಲ್ಲ ಧರ್ಮಗಳಲ್ಲಿರುವ ಸತ್ಯವನ್ನು ಗ್ರಹಿಸಲು ಸಮರ್ಥನನ್ನಾಗಿಸುತ್ತದೆ. ದಶಾನುಶಾಸನಗಳನ್ನು ಪ್ರತಿಯೊಂದು ಧರ್ಮದಲ್ಲಿಯೂ ಬೇರೆ ಬೇರೆ ಪದಗಳಲ್ಲಿ ಬೋಧಿಸಲಾಗಿದೆ. ಆದರೆ ಎರಡು ಅತ್ಯಂತ ಮಹತ್ತರ ಅನುಶಾಸನಗಳೆಂದರೆ, ಏಸುವು ಒತ್ತಿ ಹೇಳಿದವುಗಳು: “ಪ್ರಭುವಾದ ನಿನ್ನ ಭಗವಂತನನ್ನು ನಿನ್ನ ಸಂಪೂರ್ಣ ಹೃದಯದಿಂದ, ನಿನ್ನ ಸಂಪೂರ್ಣ ಆತ್ಮದಿಂದ ಹಾಗೂ ನಿನ್ನ ಸಂಪೂರ್ಣ ಮನಸ್ಸಿನಿಂದ ಪ್ರೇಮಿಸು,” ಹಾಗೂ “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೇಮಿಸು” (ಮ್ಯಾಥ್ಯೂ 22:37, 39).

“ನಿನ್ನ ಸಂಪೂರ್ಣ ಮನಸ್ಸಿನಿಂದ” ಭಗವಂತನನ್ನು ಪ್ರೇಮಿಸುವುದು ಎಂದರೆ, ಒಬ್ಬನ ಮನಸ್ಸನ್ನು ಇಂದ್ರಿಯಗಳಿಂದ ಹಿಂತೆಗೆದುಕೊಂಡು ಭಗವಂತನಿಗೆ ಸಮರ್ಪಿಸುವುದು; ಧ್ಯಾನದಲ್ಲಿ ಒಬ್ಬನ ಸಂಪೂರ್ಣ ಏಕಾಗ್ರತೆಯನ್ನು ಭಗವಂತನಲ್ಲಿಡುವುದು. ಪ್ರತಿಯೊಬ್ಬ ಭಗವದನ್ವೇಷಕನೂ ಏಕಾಗ್ರತೆಯನ್ನು ಸಾಧಿಸುವುದು ಹೇಗೆ ಎಂಬುದನ್ನು ಕಲಿತುಕೊಳ್ಳಬೇಕು.

ಒಬ್ಬನು ಒಂದು ಪ್ರಾರ್ಥನೆಯನ್ನು ಹೇಳುತ್ತಾ ಅದೇ ಸಮಯದಲ್ಲಿ ಮನಸ್ಸಿನ ಹಿಂದೆ ಬೇರಾವುದೋ ವಿಷಯಗಳನ್ನು ಯೋಚಿಸುತ್ತಿದ್ದರೆ, ಅದು ನಿಜವಾದ ಪ್ರಾರ್ಥನೆಯಲ್ಲ ಹಾಗೂ ಅದನ್ನು ಭಗವಂತ ಕೇಳಿಸಿಕೊಳ್ಳುವುದಿಲ್ಲ. ಭಗವಂತನನ್ನು ಪಡೆಯಬೇಕೆಂದರೆ, ಪ್ರಪ್ರಥಮವಾಗಿ ಒಬ್ಬನು ತನ್ನ ಸಂಪೂರ್ಣ ಮನಸ್ಸಿನಿಂದ ಹಾಗೂ ಏಕಾಗ್ರಚಿತ್ತನಾಗಿ ಅವನನ್ನು ಅರಸಬೇಕು ಎಂದು ಯೋಗವು ಕಲಿಸುತ್ತದೆ.

ಯೋಗವು ಎಲ್ಲರಿಗಾಗಿ ಇದೆ

ಯೋಗಾಭ್ಯಾಸ ಮಾಡಲು ಹಿಂದೂಗಳು ಹೆಚ್ಚು ಒಗ್ಗಿಕೊಂಡಿದ್ದಾರೆ ಹಾಗೂ ಪಾಶ್ಚಿಮಾತ್ಯರಿಗೆ ಯೋಗವು ಸೂಕ್ತವಲ್ಲ ಎಂದು ಕೆಲವರು ಹೇಳುತ್ತಾರೆ. ಇದು ನಿಜವಲ್ಲ. ಇಂದಿನ ದಿನಗಳಲ್ಲಿ ಅನೇಕ ಪಾಶ್ಚಿಮಾತ್ಯರು ಯೋಗಾಭ್ಯಾಸ ಮಾಡುವುದರಲ್ಲಿ ಎಷ್ಟೋ ಹಿಂದೂಗಳಿಗಿಂತ ಉತ್ತಮ ಮಟ್ಟದಲ್ಲಿದ್ದಾರೆ, ಏಕೆಂದರೆ, ವೈಜ್ಞಾನಿಕ ಪ್ರಗತಿಗಳು ಪಾಶ್ಚಿಮಾತ್ಯರಿಗೆ ಹೆಚ್ಚು ಬಿಡುವಿನ ಸಮಯವನ್ನೊದಗಿಸಿವೆ.

ಜೀವನವನ್ನು ಹೆಚ್ಚು ಸುಲಭವಾಗಿಸಿಕೊಳ್ಳಲು ಹಾಗೂ ಹೆಚ್ಚು ಬಿಡುವಾಗಿಸಿಕೊಳ್ಳಲು ಭಾರತೀಯರು ಪಶ್ಚಿಮದ ಪ್ರಗತಿಶೀಲ ಲೌಕಿಕ ವಿಧಾನಗಳನ್ನು ಹೆಚ್ಚು ಹೆಚ್ಚು ಉಪಯೋಗಿಸಿಕೊಳ್ಳಬೇಕು; ಹಾಗೂ ಪಶ್ಚಿಮದವರು ಭಾರತದಿಂದ, ಯೋಗದ ಪ್ರಾಯೋಗಿಕವಾದ ಆಧ್ಯಾತ್ಮಿಕ ವಿಧಾನಗಳನ್ನು ತೆಗೆದುಕೊಳ್ಳಬೇಕು, ಅದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಭಗವಂತನೆಡೆಗೆ ತನ್ನ ಹಾದಿಯನ್ನು ಕಂಡುಕೊಳ್ಳಬಹುದು.

ಯೋಗವು ಒಂದು ಧಾರ್ಮಿಕ ಪಂಥವಲ್ಲ, ಬದಲಿಗೆ ಅದು ನಾವು ನಮ್ಮ ಭಗವಂತನನ್ನು ಕಂಡುಕೊಳ್ಳಲು ಸಾರ್ವತ್ರಿಕವಾಗಿ ಉಪಯೋಗಿಸಬಹುದಾದಂತಹ ಒಂದು ವಿಜ್ಞಾನವಾಗಿದೆ.

ಯೋಗವು ಪ್ರತಿಯೊಬ್ಬರಿಗಾಗಿ, ಪಶ್ಚಿಮದವರಿಗಾಗಿ ಹಾಗೂ ಪೂರ್ವದವರಿಗಾಗಿ ಕೂಡ. ಟೆಲಿಫೋನ್‌ನ ಸಂಶೋಧನೆ ಪಶ್ಚಿಮದಲ್ಲಿ ಆದ ಮಾತ್ರಕ್ಕೆ ಅದು ಪೂರ್ವದವರಿಗಾಗಿ ಅಲ್ಲ ಎಂದು ಯಾರೂ ಹೇಳುವಂತಿಲ್ಲ. ಅಂತೆಯೇ, ಯೋಗ ವಿಧಾನಗಳು, ಪೂರ್ವದಲ್ಲಿ ವಿಕಸನಗೊಂಡಿದ್ದರೂ, ಅವು ಪೂರ್ವದವರಿಗೆ ಮಾತ್ರವಾಗಿರದೆ ಇಡೀ ಮನುಕುಲಕ್ಕೆ ಉಪಯುಕ್ತವಾಗಿವೆ.

ಒಬ್ಬ ವ್ಯಕ್ತಿಯು ಭಾರತದಲ್ಲಿ ಹುಟ್ಟಿರಲಿ ಅಥವಾ ಅಮೆರಿಕದಲ್ಲಿ ಹುಟ್ಟಿರಲಿ, ಅವನು ಒಂದಲ್ಲಾ ಒಂದು ದಿನ ಸಾಯಲೇ ಬೇಕು. ಅಂದಮೇಲೆ, ಸಂತ ಪಾಲ್‌ನಂತೆ ಭಗವಂತನಲ್ಲಿ “ಪ್ರತಿದಿನ ಸಾಯುವುದು” ಹೇಗೆ ಎಂದು ಏಕೆ ಕಲಿಯಬಾರದು? (I ಕೊರಿಂಥಿಯನ್ಸ್‌ 15:31) ಆ ವಿಧಾನವನ್ನು ಯೋಗವು ಹೇಳಿಕೊಡುತ್ತದೆ.

ಮಾನವನು ಶರೀರದಲ್ಲಿ ಒಬ್ಬ ಕೈದಿಯಂತೆ ಬದುಕುತ್ತಾನೆ; ಅವನ ಕಾಲ ಮುಗಿದಾಗ, ಅವನು ಹೊರದೂಡಲ್ಪಡುವ ಹೀನಾಯಕ್ಕೀಡಾಗುತ್ತಾನೆ. ಆದ್ದರಿಂದ ದೇಹದ ಮೋಹವೆಂದರೆ ಜೈಲಿನ ಮೋಹಕ್ಕಿಂತ ಹೆಚ್ಚಿನದೇನಲ್ಲ. ದೀರ್ಘಕಾಲ ಶರೀರದಲ್ಲಿದ್ದು ರೂಢಿಯಾಗಿರುವುದರಿಂದ ನಾವು ನಿಜವಾದ ಸ್ವಾತಂತ್ರ್ಯವೆಂದರೆ ಏನು ಎಂಬುದನ್ನು ಮರೆತೇಬಿಟ್ಟಿದ್ದೇವೆ. ಪಾಶ್ಚಿಮಾತ್ಯನಾಗಿರುವುದು ಸ್ವಾತಂತ್ರ್ಯವನ್ನರಸದಿರಲು ನೆಪವಲ್ಲ. ಪ್ರತಿಯೊಬ್ಬನೂ ತನ್ನ ಆತ್ಮವನ್ನು ಸಂಶೋಧಿಸುವುದು ಹಾಗೂ ತನ್ನ ಅಮರ ಪ್ರಕೃತಿಯನ್ನು ಅರಿತುಕೊಳ್ಳುವುದು ಬಹಳ ಮುಖ್ಯವಾದದ್ದು. ಯೋಗವು ಅದಕ್ಕೆ ಮಾರ್ಗವನ್ನು ತೋರಿಸುತ್ತದೆ.

ಆತ್ಮವು ಭಗವಂತನೆಡೆಗೆ ಪುನಃ ಆರೋಹಣ ಮಾಡಬೇಕು

ಸೃಷ್ಟಿಯ ಅಸ್ತಿತ್ವಕ್ಕೂ ಮುನ್ನ ವಿಶ್ವಪ್ರಜ್ಞೆಯಿತ್ತು: ಆಕಾರ ಮತ್ತು ಅಭಿವ್ಯಕ್ತಿಗಳಿಗೆ ಮೀರಿದ ಪರಮಾತ್ಮ ಅಥವಾ ಭಗವಂತ, ಪರಿಪೂರ್ಣ, ನಿತ್ಯ ಸತ್ಯ, ನಿತ್ಯ ಪ್ರಜ್ಞ ಹಾಗೂ ನಿತ್ಯನೂತನ ಆನಂದ. ಸೃಷ್ಟಿಯುಂಟಾದಾಗ ವಿಶ್ವ ಪ್ರಜ್ಞೆಯು ಭೌತ ಬ್ರಹ್ಮಾಂಡದೊಳಕ್ಕೆ “ಇಳಿಯಿತು,” ಅಲ್ಲಿ ಅದು ಕ್ರಿಸ್ತ ಪ್ರಜ್ಞೆಯಾಗಿ ಅಭಿವ್ಯಕ್ತವಾಯಿತು, ಅಂದರೆ ಸೃಷ್ಟಿಯೆಲ್ಲೆಡೆ ಅಂತರ್ನಿಹಿತವಾಗಿ ಅಡಗಿರುವ ಭಗವಂತನ ಪ್ರಜ್ಞಾನ ಮತ್ತು ಪ್ರಜ್ಞೆಯ ಸರ್ವವ್ಯಾಪಿ ಪರಿಶುದ್ಧ ಪ್ರತಿಫಲನ.

ಕ್ರಿಸ್ತ ಪ್ರಜ್ಞೆಯು ಮಾನವ ಶರೀರದೊಳಗೆ ಇಳಿದಾಗ ಅದು ಆತ್ಮವಾಗುತ್ತದೆ ಅಥವಾ ಅತೀತ ಪ್ರಜ್ಞೆಯಾಗುತ್ತದೆ; ಶರೀರದ ಆವರಣದಲ್ಲಿ ಪ್ರತ್ಯೇಕ ಅಸ್ತಿತ್ವವನ್ನು ಹೊಂದಿದ ಭಗವಂತನ ನಿತ್ಯ ಪ್ರಸ್ತುತ, ನಿತ್ಯ ಪ್ರಜ್ಞ, ನಿತ್ಯನೂತನ ಆನಂದ. ಆತ್ಮವು ಶರೀರದೊಂದಿಗೆ ಗುರುತಿಸಿಕೊಂಡಾಗ ಅದು ಮರ್ತ್ಯ ಪ್ರಜ್ಞೆಯಾದ ಅಹಂ ಆಗಿ ಪ್ರಕಟಗೊಳ್ಳುತ್ತದೆ. ಆತ್ಮವು ಪರಮಾತ್ಮನೆಡೆಗೆ ಹೋಗಲು ಪ್ರಜ್ಞೆಯ ಸೋಪಾನವನ್ನೇರಬೇಕು ಎಂದು ಯೋಗವು ಬೋಧಿಸುತ್ತದೆ.

[ಟಿಪ್ಪಣಿ: ಆತ್ಮದ ನಿವಾಸವು ಅಂದರೆ ಮಾನವನ ಚೇತನ ಮತ್ತು ದಿವ್ಯಪ್ರಜ್ಞೆಯ ನಿವಾಸವು ಮಿದುಳಿನ ಸೂಕ್ಷ್ಮ ಆಧ್ಯಾತ್ಮಿಕ ಕೇಂದ್ರಗಳಾದ ಸಹಸ್ರಾರ, ಪ್ರಧಾನ ಮಸ್ತಿಷ್ಕದ ಮೇಲಿರುವ ಸಹಸ್ರ ದಳಗಳ ಪದ್ಮ, ವಿಶ್ವ ಪ್ರಜ್ಞೆಯ ಆಸನ; ಕೂಟಸ್ಥ, ಭ್ರೂಮಧ್ಯೆಯಿರುವ ಬಿಂದು, ಕ್ರಿಸ್ತ ಪ್ರಜ್ಞೆಯ ಕೇಂದ್ರ; ಹಾಗೂ ಅತೀತ ಪ್ರಜ್ಞೆಯ ಸ್ಥಾನವು ಹಿಮ್ಮೆದುಳಿನ ಕೇಂದ್ರ (ಕೂಟಸ್ಥದೊಂದಿಗೆ ಧ್ರುವೀಯತೆಯಿಂದ ಸಂಪರ್ಕ ಹೊಂದಿದೆ)ದಲ್ಲಿದೆ ಎಂದು ಯೋಗವು ಬೋಧಿಸುತ್ತದೆ. ಚೇತನ ಮತ್ತು ಪ್ರಜ್ಞೆಗಳು ಅತ್ಯುನ್ನತ ಆಧ್ಯಾತ್ಮಿಕ ಗ್ರಹಿಕೆಗಳಾದ ಈ ಕೇಂದ್ರಗಳಿಂದ ಶರೀರ (ಹಾಗೂ ಶರೀರ-ಪ್ರಜ್ಞೆ)ದೊಳಗಿಳಿದು ಮೇರುದಂಡದಲ್ಲಿರುವ ಐದು ಸೂಕ್ಷ್ಮ ಬೆನ್ನುಹುರಿ ಕೇಂದ್ರಗಳ (ಚಕ್ರಗಳು) ಮೂಲಕ ಹಾದು ಹೋಗಿ ಹೊರ ಹರಿದು ಚೇತನದ ದೈಹಿಕ ಅಂಗಗಳು, ಜ್ಞಾನೇಂದ್ರಿಯಗಳು ಮತ್ತು ಕರ್ಮೇಂದ್ರಿಯಗಳಿಗೆ ಶಾಖೆಗಳಾಗಿ ಹೋಗುತ್ತವೆ.

ಭಗವಂತನೊಂದಿಗೆ ಏಕತ್ವದ ಆನಂದದಾಯಕ ಅನುಭೂತಿಯನ್ನು ಪುನಃ ಪ್ರಾಪ್ತಿಸಿಕೊಳ್ಳಲು ಮನುಷ್ಯನ ಆತ್ಮವು ತನ್ನ ಅಧೋಮುಖ ಪಥದಿಂದ, ಪವಿತ್ರ ಮೇರುದಂಡದ ಮಾರ್ಗದಲ್ಲಿ ಊರ್ಧ್ವಮುಖವಾಗಿ ಚಲಿಸಿ ದಿವ್ಯ ಪ್ರಜ್ಞೆಯ ಉನ್ನತ ಮಸ್ತಿಷ್ಕ ಕೇಂದ್ರಗಳಲ್ಲಿರುವ ತನ್ನ ನಿವಾಸಕ್ಕೆ ಹಿಂದಿರುಗಬೇಕಾಗುತ್ತದೆ. ಗುರುವಿತ್ತ ಯೋಗ ಧ್ಯಾನದ ವೈಜ್ಞಾನಿಕ ತಂತ್ರಗಳಿಂದ ಅಂದರೆ ಯೋಗದಾ ಸತ್ಸಂಗ ಪಾಠಗಳಿಂದ ಕಲಿಯಬಹುದಾದಂಥವುಗಳನ್ನು ಅನುಷ್ಠಾನ ಮಾಡುವುದರಿಂದ ಇದನ್ನು ಸಾಧಿಸಬಹುದು.]

ಸಂತೋಷದ ರಹಸ್ಯವೆಂದರೆ ದಿವ್ಯ ಉಪಸ್ಥಿತಿಯ ಅರಿವಿನಲ್ಲಿರುವುದು

ಜೀವನವನ್ನು ಸುಖಿಸುವುದೇನೋ ಪರವಾಗಿಲ್ಲ; ಆದರೆ ಸುಖದ ರಹಸ್ಯವೇನೆಂದರೆ, ಯಾವುದಕ್ಕೂ ಅಂಟಿಕೊಳ್ಳದಿರುವುದು. ಹೂವಿನ ಪರಿಮಳವನ್ನನುಭವಿಸಿರಿ, ಆದರೆ ಅದರಲ್ಲಿ ಭಗವಂತನನ್ನು ಕಾಣಿರಿ.

ನಾನು ನನ್ನ ಇಂದ್ರಿಯಗಳ ಪ್ರಜ್ಞೆಯನ್ನು ಉಪಯೋಗಿಸಿಕೊಂಡು ಸದಾ ಭಗವಂತನನ್ನು ಗ್ರಹಿಸಬಹುದು ಮತ್ತು ಅವನ ಬಗ್ಗೆ ಚಿಂತಿಸಬಹುದು ಎಂಬ ಕಾರಣಕ್ಕಾಗಿ ಮಾತ್ರ ಅವುಗಳನ್ನು ಇಟ್ಟುಕೊಂಡಿದ್ದೇನೆ. “ನನ್ನ ಕಂಗಳು ಎಲ್ಲೆಡೆ ನಿನ್ನ ಸೌಂದರ್ಯವನ್ನು ಕಾಣಲೆಂದು ಸೃಷ್ಟಿಯಾಗಿವೆ. ನನ್ನ ಕಿವಿಗಳು ನಿನ್ನ ಸರ್ವವ್ಯಾಪಿ ದನಿಯನ್ನು ಕೇಳಲೆಂದು ಸೃಷ್ಟಿಯಾಗಿವೆ.” ಇದೇ ಯೋಗ, ಭಗವಂತನೊಡನೆಯ ಸಾಯುಜ್ಯ.

ಅವನನ್ನು ಕಾಣಲು ಕಾಡಿಗೆ ಹೋಗುವ ಅವಶ್ಯಕತೆಯೇನಿಲ್ಲ. ನಾವು ನಮ್ಮನ್ನು ಪ್ರಾಪಂಚಿಕ ಹವ್ಯಾಸಗಳಿಂದ ಮುಕ್ತಗೊಳಿಸಿಕೊಳ್ಳುವವರೆಗೆ ನಾವೆಲ್ಲಿದ್ದರೂ ಅವು ನಮ್ಮನ್ನು ಗಟ್ಟಿಯಾಗಿ ಹಿಡಿದಿಡುತ್ತವೆ. ಯೋಗಿಯು ಭಗವಂತನನ್ನು ತನ್ನ ಹೃದಯ ಗಹ್ವರದಲ್ಲಿ ಕಂಡುಕೊಳ್ಳಲು ಕಲಿತುಕೊಳ್ಳುತ್ತಾನೆ. ಅವನೆಲ್ಲಿಗೇ ಹೋದರೂ ತನ್ನೊಂದಿಗೆ ಭಗವಂತನ ಸಾನ್ನಿಧ್ಯದ ಆನಂದಮಯ ಪ್ರಜ್ಞೆಯನ್ನು ಹೊತ್ತೊಯ್ಯುತ್ತಾನೆ.

ಮಾನವನು ಮರ್ತ್ಯ ಇಂದ್ರಿಯ ಪ್ರಜ್ಞೆಯೊಳಗೆ ಇಳಿದಿರುವುದಷ್ಟೇ ಅಲ್ಲ, ಅವನು ಇಂದ್ರಿಯ ಪ್ರಜ್ಞೆಯ ವಿಕೃತಿಗಳಾದ ದುರಾಸೆ, ಕೋಪ, ಮತ್ಸರ ಮುಂತಾದವುಗಳಿಂದ ಬಂಧನಕ್ಕೂ ಒಳಗಾಗಿದ್ದಾನೆ. ಭಗವಂತನನ್ನು ಕಾಣಬೇಕೆಂದರೆ, ಮಾನವನು ಈ ವಿಕೃತಿಗಳನ್ನು ದೂರಮಾಡಬೇಕು. ಪೌರ್ವಾತ್ಯರು ಹಾಗೂ ಪಾಶ್ಚಿಮಾತ್ಯರಿಬ್ಬರೂ ಇಂದ್ರಿಯ ದಾಸ್ಯದಿಂದ ಮುಕ್ತರಾಗಬೇಕು.

ಒಬ್ಬ ಸಾಮಾನ್ಯ ಮನುಷ್ಯ ಬೆಳಗಿನ ಕಾಫಿ ಬರಲಿಲ್ಲವೆಂದು ಕೋಪಗೊಳ್ಳಬಹುದು ಮತ್ತು ಅದು ಸಿಗದಿರುವುದರಿಂದ ತನಗೆ ತಲೆನೋವು ಬರುವುದು ಖಂಡಿತ ಎಂದುಕೊಳ್ಳುತ್ತಾನೆ. ಅವನು ತನ್ನ ಹವ್ಯಾಸಗಳಿಗೆ ದಾಸನಾಗಿರುತ್ತಾನೆ. ಅದೇ ಪ್ರೌಢನಾದ ಯೋಗಿಯು ಇವೆಲ್ಲವುಗಳಿಂದ ಮುಕ್ತನಾಗಿರುತ್ತಾನೆ. ಪ್ರತಿಯೊಬ್ಬನೂ ಈಗ ತಾನಿರುವ ಜಾಗದಲ್ಲೇ ಯೋಗಿಯಾಗಬಹುದು. ಆದರೆ ನಮ್ಮದೇ ಜೀವನದ ಅಭ್ಯಾಸಗಳ ಕ್ಷಿತಿಜದಿಂದಾಚೆಗಿರುವ ಯಾವುದನ್ನೇ ಆದರೂ ನಾವು ಅಪರಿಚಿತ ಮತ್ತು ಕಷ್ಟಸಾಧ್ಯ ಎಂದು ಯೋಚಿಸುವ ಪ್ರವೃತ್ತಿಯುಳ್ಳವರಾಗಿದ್ದೇವೆ. ಬೇರೆಯವರಿಗೆ ನಮ್ಮ ಅಭ್ಯಾಸಗಳು ಹೇಗೆ ಕಾಣಬಹುದು ಎಂದು ನಾವು ಯೋಚಿಸುವುದೇ ಇಲ್ಲ!

ಯೋಗದ ಅಭ್ಯಾಸವು ಮುಕ್ತಿಯತ್ತ ಮುನ್ನಡೆಸುತ್ತದೆ. ಕೆಲವು ಯೋಗಿಗಳು ಈ ನಿರ್ಮೋಹದ ವಿಚಾರವನ್ನು ಅತಿರೇಕಕ್ಕೊಯ್ಯುತ್ತಾರೆ. ಅವರು, ಒಬ್ಬನು ಮೊಳೆಗಳ ಹಾಸಿಗೆಯ ಮೇಲೆ ಯಾವುದೇ ಕಷ್ಟವಿಲ್ಲದೆ ಮಲಗಲು ಮತ್ತು ಇನ್ನಿತರ ತಪಸ್ಸುಗಳನ್ನು ಹಾಗೂ ಶಾರೀರಿಕ ಶಿಸ್ತುಗಳನ್ನು ಪಾಲಿಸಲು ಸಿದ್ಧನಿರಬೇಕು ಎಂದು ಕಲಿಸುತ್ತಾರೆ. ಮೊಳೆಗಳ ಹಾಸಿಗೆಯ ಮೇಲೆ ಕುಳಿತು ಭಗವಚ್ಚಿಂತನೆ ಮಾಡಲು ಸಾಧ್ಯವಿರುವವನಿಗೆ ಮಹಾನ್‌ ಮನೋಬಲವಿದೆ ಎಂದು ತೋರಿಸುತ್ತದೆ ಎನ್ನುವುದು ನಿಜ. ಆದರೆ ಅಂತಹ ಸಾಹಸಗಳ ಅವಶ್ಯಕತೆಯಿಲ್ಲ. ಒಬ್ಬನು ಒಂದು ಸುಖಾಸೀನದ ಮೇಲೆ ಕುಳಿತೂ ಭಗವಂತನನ್ನು ಕುರಿತು ಧ್ಯಾನ ಮಾಡಬಹುದು.

ಮೇರುದಂಡವನ್ನು ನೇರವಾಗಿರಿಸುವ ಯಾವುದೇ ಭಂಗಿಯು ಧ್ಯಾನಕ್ಕೆ ಅಂದರೆ ಭಗವಂತನ ಮೇಲಿನ ಯೌಗಿಕ ಏಕಾಗ್ರತೆಗೆ ಸೂಕ್ತವಾದುದು ಎಂದು ಪತಂಜಲಿ ಕಲಿಸುತ್ತಾನೆ.

ಹಠಯೋಗದಲ್ಲಿ ಶಿಫಾರಸು ಮಾಡಿರುವಂತಹ ಶರೀರದ ತಿರಿಚುವಿಕೆಗಳು ಅಥವಾ ಅಸಾಧಾರಣ ಶಾರೀರಿಕ ಸಹಿಷ್ಣುತೆ ಮತ್ತು ಬಾಗುವಿಕೆಯ ವ್ಯಾಯಾಮಗಳ ಅಭ್ಯಾಸದ ಅವಶ್ಯಕತೆಯಿಲ್ಲ. ಉದ್ದೇಶ, ಭಗವಂತ; ನಾವು ಕೆಲಸ ಮಾಡಬೇಕಾಗಿರುವುದು ಅವನ ಸಾನ್ನಿಧ್ಯದ ಪರಿವೆಯತ್ತ.

ಭಗವದ್ಗೀತೆಯು ಹೇಳುತ್ತದೆ: “ಯಾರು ತನ್ನ ಆತ್ಮವನ್ನು ನನ್ನಲ್ಲಿ ತಲ್ಲೀನಗೊಳಿಸಿ ಭಕ್ತಿಯಿಂದ ನನ್ನಲ್ಲಿ ಐಕ್ಯಗೊಳ್ಳುವನೋ, ಅವನನ್ನು ಎಲ್ಲ ಶ್ರೇಣಿಗಳ ಯೋಗಿಗಳಲ್ಲಿ ಅತ್ಯಂತ ಸಮತೂಕವುಳ್ಳವನು ಎಂದು ನಾನು ಪರಿಗಣಿಸುತ್ತೇನೆ” (VI:47).

ವಿಪರೀತ ಶೀತೋಷ್ಣಗಳು, ಸೊಳ್ಳೆಗಳು ಮತ್ತು ಇನ್ನಿತರ ಕಿರಿಕಿರಿಗೊಳಿಸುವ ಕೀಟಗಳಿಗೆ ಉಪೇಕ್ಷೆ ತೋರುವುದರಲ್ಲಿ ಹಿಂದೂ ಯೋಗಿಗಳು ಪ್ರಸಿದ್ಧರು. ಒಬ್ಬ ಯೋಗಿಯಾಗಲು ಅಂತಹ ತೋರ್ಪಡಿಕೆಯೇನೂ ಬೇಕಿಲ್ಲ, ಆದರೆ ಅದು ಒಬ್ಬ ನಿಪುಣ ಯೋಗಿಯ ಸ್ವಾಭಾವಿಕ ಸಾಧನೆ.

ಅಡಚಣೆ ಉಂಟುಮಾಡುವಂತಹ ಅಂಶಗಳನ್ನು ನಿವಾರಿಸಲು; ಅಥವಾ ಅವಶ್ಯಕತೆಯಿದ್ದಾಗ, ಆಂತರಿಕವಾಗಿ ವಿಚಲಿತಗೊಳ್ಳದೆ ಅವುಗಳನ್ನು ಸಹಿಸಿಕೊಳ್ಳಲು ಪ್ರಯತ್ನಿಸಿ. ಒಬ್ಬನು ಸ್ವಚ್ಛವಾಗಿರಲು ಸಾಧ್ಯವಾದರೆ, ಮಲಿನವಾಗಿರುವುದರಲ್ಲಿ ಅರ್ಥವಿಲ್ಲ. ಒಬ್ಬನು ಒಂದು ಗುಡಿಸಿನಲ್ಲಿರುವುದಕ್ಕೂ ಅಂಟಿಕೊಂಡಿರಬಹುದು ಹಾಗೂ ಅರಮನೆಯಲ್ಲಿರುವುದಕ್ಕೂ ಅಂಟಿಕೊಂಡಿರಬಹುದು.

ಆಧ್ಯಾತ್ಮಿಕ ಯಶಸ್ಸನ್ನು ಸಾಧಿಸುವಲ್ಲಿ ಅತ್ಯುನ್ನತ ಅಂಶವೆಂದರೆ ಸ್ವಸಂತೋಷದಿಂದ ಸಿದ್ಧವಾಗಿರುವುದು. ಏಸುವು ಹೇಳಿದ್ದಾನೆ, “ಫಸಲು ನಿಜವಾಗಿಯೂ ವಿಪುಲವಾಗಿದೆ, ಆದರೆ ಕಾರ್ಮಿಕರು ಕೆಲವೇ ಜನ” (ಮ್ಯಾಥ್ಯೂ 9:37). ಲೌಕಿಕ ಜನರು ಭಗವಂತನ ಕೊಡುಗೆಗಳನ್ನರಸುತ್ತಾರೆ, ಆದರೆ ಜಾಣನಾದವನು ಅವುಗಳ ದಾತನನ್ನೇ ಅರಸುತ್ತಾನೆ.

ಯೋಗಿಯಾಗಿರುವುದೆಂದರೆ ಧ್ಯಾನ ಮಾಡುವುದು. ಯೋಗಿಯಾದವನು ಬೆಳಗ್ಗೆ ಎದ್ದಕೂಡಲೆ ಮೊದಲು ತನ್ನ ಶರೀರಕ್ಕೆ ಬೇಕಾದ ಆಹಾರದ ಬಗ್ಗೆ ಯೋಚಿಸುವುದಿಲ್ಲ; ಅವನು ತನ್ನ ಆತ್ಮಕ್ಕೆ ಭಗವಂತನ ಸಂಸರ್ಗದ ಅಮೃತವನ್ನು ಉಣಬಡಿಸುತ್ತಾನೆ.

ಆಳವಾಗಿ ಮುಳುಗುವ ತನ್ನ ಧ್ಯಾನಸ್ಥ ಮನಸ್ಸಿನಿಂದ ದೊರೆತ ಸ್ಫೂರ್ತಿ ತುಂಬಿಕೊಂಡ ಅವನು ದಿನದ ಎಲ್ಲ ಕರ್ತವ್ಯಗಳನ್ನೂ ಸಂತೋಷದಿಂದ ಮಾಡಬಲ್ಲವನಾಗುತ್ತಾನೆ.

ಭಗವಂತ, ಉದ್ದೇಶವಿಟ್ಟುಕೊಂಡೇ ಈ ಭೂಮಿಯನ್ನು ಈಗಿರುವಂತೆ ಮಾಡಿದ್ದಾನೆ; ಅವನ ಯೋಜನೆಯಲ್ಲಿ, ಜಗತ್ತನ್ನು ಉತ್ತಮಗೊಳಿಸುವುದು ಮಾನವನ ಕೆಲಸ. ಪಾಶ್ಚಿಮಾತ್ಯನಲ್ಲಿ ಹೊಸ ಮತ್ತು ಸುಧಾರಿತ ಲೌಕಿಕ ಸೌಕರ್ಯಗಳನ್ನು ಗಳಿಸುವಲ್ಲಿ ಸದಾ ನಿರತನಾಗಿರುವ ಪ್ರವೃತ್ತಿಯು ಅತಿರೇಕಕ್ಕೆ ಹೋಗಿರುತ್ತದೆ. ಪೌರ್ವಾತ್ಯನು ತನಗಿರುವುದರಲ್ಲೇ ತೃಪ್ತಿ ಪಟ್ಟುಕೊಳ್ಳುವ ಪ್ರವೃತ್ತಿಯಲ್ಲಿ ಅತಿರೇಕಕ್ಕೆ ಹೋಗುತ್ತಾನೆ. ಪಶ್ಚಿಮದ ಮುನ್ನುಗ್ಗುವ ಉತ್ಸಾಹ ಮತ್ತು ಪೂರ್ವದ ಸರಳ, ಶಾಂತ ಸ್ವಭಾವ ಎರಡರಲ್ಲೂ ಏನೋ ಒಂದು ವಿಶೇಷ ಆಕರ್ಷಣೆಯಿದೆ. ನಾವು ಇವೆರಡರ ನಡುವಿನ ಸಮತೋಲಿತ ಹಾದಿಯನ್ನು ಬಳಸಬೇಕು.

ಧ್ಯಾನವು ಯೋಗಿಯನ್ನಾಗಿ ಮಾಡುತ್ತದೆ

ಭಗವಂತನನ್ನು ಕಾಣಬೇಕಾದರೆ, ಒಬ್ಬನು ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ, ಹಾಗೂ ದಿನದಲ್ಲಿ ಸ್ವಲ್ಪ ಬಿಡುವು ಸಿಕ್ಕಾಗಲೆಲ್ಲ ಧ್ಯಾನ ಮಾಡಬೇಕು. ಅದರ ಜೊತೆಗೆ, ವಾರದಲ್ಲಿ ಒಂದು ದಿನ ಆರು ಗಂಟೆಗಳ ಕಾಲ ಧ್ಯಾನ ಮಾಡುವುದು ಮುಖ್ಯ. ಇದು ಅಸಮಂಜಸವಾದುದೇನಲ್ಲ; ಕೆಲವು ಜನರು ವಾರದ ಪ್ರತಿದಿನ ಹತ್ತು ಗಂಟೆಗಳ ಕಾಲ ಪಿಯಾನೋ ಮುಂದೆ ಕುಳಿತು ಅಭ್ಯಾಸ ಮಾಡುತ್ತಾರೆ, ಹಾಗೂ ಅದು ವಿಶೇಷವೆಂದೇನೂ ಅವರಿಗೆ ಅನಿಸುವುದಿಲ್ಲ. ಆಧ್ಯಾತ್ಮದಲ್ಲಿ ಪ್ರವೀಣನಾಗಬೇಕಾದರೆ, ಭಗವಂತನಿಗೆ ಹೆಚ್ಚು ಸಮಯ ಕೊಡುವುದು ಅವಶ್ಯಕ. ಅವನನ್ನು ಬೇರೆಲ್ಲದಕ್ಕಿಂತ ಹೆಚ್ಚು ಪ್ರೇಮಿಸುತ್ತೇವೆ ಎಂದು ಅವನಿಗನಿಸುವಂತೆ ನಾವು ಮಾಡಬೇಕು. ಧ್ಯಾನದಲ್ಲಿ ನೀವು ಅನುಭವಿಗಳಾದಾಗ, ಅತೀತಪ್ರಜ್ಞೆಯ ಆಳಕ್ಕಿಳಿಯಲು ಸಾಧ್ಯವಾದಾಗ, ಐದು ಗಂಟೆಗಳ ನಿದ್ದೆ ಸಾಕಾಗುತ್ತದೆ. ರಾತ್ರಿಯ ಉಳಿದ ಸಮಯವನ್ನು ಧ್ಯಾನಕ್ಕಾಗಿ ಉಪಯೋಗಿಸಬೇಕು. ಭಗವಂತನನ್ನು ಕುರಿತು ಧ್ಯಾನ ಮಾಡಲು ಒಬ್ಬನು ರಾತ್ರಿಗಳನ್ನು, ನಸುಕುಗಳನ್ನು ಮತ್ತು ರಜಾದಿನಗಳನ್ನು ಉಪಯೋಗಿಸಿಕೊಳ್ಳಬಹುದು. ಈ ರೀತಿಯಲ್ಲಿ ಯಾರಾದರೂ ಅಂದರೆ ಅತಿ ಕಾರ್ಯನಿರತ ಪಾಶ್ಚಿಮಾತ್ಯನೂ ಕೂಡ ಯೋಗಿಯಾಗಬಹುದು. ಆದ್ದರಿಂದ ಪಶ್ಚಿಮದ ಯೋಗಿಯಾಗಿ. ನೀವು ನನ್ನಂತೆ ಪೇಟವನ್ನು ಧರಿಸಬೇಕಿಲ್ಲ ಅಥವಾ ಉದ್ದ ಕೂದಲನ್ನು ಬೆಳೆಸಬೇಕಿಲ್ಲ!

ನಮಗೆ ಚರ್ಚುಗಳ “ಜೇನುಗೂಡುಗಳು” ಬೇಕಾಗಿವೆ. ಅಷ್ಟೇ ಅಲ್ಲದೆ, ನಾವು ಆ ಚರ್ಚುಗಳನ್ನು ನಮ್ಮದೇ ಆತ್ಮಸಾಕ್ಷಾತ್ಕಾರದ ಜೇನಿನಿಂದ ತುಂಬಿಸಲೂ ಬೇಕು. ಖಂಡಿತವಾಗಿ ಭಗವಂತ ಚರ್ಚುಗಳಲ್ಲೂ ಇದ್ದಾನೆ; ಆದರೆ ನೀವು ಅಲ್ಲಿಗೆ ಕೇವಲ ಹೋಗುವುದರಿಂದ ಮಾತ್ರ ಅವನು ಕಾಣಿಸಿಕೊಳ್ಳುವಂತೆ ಅವನನ್ನು ಒಲಿಸಲು ಸಾಧ್ಯವಿಲ್ಲ. ಚರ್ಚಿಗೆ ಹೋಗುವುದು ಒಳ್ಳೆಯದೇ, ಆದರೆ ದಿನವೂ ಧ್ಯಾನ ಮಾಡುವುದು ಇನ್ನೂ ಒಳ್ಳೆಯದು. ಎರಡನ್ನೂ ಮಾಡಿ. ಏಕೆಂದರೆ, ಚರ್ಚಿಗೆ ಹೋಗುವುದರಿಂದ ನಿಮಗೆ ಖಂಡಿತವಾಗಿ ಪ್ರೇರಣೆಯುಂಟಾಗುತ್ತದೆ; ಮತ್ತು ದಿನವೂ ಧ್ಯಾನ ಮಾಡಿದರೆ, ನಿಮಗೆ ಇನ್ನೂ ಹೆಚ್ಚಿನ ಉನ್ನತಿಯುಂಟಾಗುತ್ತದೆ. ಭಕ್ತನ ಹೃದಯವು ಹೊತ್ತಿ ಉರಿದಾಗ ಮತ್ತು ಅವನು ಪ್ರಾರ್ಥನೆಯ ಗುಂಡುಗಳನ್ನು ಒಂದಾದ ಮೇಲೆ ಒಂದರಂತೆ ಎಸೆಯತೊಡಗಿದಾಗ ಭಗವಂತ ಅವನಿಗೆ ಒಲಿಯುತ್ತಾನೆ. ಅವನನ್ನು ಕಾಣಬೇಕೆಂದರೆ, ಅಂತಹ ಅವಿರತ ಭಕ್ತಿಯು ಅನಿವಾರ್ಯ. ಯೋಗಿಯಾಗಿದ್ದುಕೊಂಡೂ ಆಧುನಿಕ ಜಗತ್ತಿನ ಜೊತೆಗೆ ಹೆಜ್ಜೆ ಹಾಕಬೇಕೆಂದರೆ, ಮನೆಯಲ್ಲಿ ಧ್ಯಾನ ಮಾಡುವುದು, ತನ್ನನ್ನು ಶಿಸ್ತಿಗೊಳಪಡಿಸಿಕೊಳ್ಳುವುದು, ಹಾಗೂ ಎಲ್ಲ ಕರ್ತವ್ಯಗಳನ್ನೂ ಅವು ಭಗವಂತನ ಸೇವೆಯೆಂಬ ಮನೋಭಾವದಿಂದ ಮಾಡುವುದು ಅವಶ್ಯಕ.

ನನ್ನ ಅತ್ಯಂತ ದೊಡ್ಡ ಆಸೆಯೆಂದರೆ, ಮಾನವರ ಆತ್ಮಗಳಲ್ಲಿ ಭಗವಂತನ ಮಂದಿರಗಳನ್ನು ಸ್ಥಾಪಿಸುವುದು; ಜನರ ಮುಖಗಳಲ್ಲಿ ಭಗವಂತನ ನಗುವನ್ನು ಕಾಣುವುದು. ಇಡೀ ಜೀವನದ ಅತ್ಯಂತ ಮುಖ್ಯ ಸಾಧನೆಯೆಂದರೆ, ಒಬ್ಬನು ತನ್ನದೇ ಆತ್ಮದಲ್ಲಿ ಭಗವಂತನ ಮಂದಿರವನ್ನು ಸ್ಥಾಪಿಸಿಕೊಳ್ಳುವುದು. ಅದನ್ನು ಸುಲಭವಾಗಿ ಮಾಡಬಹುದು. ಅದಕ್ಕಾಗಿಯೇ ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ ಅನ್ನು ಪಶ್ಚಿಮಕ್ಕೆ ಕಳಿಸಲಾಯಿತು.

ತನ್ನ ಆತ್ಮದಲ್ಲಿ ಭಗವಂತನ ಮಂದಿರವನ್ನು ಸ್ಥಾಪಿಸಿಕೊಂಡ ಯಾರೇ ಆದರೂ, ಅವನು ಒಬ್ಬ ಯೋಗಿಯೇ. ಅವನು, ಯೋಗವು ಪೂರ್ವದವರಿಗೆ, ಉತ್ತರದವರಿಗೆ, ದಕ್ಷಿಣದವರಿಗೆ ಮತ್ತು ಪಶ್ಚಿಮದವರಿಗೆ—ಎಲ್ಲರಿಗೂ, ಹಾಗೂ ಯೋಗದ ಹೆದ್ದಾರಿಯನ್ನು ಕೂಡಿಕೊಳ್ಳಲು ಅವರು ಧರ್ಮಶಾಸ್ತ್ರದ ಉಪಹಾದಿಯನ್ನು ಹಿಡಿಯಬಹುದು ಎಂದು ನನ್ನೊಂದಿಗೆ ಹೇಳಬಹುದು. ಸರಿಯಾದ ಹಾದಿ ಭಗವದಾನಂದದ ಅರಮನೆಗೆ ಕೊಂಡೊಯ್ಯುತ್ತದೆ. ಒಬ್ಬ ಒಮ್ಮೆ ಅದನ್ನು ತಲುಪಿದ ಮೇಲೆ, “ಹೊರಹೋಗಬೇಕಾದುದಿಲ್ಲ” (ರಿವಿಲೇಷನ್‌ 3:12).

ಹೆಚ್ಚಿನ ಅನ್ವೇಷಣೆಗಾಗಿ

ಇದನ್ನು ಹಂಚಿಕೊಳ್ಳಿ