ಗುರುವಿನ ಲಾಂಛನವನ್ನು ಎತ್ತಿ ಹಿಡಿಯುವುದು

ಸ್ವಾಮಿ ಶ್ಯಾಮಾನಂದಗಿರಿಯವರ ಅದಮ್ಯ ಜೀವನ

ಬಿನಯೇಂದ್ರ ನಾರಾಯಣ ಅವರು ಶ್ರೀ ಮತ್ತು ಶ್ರೀಮತಿ ಗೋಕುಲ ಪ್ರಸಾದ್ ನಾರಾಯಣ ದುಬೆಯವರಿಗೆ ಉತ್ತರ ಪ್ರದೇಶದ ಬಾಂದಾನಲ್ಲಿ 4 ಮೇ, 1911ರಲ್ಲಿ ಜನಿಸಿದರು. ಅವರು ಸ್ವಾಮಿ ಶ್ಯಾಮಾನಂದಗಿರಿಯಾಗಿ ಆಗಸ್ಟ್ 28,1971ರಲ್ಲಿ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ ಸೆಲ್ಫ್- ರಿಯಲೈಝೇಷನ್ ಫೆಲೋಶಿಪ್ ನ ಲಾಸ್ ಏಂಜಲೀಸ್ ನ ಅಂತರ ರಾಷ್ಟ್ರೀಯ ಪ್ರಧಾನ ಕಛೇರಿಯಲ್ಲಿ ದೇಹವನ್ನು ತ್ಯಜಿಸಿದರು. ಇವೆರಡರ ನಡುವೆ ಏನು ನಡೆಯಿತು ಎಂಬುದು ಈಗ ಒಂದು ಇತಿಹಾಸಕ್ಕಿಂತಲೂ ಮಿಗಿಲಾಗಿದುದಾಗಿದೆ: ಇದು, ಅವರನ್ನು ತಿಳಿದಿರುವವರಿಗೆ ಮತ್ತು ಮುಂಬರುವ ಪೀಳಿಗೆಗಳಲ್ಲಿ ಅವರ ಜೀವನ ಮತ್ತು ಕಾರ್ಯಗಳ ಪ್ರಮುಖ ದೃಷ್ಟಾಂತಗಳ ಮೂಲಕ ಅವರನ್ನು ತಿಳಿದುಕೊಳ್ಳುವವರಿಗೆ ವಿಶ್ವಾಸ, ಶಕ್ತಿ, ಸಮರ್ಪಣೆ, ನಿಸ್ವಾರ್ಥತೆ ಮತ್ತು ಸ್ಫೂರ್ತಿಯ ಪರಂಪರೆಯಾಗಿದೆ.

ಅವರ ನಿಲುವು ಮತ್ತು ಮುಖಚರ್ಯೆಗಳೇ ಗೌರವವನ್ನು ಪಡೆಯುವಂತಿದ್ದವು; ಅವರ ಸಾಮರ್ಥ್ಯಗಳು ನಾಯಕತ್ವ ಹಾಗೂ ಅಧಿಕಾರವನ್ನು ಪಡೆಯುವ ಶಕ್ತಿ ಹೊಂದಿದ್ದವು. ಪ್ರಪಂಚವೇ ಪಕ್ಕಕ್ಕೆ ಸರಿದು ಅವುಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಅಥವಾ ಪ್ರಶ್ನಿಸದೇ ಅವುಗಳನ್ನು ಅವರಿಗೆ ನೀಡಿತ್ತು. ಅವರು ಯಾರಿಗೆ ತಮ್ಮ ಆಂತರ್ಯದ ವ್ಯಕ್ತಿತ್ವವನ್ನು ಪ್ರಕಟಿಸಿದರೋ, ಅವರೂ ಸಹ ತಮ್ಮ ಅಗಣಿತ ಪ್ರೇಮವನ್ನು ನೀಡಿದರು ಮತ್ತು ನಿಜವಾಗಿಯೂ ಅವರ ಜೀವನದ ವರುಷಗಳು ಉರುಳುತ್ತಿದ್ದಂತೆ ಅವರ ಆಂತರ್ಯದ ವ್ಯಕ್ತಿತ್ವವೇ ಅವರ ಪರಿಪೂರ್ಣ ವ್ಯಕ್ತಿತ್ವವಾಯಿತು.

“ಅವನೇನೂ ಸಾಮಾನ್ಯ ಶಿಶುವಲ್ಲ; ಅವನು ಸಾಮಾನ್ಯ ಜಗತ್ತಿಗೆ ಸೇರಿದವನಲ್ಲ. ಅವನ ಜೀವನದ ಪಥವು ನಿಶ್ಚಿತವಾಗಿದೆ; ಅವನು ತನ್ನದೇ ಮಾರ್ಗವನ್ನು ಅನುಸರಿಸಲಿ.” ಈ ಭವಿಷ್ಯವಾಣಿಯು ಬಿನಯೇಂದ್ರನ ತಾಯಿ, ತಮ್ಮ 3 ವರ್ಷದ ಪುಟ್ಟ ಮಗ ಹಾಗೂ ಇಬ್ಬರು ಹಿರಿಯ ಹೆಣ್ಣು ಮಕ್ಕಳನ್ನು ಬಿಟ್ಟು, ಮರಣಿಸುವ ಮೊದಲು ನುಡಿದ ಮಾತುಗಳು. ಅವರೇನಾದರೂ ತಮ್ಮ ಮಗನ ಭವಿಷ್ಯವನ್ನು ಕಂಡಿದ್ದರೇ? ಅಥವಾ ಮಗುವು ನಡೆಯಲು ಆರಂಭಿಸಿದ ಕೂಡಲೇ, ತನಗೆ ತಾನೇ ಹತ್ತಿರದ ದೇವಾಲಯದ ಪರಿಸರದಲ್ಲಿ ತಿರುಗಾಡುವುದನ್ನು ಗಮನಿಸಿದ್ದರಷ್ಟೇಯೆ?

“ದೇವಾಲಯವು ನನ್ನನ್ನು ಏಕೆ ಆಕರ್ಷಿಸಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಲು ನಾನು ಬಹಳ ಸಣ್ಣವನಿದ್ದೆ,” ಶ್ಯಾಮಾನಂದರು ತಮ್ಮ ನಂತರದ ವರ್ಷಗಳಲ್ಲಿ ನೆನಪಿಸಿಕೊಳ್ಳುತ್ತಿದ್ದರು. “ನನಗೆ ಕೇವಲ ತಿಳಿದಿರುವುದು ಇಷ್ಟೇ, ಅಲ್ಲಿರುವಾಗ ನನಗೆ ಹಾಯಾಗಿ ಇರುವಂತೆ ಭಾಸವಾಗುತ್ತಿತ್ತು. ಆದರೆ ನಾನು ಕಾಣೆಯಾದುದು ನನ್ನ ಕುಟುಂಬದ ಗಮನಕ್ಕೆ ಬಂದಾಗಲೆಲ್ಲ ಅದು ಆತಂಕಕ್ಕೆ ಕಾರಣವಾಗುತ್ತಿತ್ತು ಮತ್ತು ಹೆಚ್ಚಾಗಿ ನನಗೆ ಬೈಗುಳಗಳ ಪೆಟ್ಟು ತರುತ್ತಿತ್ತು. ಅದು ಅಷ್ಟೇನೂ ಸಂತೋಷದಾಯಕವಾಗಿರಲಿಲ್ಲ; ಆದರೂ ಅದು ನನ್ನ ಅಭ್ಯಾಸವನ್ನು ಬದಲಾಯಿಸಲಿಲ್ಲ.” “ಭಗವಂತನು ಎಲ್ಲಾ ಕಡೆಯೂ ಇದ್ದಾನೆ.” ವೇದಶಾಸ್ತ್ರಗಳ ಈ ಸತ್ಯವು ಚಿಕ್ಕ ಬಾಲಕ ಬಿನಯೇಂದ್ರನ ಮೇಲೆ ಅಗಾಧ ಪರಿಣಾಮವನ್ನು ಉಂಟುಮಾಡಿತ್ತು. ನಾನು ಮರಗಳು, ಪಕ್ಷಿಗಳು, ಆಕಾಶ—ಎಲ್ಲವನ್ನೂ ಕಾತರತೆಯಿಂದ ನೋಡುತ್ತ ಅಲ್ಲಿ ಭಗವಂತನನ್ನು ಕಾಣಲು ಪ್ರಯತ್ನಿಸುತ್ತಿದ್ದೆ. ಶ್ಯಾಮಾನಂದರು ನೆನಪಿಸಿಕೊಂಡರು,” ನಾನು ಒಂದು ಹೂವಿನ ಕಡೆ ನೋಡುತ್ತಾ ಪ್ರಶ್ನಿಸುತ್ತಿದ್ದೆ, ‘ಭಗವಾನ್ ಕೃಷ್ಣ, ನೀನು ಇಲ್ಲಿ ಇರುವೆಯಾ?’

“ನಾನು ಮಗುವಾಗಿದ್ದಾಗ ಹೆಚ್ಚಾಗಿ ಪ್ರೀತಿಸಿದ್ದು ಶಾಸ್ತ್ರಗಳಲ್ಲಿರುವ ಕಥೆಗಳನ್ನು ಆಲಿಸುವುದು” ಶ್ಯಾಮಾನಂದಜಿಯವರು ಮುಂದುವರಿಸಿದರು. ಅವರಿಗೆ ಪ್ರತಿಯೊಂದು ನೀತಿ ಹಾಗೂ ಆದರ್ಶವು ನಿಯಮವಾಯಿತು. ಅವರಿಗೆ ಶಾಸ್ತ್ರಗ್ರಂಥಗಳ ನಾಯಕರು ಮತ್ತು ಅವತಾರಗಳು ಅವರ ಬಾಲ್ಯದ ಒಡನಾಡಿಗಳಷ್ಟೇ ನಿಜವಾಗಿದ್ದವು. ಒಂದು ದಿನ ಶಿಶುವಿಹಾರದ ತರಗತಿಯ ನಂತರ, ಬಿನಯೇಂದ್ರನು ಒಬ್ಬನೇ ಸಣ್ಣ ಶಾಲೆಯ ಕಂಪೌಂಡ್ ಒಳಗಡೆ ಆಟವಾಡುತ್ತಾ ಉಳಿದುಕೊಂಡನು. ಕತ್ತಲು ಕವಿಯ ತೊಡಗಿತು. “ಅಂದಿನ ದಿನಗಳಲ್ಲಿ ವಿದ್ಯುದ್ದೀಪಗಳು ಇರಲಿಲ್ಲ” ಶ್ಯಾಮಾನಂದಜಿಯವರು ಹೇಳಿದರು, “ಆದರೆ ಇದ್ದಕ್ಕಿದ್ದಂತೆ ಇಡೀ ಪ್ರದೇಶವೆಲ್ಲ ಪ್ರಕಾಶಮಾನವಾಗಿದ್ದನ್ನು ಕಂಡೆ. ಆ ಬೆಳಕಿನಲ್ಲಿ ನಾನು ಆಂಜನೇಯನನ್ನು ಕಂಡೆ. ಆ ದೊಡ್ಡ ಕಪಿಯ ರೂಪವನ್ನು ನೋಡಿದ್ದರೆ ಬಹುಶಃ ಹೆಚ್ಚಿನ ಮಕ್ಕಳು ಗಾಬರಿಗೊಂಡು ಓಡಿಹೋಗುತ್ತಿದ್ದರೇನೋ. ಅದರ ಬದಲು, ಅದು ನನಗೆ ಒಂದು ಅತ್ಯಂತ ಸುಂದರ ಅನುಭಾವವನ್ನು ತಂದುಕೊಟ್ಟಿತು ಮತ್ತು ನಾನು ಅದರ ಕಡೆ ಮೆಲ್ಲನೆ ಹೆಜ್ಜೆ ಇಡಲು ಪ್ರಾರಂಭಿಸಿದೆ. ನಂತರ ಕ್ರಮೇಣ ಆ ರೂಪ ಬೆಳಕಿನಲ್ಲಿ ಕರಗಲಾರಂಭಿಸಿತು ಮತ್ತು ನಂತರ ರೂಪದೊಡನೆ ಬೆಳಕೂ ಮಾಯವಾಯಿತು. ಆ ದರ್ಶನದ ಉನ್ನತಕ್ಕೇರಿಸುವ ಅನುಭವ ನನ್ನಲ್ಲಿ ಬಹುಕಾಲ ಉಳಿಯಿತು.” ವಾನರ ದೇವತೆ ಆಂಜನೇಯನು ವಾಲ್ಮೀಕಿಯ ಮಹಾಕಾವ್ಯ ರಾಮಾಯಣದಲ್ಲಿ ತನ್ನ ವೀರಕಾರ್ಯಗಳಿಂದಾಗಿ ಭಾರತದಲ್ಲಿ ಚಿರಪರಿಚಿತನು ಹಾಗೂ ಅತ್ಯಂತ ಪ್ರೀತಿ ಪಾತ್ರನು. ಆಂಜನೇಯನು ಪರಿಪೂರ್ಣ ಭಕ್ತಿಯ ಸಂಕೇತ. ಅವನಾಗಿಯೇ ಅವನೊಬ್ಬ ಅಸಹಾಯಕ, ಅಜ್ಞಾನಿಯಾದ ಸಣ್ಣ ಕಪಿ. ಆದರೆ ಅವನು ಭಗವಂತನಿಂದ ನೀಡಲ್ಪಟ್ಟ ಕಾರ್ಯವನ್ನು ಪೂರೈಸಲು ಭಗವಂತನ ನಾಮವನ್ನು ತೆಗೆದುಕೊಂಡ ಕೂಡಲೇ, ಅವನೊಬ್ಬ ದೈತ್ಯನಾಗಿ, ಅವನ ಪರಾಕ್ರಮವು ಸಾಟಿ ಇಲ್ಲದಂತಾಗಿ, ಅವನಿಗೆ ಯಾವುದೂ ಅಸಾಧ್ಯವಾದುದಾಗಿರುವುದಿಲ್ಲ. ಶ್ಯಾಮಾನಂದಜಿಯವರದೇ ಪ್ರಚಂಡ ಸಾಧನೆಗಳು, ಭಗವಂತನಲ್ಲಿ ಮತ್ತು ತಮ್ಮ ಗುರು ಪರಮಹಂಸ ಯೋಗಾನಂದರಲ್ಲಿನ ಭಕ್ತಿಯಿಂದ ಪ್ರೇರಿತವಾಗಿದ್ದು, ಶ್ರೀ ದಯಾ ಮಾತಾರವರು ಅವರನ್ನು, ಒಂದು ಸಂದರ್ಭದಲ್ಲಿ “ಪರಮಹಂಸಜಿಯವರ ಹನುಮಾನ್” ಎಂದು ಉಲ್ಲೇಖಿಸಲು ಕಾರಣವಾಯಿತು.

ಬಿನಯೇಂದ್ರನು 9 ವರ್ಷದ ಬಾಲಕನಾಗಿದ್ದಾಗ ಅವನ ತಂದೆ ಮರಣ ಹೊಂದಿದರು. ಅವನ ತಂದೆ ಹಾಗೂ ಅವನ ತಂದೆಯ ಅಪ್ತ ಸ್ನೇಹಿತರಾದ ರಾಜ ಬಹದ್ದೂರ್ ಸಾಟಿ ಪ್ರಸಾದ್ ಗರ್ಗ, ಅವರಿಬ್ಬರ ಮಧ್ಯೆ ಇದ್ದ ಒಪ್ಪಂದವೆಂದರೆ, ಇಬ್ಬರಲ್ಲಿ ಯಾರೊಬ್ಬರಿಗಾದರೂ ಏನಾದರೂ ಆದಲ್ಲಿ, ಅವರ ಮಕ್ಕಳನ್ನು ಮತ್ತೊಬ್ಬರು ಬೆಳೆಸಬೇಕು ಎಂಬುದು. ಹಾಗಾಗಿ ಬಿನಯೇಂದ್ರನು ಗರ್ಗ ಕುಟುಂಬದವರೊಡನೆ, ಕಲ್ಕತ್ತೆಯ ಹತ್ತಿರದ ಮಿಡ್ನಾಪೂರ್ ಜಿಲ್ಲೆಯ ಮಹಿಶಾದಲ್ ಎಂಬ ಅವರ ದೊಡ್ಡ ಎಸ್ಟೇಟ್ ನಲ್ಲಿ, ಅವರೊಡನೆ ಇರಲು ಹೋದನು. ಈ “ದತ್ತು” ಪುತ್ರನು ಆ ಕುಟುಂಬದ ಹಿರಿಯ ಮಗನಂತೆ ಪ್ರೀತಿಸಲ್ಪಟ್ಟನು ಮತ್ತು ಬೆಳೆಸಲ್ಪಟ್ಟನು.

ಈ ಚಿಕ್ಕ ಬಾಲಕನು ತನ್ನ ಹೊಸ ತಂದೆಯ ಆದರ್ಶಗಳನ್ನು ಮೈಗೂಡಿಸಿಕೊಂಡನು; ರಾಜಾ ಗರ್ಗರು ಅದಕ್ಕೆ ಅರ್ಹರಾಗಿದ್ದರು, ನಮಗೆ ತಿಳಿದು ಬಂದಿದೆ. ಅವರು ಒಬ್ಬ ಆದರ್ಶಗುಣವಂತನಾಗಿದ್ದರು ಮತ್ತು ವಿಶೇಷ ಕೌಶಲ್ಯಗಳನ್ನು ಮತ್ತು ಸಾಧನೆಗಳನ್ನು ಹೊಂದಿದವರಾಗಿದ್ದರು. ಶಾಸ್ತ್ರಗಳು (ಹಿಂದೂ ಶಾಸ್ತ್ರಗಳು) ಮತ್ತು ಭಾರತದ ಪ್ರಾಚೀನ ಸಂಸ್ಕೃತ ಸಾಹಿತ್ಯದಲ್ಲಿ ಪಾರಂಗತರಾಗಿದ್ದರು. ಅವರ ಪರಮಾಪ್ತ ಗೆಳೆಯರಲ್ಲಿ ಒಬ್ಬರಾದ ಶ್ರೀ ರಾಮ್ ದಯಾಳ್ ಮುಜುಮ್‌ದಾರ್, ಶ್ರೀರಾಮ ಗೋಪಾಲ್ ಮುಜುಮ್‌ದಾರರ [1], ಸಹೋದರ, ಕ್ರಿಯಾಯೋಗದ ದೂತರಾಗಿದ್ದ ಲಾಹಿರಿ ಮಹಾಶಯರ ಪ್ರಮುಖ ಶಿಷ್ಯರಾಗಿದ್ದರು. ಹಿನ್ನೋಟದಲ್ಲಿ ಪರಿಶೀಲಿಸಿದಾಗ, ನಿಜವಾಗಿಯೂ ರಾಜಾ ಗರ್ಗರೂ ಸಹ ಕ್ರಿಯಾಯೋಗಿಯಾಗಿದ್ದಿರಬಹುದೆಂದು ಶ್ಯಾಮಾನಂದಜಿಯವರು ನಂತರದಲ್ಲಿ ಅಚ್ಚರಿ ಪಟ್ಟರು.

ಶ್ರೀ ರಾಮ್ ದಯಾಳ್ ಮುಜುಮ್‌ದಾರ್ ಅವರು ಅತ್ಯಂತ ಗೌರವಾನ್ವಿತ ಆಧ್ಯಾತ್ಮಿಕ ವ್ಯಕ್ತಿತ್ವ ಉಳ್ಳವರಾಗಿದ್ದು, ಸಂಸ್ಕೃತ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾಗಿದ್ದರು. ಭಗವದ್ಗೀತೆಯ ಅವರ ಭಾಷ್ಯ ಸಹಿತ ಅನುವಾದವು (ಸಂಸ್ಕೃತದಿಂದ ಬಂಗಾಳಿ ಭಾಷೆಗೆ), ಬಾಲಕ ಬಿನಯೇಂದ್ರನು ಓದಿದ ಆ ಪವಿತ್ರ ಗ್ರಂಥದ ಪ್ರಥಮ ಪಠ್ಯವಾಗಿತ್ತು. ಆ ಪಂಡಿತರೇ ಬಾಲಕನಿಗೆ ಪೋಷಕ ಶಿಕ್ಷಕರಾಗುತ್ತಾರೆ ಎಂಬ ಮಾತಿತ್ತು, ಆದರೆ ಬಿನಯೇಂದ್ರನು ಇನ್ನೂ ಪ್ರಾಥಮಿಕ ಶಿಕ್ಷಣದಲ್ಲಿದ್ದ ಪುಟ್ಟ ಬಾಲಕನಾಗಿದ್ದನು. ಏನೇ ಆದರೂ ಶ್ರೀ ರಾಮ್ ದಯಾಳ್ ರವರು ಬಾಲಕನ ಮೇಲೆ ಆಳವಾದ ಆಧ್ಯಾತ್ಮಿಕ ಪರಿಣಾಮವನ್ನು ಉಂಟು ಮಾಡಿದ್ದರು ಮತ್ತು ಅವನ ನಿಶ್ಚಿತ ಧಾರ್ಮಿಕ ಸ್ವಭಾವವನ್ನು ಪ್ರೋತ್ಸಾಹಿಸುತ್ತಿದ್ದರು. ಶ್ಯಾಮಾನಂದಜಿ ಅವರು ನಮಗೆ ಹೇಳಿದರು, “ಅವರು ಈ ಸೆಲ್ಫ್- ರಿಯಲೈಝೇಷನ್/ ಯೋಗದಾ ಗುರುಗಳ ಪರಂಪರೆಯೊಂದಿಗೆ ಸಂಪರ್ಕ ಹೊಂದಿರುವರೆಂದು, ನಾನು ಯೋಗದಾ ಸತ್ಸಂಗ ಸೊಸೈಟಿಯ ಕೆಲಸಕ್ಕೆ ಬಂದ ಮೇಲೆಯೂ, ಕೆಲವು ವರ್ಷಗಳವರೆಗೆ ನನಗೆ ತಿಳಿದಿರಲಿಲ್ಲ. ರಾಂಚಿ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾಗಿ, ಗುರುಗಳು [ಪರಮಹಂಸ ಯೋಗಾನಂದ], ಶ್ರೀ ಯುಕ್ತೇಶ್ವರ್‌ಜಿ ಮತ್ತು ಇತರರೊಂದಿಗೆ 1919 ರ ಸೊಸೈಟಿಯ ಸಭೆಗಳ ಕರುಡುಪತ್ರಗಳಲ್ಲಿ ಅವರ ಹೆಸರನ್ನು ನೋಡಿ ನಾನು ಅಚ್ಚರಿಪಟ್ಟೆ.

ಸ್ವಾಮಿ ಶ್ಯಾಮಾನಂದಗಿರಿ 1911-1971

ಒಬ್ಬ ಪೂಜ್ಯ ಸಾಧು, ಗೋವಿಂದ ಬ್ರಹ್ಮರ್ಷಿಯವರು ಬಿನಯೇಂದ್ರನು 11 ವರ್ಷದವನಾಗಿದ್ದಾಗ, ಅವರ ಕುಟುಂಬದ ಮನೆಗೆ ಭೇಟಿ ಇತ್ತರು. ಆ ಸನ್ಯಾಸಿಗಳು ಯುವ ಬಾಲಕನ ಆಧ್ಯಾತ್ಮಿಕ ಮನೋಧರ್ಮವನ್ನು ಅರಿತು, ಅವನಲ್ಲಿ ತೀವ್ರ ಆಸಕ್ತಿ ತೋರಿಸಿದರು. ಅವನು ಕೇವಲ ಸಾಧಾರಣ ಮಗುವಲ್ಲ, ಎಂಬುದನ್ನು ಸಾಧುವು ಪರಿಶೀಲಿಸಿರುವುದು ಸ್ಪಷ್ಟವೇ ಆಗಿತ್ತು. “ಈ ಪ್ರಾಪಂಚಿಕ ಗುರಿಗಳನ್ನು ತ್ಯಜಿಸಿ ಆ ಸಾಧುವಿನೊಡನೆ ಹೊರಟು ಹೋಗುವ ತೀವ್ರ ಹಂಬಲವಿತ್ತು,” ಶ್ಯಾಮಾನಂದಜಿಯವರು ನೆನಪಿಸಿಕೊಂಡರು, “ಆದರೆ ಅವರು ನನಗೆ ಹೇಳಿದರು, ‘ನಿನ್ನ ಸಮಯ ಇನ್ನೂ ಬಂದಿಲ್ಲ.’ ಅವರು ಹೊರಟು ಹೋದಾಗ ನನ್ನ ಹೃದಯ ಚೂರಾಯಿತು ಮತ್ತು ಅವರು ಹಿಂತಿರುಗುವ ಸಮಯ ಬಂದಾಗ, ತಮ್ಮ ದೇಹ ತ್ಯಜಿಸಿರುವರೆಂಬ ಸಮಾಚಾರ ಬಂದಿತು.”

ಭಾರತದ ರಾಜಾಡಳಿತಾತ್ಮಕ ಕುಟುಂಬಗಳಲ್ಲಿ ಒಂದಾದ ಗರ್ಗ ಕುಟುಂಬದವರು, ಸುಮಾರು 500 ಗ್ರಾಮಗಳನ್ನು ಹೊಂದಿದ್ದು ಅವುಗಳ ಮೇಲೆ ಆಡಳಿತ ನಡೆಸುತ್ತಿದ್ದರು. ಬಿನಯೇಂದ್ರನ ವಿದ್ಯಾಭ್ಯಾಸವು ಆಡಳಿತಾತ್ಮಕ ಕಲೆಗಳನ್ನು ಮತ್ತು ಈ ಎಸ್ಟೇಟಿನ “ರಾಜಕುಮಾರ”ನಾಗುವ ಶಿಷ್ಟಾಚಾರಗಳನ್ನು ಒಳಗೊಂಡಿತ್ತು. ಶೈಕ್ಷಣಿಕ ತರಬೇತಿಯಲ್ಲಿ ಅವನು ಜಗತ್ತಿನ ಇತಿಹಾಸವನ್ನು ಪ್ರಮುಖ ವಿಷಯವನ್ನಾಗಿ ತೆಗೆದುಕೊಂಡನು ಮತ್ತು ಅಂತಿಮವಾಗಿ ಅವನು ಪ್ರೌಢಾವಸ್ಥೆ ತಲುಪಿದಾಗ ತನ್ನ ದೃಷ್ಟಿಕೋನವನ್ನು ನ್ಯಾಯವಾದಿಯಾಗುವತ್ತ ತಿರುಗಿಸಿದನು. ಸಹಜವಾಗಿಯೇ ತೀಕ್ಷ್ಣ ಬುದ್ಧಿವಂತಿಕೆ, ಅಸಾಧಾರಣ ಜ್ಞಾಪಕ ಶಕ್ತಿ ಮತ್ತು ಬಲವಾದ ಇಚ್ಛಾಶಕ್ತಿಗಳು ಅವನು ಮನಸ್ಸು ಇಟ್ಟ ಕಡೆಗಳಲ್ಲೆಲ್ಲ—ಅದು ಅವನ ವಿದ್ಯಾಭ್ಯಾಸವೇ ಆಗಿರಲಿ, ಆಟಗಳಾಗಿರಲಿ ಅಥವಾ ಕಾಡಿನಲ್ಲಿ ಹುಲಿಗಳ ಬೇಟೆಯೇ ಆಗಿರಲಿ—ಅದರಲ್ಲಿ ಶ್ರೇಷ್ಠನಾಗಿರುತ್ತಿದ್ದನು.

ಸಕಾಲಕ್ಕೆ ಕುಟುಂಬದ ಚಿಕ್ಕಮಗಳನ್ನು ಮದುವೆಯಾದರು, ಆಕೆ ಶಾಂತನಾ. ಆಕೆಯ ಸ್ವಭಾವವು ವಿವೇಚನಾ ಶಕ್ತಿ ಮತ್ತು ಮೃದುತ್ವಗಳ ಗಮನಾರ್ಹ ಮಿಶ್ರಣವಾಗಿತ್ತು. ಅವಳು ಅವರಿಗೆ ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ ಸಮವಾಗಿದ್ದಳು. ಅವರು ಆಕೆಗೆ ತೋರಿಸುತ್ತಿದ್ದ ಗೌರವ ಮತ್ತು ಭಕ್ತಿಗಳು, ಅವರ ಅತ್ಯಂತ ಪ್ರಶಂಸನೀಯ ಗುಣಗಳಾಗಿದ್ದವು—ಬಹು ಅಪರೂಪದ ಗುಣ ಕನಿಷ್ಠ ಪಕ್ಷ ಗಂಡ ಹೆಂಡತಿ ಸಂಬಂಧದಲ್ಲಿ. ಅವರು ಆಗಾಗ ತಮ್ಮ ಪತ್ನಿಯ ಬಗ್ಗೆ ಹೇಳುತ್ತಿದ್ದರು: “ಅವಳು ಅಪೂರ್ವವಾದವಳು. ನಾನು ಅವಳಿಗೆ ಸರಿ ಜೋಡಿಯೇ ಅಲ್ಲ!” ಅವರ ಮದುವೆಯು ಅವರಿಗೆ ಇಬ್ಬರು ಹೆಣ್ಣು ಮಕ್ಕಳನ್ನು ದಯಪಾಲಿಸಿತು, ದೀಪ್ತಿ ಮಯಿ ದೇವಿ ಮತ್ತು ಪ್ರೀತಿ ಮಯಿ ದೇವಿ ಅವರನ್ನು ಅವರು ಪ್ರೀತಿಯಿಂದ ಮೀರಾ ಮತ್ತು ಮೀನು ಎಂದು ಕರೆಯುತ್ತಿದ್ದರು.

ಹೆಚ್ಚಿನ ಜನರು ಜೀವನದಲ್ಲಿ ಹಂಬಲಿಸುವುದೆಲ್ಲವನ್ನೂ ಬಿನಯೇಂದ್ರ ಹೊಂದಿದ್ದರು. ಆದರೂ ಅವರು ಆ ದಿನಗಳಲ್ಲಿ ಹೀಗೆ ಹೇಳುತ್ತಿದ್ದರು, “ನಾನು ಯಾವಾಗಲೂ ಅಪಾತ್ರನಾಗಿದ್ದೆ; ನಾನು ನಿಜವಾಗಿಯೂ ಎಂದಿಗೂ, ಎಲ್ಲಿಗೂ ಸೇರಿದವನಾಗಿರಲಿಲ್ಲ. ಮತ್ತಾವುದೋ ಒಂದು ನನ್ನನ್ನು ಸೆಳೆಯುತ್ತಲೇ ಇತ್ತು.” ಜೀವನದಲ್ಲಿ, ಉನ್ನತ ಕರ್ತವ್ಯಕ್ಕಾಗಿ, ಭಗವಂತನಿಂದ ಸ್ಪರ್ಶಿಸಲ್ಪಟ್ಟ, ಪ್ರತಿಯೊಂದು ಆತ್ಮವೂ ಈ ರೀತಿ ಅನುಭವಿಸುತ್ತದೆ. ಆದರೆ ಅವರು ಎಂದಿಗೂ, ತಮ್ಮ ಜೀವನದಲ್ಲಿ ಒಂದು ಕ್ಷಣವೂ, ಪಶ್ಚಾತ್ತಾಪ ಅಥವಾ ವಿಷಣ್ಣತೆಗೆ ಎಡೆಗೊಡಲಿಲ್ಲ. ಅವರ ತತ್ವದಲ್ಲಿ ಇವುಗಳಾಗಲಿ ಅಥವಾ ಯಾವುದೇ ನಕಾರಾತ್ಮಕ ಭಾವಗಳಾಗಲಿ, ನಿರಾಕರಿಸಲ್ಪಟ್ಟಿದ್ದವು. “ನಾನು ಸದಾ ಕಾಲ ಹರ್ಷಚಿತ್ತದಿಂದ ಮತ್ತು ಸಕಾರಾತ್ಮಕವಾಗಿರುವುದರಲ್ಲಿ ನಂಬಿಕೆ ಇಟ್ಟಿದ್ದೇನೆ ಮತ್ತು ಯಾರು ಏನೇ ಮಾಡಬೇಕಾದರೂ ಅವನು ಅದನ್ನು ಚೆನ್ನಾಗಿಯೇ ಮಾಡಬೇಕು!” ಅದು ಅವರ ಜೀವಮಾನದ ದಿವ್ಯ ಸಂಕಲ್ಪವಾಗಿತ್ತು.

ಶಾಂತನಾ ಹೆಚ್ಚಾಗಿ ತನ್ನ ಪತಿಯಲ್ಲಿ, ‘ಅಪಾಯವನ್ನು ನೇರವಾಗಿ ಎದುರಿಸುವ’ ಭಾವವನ್ನು ಕಂಡಿರಬೇಕು. ಅವರು ಸಾಮಾಜಿಕ ಶಿಷ್ಟಾಚಾರಗಳಿಗೆ ವಿರೋಧಿಯಾಗಿದ್ದರು; ಒಬ್ಬ ಅತ್ಯಂತ ಕಡು ಸಾಂಪ್ರದಾಯಿಕ ಬ್ರಾಹ್ಮಣನಾಗಿದ್ದ ಅವರು, ನಿಗದಿಪಡಿಸಿರುವ ಶಾಸ್ತ್ರೀಯ ಕರಾರುಗಳ ಅಡಿಯಲ್ಲಲ್ಲದೆ, ಒಂದು ತೊಟ್ಟು ನೀರನ್ನಾಗಲಿ ಅಥವಾ ಆಹಾರದ ತುಣುಕನ್ನಾಗಲಿ ತೆಗೆದುಕೊಳ್ಳುತ್ತಿರಲಿಲ್ಲ (ತೆಗೆದುಕೊಳ್ಳಲು ಸಾಧ್ಯವೂ ಆಗುತ್ತಿರಲಿಲ್ಲ); ಮತ್ತು ಅವರು ಏನೇ ಮಾಡಿದರೂ, ಅದರಲ್ಲಿ ಎಂತಹ ಇಚ್ಛಾಶಕ್ತಿ ಹಾಗೂ ಉತ್ಸಾಹವನ್ನು ತೋರಿಸುತ್ತಿದ್ದರೆಂದರೆ, ಹೆಚ್ಚಿನ ಸಮಯಗಳಲ್ಲಿ ಅತಿರೇಕಕ್ಕೆ ಹೋಗುತ್ತಿದ್ದರು. (ಒಮ್ಮೆ ಅವರು ಮಹಾತ್ಮ ಗಾಂಧಿಯವರು ಮಾಡುವಂತೆ ತಾವೂ ಮಾಡಬಹುದು ಎಂದುಕೊಂಡು, ಉಪವಾಸ ಮಾಡಲು ಹೋಗಿ, ಇನ್ನೇನು ಸಾಯುವ ಸ್ಥಿತಿಗೆ ತಲುಪಿದ್ದರು. ಗಾಂಧಿಯವರು ತಮ್ಮ ಉಪವಾಸದ ಸಮಯದಲ್ಲಿ ಸಾಕಷ್ಟು ನೀರು ಕುಡಿಯುತ್ತಿದ್ದರು ಮತ್ತು ಹೆಚ್ಚೂ ಕಡಿಮೆ ನಿಷ್ಕ್ರಿಯರಾಗಿರುತ್ತಿದ್ದರು. ಬಿನಯೇಂದ್ರರು ಆಹಾರ ಮಾತ್ರವಲ್ಲದೆ, ಎಲ್ಲಾ ಪಾನೀಯಗಳನ್ನೂ ತ್ಯಜಿಸಿದ್ದರು. ಜೊತೆಗೆ ತಮ್ಮ ಅಧ್ಯಯನಗಳಲ್ಲಿ ಹಾಗೂ ಸುಡುತ್ತಿರುವ ಸೂರ್ಯನ ಉರಿ ಬಿಸಿಲಿನಲ್ಲಿ, ಹೊರಾಂಗಣ ಆಟಗಳಲ್ಲಿಯೂ ಸಾಮಾನ್ಯ ಚಟುವಟಿಕೆಯ ವೇಗವನ್ನೇ ಇರಿಸಿದ್ದರು. ಇದೆಲ್ಲವನ್ನೂ ಕುಟುಂಬದಲ್ಲಿ ಯಾರಿಗೂ ತಾವು ಏನು ಮಾಡುತ್ತಿರುವೆವೆಂದು ತಿಳಿಯದಂತೆ ಮಾಡಿದ್ದರು. ಒಂಬತ್ತು ದಿನಗಳ ನಂತರ ಅವರಿಗೆ ಈ ಸಾಹಸದಲ್ಲಿ ಸಹಕರಿಸುತ್ತಿದ್ದ ನೌಕರನು, ಅವರು ಪ್ರಜ್ಞೆ ತಪ್ಪಲಾರಂಭಿಸಿದ್ದನ್ನು ಗಮನಿಸಿದನು. ಅವನು ಗಾಬರಿಗೊಂಡು ಶಾಂತನಾಳನ್ನು ಕರೆದನು. ಅವಳು ತನ್ನ ಗಂಡನು ಆಹಾರವನ್ನು ತೆಗೆದುಕೊಳ್ಳುವಂತೆ ಮನವೊಲಿಸಿದಳು. ಅಲ್ಲಿಗೆ ಅವರು ವಿಪರೀತ ಆಹಾರದೊಂದಿಗೆ ಅಂದರೆ ಅನೇಕ ಲೀಟರ್‌ ಹಾಲು ಮತ್ತು ಚಪಾತಿಯ ರಾಶಿಯೊಂದಿಗೆ ತಮ್ಮ ವಿಪರೀತ ಉಪವಾಸವನ್ನು ಮುರಿದರು. ನಂತರ ಅವರು ತಮ್ಮ ಜೀವನದಲ್ಲಿ ಇದೊಂದೇ ಬಾರಿ ಸ್ವಲ್ಪ ಅಜೀರ್ಣವನ್ನು ಅನುಭವಿಸಿದ್ದು ಎಂದು ಹೇಳಿದರು!

ಶ್ರೀದಯಾಮಾತಾರವರು ರಾಂಚಿಯಲ್ಲಿ ಮಾರ್ಚ್ 15,1968 ರಂದು, ಸ್ವಾಮೀಜಿಯವರ ಹಣೆಗೆ ತಿಲಕವನ್ನು (ಆಧ್ಯಾತ್ಮಿಕ ಅನುಗ್ರಹದ ಸಂಕೇತ) ಇಟ್ಟರು.

ಆದರೆ ಶಾಂತನಾ ಎಂದಿಗೂ ದಿಗ್ಭ್ರಮೆಗೊಳ್ಳುತ್ತಿರಲಿಲ್ಲ ಮತ್ತು ಅವಳು ಅವರ ಪ್ರತಿಯೊಂದು ಸವಾಲಿನಲ್ಲಿಯೂ ಸರಿ ಸಮಾನಳಾಗಿದ್ದಳು ಎಂದು ನಮಗೆ ತಿಳಿದು ಬರುತ್ತದೆ. ಅವಳ ‘ಸಾಮಾಜಿಕ ತಂಡ’ದಲ್ಲಿ ಭಾಗವಾಗಿರಲು ಅವರು ತಿರಸ್ಕರಿಸಿದುದಕ್ಕೆ ಅವಳು ಮೌನವಾಗಿ ಮುಗುಳ್ನಕ್ಕಳು; ಅವರು ಒಂದು ರಾತ್ರಿ ಮಲಗಿರುವಾಗ ಅವರ ಸಾಂಪ್ರದಾಯಿಕ ಬ್ರಾಹ್ಮಣರ ಜುಟ್ಟನ್ನು ಕತ್ತರಿಸಿ ಹಾಕಿದಳು (ಅದು ಕಾಣೆಯಾಗಿರುವುದರ ಬಗ್ಗೆ ತನಗೆ ತಿಳಿದಿದೆ ಎಂಬುದು ಅವಳಿಗೆ ಗೊತ್ತಾಗದಂತೆ ಇದ್ದರು ಆದರೆ ಎಂದಿಗೂ ಅದನ್ನು ಮತ್ತೆ ಬೆಳೆಸಲಿಲ್ಲ); ಮತ್ತು ಬಲವಾದ ಇಚ್ಛಾ ಶಕ್ತಿಯುಳ್ಳ ಪತಿಯು, ಯಾವುದರಲ್ಲೂ ಅತಿಯಾಗಿ ಮುಂದುವರೆದಿದ್ದಾನೆ ಎಂಬುದನ್ನು ತಿಳಿದರೆ ಆಕೆ ತನ್ನ ಅಧಿಕಾರವನ್ನು ಚಲಾಯಿಸುತ್ತಿದ್ದಳು ಮತ್ತು ಅವರು ಶರಣಾಗುತ್ತಿದ್ದರು. ಅವರು ಒಟ್ಟಿಗೆ ಕಳೆದ ಅತ್ಯಂತ ಸಂತಸಕರ ಕ್ಷಣಗಳೆಂದರೆ ತತ್ವಶಾಸ್ತ್ರದ ಚರ್ಚೆಗಳು, ಅಂದಿನ ದಿನಗಳಲ್ಲಿ ಭಾರತದಲ್ಲಿ ಮಹಿಳೆಯರು ಅಷ್ಟು ತಿಳುವಳಿಕೆ ಪಡೆದಿರುವುದಿಲ್ಲವೆಂದು ಪರಿಗಣಿಸಿದ್ದ ಸಮಯ ಅದು.”ಆಳವಾಗಿ ಅರ್ಥಮಾಡಿಕೊಳ್ಳುವುದರ ಜೊತೆಗೆ ನನ್ನ ಪತ್ನಿಯು ಛಾಯಾಚಿತ್ರದಂತೆ ಸ್ಫುಟವಾದ ಜ್ಞಾಪಕಶಕ್ತಿಯುಳ್ಳವಳಾಗಿದ್ದಳು. ಅವಳು ಒಂದು ಪುಸ್ತಕ ಅಥವಾ ಶಾಸ್ತ್ರದ ಯಾವುದೇ ಪುಟದ ಮೇಲೆ ಕೇವಲ ಕಣ್ಣು ಹಾಯಿಸಿದರಷ್ಟೇ ಸಾಕು, ಅವಳು ಅದರ ಪ್ರತಿಯೊಂದು ಪದವನ್ನೂ ಹೇಳುತ್ತಿದ್ದಳು. ಅದರಲ್ಲಿಯೂ ಸಹ ಅವಳು ನನ್ನನ್ನು ಮೀರಿಸುತ್ತಿದ್ದಳು.” ಶ್ಯಾಮಾನಂದರು ಅವಳ ಗೌರವ ಪೂರ್ವಕ ನೆನಪಿನಲ್ಲಿ ತಿಳಿಸಿದರು.

ಶಾಂತನಾ ಕೇವಲ 20 ವರ್ಷದವಳಾಗಿದ್ದಾಗ ಒಂದು ದೀರ್ಘ ಕಾಯಿಲೆಯಿಂದ ವಿಧಿವಶಳಾದಳು. “ನನಗೆ ಏನೂ ದುಃಖವಾಗಲಿಲ್ಲ,” ಶ್ಯಾಮಾನಂದಜಿಯವರು ಹೇಳಿದರು,”ಏಕೆಂದರೆ ನನ್ನ ಹೃದಯವು ಅತಿಯಾಗಿ ತುಂಬಿ ಬಂದಿತ್ತು. ಅವರ ಪತ್ನಿಯು ಹೇಳಿದ್ದಳು,” ಇದು ನಿಮ್ಮ ಜೀವನ ಮಾರ್ಗವಲ್ಲ ಎಂಬುದು ನನಗೆ ಗೊತ್ತು. ನಾನು ಅದಕ್ಕೆ ಎಂದಿಗೂ ತಡೆಯಾಗುವುದಿಲ್ಲ, ಅಥವಾ ನಿಮ್ಮನ್ನು ಬಹಳ ಸಮಯ ಹಿಡಿದುಕೊಂಡಿರುವುದಿಲ್ಲ. ನಾವು ಈ ನಾಟಕವನ್ನು ಆಡಲೇಬೇಕಿತ್ತು; ಆದರೆ ಅದು ಈಗ ಅಂತ್ಯವಾಗಬೇಕಾಗಿದೆ ಮತ್ತು ನಾನು ನಿಮ್ಮನ್ನು ಬಿಡುಗಡೆಗೊಳಿಸಬೇಕಾಗಿದೆ.”

ಅದು 1936 ರಲ್ಲಿ ನಡೆದದ್ದು. ನಂತರ ಶ್ಯಾಮಾನಂದರ ಇಡೀ ಜೀವನವು ಭಗವಂತ ಮತ್ತು ಸತ್ಯದ ಅನ್ವೇಷಣೆಯಿಂದ ತುಂಬಿ ಹೋಯಿತು. ಅವರ ಹೆಣ್ಣು ಮಕ್ಕಳ ಪೋಷಣೆಯನ್ನು, ಅವರನ್ನು ಅರ್ಥ ಮಾಡಿಕೊಂಡ ಅತ್ತಿಗೆಯು ವಹಿಸಿಕೊಂಡು, ಅವರನ್ನು ಆ ಕಾಳಜಿಯಿಂದ ಮುಕ್ತನನ್ನಾಗಿ ಮಾಡಿದರು. ಅವರು ತಮ್ಮ ಕುಟುಂಬವನ್ನು ತೊರೆದು, ಮುಂದಿನ 23 ವರ್ಷಗಳಲ್ಲಿ ಹೆಚ್ಚಿನ ಭಾಗವನ್ನು ಭಾರತದ ಆಶ್ರಮಗಳಲ್ಲಿ ಮತ್ತು ಆಕೆಯ ಪವಿತ್ರ ಸ್ಥಳಗಳ ತೀರ್ಥಯಾತ್ರೆಯಲ್ಲಿ ಕಳೆದರು. ಭಾರತದ ಅತ್ಯಂತ ಹೆಸರಾಂತ ಸಂತರು ಮತ್ತು ಆ ಕಾಲದ ಅನೇಕ ಪೂಜ್ಯ ಗುರುಗಳ ಸಾಮಿಪ್ಯವನ್ನು ದೊರಕಿಸಿಕೊಂಡರು. ಅನೇಕರು ಅವರ ಭಕ್ತಿ ಮತ್ತು ಸಾಮರ್ಥ್ಯವನ್ನು ಬಳಸಿಕೊಂಡು ಅವರ ಆಧ್ಯಾತ್ಮದ ಅನ್ವೇಷಣೆ ಹಾಗೂ ತಮ್ಮ ಸಂಸ್ಥೆಗಳ ನಿರ್ಮಾಣದ ಪರಸ್ಪರ ಪ್ರಯೋಜನಕ್ಕಾಗಿ ಹತ್ತಿರವಾದರು. ಎಲ್ಲರಲ್ಲೂ ಅತ್ಯಂತ ಪೂಜ್ಯ ಭಾವನೆಯಿಂದ ಅವರಿಗೆ ಸಾಧ್ಯವಾದಷ್ಟು ಪ್ರೇಮದಿಂದ ಸೇವೆ ಸಲ್ಲಿಸಿದರು. (ಒಬ್ಬ ಸನ್ಯಾಸಿ ಸಾಧುವಿಗೆ ಅವರು ಒಂದು ಆಶ್ರಮವನ್ನು ಕಟ್ಟಿದರು. ಮತ್ತು 10 ವರ್ಷಗಳಲ್ಲಿ ಹೆಚ್ಚಿನ ಭಾಗವನ್ನು ಅಲ್ಲಿಯೇ ಜೀವಿಸಿದರು); ಆದರೆ ಅವರು ಎಂದಿಗೂ ದೀಕ್ಷೆ ತೆಗೆದುಕೊಳ್ಳಲಿಲ್ಲ. (ಗುರು ಶಿಷ್ಯರ ಬಾಂಧವ್ಯವನ್ನು ಬೆಸೆಯುವ ಪ್ರಮಾಣವಚನ) ಅಥವಾ ಯಾವುದಾದರೂ ಒಂದು ಮಾರ್ಗವನ್ನು ತಮ್ಮದಾಗಿಸಿಕೊಳ್ಳಲಿಲ್ಲ. “ನಾನು ಇನ್ನೂ ಆ ಯಾವುದೋ ಒಂದನ್ನು ಹುಡುಕುತ್ತಿದ್ದೆ,” ಶ್ಯಾಮಾನಂದಜಿಯವರು ವಿವರಿಸಿದರು,” ವಿಚಿತ್ರವೆಂದರೆ, ನನ್ನ ಹುಡುಕಾಟ ಗುರುಗಳು (ಪರಮಹಂಸ ಯೋಗಾನಂದಜಿ) 1935-36 ರಲ್ಲಿ ಭಾರತದಲ್ಲಿ ಇದ್ದಾಗ ಆರಂಭವಾಯಿತು. 1936ರಲ್ಲಿ, ಪುರಿಯಲ್ಲಿ ಶ್ರೀ ಯುಕ್ತೇಶ್ವರ್‌ಜಿಯವರ ಅಗಲಿಕೆಯ ಶೋಕಾಚರಣೆಯಲ್ಲಿ ಅವರಿದ್ದಾಗ, ನಾನು ಅಲ್ಲಿಯೇ ಇದ್ದೆ. ಹಲವಾರು ಬಾರಿ ಅವರು ನನಗೆ ಸ್ವಲ್ಪದರಲ್ಲೇ ತಪ್ಪಿಹೋಗಿದ್ದಿರಬಹುದು. ಆಗ ನಾನೇನಾದರೂ ಅವರನ್ನು ಭೇಟಿಯಾಗಿದ್ದರೆ ನನ್ನ ಅನ್ವೇಷಣೆಯು ಪ್ರಾರಂಭದಲ್ಲೇ ಮುಕ್ತಾಯಗೊಳ್ಳುತ್ತಿತ್ತು. ಆದರೆ ಅದು ಹಾಗೆ ಆಗಬೇಕೆಂದಿರಲಿಲ್ಲ.”

ಮಹಿಶಾದಲ್‌ನಲ್ಲಿ ಬಿನಯೇಂದ್ರ ನಾರಾಯಣರು ತಮ್ಮ ಪತ್ನಿಯ ಸ್ಮರಣಾರ್ಥ ಒಂದು ಸುಂದರವಾದ ಕಾಲೇಜನ್ನು ಕಟ್ಟಿಸಿದರು. ಆ 23 ವರ್ಷಗಳ ನಂತರದ ಭಾಗದಲ್ಲಿ ಅವರು ಮತ್ತು ಅವರ ನಾಲ್ವರು ಸ್ನೇಹಿತರು ಹೆಚ್ಚು ಅಗತ್ಯವಿರುವ ಕ್ಷಯರೋಗದ ಸ್ಯಾನಿಟೋರಿಯಂ ಅನ್ನು ಸ್ಥಾಪಿಸಲು ಯೋಜಿಸಿದರು. ಅವರು ಪಶ್ಚಿಮ ಬಂಗಾಲದ ಗಿರಿದಂಗ ಎಂಬ ಆರೋಗ್ಯಕರ ವಾತಾವರಣದ ಬಯಲು ಪ್ರದೇಶವನ್ನು ಆಯ್ಕೆ ಮಾಡಿಕೊಂಡು, ಸಂಸ್ಥೆಗೆ ನಿರಾಮಯ (“ಗುಣಕಾರಕ”) ಎಂಬ ಹೆಸರಿಟ್ಟು, ಕನಸನ್ನು ನನಸಾಗಿಸಲು ಹೊರಟರು. ಅವರವರೊಳಗೇ ಗಣನೀಯ ಪ್ರಮಾಣದ ಹಣವನ್ನು ಒಟ್ಟು ಮಾಡಿದರು ಮತ್ತು ಕೂಡಲೇ ಅದೆಲ್ಲವನ್ನೂ, ಈ ಮಹಿಮಾನ್ವಿತ ಯೋಜನೆಯನ್ನು ಘೋಷಿಸುವಂತಹ ಒಂದು ಕರಪತ್ರವನ್ನು ಮುದ್ರಿಸಿ, ಹಂಚಲು ಖರ್ಚು ಮಾಡಿದರು. ಸ್ವಾಮಿ ಶ್ಯಾಮಾನಂದ ಗಿರಿಯವರ ಜೀವನದ ವಿಶಿಷ್ಟ ಲಕ್ಷಣಗಳಾದ ವಿಶ್ವಾಸ, ದೃಢಸಂಕಲ್ಪ, ಕಠಿಣ ಪರಿಶ್ರಮಗಳು ಪ್ರತಿಫಲಗಳನ್ನು ತಂದುಕೊಟ್ಟವು. ಭಾರತದ ಎಲ್ಲಾ ಮೂಲಗಳಿಂದ ಬೆಂಬಲ ಬಂದಿತು. ಶಸ್ತ್ರಚಿಕಿತ್ಸಾ ಸೌಲಭ್ಯಗಳು ಮತ್ತು ಹೊರಾಂಗಣ ಎದೆಯ ಕ್ಲಿನಿಕ್ ಅನ್ನು ಹೊಂದಿರುವ ಸ್ಯಾನಿಟೋರಿಯಂ, ಇಂದು ಒಂದು ಮಾದರಿ ಸಂಸ್ಥೆಯಾಗಿದೆ. ಭಾರತದ ಪ್ರಧಾನ ಮಂತ್ರಿ ಇಂದಿರಾಗಾಂಧಿ ಅದರ ಜನರಲ್ ಕೌನ್ಸಿಲ್‌ನ ಅಧ್ಯಕ್ಷರು. ಸಂಸ್ಥೆಯು ಎದೆಯ ಕ್ಲಿನಿಕ್ ನ ಎರಡು ಶಾಖೆಗಳನ್ನು ಹೊಂದಿರುತ್ತದೆ ಮತ್ತು ಇತ್ತೀಚಿಗೆ ಕಲ್ಕತ್ತಾದಲ್ಲಿ ಒಂದು ದೊಡ್ಡ 15 ಮಹಡಿಯ ಪಾಲಿ ಕ್ಲಿನಿಕ್ ಅನ್ನು ಆರಂಭಿಸಿದ್ದು, ಇವೆಲ್ಲವನ್ನೂ ಕಟ್ಟಲು ಶ್ಯಾಮಾನಂದರು ಸಹಾಯ ಮಾಡಿದರು. ಅದು ಒಂದು ಧರ್ಮಾರ್ಥದ ಸಂಸ್ಥೆಯಾಗಿದ್ದು, ರೋಗಿಗಳಿಗೆ ಅತ್ಯಲ್ಪ ಮೊತ್ತದ ಅಥವಾ ‘ಪಾವತಿಸುವ ಸಾಮರ್ಥ್ಯ’ದ ಆಧಾರದ ಮೇಲೆ ಚಿಕಿತ್ಸೆ ನೀಡುತ್ತದೆ.

ಸತ್ಯಕ್ಕಾಗಿ ಗೌತಮ ಬುದ್ಧನ ತೀವ್ರ ಅನ್ವೇಷಣೆ ಮತ್ತು ಹರಡಿಕೊಂಡಿರುವ ಬೋಧಿ ವೃಕ್ಷದಡಿ ಅವನ ಅಂತಿಮ ಸಾಕ್ಷಾತ್ಕಾರದಿಂದ ಪವಿತ್ರವಾಗಿದ್ದ ರಾಜಗೀರ್ ಮತ್ತು ಬೋಧಗಯಾಕ್ಕೆ ಶ್ಯಾಮಾನಂದಜಿಯವರು 1946ರಲ್ಲಿ ತೀರ್ಥಯಾತ್ರೆಯಲ್ಲಿದ್ದರು. ಶ್ಯಾಮಾನಂದಜಿಯವರು ದಿನದ ಬಹುಭಾಗವನ್ನು ಬೋಧಗಯೆಯಲ್ಲಿರುವ ಆ ಮರದ ಕೆಳಗಡೆ ಧ್ಯಾನ ಮಾಡುತ್ತ ಹಾಗೂ ಹತ್ತಿರದ ರಾಜಗೀರ್‌ನಲ್ಲಿದ್ದ ಮಂದಿರಗಳ ಮತ್ತು ಬೌದ್ಧವಿಹಾರಗಳ ಭಗ್ನಾವಶೇಷಗಳ ನಡುವೆ ನಡೆಯುತ್ತಾ ಕಳೆದಿದ್ದರು. ಅವರು ತಡಸಂಜೆಯ ಸಮಯಕ್ಕೆ ಸರ್ಕಾರಿ ವಿಶ್ರಾಂತಿ ಗೃಹದ ತಮ್ಮ ಕೋಣೆಗೆ ಹಿಂತಿರುಗಿದರು. ಬೆಳಗಿನ ಜಾವ ಎರಡು ಅಥವಾ ಮೂರು ಗಂಟೆಯ ಸುಮಾರಿಗೆ ಹಠಾತ್ತನೆ ಎಚ್ಚರಗೊಂಡರು ಮತ್ತು ಅತಿ ಸುಂದರವಾದ ನೀಲಿ ಪ್ರಕಾಶವನ್ನು ತಮ್ಮ ಕೋಣೆಯಲ್ಲಿ ಕಂಡ ಅವರು ಹಾಸಿಗೆಯಿಂದ ನೆಗೆದರು. ಅವರು ಆ ಅನುಭವವನ್ನು ವಿವರವಾಗಿ ಹೇಳಿದರು:

“ಆ ಕೋಣೆಯ ಒಂದು ಮೂಲೆಯಿಂದ, ಒಂದು ಆಳವಾದ ನೀಲಿ ಪ್ರಕಾಶ ಹೊರಹೊಮ್ಮಿತು; ನಂತರ ಕೋಣೆಯ ತುಂಬಾ ಪ್ರಕಾಶ ತುಂಬಿಕೊಂಡಿತು. ಮೂಲೆಯಲ್ಲಿದ್ದ ನೀಲಿ ಪ್ರಕಾಶ ತಿರುಗಲಾರಂಭಿಸಿತು. ಒಂದು ಮುಖ ಕಾಣಿಸಿಕೊಂಡಿತು, ನಂತರ ಪೂರ್ಣ ಎದೆ ಮತ್ತು ಕೊನೆಯಲ್ಲಿ ಪೂರ್ಣ ಸ್ವರೂಪ. ಮುಖವು ಅತ್ಯಂತ ಪ್ರಶಾಂತ, ಎಷ್ಟು ಮಧುರ—ಓಹ್! ಅದೆಷ್ಟು ಮಧುರ! ನಾನು ಯೋಚಿಸಿದೆ, “ಅದು ಯಾರಾಗಿರಬಹುದು? ಬುದ್ಧನಾ? ಶಿವನಾ? ಅಲ್ಲ, ಈ ದೈವೀ ಪುರುಷನು ಬುದ್ಧನ ಉದ್ದವಾದ ಚುಚ್ಚಿದ ಕಿವಿ ಅಥವಾ ಚಿಕ್ಕದಾದ ಗುಂಗುರು ಕೂದಲನ್ನು ಹೊಂದಿರಲಿಲ್ಲ. ಅವನಿಗೆ ಶಿವನಲ್ಲಿರುವ ಸರ್ಪಗಳ ಕಂಠಹಾರವೂ ಇರಲಿಲ್ಲ [2] ಅಥವಾ ಉದ್ದ ಜಟೆಯೂ ಇರಲಿಲ್ಲ. ಅವರಂತೆಯೇ ಆ ಮುಖವು ಸುಂದರವಾಗಿ ಮತ್ತು ಪ್ರಶಾಂತವಾಗಿತ್ತು, ಆದರೆ ಕೂದಲು ನೇರವಾಗಿ ಹಿಂದಕ್ಕೆ ಎಳೆಯಲ್ಪಟ್ಟಿತ್ತು. ಅವರು ನನ್ನೊಡನೆ ಮಾತನಾಡಿದರು ಮತ್ತು ನನಗೆ ಒಂದು ಮಂತ್ರವನ್ನು ಕೊಟ್ಟರು. [3] ಅದೊಂದು ಅತ್ಯಂತ ಅದ್ಭುತ ಅನುಭವ. ನಂತರದ 12 ವರ್ಷಗಳಲ್ಲಿ ನಾನು ಸದಾಕಾಲ ಆ ಮುಖವನ್ನು ಕಾಣಲು ಹುಡುಕುತ್ತಲೇ ಇದ್ದೆ.

1969ರಲ್ಲಿ, ಹಾಲಿವುಡ್ ಟೆಂಪಲ್, ಇಂಡಿಯಾ ಹೌಸ್‌ನ ಒಂದು ಔತಣಕೂಟದಲ್ಲಿ

“ನನ್ನ ಜವಾಬ್ದಾರಿಗಳಿಂದ ನಿವೃತ್ತಿ ಹೊಂದಿ, ಧ್ಯಾನ ಮಾಡಬಹುದು ಎಂಬ ಕಾರಣಕ್ಕಾಗಿ,1958ರಲ್ಲಿ ನಾನು ಕಲ್ಕತ್ತಾ ಹತ್ತಿರದಲ್ಲಿ ಒಂದು ಪ್ರಶಾಂತ ಆಶ್ರಮವನ್ನು ಹುಡುಕಲು ಪ್ರಯತ್ನಿಸಲು ನಿರ್ಧರಿಸಿದೆ. ದಕ್ಷಿಣೇಶ್ವರದ ಕಾಳಿ ಮಂದಿರದ ಹತ್ತಿರದಲ್ಲಿರುವ ಯೋಗದಾ ಮಠದ ಬಗ್ಗೆ ಕೇಳಿದ್ದೆ. ನಾನು ಅಲ್ಲಿಗೆ ಹೋಗಿ ನೋಡಿದೆ, ಅದು ನಿಜವಾಗಿಯೂ ವಿವಿಕ್ತವಾಗಿರುವುದನ್ನು ಕಂಡೆ; ಹೆಚ್ಚೇನೂ ಸಂದರ್ಶಕರು ಬರುತ್ತಿರಲಿಲ್ಲ. ಅದು ಗಂಗೆಯ ದಡದ ಮೇಲೆ ಸುಂದರವಾಗಿ ನೆಲೆಸಿತ್ತು. ನಾನು ಅಲ್ಲಿ ಇದ್ದ ಒಬ್ಬ ಸನ್ಯಾಸಿಯೊಡನೆ ವಸತಿಯ ಸಾಧ್ಯತೆ ಬಗ್ಗೆ ಮಾತನಾಡಿದೆ. ಅವರು ಸಂಸ್ಥಾಪಕರ ಬಗ್ಗೆ ಹೇಳಿದರು ಮತ್ತು ಅವರ ಪುಸ್ತಕ ಯೋಗಿಯ ಆತ್ಮಕಥೆ (ಆಟೋ ಬಯೋಗ್ರಫಿ ಆಫ್ ಎ ಯೋಗಿ) ಯನ್ನು ಕೊಟ್ಟರು. ನಾನು ಪುಸ್ತಕವನ್ನು ಖರೀದಿಸಿ ಹೊರಟುಹೋದೆ.”

“ಒಬ್ಬ ಯೋಗಿಯು ತನ್ನ ಆತ್ಮಕಥೆಯನ್ನು ಬರೆಯುವ ಬಗ್ಗೆ ನಾನು ಸಂಶಯಾತ್ಮಕನಾಗಿದ್ದೆ ಅದರಲ್ಲೂ ವಿಶೇಷವಾಗಿ, ಅನೇಕ ವರ್ಷಗಳನ್ನು ಪಶ್ಚಿಮದಲ್ಲಿ ಕಳೆದಿರುವವರ ಬಗ್ಗೆ. ಆದರೆ ನಾನು ಅದರ ಪುಟಗಳನ್ನು ಸುಮ್ಮನೆ ಹಾಗೇ ತಿರುವಿ ಹಾಕಿದಾಗ, ಇದೊಂದು ಸಾಮಾನ್ಯ ಗ್ರಂಥವಲ್ಲ ಎಂಬುದನ್ನು ಅರಿತೆ—ಅಕಸ್ಮಾತ್ತಾಗಿ ಯಾವುದೇ ವಾಕ್ಯವನ್ನು ಓದಿದರೂ ಅದು ಆಧ್ಯಾತ್ಮಿಕ ಚೈತನ್ಯ ಹಾಗೂ ಸತ್ಯಗಳಿಂದ ಅನುರಣಿಸುತ್ತಿತ್ತು.

“ಆದರೆ ಮಹಾವತಾರ ಬಾಬಾಜಿಯವರ ಚಿತ್ರ ಇರುವ ಪುಟವನ್ನು ತಿರುಗಿಸಿದಾಗ ನನಗೆ ಉಂಟಾದ ಪರಮಾಶ್ಚರ್ಯವನ್ನು ಊಹಿಸಿ. ʼಇದು ಅವರೇ!ʼ ನಾನು ಉದ್ಗರಿಸಿದೆ, ‘ನನಗೆ ದರ್ಶನ ನೀಡಿದವರು. ಅವರಿಗಾಗಿ ಇಷ್ಟೊಂದು ವರ್ಷಗಳಿಂದ ಹುಡುಕುತ್ತಿದ್ದೇನೆ! ಇದು ಸಾಧ್ಯವೇ? ಅಥವಾ ಇದು ಕೇವಲ ನನ್ನ ಊಹೆಯೇ?'”

ಅಮೇರಿಕಾದಿಂದ ಬರುತ್ತಿರುವ, ಪರಮಹಂಸ ಯೋಗಾನಂದರ ಸಂಸ್ಥೆಯ ಅಧ್ಯಕ್ಷರಿಗಾಗಿ ಸಿದ್ಧತೆಗಳು ನಡೆಯುತ್ತಿವೆಯೆಂದು ಯೋಗದಾ ಮಠದ ಆ ಸನ್ಯಾಸಿ ಹೇಳಿದ್ದುದು ನಂತರ ಅವರಿಗೆ ನೆನಪಾಯಿತು. ಅವರು ತಮ್ಮ ಸಂದೇಹಾತ್ಮಕ ಪ್ರತಿಕ್ರಿಯೆಯನ್ನೂ ನೆನಪಿಸಿಕೊಂಡರು: “ಅಮೇರಿಕಾ ದೇಶದ ಆಧ್ಯಾತ್ಮಿಕ ಮುಖಂಡರೇ? ಮತ್ತು ಅದೂ ಒಬ್ಬ ಮಹಿಳೆ? ಅಸಂಬದ್ಧ!” ಅವರ ಆಲೋಚನೆಗಳು ಈ ರೀತಿ ಇದ್ದವು. ಆದರೂ ಅವರು ಯಾವುದೋ ಸೆಳೆತವನ್ನು ಅನುಭವಿಸಿದರು ಮತ್ತು ಕೆಲವೇ ದಿನಗಳಲ್ಲಿ ಅವರಿಗೆ ಶ್ರೀ ದಯಾಮಾತಾರೊಡನೆ ಮಾತನಾಡುವ ಅವಕಾಶ ಒದಗಿಬಂದಿತು. “ನಾನು ಆ ಭೇಟಿಯಿಂದ ಹೊರಬಂದಾಗ, ನನ್ನ ಸಾಧನೆಯಲ್ಲಿದ್ದ ಕೊರತೆಯನ್ನು ಆಕೆ ತುಂಬಿಕೊಟ್ಟಿದ್ದರ ಅರಿವಾಯಿತು. ನಾನು ಸ್ವಾಮಿ ವಿವೇಕಾನಂದರ ಸುಪ್ರಸಿದ್ಧ ಉದಾಹರಣೆಯಿಂದ ಸ್ಫೂರ್ತಿಗೊಂಡು ಜ್ಞಾನ ಯೋಗದ ಮಾರ್ಗವನ್ನು ಅನುಸರಿಸುತ್ತಿದ್ದೆ. ಆದರೆ ನನ್ನ ಸ್ವಂತದ ಸಾಧನೆ, ಶುಷ್ಕ ಮತ್ತು ಶೂನ್ಯವಾಗಿಯೇ ಉಳಿದಿತ್ತು. ನಾನು ಮತ್ತಷ್ಟು ಭಕ್ತಿಯನ್ನು, ಮತ್ತಷ್ಟು ಪ್ರೇಮ ಮತ್ತು ಭಗವಂತನಿಗಾಗಿ ಹಂಬಲಿಕೆಯನ್ನು ಬೆಳೆಸಿಕೊಳ್ಳಬೇಕೆಂದು ಮಾ ಹೇಳಿದರು. ನನ್ನ ಹೃದಯ ತುಂಬಿ ಬಂದಿತು. ಅವರು ಸರಿಯಾಗಿಯೇ ಹೇಳಿದ್ದಾರೆಂದು ಗೊತ್ತಾಯಿತು. ವಿಚಿತ್ರವೆಂದರೆ ಮಾ ಜೊತೆಗಿನ ಭೇಟಿಯು, ರಾಜಗೀರ್ ನಲ್ಲಿ ಬಾಬಾಜಿಯವರ ದರ್ಶನದ, ಸರಿಯಾಗಿ 12 ವರ್ಷಗಳ ನಂತರ, ಅದೇ ದಿನವೇ ಆಗಿತ್ತು: ನನ್ನ ಹುಡುಕಾಟ ಕೊನೆಗೊಂಡಿತು ಎಂದು ಭಾವಿಸಿದೆ.”

ಆದರೂ ಸಂಶಯವು ಅವರ ಮನಸ್ಸಿನಲ್ಲಿ ಹೋರಾಟ ಮಾಡಲಾರಂಭಿಸಿತು. ಈಗ ಅವರೇನಾದರೂ ಮಾಯೆಯಿಂದಾಗಿ ತಪ್ಪು ದಾರಿಗೆ ಎಳೆಯಲ್ಪಟ್ಟಿದ್ದರೆ ಅವರ ಇಡೀ ಜೀವನ ಹಾಗೂ ಹುಡುಕಾಟವು ವ್ಯರ್ಥವಾಗುತ್ತಿತ್ತು. ಅವರು ದೂರವಾಗಿದ್ದುಕೊಂಡೇ, ಆಶ್ರಮಕ್ಕೆ ಬಂದು ಸದ್ದಿಲ್ಲದೆ ಧ್ಯಾನ ಮಾಡುತ್ತಿದ್ದರು ಮತ್ತು ಹೇಳದೆ ಕೇಳದೆ ಹೊರಟುಹೋಗುತ್ತಿದ್ದರು. ಅವರು ಒಂದು ಸಮಯದಲ್ಲಿ ದೀರ್ಘಾವಧಿಗಳವರೆಗೆ ದೂರವಿರಲು ಪ್ರಯತ್ನಿಸಿದರು. ಆದರೆ ಅವರು ಪುನಃ ಬಂದಾಗ ಅದೇ ಶಾಂತಿಯುತ ಆಶ್ವಾಸನೆಯು, ಅವರಲ್ಲಿ ಹೆಚ್ಚುತ್ತಾ ಹೋಗುತ್ತಿತ್ತು. ಭಾರತದಲ್ಲಿ ತಾವು ಇದುವರೆಗೆ ಭೇಟಿಯಾದವರಲ್ಲೇ ಇವರು ಆಳವಾಗಿ ಭಗವಂತನನ್ನು ಅರಸುತ್ತಿರುವ ಒಂದು ಅಸಾಧಾರಣ ಆತ್ಮ ಎಂದು ಶ್ರೀ ದಯಾ ಮಾತಾ ಅದಾಗಲೇ ಅವರನ್ನು ಜನಸಮೂಹದಿಂದ ಪ್ರತ್ಯೇಕಿಸಿದ್ದರು.

ದಯಾಮಾತಾ ಭಾರತದ ರಾಂಚಿಗೆ ಭೇಟಿ ನೀಡಿದಾಗ ಅವರೂ ಅಲ್ಲಿಗೆ ಪಯಣಿಸಿದರು, ಅಲ್ಲಿ ಪರಮಹಂಸಜಿಯವರ ಕಾರ್ಯವು ಪ್ರವರ್ಧಮಾನಕ್ಕೆ ಬಂದಿರುವ ಬಾಲಕರ ಶಾಲೆಯೊಂದಿಗೆ ಆರಂಭವಾಗಿತ್ತು. ಅಲ್ಲಿ ಅವರಿಬ್ಬರೂ ಕಾರ್ಯದ ಬಗ್ಗೆ ಅನೇಕ ಬಾರಿ ಬಿಚ್ಚುಮನಸ್ಸಿನಿಂದ ಮಾತುಕತೆ ನಡೆಸಿದರು. ಭಾರತದಲ್ಲಿ ತನ್ನ ಗುರುವಿನ ಕೆಲಸವನ್ನು ಬಹಳ ನಿರ್ಲಕ್ಷಿಸಲಾಗಿದೆ ಮತ್ತು ಅದು ಬಹಳ ಹದಗೆಟ್ಟಿದೆ—ಅದು ಸಾಯುತ್ತಿರುವ ಸಂಸ್ಥೆಯಾಗಿದೆ ಎಂದು ದಯಾ ಮಾತಾ ತಮ್ಮ ಮನದಾಳದ ನೋವನ್ನು ಅವರಲ್ಲಿ ದೀರ್ಘವಾಗಿ ತೋಡಿಕೊಂಡರು. ಅವರ ಚುರುಕು ಬುದ್ಧಿಯ ಪ್ರತಿಕ್ರಿಯೆ ಹಾಗೂ ವಿವೇಚನಾ ಶಕ್ತಿ ಆಕೆಯ ಗಮನಕ್ಕೆ ಬಂದಿತು.

ಪುರಿಯಲ್ಲಿರುವ ಸ್ವಾಮಿ ಶ್ರೀ ಯುಕ್ತೇಶ್ವರರ ಯೋಗದಾ ಸತ್ಸಂಗ ಆಶ್ರಮಕ್ಕೆ ಶ್ರೀ ದಯ ಮಾತಾರವರ ತಂಡದೊಂದಿಗೆ ಅವರೂ ಹೋದರು. ಶ್ಯಾಮಾನಂದರ ಮನಸ್ಸಿನಲ್ಲಿ ಏನಾದರೂ ಸಂಶಯಗಳು ಉಳಿದುಕೊಂಡಿದ್ದರೆ ಈ ಪ್ರವಾಸದಲ್ಲಿ ಅವು ಶಾಶ್ವತವಾಗಿ ಹೊರಹಾಕಲ್ಪಟ್ಟವು.

ಪುರಿಯ ಜಗನ್ನಾಥ ದೇವಾಲಯವನ್ನು ಭಾರತದಲ್ಲಿ ಒಂದು ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ. ಅದಕ್ಕೆ ಶ್ಯಾಮಾನಂದರ ಹೃದಯದಲ್ಲಿ ವಿಶೇಷ ಪೂಜನೀಯ ಸ್ಥಾನವಿತ್ತು. ಅಲ್ಲಿಗೆ ಅವರು ಅನೇಕ ಬಾರಿ ತೀರ್ಥಯಾತ್ರೆ ಕೈಗೊಂಡಿದ್ದರು ಮತ್ತು ಅದರ ಪವಿತ್ರ ವಾತಾವರಣಗಳಲ್ಲಿ ಅವರ ಧ್ಯಾನಗಳು ಸದಾ ಆಳವಾಗಿ ಅನುಗ್ರಹಿತವಾಗಿದ್ದವು. ಪೂಜ್ಯ ಶ್ರೀ ಶಂಕರಾಚಾರ್ಯ ಭಾರತಿ ಕೃಷ್ಣ ತೀರ್ಥ [4] ರವರಿಂದ ಪಡೆದ ಒಂದು ವಿಶೇಷ ರಿಯಾಯಿತಿಯಿಂದ, ದಯಾಮಾತಾರವರು ಜಗನ್ನಾಥ ಮಂದಿರವನ್ನು ಪ್ರವೇಶಿಸಲು [5], ಅನುಮತಿ ದೊರೆತ ಪ್ರಥಮ ಅಮೆರಿಕನ್ ಆಗಿದ್ದರು. ಅಂದು ಶ್ಯಾಮಾನಂದರು ಅವರ ತಂಡದಲ್ಲಿ ಇದ್ದರು.

ಆಕೆ ಗರ್ಭಗುಡಿಯ ಎದುರಿನಲ್ಲಿ ಧ್ಯಾನ ಮಾಡುತ್ತಿರುವಾಗ—ಅಲ್ಲಿ ವಿಶ್ವದೊಡೆಯ ಭಗವಾನ್ ಕೃಷ್ಣನ, ಅಂದರೆ ಜಗನ್ನಾಥನ, ಅವನ ಸೋದರಿ ಸುಭದ್ರೆಯ ಹಾಗೂ ಅವನ ಸೋದರ ಬಲರಾಮನ ಮೂರ್ತಿಗಳಿವೆ— ಆಕೆ ಆಳವಾದ ಪರಮಾನಂದಸ್ಥಿತಿಗೆ ಹೋಗಿ, ಅಲ್ಲಿ ತನ್ನ ಸುತ್ತಲಿನ ಪರಿವೆಯೇ ಇಲ್ಲದ ಸ್ಥಿತಿಯಲ್ಲಿದ್ದರು. ಶ್ಯಾಮಾನಂದಜಿಯವರು ಆ ಸಮಯದ ತಮ್ಮ ಸ್ವಂತ ಅನುಭವವನ್ನು ಹೀಗೆ ವಿವರಿಸಿದರು:

“ನಾನು ಒಂದು ಕಡೆ ಸ್ವಲ್ಪ ದೂರದಲ್ಲಿ, ಗೋಡೆಗೆ ಒರಗಿಕೊಂಡು, ಮಾ ಅವರು ಧ್ಯಾನ ಮಾಡುತ್ತಿದ್ದುದನ್ನು ನೋಡುತ್ತಾ ನಿಂತಿದ್ದೆ. ಇದ್ದಕ್ಕಿದಂತೆ ಆಕೆಯ ಸ್ವರೂಪ ಬೆಳಕಿನಲ್ಲಿ ಅದೃಶ್ಯವಾಗಲಾರಂಭಿಸಿತು. ನಾನು ಗರ್ಭಗುಡಿಯಲ್ಲಿದ್ದ ಜಗನ್ನಾಥನ ಮೂರ್ತಿಯ ಕಡೆ ನೋಡಿದೆ, ನಂತರ ಮತ್ತೆ ಮಾ ಕಡೆ ಮತ್ತು ಪುನಃ ಗರ್ಭಗುಡಿಯ ಕಡೆ; ಈ ರೀತಿ ಹಲವಾರು ಬಾರಿ ಮಾಡಿದೆ, ತಲೆಯನ್ನು ಅಲ್ಲಾಡಿಸುತ್ತಾ ನಾನು ಊಹೆ ಮಾಡುತ್ತಿಲ್ಲವೆಂಬುದನ್ನು ಖಚಿತ ಪಡಿಸಿಕೊಂಡೆ. ಅವರಿಬ್ಬರೂ ಒಂದೇ ಎಂಬುದು ನನಗೆ ತಿಳಿದಿತ್ತು! ಈ ಅನುಭವ ಬಹಳ ಸಮಯ ಮುಂದುವರೆಯಿತು, ನಂತರ ಕ್ರಮೇಣ ಮಾ ಅವರ ಸ್ವರೂಪ ಮತ್ತೆ ಕಾಣಲಾರಂಭಿಸಿತು. ಸ್ವಲ್ಪ ಸಮಯದ ನಂತರ ಆಕೆ ಅಲ್ಲಿಂದ ಎದ್ದು, ದೇವಾಲಯವನ್ನು ಬಿಟ್ಟು ಹೊರಟರು. ಅವರು ಹಾಗೆ ಹೋಗುವಾಗ ತಮ್ಮ ಕಾವಿ ಬಣ್ಣದ ಕರವಸ್ತ್ರವನ್ನು ಕೆಳಗೆ ಬೀಳಿಸಿದ್ದನ್ನು ನಾನು ಗಮನಿಸಿದೆ. ಅವರ ಜೊತೆಗಿದ್ದವರು ಅದನ್ನೇಕೆ ಎತ್ತಲಿಲ್ಲ ಎಂದು ಅಚ್ಚರಿಪಟ್ಟೆ. ಅದನ್ನು ಮುಟ್ಟಲು ನನಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಆ ಪವಿತ್ರ ಸ್ಥಳದಲ್ಲಿ ನಾನು ಆಗ ತಾನೆ ನೋಡಿದ್ದನ್ನು ಕಂಡ ಮೇಲೆ, ಆ ಕರವಸ್ತ್ರವು ಒಂದು ಕುರುಹಾಗಿತ್ತು. ಅದನ್ನು ಎತ್ತಿಕೊಳ್ಳುವುದೆಂದರೆ ನಾನು ಆಕೆಯ ಪತಾಕೆಯನ್ನು ಎತ್ತಿ ಹಿಡಿಯಲು ಭಗವಂತನ ಎದುರಿಗೆ ಬದ್ಧನಾದಂತೆ. ನಾನು ಈ ರೀತಿ ಎಂದೂ ಯಾರಿಗೂ, ಯಾವ ಸಂಸ್ಥೆಗೂ ಬದ್ಧನಾಗಿರಲಿಲ್ಲ. ಆದರೂ ಅದನ್ನು ಅಲ್ಲಿಯೇ ಬಿಟ್ಟು ಬಿಡಲು ಸಾಧ್ಯವಾಗಲಿಲ್ಲ. ನಾನು ಗರ್ಭಗುಡಿಯ ಕಡೆ ನೋಡಿ ಭಾವಾವಿಷ್ಟನಾಗಿ, ಪ್ರಾರ್ಥನೆ ಮಾಡಿದೆ, ‘ಹೇ ಪ್ರಭು, ನೀನು ಏನು ಮಾಡುತ್ತಿರುವೆ? ನೀನು ಏನನ್ನು ಕೇಳುತ್ತಿರುವೆ?’ ಅಂತಿಮವಾಗಿ ನಾನು, ‘ಹೇ ಪ್ರಭು, ಅದೇನಾಗಬೇಕಾಗಿದೆಯೋ ಆಗಲಿ,’ ಎಂದು ಹೇಳಿದೆ ಮತ್ತು ಆ ಕರವಸ್ತ್ರವನ್ನು ಎತ್ತಿಕೊಂಡು, ಹೊರಗಡೆ ಮಾ ಬಳಿಗೆ ತೆಗೆದುಕೊಂಡು ಹೋದೆ.”

ಹಿಮಾಲಯದ ತಪ್ಪಲಿನಲ್ಲಿ ದ್ವಾರಹಟ್ ಗೆ ಹೋಗುವ ದಾರಿಯಲ್ಲಿ ಶ್ರೀ ದಯಾಮಾತಾ ಮತ್ತು ಸ್ವಾಮಿ ಶ್ಯಾಮಾನಂದರು ಸ್ನೇಹಪರ ಬೆಟ್ಟದ ಜನರನ್ನು ಎದುರುಗೊಳ್ಳುತ್ತಿರುವುದು,. ಡಿಸೆಂಬರ್ 1963
ಶ್ರೀ ದಯಾಮಾತಾ, ಮತ್ತು ಸ್ವಾಮಿ ಶ್ಯಾಮಾನಂದ ಮತ್ತು ಜೊತೆಯಲ್ಲಿ ಶ್ರೀ ಬನಮಾಲಿ ದಾಸ್, ವೈಎಸ್ಎಸ್ ನ ಮಾಜಿ ಉಪಾಧ್ಯಕ್ಷರು ಮತ್ತು ಸ್ವಾಮೀಜಿಯವರ ಆಜೀವ ಪರ್ಯಂತದ ಸ್ನೇಹಿತರಲ್ಲಿ ಒಬ್ಬರು.

ಶ್ರೀ ದಯಮಾತಾರವರಿಗೆ ಕರವಸ್ತ್ರವನ್ನು ಕೆಳಗೆ ಬೀಳಿಸಿಕೊಂಡಿದ್ದರ ಬಗ್ಗೆ ಮತ್ತು ಅದನ್ನು ಎತ್ತಲು ಅವರ (ಶ್ಯಾಮಾನಂದರ) ಹಿಂಜರಿಕೆಯ ಬಗ್ಗೆ ಅಸ್ಪಷ್ಟ ಅರಿವಿತ್ತಷ್ಟೆ. ಅವರು ಅದು ಒಂದು ನಿಶಾನೆ ಎಂಬುದನ್ನೂ ಅರಿತಿದ್ದರು. ಅವರು ಅದನ್ನು ಆಕೆಯ ಕೈಗೆ ಒಪ್ಪಿಸಿದಾಗ, ಅದು ಆಕೆಗೆ ಆಗಲೇ ತಿಳಿದ್ದುದರ ಪುಷ್ಟೀಕರಣವಾಗಿತ್ತು: ಆಕೆಯ ಗುರುವಿನ ಕಾರ್ಯವನ್ನು ಭಾರತದಲ್ಲಿ ಪುನರ್ ನಿರ್ಮಾಣ ಮಾಡುವಂತೆ ಸಹಾಯ ಮಾಡಲು ಭಗವಂತ ಅವರನ್ನು ಆಯ್ಕೆ ಮಾಡಿದ್ದನು.

ಇದೇ ರೀತಿಯಾದ,”ಗುರುವಿನ ಲಾಂಛನವನ್ನು ಎತ್ತಿ ಹಿಡಿಯುವ” ಸಾಂಕೇತಿಕ ಕ್ರಿಯೆಯು ಕೆಲವು ವರ್ಷಗಳ ಹಿಂದೆ ಶ್ಯಾಮಾನಂದರ ಜೀವನದಲ್ಲಿ ನಡೆದಿತ್ತು. 1930ರಲ್ಲಿ ದುರ್ಗಾ ಪೂಜೆಯ ಸಮಯದಲ್ಲಿ [6] ಯುವ ಬಿನಯೇಂದ್ರ ಮತ್ತು ಅವನ ಕೆಲವು ಆಪ್ತಮಿತ್ರರು, ಒಂದು ರಜೆಯಲ್ಲಿದ್ದರು. ಸ್ವಾಮೀಜಿಯ ಅತ್ಯಂತ ಪ್ರೀತಿಪಾತ್ರ ಮತ್ತು ಆಜೀವ ಪರ್ಯಂತ ಸ್ನೇಹಿತರಲ್ಲೊಬ್ಬರಾದ ಶ್ರೀ ಬನಮಾಲಿ ದಾಸ್ ಅವರ ಕುಟುಂಬವು [7], ಒಂದು ಬಂಗಲೆಯನ್ನು ರಾಂಚಿಯಲ್ಲಿ ಒಂದು ತಿಂಗಳ ಮಟ್ಟಿಗೆ ಬಾಡಿಗೆಗೆ ಪಡೆದಿದ್ದರು. ಉತ್ಸಾಹಯುತ ಯುವ ಬಾಲಕರು ಅಲ್ಲಿ ಅವರ ಅತಿಥಿಗಳಾಗಿ ಸೇರಿಕೊಂಡರು. ಈ ಬಂಗಲೆಯು ಕಾಸಿಂ ಬಜಾರ್ ನ ಮಹಾರಾಜರ ಎಸ್ಟೇಟಿನ ಭಾಗವಾಗಿರುವುದು ಮತ್ತು ಅದು ಒಂದು ಕಾಲಕ್ಕೆ ಪರಮಹಂಸ ಯೋಗಾನಂದರ ಯೋಗದಾ ಪಾಠ ಶಾಲೆಯಾಗಿದ್ದುದು, ಆದರೆ ಅದು ಅತಿಯಾಗಿ ಬೆಳೆದಿದ್ದರಿಂದ 1929ರಲ್ಲಿ ಖಾಲಿ ಮಾಡಲಾಗಿತ್ತು ಎಂಬುದು ರಜೆಯಲ್ಲಿದ್ದ ಯುವಕರಿಗೆ ತಿಳಿದಿರಲಿಲ್ಲ. ಶ್ಯಾಮಾನಂದರು ಹೇಳಿದರು,”ನಾವು ಅಲ್ಲಿಗೆ ಹೋದಾಗ, ನಾನು ಯೋಗದಾ ಸೂಚನಾ ಫಲಕವು ನೆಲದ ಮೇಲೆ ಬಿದ್ದಿರುವುದನ್ನು ಗಮನಿಸಿದೆನು. ಅದು ಧೂಳಿನಿಂದ ಮುಚ್ಚಿ ಹೋಗಿತ್ತು ಮತ್ತು ಅದಕ್ಕೆ ಗೆದ್ದಲು ಹಿಡಿದಿತ್ತು. ನನಗೆ ಯಾವುದೂ ಹಾಳಾಗಿ ಹೋಗುವುದನ್ನು ನೋಡಲು ಆಗುತ್ತಿರಲಿಲ್ಲ, ಅದು ನನ್ನದಲ್ಲದೆ ಹೋಗಿದ್ದರೂ ಸಹ. ನಾನು ಹೀಗೂ ಯೋಚಿಸಿದೆ, ‘ಇದೊಂದು ಆಧ್ಯಾತ್ಮ ಸಂಸ್ಥೆಯಾಗಿದ್ದಿರಬಹುದು: ಈ ನಾಮಫಲಕವು ನೆಲದ ಮೇಲೆ ಬಿದ್ದಿದ್ದು, ಅದರ ಮೇಲೆ ಜನರು ಓಡಾಡುವುದು ಸರಿಯಲ್ಲ,ʼ” ಅವರು ಆ ಫಲಕವನ್ನು ಎತ್ತಿಕೊಂಡು ಕಸ ಮತ್ತು ಗೆದ್ದಲು ಹಿಡಿದಿದ್ದನ್ನೆಲ್ಲ ಸ್ವಚ್ಛಗೊಳಿಸಿ, ಅದನ್ನು ಒಂದು ಮರಕ್ಕೆ ಒರಗಿಸಿದರು: ಅರಿಯದೆ ಇದ್ದರೂ, ಅವರ ಮೊದಲ ವಿಚಾರಪೂರ್ಣ ಗುರು ಸೇವಾ ಕಾರ್ಯ.

ಶ್ಯಾಮಾನಂದರು ಶ್ರೀ ದಯಾ ಮಾತಾರೊಡನೆ ಪುರಿಯಲ್ಲಿದ್ದಾಗ, ಅವರನ್ನು ದೀಕ್ಷೆ ಕೊಡಲು ಕೇಳಿಕೊಂಡರು.[8] ಆ ಸಮಾರಂಭವು ಯೋಗದಾ ಆಶ್ರಮದ ನೆಲದಲ್ಲಿ, ಸ್ವಾಮಿ ಶ್ರೀಯುಕ್ತೇಶ್ವರರ ಸಮಾಧಿಯ ಮೇಲೆ ಪರಮಹಂಸಜಿಯವರು ಕಟ್ಟಿದ ಸ್ಮೃತಿ ಮಂದಿರದಲ್ಲಿ ನಡೆಯಿತು. ಭಾರತದಲ್ಲಿ ಶ್ಯಾಮಾನಂದರು ಶ್ರೀ ದಯಾಮಾತಾರವರಿಂದ ದೀಕ್ಷೆ ಪಡೆದ ಪ್ರಥಮ ವ್ಯಕ್ತಿಯಾಗಿದ್ದರು. ಅದು ಆರಂಭವಾಗಿತ್ತು: ಪರಮಹಂಸ ಯೋಗಾನಂದರ ಕಾರ್ಯಕ್ಕೆ ಹಿಂತಿರುಗಿದ ಒಂದು ಜೀವನದ ಕಿಡಿಯಾಗಿತ್ತು.

1958- 59 ರ ಭೇಟಿಯ ಅಂತ್ಯದಲ್ಲಿ, ಭಾರತವನ್ನು ಬಿಟ್ಟು ಹೋಗುವ ಮುನ್ನ, ಅಂದಿನ ಶ್ರೀ ಬಿ. ಎನ್. ದುಬೆಯವರನ್ನು(ಶ್ಯಾಮಾನಂದರನ್ನು), ನಿರ್ದೇಶಕರ ಮಂಡಳಿಗೆ ಚುನಾಯಿಸಲಾಯಿತು ಮತ್ತು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಯಿತು. ಅನಂತರ ಅವರು ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ ನ ಅಂತರ ರಾಷ್ಟ್ರೀಯ ಪ್ರಧಾನ ಕಚೇರಿಯ ನಿರ್ದೇಶಕರ ಮಂಡಳಿಗೂ ಚುನಾಯಿತರಾದರು. ನಂತರದ ವರ್ಷಗಳಲ್ಲಿ ದಯಾ ಮಾತಾರವರು, ಆಗಾಗ ಅವರಿಗೆ ಔಪಚಾರಿಕವಾಗಿ ಸನ್ಯಾಸ ದೀಕ್ಷೆಯನ್ನು ತೆಗೆದುಕೊಳ್ಳಲು ಪ್ರೋತ್ಸಾಹಿಸುತ್ತಿದ್ದರು. ಅವರು ಆ ಪ್ರತಿಜ್ಞೆಗಳನ್ನು ಅನೌಪಚಾರಿಕವಾಗಿ 1938ರ ಕುಂಭಮೇಳದಲ್ಲಿ ತೆಗೆದುಕೊಂಡಿದ್ದರು. ಅವರು ಮತ್ತೆ ಮತ್ತೆ ತಿರಸ್ಕರಿಸಿದರು, ಅವರು ನೀಡಿದ ಕಾರಣ: “ಬಿರುದುಗಳಿಂದ ಹಾಳಾಗುವುದು ಅದೆಷ್ಟು ಸುಲಭ ಎಂದು ನಾನು ನೋಡಿದ್ದೇನೆ. ಅದರಲ್ಲೂ ವಿಶೇಷವಾಗಿ ತ್ಯಾಗದ ಕಾವಿ ವಸ್ತ್ರವನ್ನು ಧರಿಸಿದವರಿಗೆ ಬಹಳ ಗೌರವವಿರುವ ಭಾರತದಲ್ಲಿ. ಮೊದಲು ಕೆಲಸ ಮಾಡಿ ನಾನು ಸಾಬೀತು ಪಡಿಸಿಕೊಳ್ಳುತ್ತೇನೆ; ನಂತರ ಭಗವಂತನ ಇಚ್ಛೆ.” ಸ್ವಲ್ಪ ಸಮಯದ ನಂತರ ಅವರು ವಿನಮ್ರತೆಯಿಂದ ಶ್ರೀ ದಯಾ ಮಾತಾರವರಿಂದ ಯೋಗಾಚಾರ್ಯ (ಯೋಗದ ಶಿಕ್ಷಕ) ಎಂಬ ಬಿರುದನ್ನು ಸ್ವೀಕರಿಸಲು ಒಪ್ಪಿಗೆ ನೀಡಿದರು. ನಂತರ ಅವರು ಸ್ವಾಮಿ ಆಗುವವರೆಗೆ, ಯೋಗಾಚಾರ್ಯ ಬಿನಯ ನಾರಾಯಣ ಎಂದೇ ಪರಿಚಿತರಾಗಿದ್ದರು. ಅಕ್ಟೋಬರ್ 10, 1970 ರಲ್ಲಿ ಶ್ರೀ ದಯಾ ಮಾತಾರವರು ಪರಮಹಂಸ ಯೋಗಾನಂದ ಮತ್ತು ಅವರ ಸನ್ಯಾಸಿ ಶಿಷ್ಯರು ಸೇರಿರುವ, ಪುರಾತನ ಸಂನ್ಯಾಸಾಶ್ರಮದ ಗಿರಿ ಶಾಖೆಯಲ್ಲಿ, ಅವರಿಗೆ ಔಪಚಾರಿಕ ದೀಕ್ಷೆಯನ್ನು ದಯಪಾಲಿಸಿದರು. ದಯಾ ಮಾತಾರವರು ಅವರಿಗೆ ಸ್ವಾಮಿ ಶ್ಯಾಮಾನಂದ ಗಿರಿ ಎಂಬ ನಾಮವನ್ನು ಪ್ರದಾನ ಮಾಡಿದರು.

ಶ್ರೀ ದಯಾಮಾತಾ, ಶ್ರೀ ಮೃಣಾಲಿನಿ ಮಾತಾ, ಮತ್ತು ಸ್ವಾಮಿ ಶ್ಯಾಮಾನಂದ, ರಾಂಚಿಯ ಯೋಗದಾ ಶಾಲೆಗಳ ಸಿಬ್ಬಂದಿಯ ಜೊತೆ ರಾಂಚಿಯಲ್ಲಿ 1968.

ಶ್ಯಾಮಾನಂದಜಿಯವರು ಗುರುವಿನ ಕಾರ್ಯದಲ್ಲಿ ನಿಸ್ವಾರ್ಥ, ಅದಮ್ಯ, ಸಮರ್ಪಣಾತ್ಮಕ 12 ವರ್ಷಗಳ ಸೇವೆ ಸಲ್ಲಿಸಿದರು. ಅವರ ಪ್ರಯತ್ನಗಳಿಂದಾಗಿ, ನಶಿಸುತ್ತಿದ್ದ ಯೋಗದಾ ಸತ್ಸಂಗ ಸೊಸೈಟಿಯ ಬಗ್ಗೆ ಪರಮಹಂಸಜಿಯವರು ಹೊಂದಿದ್ದ ಉದಾತ್ತ ಕನಸುಗಳು ನನಸಾಗುವಂತಾಯಿತು. ಈ ಕನಸುಗಳನ್ನು ಪೂರೈಸಲು ಸಹಾಯ ಮಾಡುವುದಾಗಿ ಶ್ರೀ ದಯಾಮಾತಾರವರು ಪರಮಹಂಸಜಿ ಅವರಿಗೆ ವಚನ ಕೊಟ್ಟಿದ್ದರು. ಈ ಅಗಾಧ ಕಾರ್ಯದಲ್ಲಿ, ಭಗವಂತನು, ವಿಶೇಷವಾಗಿ ಅರ್ಹತೆ ಪಡೆದಿದ್ದವರೊಬ್ಬರನ್ನು ಆಕೆಯ ಸಹಾಯಕ್ಕಾಗಿ ಉತ್ತೇಜಿಸಿದನು. ದಯಾ ಮಾತಾರವರ ಮಾರ್ಗದರ್ಶನ ಹಾಗೂ ಆಶೀರ್ವಾದಗಳು ಮತ್ತು ನಂತರ ಭಾರತಕ್ಕೆ ಅವರು ನೀಡಿದ ಮೂರು ಭೇಟಿಗಳ ಬೆಂಬಲದಿಂದ, ಈ ಕಾರ್ಯಕ್ಕೆ ದೊರೆತ ಸ್ಪೂರ್ತಿ ಹಾಗೂ ಆವೇಗಗಳಿಂದಾಗಿ, ಶ್ಯಾಮಾನಂದಜಿಯವರು ಯಶಸ್ವಿಯಾಗಿ ಶ್ರಮಿಸಿದರು ಮತ್ತು ಆಗ ಅಸ್ತಿತ್ವದಲ್ಲಿದ್ದ ಆಶ್ರಮಗಳು ಮತ್ತು ರಾಂಚಿಯ ಶಾಲೆಯಲ್ಲಿ, ಕ್ಷೀಣಿಸುತ್ತಿದ್ದ ಚೇತನವನ್ನು ಪುನಶ್ಚೇತನಗೊಳಿಸಲು ಸಹಾಯ ಮಾಡಿದರು. ಅವರು ರಾಂಚಿ ಮತ್ತು ಇತರ ಸ್ಥಳಗಳಲ್ಲಿ ಹೊಸ ಶಾಲೆಗಳನ್ನು ಸಂಸ್ಥಾಪಿಸಿದರು. ಅವರು ಗುರುಗಳ ಸಂದೇಶವನ್ನು ಹರಡುತ್ತಾ ಯೋಗ ಕೇಂದ್ರಗಳು ಮತ್ತು ಧ್ಯಾನ ಮಂಡಳಿಗಳನ್ನು ಸಂಸ್ಥಾಪಿಸುತ್ತ ಭಾರತದಾದ್ಯಂತ ಪ್ರವಾಸ ಮಾಡಿದರು. 1968 ರಿಂದ 71ರ ನಡುವೆ, ಅವರು ಸಂಸ್ಥೆಯ ಕಾರ್ಯವನ್ನು ವಿಶ್ವಾದ್ಯಂತ ಪಸರಿಸುವ ಉದ್ದೇಶದಿಂದ ಲಾಸ್‌ ಏಂಜಲೀಸ್‌ನಲ್ಲಿರುವ ವೈಎಸ್ಎಸ್/ಎಸ್ಆರ್‌ಎಫ್ ಅಂತರರಾಷ್ಟ್ರೀಯ ಪ್ರಧಾನ ಕಚೇರಿಗೆ, ಒಟ್ಟು ನಾಲ್ಕು ಸಲ ಪ್ರವಾಸಗಳನ್ನು ಮಾಡಿದರು; ಈ ಪ್ರವಾಸಗಳಲ್ಲಿ ಅವರು ಪರಮಹಂಸ ಯೋಗಾನಂದರ ಸಂದೇಶವನ್ನು ಹರಡಲು ಸಹಾಯವಾಗುವಂತೆ ಪ್ರಪಂಚದ ವಿವಿಧ ಭಾಗಗಳ ಕೇಂದ್ರಗಳು ಮತ್ತು ಸದಸ್ಯರನ್ನು ಭೇಟಿ ಮಾಡಿದರು.

ತಮ್ಮ ದೇಹಕ್ಕೆ ವಿಶ್ರಾಂತಿ ತೆಗೆದುಕೊಳ್ಳುವುದು ಅಂದರೆ ಏನೆಂದೇ ಅವರಿಗೆ ತಿಳಿದಿರಲಿಲ್ಲ. ನಿಜವಾಗಿಯೂ, ಅವರ ಉತ್ಸಾಹ ಮತ್ತು ಸಮರ್ಪಣಾ ಭಾವ ಹಾಗಿತ್ತು. ಅವರಿಗೆ ಎಂದಿಗೂ ತಮ್ಮ ಕರ್ತವ್ಯದಿಂದ ವಿರಾಮದ ಅವಶ್ಯಕತೆಯ ಭಾವನೆ ಬರಲಿಲ್ಲ. “ಭಗವಂತ ಮತ್ತು ಗುರುಗಳ ಸೇವೆಯಲ್ಲಿ ಸಿಗುವಂತಹ ದೇಹ ಮತ್ತು ಆತ್ಮಗಳ ಪುನಶ್ಚೇತನ, ಅದಕ್ಕಿಂತ ಹೆಚ್ಚಾಗಿ ಮತ್ತೆಲ್ಲಿ ದೊರಕುತ್ತದೆ?” ಅವರು ಆಗಾಗ ಹೇಳುತ್ತಿದ್ದುದ್ದನ್ನು ಕೇಳಬಹುದಿತ್ತು. “ನಾನು ಭಗವಂತನ ಬಗ್ಗೆ ಮಾತನಾಡುತ್ತಿರುವಾಗ ಮತ್ತು ಅವನ ಕಾರ್ಯವನ್ನು ಮಾಡುತ್ತಿರುವಾಗ, ಅವನ ಪ್ರಾಣಶಕ್ತಿಯಿಂದ ತುಂಬಿ ಹೋಗಿರುತ್ತೇನೆ.” ಆ ವರ್ಷಗಳಲ್ಲಿ ಕಾರ್ಯದ ಬೆಳವಣಿಗೆಯು ಯಾವುದೇ ಹಿನ್ನಡೆ ಮತ್ತು ವಿರೋಧಗಳಿಂದ ಇರಲಿಲ್ಲವೆಂದಲ್ಲ, ಲೆಕ್ಕವಿಲ್ಲದಷ್ಟು ಅಡಚಣೆಗಳು ಇದ್ದವು. ಭಗವಂತನು ಶ್ಯಾಮಾನಂದಜಿಯವರಿಗೆ ಅವಶ್ಯವಾದ ಜೀವಶಕ್ತಿ ಮತ್ತು ವಿದ್ವತ್ತನ್ನು ಕೊಟ್ಟಿದ್ದನು; ಕಡಿಮೆ ಆಧ್ಯಾತ್ಮಿಕ ಔನ್ನತ್ಯ ಮತ್ತು ಗ್ರಹಣಶೀಲತೆ ಇರುವವರಿಗೆ ಇದನ್ನು ಎಂದಿಗೂ ಸಾಧಿಸಲಾಗುತ್ತಿರಲಿಲ್ಲ.

“ನಾನು 60ನೇ ವಯಸ್ಸಿಗಿಂತ ಹೆಚ್ಚು ಬದುಕಿರುವುದಿಲ್ಲ,” ಅವರು ಅನೇಕ ಸಂದರ್ಭಗಳಲ್ಲಿ ಹೇಳಿದ್ದರು. “ನಾನು ನನ್ನನ್ನು ಹಾಗೂ ನನ್ನ ಸುತ್ತಲೂ ಇರುವವರನ್ನು, ಬಹು ವರ್ಷಗಳ ಕೆಲಸಗಳನ್ನು ಕೆಲವೇ ವರ್ಷಗಳಲ್ಲಿ ಮಾಡಿ ಮುಗಿಸಲು, ಪ್ರೇರೇಪಿಸಬೇಕಾಗಿದೆ. ನಾನು ಈಗ ಗುರುಗಳಿಗೆ ಮಾಡದೇ ಇದ್ದಲ್ಲಿ, ನಂತರ ಮಾಡಲು ಸಾಧ್ಯವಾಗುವುದಿಲ್ಲ. ಭಗವಂತನು ಮುಂದೆ ಇಂತಹ ಅವಕಾಶ ನೀಡದೇ ಇರಬಹುದು.”

ಶ್ರೀ ದಯಾಮಾತಾ ಮತ್ತು ಸ್ವಾಮಿ ಶ್ಯಾಮಾನಂದರು ದಕ್ಷಿಣ ಭಾರತದ ಪ್ರವಾಸದಲ್ಲಿ: ಚೆನ್ನೈ, 1968

ಅವರ ಸೇವೆಯ ತತ್ವದ ತಾತ್ಪರ್ಯವು ಅವರ ಈ ಮಾತುಗಳಲ್ಲಿದೆ: “ಭಗವಂತನಿಗಾಗಿ ಕೆಲಸ ಮಾಡುವುದು ಒಂದು ಪೂಜೆ. ನಾನು ಕೆಲಸ ಮಾಡುತ್ತಾ ಹೋಗುತ್ತೇನೆ; ಅದರಲ್ಲಿ ನಾನು ದೃಢ ನಿಶ್ಚಿತನಾಗಿದ್ದೇನೆ. ಕೆಲಸದಲ್ಲಿಯೇ ಮೋಕ್ಷ ಮತ್ತು ವಿಮೋಚನೆ ಇದೆ ಎಂಬುದು ನನಗೆ ಗೊತ್ತು. ಬೇರೆ ವಿಧಗಳಲ್ಲಿ ಪೂಜೆ ಮಾಡುವಾಗ, ಮನಸ್ಸು ಅಲೆದಾಡುತ್ತಾ, ಸದಾ ಕಾಲ ಭಗವಂತ ಮತ್ತು ಗುರುಗಳಲ್ಲಿ ಇರದೇ ಇರಬಹುದು. ಆದರೆ ಕೆಲಸದಲ್ಲಿ, ನನ್ನ ಅಲ್ಪ ಭಾಗ ಅವರ ಜೊತೆ ಸದಾ ಕಾಲ ಇರುತ್ತದೆ. ಒಂದು ವೇಳೆ ನಾನು ನನ್ನ ಮನಸ್ಸು, ನನ್ನ ಕೈಗಳು, ನನ್ನ ಕಾಲುಗಳು—ಎಲ್ಲವನ್ನು ಅವರ ಕಾರ್ಯದಲ್ಲಿ ತೊಡಗಿಸಿದರೆ, ನನ್ನ ಮನಸ್ಸು ಅಲೆದಾಡುತ್ತಿದ್ದರೂ ನನ್ನ ಕೈಗಳು ಮತ್ತು ಕಾಲುಗಳು ಅವರಿಗಾಗಿ ನಿರತವಾಗಿರುತ್ತವೆ. ನಾನು ಕೇವಲ ಧ್ಯಾನ ಮಾಡುವುದಕ್ಕಾಗಿ ಬಿಡುವಾಗಿರಲು ಹಂಬಲಿಸುತ್ತಿದ್ದೆ. ಆದರೆ ನಾನು ಕೇವಲ ಧ್ಯಾನಕ್ಕಾಗಿಯೇ ತೊಡಗಿದ್ದಾಗ, ನನ್ನ ಮನಸ್ಸು ಭಗವಂತನಿಂದ ದೂರವಾಗಿ ಅಲೆದಾಡಿದರೆ, ಆ ಕ್ಷಣಗಳಲ್ಲಿ ನಾನು ನೂರಕ್ಕೆ ನೂರು ಪ್ರತಿಶತ ಭಗವಂತನಿಂದ ದೂರವಾಗುತ್ತಿದ್ದೆ. ಆದರೆ ನಾನು ಭಗವಂತ ಮತ್ತು ಗುರುವಿಗಾಗಿ ಕೆಲಸ ಮಾಡುತ್ತಿರುವಾಗ, ನನ್ನ ಮನಸ್ಸು ಅಲೆದಾಡಿದರೂ ಸ್ವಲ್ಪ ಪ್ರತಿಶತ ನಾನು ಅವರೊಡನೆ ಇರುತ್ತೇನೆ. ಅದೇ ಕರ್ಮಯೋಗದ ರಹಸ್ಯ ಎಂದು ನಾನು ಅರಿತುಕೊಂಡಿದ್ದೇನೆ ಮತ್ತು ಇಷ್ಟು ಮಾತ್ರ ನನಗೆ ಗೊತ್ತು‌, ನನ್ನ ದೇಹದಲ್ಲಿ ರಕ್ತದ ಕೊನೆ ಹನಿ ಇರುವವರೆಗೂ ನಾನು ಗುರುಗಳಿಗಾಗಿ ಕೆಲಸ ಮಾಡುತ್ತಿರುತ್ತೇನೆ. ‌ಈ ಕರ್ತವ್ಯದಲ್ಲಿಯೇ ನನ್ನ ಮೋಕ್ಷ ಇದೆ ಎಂಬುದು ನನಗೆ ಮನವರಿಕೆ ಆಗಿದೆ.”

ಶ್ರೀ ದಯಾಮಾತಾ ಸ್ವಾಮೀಜಿಯವರ ಮೇಲೆ ಕಾಷಾಯ ವಸ್ತ್ರವನ್ನು ಹೊದಿಸಿದರು 1970.

ಕೆಲವೇ ಜನರಿಗೆ ಸಾಧ್ಯವಾಗುವ ರೀತಿಯಲ್ಲಿ ಅವರು ಆ ಪ್ರತಿಜ್ಞೆಯನ್ನು ಉಳಿಸಿಕೊಂಡರು. ಅವರ ಕೊನೆಯ ದಿನಗಳಲ್ಲಿ, ಅವರು ಅನುಭವಿಸಿದ ಮಾರಣಾಂತಿಕ ಕಾಯಿಲೆಯು ಅವರ ಶಕ್ತಿ ಮತ್ತು ಚೈತನ್ಯವನ್ನು ಅಕ್ಷರಶಃ ಬರಿದು ಮಾಡಿದ್ದರೂ ಅವರು ತಮ್ಮ ಸೇವೆಯನ್ನು ಮುಂದುವರೆಸಿದರು: ಪತ್ರಗಳನ್ನು ಬರೆಸುವುದು, ಸಹಿ ಹಾಕುವುದು, ಭಾರತದಲ್ಲಿ ಕಾರ್ಯನಿರ್ವಹಿಸಲು ನಿರ್ದೇಶನ ನೀಡುವುದು. ಅವರನ್ನು ನೋಡಿಕೊಳ್ಳುತ್ತಿದ್ದ ವೈದ್ಯಕೀಯ ತಜ್ಞರಿಗೆಲ್ಲ ಇದು ಪವಾಡ ಸದೃಶವೇ ಆಗಿತ್ತು. ಅಂತಿಮ ದಿನಗಳಲ್ಲಿ, ಅವರಲ್ಲಿ ಅಷ್ಟು ಶಕ್ತಿಯೂ ಉಳಿಯದಿದ್ದಾಗ, ಅವರು ವಿವಿಧ ಆಶ್ರಮ ಭಕ್ತರನ್ನು ನೋಡಲು ಇಚ್ಚಿಸಿದರು. ಏಕೆಂದರೆ ಅವರ ಜೊತೆಯಲ್ಲಿ ಮಾತನಾಡಿ, ತಾವು ಕೆಲಸ ಮಾಡುತ್ತಿದ್ದಂತೆಯೇ, ಗುರುವಿನ ಕಾರ್ಯದ ಪತಾಕೆಯನ್ನು ಎತ್ತರಕ್ಕೇರಿಸಲು ಸ್ಪೂರ್ತಿ ತುಂಬಬಹುದು ಎಂದು. ಭಗವಂತನಲ್ಲಿ ಅವರ ಪ್ರಾರ್ಥನೆಯು,” ಪ್ರಭು, ನಾನು ಈಗ ದೇಹ ತ್ಯಜಿಸಬೇಕೆಂಬುದು ನಿನ್ನ ಇಚ್ಛೆಯಾಗಿದ್ದಲ್ಲಿ, ನನ್ನ ಈ ಒಂದು ಉತ್ಕಟ ಬಯಕೆಯನ್ನು ಈಡೇರಿಸು: ನಾನು ಶೀಘ್ರದಲ್ಲಿಯೇ, ಈ ಭೂಮಿಗೆ ಹಿಂತಿರುಗಿ, ನನ್ನ ಗುರುಗಳ ಕಾರ್ಯದ ಸೇವೆಯನ್ನು ನಿರಂತರ ಮಾಡುವಂತಾಗಲಿ!”

ಅನಾರೋಗ್ಯವು ಎಂದಿಗೂ ಅವರ ಪ್ರಜ್ಞೆಯನ್ನು ಸ್ಪರ್ಶಿಸಲಿಲ್ಲ. ಅವರು ಸದಾ ಹರ್ಷಚಿತ್ತರು, ಸಕಾರಾತ್ಮಕ ಭಾವ ಉಳ್ಳವರು, ವಿಶ್ವಾಸ ಮತ್ತು ದಿವ್ಯ ಪ್ರೇಮ ಭರಿತರಾಗಿದ್ದರು: ಅದಕ್ಕಿಂತ ಮಿಗಿಲಾಗಿ, ತಾನು ಆಜೀವಪರ್ಯಂತ ಪ್ರೇಮದಿಂದ ಪೂಜಿಸುತ್ತಿದ್ದ ದಿವ್ಯ ಮಾತೆಯ ರೂಪದಲ್ಲಿರುವ, ಭಗವಂತನ ಇಚ್ಛೆಗೆ ಸಂಪೂರ್ಣ ಶರಣಾಗಿದ್ದರು. ಈ ಸಮಯದಲ್ಲಿ ಅವರಿಗೆ ಅನೇಕ ಅದ್ಭುತ ಆಧ್ಯಾತ್ಮಿಕ ಅನುಭವಗಳು ಆಗಿದ್ದವು—ದಿವ್ಯ ಮಾತೆ ಹಾಗೂ ಗುರುವಿನೊಂದಿಗೆ ಆನಂದದಾಯಕ ಸಂಸರ್ಗ ಮತ್ತು ತಿಳಿದಿರುವ ಕನಿಷ್ಠ ಎರಡು ಸಂದರ್ಭಗಳಲ್ಲಿ ಬಾಬಾಜಿಯವರ ದರ್ಶನದ ಅನುಗ್ರಹ. ಅವರ ಕೊನೆಯ ಉಸಿರಿನವರೆಗೂ ಅವರ ಅರಿವು ಚುರುಕಾಗಿಯೇ ಇತ್ತು. ಭಗವಂತನ ಕರೆಯ ಅತೀಂದ್ರಿಯ ಘಳಿಗೆಯ, ಕೇವಲ ನಾಲ್ಕು ಗಂಟೆಗಳ ಮೊದಲು, ಭಗವಂತ ಹಾಗೂ ಗುರುವಿನ ಪ್ರಾರ್ಥನೆಯನ್ನು, ಕಿವಿಯಲ್ಲಿ ಪಠಿಸುತ್ತಿದ್ದಂತೆ, ತಮ್ಮೆಲ್ಲ ಶಕ್ತಿಯನ್ನು ಒಟ್ಟು ಗೂಡಿಸಿ ಭಕ್ತಿಯಿಂದ ಪ್ರಣಾಮದ ಸನ್ನೆಯನ್ನು[9] ಮಾಡಿದರು.

“ನಾನು ಸಣ್ಣ ಬಾಲಕನಾಗಿದ್ದಾಗಿನಿಂದ ನನ್ನ ಮನಸ್ಸಿಗೆ ಒಂದು ಮಸುಕಾದ ದೃಶ್ಯವು ಬರುತ್ತಿದ್ದು ಅದೇ ನನ್ನ ನಿವಾಸ ಎನಿಸುತ್ತಿತ್ತು.” ಹೀಗೆ ಶ್ಯಾಮಾನಂದರು, ಶ್ರೀ ದಯಾ ಮಾತಾರವರಿಗೆ ತಾವು ಮರಣ ಹೊಂದುವ ಕೆಲವು ವಾರಗಳ ಮುಂಚೆ ಹೇಳಿದ್ದರು. “ಎಂದಾದರೂ ಒಂದು ದಿನ ನಾನು ಅದನ್ನು ಕಾಣುವೆನೆಂದು ನನಗೆ ಸದಾ ಅನಿಸುತ್ತಿತ್ತು. ಅದು ಹಿಮಾಲಯದಲ್ಲಿ, ಬದರಿನಾಥದ ಹತ್ತಿರ, ಅಲ್ಲೇ ಎಲ್ಲೋ, ಆ ರಸ್ತೆಗಳ ಆಚೆಗೆ ಇರಬಹುದು. [10] ಅದನ್ನು ಕಾಣುವ ಹಂಬಲ

ತೀವ್ರವಾಗಿತ್ತು. ಅಲ್ಲೊಂದು ಪುಟ್ಟ ಜಾಗವನ್ನು ಸ್ಥಾಪಿಸಿ, ಏಕಾಂತದಲ್ಲಿ ಭಗವಂತನ ಧ್ಯಾನ ಮಾಡಬಹುದು ಮತ್ತು ನನ್ನ ಕೊನೆಯ ದಿನಗಳನ್ನು ಅಲ್ಲಿ ಕಳೆಯಬಹುದು. ನನ್ನ ನಿವಾಸದ ಜಾಗವನ್ನು ಕಂಡುಕೊಳ್ಳಲು ಆಗಲೇ ಇಲ್ಲ. ಆದರೆ ಅದು ಅಲ್ಲಿ ಇದೆ- ಅಲ್ಲೆಲ್ಲೋ ಆ ದಾರಿಗಳಿಂದ ಆಚೆಗೆ!”

ಬಹುಶ: ಅವರ ನಿವಾಸವು ಈ ಲೋಕದ್ದಲ್ಲ. ಬಹುಶ: ಅವರು ಅದನ್ನು ಈಗ ಕಂಡುಕೊಂಡು ಅಲ್ಲಿ ತಮ್ಮ ಪ್ರೀತಿಯ ಭಗವಂತನೊಡನೆ, ಕೊನೆಗೂ ತಮ್ಮಕರ್ತವ್ಯಗಳಿಂದ, ಧ್ಯಾನಸ್ಥ ವಿಶ್ರಾಂತಿಯಲ್ಲಿರಬಹುದು. ಅಲ್ಲಿ ಅವರು ಚೇತನದಲ್ಲಿ ನವೀಕರಣ ಹೊಂದಿ ಔನ್ನತ್ಯಕ್ಕೇರಲಿ ಮತ್ತು ಅವರು ಮತ್ತೊಮ್ಮೆ ಹಿಂತಿರುಗಿ ಒಂದು ಹೊಸದಾದ ಚೈತನ್ಯ ರೂಪದಲ್ಲಿ, ಭೂಮಿಯ ಮೇಲೆ ತಮ್ಮ ಗುರುವಿನ ಕಾರ್ಯದಲ್ಲಿ, ಸೇವೆ ಸಲ್ಲಿಸುವ ಇಚ್ಛೆಯನ್ನು ಭಗವಂತನು ಪೂರೈಸುವ ಆ ಕ್ಷಣದವರೆಗೆ ತಯಾರಿ ಮಾಡಿಕೊಳ್ಳುತ್ತಿರಲಿ.

ಶ್ರೀ ದಯಾ ಮಾತಾ ಮತ್ತು ಸ್ವಾಮಿ ಶ್ಯಾಮಾನಂದರು ಸ್ವಾಮೀಜಿಯವರ ಸನ್ಯಾಸ ದೀಕ್ಷಾ ಸಮಾರಂಭದಲ್ಲಿ ಮೌನ ಪ್ರಾರ್ಥನೆಯಲ್ಲಿ ನಿಂತಿರುವುದು.

ಒಂದು ಸಂಜೆ, ಅವರ ದೇಹತ್ಯಾಗಕ್ಕೆ ಮೂರು ವಾರಗಳ ಮೊದಲು, ಶ್ಯಾಮಾನಂದಜಿಯವರು ಬಂಗಾಳಿಯಲ್ಲಿ ಈ ಸಾಲುಗಳನ್ನು ಬರೆಯಲು ಸ್ಪೂರ್ತಿಗೊಂಡರು, ನಂತರ ಅದನ್ನು ಅವರು ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿದರು.

“ಜೀವನದ ಬೆಳಗಿನಲ್ಲಿ,
ಆತ್ಮವು ಜ್ವಲಿಸುವ ರಥವನ್ನು ಏರುತ್ತದೆ.
ಜೀವನದ ಸಂಜೆ ಬಂದಿತೆಂದರೆ,
ಅದು ಏನನ್ನು ಕಾಣುತ್ತದೆ?
ಧೂಳಿನ ಆಗಸವು ಹಿಂದುಳಿಯಿತೆ?
ಅಥವಾ ಉಜ್ವಲ ದಿಗಂತ ಅದನ್ನು ಮುಂದಕ್ಕೆ ಕರೆಯುತ್ತಿದೆಯೇ!”

ಸ್ವಾಮಿ ಶ್ಯಾಮಾನಂದಗಿರಿಯವರ ಪರಿಚಯವಿದ್ದವರು ಮತ್ತು ಪ್ರೀತಿಸುವವರಿಗೆ, ಅವರ ಅದಮ್ಯ ಚೇತನವು ಅವರನ್ನು ಮುಂದಕ್ಕೆ ಕರೆಯುತ್ತಿರುವ ಉಜ್ವಲ ದಿಗಂತದ ಕಡೆ ನೋಡುತ್ತಿದೆ ಎಂಬುದರಲ್ಲಿ ಸಂಶಯವಿಲ್ಲ.

[1] ಯುವ ಪರಮಹಂಸ ಯೋಗಾನಂದರ ಭಗವದ್ ಸಾಕ್ಷಾತ್ಕಾರದ ಅನ್ವೇಷಣೆಯಲ್ಲಿ ಹಿಮಾಲಯಕ್ಕೆ ಮಾಡಿದ ಅವರ ಅಂತಿಮ ಪಲಾಯನದಲ್ಲಿ ಅವರಿಗೆ ವಿಶೇಷ ಅನುಗ್ರಹ ನೀಡಿದವರೇ “ನಿದ್ರಿಸದ ಸಂತ.” ಆ ಸಮಯದಲ್ಲಿ, ರಾಮಗೋಪಾಲರು ಪರಮಹಂಸಜಿಯವರಿಗೆ ‘ಸಾವಿಲ್ಲದ ಸಂತ, ಮಹಾವತಾರ ಬಾಬಾಜಿ’ ಯವರೊಡನೆ ಆದ ತಮ್ಮ ಮೊದಲ ಭೇಟಿಯ ಬಗ್ಗೆಯೂ ತಿಳಿಸಿದರು. (ಯೋಗಿಯ ಆತ್ಮಕಥೆಯ ಅಧ್ಯಾಯ13, ನೋಡಿ)

[2] ಆತ್ಮ-ಸಂಯಮದ ಗುರುತು, ಪ್ರಾಣಶಕ್ತಿಯ ಮೇಲಿನ ನಿಯಂತ್ರಣ. ಭಗವಾನ್ ಶಿವನ ಅನೇಕ ನಾಮಗಳಲ್ಲಿ ಒಂದು “ಯೋಗಿಗಳ ರಾಜ.”

[3] ಪ್ರಬಲವಾದ ಕಂಪನಗಳುಳ್ಳ ಪಠಣ. ಸಂಸ್ಕೃತ ಮಂತ್ರದ ಅಕ್ಷರಶಃ ಅರ್ಥ, “ಆಲೋಚನೆಯ ಉಪಕರಣ.”

[4] ಗೋವರ್ಧನ ಮಠದ ಆಧ್ಯಾತ್ಮ ಮುಖಂಡರು ಮತ್ತು ಮಠವು ಭಾರತದ ಅತ್ಯಂತ ಶ್ರೇಷ್ಠ ತತ್ವಜ್ಞಾನಿ ಮತ್ತು ಸ್ವಾಮಿ ಶ್ರೇಣಿಯನ್ನು ಮರು ಸಂಘಟನೆ ಮಾಡಿದ, ಪ್ರಭು ಶಂಕರರಿಂದ 9ನೇ ಶತಮಾನದಲ್ಲಿ ಪುರಿಯಲ್ಲಿ ಸ್ಥಾಪಿಸಲ್ಪಟ್ಟಿತು.

[5]ಅದರ ಸಂಸ್ಥಾಪನೆಯ ನಂತರ ಶತಮಾನಗಳ ಹಿಂದಿನಿಂದಲೂ ಆ ದೇವಾಲಯವು ಹಿಂದುಗಳಲ್ಲದವರಿಗೆ ಮತ್ತು ಪಾಶ್ಚಿಮಾತ್ಯರಿಗೆ ಮುಚ್ಚಲಾಗಿತ್ತು. ಆ ನಿರ್ಬಂಧವನ್ನು ಕಾಕತಾಳೀಯವಾಗಿ ಶ್ರೀ ದಯಾಮಾತಾರವರ ಪುರಿಯ ಭೇಟಿಯಲ್ಲಿ ತೆಗೆದು ಹಾಕಲಾಯಿತು. ನಂತರದ ಸ್ವಲ್ಪ ಸಮಯದಲ್ಲೇ ಆ ನಿರ್ಬಂಧವು ಮತ್ತೆ ಪುನಃ ನಿಯಮವಾಯಿತು.

[6] “ದುರ್ಗಾ ಪೂಜೆ”, ದಿವ್ಯ ಮಾತೆಯ ರೂಪದಲ್ಲಿ ಭಗವಂತನನ್ನು ಪೂಜಿಸುವ ಹಬ್ಬ.

[7] ಶ್ರೀ ಬನಮಾಲಿ ದಾಸ್ ರವರೂ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಸದಸ್ಯರಾದರು. ಅವರು ವೈಎಸ್ಎಸ್ ನಿರ್ದೇಶಕರ ಮಂಡಳಿಯ ಒಬ್ಬ ಸದಸ್ಯರಾಗಿದ್ದರು. ಸ್ವಾಮಿ ಶ್ಯಾಮಾನಂದ ಗಿರಿಯವರು ಕಾಲವಾದ ನಂತರ ಅವರು ಸ್ವಾಮಿ ಶಾಂತಾನಂದರ ಜೊತೆಯಲ್ಲಿ ಜಂಟಿ ಪ್ರಧಾನ ಕಾರ್ಯದರ್ಶಿಯಾದರು. ನಂತರ ಅವರು ಸೊಸೈಟಿಯ ಉಪಾಧ್ಯಕ್ಷರಾಗಿ 1975 ರಿಂದ 1984 ರವರೆಗೆ ಸೇವೆ ಸಲ್ಲಿಸಿದರು.

[8] ಆಧ್ಯಾತ್ಮಿಕ ದೀಕ್ಷೆ; ಸಂಸ್ಕೃತ ಕ್ರಿಯಾಪದದ ಮೂಲ -ದೀಕ್ಷ್- ಅಂದರೆ ತನ್ನನ್ನೇ ಸಮರ್ಪಿಸಿಕೊಳ್ಳುವುದು.

[9] ಅಕ್ಷರಶಃ “ಸಂಪೂರ್ಣ ವಂದನೆ‌,” ಸಂಸ್ಕೃತ ಮೂಲ, ನಮ- ನಮಿಸು ಅಥವಾ ಶಿರಬಾಗು; ಮತ್ತು ಪೂರ್ವ ಪ್ರತ್ಯಯ ಪ್ರೊ, ಪೂರ್ಣವಾಗಿ. ಅಂಗೈಗಳನ್ನು ಜೋಡಿಸಿಕೊಂಡು ಕೈಗಳನ್ನು ಹೃದಯದ ಮೇಲೆ ಹಿಡಿದುಕೊಳ್ಳುವುದು.

[10] ಭಾರತದ ಅತ್ಯಂತ ಪವಿತ್ರ ಯಾತ್ರಾಸ್ಥಳಗಳಲ್ಲಿ ಒಂದಾದ ಬದರಿನಾಥಕ್ಕೆ ಹೋಗುವ ಯಾತ್ರಿಕರು ಸವೆಸುವ ಪಥಗಳ ಉಲ್ಲೇಖ. ಸ್ವಾಮಿ ಪ್ರಣವಾನಂದರು ಪುನರ್ಜನ್ಮ ಹೊಂದಿದ ನಂತರ, ಬದರಿನಾರಾಯಣ (ಬದರಿನಾಥದ ಹತ್ತಿರ) ಕ್ಕೆ ಹೋಗಿ, ಅಲ್ಲಿ ಮಹಾನ್ ಬಾಬಾಜಿಯವರ ಸುತ್ತಲೂ ಇರುವ ಸಂತರ ಗುಂಪನ್ನು ಸೇರಿಕೊಂಡುದನ್ನು ಪರಮಹಂಸ ಯೋಗಾನಂದರ ಯೋಗಿಯ ಆತ್ಮಕಥೆ ಯ ಓದುಗರು ನೆನಪಿಸಿಕೊಳ್ಳಬಹುದು.

ಇದನ್ನು ಹಂಚಿಕೊಳ್ಳಿ