ಸ್ವಾಮಿ ಶ್ಯಾಮಾನಂದ ಗಿರಿ: ಭಗವಂತ ಮತ್ತು ಗುರುಗಳಿಗಾಗಿ ಆಧ್ಯಾತ್ಮಿಕ ಯೋಧ

ಆಗಸ್ಟ್ 31, 1971 ರಂದು ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾದ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ನ ಅಂತರರಾಷ್ಟ್ರೀಯ ಪ್ರಧಾನ ಕಛೇರಿಯಲ್ಲಿ ನಡೆಸಿದ ಸ್ವಾಮಿ ಶ್ಯಾಮಾನಂದರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಶ್ರೀ ದಯಾ ಮಾತಾರವರ ಉಪನ್ಯಾಸ

ಕಳೆದ ಹನ್ನೆರಡು ವರ್ಷಗಳಿಂದ ಭಾರತದಲ್ಲಿ (ಮತ್ತು ಪ್ರಪಂಚದಾದ್ಯಂತ) ಪರಮಹಂಸ ಯೋಗಾನಂದರ ನಿಷ್ಠಾವಂತ ಭಕ್ತರಾದ ಹಾಗೂ ಅವರ ಕಾರ್ಯದ ಆಧ್ಯಾತ್ಮಿಕ ಯೋಧ-ರಕ್ಷಕರಾದ ಸ್ವಾಮಿ ಶ್ಯಾಮಾನಂದ ಗಿರಿ[1]ಯವರಿಗೆ ಗೌರವ ಸಲ್ಲಿಸಲು ನಾವು ಇಂದು ಬೆಳಿಗ್ಗೆ ಒಟ್ಟುಗೂಡಿದ್ದೇವೆ.

ಶ್ರೀ ದಯಾ ಮಾತಾ ರಾಂಚಿಯಲ್ಲಿ ಧ್ಯಾನ ಮಾಡುತ್ತಿದ್ದಾರೆ, ಜನವರಿ, 1959

ಸ್ವಾಮಿ ಶ್ಯಾಮಾನಂದರು ಭಾರತದ ಉತ್ತರ ಪ್ರದೇಶದ ವಿಭಾಗದಲ್ಲಿ, ಪರಮಹಂಸ ಯೋಗಾನಂದರು ಜನಿಸಿದ ಪ್ರಾಂತ್ಯದಲ್ಲೇ ಜನಿಸಿದರು. ಬಾಲ್ಯದಿಂದಲೂ ಅವರು ಭಾರತದಲ್ಲಿ ದೇವಾಲಯಗಳ ಆಧ್ಯಾತ್ಮಿಕ ಪರಿಸರವನ್ನು ಮತ್ತು ಸಾಧುಗಳ ಸಹವಾಸವನ್ನು ಬಯಸಿದರು. ಶ್ಯಾಮಾನಂದರು ಹನ್ನೊಂದು ವರ್ಷದವರಾಗಿದ್ದಾಗ, ಒಬ್ಬ ಪೂಜ್ಯ ಸಾಧು ಅವರ ಮನೆಗೆ ಭೇಟಿ ನೀಡಿದರು ಮತ್ತು ಆಳವಾದ ಆಧ್ಯಾತ್ಮಿಕ ಒಲವು ಹೊಂದಿರುವ ಈ ಮಗುವಿನ ಬಗ್ಗೆ ತೀವ್ರ ಆಸಕ್ತಿ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದರು. ಆ ಸಮಯದಲ್ಲಿ ಶ್ಯಾಮಾನಂದರು ಲೌಕಿಕ ಧ್ಯೇಯಗಳನ್ನು ತೊರೆದು ಆ ಸಾಧುವನ್ನು ಅನುಸರಿಸುವ ತೀವ್ರ ಹಂಬಲವನ್ನು ಹೊಂದಿದ್ದರು. ಆದರೆ ಅದು ಹಾಗಾಗಲಿಲ್ಲ.

ಅವರು ಕೇವಲ ಒಂಬತ್ತು ವರ್ಷದವರಾಗಿದ್ದಾಗ (ಅವರ ತಾಯಿ ಅವರು ಮೂರು ವರ್ಷದವರಾಗಿದ್ದಾಗ ನಿಧನರಾದರು) ಅವರ ತಂದೆಯವರೂ ನಿಧನರಾದರು. ನಂತರ, ಅವರು ತಮ್ಮ ತಂದೆಯ ಅತ್ಯಂತ ಆಪ್ತ ಸ್ನೇಹಿತ ರಾಜಾ ಬಹದ್ದೂರ್ ಸತಿ ಪ್ರಸಾದ್ ಗರ್ಗಾ ಅವರ ಕುಟುಂಬದೊಂದಿಗೆ ಕಲ್ಕತ್ತಾ ಬಳಿಯ ಮಹಿಷಾದಲ್‌ನಲ್ಲಿ ವಾಸಿಸತೊಡಗಿದರು. ಅದು, ಆ ಪ್ರಾಂತ್ಯದ ಆಳ್ವಿಕೆ ನಡೆಸುತ್ತಿದ್ದ ಭಾರತದ ಕುಟುಂಬಗಳಲ್ಲಿ ಒಂದಾಗಿತ್ತು, ಆ ಸಮಯದಲ್ಲಿ ಅವರು (ರಾಜಾ ಬಹದ್ದೂರ್) ಸುಮಾರು ಐನೂರು ಹಳ್ಳಿಗಳ ಒಡೆಯರಾಗಿದ್ದರು ಮತ್ತು ಆ ಹಳ್ಳಿಗಳ ನಿವಾಸಿಗಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಶ್ಯಾಮಾನಂದರನ್ನು ಗರ್ಗಾ ಕುಟುಂಬದ ಹಿರಿಯ ಮಗನಂತೆ ಪ್ರೀತಿಸಲಾಯಿತು ಮತ್ತು ಬೆಳೆಸಲಾಯಿತು.

ಅವರು ಮಹಿಷಾದಲ್‌ನಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಿದರು, ಅವರು ಪ್ರೌಢಾವಸ್ಥೆಗೆ ಬಂದಾಗ ಕಾನೂನಿನ ಅಧ್ಯಯನಕ್ಕೆ ತಿರುಗಿದರು. ಅವರು ತಮ್ಮ ಅಚ್ಚುಮೆಚ್ಚಿನ ಬಾಲ್ಯ ಸ್ನೇಹಿತೆ, ಗರ್ಗಾರ ಮಗಳನ್ನು ವಿವಾಹವಾದರು. ಆದರೆ ಅವರ ಮನಸ್ಸಿನ ಹಿನ್ನೆಲೆಯಲ್ಲಿ ಸದಾ ಭಗವಂತನಿಗಾಗಿ ಆಳವಾದ ಹಂಬಲವಿತ್ತು. ಅವರು ಆಗಾಗ್ಗೆ ತಮಗೆ ತಾವೇ ಕೇಳಿಕೊಳ್ಳುತ್ತಿದ್ದರು, “ನಾನು ಈ ನಿರ್ದಿಷ್ಟ ಪರಿಸರದಲ್ಲಿ ಏಕಿದ್ದೇನೆ? ಇದು ನಾನು ನಡೆಸಲು ಉದ್ದೇಶಿಸಿರುವ ಜೀವನವಲ್ಲ.”

ವಿವಾಹಾನಂತರ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಜನಿಸಿದರು; ಆದರೆ ಆ ಮಕ್ಕಳು ಇನ್ನೂ ಹಸುಳೆಗಳಾಗಿದ್ದಾಗಲೇ ಅವರ ಪತ್ನಿ ಅನಾರೋಗ್ಯದಿಂದ ನಿಧನರಾದರು. ಆಗ ಆಕೆಗೆ ಇಪ್ಪತ್ತು ವರ್ಷ. ತಮ್ಮ ಪತ್ನಿಯೆಡೆಗೆ ಅವರಿಗಿದ್ದ ನಿಷ್ಠೆ ಮತ್ತು ಗೌರವದ ಮನೋಭಾವವು, ಅವರ ಬಗ್ಗೆ ನನಗೆ ನೆನಪಿರುವ ಅತ್ಯುತ್ತಮ ಗುಣಗಳಲ್ಲಿ ಒಂದಾಗಿದೆ. ನನ್ನೆಲ್ಲಾ ಪ್ರಯಾಣಗಳಲ್ಲಿ, ನನ್ನೆಲ್ಲಾ ಅನುಭವಗಳಲ್ಲಿ ನಾನು ಬೇರೆ ಯಾವ ವ್ಯಕ್ತಿಯಲ್ಲೂ ಅದಕ್ಕೆ ಸರಿಸಮಾನವಾದುದನ್ನು ನೋಡಿಲ್ಲ. ನಮ್ಮ ಗುರುಗಳಾದ ಪರಮಹಂಸ ಯೋಗಾನಂದರು ಭಾರತದ ವಿಶಿಷ್ಟ ಆದರ್ಶವೆಂದು ನಮಗೆ ಆಗಾಗ ಹೇಳುತ್ತಿದ್ದ ಉನ್ನತ ಪತಿ-ಪತ್ನಿಯ ಸಂಬಂಧದ ಪರಿಪೂರ್ಣ ಅಭಿವ್ಯಕ್ತಿ ಅವರದಾಗಿತ್ತು.

ಭವಿಷ್ಯದ ತರುಣ ವಕೀಲನ ಪತ್ನಿಯ ಮರಣದೊಂದಿಗೆ, ಅವರ ಜೀವನದ ಆ ಅಧ್ಯಾಯವು ಕೊನೆಗೊಂಡಿತು. ಅವರು ಭಗವಂತನನ್ನು ಅರಸುವ ಕಡೆಗೆ ಹೆಚ್ಚು ಶ್ರದ್ಧೆಯಿಂದ ಗಮನಹರಿಸಿದರು. ವಿಪರ್ಯಾಸವೆಂದರೆ, ಈ ಅವಧಿಯಲ್ಲಿಯೇ (1935-36) ಪರಮಹಂಸಜೀ ಭಾರತದಲ್ಲಿದ್ದರು ಮತ್ತು ಗುರುದೇವರು ತಮ್ಮ ಗುರುಗಳಾದ ಸ್ವಾಮಿ ಶ್ರೀ ಯುಕ್ತೇಶ್ವರ ಗಿರಿಯವರ ನಿಧನಕ್ಕಾಗಿ ಶೋಕಿಸುತ್ತಿದ್ದಾಗ ಶ್ಯಾಮಾನಂದರು ಪುರಿಯಲ್ಲಿದ್ದರು. ಆದರೆ ಅವರಿಬ್ಬರೂ ಭೇಟಿಯಾಗುವ ಸಮಯ ಇನ್ನೂ ಬಂದಿರಲಿಲ್ಲ.

ಶ್ಯಾಮಾನಂದರು ಜಗತ್ತನ್ನು ತೊರೆದು, ಮುಂದಿನ ಇಪ್ಪತ್ಮೂರು ವರ್ಷಗಳನ್ನು ಅಲೆದಾಡುವ ಸನ್ಯಾಸಿಯಾಗಿ, ಸಂತರನ್ನು ಹುಡುಕುತ್ತ ಮತ್ತು ಭಾರತದ ಆಶ್ರಮಗಳು ಮತ್ತು ಪವಿತ್ರ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುತ್ತ ಕಳೆದರು. ಅವರು ಒಬ್ಬ ಅಲೆದಾಡುವ ಸಂತ, ಒಬ್ಬ ಸ್ವಾಮಿಗಾಗಿ ಒಂದು ಆಶ್ರಮವನ್ನು ಕಟ್ಟಿಕೊಟ್ಟರು ಮತ್ತು ಮುಂದಿನ ಹತ್ತು ವರ್ಷಗಳ ಹೆಚ್ಚಿನ ಭಾಗವನ್ನು ಅಲ್ಲಿಯೇ ಕಳೆದರು, ಆದರೆ ಆ ಗುರುವಿನಿಂದ ದೀಕ್ಷೆ ಅಥವಾ ಸನ್ಯಾಸವನ್ನು ಸ್ವೀಕರಿಸಲಿಲ್ಲ.

1958 ರಲ್ಲಿನ ನನ್ನ ಭಾರತದ ಭೇಟಿಯಲ್ಲಿ, ಶ್ಯಾಮಾನಂದರು ನನ್ನನ್ನು ಮೊದಲ ಬಾರಿಗೆ ಕಾಣಲು ಬಂದಾಗ, ಅವರು ಆಗಿನ್ನೂ ಯೋಗಿಯ ಆತ್ಮಕಥೆಯನ್ನು ಓದಿದ್ದರಷ್ಟೆ. ನಮ್ಮ ಮಹಾನ್ ಗುರುಗಳಾದ ಪರಮಹಂಸ ಯೋಗಾನಂದರ ಅದ್ಭುತ ಜೀವನದಿಂದ ಅವರು ತುಂಬಾ ಪ್ರಭಾವಿತರಾಗಿದ್ದರು ಮತ್ತು ಆಧ್ಯಾತ್ಮಿಕವಾಗಿ ಉತ್ತೇಜಿಸಲ್ಪಟ್ಟಿದ್ದರು. ಆ ಸಮಯದವರೆಗೆ ಅವರು, ವಿವೇಕ ಮತ್ತು ವಿವೇಚನೆಯ ಮಾರ್ಗವಾದ ಜ್ಞಾನ ಯೋಗವನ್ನು ಅನುಸರಿಸುತ್ತಿದ್ದರು, ಏಕೆಂದರೆ ಜಗತ್‌ ಪ್ರಸಿದ್ಧ ಜ್ಞಾನಯೋಗಿ, ಸ್ವಾಮಿ ವಿವೇಕಾನಂದರನ್ನು ತಮ್ಮ ಆಧ್ಯಾತ್ಮಿಕ ಆದರ್ಶವನ್ನಾಗಿ ಆರಿಸಿಕೊಂಡಿದ್ದರು. ಶ್ಯಾಮಾನಂದರು ನನಗೆ ಹೇಳಿದರು, “ನಾನು ಅನೇಕ ವರ್ಷಗಳಿಂದ ಈ ಮಾರ್ಗವನ್ನು ಅನುಸರಿಸುತ್ತಿದ್ದೇನೆ; ಆದರೂ ನನ್ನ ಸಾಧನೆಯಲ್ಲಿ ಇನ್ನೂ ಏನೋ ಕೊರತೆಯಿದೆ.” ಶ್ಯಾಮಾನಂದರು ತಮ್ಮ ಸ್ವಂತ ಅನ್ವೇಷಣೆಯ ಬಗ್ಗೆ ನನಗೆ ಸ್ವಲ್ಪ ಹೇಳಿದಾಗ, ಏನು ಲೋಪವಾಗಿದೆ ಎಂದು ನನಗೆ ತಿಳಿಯಿತು. ಇದು ಮನುಕುಲದ ಹೆಚ್ಚಿನವರಲ್ಲಿ ಕಾಣದ ಗುಣ: ಭಗವಂತನ ಮೇಲಿನ ಪ್ರೀತಿ. ಪ್ರಪಂಚದ ಯಾವುದೇ ಶ್ರೇಷ್ಠ ಧರ್ಮಗಳಲ್ಲಿ ಈ ಅಗತ್ಯ ಅಂಶಕ್ಕೆ ಸಾಕಷ್ಟು ಒತ್ತು ನೀಡಿಲ್ಲ. ಅದರ ಬದಲು ಮನುಷ್ಯ, ವ್ರತಾಚರಣೆ ಮತ್ತು ಮತಧರ್ಮಶಾಸ್ತ್ರದ ಚರ್ಚೆಯಲ್ಲಿ ಕಳೆದುಹೋಗುತ್ತಾನೆ. ಪಶ್ಚಿಮದಲ್ಲಿ ಅನೇಕರು, ನಾವು ಈ ಪ್ರಪಂಚವನ್ನು ತೊರೆದಾಗ, ಭಗವಂತನು, ನಾವು ಸ್ವರ್ಗ ಅಥವಾ ನರಕದ ಯಾವ ಭಾಗಕ್ಕೆ ಹೋಗಬೇಕು ಎಂಬುದನ್ನು ನಿರ್ಧರಿಸುವ ಮಹಾನ್ ನ್ಯಾಯಾಧೀಶ ಎಂದು ಭಾವಿಸಿಕೊಂಡು ಅವನ ಬಗ್ಗೆ ಭಯಭೀತರಾಗಿರುತ್ತಾರೆ. ಭಗವಂತನ ಬಗ್ಗೆ ಗುರುದೇವರ ಪರಿಕಲ್ಪನೆ ಅದಾಗಿರಲಿಲ್ಲ. ಅವನು ಪ್ರೇಮದ ಪ್ರಭು, ಸಹಾನುಭೂತಿ ಮತ್ತು ಕ್ಷಮಾಗುಣದ ದೇವರು, ಅವನನ್ನು ನಾವು ಅರಸುವುದು ಅವನಿಂದ ಏನೋ ಬೇಕೆಂದಲ್ಲ, ಆದರೆ ನಾವು ಅವನನ್ನು ಪ್ರೀತಿಸುತ್ತೇವೆ ಮತ್ತು ಅವನ ಸ್ವಂತದವರು ಎಂಬ ಕಾರಣಕ್ಕಾಗಿ.

ಈ ವಿಷಯವಾಗಿಯೇ ನಾನು ಶ್ಯಾಮಾನಂದರೊಂದಿಗೆ ಮಾತನಾಡಿದೆ. ನಂತರ ಅವರು ಆಶ್ರಮದ ಕೆಲವು ಭಕ್ತರಿಗೆ ಹೇಳಿದರು, “ನಾನು ಆಕೆಯ ಉಪಸ್ಥಿತಿಯನ್ನು ತೊರೆದ ನಂತರ, ನಾನು ಅರಸುತ್ತಿದ್ದ, ಕೊರತೆಯಿದ್ದ ಪದಾರ್ಥವನ್ನು ಆಕೆ ಪೂರೈಸಿದ್ದಾರೆಂದು ನನಗೆ ತಿಳಿದಿತ್ತು: ನಾನು ಭಗವಂತನೆಡೆಗೆ ಹೆಚ್ಚಿನ ಹಂಬಲವನ್ನು ಮತ್ತು ಅವನ ಬಗ್ಗೆ ಅಪಾರ ಪ್ರೀತಿಯನ್ನು ಅನುಭವಿಸಿದೆ.”

ಆ ಸಮಯದಲ್ಲಿ ಭಾರತದಲ್ಲಿ ನಮಗಿದ್ದ ಸಮಸ್ಯೆಗಳನ್ನು ಸಂಕ್ಷಿಪ್ತವಾಗಿ ಹೇಳುತ್ತೇನೆ. ಗುರುದೇವರು ತಮ್ಮ ದೇಹವನ್ನು ತೊರೆಯುವ ಮೊದಲು ನನಗೆ ಹೇಳಿದ್ದರು, “ನನಗೆ ಭಾರತಕ್ಕೆ ಹಿಂತಿರುಗಲು ಸಾಧ್ಯವಾಗುವುದಿಲ್ಲ, ಆದರೆ ಅಲ್ಲಿನ ನಮ್ಮ ಕೆಲಸದಲ್ಲಿ ನನಗಿರುವ ಆಸಕ್ತಿಯನ್ನೇ ನೀನು ತೆಗೆದುಕೊಳ್ಳುವೆ ಮತ್ತು ಯೋಗದಾ ಸತ್ಸಂಗ ಸೊಸೈಟಿಗೆ ನಾನು ಮಾಡಬಹುದಾದುದೆಲ್ಲವನ್ನೂ ನೀನೂ ಮಾಡುವೆ ಎಂದು ನೀನು ನನಗೆ ಭರವಸೆ ನೀಡಬೇಕೆಂದು ನಾನು ಬಯಸುತ್ತೇನೆ.” ನಾನು ಅವರಿಗೆ ಮಾತು ಕೊಟ್ಟೆ. 1958 ರಲ್ಲಿ ನಾನು ಕೊನೆಗೂ ನಮ್ಮ ಆಧ್ಯಾತ್ಮಿಕ ತಾಯ್ನಾಡಿಗೆ ನನ್ನ ಮೊದಲ ಭೇಟಿಯನ್ನು ನೀಡಲು ಸಾಧ್ಯವಾಯಿತು.

ಆ ಭೇಟಿಯ ಮೊದಲ ಭಾಗದಲ್ಲಿ ನನ್ನ ಎಲ್ಲಾ ಕನಸುಗಳು ಭಗ್ನವಾದವು, ಏಕೆಂದರೆ ಗುರುಗಳ ಕೆಲಸವು ತುಂಬಾ ಹದಗೆಟ್ಟಿತ್ತು. ಕ್ರಿಸ್‌ಮಸ್‌ನ ಮುನ್ನಾದಿನದಂದು ನಾನು ಕೆಲವು ಭಕ್ತರೊಂದಿಗೆ ಆಶ್ರಮದಲ್ಲಿದ್ದೆ ಮತ್ತು ನನ್ನ ಹೃದಯವು ಭಾರವಾಗಿತ್ತು, ಏಕೆಂದರೆ ನಾನು ನಿರೀಕ್ಷಿಸಿದ ಉತ್ಸಾಹ ಅವರಲ್ಲಿರಲಿಲ್ಲ. ನಾನು ಮೌನವಾಗಿ ಆಚರಣೆಗಳಿಂದ ಹಿಂದೆ ಸರಿದು ಮಹಡಿಯಲ್ಲಿರುವ ನನ್ನ ಚಿಕ್ಕ ಕೋಣೆಗೆ ಹೋದೆ. ನಾನು ದೀರ್ಘವಾಗಿ ಮತ್ತು ಆಳವಾಗಿ ಧ್ಯಾನ ಮಾಡಿದೆ, ಮತ್ತು ಬಹಳ ಕಣ್ಣೀರು ಹಾಕಿದೆ, ಏಕೆಂದರೆ ಇಲ್ಲಿಯವರೇ ಆದ ಒಬ್ಬ ನಿಷ್ಠಾವಂತ, ಸಮರ್ಥ ಭಕ್ತನ ಬೆಂಬಲವಿಲ್ಲದೆ ಭಾರತದಲ್ಲಿ ಗುರುಗಳ ಸಂಸ್ಥೆಗೆ ಉಪಯುಕ್ತವಾದದ್ದೇನನ್ನು ಸಾಧಿಸುವುದು ಅಸಾಧ್ಯವೆಂದು ನನಗೆ ತಿಳಿದಿತ್ತು. ಜನವರಿ 5 ರಂದು ನಮ್ಮ ದಕ್ಷಿಣೇಶ್ವರದ ಆಶ್ರಮದಲ್ಲಿ ಗುರುದೇವರ ಜನ್ಮದಿನವನ್ನು ಆಚರಿಸಿದ ರಾತ್ರಿ ನನ್ನ ಪ್ರಾರ್ಥನೆಗೆ ಉತ್ತರವು ದೊರಕಿತು. ಶ್ಯಾಮಾನಂದ ಸಭಿಕರಲ್ಲಿ ಕುಳಿತಿದ್ದನ್ನು ನೋಡಿದೆ. ನಾನು ಅವರನ್ನು ಒಮ್ಮೆ ಮಾತ್ರ ಭೇಟಿಯಾಗಿ ಸಂಕ್ಷಿಪ್ತವಾಗಿ ಮಾತನಾಡಿದ್ದೆ. ಆದರೆ ಈ ಬಾರಿ ಅವರು ಜನಸಮೂಹದ ಬಲಭಾಗದಲ್ಲಿ ಸ್ವಲ್ಪ ದೂರದಲ್ಲಿ ಕುಳಿತಿರುವುದನ್ನು ನಾನು ನೋಡಿದೆ — ತುಂಬಾ ಶಾಂತವಾಗಿ, ತುಂಬಾ ನಿಶ್ಚಲವಾಗಿ, ಧ್ಯಾನದಲ್ಲಿ ಬದ್ಧವಾಗಿ. ಅವರು ಎದ್ದುಕಾಣುವಂತಿದ್ದರು; ಹಾಗೂ ನಾನು ಯೋಚಿಸಿದೆ, “ಇಲ್ಲೊಬ್ಬರಿದ್ದಾರೆ ಆಳವಾಗಿ ಭಗವಂತನನ್ನು ಅರಸುತ್ತಿರುವವರು.”

1964ರಲ್ಲಿ ದಕ್ಷಿಣೇಶ್ವರದ ವೈಸ್‌ಎಸ್‌ ಆಶ್ರಮದ ಪ್ರಾರ್ಥನಾಲಯದಲ್ಲಿ ಶ್ರೀ ದಯಾ ಮಾತಾ ಅವರು ಕ್ರಿಯಾ ಯೋಗ ದೀಕ್ಷೆಯ ಸಮಾರಂಭವನ್ನು ನಡೆಸಿಕೊಡುತ್ತಿದ್ದಾರೆ. ಸ್ವಾಮಿ ಶ್ಯಾಮಾನಂದರು ಬಲಭಾಗದಲ್ಲಿದ್ದಾರೆ.

ಸತ್ಸಂಗದ ನಂತರ ಅವರು ಮುಂದೆ ಬಂದು ತಮ್ಮನ್ನು ಮತ್ತೆ ಪರಿಚಯಿಸಿಕೊಂಡು, “ನೀವು ರಾಂಚಿಗೆ ಹೋಗುವಾಗ ನಿಮ್ಮೊಡನೆ ಬರಲು ನನಗೆ ಸಂತೋಷವಾಗುತ್ತದೆ” ಎಂದು ಹೇಳಿದರು. ಇದು ಗುರುದೇವರು ಅವರ ಬಾಲಕರ ಶಾಲೆಯನ್ನು ಸ್ಥಾಪಿಸಿದ ರಾಂಚಿಯ ನನ್ನ ಮೊದಲ ಭೇಟಿಯಾಗಲಿದೆ. ಅವರು ನಮ್ಮ ಜೊತೆ ಬರಬಹುದೆಂದು ನಾನು ಸಮ್ಮತಿಸಿದೆ.

ಮುಂದಿನ ದಿನಗಳಲ್ಲಿ, ನನ್ನ ಮನಸ್ಸಿನ ಹಿನ್ನೆಲೆಯಲ್ಲಿ ಅವರ ವಿಷಯ ಉಳಿಯಿತು. ಅವರು ರಾಂಚಿಗೆ ತಮ್ಮದೇ ಕಾರಿನಲ್ಲಿ ಹೋದರು. ಅವರು ಅಲ್ಲಿಗೆ ತಲುಪಿದ ಕೆಲವು ಘಂಟೆಗಳ ನಂತರ ನಾವೂ ಅಲ್ಲಿಗೆ ಹೋದೆವು. ನಾನು ಮಾರನೆಯ ದಿನ ಬೆಳಗಿನ ಜಾವವೇ ಎದ್ದು ಆಶ್ರಮದ ಬಯಲಿನಲ್ಲಿ ನಡೆದಾಡುತ್ತಿದ್ದೆ. ಗುರುದೇವರು ಆ ಶಾಲೆಯನ್ನು ಸ್ಥಾಪಿಸಿ ಅದನ್ನು ಮಾರ್ಗದರ್ಶಿಸಿ ಉತ್ತೇಜಿಸಲು ಅಲ್ಲಿ ಇದ್ದ ಅಂದಿನ ದಿನಗಳ ಬಗ್ಗೆ ಯೋಚಿಸುತ್ತಿದ್ದೆ. ಆಗ ಅಲ್ಲಿ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಹೊರ ಆವರಣದಲ್ಲಿ ಕೂತು ಅವರ ಪಾಠಗಳನ್ನು ಅಧ್ಯಯನ ಮಾಡುತ್ತಿದ್ದರು. ನಾನು ಅಲ್ಲಿಗೆ ಬಂದಾಗ ಕಂಡಿದ್ದನ್ನು ಹಿಂದಿನ ದಿನಗಳ ಜೊತೆ ತುಲನೆ ಮಾಡುತ್ತಿದ್ದೆ–ಬಹಳ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳು ಕಂಡು ಬಂದರು. ಯಾರೂ ಗಮನ ಕೊಡದಂತಿದ್ದ ಆಶ್ರಮ. ನನ್ನ ಹೃದಯ ಭಾರವಾಗಿತ್ತು. ಆಗ ನನ್ನ ಮನಸ್ಸಿನ ಮೇಲೆ ಗಾಢ ಪರಿಣಾಮವನ್ನುಂಟುಮಾಡಿದ ಅದೇ ಸಂಭಾವಿತರು ಇನ್ನೊಂದು ದಿಕ್ಕಿನಿಂದ ನನ್ನಡೆಗೇ ಬರುತ್ತಿದ್ದನ್ನು ನೋಡಿದೆ. ನಾವು ಒಬ್ಬರಿಗೊಬ್ಬರು ಶುಭಾಶಯ ಕೋರಿ ಒಟ್ಟಿಗೇ ಬಯಲಿನಲ್ಲಿ ನಡೆದಾಡಲು ಶುರು ಮಾಡಿದೆವು; ಹಾಗೇ ಮಾಡನಾಡುತ್ತಿದ್ದೆವು. ನಾವು ಅವರಿಗೆ ಪರಮಹಂಸಜೀಯವರಿಗೆ ಭಾರತದಲ್ಲಿಯ ಅವರ ಕೆಲಸದ ಬಗ್ಗೆ ಇದ್ದ ಕನಸುಗಳನ್ನು ಮತ್ತು ಈಗಿರುವ ಕೆಲವು ಮಾನಸಿಕ ಕಳವಳಗಳ ಬಗ್ಗೆ ಹೇಳಲು ಆರಂಭಿಸಿದೆ. ಹೀಗೆ ಹೇಳುತ್ತಿರುವಾಗಲೇ, ನಾನು ಏಕೆ ಇದನ್ನೆಲ್ಲ ಒಬ್ಬ ಅಪರಿಚಿತನಿಗೆ ಹೇಳುತ್ತಿದ್ದೇನೆ ಎಂದು ನನಗೆ ಬಹಳ ಆಶ್ಚರ್ಯವಾಯಿತು. ಆದರೂ ಅವರು ನನಗೆ ಅಪರಿಚಿತರಲ್ಲ ಎಂದೆನಿಸಿತು. ಅವರು ಗುರುದೇವರ ಬಗ್ಗೆ ಹೇಳಿದ ಪ್ರತಿಯೊಂದು ಶಬ್ದವನ್ನೂ ಆಸಕ್ತಿಯಿಂದ ಆಲಿಸುತ್ತಿದ್ದರು ಮತ್ತು ಪ್ರತಿಸ್ಪಂದಿಸುತ್ತಿದ್ದರು. ಹಾಗೂ ನಾನು ಹೊತ್ತಿದ್ದ ದೊಡ್ಡ ಹೊರೆಯ ಬಗ್ಗೆ ಕೂಡ ಅವರಿಗೆ ತಿಳಿಯಿತು ಎಂದು ನನಗನಿಸಿತು.

ಅವರು ಒಂದು ದಿನ ಆಶ್ರಮಕ್ಕೆ ಬಂದಿದ್ದರು, ನಾನು ಕಂಬನಿ ಸುರಿಸುತ್ತಾ ಪೂಜಾಪೀಠದ ಮುಂದೆ ಧ್ಯಾನ ಮಾಡುತ್ತ ಕುಳಿತು ಮಾರ್ಗದರ್ಶನಕ್ಕಾಗಿ ಬೇಡುತ್ತಿದ್ದುದನ್ನು ನೋಡಿದರು ಎಂದು ನಂತರ ನನಗೆ ತಿಳಿಯಿತು. ಏಕೆಂದರೆ ನಾನು ಭಾರತಕ್ಕೆ ಬಂದು ಒಂದು ವರ್ಷ ಕಳೆದರೂ ಏನೂ ಆಗಿರಲಿಲ್ಲ. ಆಗ ಅವರು, ಆ ಕ್ಷಣದಿಂದಲೇ ಎಲ್ಲವನ್ನೂ ತ್ಯಜಿಸಿ ಈ ಮಾರ್ಗವನ್ನು ಅನುಸರಿಸುವುದಾಗಿ ಪ್ರಮಾಣ ಮಾಡಿದೆ ಎಂದು ಹೇಳಿದ್ದರು.

ಕಳೆದ ಇಡೀ ಹನ್ನೆರಡು ವರ್ಷಗಳಲ್ಲಿ ಅವರು ತಮ್ಮ ವಾಗ್ದಾನವನ್ನು ನುಡಿದದ್ದಕ್ಕಿಂತಲೂ ಹೆಚ್ಚಾಗಿ ಪಾಲಿಸಿದ್ದಾರೆ. ಅವರು ಈ ಮಾರ್ಗದಲ್ಲಿ ನಡೆದುದಷ್ಟೇ ಅಲ್ಲದೆ, ಅದಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. 1920ರಲ್ಲಿ ಪರಮಹಂಸಜೀಯವರು ಅಮೆರಿಕಕ್ಕೆ ತೆರಳಿದಾಗಿನಿಂದ ನಿಧಾನವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದ ಭಾರತದ ಸಂಸ್ಥೆಯನ್ನು ಅವರು ಒಂದು ಮಹಾನ್‌ ಹಾಗೂ ಗೌರವಿಸುವಂಥ ಸಂಸ್ಥೆಯಾಗಿ ಬೆಳೆಸಿದರು. ಭಾರತದಾದ್ಯಂತ ಹಲವಾರು ಶಾಖಾ ಕೇಂದ್ರಗಳು, ಯುವಕರ ಶಿಕ್ಷಣಕ್ಕಾಗಿ ಶಿಶುವಿಹಾರದಿಂದ ಹಿಡಿದು ಕಾಲೇಜಿನ ವರೆಗೆ ಹಲವಾರು ಶಾಲಾ ಕಾಲೇಜುಗಳು ಆರಂಭವಾದವು. ಮಕ್ಕಳಿಗೆ ಶಿಕ್ಷಣ ಪಡೆಯಲು ಅವಕಾಶವೇ ಇಲ್ಲದಂಥ, ಸಾರಿಗೆ ಸಂಪರ್ಕವಿಲ್ಲದ ದೂರ ದೂರದ ಹಳ್ಳಿಗಳಲ್ಲಿ ನಾವು ಶಾಲೆಗಳನ್ನು ಆರಂಭಿಸಿದೆವು.

ಸ್ವಾಮಿ ಶ್ಯಾಮಾನಂದರು, ಭಾರತದ ನಮ್ಮ ಎಲ್ಲ ಕಾರ್ಯಚಟುವಟಿಕೆಗಳ ಬೆನ್ನೆಲುಬಾಗಿದ್ದಾರೆ. ಈ ಕಾರ್ಯದ ಸೇವೆಗಾಗಿ ಅವರು ಭಾರತ ಹಾಗೂ ವಿದೇಶಗಳಲ್ಲಿ ಸಂಚಾರ ಮಾಡಿ ಎಲ್ಲೆಡೆ ಜನರ ಗೌರವವನ್ನೂ ಸಂಪೂರ್ಣ ಪ್ರೀತಿಯನ್ನೂ ಗಳಿಸಿದ್ದಾರೆ. ಅವರಿಗೆ ಪ್ರೀತಿ ತೋರಿಸುವ ಅಸೀಮ ಸಾಮರ್ಥ್ಯವಿತ್ತು, ಅದ್ದರಿಂದ ಅದರ ಪರಸ್ಪರ ವಿನಿಮಯ ಸಹಜವಾದದ್ದೇ.

ಶ್ಯಾಮನಂದರು ನಮ್ಮ ಎರಡನೇ ಅಧ್ಯಕ್ಷರಾದ ಋಷಿಗಳಂತಹ ರಾಜರ್ಷಿ ಜನಕಾನಂದರ ಜೀವನದಿಂದ ಬಹಳ ಪ್ರಭಾವಿತರಾಗಿದ್ದರು. ರಾಜರ್ಷಿ ಅವರ ಆದರ್ಶವಾದರು. ಅವರು ತಮ್ಮದೇ ರೀತಿಯಲ್ಲಿ ರಾಜರ್ಷಿಯವರ ಭಾರತೀಯ ತದ್ರೂಪಾಗಿದ್ದರು ಎಂದು ನಾನು ಹೇಳ ಬಯಸುತ್ತೇನೆ.

ಸ್ವಾಮಿ ಶ್ಯಾಮನಂದರು ಕೇವಲ ಭಗವಂತ ಹಾಗೂ ಗುರುವಿನ ಕಾರ್ಯಗಳಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ತಮ್ಮ ಜೀವನದ ಕಡೆಯ ದಿನಗಳಲ್ಲೂ ಸಹ ಅವರು ಭಾರತದಲ್ಲಿ ಇನ್ನೂ ಆಗಬೇಕಾದ ಕೆಲಸಗಳ ಬಗ್ಗೆ ಬಿಟ್ಟು ಬೇರೆ ಏನನ್ನೂ ಮಾತನಾಡುತ್ತಿರಲಿಲ್ಲ. ಆ ಧ್ಯೇಯದ ಸಾಧನೆಗಾಗಿ ಅವರು ಹಲವಾರು ಗುರಿಗಳನ್ನು ಇರಿಸಿಕೊಂಡಿದ್ದರು. ಒಂದು ದಿನ ಸಂಜೆ, ಅವರು ಖಾಯಿಲೆಯಿಂದ ಅಸ್ವಸ್ಥರಾಗಿದ್ದಾಗ, ನಾವು ಅವರೊಡನೆ ಮಾತನಾಡುತ್ತಿದ್ದೆವು. ಆಗ ಅವರು ನಮಗೆ ಹೇಳಿದರು: “ಈಗ ನಾನು ಈ ದೇಹವನ್ನು ತ್ಯಜಿಸಬೇಕಾಗಿ ಬಂದರೂ, ಅದನ್ನು ಕೇವಲ ಒಂದು ಬಯಕೆಯಿಂದ ತ್ಯಜಿಸುತ್ತೇನೆ: ನನ್ನ ಗುರುಗಳ ಕಾರ್ಯವನ್ನು ಮುಂದುವರಿಸುವ ಸಲುವಾಗಿ ನಾನು ಈ ಭೂಮಿಯ ಮೇಲೆ ಮತ್ತೆ ಶೀಘ್ರವಾಗಿ ಜನಿಸಬೇಕೆಂಬ ಬಯಕೆಯೊಡನೆ. ಅದು ನನ್ನ ಹೃದಯದ ಹಾತೊರೆತ.”

ಸ್ವಾಮಿ ಶ್ಯಾಮಾನಂದರ ಕಡೆಯ ಚಿತ್ರಗಳಲ್ಲೊಂದು, ಕೇಂದ್ರ ಕಾರ್ಯಾಲಯ, 1970

ಅವರು ಆಸ್ಪತ್ರೆಯಲ್ಲಿದ್ದಾಗ ಒಮ್ಮೆ ನಾನು ಅವರಿದ್ದ ಕೋಣೆಯನ್ನು ಪ್ರವೇಶಿಸಿದೆ. ಕಣ್ಣೀರು ಕೆನ್ನೆಯ ಮೇಲಿಂದ ಹರಿದುಬರುತ್ತಿತ್ತು. ಅವರು ಅಷ್ಟು ಸುಲಭವಾಗಿ ಕಣ್ಣೀರು ಹಾಕುವಂಥವರಾಗಿರಲಿಲ್ಲ. ನಾನು ಅವರ ಹಾಸಿಗೆಯ ಬಳಿ ಹೋಗಿ ಕೇಳಿದೆ, “ಏನು ಸಮಾಚಾರ?” ನಾನು ಅವರ ಹತ್ತಿರ ಹತ್ತಿರ ಹೋದಾಗ ಅವರ ಮುಖದ ಮೇಲಿದ್ದ ಪರಮಾನಂದದ ಭಾವವನ್ನು ನೋಡಿದೆ. ಅವು ದುಃಖದ ಕಣ್ಣೀರಲ್ಲ, ಆದರೆ ಆನಂದದ ಕಣ್ಣೀರು ಎಂದು ನನಗೆ ತಿಳಿದಿತ್ತು ಅವರು ಅಂತರ್ಮುಖಿಯಾಗಿದ್ದರು. ಅವರಿಗೆ ನಿಧಾನವಾಗಿ ನಾನು ಅಲ್ಲಿರುವ ಅರಿವಾಯಿತು. ನಂತರ ಅವರು ನನಗೆ ಹೇಳಿದರು, “ಮಾತೆ, ನಾನು ಈಗಷ್ಟೇ ಒಂದು ಅದ್ಭುತ ಅನುಭವವನ್ನು ಹೊಂದಿದೆ, ನಾನು ಈ ಹಾಸಿಗೆಯ ಮೇಲೆ ಮಲಗಿರುವಾಗ, ಕೆಲವೇ ದಿನಗಳಷ್ಟೇ ನಾನಿಲ್ಲಿರುವುದು ಎಂದು ಸಂಪೂರ್ಣವಾಗಿ ತಿಳಿದಿದ್ದರೂ, ನಾನು ಈ ಖಾಯಿಲೆಯಿಂದ ಗುಣಮುಖನಾಗಬೇಕೆಂದು ಭಗವಂತನ ಇಚ್ಛೆಯಿಲ್ಲದಿದ್ದರೂ, ನನ್ನ ಹೃದಯದಲ್ಲಿ ಕೇವಲ ಒಂದು ಪ್ರಾರ್ಥನೆಯಿತ್ತು: ಭಗವಂತನೇ ನಾನು ನಿನ್ನ ಪ್ರೀತಿಸ ಬಯಸುತ್ತೇನೆ. ಆ ಬಯಕೆಯನ್ನು ಈಡೇರಿಸು! ನಾನು ನಿನ್ನ ಪ್ರೀತಿಸ ಬಯಸುತ್ತೇನೆ ಅಷ್ಟೇ.” ನಾನು ಪ್ರಾರ್ಥಿಸುತ್ತಿರುವ ಹಾಗೇ, ಇದ್ದಕ್ಕಿದ್ದಂತೆ ಎಂತಹ ಪ್ರೇಮ, ಎಂತಹ ಆನಂದ ನನ್ನನ್ನು ಅವರಿಸಿತು ಎಂದರೆ–ಮಾತೆ, ಎಂತಹ ಆನಂದ! ನಂತರ ಬಾಬಾಜಿ ಬಂದರು. ಅವರು ಪ್ರೇಮಪೂರ್ಣರಾಗಿದ್ದರು, ಎಷ್ಟು ಒಲವಿನಿಂದ ತುಂಬಿದ್ದರು! ನಾನು ಸಂಪೂರ್ಣವಾಗಿ ಆ ಪ್ರೀತಿಯಿಂದ ತುಂಬಿದ್ದೆ. ಎಂತಹ ಆನಂದ, ಓಹ್‌, ನನ್ನದು ಎಂತಹ ಆನಂದ! ಇದೊಂದೇ ಜೀವನದ ಗುರಿ ಎಂದು ನನಗೆ ತಿಳಿದಿದೆ.”

ನಿಜವಾಗಿಯೂ ಜೀವನದ ಅಂತಿಮ ಗುರಿ ಕೇವಲ ಭಗವಂತನಿಗೆ ಸೇವೆ ಸಲ್ಲಿಸುವುದು ಮತ್ತು ನಮ್ಮ ಎಲ್ಲ ಕಾರ್ಯಕಲಾಪಗಳನ್ನು ಅವನಿಗೆ ಸಮರ್ಪಿಸುವುದು ಮಾತ್ರವಲ್ಲ–ನಾವು ಈ ಲೌಕಿಕ ಜಗತ್ತಿನಲ್ಲೇ ಇರಲಿ ಅಥವಾ ಆಶ್ರಮಗಳಲ್ಲೇ ಇರಲಿ–ಬದಲಾಗಿ ನಮ್ಮ ಪ್ರತಿಯೊಂದು ಆಲೋಚನೆಯಲ್ಲೂ ಭಗವಂತ ನಮ್ಮ ದೈನಂದಿನ ಸಂಗಾತಿಯಾಗುವಂತಹ ಪ್ರೇಮವನ್ನು ಬೆಳೆಸಿಕೊಳ್ಳುವುದು ಕೂಡ. ಈ ಆದರ್ಶವು ಶ್ಯಾಮಾನಂದ ಗಿರಿಯವರಲ್ಲಿ ಸಂಪೂರ್ಣವಾಗಿ ವಿಕಸಿತವಾಗಿತ್ತು. ಈ ಜಗತ್ತಿನಲ್ಲಿ ಬಹಳ ಕಡಿಮೆ ಜನರು ಇರುವ ಹಾಗೆ ಅವರು ಆ ಆದರ್ಶಕ್ಕೆ ತಕ್ಕಂತೆ ಜೀವಿಸಿದರು. “ನಾನು ನಿನಗೆ ಹೇಗೆ ಸೇವೆ ಸಲ್ಲಿಸಲಿ ಭಗವಂತ!” ಎಂಬ ಆಲೋಚನೆಯ ಸುತ್ತಲೇ ಅವರ ಎಲ್ಲ ಕಾರ್ಯಗಳೂ ಕೇಂದ್ರಿತವಾಗಿದ್ದವು.

ಅವರನ್ನು ಬಲ್ಲ ನಮ್ಮೆಲ್ಲರ ಹೃದಯದಲ್ಲಿ ಸ್ವಾಮಿ ಶ್ಯಾಮಾನಂದ ಗಿರಿಯವರು ಬಹು ದೊಡ್ಡ ಶೂನ್ಯವನ್ನು ಬಿಟ್ಟು ಹೋಗಿದ್ದಾರೆ. ಅಷ್ಟೇ ಅಲ್ಲದೆ, ಇಲ್ಲಿಯ ಹಾಗೂ ಭಾರತದಲ್ಲಿಯ ನಮ್ಮ ಕಾರ್ಯಕಲಾಪಗಳಲ್ಲಿ ಕೂಡ. ನಿಮಗೆಲ್ಲ ತಿಳಿದಿರುವ ಹಾಗೆ, ಅವರು ಪರಮಹಂಸ ಯೋಗಾನಂದರ ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ನ ಕೇಂದ್ರ ಕಾರ್ಯಾಲಯದ ಅಧ್ಯಕ್ಷ ಮಂಡಳಿಯ ಒಬ್ಬ ಸದಸ್ಯರಾಗಿದ್ದರು. ಹಾಗೂ ಭಾರತದ ನಮ್ಮ ಸಂಸ್ಥೆಯಾದ ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾದ ಪ್ರಧಾನ ಕಾರ್ಯದರ್ಶಿ/ಖಜಾಂಚಿ ಆಗಿದ್ದರು. ಒಂದಲ್ಲ ಒಂದು ದಿನ ಭಗವಂತನ ಕರೆಗೆ ನಾವು ಓಗೊಡಬೇಕೆಂದು ನಮಗೆಲ್ಲ ತಿಳಿದೇ ಇದೆ. ಇದು ದುಃಖಿಸುವ ಸಮಯವಲ್ಲ. ಶೂನ್ಯವೇನೋ ಇದೆ. ಆದರೂ ನಮಗೆ ಮಹಾನ್‌ ಶಾಂತಿ ಹಾಗೂ ಸಂತೋಷವಾಗುತ್ತಿದೆ. ಏಕೆಂದರೆ ಅವರು ತಾವು ಪ್ರೀತಿಯಿಂದ ಪೂಜಿಸುತ್ತಿದ್ದ ಮತ್ತು ತಮ್ಮ ಬಾಲ್ಯದಿಂದೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಆ ದಿವ್ಯ ಮಾತೆಯ ಮಧುರ ತೋಳುಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ನಮಗೆ ತಿಳಿದಿದೆ.

ಈಗ ನಾವು ಆರೋಹಣ ಸಮಾರಂಭವನ್ನು ಮುಂದುವರಿಸೋಣ. ಇದನ್ನು ಭಾರತದಲ್ಲಿ ಶರೀರದಿಂದ ಆತ್ಮವು ಹೊರಗೆ ಹೋದ ಮೇಲೆ ಆಚರಿಸಲಾಗುತ್ತದೆ. ದಹನ ಕ್ರಿಯೆಯ ಸಂದರ್ಭದಲ್ಲಿ ಮಾಡುವ ಪುರಾತನ ವೇದಿಕ್‌ ಕರ್ಮಾಚರಣೆಗಳ ಭಾಗವೂ ಆಗಿದೆ. ಅಗ್ನಿಯು ಮಹಾನ್‌ ಶುದ್ಧಕಾರಿ ಎಂದು ಭಾರತದ ಸದ್ಗ್ರಂಥಗಳು ಉಲ್ಲೇಖಿಸುತ್ತವೆ. ನಿಮ್ಮ ಮುಂದೆ ಉರಿಯುತ್ತಿರುವ ಅಗ್ನಿ ಮರ್ತ್ಯ ಶರೀರದ ದಹನವನ್ನು ಸೂಚಿಸುತ್ತದೆ. ಅಂದರೆ ಅಮರ ಆತ್ಮವು ತನ್ನ ಪರಂಧಾಮವನ್ನು ಸೇರಲು ದೇಹದ ಬಂಧನದಿಂದ ಬಿಡಿಸಿಕೊಂಡು ಸ್ವರ್ಗದೆಡೆಗೆ ಮೇಲೇರಲು ಸ್ವತಂತ್ರವಾಗುವುದು.

[ಈ ಸಂದರ್ಭದಲ್ಲಿ ಪವಿತ್ರ ವೇದಗಳಿಂದ ಒಂದು ಪ್ರಾರ್ಥನೆಯನ್ನು ಹೇಳುತ್ತಾ ಶ್ರೀ ದಯಾ ಮಾತಾ ಅವರು ಸಾಂಕೇತಿಕ ಅಗ್ನಿಯನ್ನು ಹೊತ್ತಿಸಿ ಆರೋಹಣ ಸಮಾರಂಭವನ್ನು ನೆರವೇರಿಸುತ್ತಾರೆ. ಧ್ಯಾನದೊಂದಿಗೆ ಕಾರ್ಯಕ್ರಮ ಮುಂದುವರೆಯುತ್ತದೆ. ನಂತರ ಪರಮಹಂಸ ಯೋಗಾನಂದರ “ದೌ ಅಂಡ್‌ ಐ ಆರ್‌ ಒನ್‌” ಕವಿತೆ, ಭಗವಂತನನ್ನು ದಿವ್ಯ ಮಾತೆಯ ಸ್ವರೂಪದಲ್ಲಿ ಪೂಜಿಸುವ ಭಜನೆ ಹಾಗೂ ಮುಕ್ತಾಯದ ಪ್ರಾರ್ಥನೆ:]

ಪರಮಪಿತನೇ, ಜಗನ್ಮಾತೆ, ಸಖ, ಪ್ರಿಯ ಭಗವಂತ, ಭಗವಾನ್‌ ಕೃಷ್ಣ, ಏಸು ಕ್ರಿಸ್ತ, ಮಹಾವತಾರ್‌ ಬಾಬಾಜಿ, ಲಾಹಿರಿ ಮಹಾಶಯ, ಸ್ವಾಮಿ ಶ್ರೀಯುಕ್ತೇಶ್ವರ್‌ಜಿ, ಗುರುದೇವಾ ಪರಮಹಂಸ ಯೋಗಾನಂದಜಿ ಹಾಗೂ ಸರ್ವಪಂಥಗಳ ಸಂತರೇ, ನಾವು ನಿಮ್ಮೆಲ್ಲರಿಗೂ ತಲೆಬಾಗಿ ವಂದಿಸುತ್ತೇವೆ.

ದಿವ್ಯ ಮಾತೆ, ನೀನೇ ನಮ್ಮ ಜೀವ, ನೀನೇ ನಮ್ಮ ಪ್ರೇಮ, ನೀನೇ ಸರ್ವ ಮಾನವಕೋಟಿಯು ಅರಸುತ್ತಿರುವ ಮಹೋನ್ನತ ಗುರಿ. ನಿನ್ನ ಪ್ರೇಮ ನನ್ನ ಭಕ್ತಿಯ ದೇಗುಲದಲ್ಲಿ ಸದಾ ಬೆಳಗುತ್ತಿರಲಿ ಮತ್ತು ಎಲ್ಲ ಹೃದಯಗಳಲ್ಲಿ ನಿನ್ನ ಪ್ರೇಮವನ್ನು ನಾನು ಜಾಗೃತಗೊಳಿಸುವಂತಾಗಲಿ.

ಸ್ವಾಮಿ ಶ್ಯಾಮಾನಂದ ಗಿರಿಯವರ ಆತ್ಮವನ್ನು ಆಶೀರ್ವದಿಸು. ಅವರನ್ನು ನಿನ್ನ ವಿಸ್ತೃತ ಪ್ರೇಮದೊಂದಿಗೆ ಒಂದುಗೂಡಿಸು. ಅವರ ಚೇತನವು ಸ್ವರ್ಗದೆಡೆಗೆ ಏರುವಾಗ ಅವರನ್ನು ರಕ್ಷಿಸು ಮತ್ತು ಮಾರ್ಗದರ್ಶಿಸು. ನಿನ್ನ ದಯೆ, ಕೋಮಲತೆ ಹಾಗೂ ಅರಿವಿನ ಕೈಗಳಲ್ಲಿ ಅವರು ವಿಶ್ರಮಿಸಲಿ. ಅವರು ನಿನ್ನ ಮಗು. ಸದಾ ಅವರೊಡನಿರು. ನಾವು ಅವರನ್ನು ನಮ್ಮ ಪ್ರೇಮದ, ನಮ್ಮ ಸದಾಶಯದ ರಕ್ಕೆಗಳ ಮೇಲೆ ಕಳಿಸುತ್ತಿದ್ದೇವೆ ಹಾಗೂ ಅವರ ಪುಟ್ಟ ದೇಹ-ಪಂಜರದಿಂದ ಅವರಿಗೆ ದೊರೆತ ಸ್ವಾತಂತ್ರ್ಯದಿಂದ ನಮಗಾದ ಸಂತೋಷವನ್ನು ಅವರಿಗೆ ಕಳಿಸುತ್ತಿದ್ದೇವೆ. ಇನ್ನು ಮುಂದೆ ಎಂದೆಂದಿಗೂ ನಿನ್ನ ಮೇಲೆ ಕೇಂದ್ರಿತವಾಗುವ ಹಾಗೆ ಅವರ ಪ್ರಜ್ಞೆಯನ್ನು ಎತ್ತರಿಸು. ಏಕೆಂದರೆ, ನೀನೆ ನಮ್ಮೆಲ್ಲ ಆತ್ಮಗಳ ಮಹಾನ್‌ ಪ್ರೇಮವಾಗಿರುವೆ.

ಈ ಮರ್ತ್ಯ ಲೋಕದಲ್ಲಿ ಹಿಂದಕ್ಕೆ ಉಳಿದಿರುವ ನಮ್ಮನ್ನು ಆಶೀರ್ವದಿಸು, ಅವರು ಮಾಡಿದಂತೆ ನಾವು ಈ ಜಗತ್ತಿನಲ್ಲಿ ನಮ್ಮ ಕರ್ತವ್ಯಗಳನ್ನು ನಿರ್ವಹಿಸುವಂತೆ, ಅವುಗಳನ್ನು ಕರ್ತವ್ಯಗಳಾಗಿ ನೋಡದೆ, ನಮ್ಮ ಸಹಜೀವಿಗಳಿಗೆ ಸೇವೆ ಮಾಡುವ ಮೂಲಕ ನಿನ್ನ ಸೇವೆ ಮಾಡುವ ಪವಿತ್ರ ಸೌಭಾಗ್ಯವೆಂದು ತಿಳಿಯುವಂತೆ ನಮ್ಮನ್ನು ಆಶೀರ್ವದಿಸು.

ಓ ದಿವ್ಯ ಮಾತೆ, ನಿನ್ನ ದಿವ್ಯ ಮಾದರಿಗನುಗುಣವಾಗಿ ನಮ್ಮ ಬದುಕನ್ನು ನೀನು ರೂಪಿಸು. ಸರ್ವವ್ಯಾಪಿಯಾಗಿರುವ ನಿನ್ನ ಪಾದಗಳ ಮೇಲೆ ನಾವು ನಮ್ಮ ಪ್ರೀತಿ, ಭಕ್ತಿಯ ಪುಷ್ಪಗಳನ್ನು ಸಮರ್ಪಿಸುತ್ತಿದ್ದೇವೆ. ನಿನಗೆ ನಾವು ವಂದಿಸುತ್ತಿದ್ದೇವೆ.

ಓಂ, ಶಾಂತಿ, ಶಾಂತಿ, ಶಾಂತಿ.

[1] ಇಡೀ ಕಾರ್ಯಕ್ರಮದಲ್ಲಿ ಶ್ರೀ ದಯಾ ಮಾತಾರವರು ಅವರನ್ನು ಅವರ ಸನ್ಯಾಸಿ ಹೆಸರಿನಲ್ಲಿ ಸಂಬೋಧಿಸುತ್ತಿದ್ದರೂ, ಶ್ಯಾಮಾನಂದ ಗಿರಿಯವರು ಬಹಳಷ್ಟು ವೈಎಸ್‌ಎಸ್‌-ಎಸ್‌ಆರ್‌ಎಫ್‌ ಸದಸ್ಯರಿಗೆ ಅವರ ಪೂರ್ವಾಶ್ರಮದ ಹೆಸರಾದ ಬಿನಯೇಂದ್ರ ನಾರಾಯಣ ದುಬೆ ಎಂಬ ಹೆಸರಿನಿಂದ ಪರಿಚಿತರಾಗಿದ್ದರು. ದಯಾ ಮಾತಾರವರು ಆಗ ಅವರಿಗೆ ಯೋಗಾಚಾರ್ಯ (ಯೋಗದ ಆಚಾರ್ಯ-ಗುರು), ಯೋಗಾಚಾರ್ಯ ಬಿನಯ್‌ ನಾರಾಯಣ್‌ ಎಂಬ ಉಪಾಧಿಯನ್ನು ನೀಡಿದರು. 1970ರ ಅಕ್ಟೋಬರ್‌ನಲ್ಲಿ ಅವರು ಶ್ರೀ ದಯಾ ಮಾತಾ ಅವರಿಂದ ವಿಧ್ಯುಕ್ತ ಸನ್ಯಾಸಿ ದೀಕ್ಷೆಯನ್ನು ಸ್ವೀಕರಿಸಿದರು. ಆಗ ಆಕೆ ಅವರಿಗೆ ಸ್ವಾಮಿ ಶ್ಯಾಮಾನಂದ ಗಿರಿ ಎಂಬ ಉಪಾಧಿಯನ್ನು ನೀಡಿದರು.

ಇದನ್ನು ಹಂಚಿಕೊಳ್ಳಿ