ಮ್ಯಾನ್ಸ್ ಇಟರ್ನಲ್ ಕ್ವೆಸ್ಟ್ ಪುಸ್ತಕದಲ್ಲಿ ಶ್ರೀ ಶ್ರೀ ಪರಮಹಂಸ ಯೋಗಾನಂದರಿಂದ "ಹೀಲಿಂಗ್ ಬೈ ಗಾಡ್ಸ್ ಅನ್‌ಲಿಮಿಟೆಡ್ ಪವರ್," ಎಂಬ ಅಧ್ಯಾಯದಿಂದ ಆಯ್ದ ಭಾಗಗಳು.
ಅನಾರೋಗ್ಯ ಎಂದರೇನು?
ಮೂರು ವಿಧದ ಕಾಯಿಲೆಗಳು ಇವೆ: ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ.
ದೈಹಿಕ ಕಾಯಿಲೆಯು ವಿಭಿನ್ನ ಬಗೆಯ ವಿಷಪೂರಿತ ಸ್ಥಿತಿಗಳು, ಸೋಂಕು ರೋಗಗಳು ಮತ್ತು ಅಪಘಾತಗಳಿಂದ ಉಂಟಾಗುತ್ತದೆ.
ಮಾನಸಿಕ ಕಾಯಿಲೆಯು ಭಯ, ಚಿಂತೆ, ಕೋಪ, ಮತ್ತು ಇತರ ಭಾವನಾತ್ಮಕ ಅಸಮತೋಲನಗಳಿಂದ ಉಂಟಾಗುತ್ತದೆ.
ದೇವರೊಂದಿಗಿನ ನೈಜ ಸಂಬಂಧದ ಬಗೆಗಿನ ಮನುಷ್ಯನ ಅಜ್ಞಾನದಿಂದಾಗಿ ಆತ್ಮದ ಕಾಯಿಲೆ ಉಂಟಾಗುತ್ತದೆ.
ಅಜ್ಞಾನವೇ ಪರಮ ವ್ಯಾಧಿ. ಯಾವಾಗ ವ್ಯಕ್ತಿಯು ಅಜ್ಞಾನವನ್ನು ದೂರ ಮಾಡುತ್ತಾನೋ, ಆಗ ಅವನು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಕಾಯಿಲೆಯ ಎಲ್ಲಾ ಕಾರಣಗಳನ್ನು ಸಹ ದೂರ ಮಾಡುತ್ತಾನೆ. ನನ್ನ ಗುರು ಶ್ರೀ ಶ್ರೀ ಯುಕ್ತೇಶ್ವರರು ಯಾವಾಗಲೂ ಹೇಳುತ್ತಿದ್ದರು, “ಜ್ಞಾನವೇ ಶ್ರೇಷ್ಠವಾದ ಶುದ್ಧೀಕಾರಕ.”
ಭೌತಿಕ ಚಿಕಿತ್ಸೆಗಿರುವ ಸೀಮಿತ ಶಕ್ತಿಯಿಂದ ವಿವಿಧ ಬಗೆಯ ನೋವುಗಳನ್ನು ನಿವಾರಣೆ ಮಾಡಲು ಪ್ರಯತ್ನಿಸುವುದು ಬಹಳಷ್ಟು ಬಾರಿ ನಿರಾಶಾದಾಯಕವಾಗಿರುತ್ತದೆ. ಆಧ್ಯಾತ್ಮಿಕ ವಿಧಾನಗಳ ಅಸೀಮ ಶಕ್ತಿಯಲ್ಲಿ ಮಾತ್ರ ದೇಹ, ಮನಸ್ಸು ಮತ್ತು ಆತ್ಮದ “ಅಸ್ವಸ್ಥತೆ”ಗೆ ಮನುಷ್ಯ, ಶಾಶ್ವತ ಚಿಕಿತ್ಸೆಯನ್ನು ಕಂಡುಕೊಳ್ಳಬಹುದು. ಗುಣಪಡಿಸುವ ಆ ಅಸೀಮ ಶಕ್ತಿಯನ್ನು ದೇವರಲ್ಲಿ ಹುಡುಕಬೇಕು. ನೀವು ನಿಮ್ಮ ಪ್ರಿಯರನ್ನು ಕಳೆದುಕೊಂಡು ಮಾನಸಿಕವಾಗಿ ನರಳಿದ್ದರೆ, ನೀವು ಅವರನ್ನು ದೇವರಲ್ಲಿ ಮತ್ತೆ ಕಂಡುಕೊಳ್ಳಬಹುದು. ದೇವರ ಸಹಾಯದಿಂದ ಎಲ್ಲಾ ವಿಷಯಗಳೂ ಸಾಧ್ಯ. ಒಬ್ಬನು ದೇವರನ್ನು ನಿಜವಾಗಿ ಅರಿಯದ ಹೊರತು, ಕೇವಲ ಮನಸ್ಸಿಗೆ ಮಾತ್ರ ಅಸ್ತಿತ್ವವಿದೆ, ಆದ್ದರಿಂದ ಆರೋಗ್ಯ ನಿಯಮಗಳನ್ನು ಪಾಲಿಸುವ ಅಥವಾ ಯಾವುದೇ ದೈಹಿಕ ಚಿಕಿತ್ಸೆಗಳನ್ನು ಬಳಸುವ ಅಗತ್ಯವಿಲ್ಲ, ಎಂದು ಅವನು ಹೇಳುವುದು ಸಾಧುವಲ್ಲ. ನಿಜವಾದ ಸಾಕ್ಷಾತ್ಕಾರವಾಗುವವರೆಗೂ, ವ್ಯಕ್ತಿಯು ತನ್ನ ಎಲ್ಲಾ ಕಾರ್ಯಗಳಲ್ಲಿ ವಿವೇಚನೆಯನ್ನು ಬಳಸಬೇಕು. ಅದೇ ಸಮಯಕ್ಕೆ, ದೇವರನ್ನು ಶಂಕಿಸಬಾರದು, ಆದರೆ ದೇವರ ಸರ್ವವ್ಯಾಪಕ ದಿವ್ಯ ಶಕ್ತಿಯ ಮೇಲಿನ ತನ್ನ ವಿಶ್ವಾಸವನ್ನು ಸದಾ ದೃಢಪಡಿಸಬೇಕು.
ವೈದ್ಯರು ಕಾಯಿಲೆಯ ಕಾರಣಗಳನ್ನು ತಿಳಿಯಲು ಮತ್ತು ಆ ಕಾರಣಗಳನ್ನು ತೆಗೆದುಹಾಕಿ ಕಾಯಿಲೆಗಳು ಮತ್ತೆ ಬರದಂತೆ ತಡೆಯಲು ಪ್ರಯತ್ನಿಸುತ್ತಾರೆ. ವಿಶೇಷವಾದ ಚಿಕಿತ್ಸಾ ವಿಧಾನಗಳ ಬಳಕೆಯಲ್ಲಿ ವೈದ್ಯರು ಬಹಳ ಕುಶಲರಾಗಿದ್ದಾರೆ. ಆದರೂ, ಎಲ್ಲಾ ಕಾಯಿಲೆಗಳೂ ಔಷಧ ಮತ್ತು ಶಸ್ತ್ರಚಿಕಿತ್ಸೆಗೆ ಪ್ರತಿಕ್ರಿಯಿಸುವುದಿಲ್ಲ, ಮತ್ತು ಅದೇ ಈ ವಿಧಾನಗಳ ಮುಖ್ಯ ಕೊರತೆಯಾಗಿದೆ.
ರಾಸಾಯನಿಕಗಳು ಮತ್ತು ಔಷಧಗಳು ದೇಹದ ಜೀವಕೋಶಗಳ ಬಾಹ್ಯ ಭೌತಿಕ ಸಂಯೋಜನೆಯ ಮೇಲೆ ಮಾತ್ರ ಪರಿಣಾಮ ಬೀರುತ್ತವೆ, ಆದರೆ ಅವು ಜೀವಕೋಶಗಳ ಆಂತರಿಕ ಪರಮಾಣು ರಚನೆ ಅಥವಾ ಜೀವತತ್ವವನ್ನು ಬದಲಾಯಿಸುವುದಿಲ್ಲ. ಅನೇಕ ಸಂದರ್ಭಗಳಲ್ಲಿ, ದೇವರ ಗುಣಪಡಿಸುವ ಶಕ್ತಿ ದೇಹದಲ್ಲಿಯ “ಲೈಫ್‌ಟ್ರಾನ್ಸ್” ಅಥವಾ ಬುದ್ಧಿವಂತ ಪ್ರಾಣಶಕ್ತಿಯ ಅಸಮತೋಲನವನ್ನು ಒಳಗಿನಿಂದ ಸರಿಪಡಿಸುವವರೆಗೆ ವ್ಯಾಧಿಯನ್ನು ಗುಣಪಡಿಸಲು ಸಾಧ್ಯವಾಗುವುದಿಲ್ಲ.
ನಿಮ್ಮ ದೇಹದ ನೈಸರ್ಗಿಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ
ಉಪವಾಸವು ಪ್ರಾಕೃತಿಕ ಚಿಕಿತ್ಸಾ ವಿಧಾನವಾಗಿದೆ. ಮೃಗಗಳು ಅಥವಾ ಆದಿವಾಸಿ ಜನರು ಅಸ್ವಸ್ಥರಾಗಿರುವಾಗ, ಅವರು ಉಪವಾಸ ಮಾಡುತ್ತಾರೆ. ಇದರಿಂದ ದೇಹದ ವಿವಿಧ ಅಂಗಗಳಿಗೆ ತಾವೇ ಶುದ್ಧೀಕರಿಸಿಕೊಳ್ಳಲು ಮತ್ತು ಅತ್ಯವಶ್ಯಕವಾದ ವಿಶ್ರಾಂತಿಯನ್ನು ಪಡೆಯಲು ಅವಕಾಶ ದೊರಕುತ್ತದೆ. ವಿವೇಚನಾಯುಕ್ತ ಉಪವಾಸದ ಮೂಲಕ ಹೆಚ್ಚಿನ ರೋಗಗಳನ್ನು ಗುಣಪಡಿಸಬಹುದು. ಹೃದಯ ದೌರ್ಬಲ್ಯವಿಲ್ಲದಿದ್ದರೆ, ನಿಯಮಿತ ಕಿರು ಉಪವಾಸಗಳು ಉತ್ತಮ ಆರೋಗ್ಯ ಕ್ರಮವೆಂದು ಯೋಗಿಗಳು ಶಿಫಾರಸು ಮಾಡಿದ್ದಾರೆ. ದೈಹಿಕ ಚಿಕಿತ್ಸೆಗಾಗಿ ಇನ್ನೊಂದು ಉತ್ತಮ ವಿಧಾನವೆಂದರೆ ಸೂಕ್ತವಾದ ಗಿಡ ಮೂಲಿಕೆಗಳು ಅಥವಾ ಗಿಡ ಮೂಲಿಕೆಗಳ ಸಾರಗಳನ್ನು ಬಳಸುವುದು.
ಔಷಧಗಳನ್ನು ಬಳಸುವಾಗ ನಾವು ಸಾಮಾನ್ಯವಾಗಿ ಇದನ್ನು ಗಮನಿಸಬಹುದು, ಒಂದೊ ಅವು ರೋಗವನ್ನು ಗುಣಪಡಿಸುವಷ್ಟು ಶಕ್ತಿಯುತವಾಗಿರುವುದಿಲ್ಲ, ಅಥವಾ ಅವುಗಳು ಎಷ್ಟು ಶಕ್ತಿಯುತವೆಂದರೆ ರೋಗವನ್ನು ಗುಣಪಡಿಸುವ ಬದಲು ದೇಹದ ಅಂಗಾಂಶಗಳಿಗೆ ಹಾನಿಯುಂಟು ಮಾಡುತ್ತವೆ. ಅದೇ ರೀತಿ, ಕೆಲವು ಬಗೆಯ “ಚಿಕಿತ್ಸಾ ಕಿರಣಗಳು” ದೇಹದ ಅಂಗಾಂಶಗಳನ್ನು ಸುಡುವಂತಹವುಗಳಾಗಿರಬಹುದು. ದೈಹಿಕ ಚಿಕಿತ್ಸಾ ವಿಧಾನಗಳಲ್ಲಿ ಎಷ್ಟೊಂದು ಮಿತಿಗಳಿವೆ!
ಔಷಧಗಳಿಗಿಂತ ಉತ್ತಮವಾದವು ಸೂರ್ಯನ ಕಿರಣಗಳು. ಅವುಗಳಲ್ಲಿ ಅದ್ಭುತವಾದ ಉಪಶಮನಕಾರಕ ಶಕ್ತಿ ಇದೆ. ಪ್ರತಿದಿನ ಹತ್ತು ನಿಮಿಷಗಳ ಸೂರ್ಯ ಸ್ನಾನ ಮಾಡಬೇಕು. ಎಂದೋ ಒಂದೊಂದು ಬಾರಿ ಹೆಚ್ಚು ಸಮಯ ಸೂರ್ಯ ಸ್ನಾನ ಮಾಡುವುದಕ್ಕಿಂತ ಪ್ರತಿದಿನ ಹತ್ತು ನಿಮಿಷ ಸೂರ್ಯ ಸ್ನಾನ ಮಾಡುವುದು ಲೇಸು. ಪ್ರತಿದಿನದ ಕಿರಿದಾದ ಸೂರ್ಯ ಸ್ನಾನ ಮತ್ತು ಉತ್ತಮ ಆರೋಗ್ಯ ಅಭ್ಯಾಸಗಳು ದೇಹದ ಎಲ್ಲ ಹಾನಿಕಾರಕ ಸೂಕ್ಷ್ಮಾಣುಗಳನ್ನು ನಾಶಮಾಡಲು ಬೇಕಾಗುವ ಪ್ರಾಣಶಕ್ತಿಯನ್ನು ದೇಹಕ್ಕೆ ಒದಗಿಸುತ್ತವೆ.*
ಆರೋಗ್ಯವಂತ ವ್ಯಕ್ತಿಗಳಲ್ಲಿ ಕಾಯಿಲೆಗೆ, ವಿಶೇಷವಾಗಿ ಸೋಂಕಿಗೆ, ತಡೆಯೊಡ್ಡುವ ನೈಸರ್ಗಿಕ ಪ್ರತಿರೋಧ ಶಕ್ತಿ ಇರುತ್ತದೆ. ದೋಷಪೂರಿತ ಆಹಾರ ಸೇವನೆ ಅಥವಾ ಅತಿಯಾದ ಸೇವನೆಯಿಂದ ಅಥವಾ ಅತಿಯಾದ ಲೈಂಗಿಕ ಆಸಕ್ತಿ ದೇಹದ ಶಕ್ತಿಯನ್ನು ಕಡಿಮೆ ಮಾಡಿದಾಗ, ರಕ್ತದ ಪ್ರತಿರೋಧ ಶಕ್ತಿ ಕಡಿಮೆಯಾಗಿ ಅನಾರೋಗ್ಯ ಉಂಟಾಗುವುದು. ದೇಹದ ಸೃಷ್ಟಿಶೀಲ ಶಕ್ತಿಯನ್ನು ಉಳಿಸುವುದು ಎಂದರೆ ಎಲ್ಲಾ ಜೀವಕೋಶಗಳಿಗೆ ಚೈತನ್ಯದಾಯಕ ಪ್ರಾಣಶಕ್ತಿಯನ್ನು ಪೂರೈಸಿದಂತೆ; ಆಗ ದೇಹವು ರೋಗಕ್ಕೆ ಅಪಾರವಾದ ಪ್ರತಿರೋಧ ಶಕ್ತಿಯನ್ನು ಹೊಂದಿರುತ್ತದೆ. ಅತಿಯಾದ ಲೈಂಗಿಕ ಆಸಕ್ತಿ ದೇಹವನ್ನು ದುರ್ಬಲಗೊಳಿಸುತ್ತದೆ ಮತ್ತು ಅದನ್ನು ಕಾಯಿಲೆಗೆ ಸುಲಭವಾಗಿ ಬಲಿಯಾಗುವಂತೆ ಮಾಡುತ್ತದೆ.
[*ಗಮನಿಸಿ: ದಿನದ ಆರಂಭದ ಮತ್ತು ಸಂಜೆಯ ಸಮಯ ಸೂರ್ಯ ಸ್ನಾನಕ್ಕೆ ಸೂಕ್ತ. ಸೂಕ್ಷ್ಮವಾದ ಚರ್ಮವನ್ನು ಸೂರ್ಯನ ಕಿರಣಗಳಿಗೆ ಹೆಚ್ಚು ಒಡ್ಡದಂತೆ ಸದಾ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ವೈದ್ಯರು ಅಥವಾ ಚರ್ಮರೋಗ ತಜ್ಞರೊಡನೆ ಸಮಾಲೋಚಿಸಿ ಅವರ ಸಲಹೆಗಳನ್ನು ಅನುಸರಿಸುವುದು ಸೂಕ್ತವಾಗಿದೆ.]
ನಗುವಿನ ಶಕ್ತಿ
ಜೀವಧಾರಕ ಶಕ್ತಿಯನ್ನು ಉಳಿಸಿ, ಸಮತೋಲಿತ ಆಹಾರವನ್ನು ಸೇವಿಸಿ, ಯಾವಾಗಲೂ ನಗು ನಗುತ್ತಾ ಸಂತೋಷದಿಂದಿರಿ. ಮನುಷ್ಯನು ತನ್ನೊಳಗೇ ಸಂತೋಷವನ್ನು ಅನುಭವಿಸಿದಾಗ, ಅವನ ದೇಹವು ಆಹಾರದಿಂದಲ್ಲದೆ, ದೇವರಿಂದ ಬರುವ ವಿದ್ಯುತ್ಪ್ರವಾಹದಿಂದ, ಪ್ರಾಣಶಕ್ತಿಯಿಂದ ಭರಿತವಾಗಿರುತ್ತದೆ ಎಂಬುದನ್ನು ಕಂಡುಕೊಳ್ಳುತ್ತಾನೆ. ನಿಮಗೆ ನಗಲಾಗುವುದಿಲ್ಲ ಎಂದು ನೀವು ಭಾವಿಸಿದರೆ, ಕನ್ನಡಿಯ ಮುಂದೆ ನಿಂತು, ನಿಮ್ಮ ಬೆರಳುಗಳಿಂದ ನಿಮ್ಮ ಬಾಯಿಯನ್ನು ನಗುವಿನಾಕಾರಕ್ಕೆ ಎಳೆಯಿರಿ. ಅದು ಆಷ್ಟು ಮುಖ್ಯ!
ಆಹಾರದ ಬಗ್ಗೆ ಹಾಗೂ ಗಿಡಮೂಲಿಕೆಗಳು ಅಥವಾ ಉಪವಾಸದಿಂದ ದೇಹದ ಶುದ್ಧೀಕರಣಕ್ಕೆ ಸಂಬಂಧಿಸಿದಂತೆ ನಾನು ಸಂಕ್ಷಿಪ್ತವಾಗಿ ಪ್ರಸ್ತಾಪಿಸಿದ ಚಿಕಿತ್ಸಾ ವಿಧಾನಗಳು, ಅವುಗಳ ಪರಿಣಾಮಕಾರಿತ್ವದಲ್ಲಿ ಸೀಮಿತವಾಗಿರುತ್ತವೆ; ಆದರೆ ಒಬ್ಬನು ತನ್ನೊಳಗೆ ಸಂತೋಷವಾಗಿದ್ದಾಗ, ಅವನು ದೇವರ ಅದಮ್ಯ ಶಕ್ತಿಯ ಸಹಾಯವನ್ನು ಆಹ್ವಾನಿಸುತ್ತಾನೆ. ಸಂತೋಷವೆಂದರೆ ನಿಜವಾದ ಸಂತೋಷ, ಹೊರಗಿನಿಂದ ತೋರಿಸುವ, ಆದರೆ ಒಳಗಿನಿಂದ ಅನುಭವವಾಗದ ಸಂತೋಷವಲ್ಲ. ನಿಮ್ಮ ಸಂತೋಷ ಪ್ರಾಮಾಣಿಕವಾಗಿದ್ದರೆ, ನೀವು ನಗುವಿನ ಕೋಟ್ಯಾಧಿಪತಿಯಾಗುತ್ತೀರಿ. ಒಂದು ನಿಜವಾದ ನಗು ಬ್ರಹ್ಮಾಂಡ ಪ್ರವಾಹ ಅಥವಾ ಪ್ರಾಣವನ್ನು ದೇಹದ ಪ್ರತಿಯೊಂದು ಜೀವಕೋಶಕ್ಕೆ ವಿತರಿಸುತ್ತದೆ. ಸಂತೋಷವುಳ್ಳ ವ್ಯಕ್ತಿಗೆ ರೋಗಗಳು ಕಡಿಮೆ, ಏಕೆಂದರೆ ಸಂತೋಷವು ನಿಜವಾಗಿಯೂ ದೇಹಕ್ಕೆ ಬ್ರಹ್ಮಾಂಡದ ಪ್ರಾಣಶಕ್ತಿಯ ಹೆಚ್ಚಿನ ಪೂರೈಕೆಯನ್ನು ಆಕರ್ಷಿಸುತ್ತದೆ.
ಈ ಉಪಶಮನದ ವಿಷಯದ ಮೇಲೆ ಮಾತಾಡಲು ಅನೇಕ ವಿಷಯಗಳಿವೆ. ಮುಖ್ಯ ಉದ್ದೇಶವೆಂದರೆ, ನಾವು ಅಪರಿಮಿತ ಮನಃಶಕ್ತಿಯ ಮೇಲೆ ಹೆಚ್ಚು ಅವಲಂಬಿಸಬೇಕು ಎಂಬುದಾಗಿದೆ. ರೋಗವನ್ನು ತಡೆಯುವ ನಿಯಮಗಳು: ಸ್ವಯಂ ನಿಯಂತ್ರಣ, ವ್ಯಾಯಾಮ, ಸರಿಯಾದ ಆಹಾರ ಸೇವನೆ, ಹೆಚ್ಚಿನ ಪ್ರಮಾಣದ ಹಣ್ಣಿನ ರಸಗಳನ್ನು ಸೇವಿಸುವುದು, ನಿಯತಕಾಲಿಕ ಉಪವಾಸ, ಮತ್ತು ಯಾವಾಗಲೂ ಅಂತರಾಳದಿಂದ ನಗುವುದು. ಆ ಮುಗುಳ್ನನಗೆಗಳು ಧ್ಯಾನದ ಮೂಲಕ ಬರುತ್ತವೆ. ಆಗ ನೀವು ದೇವರ ನಿತ್ಯಶಕ್ತಿಯನ್ನು ಕಂಡುಕೊಳ್ಳುತ್ತೀರಿ. ನೀವು ಪರಮಾತ್ಮನೊಂದಿಗೆ ಆನಂದಪರವಶರಾಗಿರುವಾಗ, ನೀವು ಪ್ರಜ್ಞಾಪೂರ್ವಕವಾಗಿ ಆ ದೇವರ ಉಪಶಮನಕಾರಕ ಸಾನಿಧ್ಯವನ್ನು ನಿಮ್ಮ ದೇಹಕ್ಕೆ ತರುವಿರಿ.
ಮನಃಶಕ್ತಿಯು ದೇವರ ವಿಫಲವಾಗದ ಶಕ್ತಿಯನ್ನು ಹೊಂದಿರುತ್ತದೆ; ಇದೇ ನಿಮ್ಮ ದೇಹಕ್ಕೆ ಬೇಕಾದ ಶಕ್ತಿ. ಆ ಶಕ್ತಿಯನ್ನು ತರಲು ಒಂದು ಮಾರ್ಗವಿದೆ. ಆ ಮಾರ್ಗವು ಧ್ಯಾನದ ಮೂಲಕ ದೇವರೊಂದಿಗೆ ಸಂಸರ್ಗ ಮಾಡುವುದು. ದೇವರೊಂದಿಗೆ ನಿಮ್ಮ ಸಂಸರ್ಗವು ಪರಿಪೂರ್ಣವಾಗಿದ್ದಾಗ ಉಪಶಮನವು ಶಾಶ್ವತವಾಗುತ್ತದೆ.
ದಿವ್ಯ ಉಪಶಮನ
ನಿರಂತರ ವಿಶ್ವಾಸ ಮತ್ತು ಎಡೆಬಿಡದ ಪ್ರಾರ್ಥನೆಯ ಮೂಲಕ ದೈವೀ ಶಕ್ತಿಯನ್ನು ಆವಾಹನೆ ಮಾಡಬಹುದು. ನೀವು ಸರಿಯಾದುದನ್ನು ತಿನ್ನಬೇಕು ಮತ್ತು ದೇಹಕ್ಕಾಗಿ ಅಗತ್ಯವಿರುವ ಇತರ ಎಲ್ಲಾ ಕಾರ್ಯಗಳನ್ನು ಮಾಡಬೇಕು, ಆದರೆ ನಿರಂತರವಾಗಿ ದೇವರಲ್ಲಿ ಪ್ರಾರ್ಥಿಸಿ: “ಪ್ರಭು, ನೀನು ನನ್ನನ್ನು ಗುಣಪಡಿಸಬಲ್ಲೆ, ಏಕೆಂದರೆ ನೀನು, ವೈದ್ಯರು ಔಷಧಿಗಳಿಂದ ತಲುಪಲಾಗದ ದೇಹದ ಜೀವಂತ ಪರಮಾಣುಗಳು ಮತ್ತು ಸೂಕ್ಷ್ಮ ಪರಿಸ್ಥಿತಿಗಳನ್ನು ನಿಯಂತ್ರಿಸುವೆ.” ಔಷಧಿ ಮತ್ತು ಉಪವಾಸಗಳಂತಹ ಬಾಹ್ಯ ಅಂಶಗಳು ಭೌತಿಕ ದೇಹದ ಮೇಲೆ ಕೆಲವೊಂದು ಪ್ರಯೋಜನಕಾರಿ ಪರಿಣಾಮವನ್ನು ಹೊಂದಿರುತ್ತವೆ, ಆದರೆ ಅವುಗಳು ಜೀವಕೋಶಗಳನ್ನು ಪೋಷಿಸುವ ಆಂತರಿಕ ಶಕ್ತಿಯ ಮೇಲೆ ಪರಿಣಾಮ ಬೀರುವುದಿಲ್ಲ. ನೀವು ದೇವರಿಂದ ಆತನ ಉಪಶಮನಕಾರಕ ಶಕ್ತಿಯನ್ನು ಪಡೆದುಕೊಂಡಾಗ ಮಾತ್ರ ಪ್ರಾಣಶಕ್ತಿಯು ದೇಹದ ಜೀವಕೋಶಗಳ ಪರಮಾಣುಗಳಿಗೆ ಒಯ್ಯಲ್ಪಡುತ್ತದೆ ಹಾಗೂ ಅದು ತಕ್ಷಣದ ಉಪಶಮನವನ್ನುಂಟುಮಾಡುತ್ತದೆ. ಆದ್ದರಿಂದ ನೀವು ದೇವರ ಮೇಲೆ ಹೆಚ್ಚು ಅವಲಂಬಿಸುವುದನ್ನು ಬಯಸುವುದಿಲ್ಲವೇ?
ಆದರೆ ಭೌತಿಕ ವಿಧಾನಗಳಿಂದ ಆಧ್ಯಾತ್ಮಿಕ ವಿಧಾನಗಳಿಗೆ ಬದಲಾಯಿಸುವ ಪ್ರಯತ್ನವು ಹಂತಹಂತವಾಗಿರಬೇಕು. ಅತಿಯಾದ ಆಹಾರ ಸೇವನೆಯ ಅಭ್ಯಾಸವಿರುವ ವ್ಯಕ್ತಿಯು ಅನಾರೋಗ್ಯಕ್ಕೆ ತುತ್ತಾದಾಗ, ಮಾನಸಿಕ ಉಪಶಮನವನ್ನು ಪಡೆಯಲು ಪ್ರಯತ್ನಿಸುವ ಉದ್ದೇಶದಿಂದ ದಿಢೀರ್ ಉಪವಾಸವನ್ನು ಪ್ರಾರಂಭಿಸಿದಾಗ, ಯಶಸ್ಸು ದೊರೆಯದಿದ್ದರೆ ಅವನು ಧೈರ್ಯಗುಂದಬಹುದು. ಒಬ್ಬರ ಆಲೋಚನಾ ವಿಧಾನವನ್ನು ಆಹಾರದ ಮೇಲಿನ ಅವಲಂಬನೆಯಿಂದ ಮನಸ್ಸಿನ ಮೇಲಿನ ಅವಲಂಬನೆಗೆ ಬದಲಾಯಿಸಲು ಸಮಯ ಬೇಕಾಗುತ್ತದೆ. ದೇವರ ಗುಣಪಡಿಸುವ ಶಕ್ತಿಗೆ ಸ್ಪಂದಿಸಲು ಸಾಧ್ಯವಾಗಬೇಕಾದರೆ, ಮನಸ್ಸು ದೈವೀ ನೆರವನ್ನು ನಂಬಲು ತರಬೇತುಗೊಳ್ಳಬೇಕಾಗುತ್ತದೆ.
ಆ ಮಹಾನ್ ಶಕ್ತಿಯಿಂದಲೇ (ಭಗವಂತನಿಂದ) ಎಲ್ಲಾ ಪರಮಾಣು ಶಕ್ತಿಯು ಭೌತ ಬ್ರಹ್ಮಾಂಡದ ಪ್ರತಿಯೊಂದು ಜೀವಕೋಶದಲ್ಲಿ ಮಿಡಿಯುತ್ತಿದೆ, ಅಭಿವ್ಯಕ್ತವಾಗುತ್ತಿದೆ ಮತ್ತು ಪೋಷಿಸುತ್ತಿದೆ. ಚಲನಚಿತ್ರಗಳು, ಸಿನೆಮಾ ಮಂದಿರದ ಪ್ರೊಜೆಕ್ಷನ್ ಬೂತ್‌ನಿಂದ ಬರುವ ಬೆಳಕಿನ ಕಿರಣಗಳಿಂದ ನಡೆಯುವಂತೆ, ನಾವೆಲ್ಲರೂ ಬ್ರಹ್ಮಾಂಡೀಯ ಕಿರಣಗಳಿಂದ (ಭಗವಂತನಿಂದ), ಅಂದರೆ ಚಿರಂತನತೆಯ ಪ್ರೊಜೆಕ್ಷನ್ ಬೂತ್‌ನಿಂದ ವರ್ಷಿಸುತ್ತಿರುವ ದಿವ್ಯ ಪ್ರಕಾಶದಿಂದ ಪೋಷಿಸಲ್ಪಡುತ್ತಿದ್ದೇವೆ. ನೀವು ಆ ಕಿರಣಕ್ಕಾಗಿ ಅರಸಿ, ಕಂಡುಕೊಂಡಾಗ, ನಿಮ್ಮ ದೇಹದ ಅಸ್ವಸ್ಥ ಜೀವಕೋಶಗಳಲ್ಲಿ ಇರುವ ಪರಮಾಣುಗಳು, ಎಲೆಕ್ಟ್ರಾನುಗಳು ಮತ್ತು ಲೈಫ್‌ಟ್ರಾನ್ ಗಳನ್ನು ಪುನರ್ನಿರ್ಮಿಸುವ ಅದರ ಅಸೀಮ ಶಕ್ತಿಯನ್ನು ಕಾಣುವಿರಿ. ಮಹಾನ್ ವೈದ್ಯನೊಂದಿಗೆ ಸಂಸರ್ಗ ಮಾಡಿ!
ಉಪಶಮನಕ್ಕಾಗಿ ದೃಢೀಕರಣಗಳು
ದೃಢೀಕರಣದ ಸಿದ್ಧಾಂತ ಮತ್ತು ಸೂಚನೆಗಳು
ಭಗವಂತನ ಪರಿಪೂರ್ಣ ಸ್ವಾಸ್ಥ್ಯವು ನನ್ನ ದೇಹದ ಕಾಯಿಲೆಯ ಕತ್ತಲ ಮೂಲೆಗಳನ್ನು ಆವರಿಸುತ್ತದೆ. ನನ್ನ ಎಲ್ಲಾ ಜೀವಕೋಶಗಳಲ್ಲೂ ಅವನ ಉಪಶಮನಕಾರಕ ಬೆಳಕು ಬೆಳಗುತ್ತಿದೆ. ಅವು ಸಂಪೂರ್ಣ ಸ್ವಸ್ಥವಾಗಿವೆ ಏಕೆಂದರೆ ಅವುಗಳಲ್ಲಿ ಆತನ ಪರಿಪೂರ್ಣತೆಯಿದೆ.
ಪರಮಾತ್ಮನ ಉಪಶಮನಕಾರಕ ಶಕ್ತಿಯು ನನ್ನ ಶರೀರದ ಎಲ್ಲ ಜೀವಕೋಶಗಳಲ್ಲಿ ಹರಿಯುತ್ತಿದೆ. ನಾನು ಆ ಒಂದೇ ಸಾರ್ವತ್ರಿಕ ಭಗವತ್-ವಸ್ತುವಿನಿಂದ ಮಾಡಲ್ಪಟ್ಟಿದ್ದೇನೆ.
ನಿನ್ನ ಪರಿಪೂರ್ಣ ಬೆಳಕು ನನ್ನ ದೇಹದ ಎಲ್ಲ ಅಂಗಾಂಗಗಳಲ್ಲಿ ಸರ್ವವ್ಯಾಪಿಯಾಗಿದೆ. ಎಲ್ಲೆಲ್ಲಿ ಈ ಉಪಶಮನಕಾರಕ ಬೆಳಕು ಪ್ರಕಾಶಿಸುತ್ತಿದೆಯೋ, ಅಲ್ಲೆಲ್ಲ ಪರಿಪೂರ್ಣತೆಯಿದೆ. ನಾನು ಆರೋಗ್ಯವಾಗಿದ್ದೇನೆ, ಏಕೆಂದರೆ ನನ್ನೊಳಗೆ ಪರಿಪೂರ್ಣತೆಯಿದೆ.
ನಾನು ನಿರ್ವಿಕಾರ, ನಾನು ಅನಂತ. ನಾನು ಮುರಿಯುವ ಮೂಳೆಗಳು ಮತ್ತು ಅಳಿಯುವ ಶರೀರವಿರುವ ಒಬ್ಬ ಅಲ್ಪ ಮರ್ತ್ಯನಲ್ಲ. ನಾನು ಸಾವಿಲ್ಲದ, ಬದಲಾವಣೆಯಿಲ್ಲದ ಅನಂತನು.
ಹೆಚ್ಚಿನ ಅನ್ವೇಷಣೆ
- ಸೈಂಟಿಫಿಕ್ ಹೀಲಿಂಗ್ ಅಫರ್ಮೇಷನ್ಸ್ ಶ್ರೀ ಶ್ರೀ ಪರಮಹಂಸ ಯೋಗಾನಂದರಿಂದ
- "ದ ಫಿಸಿಕಲ್ ಅಂಡ್ ಸ್ಪಿರಿಚ್ಯುವಲ್ ರಿವಾರ್ಡ್ಸ್ ಆಫ್ ಫಾಸ್ಟಿಂಗ್," ಮ್ಯಾನ್ಸ್ ಇಟರ್ನಲ್ ಕ್ವೆಸ್ಟ್ ಶ್ರೀ ಶ್ರೀ ಪರಮಹಂಸ ಯೋಗಾನಂದರಿಂದ
- "ಮೈಂಡ್ ಪವರ್ ಕ್ಯಾನ್ ಹೆಲ್ಪ್ ಯು ಲೂಸ್ ಆರ್ ಗೇಯ್ನ್ ವೇಯ್ಟ್," ದ ಡಿವೈನ್ ರೋಮಾನ್ಸ್ ಶ್ರೀ ಶ್ರೀ ಪರಮಹಂಸ ಯೋಗಾನಂದರಿಂದ
- "ಹೌ ಟು ವರ್ಕ್ ವಿದೌಟ್ ಫಟೀಗ್," ದ ಡಿವೈನ್ ರೋಮಾನ್ಸ್ ಶ್ರೀ ಶ್ರೀ ಪರಮಹಂಸ ಯೋಗಾನಂದರಿಂದ
- "ಹೀಲಿಂಗ್ ದ ಸಿಕ್," ದ ಸೆಕೆಂಡ್ ಕಮಿಂಗ್ ಆಫ್ ಕ್ರೈಸ್ಟ್: ದ ರಿಸರೆಕ್ಷನ್ ಆಫ್ ದ ಕ್ರೈಸ್ಟ್ ವಿದಿನ್ ಯು ನಲ್ಲಿ ಪ್ರವಚನ 25 ಶ್ರೀ ಶ್ರೀ ಪರಮಹಂಸ ಯೋಗಾನಂದರಿಂದ
- "ದ ಮೈಂಡ್: ರಿಪೊಸಿಟರಿ ಆಫ್ ಇನ್ಫೈನೈಟ್ ಪವರ್," ದ ಡಿವೈನ್ ರೋಮಾನ್ಸ್ ಶ್ರೀ ಶ್ರೀ ಪರಮಹಂಸ ಯೋಗಾನಂದರಿಂದ
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಜಾಗತಿಕ ಪ್ರಾರ್ಥನಾ ಸಮೂಹದಿಂದ ಉಪಶಮನದ ಪ್ರಾರ್ಥನೆಗಾಗಿ ವಿನಂತಿಸಿ.