ಶ್ರೀ ಶ್ರಿ ಪರಮಹಂಸ ಯೋಗಾನಂದರ ಬರಹಗಳಿಂದ ಆಯ್ದ ಭಾಗಗಳು
ನಿಜವಾದ ಯಶಸ್ಸು
ಯಶಸ್ಸು ಒಂದು ಸರಳವಾದ ವಿಷಯವಲ್ಲ; ಅದನ್ನು ನಿಮ್ಮಲ್ಲಿರುವ ಧನದಿಂದ ಅಥವಾ ಪ್ರಾಪಂಚಿಕ ಸಿರಿ ಸಂಪತ್ತಿನಿಂದ ಮಾತ್ರ ಅಳೆಯಲಾಗದು. ಯಶಸ್ಸಿನ ಅರ್ಥ ಅದಕ್ಕಿಂತ ಎಷ್ಟೋ ಆಳವಾದುದು. ಎಲ್ಲಾ ಪರಿಸ್ಥಿತಿಗಳಲ್ಲಿ ನಿಮ್ಮ ಆಂತರಿಕ ಶಾಂತಿ ಮತ್ತು ಮನೋನಿಗ್ರಹಗಳು ನಿಮ್ಮನ್ನು ಎಷ್ಟರ ಮಟ್ಟಿಗೆ ಸಂತೋಷದಿಂದಿರುವಂತೆ ಮಾಡುತ್ತವೆ ಎಂಬುದರಿಂದ ಮಾತ್ರ ಅದನ್ನು ಅಳೆಯಬಹುದು. ಅದೇ ನಿಜವಾದ ಯಶಸ್ಸು.
ಯಶಸ್ಸು ಹಾಗೂ ಸಂತೋಷದ ರಹಸ್ಯ ನಿಮ್ಮೊಳಗೇ ಅಡಗಿದೆ. ನಿಮ್ಮ ಬಾಹ್ಯ ಜೀವನದಲ್ಲಿ ಯಶಸ್ವಿಯಾಗಿದ್ದು ಏಳಿಗೆಯನ್ನು ಕಂಡಿದ್ದರೂ, ಆಂತರಿಕವಾಗಿ ನೀವು ಸಂತೋಷವಾಗಿಲ್ಲವೆಂದಾದರೆ ಅದನ್ನು ನಿಜವಾದ ಯಶಸ್ಸು ಎಂದು ಹೇಳಲಾಗುವುದಿಲ್ಲ. ಒಬ್ಬ ಲಕ್ಷಾಧಿಪತಿಯಾಗಿದ್ದರೂ ಸಂತೋಷವಾಗಿಲ್ಲವೆಂದರೆ ಆತ ಯಶಸ್ವಿಯಾಗಿಲ್ಲವೆಂದೇ ಹೇಳಬಹುದು. ನಿಮ್ಮಲ್ಲಿ ಲಕ್ಷೋಪಲಕ್ಷ ಹಣವಿದ್ದರೂ, ನೀವು ಯಶಸ್ವಿಯಲ್ಲ ಎಂಬುದು ನನ್ನ ಮಾತಿನ ಅರ್ಥವಲ್ಲ. ನೀವು ಶ್ರೀಮಂತರಾಗಿರಲಿ ಅಥವಾ ಬಡವರಾಗಿರಲಿ, ನಿಮ್ಮ ಜೀವನದಲ್ಲಿ ನೀವು ಸಂತೋಷವನ್ನು ಹೊಂದಿದ್ದರೆ, ನೀವು ನಿಜವಾಗಿಯೂ ಯಶಸ್ವಿಗಳು.
ಕ್ರಿಯಾಶೀಲ ಇಚ್ಛೆಯನ್ನು ಉಪಯೋಗಿಸುವುದು
ಸಾಧ್ಯವಿಲ್ಲವೆಂದು ನೀವು ಯೋಚಿಸದ ಹೊರತು ಯಾವುದೂ ಅಸಾಧ್ಯವಲ್ಲ.
ಮರ್ತ್ಯರಾಗಿ ನೀವು ಸೀಮಿತರು, ಆದರೆ ಭಗವಂತನ ಮಗುವಾಗಿ ನೀವು ಅಸೀಮರು….ನಿಮ್ಮ ಗಮನವನ್ನು ಭಗವಂತನ ಮೇಲೆ ಏಕಾಗ್ರಗೊಳಿಸಿ. ಆಗ ನೀವು ಬಯಸಿದ ಎಲ್ಲಾ ಶಕ್ತಿಯೂ ಯಾವುದೇ ರೀತಿಯಲ್ಲಿ ಬಳಸಲು ನಿಮ್ಮದಾಗುವುದು.
ಇಚ್ಛಾಶಕ್ತಿಯು ನಿಮ್ಮಲ್ಲಿರುವ ದೇವರ ಪ್ರತಿರೂಪದ ಸಾಧನ. ಇಚ್ಛಾಶಕ್ತಿಯಲ್ಲಿ ಎಲ್ಲಾ ನೈಸರ್ಗಿಕ ಶಕ್ತಿಗಳನ್ನು ನಿಯಂತ್ರಿಸುವ ಅವನ ಅಸೀಮ ಶಕ್ತಿಯಿದೆ. ನೀವು ದೇವರ ಪಡಿಯಚ್ಚಾಗಿರುವುದರಿಂದ, ನಿಮಗೆ ಬೇಕಾದುದೆಲ್ಲವೂ ಆಗುವಂತೆ ಮಾಡುವ ಶಕ್ತಿ ನಿಮ್ಮದಾಗುತ್ತದೆ.
ವೈಫಲ್ಯತೆಯನ್ನು ರಚನಾತ್ಮಕವಾಗಿ ನಿಭಾಯಿಸುವುದು
ವೈಫಲ್ಯತೆಯ ಋತುವು ಯಶಸ್ಸಿನ ಬೀಜಗಳನ್ನು ಬಿತ್ತುವುದಕ್ಕೆ ಅತಿ ಪ್ರಶಸ್ತ ಕಾಲ. ಪರಿಸ್ಥಿತಿಗಳೆಂಬ ದೊಣ್ಣೆಯ ಹೊಡೆತವು ನಿಮ್ಮನ್ನು ಘಾಸಿಗೊಳಿಸಬಹುದು, ಆದರೆ ತಲೆ ಎತ್ತಿ ನಡೆಯಿರಿ. ನೀವು ಎಷ್ಟೇ ಬಾರಿ ಸೋತರೂ ಸದಾ ಮತ್ತೊಮ್ಮೆ ಪ್ರಯತ್ನಿಸಿ. ಇನ್ನು ಹೋರಾಡಲು ಸಾಧ್ಯವಿಲ್ಲ ಎಂದೆನಿಸಿದ ಮೇಲೂ ಅಥವಾ ನಿಮಗೆ ಆಗುವುದನ್ನೆಲ್ಲಾ ಮಾಡಿಯಾಯಿತು ಎಂದು ಯೋಚಿಸಿದ ಮೇಲೂ ಅಥವಾ ಗೆಲುವು ನಿಮ್ಮ ಪ್ರಯತ್ನಗಳ ಮುಡಿಗೇರುವವರೆಗೆ ಹೋರಾಡಿ.
ಯಶಸ್ಸಿನ ಮನಃಶಾಸ್ತ್ರವನ್ನು ಹೇಗೆ ಬಳಸಬೇಕೆಂಬುದನ್ನು ಕಲಿತುಕೊಳ್ಳಿ. ಕೆಲವರು ಸಲಹೆ ನೀಡುತ್ತಾರೆ, “ವೈಫಲ್ಯತೆಯ ಬಗ್ಗೆ ಮಾತನಾಡಲೇ ಬೇಡ.” ಆದರೆ ಅದೊಂದೇ ಪ್ರಯೋಜನಕ್ಕೆ ಬರುವುದಿಲ್ಲ. ಮೊದಲು ನಿಮ್ಮ ಸೋಲನ್ನು, ಅದರ ಕಾರಣಗಳನ್ನು ವಿಶ್ಲೇಷಿಸಿಕೊಳ್ಳಿ, ಅದರ ಅನುಭವದಿಂದ ಲಾಭ ಪಡೆದುಕೊಳ್ಳಿ. ನಂತರ ಅದರ ಬಗ್ಗೆ ಯೋಚಿಸುವುದನ್ನೇ ಬಿಟ್ಟುಬಿಡಿ. ಹಲವಾರು ಬಾರಿ ಸೋತರೂ, ಅಂತರಂಗದಲ್ಲಿ ಸೋಲೊಪ್ಪಿಕೊಳ್ಳದೆ ಮತ್ತೆ ಪ್ರಯತ್ನಿಸುವವನೇ ನಿಜವಾದ ಜಯಶಾಲಿ.
ಬದುಕಿನಲ್ಲಿ ಕತ್ತಲಾವರಿಸಬಹುದು, ಕಷ್ಟಗಳು ಬರಬಹುದು, ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳದೆ ಅವು ತಪ್ಪಿ ಹೋಗಬಹುದು, ಆದರೆ ನಿಮ್ಮೊಳಗೆ ನೀವು, “ನನ್ನ ಕಥೆ ಮುಗಿಯಿತು. ದೇವರು ನನ್ನ ಕೈ ಬಿಟ್ಟ,” ಎಂದು ಎಂದಿಗೂ ಅಂದುಕೊಳ್ಳಬೇಡಿ. ಅಂತಹ ವ್ಯಕ್ತಿಗೆ ಯಾರೇನು ಮಾಡಲು ಸಾಧ್ಯ? ನಿಮ್ಮ ಕುಟುಂಬ ನಿಮ್ಮನ್ನು ತೊರೆಯಬಹುದು; ಅದೃಷ್ಟ ಕೈಬಿಟ್ಟಂತೆ ಕಾಣಬಹುದು; ಮನುಷ್ಯ ಮತ್ತು ಪ್ರಕೃತಿಯ ಎಲ್ಲಾ ಶಕ್ತಿಗಳು ನಿಮ್ಮ ವಿರುದ್ಧ ವ್ಯೂಹ ರಚಿಸಬಹುದು; ಆದರೆ ನಿಮ್ಮೊಳಗಿರುವ ದಿವ್ಯ ಕರ್ತೃತ್ವ ಶಕ್ತಿಯ ಗುಣದಿಂದ, ನಿಮ್ಮ ಹಿಂದಿನ ದುರಾಚಾರಗಳಿಂದ ಸೃಷ್ಟಿಯಾದ ವಿಧಿಯ ಪ್ರತಿಯೊಂದು ಆಕ್ರಮಣವನ್ನು ಹಿಮ್ಮೆಟ್ಟಿಸಿ, ಜಯಶಾಲಿಯಾಗಿ ಸ್ವರ್ಗದೊಳಕ್ಕೆ ಕಾಲಿಡಬಹುದು.
ನೀವು ಎಷ್ಟೇ ಬಾರಿ ವಿಫಲರಾದರೂ ಪ್ರಯತ್ನಿಸುತ್ತಲೇ ಇರಿ. ಏನೇ ಆದರೂ, ನೀವು, “ಭೂಮಿಯೇ ನುಚ್ಚುನೂರಾಗಬಹುದು ಆದರೆ ನನಗಾಗುವುದನ್ನೆಲ್ಲಾ ಮಾಡುತ್ತಲೇ ಇರುತ್ತೇನೆ,” ಎಂದು ದೃಢವಾಗಿ ನಿಶ್ಚಯಿಸಿದ್ದರೆ, ನೀವು ಕ್ರಿಯಾತ್ಮಕ ಇಚ್ಛಾಶಕ್ತಿಯನ್ನು ಉಪಯೋಗಿಸುತ್ತಿರುವಿರಿ ಎಂದರ್ಥ, ಆಗ ನೀವು ಗೆಲ್ಲುವಿರಿ. ಆ ಕ್ರಿಯಾತ್ಮಕ ಇಚ್ಛಾಶಕ್ತಿಯೇ ಒಬ್ಬನನ್ನು ಸಿರಿವಂತನನ್ನಾಗಿಯೂ, ಮತ್ತೊಬ್ಬನನ್ನು ಶಕ್ತಿಶಾಲಿಯನ್ನಾಗಿಯೂ, ಮಗದೊಬ್ಬನನ್ನು ಸಂತನನ್ನಾಗಿಯೂ ಮಾಡುತ್ತದೆ.
ಏಕಾಗ್ರಚಿತ್ತತೆ — ಯಶಸ್ಸಿನ ಗುಟ್ಟು
ಜೀವನದಲ್ಲಿನ ಹಲವಾರು ಸೋಲುಗಳಿಗೆ ಮೂಲ ಕಾರಣ ಏಕಾಗ್ರತೆಯಿಲ್ಲದಿರುವುದು. ಗಮನವು ಒಂದು ಸರ್ಚ್ ಲೈಟ್ ಇದ್ದಂತೆ; ಅದರ ಕಿರಣಗಳು ವಿಶಾಲವಾದ ಪ್ರದೇಶದ ಮೇಲೆ ಬಿದ್ದಾಗ, ಒಂದು ನಿರ್ದಿಷ್ಟ ವಸ್ತುವಿನ ಮೇಲೆ ಅದರ ಕೇಂದ್ರೀಕರಿಸುವ ಶಕ್ತಿಯು ಬಲಹೀನವಾಗುತ್ತದೆ, ಆದರೆ ಏಕಕಾಲಕ್ಕೆ ಒಂದೇ ವಸ್ತುವಿನ ಮೇಲೆ ಕೇಂದ್ರೀಕರಿಸಿದಾಗ ಅದು ಬಲಶಾಲಿಯಾಗುತ್ತದೆ. ಮಹಾನ್ ವ್ಯಕ್ತಿಗಳೆಲ್ಲ ಏಕಾಗ್ರಚಿತ್ತವುಳ್ಳವರಾಗಿರುತ್ತಾರೆ. ಅವರು ತಮ್ಮ ಇಡೀ ಮನಸ್ಸನ್ನು ಒಂದು ಸಮಯಕ್ಕೆ ಒಂದೇ ವಿಷಯದ ಮೇಲೆ ಇರಿಸುತ್ತಾರೆ.
ನಮಗೆ ಏಕಾಗ್ರತೆಯ ವೈಜ್ಞಾನಿಕ ವಿಧಾನ ತಿಳಿದಿರಬೇಕು (ಯೋಗದಾ ಸತ್ಸಂಗ ಪಾಠಮಾಲಿಕೆಯಲ್ಲಿ ಬೋಧಿಸಲಾಗುತ್ತದೆ) ಅದರಿಂದ ನಾವು ನಮ್ಮ ಗಮನವನ್ನು ಚಂಚಲಗೊಳಿಸುವ ವಸ್ತುಗಳಿಂದ ಪ್ರತ್ಯೇಕಿಸಿ ಒಂದು ಸಮಯಕ್ಕೆ ಒಂದೇ ವಸ್ತುವಿನ ಮೇಲಿರಿಸಬಹುದು. ಏಕಾಗ್ರತೆಯ ಶಕ್ತಿಯಿಂದ, ಮಾನವನು ತನಗೆ ಬೇಕಾದುದನ್ನು ಸಾಧಿಸಲು ಮನಸ್ಸಿನ ಅಗಣಿತ ಶಕ್ತಿಯನ್ನು ಉಪಯೋಗಿಸಬಹುದು, ಅಲ್ಲದೆ ವೈಫಲ್ಯವು ಪ್ರವೇಶಿಸಬಹುದಾದ ಎಲ್ಲಾ ದ್ವಾರಗಳನ್ನು ಅವನು ಎಚ್ಚರದಿಂದ ಕಾಯಬಹುದು.
ನಾವು ನಮ್ಮ ಸಂಭಾವ್ಯ ತೊಂದರೆಗಳು ಮತ್ತು ಕರ್ತವ್ಯಗಳನ್ನು ಏಕಾಗ್ರತಾ ಶಕ್ತಿಯಿಂದ ಎದುರಿಸಬೇಕು ಮತ್ತು ಅವುಗಳನ್ನು ಯಥೋಚಿತವಾಗಿ ಕಾರ್ಯಗತಗೊಳಿಸಬೇಕು. ಇದು ನಮ್ಮ ಜೀವನದ ಮೂಲಮಂತ್ರವಾಗಬೇಕು.
ಹೆಚ್ಚಿನ ಜನರು ಎಲ್ಲ ಕೆಲಸಗಳನ್ನು ಅರೆಮನಸ್ಸಿನಿಂದ ಮಾಡುತ್ತಾರೆ. ಅವರು ತಮ್ಮ ಗಮನದ ಸುಮಾರು ಹತ್ತನೇ ಒಂದರಷ್ಟು ಭಾಗವನ್ನು ಮಾತ್ರ ಉಪಯೋಗಿಸುತ್ತಾರೆ. ಆದ್ದರಿಂದಲೇ ಅವರಲ್ಲಿ ಜಯಶಾಲಿಯಾಗುವ ಶಕ್ತಿಯಿರುವುದಿಲ್ಲ….ಎಲ್ಲವನ್ನೂ ಗಮನ ಶಕ್ತಿ ಬಳಸಿ ಮಾಡಿ. ಆ ಶಕ್ತಿಯ ಸಂಪೂರ್ಣ ಸಾಮರ್ಥ್ಯವನ್ನು ಧ್ಯಾನದಿಂದ ಪಡೆಯಬಹುದು. ಭಗವಂತನ ಆ ಕೇಂದ್ರೀಕರಿಸುವ ಶಕ್ತಿಯನ್ನು ನೀವು ಉಪಯೋಗಿಸಿದಾಗ, ಅದನ್ನು ಯಾವುದರ ಮೇಲಿಟ್ಟರೂ ಜಯಶೀಲರಾಗುವಿರಿ.
ಸೃಜನಶೀಲತೆ
ಸರ್ವತೋಮುಖ ಯಶಸ್ಸನ್ನು ಸೃಷ್ಟಿಸುವುದು
ಶ್ರೇಷ್ಠ ಬೋಧಕರು ನಿಮ್ಮನ್ನು ಎಂದೂ ನಿರ್ಲಕ್ಷ್ಯದಿಂದಿರಿ ಎಂದು ಹೇಳುವುದಿಲ್ಲ; ಅವರು ನಿಮಗೆ ಸಮತೋಲನದಿಂದಿರಿ ಎಂದು ಹೇಳುತ್ತಾರೆ. ನಿಮ್ಮ ಶರೀರದ ಪೋಷಣೆಗಾಗಿ ಮತ್ತು ಬಟ್ಟೆ ಬರೆಗಾಗಿ ನೀವು ದುಡಿಯಲೇಬೇಕಾಗುತ್ತದೆ, ಅದರ ಬಗ್ಗೆ ಸಂದೇಹವಿಲ್ಲ. ಆದರೆ ನೀವು ಒಂದು ಕರ್ತವ್ಯವು ಇನ್ನೊಂದು ಕರ್ತವ್ಯವನ್ನು ವಿರೋಧಿಸಲು ಬಿಟ್ಟರೆ ಅದು ನಿಜವಾದ ಕರ್ತವ್ಯವಾಗುವುದಿಲ್ಲ. ಸಾವಿರಾರು ಉದ್ಯಮಿಗಳು ಸಂಪತ್ತನ್ನು ಸಂಗ್ರಹಿಸುವುದರಲ್ಲಿ ಎಷ್ಟು ನಿರತರಾಗಿರುವರೆಂದರೆ, ಅವರು ಬಹಳಷ್ಟು ಹೃದ್ರೋಗವನ್ನೂ ಸೃಷ್ಟಿಸುತ್ತಿದ್ದಾರೆಂಬುದನ್ನು ಮರೆತುಬಿಡುತ್ತಾರೆ! ಸಿರಿತನಕ್ಕಾಗಿ ಮಾಡಬೇಕಾದ ಕರ್ತವ್ಯವು ನಿಮ್ಮ ಆರೋಗ್ಯದೆಡೆಗಿನ ಕರ್ತವ್ಯವನ್ನು ಮರೆಸುವುದೆಂದಾದರೆ ಅದು ಕರ್ತವ್ಯವಲ್ಲ. ನಾವು ಎಲ್ಲ ರೀತಿಯಲ್ಲಿ ಸರಿಸಮನಾಗಿ ಅಭಿವೃದ್ಧಿ ಹೊಂದಬೇಕು. ಅದ್ಭುತ ಶರೀರವನ್ನು ಬೆಳೆಸಿಕೊಳ್ಳುವುದಕ್ಕೆ ವಿಶೇಷ ಗಮನಕೊಟ್ಟು ಅದರಲ್ಲಿರುವ ಮೆದುಳು ಕಡಲೆಕಾಯಿ ಗಾತ್ರದ್ದಾದರೆ ಯಾವ ಪ್ರಯೋಜನವೂ ಇಲ್ಲ. ಮನಸ್ಸೂ ಬೆಳೆಯಬೇಕು. ಮತ್ತೆ ನಿಮಗೆ ಅತ್ಯುತ್ತಮ ಆರೋಗ್ಯ, ಸಂಪತ್ತು ಮತ್ತು ಬುದ್ಧಿಯಿದೆ, ಆದರೆ ನೀವು ಸುಖವಾಗಿಲ್ಲ ಎನ್ನುವುದಾದರೆ, ನೀವಿನ್ನೂ ನಿಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸಿಲ್ಲ ಎಂದರ್ಥ. ನೀವು ನಿಜವಾಗಿಯೂ, “ನಾನು ಸಂತೋಷವಾಗಿದ್ದೇನೆ, ನನ್ನ ಸಂತೋಷವನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ,” ಎಂದು ಹೇಳಿದಾಗ ನೀವೊಬ್ಬ ರಾಜ ಇದ್ದಂತೆ — ನೀವು ನಿಮ್ಮಲ್ಲಿ ಭಗವಂತನ ಪ್ರತಿರೂಪವನ್ನು ಕಂಡುಕೊಂಡಿರುವಿರಿ.
ಯಶಸ್ಸಿಗೆ ಇನ್ನೊಂದು ಅರ್ಹತೆಯೆಂದರೆ ನಮಗೋಸ್ಕರ ಮಾತ್ರ ಸಮರಸದ ಹಾಗೂ ಅನುಕೂಲಕರ ಫಲಿತಾಂಶಗಳನ್ನು ತಂದುಕೊಳ್ಳುವುದಲ್ಲದೇ, ಆ ಲಾಭಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು.
ಜೀವನವು ಮುಖ್ಯವಾಗಿ ಸೇವೆಯಿಂದ ಕೂಡಿರಬೇಕು. ಆ ಆದರ್ಶವಿಲ್ಲದಿದ್ದರೆ ಭಗವಂತನು ನಿಮಗೆ ಕೊಟ್ಟ ಬುದ್ಧಿಶಕ್ತಿಯು ತನ್ನ ಗುರಿಯನ್ನು ತಲುಪುವುದಿಲ್ಲ. ಸೇವೆಯಲ್ಲಿ ತೊಡಗಿಕೊಂಡು ನಿಮ್ಮ ಅಲ್ಪವ್ಯಕ್ತಿತ್ವವನ್ನು ಮರೆತಾಗ, ಪರಮಾತ್ಮನ ಮಹಾನ್ ಆತ್ಮದ ಅನುಭವ ನಿಮಗಾಗುತ್ತದೆ. ಸೂರ್ಯನ ಜೀವಾಧಾರಕ ಕಿರಣಗಳು ಎಲ್ಲವನ್ನೂ ಪೋಷಿಸುವಂತೆ, ನೀವು ಬಡವರ ಮತ್ತು ಅನಾಥರ ಹೃದಯಗಳಲ್ಲಿ ಭರವಸೆಯ ಕಿರಣಗಳನ್ನು ಪಸರಿಸಬೇಕು, ಹತಾಶರಾದವರ ಹೃದಯಗಳಲ್ಲಿ ಧೈರ್ಯವನ್ನು ಬೆಳಗಿಸಬೇಕು, ಅಂತೆಯೇ ತಾವು ವಿಫಲರು ಎಂದು ತಿಳಿದವರ ಹೃದಯಗಳಲ್ಲಿ ಹೊಸಶಕ್ತಿಯ ಜ್ಯೋತಿಯನ್ನು ಹೊತ್ತಿಸಬೇಕು. ಜೀವನವು, ಕರ್ತವ್ಯದ ಆನಂದದಾಯಕ ಹೋರಾಟವೆಂದೂ ಮತ್ತು ಅದೇ ಕಾಲಕ್ಕೆ, ಅದೊಂದು ಹಾದುಹೋಗುವ ಸ್ವಪ್ನವೆಂದೂ ನೀವು ಅರಿತಾಗ ಹಾಗೂ ಇತರರಿಗೆ ದಯೆ ಮತ್ತು ಶಾಂತಿಯನ್ನು ನೀಡಿ, ಅವರನ್ನು ಸುಖಿಗಳನ್ನಾಗಿ ಮಾಡುವ ಆನಂದದಿಂದ ನೀವು ತುಂಬಿ ತುಳುಕುತ್ತಿರುವಾಗ, ಭಗವಂತನ ದೃಷ್ಟಿಯಲ್ಲಿ ನಿಮ್ಮದೊಂದು ಯಶಸ್ವೀ ಜೀವನ.
ಸಮೃದ್ಧಿ ಮತ್ತು ಶ್ರೀಮಂತಿಕೆ
ಕೇವಲ ತಮ್ಮ ಅಭ್ಯುದಯವನ್ನು ಮಾತ್ರ ಅರಸುವವರು ಕೊನೆಯಲ್ಲಿ ಬಡವರಾಗೇ ಆಗುತ್ತಾರೆ, ಅಥವಾ ಮಾನಸಿಕ ಅಸಾಮರಸ್ಯದಿಂದ ಬಳಲುತ್ತಾರೆ; ಆದರೆ ಇಡೀ ಜಗತ್ತೇ ತಮ್ಮದೆಂದು ಭಾವಿಸುವವರು, ನಿಜವಾದ ಕಳಕಳಿಯಿಂದ ಸಮೂಹದ ಅಥವಾ ಜಗತ್ತಿನ ಅಭ್ಯುದಯಕ್ಕಾಗಿ ಕೆಲಸ ಮಾಡುವವರು….ನ್ಯಾಯಸಮ್ಮತವಾದ ವೈಯಕ್ತಿಕ ಅಭ್ಯುದಯವನ್ನು ಕಂಡುಕೊಳ್ಳುತ್ತಾರೆ. ಇದೊಂದು ಖಚಿತ ಮತ್ತು ರಹಸ್ಯ ನಿಯಮ.
ಪ್ರತಿದಿನ ಇನ್ನೊಬ್ಬರಿಗೆ ನೆರವಾಗಲು, ಅದು ಪುಡಿಗಾಸಿನದೇ ಆಗಿದ್ದರೂ ಸಹ ಒಳ್ಳೆಯದನ್ನು ಮಾಡಿ. ನಿಮಗೆ ಭಗವಂತನನ್ನು ಪ್ರೀತಿಸಬೇಕೆಂದಿದ್ದರೆ ನೀವು ಜನರನ್ನು ಪ್ರೀತಿಸಲೇಬೇಕು. ಅವರು ಅವನ ಮಕ್ಕಳು. ಅವಶ್ಯಕತೆಯಿರುವವರಿಗೆ ನೀವು ಐಹಿಕ ವಸ್ತುಗಳನ್ನು ನೀಡುವುದರ ಮೂಲಕ, ದುಃಖಿತರಿಗೆ ಮನಸ್ಸಿಗೆ ಸಂಬಂಧಿಸಿದಂತೆ ನೆಮ್ಮದಿ ನೀಡುವ ಮೂಲಕ, ಅಂಜಿದವರಿಗೆ ಧೈರ್ಯ ಹೇಳುವ ಮೂಲಕ, ಅಶಕ್ತರಿಗೆ ದಿವ್ಯ ಸ್ನೇಹ ಮತ್ತು ನೈತಿಕ ಬೆಂಬಲ ನೀಡುವ ಮೂಲಕ ನೆರವಾಗಬಹುದು; ನೀವು ಇತರರಲ್ಲಿ ಭಗವಂತನ ಬಗ್ಗೆ ಆಸಕ್ತಿ ಹುಟ್ಟಿಸಿದಾಗ, ಅವರಲ್ಲಿ ಭಗವಂತನ ಬಗ್ಗೆ ಹೆಚ್ಚಿನ ಭಕ್ತಿಯನ್ನು ಬೆಳೆಸಿದಾಗ, ಗಾಢ ನಂಬಿಕೆಯನ್ನು ಬೆಳೆಸಿದಾಗ, ಒಳ್ಳೆಯತನದ ಬೀಜವನ್ನೂ ಬಿತ್ತುವಿರಿ. ನೀವು ಈ ಜಗತ್ತನ್ನು ತೊರೆದಾಗ, ಐಹಿಕ ಸಂಪತ್ತು ಹಿಂದೆ ಉಳಿಯುತ್ತದೆ; ಆದರೆ ನೀವು ಮಾಡಿದ ಪ್ರತಿಯೊಂದು ಒಳ್ಳೆಯ ಕಾರ್ಯವೂ ನಿಮ್ಮೊಂದಿಗೆ ಬರುತ್ತದೆ. ಜಿಪುಣತೆಯಿಂದ ಬದುಕುವ ಶ್ರೀಮಂತರು, ಇತರರಿಗೆ ಸಹಾಯ ಮಾಡದ ಸ್ವಾರ್ಥಿಗಳು, ತಮ್ಮ ಮುಂದಿನ ಜನ್ಮದಲ್ಲಿ ಶ್ರೀಮಂತಿಕೆಯನ್ನು ಆಕರ್ಷಿಸಲಾರರು. ಆದರೆ ನೀಡುವವರು ಮತ್ತು ಹಂಚುವವರು, ಶ್ರೀಮಂತರಿರಲಿ, ಬಡವರಿರಲಿ, ಅವರು ಶ್ರೀಮಂತಿಕೆಯನ್ನು ಆಕರ್ಷಿಸುತ್ತಾರೆ. ಅದು ಭಗವಂತನ ನಿಯಮ.
ದಿವ್ಯವಾದ ಸಮೃದ್ಧಿಯನ್ನು ಬಿರುಸಾದ ಉಲ್ಲಾಸಕರ ಮಳೆಯೆಂದು ಭಾವಿಸಿ; ನಿಮ್ಮ ಕೈಯಲ್ಲಿ ಯಾವ ಪಾತ್ರೆಯಿದೆಯೋ ಅದು ತುಂಬಿಕೊಳ್ಳುತ್ತದೆ. ನೀವು ಒಂದು ತಗಡಿನ ಲೋಟವನ್ನು ಹಿಡಿದರೆ, ನಿಮಗೆ ಅಷ್ಟೇ ದೊರೆಯುತ್ತದೆ. ಒಂದು ಬೋಗುಣಿಯನ್ನು ಹಿಡಿದರೆ ಅದು ತುಂಬಿಕೊಳ್ಳುತ್ತದೆ. ದಿವ್ಯ ಸಮೃದ್ಧಿಗೆ ನೀವು ಎಂತಹ ಪಾತ್ರೆಯನ್ನು ಹಿಡಿದಿರುವಿರಿ? ಬಹುಶಃ ನಿಮ್ಮ ಪಾತ್ರೆಯಲ್ಲಿ ದೋಷವಿರಬಹುದು; ಹಾಗಿದ್ದಲ್ಲಿ ಅದರಿಂದ ನೀವು ಎಲ್ಲ ಬಗೆಯ ಭಯ, ದ್ವೇಷ, ಸಂದೇಹ, ಮತ್ಸರಗಳನ್ನು ಹೊರಹಾಕುವ ಮೂಲಕ ಸರಿಪಡಿಸಿ, ಶಾಂತಿ, ನೆಮ್ಮದಿ, ಭಕ್ತಿ, ಮತ್ತು ಪ್ರೀತಿಯೆಂಬ ಶುದ್ಧಗೊಳಿಸುವ ನೀರಿನಿಂದ ತೊಳೆಯಬೇಕು. ದಿವ್ಯ ಸಮೃದ್ಧಿಯು ಸೇವೆ ಮತ್ತು ಔದಾರ್ಯದ ನಿಯಮವನ್ನು ಪಾಲಿಸುತ್ತದೆ. ನೀಡು, ನಂತರ ಸ್ವೀಕರಿಸು. ನಿಮ್ಮಲ್ಲಿರುವ ಅತ್ಯುತ್ತಮವಾದುದನ್ನು ಜಗತ್ತಿಗೆ ಕೊಡಿ, ಅಂತೆ ಅತ್ಯುತ್ತಮವಾದುದು ನಿಮಗೆ ವಾಪಸು ಬರುತ್ತದೆ.
ಯಶಸ್ಸಿಗಾಗಿ ದೃಢೀಕರಣಗಳು
ಸಕಾರಾತ್ಮಕ ದೃಢೀಕರಣಗಳ ಸಿದ್ಧಾಂತ ಮತ್ತು ಸೂಚನೆಗಳು
ಸರ್ವವ್ಯಾಪಿಯಾದ ಶ್ರೇಯಸ್ಕರ ಶಕ್ತಿಯು ನನಗೆ ಬೇಕಾದುದು ಬೇಕೆನಿಸಿದಾಗ ತಂದುಕೊಡುವುದೆಂಬ ಸಂಪೂರ್ಣ ಶ್ರದ್ಧೆಯಿಂದ ನಾನು ಮುಂದುವರಿಯುತ್ತೇನೆ.
ನನ್ನೊಳಗೆ ಅನಂತ ಸೃಜನಾತ್ಮಕ ಶಕ್ತಿಯಿದೆ. ನಾನು ಏನನ್ನಾದರೂ ಸಾಧಿಸದೆ ನನ್ನ ಸಮಾಧಿಯೆಡೆ ನಡೆಯಲಾರೆ. ನಾನೊಬ್ಬ ದೈವಾಂಶ ಸಂಭೂತ, ವಿವೇಚನಾಯುಕ್ತ ಜೀವಿ. ನಾನು ನನ್ನ ಚೇತನದ ಕ್ರಿಯಾತ್ಮಕ ಮೂಲವಾದ ಆ ಅನಂತ ಶಕ್ತಿಯ ಭಾಗ. ನಾನು ಈ ವ್ಯಾವಹಾರಿಕ ಪ್ರಪಂಚದಲ್ಲಿ, ಆಲೋಚನಾ ಪ್ರಪಂಚದಲ್ಲಿ, ಬುದ್ಧಿಮತ್ತೆಯ ಪ್ರಪಂಚದಲ್ಲಿ ದಿವ್ಯ ಕಾಂತಿಯನ್ನು ಸೃಜಿಸಬಲ್ಲೆ. ನಾನು ಮತ್ತು ನನ್ನ ತಂದೆಯೂ ಒಂದೇ. ನಾನು ನನ್ನ ಸೃಜನಾತ್ಮಕ ತಂದೆಯ ಹಾಗೆ ನಾನು ಇಚ್ಛೆಪಟ್ಟಿರುವುದನ್ನೆಲ್ಲ ಸೃಷ್ಟಿಸಿಕೊಳ್ಳಬಲ್ಲೆ.
ದಿವ್ಯ ಸಮೃದ್ಧಿಗೆ ದೃಢೀಕರಣಗಳು
ಮುಂದೆ ಓದಿ
- ಯಶಸ್ಸಿನ ನಿಯಮ - ಶ್ರೀ ಶ್ರೀ ಪರಮಹಂಸ ಯೋಗಾನಂದರಿಂದ
- ಟು ಬಿ ವಿಕ್ಟೋರಿಯಸ್ ಇನ್ ಲೈಫ್ - ಶ್ರೀ ಶ್ರೀ ಪರಮಹಂಸ ಯೋಗಾನಂದರಿಂದ
- "ಫೋಕಸಿಂಗ್ ದಿ ಪವರ್ ಆಫ್ ಅಟೆನ್ಷನ್ ಫಾರ್ ಸಕ್ಸೆಸ್" - ಜರ್ನಿ ಟು ಸೆಲ್ಫ್-ರಿಯಲೈಝೇಷನ್ ಶ್ರೀ ಶ್ರೀ ಪರಮಹಂಸ ಯೋಗಾನಂದರಿಂದ
- "ಬಿಸಿನೆಸ್, ಬ್ಯಾಲೆನ್ಸ್ ಅಂಡ್ ಇನ್ನರ್ ಪೀಸ್: ರೆಸ್ಟೋರಿಂಗ್ ಎಕ್ವಲಿಬ್ರಿಯಮ್ ಟು ದಿ ವರ್ಕ್ ವೀಕ್", ಜರ್ನಿ ಟು ಸೆಲ್ಫ್-ರಿಯಲೈಝೇಷನ್ ಶ್ರೀ ಶ್ರೀ ಪರಮಹಂಸ ಯೋಗಾನಂದರಿಂದ
- "ಇನ್ಕ್ರೀಸಿಂಗ್ ದಿ ಪವರ್ ಆಫ್ ಇನಿಷಿಯೆಟೀವ್," ಮ್ಯಾನ್ಸ್ ಎಟರ್ನಲ್ ಕ್ವೆಸ್ಟ್ ಶ್ರೀ ಶ್ರೀ ಪರಮಹಂಸ ಯೋಗಾನಂದರಿಂದ
- "ದಿ ಮೈಂಡ್: ರಿಪೋಸಿಟರಿ ಆಫ್ ಇನ್ಫೈನೈಟ್ ಪವರ್," ದಿ ಡಿವೈನ್ ರೊಮ್ಯಾನ್ಸ್ ಶ್ರೀ ಶ್ರೀ ಪರಮಹಂಸ ಯೋಗಾನಂದರಿಂದ