1917ರಲ್ಲಿ ಅದು ಸ್ಥಾಪನೆಯಾದಾಗಿನಿಂದ, 1952ರಲ್ಲಿ ಪರಮಹಂಸ ಯೋಗಾನಂದರ ಮಹಾಸಮಾಧಿಯ ಮುಂಚಿನ ಸ್ವಲ್ಪ ಸಮಯದವರೆಗೂ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್‌ನ ಎಲ್ಲ ಚಟುವಟಿಕೆಗಳನ್ನು ಮತ್ತು ಸಂಸ್ಥೆಗೆ ಸಂಬಂಧಿಸಿದ ವ್ಯವಹಾರಗಳನ್ನು ಪರಮಹಂಸ ಯೋಗಾನಂದರು ತಾವೇ ನಿರ್ದೇಶಿಸುತ್ತಿದ್ದರು. ತರುವಾಯ ಅವರ ಕಾರ್ಯಗಳ ನಾಯಕತ್ವವನ್ನು, ತಮ್ಮ ನಂತರ ವೈಎಸ್‌ಎಸ್/ಎಸ್‌ಆರ್‌ಎಫ್‌ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲು ಪರಮಹಂಸಜಿ ತಾವೇ ಖುದ್ದಾಗಿ ಆಯ್ಕೆ ಮಾಡಿದ ಅವರ ಆಪ್ತ ಶಿಷ್ಯರಾದ ಶ್ರೀ ಶ್ರೀ ರಾಜರ್ಷಿ ಜನಕಾನಂದ ಅವರಿಗೆ ಹಸ್ತಾಂತರಿಸಲಾಯಿತು. ಇವರು 1952ರಿಂದ, ಸ್ವರ್ಗಸ್ಥರಾಗುವವರೆಗೂ ಮುಂದಿನ ಮೂರು ವರ್ಷಗಳ ಕಾಲ ಈ ಸ್ಥಾನವನ್ನು ಅಲಂಕರಿಸಿದ್ದರು.
ಶ್ರೀ ಶ್ರೀ ದಯಾ ಮಾತಾರವರು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್‌ನ ಮೂರನೆಯ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರಾಗಿದ್ದರು. ಯೋಗಾನಂದಜಿ ತಾವೇ ಸ್ವತಃ ಇಪ್ಪತ್ತು ವರ್ಷಗಳಿಗೂ ಅಧಿಕ ಕಾಲ ಅವರಿಗೆ ತರಬೇತಿಯನ್ನು ನೀಡಿದ್ದರು. 1955ರಲ್ಲಿ ರಾಜರ್ಷಿ ಜನಕಾನಂದರು ಸ್ವರ್ಗಸ್ಥರಾದ ನಂತರ ಇವರು ವೈಎಸ್‌ಎಸ್/ಎಸ್‌ಆರ್‌ಎಫ್‌ನ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರಾದರು–2010ರಲ್ಲಿ ಅವರು ಸ್ವರ್ಗಸ್ಥರಾಗುವ ತನಕ ಈ ಸ್ಥಾನವನ್ನು ಅಲಂಕರಿಸಿದ್ದರು.
ಶ್ರೀ ಶ್ರೀ ಮೃಣಾಲಿನಿ ಮಾತಾರವರು ಶ್ರೀ ದಯಾ ಮಾತಾರವರ ನಂತರ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್‌ನ ಸಂಘಮಾತಾ ಹಾಗೂ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು. ಇವರನ್ನು ಕೂಡ ಪರಮಹಂಸ ಯೋಗಾನಂದರು, ತಮ್ಮ ಮಹಾಸಮಾಧಿಯ ನಂತರ ತಮ್ಮ ಕಾರ್ಯವನ್ನು ಮಾರ್ಗದರ್ಶಿಸಲು ಹಾಗೂ ಮುಂದುವರೆಸಲು ತಾವೇ ಸ್ವತಃ ಆಯ್ಕೆ ಮಾಡಿ ತರಬೇತುಗೊಳಿಸಿದ್ದರು. ತಮ್ಮ ಏಳು ದಶಕಗಳ ಎಸ್‌ಆರ್‌ಎಫ್ ಸನ್ಯಾಸಿನಿ ಶಿಷ್ಯೆಯ ಅವಧಿಯಲ್ಲಿ ಅವರು ಅನೇಕ ಮಹತ್ವದ ನಾಯಕತ್ವದ ಪಾತ್ರಗಳನ್ನು ವಹಿಸಿದ್ದರು. ಆಗಸ್ಟ್ 2017ರಲ್ಲಿ ಅವರು ಸ್ವರ್ಗಸ್ಥರಾಗುವವರೆಗೂ, 2011ರಿಂದ ಶ್ರೀ ಮೃಣಾಲಿನಿ ಮಾತಾರವರು ವೈಎಸ್‌ಎಸ್/ಎಸ್‌ಆರ್‌ಎಫ್‌ನ ಸಂಘಮಾತಾ ಹಾಗೂ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.
ಸ್ವಾಮಿ ಚಿದಾನಂದ ಗಿರಿ ಅವರು ವೈಎಸ್‌ಎಸ್/ಎಸ್‌ಆರ್‌ಎಫ್‌ನ ಪ್ರಸ್ತುತ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರಾಗಿದ್ದಾರೆ. ಅವರು ನಲವತ್ತು ವರ್ಷಗಳಿಗಿಂತಲೂ ಅಧಿಕ ಕಾಲ ಸೆಲ್ಫ್-ರಿಯಲೈಝೆಷನ್ ಫೆಲೋಷಿಪ್‌ನ ಸನ್ಯಾಸಿಯಾಗಿದ್ದಾರೆ. ಬಹುತೇಕ ತಮ್ಮ ಸನ್ಯಾಸಿ ಜೀವನದ ಆರಂಭದಿಂದಲೇ ಅವರು ಪರಮಹಂಸ ಯೋಗಾನಂದರ ಹಾಗೂ ಎಸ್‌ಆರ್‌ಎಫ್ ಪ್ರಕಟಣೆಗಳ ಪರಿಷ್ಕರಣೆ ಹಾಗೂ ಪ್ರಕಟಣೆಯ ಕಾರ್ಯಗಳಲ್ಲಿ ಶ್ರೀ ಮೃಣಾಲಿನಿ ಮಾತಾರವರೊಡನೆ ನಿಕಟವಾಗಿ ಕೆಲಸ ಮಾಡಿದ್ದಾರೆ. 2009ರಲ್ಲಿ ಶ್ರೀ ದಯಾ ಮಾತಾರವರು ಇವರನ್ನು ವೈಎಸ್‌ಎಸ್ ಹಾಗೂ ಎಸ್‌ಆರ್‌ಎಫ್ ಅಧ್ಯಕ್ಷ ಮಂಡಳಿಯ ಸದಸ್ಯರನ್ನಾಗಿ ನೇಮಿಸಿದರು. ಇವರು ಹಲವಾರು ವರ್ಷಗಳ ಕಾಲ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಎಸ್‌ಆರ್‌ಎಫ್‌ನ ಅಸಂಖ್ಯಾತ ಚಟುವಟಿಕೆಗಳು ಹಾಗೂ ಕಾರ್ಯಾಚರಣೆಗಳನ್ನು ನೋಡಿಕೊಳ್ಳುವ ನಿರ್ವಾಹಕ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಅಧ್ಯಕ್ಷರಾದ ಸ್ವಾಮಿ ಚಿದಾನಂದಜಿಯವರಿಗೆ ಪರಮಹಂಸಜಿಯವರ ನೇರ ಶಿಷ್ಯರುಗಳು ತರಬೇತಿ ನೀಡಿದ ಇತರ ಸನ್ಯಾಸಿಗಳನ್ನೊಳಗೊಂಡ ಅಧ್ಯಕ್ಷ ಮಂಡಳಿಯ ಸದಸ್ಯರು ಸಹಾಯ ಮಾಡುತ್ತಾರೆ.
ಯೋಗಾನಂದಜಿಯವರ ವೈಯಕ್ತಿಕ ಒಡನಾಟದಿಂದ ಪ್ರಯೋಜನ ಪಡೆದ ಹಲವಾರು ನೇರ ಶಿಷ್ಯರು, ಯೋಗಾನಂದಜಿ ಅವರ ದೇಹಾಂತ್ಯದ ನಂತರದ ಹಲವಾರು ದಶಕಗಳ ಕಾಲ ವೈಎಸ್‌ಎಸ್/ಎಸ್‌ಆರ್‌ಎಫ್ ಆಶ್ರಮಗಳಲ್ಲಿ ತಮ್ಮ ಬದುಕನ್ನು ಸವೆಸಿದ್ದಾರೆ–ನಿಷ್ಠೆಯಿಂದ ಅವರ ಸಂಸ್ಥೆಗೆ ಸೇವೆ ಸಲ್ಲಿಸುತ್ತಾ ಮತ್ತು ಅವರು ನೇಮಿಸಿದ ನಾಯಕತ್ವಕ್ಕೆ ಬೆಂಬಲ ನೀಡುತ್ತಾ. ಅವರ ಕಥೆಗಳನ್ನು ಓದಿರಿ.
ಅಧ್ಯಕ್ಷ ಮಂಡಳಿಯ ಎಲ್ಲ ಸದಸ್ಯರೂ ಅಂತಿಮವಾಗಿ ತಮ್ಮ ಇಡೀ ಜೀವನ ಸನ್ಯಾಸಿಗಳಾಗಿರಲು ಪ್ರತಿಜ್ಞೆ ಮಾಡಿರುವ ನಮ್ಮ ಸನ್ಯಾಸಿ ಶ್ರೇಣಿಯವರು. ಅವರು ಮತ್ತು ವೈಎಸ್‌ಎಸ್/ಎಸ್‌ಆರ್‌ಎಫ್ ಆಶ್ರಮಗಳಲ್ಲಿರುವ ಇತರ ಸನ್ಯಾಸಿಗಳು ಹಾಗೂ ಸನ್ಯಾಸಿನಿಯರು ತಮ್ಮ ಜೀವನವನ್ನು ಸಂಪೂರ್ಣವಾಗಿ ಪರಮಹಂಸ ಯೋಗಾನಂದರು ಆರಂಭಿಸಿದ ಕಾರ್ಯಕ್ಕಾಗಿ ಮುಡಿಪಾಗಿಟ್ಟಿದ್ದಾರೆ.
ಅಧ್ಯಕ್ಷರು ಹಾಗೂ ಅಧ್ಯಕ್ಷ ಮಂಡಳಿಯ ಸದಸ್ಯರ ಮಾರ್ಗದರ್ಶನದಲ್ಲಿ, ವೈಎಸ್‌ಎಸ್/ಎಸ್‌ಆರ್‌ಎಫ್ ಶ್ರೇಣಿಯ ಸನ್ಯಾಸಿಗಳು ಹಾಗೂ ಸನ್ಯಾಸಿನಿಯರು ಸಂಸ್ಥೆಯ ಆಶ್ರಮ ಕೇಂದ್ರಗಳಲ್ಲಿ ಅನೇಕ ಅಧಿಕಾರ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ; ಯೋಗದಾ ಸತ್ಸಂಗದ ಬೋಧನೆಗಳ ವಿದ್ಯಾರ್ಥಿಗಳಿಗಾಗಿ ಉಪನ್ಯಾಸಗಳು ಹಾಗೂ ತರಗತಿಗಳನ್ನು ತೆಗೆದುಕೊಳ್ಳಲು ಮತ್ತು ಧ್ಯಾನ ಶಿಬಿರಗಳನ್ನು ನಡೆಸಲು ಪಯಣಿಸುವುದು; ಮತ್ತು ಆಧ್ಯಾತ್ಮಿಕ ಸಲಹೆ ಹಾಗೂ ಮಾರ್ಗದರ್ಶನವನ್ನು ನೀಡುವುದು – ದೂರವಾಣಿಯ ಮೂಲಕ, ಪತ್ರ ಮುಖೇನ ಹಾಗೂ ವೈಯಕ್ತಿಕವಾಗಿ.
ವೈಎಸ್‌ಎಸ್/ಎಸ್‌ಆರ್‌ಎಫ್‌ನ ಸನ್ಯಾಸಿಗಳಲ್ಲದ ಅನೇಕ ನಿಷ್ಠಾವಂತ ಸದಸ್ಯರುಗಳೂ ಕೂಡ ಅತ್ಯಗತ್ಯವಾದ ರೀತಿಯಲ್ಲಿ ಪರಮಹಂಸ ಯೋಗಾನಂದರ ವಿಶ್ವದಾದ್ಯಂತದ ಕಾರ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ–ಅಂತರರಾಷ್ಟ್ರೀಯ ಕೇಂದ್ರ ಕಾರ್ಯಾಲಯ ಹಾಗೂ ಇತರ ವೈಎಸ್‌ಎಸ್/ಎಸ್‌ಆರ್‌ಎಫ್ ಆಶ್ರಮ ಕೇಂದ್ರಗಳಲ್ಲಿ ಸನ್ಯಾಸಿಗಳೊಂದಿಗೆ ಕೆಲಸ ಮಾಡುತ್ತಾ, ಮತ್ತು ಪ್ರಪಂಚದಾದ್ಯಂತ ಇರುವ ಆಶ್ರಮಗಳಲ್ಲಿ ಹಾಗೂ ಧ್ಯಾನ ಕೇಂದ್ರಗಳಲ್ಲಿ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ.