ಅಂತಿಮ ವರ್ಷಗಳು ಮತ್ತು ಮಹಾಸಮಾಧಿ

ಭಗವದ್ಗೀತೆ ಮತ್ತು ನಾಲ್ಕು ಸುವಾರ್ತೆಗಳಲ್ಲಿನ ಯೇಸುಕ್ರಿಸ್ತನ ಬೋಧನೆಗಳ ಕುರಿತಾದ ಅವರ ಬೃಹತ್ ವ್ಯಾಖ್ಯಾನಗಳು ಮತ್ತು ವಿಸ್ಪರ್ಸ್ ಫ್ರಮ್ ಇಟರ್ನಿಟಿ ಮತ್ತು ಯೋಗದಾ ಸತ್ಸಂಗ ಪಾಠಮಾಲಿಕೆಗಳಂತಹ ಹಿಂದಿನ ಕೃತಿಗಳ ಪರಿಷ್ಕರಣೆಗಳೂ ಸೇರಿದಂತೆ, ತಮ್ಮ ಸಮಗ್ರ ಬರಹಗಳನ್ನು ಪೂರ್ಣಗೊಳಿಸಲು ತೀವ್ರವಾಗಿ ಶ್ರಮಿಸುತ್ತ ಪರಮಹಂಸ ಯೋಗಾನಂದರು ತಮ್ಮ ಅಂತಿಮ ವರ್ಷಗಳನ್ನು ಹೆಚ್ಚಾಗಿ ಏಕಾಂತದಲ್ಲಿ ಕಳೆದರು. ಅವರು ಶ್ರೀ ದಯಾ ಮಾತಾ, ಶ್ರೀ ಮೃಣಾಲಿನಿ ಮಾತಾ ಮತ್ತು ಅವರ ಇನ್ನಿತರ ಆಪ್ತ ಶಿಷ್ಯರೊಂದಿಗೆ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಿದರು, ತಾವು ಹೋದ ನಂತರ ತಮ್ಮ ಜಗದಾದ್ಯಂತದ ಕಾರ್ಯವನ್ನು ಮುಂದುವರಿಸಲು ಸಾಧ್ಯವಾಗುವಂತೆ, ಅವರೆಲ್ಲರಿಗೆ ಆಧ್ಯಾತ್ಮಿಕ ಮತ್ತು ಸಾಂಸ್ಥಿಕ ಮಾರ್ಗದರ್ಶನವನ್ನು ನೀಡಿದರು.

ಅವರು ಅವರೆಲ್ಲರಿಗೆ ಹೇಳಿದರು:

“ನನ್ನ ಶರೀರವು ಗತಿಸುತ್ತದೆ ಆದರೆ ನನ್ನ ಕೆಲಸ ಮುಂದುವರಿಯುತ್ತದೆ. ಮತ್ತು ನನ್ನ ಆತ್ಮವು ಜೀವಿಸಿರುತ್ತದೆ. ನನ್ನನ್ನು ಕರೆದುಕೊಂಡು ಹೋದ ಮೇಲೂ ನಾನು ಭಗವಂತನ ಸಂದೇಶದೊಂದಿಗೆ ಪ್ರಪಂಚದ ವಿಮೋಚನೆಗಾಗಿ ನಿಮ್ಮೆಲ್ಲರೊಂದಿಗೆ ಕೆಲಸ ಮಾಡುತ್ತೇನೆ.”

“ಆಂತರಿಕ ಆಧ್ಯಾತ್ಮಿಕ ನೆರವನ್ನು ನಿಜವಾಗಿಯೂ ಬಯಸುತ್ತ ಸೆಲ್ಫ್-ರಿಯಲೈಝೇಷನ್‌ ಫೆಲೋಶಿಪ್‌ [ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ] ಗೆ ಬಂದವರು ಭಗವಂತನಿಂದ ಏನನ್ನು ಬಯಸುತ್ತಾರೋ ಅದನ್ನು ಪಡೆದುಕೊಳ್ಳುತ್ತಾರೆ. ಅವರು, ನಾನು ಶರೀರದಲ್ಲಿರುವಾಗ ಬಂದರೂ ಅಥವಾ ನಂತರ ಬಂದರೂ ಎಸ್‌ಆರ್‌ಎಫ್‌ [ವೈಎಸ್‌ಎಸ್] ಗುರುಗಳ ಸಂಪರ್ಕದ ಮೂಲಕ ಭಗವಂತನ ಶಕ್ತಿಯು ಭಕ್ತರಲ್ಲಿ ಒಂದೇ ರೀತಿಯಲ್ಲಿ ಹರಿಯುತ್ತದೆ ಹಾಗೂ ಅದು ಅವರ ಮೋಕ್ಷಕ್ಕೆ ಕಾರಣವಾಗುತ್ತದೆ….ಎಲ್ಲಾ ಪ್ರಾಮಾಣಿಕ ಎಸ್‌ಆರ್‌ಎಫ್‌ [ವೈಎಸ್‌ಎಸ್] ಭಕ್ತರ ಪ್ರಗತಿಗೆ ರಕ್ಷಣೆ ನೀಡುತ್ತ, ಅವರಿಗೆ ಮಾರ್ಗದರ್ಶನ ನೀಡುವುದಾಗಿ ಸಾವೇ ಇಲ್ಲದ ಬಾಬಾಜಿ ಭರವಸೆ ನೀಡಿದ್ದಾರೆ. ತಮ್ಮ ಭೌತ ಶರೀರವನ್ನು ತೊರೆದಿರುವ ಲಾಹಿರಿ ಮಹಾಶಯ ಮತ್ತು ಶ್ರೀ ಯುಕ್ತೇಶ್ವರ್‌ಜಿ ಹಾಗೂ ನಾನು, ನಾನು ದೇಹವನ್ನು ತೊರೆದ ನಂತರವೂ — ನಾವೆಲ್ಲರೂ ಎಸ್‌ಆರ್‌ಎಫ್‌ [ವೈಎಸ್‌ಎಸ್]ನ ಪ್ರಾಮಾಣಿಕ ಸದಸ್ಯರನ್ನು ರಕ್ಷಿಸುತ್ತೇವೆ ಮತ್ತು ಮಾರ್ಗದರ್ಶಿಸುತ್ತೇವೆ.”

Indian Ambassador's wife with Yoganandaಮಾರ್ಚ್ 7, 1952 ರಂದು, ಮಹಾನ್ ಗುರುವು ಮಹಾಸಮಾಧಿ (ಮರಣದ ಸಮಯದಲ್ಲಿ ಶರೀರದಿಂದ, ಜ್ಞಾನೋದಯ ಹೊಂದಿದ ಗುರುವಿನ ಪ್ರಜ್ಞಾಪೂರ್ವಕ ನಿರ್ಗಮನ) ಹೊಂದಿದರು. ಅವರು ಆಗ ಲಾಸ್ ಏಂಜಲೀಸ್‌ನ ಬಿಲ್ಟ್‌ಮೋರ್ ಹೋಟೆಲ್‌ನಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿನ ಭಾರತದ ರಾಯಭಾರಿ ಡಾ. ಬಿನಯ್ ಆರ್. ಸೇನ್ ಅವರನ್ನು ಗೌರವಿಸುವ ಔತಣಕೂಟದಲ್ಲಿ ಒಂದು ಸಣ್ಣ ಭಾಷಣವನ್ನು ನೀಡಿ ಮುಗಿಸಿದ್ದರಷ್ಟೆ.

ಅವರ ಮರಣವು ಅಸಾಧಾರಣ ವಿದ್ಯಮಾನದಿಂದ ಗುರುತಿಸಲ್ಪಟ್ಟಿದೆ. ಫಾರೆಸ್ಟ್ ಲಾನ್ ಮೆಮೋರಿಯಲ್-ಪಾರ್ಕ್‌ನ ನಿರ್ದೇಶಕರು ಸಹಿ ಮಾಡಿದ, ಪ್ರಮಾಣೀಕೃತ ಹೇಳಿಕೆಯು ಹೀಗೆ ದೃಢೀಕರಿಸುತ್ತದೆ: “ಮರಣ ಹೊಂದಿ ಇಪ್ಪತ್ತು ದಿನಗಳಾದರೂ ಯಾವುದೇ ಭೌತಿಕ ಶಿಥಿಲತೆ ಅವರ ಶರೀರದಲ್ಲಿ ಗೋಚರಿಸಲಿಲ್ಲ…. ದೇಹದ ಇಂತಹ ಪರಿಪೂರ್ಣ ಸಂರಕ್ಷಣೆಯು, ಇಲ್ಲಿಯವರೆಗೆ ಶವಾಗಾರದ ದಾಖಲೆಗಳಿಂದ ನಾವು ತಿಳಿದಿರುವಂತೆ ಸರಿಸಾಟಿಯಿಲ್ಲದ್ದು…. ಯೋಗಾನಂದರ ಶರೀರವು ಸ್ಪಷ್ಟವಾಗಿ ಒಂದು ಅಪೂರ್ವ ನಿರ್ವಿಕಾರ ಸ್ಥಿತಿಯಲ್ಲಿತ್ತು.”

ಹಿಂದಿನ ವರ್ಷಗಳಲ್ಲಿ, ಪರಮಹಂಸ ಯೋಗಾನಂದರ ಗುರುಗಳಾದ ಸ್ವಾಮಿ ಶ್ರೀ ಯುಕ್ತೇಶ್ವರರು ಅವರನ್ನು ದಿವ್ಯ ಪ್ರೇಮದ ಅವತಾರ ಎಂದು ಹೇಳಿದ್ದರು. ನಂತರ, ಅವರ ಶಿಷ್ಯ ಮತ್ತು ಮೊದಲ ಆಧ್ಯಾತ್ಮಿಕ ಉತ್ತರಾಧಿಕಾರಿ ರಾಜರ್ಷಿ ಜನಕಾನಂದರು ಅವರಿಗೆ ಪ್ರೇಮಾವತಾರ ಅಥವಾ “ದಿವ್ಯ ಪ್ರೇಮದ ಅವತಾರ” ಎಂಬ ಯುಕ್ತ ಬಿರುದನ್ನು ನೀಡಿದರು.

ಪರಮಹಂಸ ಯೋಗಾನಂದರ ನಿಧನದ ಇಪ್ಪತ್ತೈದನೇ ವಾರ್ಷಿಕೋತ್ಸವದ ಅಂಗವಾಗಿ ಮನುಕುಲದ ಆಧ್ಯಾತ್ಮಿಕ ಔನ್ನತ್ಯದೆಡೆಗೆ ಅವರ ದೂರಗಾಮಿ ಕೊಡುಗೆಗಳನ್ನು ಭಾರತ ಸರ್ಕಾರವು ಔಪಚಾರಿಕವಾಗಿ ಗುರುತಿಸಿತು. ಅವರ ಗೌರವಾರ್ಥ ವಿಶೇಷ ಸ್ಮರಣಾರ್ಥ ಅಂಚೆಚೀಟಿಯನ್ನು ಬಿಡುಗಡೆ ಮಾಡಲಾಯಿತು, ಜೊತೆಗಿದ್ದ ಅಭಿನಂದನಾ ಪತ್ರದ ಒಂದು ಭಾಗ ಹೀಗಿದೆ:

ಪರಮಹಂಸ ಯೋಗಾನಂದರ ಜೀವನದಲ್ಲಿ ಭಗವಂತನ ಮೇಲಿನ ಪ್ರೀತಿ ಮತ್ತು ಮನುಕುಲದ ಸೇವೆಯ ಆದರ್ಶವು ಸಂಪೂರ್ಣ ಅಭಿವ್ಯಕ್ತಿಯನ್ನು ಕಂಡುಕೊಂಡಿದೆ. ಅವರ ಜೀವನದ ಬಹುಪಾಲು ಭಾಗವನ್ನು ಭಾರತದ ಹೊರಗೆ ಕಳೆದಿದ್ದರೂ, ಅವರು ನಮ್ಮ ಮಹಾನ್ ಸಂತರಲ್ಲಿ ತಮ್ಮ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಅವರ ಕಾರ್ಯವು ಬೆಳೆಯುತ್ತಲೇ ಇದೆ ಮತ್ತು ಹೆಚ್ಚು ಹೆಚ್ಚು ಪ್ರಕಾಶಮಾನವಾಗಿ ಬೆಳಗುತ್ತಿದೆ, ಮತ್ತು ಆತ್ಮದ ಯಾತ್ರೆಯ ಹಾದಿಯಲ್ಲಿ ಎಲ್ಲೆಡೆಯಿಂದ ಜನರನ್ನು ಸೆಳೆಯುತ್ತಿದೆ.

'Yogananda Stamp' - Government of India

Postage stamp commemorating the 100th anniversary of Yogoda Satsanga Society.2017 ರಲ್ಲಿ ಭಾರತದ ಪ್ರಧಾನ ಮಂತ್ರಿ, ಗೌರವಾನ್ವಿತ ಶ್ರೀ ನರೇಂದ್ರ ಮೋದಿಯವರು ಮಾರ್ಚ್ 7, 2017 ರಂದು ನವದೆಹಲಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಪರಮಹಂಸಜಿ ಅವರಿಗೆ ಗೌರವ ಸಲ್ಲಿಸಿದರು, ಅದರಲ್ಲಿ ಭಾರತ ಸರ್ಕಾರವು ಯೋಗದಾ ಸತ್ಸಂಗ ಸೊಸೈಟಿಯ 100 ನೇ ವಾರ್ಷಿಕೋತ್ಸವದ ನೆನಪಿಗಾಗಿ ಹೊಸ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. ಪರಮಹಂಸಜಿಯವರ ಮಹಾಸಮಾಧಿಯ ವಾರ್ಷಿಕೋತ್ಸವದ ಗೌರವಾರ್ಥ ಈ ದಿನಾಂಕವನ್ನು ಆಯ್ಕೆ ಮಾಡಲಾಗಿತ್ತು.

ಪ್ರಧಾನಮಂತ್ರಿಯವರು ಸ್ಫೂರ್ತಿಯಿಂದ ಕೂಡಿದ ತಮ್ಮ ಭಾಷಣದಲ್ಲಿ, ಪರಮಹಂಸಜಿಯವರನ್ನು ಭಾರತದ ಶ್ರೇಷ್ಠ ಯೋಗಿಗಳು ಮತ್ತು ಗುರುಗಳಲ್ಲಿ ಒಬ್ಬರು ಎಂದು ಬಣ್ಣಿಸಿದರು — ಅವರ ಜೀವನ ಮತ್ತು ಕಾರ್ಯವು ಜಗತ್ತಿಗೆ ಭಾರತದ ಆಧ್ಯಾತ್ಮಿಕತೆಯ ಮಹತ್ತರವಾದ ಮೌಲ್ಯವನ್ನು ತೋರಿಸಿಕೊಟ್ಟಿತು — ಹಾಗೂ ಭಾರತದ ಪ್ರಾಚೀನ ಪರಂಪರೆಯನ್ನು ಆಧುನಿಕ ಜಗತ್ತಿನೊಂದಿಗೆ ಹಂಚಿಕೊಳ್ಳುವಲ್ಲಿ ಅದರ ಸಂಸ್ಥಾಪಕರ ಕೊಡುಗೆಯನ್ನು ಮತ್ತು ಚೈತನ್ಯವನ್ನು ಯಶಸ್ವಿಯಾಗಿ ಕಾಪಾಡಿಕೊಂಡು ಬರುತ್ತಿರುವುದಕ್ಕಾಗಿ ವೈಎಸ್‌ಎಸ್ ಅನ್ನು ಶ್ಲಾಘಿಸಿದರು.

ಇದನ್ನು ಹಂಚಿಕೊಳ್ಳಿ