ಒಬ್ಬ ಆರಂಭಿಗನ ಧ್ಯಾನ

ಪರಮಹಂಸ ಯೋಗಾನಂದರು ಕಲಿಸಿದಂತೆ

yogananda meditating outdoor

1) ಪ್ರಾರ್ಥನೆ

ನೀವು ಧ್ಯಾನ ಭಂಗಿಯಲ್ಲಿ ಸ್ಥಿತರಾದ ನಂತರ, ಭಗವಂತನಿಗೆ ನಿಮ್ಮ ಹೃದಯದಿಂದ ಪ್ರಾರ್ಥನೆಯನ್ನು ಸಲ್ಲಿಸುವ ಮೂಲಕ ಪ್ರಾರಂಭಿಸಿ, ನಿಮ್ಮ ಭಕ್ತಿಯನ್ನು ವ್ಯಕ್ತಪಡಿಸಿ ಮತ್ತು ನಿಮ್ಮ ಧ್ಯಾನದ ಮೇಲೆ ಅವನ ಆಶೀರ್ವಾದವನ್ನು ಕೇಳಿಕೊಳ್ಳಿ.

2) ಎಲ್ಲ ಒತ್ತಡವನ್ನು ನಿವಾರಿಸಲು, ಬಿಗಿಗೊಳಿಸಿ ಮತ್ತು ಸಡಿಲಗೊಳಿಸಿ

  • ಇಡೀ ದೇಹವನ್ನು ಬಿಗಿಗೊಳಿಸುತ್ತ ಮತ್ತು ಮುಷ್ಟಿಯನ್ನು ಬಿಗಿಯುತ್ತ, ಉಸಿರೆಳೆದುಕೊಳ್ಳಿ.
  • ಶರೀರದ ಎಲ್ಲ ಭಾಗಗಳನ್ನೂ ಒಟ್ಟಿಗೇ ಸಡಿಲಿಸಿ ಮತ್ತು ನೀವು ಹಾಗೆ ಮಾಡುತ್ತಿರುವಾಗ, “ಹಹ್, ಹಹ್” ಎಂದು ಜೊತೆಯುಸಿರಿನೊಂದಿಗೆ ಬಾಯಿಯ ಮೂಲಕ ಉಸಿರನ್ನು ಹೊರಹಾಕಿ.

ಈ ಅಭ್ಯಾಸವನ್ನು ಮೂರರಿಂದ ಆರು ಬಾರಿ ಪುನರಾವರ್ತಿಸಿ. ನಂತರ ಉಸಿರನ್ನು ಮರೆತುಬಿಡಿ. ಸಾಮಾನ್ಯ ಉಸಿರಾಟದಲ್ಲಿರುವಂತೆ ಅದು ತಾನಾಗಿಯೇ ಸ್ವಾಭಾವಿಕವಾಗಿ ಒಳಗೆ ಮತ್ತು ಹೊರಗೆ ಹರಿಯಲಿ.

3) ಆಧ್ಯಾತ್ಮಿಕ ಚಕ್ಷುವಿನಲ್ಲಿ ಗಮನವನ್ನು ಕೇಂದ್ರೀಕರಿಸಿ

ಅರ್ಧ ನಿಮೀಲಿತ ನೇತ್ರಗಳಿಂದ (ಅಥವಾ ಸಂಪೂರ್ಣವಾಗಿ ಮುಚ್ಚಿಕೊಂಡು, ಅದು ನಿಮಗೆ ಹೆಚ್ಚು ಆರಾಮದಾಯಕವಾಗಿದ್ದರೆ), ದೃಷ್ಟಿ ಮತ್ತು ಗಮನವನ್ನು ಭ್ರೂಮಧ್ಯದ ಬಿಂದುವಿನ ಮೂಲಕ ಹೊರಗೆ ನೋಡುತ್ತಿರುವಿರೇನೋ ಎಂಬಂತೆ ಕೇಂದ್ರೀಕರಿಸುತ್ತ ಮೇಲಕ್ಕೆ ನೋಡಿ. (ಆಳವಾದ ಏಕಾಗ್ರತೆಯಲ್ಲಿರುವ ಒಬ್ಬ ವ್ಯಕ್ತಿಯು ಹೆಚ್ಚಾಗಿ ಈ ಬಿಂದುವಿನಲ್ಲಿ ತನ್ನ ಹುಬ್ಬುಗಳನ್ನು “ಹೆಣೆದುಕೊಳ್ಳುತ್ತಾನೆ.” ಮೆಳ್ಳೆಗಣ್ಣು ಮಾಡಿಕೊಳ್ಳಬೇಡಿ ಅಥವಾ ಅವುಗಳನ್ನು ಆಯಾಸಪಡಿಸಬೇಡಿ; ಒಬ್ಬರು ಆರಾಮವಾಗಿ ಮತ್ತು ಶಾಂತವಾಗಿ ಏಕಾಗ್ರಗೊಂಡಾಗ ಮೇಲ್ಮುಖ ನೋಟವು ಸ್ವಾಭಾವಿಕವಾಗಿ ಬರುತ್ತದೆ.

Buddha meditatingಸಂಪೂರ್ಣ ಗಮನವನ್ನು ಭ್ರೂಮಧ್ಯದ ಬಿಂದುವಿನಲ್ಲಿರಿಸುವುದೇ ಮುಖ್ಯವಾದುದು. ಇದು ಕೂಟಸ್ಥ ಅಥವಾ ಕ್ರಿಸ್ತ ಪ್ರಜ್ಞೆಯ ಕೇಂದ್ರ, ಯೇಸು ಹೇಳಿದ ಏಕ ಚಕ್ಷುವಿನ ಸ್ಥಾನ: “ಶರೀರದ ಬೆಳಕು ಕಣ್ಣು: ಆದ್ದರಿಂದ ನಿನ್ನ ಕಣ್ಣು ಒಂದೇ ಆಗಿದ್ದರೆ, ನಿನ್ನ ಇಡೀ ಶರೀರವು ಬೆಳಕಿನಿಂದ ತುಂಬಿರುತ್ತದೆ” (ಮ್ಯಾಥ್ಯೂ 6:22).

ಧ್ಯಾನದ ಉದ್ದೇಶವು ಪೂರೈಸಿದಾಗ, ಭಕ್ತನು ತನ್ನ ಪ್ರಜ್ಞೆಯು ತಾನಾಗಿಯೇ ಆಧ್ಯಾತ್ಮಿಕ ಚಕ್ಷುವಿನಲ್ಲಿ ಕೇಂದ್ರೀಕೃತವಾಗುವುದನ್ನು ಮನಗಾಣುತ್ತಾನೆ ಮತ್ತು ಅವನು ತನ್ನ ಆಂತರಿಕ ಆಧ್ಯಾತ್ಮಿಕ ಸಾಮರ್ಥ್ಯಕ್ಕನುಗುಣವಾಗಿ, ಪರಮಾತ್ಮನೊಂದಿಗೆ ಆನಂದದಾಯಕ ದಿವ್ಯ ಸಂಯೋಗದ ಸ್ಥಿತಿಯನ್ನು ಅನುಭವಿಸುತ್ತಾನೆ.

ಆಧ್ಯಾತ್ಮಿಕ ಚಕ್ಷುವನ್ನು ವೀಕ್ಷಿಸಲು ಆಳವಾದ ಏಕಾಗ್ರತೆ ಮತ್ತು ಶಾಂತತೆ ಬೇಕಾಗುತ್ತದೆ: ನೀಲವರ್ಣದ ವೃತ್ತವನ್ನು ಹೊಂಬಣ್ಣದ ಪ್ರಭೆಯು ಸುತ್ತುವರಿದಿರುತ್ತದೆ, ಅದರ ನಡುವೆ, ಐದು ಮೊನೆಗಳುಳ್ಳ ಕಂಪಿಸುತ್ತಿರುವ ಶ್ವೇತ ನಕ್ಷತ್ರವಿರುತ್ತದೆ. ಯಾರು ಧ್ಯಾನದಲ್ಲಿ ಆಧ್ಯಾತ್ಮ ಚಕ್ಷುವನ್ನು ಕಾಣುವರೋ ಅವರು ಹೆಚ್ಚು ಆಳವಾದ ಏಕಾಗ್ರತೆ ಹಾಗೂ ಭಗವಂತನಲ್ಲಿ ಭಕ್ತಿಪೂರ್ವಕ ಪ್ರಾರ್ಥನೆಯ ಮೂಲಕ ಅದನ್ನು ಭೇದಿಸಿಕೊಂಡು ಹೋಗಲು ಪ್ರಯತ್ನಿಸಬೇಕು. ಇದಕ್ಕೆ ಅಗತ್ಯವಾದ ಶಾಂತತೆ ಮತ್ತು ಏಕಾಗ್ರತೆಯ ಆಳವು, ಯೋಗದಾ ಸತ್ಸಂಗದ ಏಕಾಗ್ರತೆ ಮತ್ತು ಧ್ಯಾನದ ವೈಜ್ಞಾನಿಕ ತಂತ್ರಗಳ ಅಚಲ ಅಭ್ಯಾಸದ ಮೂಲಕ ಸ್ವಾಭಾವಿಕವಾಗಿ ವರ್ಧಿಸುತ್ತದೆ. [ಇವುಗಳನ್ನು ಯೋಗದಾ ಸತ್ಸಂಗ ಪಾಠಗಳಲ್ಲಿ ಕಲಿಸಲಾಗುತ್ತದೆ].

4) ನಿಮ್ಮ ಹೃದಯದ ಭಾಷೆಯಲ್ಲಿ ಭಗವಂತನಲ್ಲಿ ಆಳವಾಗಿ ಪ್ರಾರ್ಥಿಸಿ

Former president of YSS Daya Mata in meditative trance

ನಿಮ್ಮ ಧ್ಯಾನವನ್ನು ಆಳವಾಗಿಸುವ ವಿಧಾನಗಳು

(ಉಧೃತ ಭಾಗ) (5:05 ನಿ)

ಆಧ್ಯಾತ್ಮ ಚಕ್ಷುವಿನ ಬೆಳಕನ್ನು ನೀವು ಕಾಣಿವಿರೋ ಇಲ್ಲವೋ, ಭಗವಂತ ಮತ್ತು ಅವನ ಮಹಾನ್‌ ಸಂತರಲ್ಲಿ ಆಳವಾಗಿ ಪ್ರಾರ್ಥಿಸುತ್ತ, ನಿಮ್ಮ ಗಮನವನ್ನು ಭ್ರೂಮಧ್ಯದಲ್ಲಿರುವ ಕೂಟಸ್ಥ ಕೇಂದ್ರದಲ್ಲಿ ಏಕಾಗ್ರಗೊಳಿಸುವುದನ್ನು ಮುಂದುವರಿಸಬೇಕು. ನಿಮ್ಮ ಹೃದಯದ ಭಾಷೆಯಲ್ಲಿ ಅವರ ಉಪಸ್ಥಿತಿ ಮತ್ತು ಆಶೀರ್ವಾದಗಳನ್ನು ಆಹ್ವಾನಿಸಿ.

ಒಂದು ಒಳ್ಳೆಯ ಅಭ್ಯಾಸವೆಂದರೆ, ಯೋಗದಾ ಸತ್ಸಂಗ ಪಾಠಗಳಿಂದ ಅಥವಾ ಪರಮಹಂಸ ಯೋಗಾನಂದರ ವಿಸ್ಪರ್ಸ್‌ ಫ್ರಮ್‌ ಇಟರ್ನಿಟಿ ಯಿಂದ ಅಥವಾ ಮೆಟಾಫಿಸಿಕಲ್‌ ಮೆಡಿಟೇಷನ್ಸ್‌ ಗಳಿಂದ ಒಂದು ದೃಢೀಕರಣ ಅಥವಾ ಪ್ರಾರ್ಥನೆಯನ್ನು ತೆಗೆದುಕೊಳ್ಳುವುದು, ಮತ್ತು ಅದನ್ನು ನಿಮ್ಮ ಸ್ವಂತ ಭಕ್ತಿಯ ಹಂಬಲದಿಂದ ಆಧ್ಯಾತ್ಮಿಕಗೊಳಿಸುವುದು.

ಭಗವಂತನ ಪ್ರತಿಕ್ರಿಯೆಯು ಶಾಂತತೆ, ಆಳವಾದ ಶಾಂತಿ ಮತ್ತು ಆಂತರಿಕ ಆನಂದವಾಗಿ ಅನುಭವವಾಗುವವರೆಗೆ, ಗಮನವನ್ನು ಭ್ರೂಮಧ್ಯದ ಬಿಂದುವಿನಲ್ಲಿರಿಸಿಕೊಂಡು, ಮೌನವಾಗಿ ಜಪ ಮಾಡಿ ಮತ್ತು ಭಗವಂತನಲ್ಲಿ ಪ್ರಾರ್ಥಿಸಿ.

ಪರಮಹಂಸ ಯೋಗಾನಂದರಿಂದ ಪ್ರಾರ್ಥನೆಗಳು
ಒಂದು ದೃಢೀಕರಣವನ್ನು ಅಭ್ಯಾಸ ಮಾಡಿ

5) ಆಳವಾದ ತಂತ್ರಗಳಿಗೆ ತಯಾರಿಯಾಗಿ ದೈನಂದಿನ ಅಭ್ಯಾಸ

Devotees Meditating in Smriti Mandir, Ranchi

ಧ್ಯಾನದ ಅವಧಿಯು ಬೆಳಿಗ್ಗೆ ಕನಿಷ್ಠ ಮೂವತ್ತು ನಿಮಿಷಗಳು ಮತ್ತು ರಾತ್ರಿ ಕನಿಷ್ಠ ಮೂವತ್ತು ನಿಮಿಷಗಳ ಕಾಲ ಇರಬೇಕು. ಧ್ಯಾನದ ಶಾಂತ ಸ್ಥಿತಿಯನ್ನು ಅನುಭವಿಸುತ್ತ, ಹೆಚ್ಚು ದೀರ್ಘಕಾಲ ಕುಳಿತಷ್ಟೂ, ನೀವು ವೇಗವಾಗಿ ಆಧ್ಯಾತ್ಮಿಕ ಪ್ರಗತಿಯನ್ನು ಹೊಂದುವಿರಿ. ಧ್ಯಾನದಲ್ಲಿ ನೀವು ಅನುಭವಿಸುವ ಶಾಂತತೆಯನ್ನು ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಒಯ್ಯಿರಿ; ನಿಮ್ಮ ಜೀವನದ ಪ್ರತಿಯೊಂದು ವಿಭಾಗದಲ್ಲೂ ಸಾಮರಸ್ಯ ಮತ್ತು ಸಂತೋಷವನ್ನು ತರಲು ಆ ಶಾಂತತೆಯು ನಿಮಗೆ ನೆರವಾಗುತ್ತದೆ.

ಮೇಲೆ ಹೇಳಿದ ಸೂಚನೆಗಳ ದೈನಂದಿನ ಅಭ್ಯಾಸದಿಂದ, ಯೋಗದಾ ಸತ್ಸಂಗ ಪಾಠಗಳಲ್ಲಿ ನೀಡಲಾದ ಏಕಾಗ್ರತೆ ಮತ್ತು ಧ್ಯಾನದ ಆಳವಾದ ತಂತ್ರಗಳ ಅಭ್ಯಾಸಕ್ಕಾಗಿ ನಿಮ್ಮನ್ನು ನೀವು ಸಿದ್ಧಪಡಿಸಿಕೊಳ್ಳಬಹುದು. ಈ ವೈಜ್ಞಾನಿಕ ತಂತ್ರಗಳು ನಿಮಗೆ ಭಗವಂತನ ಉಪಸ್ಥಿತಿಯ ಮಹಾಸಾಗರದಲ್ಲಿ ಹೆಚ್ಚು ಹೆಚ್ಚು ಆಳವಾಗಿ ಧುಮುಕಲು ಸಾಧ್ಯವಾಗಿಸುತ್ತವೆ. ಈ ಕ್ಷಣದಲ್ಲೂ ನಾವೆಲ್ಲರೂ ಆ ಅಮೂರ್ತ ಚೇತನದ ಸಾಗರದಲ್ಲಿ ಇದ್ದೇವೆ; ಆದರೆ ದೃಢವಾದ, ಶ್ರದ್ಧಾಪೂರ್ವಕವಾದ, ವೈಜ್ಞಾನಿಕ ಧ್ಯಾನದಿಂದ ಮಾತ್ರ ನಾವು ಭಗವದಾನಂದದ ವಿಶಾಲವಾದ ಸಾಗರದ ಮೇಲಿನ ಪ್ರತ್ಯೇಕವಾದ ಆತ್ಮದ ಅಲೆಗಳು ಎಂದು ಪ್ರಜ್ಞಾಪೂರ್ವಕವಾಗಿ ಗ್ರಹಿಸಬಹುದು.

ಧ್ಯಾನದಲ್ಲಿ ಆಳವಾಗಿ ಹೋಗಲು ಹೆಚ್ಚಿನ ಸಾಧನಗಳು.

ಪರಮಹಂಸ ಯೋಗಾನಂದರ ಬರಹಗಳಿಂದ:

“ಭಗವಂತನ ಸಾಮ್ರಾಜ್ಯವನ್ನು ಪ್ರವೇಶಿಸುವ ಮೊದಲ ಹೆಜ್ಜೆಯಾಗಿ, ನೇರವಾದ ಬೆನ್ನುಹುರಿಯೊಂದಿಗೆ, ಭಕ್ತನು ಸರಿಯಾದ ಧ್ಯಾನ ಭಂಗಿಯಲ್ಲಿ ಕುಳಿತುಕೊಳ್ಳಬೇಕು ಮತ್ತು ಶರೀರವನ್ನು ಬಿಗಿಗೊಳಿಸಬೇಕು ಮತ್ತು ಸಡಿಲಿಸಬೇಕು — ಏಕೆಂದರೆ ಸಡಿಲಿಕೆಯಿಂದ ಪ್ರಜ್ಞೆಯು ಸ್ನಾಯುಗಳಿಂದ ಬಿಡುಗಡೆಯಾಗುತ್ತದೆ.

Meditation at Sea shore during sunset

“ಯೋಗಿಯು ಸರಿಯಾದ ಆಳವಾದ ಉಸಿರಾಟದಿಂದ ಪ್ರಾರಂಭಿಸುತ್ತಾನೆ, ಉಚ್ಛ್ವಾಸ ಮಾಡುತ್ತ ಇಡೀ ಶರೀರವನ್ನು ಬಿಗಿಗೊಳಿಸುವುದು, ನಿಶ್ವಾಸ ಮಾಡುತ್ತ ಸಡಿಲಿಸುವುದು, ಹೀಗೆ ಹಲವಾರು ಬಾರಿ ಮಾಡುವುದು. ಪ್ರತಿ ನಿಶ್ವಾಸದೊಂದಿಗೆ ಎಲ್ಲಾ ಸ್ನಾಯು ಸಂಬಂಧಿತ ಒತ್ತಡ ಮತ್ತು ಚಲನೆಯನ್ನು ಹೊರದೂಡಬೇಕು, ದೈಹಿಕ ನಿಶ್ಚಲತೆಯ ಸ್ಥಿತಿಯನ್ನು ಸಾಧಿಸುವವರೆಗೆ ಇದನ್ನು ಮಾಡಬೇಕು.

“ನಂತರ, ಏಕಾಗ್ರತೆಯ ತಂತ್ರಗಳಿಂದ, ಚಂಚಲ ಚಲನೆಯನ್ನು ಮನಸ್ಸಿನಿಂದ ತೆಗೆದು ಹಾಕಲಾಗುತ್ತದೆ. ಶರೀರ ಮತ್ತು ಮನಸ್ಸಿನ ಪರಿಪೂರ್ಣ ನಿಶ್ಚಲತೆಯಲ್ಲಿ, ಯೋಗಿಯು ಆತ್ಮದ ಉಪಸ್ಥಿತಿಯ ಅನಿರ್ವಚನೀಯ ಶಾಂತಿಯನ್ನು ಆನಂದಿಸುತ್ತಾನೆ.

“ದೇಹ-ದೇಗುಲದಲ್ಲಿ, ಜೀವವು ಸ್ಥಿತವಾಗಿದೆ; ಮನದಲ್ಲಿ ಪ್ರಕಾಶವು ಸ್ಥಿತವಾಗಿದೆ; ಆತ್ಮದಲ್ಲಿ ಶಾಂತಿಯು ಸ್ಥಿತವಾಗಿದೆ; ಆತ್ಮದೊಳಗೆ ಆಳವಾಗಿ ಹೋದಷ್ಟೂ ಆ ಶಾಂತಿಯು ಹೆಚ್ಚು ಹೆಚ್ಚು ಅನುಭವಕ್ಕೆ ಬರುತ್ತದೆ; ಅದೇ ಅತೀತ ಪ್ರಜ್ಞೆ.

“ಆಳವಾದ ಧ್ಯಾನದಿಂದ ಭಕ್ತನು ಆ ಶಾಂತಿಯ ಅರಿವನ್ನು ವಿಸ್ತರಿಸಿದಾಗ ಮತ್ತು ತನ್ನ ಪ್ರಜ್ಞೆಯು ಅದರೊಂದಿಗೆ ಬ್ರಹ್ಮಾಂಡದಾದ್ಯಂತ ಹರಡುತ್ತಿದೆ ಮತ್ತು ಎಲ್ಲಾ ಜೀವಿಗಳು ಮತ್ತು ಇಡೀ ಸೃಷ್ಟಿ ಆ ಶಾಂತಿಯಲ್ಲಿ ನುಂಗಲ್ಪಟ್ಟಿವೆ, ಎಂದು ಅನುಭವಿಸಿದಾಗ ಅವನು ವಿಶ್ವ ಪ್ರಜ್ಞೆಯನ್ನು ಪ್ರವೇಶಿಸುತ್ತಾನೆ. ಅವನು ಎಲ್ಲೆಡೆ ಆ ಶಾಂತಿಯನ್ನು ಅನುಭವಿಸುತ್ತಾನೆ — ಪುಷ್ಪಗಳಲ್ಲಿ, ಪ್ರತಿಯೊಬ್ಬ ಮಾನವನಲ್ಲಿ, ವಾತಾವರಣದಲ್ಲಿ. ಆ ಶಾಂತಿಯ ಸಾಗರದಲ್ಲಿ ಅವನು ಭೂಮಿ ಮತ್ತು ಎಲ್ಲಾ ಲೋಕಗಳು ನೀರ್ಗುಳ್ಳೆಗಳಂತೆ ತೇಲುತ್ತಿರುವುದನ್ನು ಕಾಣುತ್ತಾನೆ.”

— ಪರಮಹಂಸ ಯೋಗಾನಂದ

ಇದನ್ನು ಹಂಚಿಕೊಳ್ಳಿ