ಧ್ಯಾನ ಮಾಡುವುದು ಹೇಗೆ

meditation posture

ಧ್ಯಾನಕ್ಕಾಗಿ ಸ್ಥಳವನ್ನು ಸಿದ್ಧಪಡಿಸುವುದು

ಧ್ಯಾನದ ಸಮಯದಲ್ಲಿ, ನೀವು ಏಕಾಂತವಾಗಿ ಮತ್ತು ನಿರಾತಂಕವಾಗಿ ಇರಬಹುದಾದ ಮರೆಮಾಚಿದ, ಶಾಂತಿಯುತ ಸ್ಥಳವನ್ನು ಹುಡುಕಿಕೊಳ್ಳಿ. ನಿಮ್ಮ ಧ್ಯಾನದ ಅಭ್ಯಾಸಕ್ಕೆಂದೇ ನಿಮ್ಮ ಸ್ವಂತದ ಪೂಜಾಸ್ಥಾನವನ್ನು ನೋಡಿಕೊಳ್ಳಿ.

ನೇರವಾದ ಕುರ್ಚಿಯ ಮೇಲೆ ಕುಳಿತುಕೊಳ್ಳಿ ಅಥವಾ ದೃಢವಾದ ಮೇಲ್ಮೈ ಮೇಲೆ ಸುಖಾಸನದಲ್ಲಿ ಕುಳಿತುಕೊಳ್ಳಿ — ಅದನ್ನು ಉಣ್ಣೆಯ ಹೊದಿಕೆ ಮತ್ತು/ಅಥವಾ ರೇಷ್ಮೆ ಬಟ್ಟೆಯಿಂದ ಮುಚ್ಚಿ. ಇದು ನೀವು ಕುಳಿತ ಸ್ಥಳವನ್ನು ಭೂಮಿಯ ಸೂಕ್ಷ್ಮ ಪ್ರವಾಹಗಳ ಕೆಳಮುಖ ಎಳೆತದಿಂದ ರಕ್ಷಿಸುತ್ತದೆ.

ಸರಿಯಾದ ಭಂಗಿ

ಪರಿಣಾಮಕಾರಿ ಧ್ಯಾನಕ್ಕಾಗಿ ಭಂಗಿಯನ್ನು ಕುರಿತ ಸೂಚನೆಗಳು

ನೇರವಾದ ಬೆನ್ನುಹುರಿ

ಧ್ಯಾನದ ಮೊದಲ ಅವಶ್ಯಕತೆಗಳಲ್ಲಿ ಒಂದೆಂದರೆ ಸರಿಯಾದ ಭಂಗಿ. ಬೆನ್ನುಮೂಳೆ ನೇರವಾಗಿರಬೇಕು. ಭಕ್ತನು ತನ್ನ ಮನಸ್ಸು ಮತ್ತು ಪ್ರಾಣಶಕ್ತಿಯನ್ನು ಮಿದುಳು-ಮೇರುದಂಡ ಅಕ್ಷದ ಮೂಲಕ ಮಿದುಳಿನಲ್ಲಿನ ಉನ್ನತ ಪ್ರಜ್ಞೆಯ ಕೇಂದ್ರಗಳಿಗೆ ನಿರ್ದೇಶಿಸಲು ಪ್ರಯತ್ನಿಸುತ್ತಿರುವಾಗ, ಅಸಮರ್ಪಕ ಭಂಗಿಯಿಂದ ಉಂಟಾಗುವ ಬೆನ್ನುಮೂಳೆಯ ನರಗಳ ಸಂಕೋಚನ ಅಥವಾ ಒತ್ತುವಿಕೆಯನ್ನು ತಪ್ಪಿಸಬೇಕು..

ನೇರವಾದ ತೋಳಿಲ್ಲದ ಕುರ್ಚಿಯ ಮೇಲೆ ಕುಳಿತುಕೊಳ್ಳಿ

ಕಾಲುಗಳು ಮೆತುವಾಗಿರುವ ವ್ಯಕ್ತಿಗಳು ನೆಲದ ಮೇಲೆ ಅಥವಾ ಗಟ್ಟಿಯಾದ ಹಾಸಿಗೆಯ ಮೇಲೆ ಸುಖಾಸನದಲ್ಲಿ ಧ್ಯಾನ ಮಾಡಬಯಸಬಹುದು.

ಆದರೂ, ಪರಮಹಂಸ ಯೋಗಾನಂದರು ಈ ಕೆಳಗಿನ ಧ್ಯಾನ ಭಂಗಿಯನ್ನು ಶಿಫಾರಸು ಮಾಡಿದ್ದಾರೆ: ನೇರವಾದ ತೋಳುಗಳಿಲ್ಲದ ಕುರ್ಚಿಯ ಮೇಲೆ ಕುಳಿತುಕೊಳ್ಳಿ, ಪಾದಗಳು ನೆಲದ ಮೇಲೆ ಮಟ್ಟಸವಾಗಿರಲಿ. ಬೆನ್ನುಹುರಿಯನ್ನು ನೇರವಾಗಿರಿಸಿಕೊಳ್ಳಿ, ಹೊಟ್ಟೆಯನ್ನು ಒಳಗೆ, ಎದೆಯನ್ನು ಹೊರಗೆ, ಭುಜಗಳನ್ನು ಹಿಂದಕ್ಕೆ, ಗಲ್ಲವನ್ನು ನೆಲಕ್ಕೆ ಸಮಾನಾಂತರವಾಗಿ ಇರಿಸಿಕೊಳ್ಳಿ. ಶರೀರವು ಮುಂದಕ್ಕೆ ಬಾಗುವುದನ್ನು ತಡೆಯಲು, ಅಂಗೈಗಳನ್ನು ಮೇಲ್ಮುಖವಾಗಿಟ್ಟುಕೊಂಡು, ತೊಡೆಗಳು ಹೊಟ್ಟೆಯ ಭಾಗವನ್ನು ಸೇರುವ ಭಾಗದಲ್ಲಿ ಇರಿಸಿ.

ಸರಿಯಾದ ಭಂಗಿಯಲ್ಲಿ ಕುಳಿತರೆ, ಶರೀರವು ಸ್ಥಿರವಾಗಿದ್ದರೂ ಸಡಿಲವಾಗಿರುತ್ತದೆ, ಇದರಿಂದಾಗಿ ಒಂದು ಸ್ನಾಯುವನ್ನೂ ಅಲುಗಿಸದೆ ಸಂಪೂರ್ಣ ಸ್ಥಿರವಾಗಿರಲು ಸಾಧ್ಯವಾಗುತ್ತದೆ.

ಈಗ, ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ ಮತ್ತು ನಿಮ್ಮ ದೃಷ್ಟಿಯನ್ನು ನಿಧಾನವಾಗಿ ಮೇಲಕ್ಕೆತ್ತಿ ಆಯಾಸ ಮಾಡಿಕೊಳ್ಳದೆ ಭ್ರೂಮಧ್ಯದ ಬಿಂದುವಿನಲ್ಲಿರಿಸಿ — ಏಕಾಗ್ರತೆಯ ಸ್ಥಾನ ಮತ್ತು ದಿವ್ಯ ಗ್ರಹಿಕೆಯ ಆಧ್ಯಾತ್ಮಿಕ ಚಕ್ಷು.

ಪರಮಹಂಸ ಯೋಗಾನಂದರ ಬರಹಗಳಿಂದ:

Child Meditating

“ಆರಂಭಿಗ ಯೋಗಿಯು ಧ್ಯಾನ ಮಾಡಲು ಗಟ್ಟಿ ನೆಲದ ಮೇಲೆ ಕುಳಿತರೆ, ಅವನ ಮಾಂಸಖಂಡ ಮತ್ತು ರಕ್ತನಾಳಗಳ ಮೇಲೆ ಒತ್ತಡ ಬೀಳುವುದರಿಂದ ಅವನ ಕಾಲುಗಳು ಮರಗಟ್ಟುತ್ತವೆ. ಅವನು ನೆಲದಲ್ಲಿ ಹಾಸಿಗೆಯ ಮೇಲೆ ಅಥವಾ ಮಂಚದ ಮೇಲೆ ಕಂಬಳಿ ಹಾಸಿಕೊಂಡು ಕುಳಿತರೆ ಅವನ ಕಾಲುಗಳಲ್ಲಿ ತೊಂದರೆ ಉಂಟಾಗುವುದಿಲ್ಲ. ತೊಡೆಗಳನ್ನು ಮುಂಡದೊಂದಿಗೆ ಲಂಬವಾಗಿಟ್ಟುಕೊಂಡು ಕುರ್ಚಿಯ ಮೇಲೆ ಕುಳಿತುಕೊಳ್ಳುವ ಅಭ್ಯಾಸವಿರುವ ಒಬ್ಬ ಪಾಶ್ಚಿಮಾತ್ಯನು, ತನ್ನಡಿಯಲ್ಲಿ ಒಂದು ಕಂಬಳಿ ಮತ್ತು ರೇಷ್ಮೆ ಬಟ್ಟೆಯನ್ನು, ನೆಲದ ಮೇಲಿರಿಸಿಕೊಂಡ ತನ್ನ ಕಾಲಿನಡಿಯವರೆಗೆ ಹಾಸಿಕೊಂಡು ಧ್ಯಾನಕ್ಕೆ ಕುಳಿತುಕೊಳ್ಳುವುದನ್ನು ಹೆಚ್ಚು ಹಿತಕರವೆಂದೆಣಿಸುತ್ತಾನೆ. ಆ ಪಶ್ಚಿಮದ ಯೋಗಿಗಳು, ವಿಶೇಷವಾಗಿ ಯುವಕರು, ಪೌರ್ವಾತ್ಯರಂತೆ ನೆಲದ ಮೇಲೆ ಕುಳಿತುಕೊಳ್ಳಲು ಸಾಧ್ಯವಿರುವವರು, ತಮ್ಮ ಕಾಲುಗಳನ್ನು ಮಡಿಸಲು ಸಾಧ್ಯವಿರುವುದರಿಂದ ತಮ್ಮ ಮಂಡಿಗಳು ಸುಲಭವಾಗಿ ಮಣಿಯುತ್ತವೆ ಎಂಬುದನ್ನು ಮನಗಾಣುತ್ತಾರೆ. ಅಂತಹ ಯೋಗಿಗಳು ಪದ್ಮಾಸನದಲ್ಲಿ ಅಥವಾ ಅದಕ್ಕಿಂತ ಸರಳವಾದ ಸುಖಾಸನದಲ್ಲಿ ಕುಳಿತು ಧ್ಯಾನ ಮಾಡಬಹುದು. 

“ಪದ್ಮಾಸನದಲ್ಲಿ ಆರಾಮವಾಗಿ ಕುಳಿತುಕೊಳ್ಳಲು ಸಾಧ್ಯವಾಗದಿರುವ ಯಾರೂ ಆ ಭಂಗಿಯಲ್ಲಿ ಕುಳಿತು ಧ್ಯಾನ ಮಾಡಲು ಪ್ರಯತ್ನಿಸಬಾರದು. ಪ್ರಯಾಸದ ಭಂಗಿಯಲ್ಲಿ ಕುಳಿತು ಧ್ಯಾನ ಮಾಡುವುದರಿಂದ ಶರೀರದ ಅಸೌಖ್ಯದ ಮೇಲೇ ಮನಸ್ಸು ನೆಟ್ಟಿರುತ್ತದೆ. ಧ್ಯಾನವನ್ನು ಸಾಮಾನ್ಯವಾಗಿ, ಕುಳಿತೇ ಅಭ್ಯಾಸ ಮಾಡಬೇಕು. ನಿಂತ ಭಂಗಿಯಲ್ಲಿ ಮನಸ್ಸು ಅಂತರ್ಮುಖಿಯಾದಾಗ ನಿಸ್ಸಂಶಯವಾಗಿ, ಅವನು ಬಿದ್ದುಹೋಗಬಹುದು. (ಒಬ್ಬನು ಮುಂದುವರಿದಿದ್ದರೆ ಹಾಗಾಗುವುದಿಲ್ಲ) ಯೋಗಿಯು ಮಲಗಿಕೊಂಡು ಧ್ಯಾನ ಮಾಡಬಾರದು, ಏಕೆಂದರೆ ಅವನು “ರೂಢಿಯಾದ” ನಿದ್ರಾಸ್ಥಿತಿಯನ್ನು ಆಶ್ರಯಿಸಬಹುದು.

“ಯೋಗಿಗೆ ತನ್ನ ಮನಸ್ಸನ್ನು ಲೌಕಿಕದಿಂದ ಅಲೌಕಿಕದೆಡೆಗೆ ತಿರುಗಿಸುವುದಕ್ಕೆ ನೆರವಾಗಲು ಶರೀರ ಮತ್ತು ಮನಸ್ಸಿನಲ್ಲಿ ಶಾಂತತೆಯನ್ನು ತರಿಸುವಂತಹ ಸರಿಯಾದ ಶಾರೀರಿಕ ಭಂಗಿಯು ಅವಶ್ಯಕ.”

— ಪರಮಹಂಸ ಯೋಗಾನಂದ, ಗಾಡ್‌ ಟಾಕ್ಸ್‌ ವಿತ್‌ ಅರ್ಜುನ: ದ ಭಗವದ್ಗೀತ

ಇದನ್ನು ಹಂಚಿಕೊಳ್ಳಿ