ಆಧ್ಯಾತ್ಮಿಕ ಮೇರುಕೃತಿಯ ರಚನೆ

Paramahansa Yogananda writing

ಪರಮಹಂಸ ಯೋಗಾನಂದರ ಆತ್ಮಚರಿತ್ರೆಯ ಅಸಂಖ್ಯಾತ ಓದುಗರು ಅದರ ಪುಟಗಳಲ್ಲಿ ಅವರ ವ್ಯಕ್ತಿತ್ವದಿಂದ ಹೊರಹೊಮ್ಮಿದ ಬದಲಾಗದ ಆಧ್ಯಾತ್ಮಿಕ ವರ್ಚಸ್ಸಿನ ಬೆಳಕಿನ ಉಪಸ್ಥಿತಿಯನ್ನು ದೃಢೀಕರಿಸಿದ್ದಾರೆ.

ಎಪ್ಪತ್ತೈದು ವರ್ಷಗಳ ಹಿಂದೆ ಮೊದಲ ಬಾರಿ ಮುದ್ರಣದಲ್ಲಿ ಕಾಣಿಸಿಕೊಂಡಾಗ ಒಂದು ಮೇರುಕೃತಿ ಎಂದು ಪ್ರಶಂಸಿಸಲ್ಪಟ್ಟ ಈ ಪುಸ್ತಕವು ನಿಸ್ಸಂದಿಗ್ಧವಾದ ಶ್ರೇಷ್ಠತೆಯ ಜೀವನಗಾಥೆಯನ್ನು ಮಾತ್ರವಲ್ಲದೆ ಪೂರ್ವದ ಆಧ್ಯಾತ್ಮಿಕ ಚಿಂತನೆಗೆ ಆಕರ್ಷಕ ಪರಿಚಯವನ್ನು ನೀಡುತ್ತದೆ — ವಿಶೇಷವಾಗಿ ಭಗವಂತನೊಂದಿಗೆ ನೇರ ವೈಯಕ್ತಿಕ ಸಂವಹನವುಳ್ಳ ಅದರ ವಿಶಿಷ್ಟ ವಿಜ್ಞಾನ — ಪಾಶ್ಚಿಮಾತ್ಯ ಜನತೆಯಲ್ಲಿ ಇದುವರೆಗೆ ಕೆಲವರಿಗೆ ಮಾತ್ರ ಲಭ್ಯವಿದ್ದ ಜ್ಞಾನದ ಕ್ಷೇತ್ರವನ್ನು ತೆರೆಯುತ್ತದೆ. ಇಂದು, ಯೋಗಿಯ ಆತ್ಮಕಥೆಯು ಪ್ರಪಂಚದಾದ್ಯಂತ ಆಧ್ಯಾತ್ಮಿಕ ಸಾಹಿತ್ಯದ ಮೇರುಕೃತಿಯೆಂದು ಗುರುತಿಸಲ್ಪಟ್ಟಿದೆ.

ಯೋಗಿಯ ಆತ್ಮಕಥೆಯ ಹಿಂದಿನ ಅಸಾಧಾರಣ ಇತಿಹಾಸ

ಈ ಕೃತಿಯ ಬರವಣಿಗೆಯ ಬಗ್ಗೆ ಬಹಳ ಹಿಂದೆಯೇ ಭವಿಷ್ಯ ನುಡಿಯಲಾಗಿತ್ತು. ಆಧುನಿಕ ಕಾಲದಲ್ಲಿ ಯೋಗದ ಪುನರುಜ್ಜೀವನದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾದ ಹತ್ತೊಂಬತ್ತನೇ ಶತಮಾನದ ಪೂಜ್ಯ ಗುರು ಶ್ರೀ ಶ್ರೀ ಲಾಹಿರಿ ಮಹಾಶಯರು ಭವಿಷ್ಯ ನುಡಿದಿದ್ದರು:

‎ ನಾನು ಹೊರಟುಹೋದ ಸುಮಾರು ಐವತ್ತು ವರ್ಷಗಳ ಮೇಲೆ, ಯೋಗದ ಬಗ್ಗೆ ಪಾಶ್ಚಾತ್ಯ ದೇಶಗಳಲ್ಲಿ, ತೀವ್ರವಾದ ಆಸಕ್ತಿಯುಂಟಾಗುವುದರಿಂದ, ನನ್ನ ಜೀವನದ ಪ್ರಸಂಗಗಳನ್ನು ಬರೆಯಲಾಗುತ್ತದೆ. ಯೋಗದ ಸಂದೇಶವು ಭೂಮಂಡಲವನ್ನೆಲ್ಲ ಆವರಿಸುತ್ತದೆ. ಮನುಷ್ಯರ ಭ್ರಾತೃತ್ವವನ್ನು ಸ್ಥಾಪಿಸುವುದಕ್ಕೆ, ಅದರಿಂದ ಸಹಾಯವಾಗುತ್ತದೆ: ಮಾನವರೆಲ್ಲ ಒಬ್ಬನೇ ತಂದೆಯ ಮಕ್ಕಳು ಎಂಬ ನೇರ ಅರಿವಿನಿಂದ ಮೂಡುವ ಒಗ್ಗಟ್ಟು ಅದು.

ಅನೇಕ ವರ್ಷಗಳ ನಂತರ, ಲಾಹಿರಿ ಮಹಾಶಯರ ಮಹಾನ್‌ ಶಿಷ್ಯರಾದ ಸ್ವಾಮಿ ಶ್ರೀ ಶ್ರೀ ಯುಕ್ತೇಶ್ವರರು ಈ ಭವಿಷ್ಯವಾಣಿಯನ್ನು ಶ್ರೀ ಶ್ರೀ ಯೋಗಾನಂದರಿಗೆ ತಿಳಿಸಿದರು. “ಆ ಸಂದೇಶವನ್ನು ಹರಡಲು ಮತ್ತು ಅವರ ಪವಿತ್ರ ಜೀವನವನ್ನು ಕುರಿತು ಬರೆಯಲು ನಿನ್ನ ಪಾಲಿನ ಕೆಲಸವನ್ನು ನೀನು ಮಾಡಬೇಕು,” ಎಂದು ಅವರು ಸ್ಪಷ್ಟಪಡಿಸಿದರು.

ಲಾಹಿರಿ ಮಹಾಶಯರು ಅಗಲಿದ ನಂತರ ಸರಿಯಾಗಿ ಐವತ್ತು ವರ್ಷಗಳ ನಂತರ, 1945ರಲ್ಲಿ ಪರಮಹಂಸ ಯೋಗಾನಂದರು ತಮ್ಮ ಯೋಗಿಯ ಆತ್ಮಕಥೆ (ಆಟೋಬಯಾಗ್ರಫಿ ಆಫ್ ಎ ಯೋಗಿ)ಯನ್ನು ಬರೆದು ಮುಗಿಸುವ ಮೂಲಕ, ತಮ್ಮ ಗುರುಗಳ ಎರಡೂ ಆದೇಶಗಳನ್ನು ಪೂರೈಸಿದರು: ಲಾಹಿರಿ ಮಹಾಶಯರ ಅಸಾಧಾರಣ ಜೀವನವನ್ನು ಪ್ರಪ್ರಥಮವಾಗಿ ಇಂಗ್ಲೀಷಿನಲ್ಲಿ ಸವಿವರವಾಗಿ ವರ್ಣಿಸುವ ಹಾಗೂ ಭಾರತದ ಪುರಾತನ ಆತ್ಮ ವಿಜ್ಞಾನವನ್ನು ಜಗತ್ತಿನ ಓದುಗ ವೃಂದಕ್ಕೆ ಪರಿಚಯಿಸುವ ಮೂಲಕ.

ಹದಿನೈದು ವರ್ಷಗಳ ಪ್ರೀತಿಪೂರ್ವಕ ದುಡಿಮೆ

ಯೋಗಿಯ ಆತ್ಮಕಥೆ (ಆಟೋಬಯಾಗ್ರಫಿ ಆಫ್ ಎ ಯೋಗಿ)ಯ ರಚನೆಗಾಗಿ ಪರಮಹಂಸ ಯೋಗಾನಂದರು ಹಲವಾರು ವರ್ಷಗಳ ಕಾಲ ಶ್ರಮಪಟ್ಟಿದ್ದಾರೆ. ಅವರ ಬಹಳ ಮುಂಚಿನ ಮತ್ತು ಅತ್ಯಂತ ಆಪ್ತ ಶಿಷ್ಯರುಗಳಲ್ಲೊಬ್ಬರಾದ ಶ್ರೀ ದಯಾಮಾತಾ ಹೀಗೆ ನೆನಪಿಸಿಕೊಳ್ಳುತ್ತಾರೆ:

daya-mata-bliss

‎ “ನಾನು 1931ರಲ್ಲಿ ಮೌಂಟ್ ವಾಷಿಂಗ್ಟನ್‌ಗೆ ಬಂದಾಗ ಪರಮಹಂಸಜೀ ತಮ್ಮ ಆತ್ಮಕಥೆಯ ಕೆಲಸವನ್ನು ಆಗಲೇ ಆರಂಭಿಸಿದ್ದರು. ಒಮ್ಮೆ ನಾನು ಅವರ ಅಧ್ಯಯನದ ಕೋಣೆಗೆ ಕಾರ್ಯದರ್ಶಿಯ ಕೆಲಸದ ನಿಮಿತ್ತವಾಗಿ ಹೋಗಿದ್ದಾಗ ನನಗೆ ಅವರು ಬರೆದ ಮೊದಲ ಅಧ್ಯಾಯಗಳಲ್ಲಿ ಒಂದಾದ ‘ಹುಲಿ ಸ್ವಾಮಿ’ ಯನ್ನು ನೋಡುವ ಅವಕಾಶ ಒದಗಿಬಂತು. ಅವರು ನನಗೆ ಅದನ್ನು ಜೋಪಾನವಾಗಿ ಇಡಲು ಹೇಳಿ, ಅದು ತಾನು ಬರೆಯುತ್ತಿರುವ ಪುಸ್ತಕದ ಭಾಗವಾಗಲಿದೆ ಎಂದು ವಿವರಿಸಿದರು. ಪುಸ್ತಕದ ಹೆಚ್ಚಿನ ಭಾಗವನ್ನು ನಂತರ ಅಂದರೆ 1937 ಮತ್ತು 1945ರ ನಡುವೆ ಬರೆಯಲಾಯಿತು.”

1935ರ ಜೂನ್‌ನಿಂದ 1936ರ ಅಕ್ಟೋಬರ್‌ವರೆಗೆ ಶ್ರೀ ಯೋಗಾನಂದರು ತಮ್ಮ ಗುರುಗಳಾದ ಶ್ರೀಯುಕ್ತೇಶ್ವರರನ್ನು ಕೊನೆಯ ಬಾರಿಗೆ ಭೇಟಿ ಮಾಡಲು ಭಾರತದ (ಯುರೋಪ್ ಮತ್ತು ಪ್ಯಾಲೆಸ್ಟೈನ್ ಮಾರ್ಗವಾಗಿ) ಪ್ರವಾಸದಲ್ಲಿದ್ದರು. ಅಲ್ಲಿದ್ದಾಗ ಅವರು ತಮ್ಮ ಆತ್ಮಕಥೆಗಾಗಿ ಬಹಳಷ್ಟು ವಾಸ್ತವ ಸಂಗತಿಗಳನ್ನು ಹಾಗೂ ನಂತರ ತಮ್ಮ ಪುಸ್ತಕದಲ್ಲಿ ಸಂತರ ಜೀವನವನ್ನು ಅತ್ಯಂತ ಅವಿಸ್ಮರಣೀಯವಾಗಿ ವಿವರಿಸಲು, ತಮಗೆ ತಿಳಿದಿದ್ದ ಕೆಲವು ಸಂತರ, ಸನ್ಯಾಸಿಗಳ ಕಥೆಗಳನ್ನು ಸಂಗ್ರಹಿಸಿದರು. 

‎ “ಲಾಹಿರಿ ಮಹಾಶಯರ ಜೀವನವನ್ನು ಕುರಿತು ನಾನು ಬರೆಯಬೇಕೆಂಬ ಶ್ರೀಯುಕ್ತೇಶ್ವರರ ಮನವಿಯನ್ನು ನಾನೆಂದೂ ಮರೆತಿರಲಿಲ್ಲ. ನಾನು ಭಾರತದಲ್ಲಿದ್ದಷ್ಟು ದಿನವೂ ಯೋಗಾವತಾರರ ನೇರ ಶಿಷ್ಯಂದಿರು ಹಾಗೂ ಸಂಬಂಧಿಗಳನ್ನು ಸಂಧಿಸುವ ಅವಕಾಶಗಳನ್ನು ಹುಡುಕುತ್ತಿದ್ದೆ. ಅವರು ಹೇಳಿದ ಮಾತುಗಳನ್ನು ವಿಸ್ತಾರವಾಗಿ ದಾಖಲಿಸಿಕೊಂಡು ಅವುಗಳ ವಾಸ್ತವಾಂಶವನ್ನು, ದಿನಾಂಕಗಳನ್ನು ಪರಿಶೀಲಿಸಿದೆ ಮತ್ತು ಛಾಯಾಚಿತ್ರಗಳನ್ನು, ಹಳೆಯ ಪತ್ರಗಳನ್ನು ಮತ್ತು ದಾಖಲೆಗಳನ್ನು ಸಂಗ್ರಹಿಸಿದೆ.” ಎಂದು ನಂತರ ಅವರು ಬರೆದಿದ್ದಾರೆ.

1936ರ ಕೊನೆಯಲ್ಲಿ ಅಮೆರಿಕಕ್ಕೆ ಹಿಂದಿರುಗಿದ ಮೇಲೆ ಅವರು ತಮ್ಮ ಹೆಚ್ಚಿನ ಸಮಯವನ್ನು, ದಕ್ಷಿಣ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿರುವ ಎನ್ಸಿನಿಟಾಸ್‌ನಲ್ಲಿ ಅವರ ಅನುಪಸ್ಥಿತಿಯಲ್ಲಿ ಕಟ್ಟಲಾಗಿದ್ದ ಆಶ್ರಮದಲ್ಲಿ ಕಳೆಯಲಾರಂಭಿಸಿದರು. ಈ ಆಶ್ರಮವು ಅವರು ಕೆಲವು ವರ್ಷಗಳ ಹಿಂದೆ ಆರಂಭಿಸಿದ ಪುಸ್ತಕವನ್ನು ಬರೆದು ಮುಗಿಸಲು ಅನುಕೂಲಕರವಾದ ತಾಣವಾಗಿತ್ತು.

“ಆ ಶಾಂತ ಕಡಲತಡಿಯ ಆಶ್ರಮದಲ್ಲಿ ಕಳೆದ ದಿನಗಳ ಸ್ಪಷ್ಟ ನೆನಪುಗಳು ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿವೆ” ಎಂದು ಶ್ರೀ ದಯಾ ಮಾತಾ ನೆನಪಿಸಿಕೊಳ್ಳುತ್ತಾರೆ. “ಅವರಿಗೆ ಇನ್ನೂ ಎಷ್ಟೊಂದು ಜವಾಬ್ದಾರಿಗಳು, ಬದ್ಧತೆಗಳು ಇದ್ದುವೆಂದರೆ, ಅವರಿಗೆ ಪ್ರತಿದಿನ ಆತ್ಮಕಥೆಯ ಕೆಲಸವನ್ನು ಮಾಡಲಾಗುತ್ತಿರಲಿಲ್ಲ; ಆದರೆ ಸಾಮಾನ್ಯವಾಗಿ ಸಂಜೆಯ ಸಮಯವನ್ನು ಹಾಗೂ ತಮಗೆ ಸಿಕ್ಕಿದ ಬಿಡುವಿನ ವೇಳೆಯನ್ನೆಲ್ಲಾ ಅದಕ್ಕೇ ಮೀಸಲಾಗಿಟ್ಟಿದ್ದರು.”

ಸುಮಾರು 1939 ರಿಂದ 40ರ ಅವಧಿಯಲ್ಲಿ ಮೊದಲುಗೊಂಡು, ಅವರಿಗೆ ಎಲ್ಲಾ ಸಮಯವನ್ನು ಪುಸ್ತಕದ ಮೇಲೆ ಕೇಂದ್ರೀಕರಿಸಲು ಸಾಧ್ಯವಾಯಿತು, ಎಲ್ಲಾ ಸಮಯ ಅಂದರೆ—ಪ್ರಾತಃಕಾಲದಿಂದ ಪ್ರಾತಃಕಾಲದವರೆಗೆ! ಶಿಷ್ಯರ ಸಣ್ಣ ಗುಂಪು ಅಂದರೆ—ತಾರಾಮಾತಾ; ನನ್ನ ತಂಗಿ ಆನಂದಮಾತಾ;ಶ್ರದ್ಧಾ ಮಾತಾ; ಹಾಗೂ ನಾನು— ಅಲ್ಲಿದ್ದು ಅವರಿಗೆ ನೆರವಾಗುತ್ತಿದ್ದೆವು. ಪ್ರತಿಯೊಂದು ಭಾಗವನ್ನು ಟೈಪ್ ಮಾಡಿದ ನಂತರ, ಅದನ್ನು ತಮಗೆ ಸಂಪಾದಕರಾಗಿ ಕೆಲಸ ಮಾಡುತ್ತಿದ್ದ ತಾರಾಮಾತಾರಿಗೆ ಕೊಡುತ್ತಿದ್ದರು.

“ಎಂತಹ ಅಮೂಲ್ಯ ನೆನಪುಗಳು! ಅವರು ಬರೆಯುತ್ತಾ ತಾವು ದಾಖಲಿಸುತ್ತಿದ್ದ ಪವಿತ್ರ ಅನುಭವಗಳನ್ನು ಆಂತರಿಕವಾಗಿ ಪುನರ್ಜೀವಿಸಿದರು. ಸಂತರು ಹಾಗೂ ಮಹಾತ್ಮರ ಸತ್ಸಂಗದಲ್ಲಿ ಹಾಗೂ ತಮ್ಮದೇ ವೈಯಕ್ತಿಕ ಭಗವದ್ ಸಾಕ್ಷಾತ್ಕಾರದಲ್ಲಿ ಅನುಭವಿಸಿದ ಆನಂದ ಮತ್ತು ಜ್ಞಾನೋದಯಗಳನ್ನು ಹಂಚಿಕೊಳ್ಳುವುದೇ ಅವರ ದಿವ್ಯ ಸಂಕಲ್ಪವಾಗಿತ್ತು. ಹಲವಾರು ಬಾರಿ ಅವರು ಬರೆಯುವುದು ನಿಂತು, ದೃಷ್ಟಿ ಮೇಲೆ ಹೋಗಿ, ದೇಹ ನಿಶ್ಚಲವಾಗಿ, ಭಗವಂತನೊಂದಿಗಿನ ಗಾಢ ಸಂಸರ್ಗದ ಸಮಾಧಿ ಸ್ಥಿತಿಯಲ್ಲಿ ತಲ್ಲೀನರಾಗಿರುತ್ತಿದ್ದರು. ಆಗ ಇಡೀ ಕೋಣೆಯು ದಿವ್ಯ ಪ್ರೇಮದ ಮಹತ್ತರ ಪ್ರಬಲ ಪ್ರಭೆಯಿಂದ ತುಂಬಿರುತ್ತಿತ್ತು. ಶಿಷ್ಯರಾದ ನಾವು ಅಂತಹ ಸಮಯದಲ್ಲಿ ಕೇವಲ ಅಲ್ಲಿರುವುದರ ಮೂಲಕವೇ ಉನ್ನತ ಪ್ರಜ್ಞೆಯ ಸ್ತರಕ್ಕೇರುತ್ತಿದ್ದೆವು.”

“ಅಂತಿಮವಾಗಿ 1945ರಲ್ಲಿ, ಪುಸ್ತಕವನ್ನು ಮುಕ್ತಾಯಗೊಳಿಸುವ ಸಂತೋಷಕರ ದಿನ ಬಂದೇ ಬಿಟ್ಟಿತು. ಪರಮಹಂಸಜೀಯವರು ಕೊನೆಯ ಶಬ್ದಗಳನ್ನು ಹೀಗೆ ಬರೆದರು. ‘ಭಗವಂತ, ನೀನು ಈ ಸನ್ಯಾಸಿಗೆ ದೊಡ್ಡ ಪರಿವಾರವನ್ನೇ ಕೊಟ್ಟಿದ್ದೀಯೆ’; ನಂತರ ಲೇಖನಿಯನ್ನು ಕೆಳಗಿಟ್ಟು ಆನಂದದಿಂದ ಹೀಗೆ ಉದ್ಗರಿಸಿದರು:

“ಎಲ್ಲಾ ಆಯಿತು; ಇದು ಮುಗಿಯಿತು. ಈ ಪುಸ್ತಕವು ಲಕ್ಷಾಂತರ ಜನರ ಬದುಕನ್ನು ಬದಲಿಸುತ್ತದೆ. ನಾನು ಹೋದ ಮೇಲೆ ಇದು ನನ್ನ ಹರಿಕಾರನಾಗಿರುತ್ತದೆ.”

ನಂತರ ಪ್ರಕಾಶಕರನ್ನು ಹುಡುಕುವ ಜವಾಬ್ದಾರಿ ತಾರಾಮಾತಾರದಾಯಿತು. ಪರಮಹಂಸ ಯೋಗಾನಂದರು 1924ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ಸರಣಿ ಉಪನ್ಯಾಸ ಹಾಗೂ ತರಗತಿಗಳನ್ನು ನಡೆಸುತ್ತಿದ್ದಾಗ ತಾರಾಮಾತಾರನ್ನು ಭೇಟಿಯಾದರು. ಅಧ್ಯಾತ್ಮದಲ್ಲಿ ಅಪೂರ್ವ ಸೂಕ್ಷ್ಮದೃಷ್ಟಿಯಿದ್ದ ತಾರಾಮಾತಾರವರು ಅತ್ಯಂತ ಮುಂದುವರಿದ ಶಿಷ್ಯಂದಿರ ಸಣ್ಣ ಸಮೂಹದಲ್ಲಿ ಒಬ್ಬರಾದರು. ಅವರು ಆಕೆಯ ಸಂಪಾದಕೀಯ ಸಾಮರ್ಥ್ಯವನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು ಹಾಗೂ ತಾವು ಇದುವರೆಗೆ ಭೇಟಿಯಾದ ಅತ್ಯಂತ ಪ್ರತಿಭಾನ್ವಿತರಲ್ಲಿ ಆಕೆ ಒಬ್ಬರಾಗಿದ್ದರು ಎಂದು ಹೇಳುತ್ತಿದ್ದರು. 

ಅವರು ಭಾರತದ ಧರ್ಮಗ್ರಂಥಗಳ ಬಗ್ಗೆ ಆಕೆಗಿದ್ದ ಆಳವಾದ ಜ್ಞಾನ ಹಾಗೂ ತಿಳುವಳಿಕೆಯನ್ನು ಪ್ರಶಂಸಿಸುತ್ತಿದ್ದರು. ಹಾಗೂ ಒಂದು ಸಂದರ್ಭದಲ್ಲಿ ಹೀಗೆ ಹೇಳಿದರು: “ನನ್ನ ಮಹಾನ್ ಗುರು ಶ್ರೀಯುಕ್ತೇಶ್ವರರನ್ನು ಹೊರತುಪಡಿಸಿ, ಆಕೆಯೊಂದಿಗಲ್ಲದೆ ಬೇರಿನ್ನಾರೊಡನೆಯೂ ಭಾರತದ ತತ್ವಜ್ಞಾನದ ವಿಷಯದ ಬಗ್ಗೆ ಮಾತನಾಡುವುದನ್ನು ನಾನು ಅಷ್ಟೊಂದು ಆನಂದಿಸಿಲ್ಲ.”

ತಾರಾಮಾತಾರವರು ಹಸ್ತ ಪ್ರತಿಯನ್ನು ನ್ಯೂಯಾರ್ಕ್ ನಗರಕ್ಕೆ ಕೊಂಡೊಯ್ದರು. ಆದರೆ ಪ್ರಕಾಶಕರನ್ನು ಹುಡುಕುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಯಾವಾಗಲೂ ಆಗುವಂತೆ, ಒಂದು ಮಹಾನ್ ಕಾರ್ಯದ ನಿಜವಾದ ಮೌಲ್ಯವನ್ನು ಸಾಂಪ್ರದಾಯಿಕ ಮನೋಭಾವದವರು ಮೊದ ಮೊದಲು ಗುರುತಿಸುವುದಿಲ್ಲ. ಹೊಸದಾಗಿ ಹುಟ್ಟಿದ ಪರಮಾಣು ಯುಗದಿಂದ ಮನುಕುಲದ ಸಮಷ್ಟಿ ಪ್ರಜ್ಞೆಯು ವಿಸ್ತಾರಗೊಂಡು, ವಸ್ತು, ಶಕ್ತಿ ಮತ್ತು ಆಲೋಚನೆಗಳ ಹಿಂದಿದ್ದ ಸೂಕ್ಷ್ಮ ಸಮಗ್ರತೆಯ ಬಗ್ಗೆ ತಿಳಿವಳಿಕೆ ಬೆಳೆಯುತ್ತಿದ್ದರೂ “ಹಿಮಾಲಯದಲ್ಲಿ ಅರಮನೆಯ ಸೃಷ್ಟಿ,” “ಎರಡು ದೇಹಗಳ ಸಂತ,” ಮುಂತಾದ ಅಧ್ಯಾಯಗಳಿಗೆ ಆ ದಿನಗಳಲ್ಲಿದ್ದ ಪ್ರಕಾಶಕರಿನ್ನೂ ಸಿದ್ಧರಾಗಿರಲಿಲ್ಲ!

ಪ್ರಕಟಣಾಲಯಗಳನ್ನು ಸುತ್ತುತ್ತಿದ ತಾರಾ ಮಾತಾರವರು ಒಂದು ವರ್ಷದ ಕಾಲ, ಅಷ್ಟೇನೂ ಸಜ್ಜುಗೊಳಿಸದ ಹಾಗೂ ಅನುತ್ತೇಜಕರ ಶಾಖರಹಿತ ಫ್ಲಾಟ್‌ನಲ್ಲಿ ಉಳಿದುಕೊಂಡಿದ್ದರು. ಕೊನೆಗೂ ಆಕೆಗೆ ಯಶಸ್ಸಿನ ವಾರ್ತೆಯ ತಂತಿಯನ್ನು ಕಳಿಸಲು ಸಾಧ್ಯವಾಯಿತು. ಫಿಲಸಾಫಿಕಲ್ ಲೈಬ್ರರಿ ಎಂಬ ನ್ಯೂಯಾರ್ಕಿನ ಗೌರವಾನ್ವಿತ ಪ್ರಕಾಶಕರು ಆತ್ಮಕಥೆಯ ಪ್ರಕಟಣೆಗೆ ಒಪ್ಪಿಕೊಂಡಿದ್ದರು. “ಈ ಪುಸ್ತಕಕ್ಕಾಗಿ ಆಕೆ ಎಷ್ಟು ಕೆಲಸ ಮಾಡಿದ್ದಾರೆಂಬುದನ್ನು ನನಗೆ ಹೇಳಲು ಸಾಧ್ಯವಿಲ್ಲ…, ಆಕೆಯಿಲ್ಲದಿದ್ದರೆ, ಈ ಪುಸ್ತಕ ಹೊರಬರುತ್ತಿರಲೇ ಇಲ್ಲ” ಎಂದು ಶ್ರೀ ಯೋಗಾನಂದರು ಹೇಳಿದರು.

ಅದ್ಭುತ ಸ್ವಾಗತ

ಓದುಗ ವೃಂದ ಹಾಗೂ ಪತ್ರಿಕಾಲೋಕಗಳು ಪುಸ್ತಕವನ್ನು ಮೆಚ್ಚುಗೆಯ ಸುರಿಮಳೆಯೊಂದಿಗೆ ಸ್ವಾಗತಿಸಿದವು.

“ಇಂಗ್ಲಿಷಿನಲ್ಲಿ ಅಥವಾ ಬೇರಿನ್ನಾವುದೇ ಭಾಷೆಯಲ್ಲಿ ಯೋಗವನ್ನು ಕುರಿತು ಇಂತಹ ನಿರೂಪಣೆಯನ್ನು ಇದುವರೆಗೆ ಬರೆಯಲಾಗಿಲ್ಲ,” ಎಂದು ಕೊಲಂಬಿಯಾ ಯೂನಿವರ್ಸಿಟಿ ಪ್ರೆಸ್ ತನ್ನ ರಿವ್ಯೂ ಆಫ್ ರಿಲಿಜನ್ಸ್‌ನಲ್ಲಿ ಬರೆಯಿತು.

ದ ನ್ಯೂಯಾರ್ಕ್ ಟೈಮ್ಸ್ “ಅಪೂರ್ವ ಕಥನ’ ಎಂದು ಘೋಷಿಸಿತು.
“ಯೋಗಾನಂದರ ಪುಸ್ತಕವನ್ನು ಒಬ್ಬ ವ್ಯಕ್ತಿಯ ಆತ್ಮಕಥೆ ಎನ್ನುವುದಕ್ಕಿಂತ ಒಂದು ಆತ್ಮದ ಕಥೆ ಎಂದು ಹೇಳಬಹುದು….ಕುಶಲತೆಯಿಂದ ಸೊಂಪಾದ ಪೌರ್ವಾತ್ಯ ಶೈಲಿಯಲ್ಲಿ ವಿವರಿಸಲಾದ, ಮನಸೂರೆಗೊಳ್ಳುವ ಹಾಗೂ ಸ್ಪಷ್ಟ ವ್ಯಾಖ್ಯಾನಗಳೊಂದಿಗೆ ಕೂಡಿದ ಧಾರ್ಮಿಕ ಜೀವನ ಕ್ರಮದ ಅಧ್ಯಯನ” ಎಂದು ನ್ಯೂಸ್ ವೀಕ್ ವರದಿ ಮಾಡಿತು.

ಎರಡನೇ ಆವೃತ್ತಿಯನ್ನು ಕ್ಷಿಪ್ರದಲ್ಲೇ ಸಿದ್ಧಪಡಿಸಲಾಯಿತು, ನಂತರ 1951ರಲ್ಲಿ ಮೂರನೆಯದು. ಪಠ್ಯದ ಕೆಲವು ಭಾಗಗಳನ್ನು ತಿದ್ದುವುದು ಮತ್ತು ಪರಿಷ್ಕರಿಸುವುದಷ್ಟೇ ಅಲ್ಲದೆ ಸಂಸ್ಥೆಗೆ ಸಂಬಂಧಪಟ್ಟ, ಆಗ ಚಾಲ್ತಿಯಲ್ಲಿಲ್ಲದ ಕಾರ್ಯಕ್ರಮ ಹಾಗೂ ಯೋಜನೆಗಳೆಂದು ಹಲವು ಭಾಗಗಳನ್ನು ತೆಗೆದು ಹಾಕುವುದಲ್ಲದೆ, ಪರಮಹಂಸ ಯೋಗಾನಂದರು 1940–1951ರ ಅವಧಿಯ ವಿಷಯವನ್ನೊಳಗೊಂಡ, ದೀರ್ಘ ಅಧ್ಯಾಯಗಳಲ್ಲೊಂದಾದ ಕೊನೆಯ ಅಧ್ಯಾಯವನ್ನು ಸೇರಿಸಿದರು.

ಹೊಸ ಅಧ್ಯಾಯದ ಒಂದು ಅಡಿಟಿಪ್ಪಣಿಯಲ್ಲಿ ಅವರು ಬರೆದಿದ್ದಾರೆ, “ಈ ಪುಸ್ತಕದ ಮೂರನೆಯ ಆವೃತ್ತಿಯಲ್ಲಿ (1951) 49ನೆಯ ಅಧ್ಯಾಯದಲ್ಲಿ ಬಹಳಷ್ಟು ಹೊಸ ವಿಷಯಗಳನ್ನು ಸೇರಿಸಲಾಗಿದೆ. ಮೊದಲೆರಡು ಅವೃತ್ತಿಗಳನ್ನು ಓದಿದ ಹಲವಾರು ಓದುಗರ ಕೋರಿಕೆಯ ಮೇರೆಗೆ ಭಾರತ, ಯೋಗ ಮತ್ತು ವೇದಶಾಸ್ತ್ರಗಳನ್ನು ಕುರಿತ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ.”

ಪರಮಹಂಸ ಯೋಗಾನಂದರು ಮಾಡಿದ ಹೆಚ್ಚುವರಿ ತಿದ್ದುಪಡಿಗಳನ್ನು ಏಳನೆಯ ಆವೃತ್ತಿಯಲ್ಲಿ (1956) ಸೇರಿಸಲಾಯಿತು. ಈ ಆವೃತ್ತಿಯ ಪ್ರಕಾಶಕರ ಟಿಪ್ಪಣಿಯಲ್ಲಿ ಅದನ್ನು ವಿವರಿಸಲಾಗಿದೆ. ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ / ಸೆಲ್ಫ್-ರಿಯಲೈಝೇಷನ್‌ ಫೆಲೋಷಿಪ್‌ನ ಎಲ್ಲ ಪ್ರಸಕ್ತ ಆವೃತ್ತಿಗಳು ಪುಸ್ತಕದ ಅಂತಿಮ ಪಠ್ಯಕ್ಕಾಗಿ ಯೋಗಾನಂದರ ಆಶಯಗಳನ್ನು ಒಳಗೊಂಡಿರುತ್ತವೆ.

ಶ್ರೀ ಯೋಗಾನಂದರು 1951ರ ಮುದ್ರಣಕ್ಕಾಗಿ ಬರೆದ ಲೇಖಕರ ಟಿಪ್ಪಣಿಯಲ್ಲಿ ಹೀಗೆ ಬರೆದಿದ್ದಾರೆ, “ಸಾವಿರಾರು ಓದುಗರಿಂದ ಬಂದ ಪತ್ರಗಳಿಂದಾಗಿ ಅತೀವ ಸಂತೋಷವಾಗಿದೆ. ಅವರ ಪ್ರತಿಕ್ರಿಯೆಗಳು ಹಾಗೂ ಪುಸ್ತಕವು ಹಲವಾರು ಭಾಷೆಗಳಿಗೆ ಭಾಷಾಂತರಗೊಂಡಿರುವುದು ಈ ಪುಟಗಳಲ್ಲಿರುವ ಪುರಾತನ ಯೋಗ ವಿಜ್ಞಾನವು ಆಧುನಿಕ ಮಾನವನ ಜೀವನದಲ್ಲಿ ಯಾವುದೇ ಪ್ರತಿಫಲದಾಯಕ ಸ್ಥಾನವನ್ನು ಪಡೆದುಕೊಂಡಿದೆಯೇ ಎಂಬ ಪ್ರಶ್ನೆಗೆ ಪಾಶ್ಚಾತ್ಯ ನಾಗರಿಕತೆಯು ಈ ಪುಟಗಳಲ್ಲಿ ಧನಾತ್ಮಕ ಉತ್ತರವನ್ನು ಪಡೆದಿದೆಯೆಂದು ನಂಬಲು ನನ್ನನ್ನು ಪ್ರೋತ್ಸಾಹಿಸುತ್ತದೆ.”

ಮುಂದುವರಿಯುತ್ತಿರುವ ಪರಂಪರೆ

ವರ್ಷಗಳು ಕಳೆದಂತೆ ಆ ‘ಸಾವಿರಾರು ಓದುಗರು ಲಕ್ಷಾಂತರ ಓದುಗರಾದರು ಮತ್ತು ಯೋಗಿಯ ಆತ್ಮಕಥೆ (ಆಟೋಬಯಾಗ್ರಫಿ ಆಫ್ ಎ ಯೋಗಿ)ಯ ನಿರಂತರ ಹಾಗೂ ಸಾರ್ವತ್ರಿಕ ಆಕರ್ಷಣೆಯು ಹೆಚ್ಚು ಹೆಚ್ಚು ವೇದ್ಯವಾಗುತ್ತಿದೆ. ಮೊದಲ ಮುದ್ರಣವಾಗಿ ಎಪ್ಪತ್ತೈದು ವರ್ಷಗಳು ಕಳೆದಿದ್ದರೂ, ಈ ಪುಸ್ತಕವು ಆಧ್ಯಾತ್ಮಿಕ ಮತ್ತು ಸ್ಫೂರ್ತಿದಾಯಕ ಪುಸ್ತಕಗಳ ಪೈಕಿ ಅತ್ಯಧಿಕ ಮಾರಾಟವಾಗುವ ಪುಸ್ತಕಗಳ ಪಟ್ಟಿಗಳಲ್ಲಿ ಉಳಿದಿದೆ. ಇದೊಂದು ಅಪರೂಪದ ವಿದ್ಯಮಾನ! ಅನೇಕ ಭಾಷೆಗಳಲ್ಲಿ ಲಭ್ಯವಿರುವ ಈ ಪುಸ್ತಕವು ವಿಶ್ವಾದ್ಯಂತ ಅನೇಕ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ, ಪೌರ್ವಾತ್ಯ ತತ್ವಶಾಸ್ತ್ರ ಮತ್ತು ಧರ್ಮಗಳಿಂದಾರಂಭಿಸಿ, ಇಂಗ್ಲಿಷ್ ಸಾಹಿತ್ಯ, ಮನಶ್ಶಾಸ್ತ್ರ, ಸಮಾಜ ಶಾಸ್ತ್ರ, ಮಾನವಶಾಸ್ತ್ರ, ಚರಿತ್ರೆ, ಹಾಗೂ ವಾಣಿಜ್ಯ ವ್ಯವಹಾರ ನಿರ್ವಹಣೆಗಳ ವಿಷಯಗಳ ಅಧ್ಯಯನದಲ್ಲಿಯೂ ಸಹ ಉಪಯೋಗವಾಗುತ್ತಿದೆ. ಶತಮಾನಕ್ಕೂ ಹಿಂದೆ ಲಾಹಿರಿ ಮಹಾಶಯರು ಭವಿಷ್ಯ ನುಡಿದಿದ್ದಂತೆ ಯೋಗ ಮತ್ತು ಅದರ ಪುರಾತನ ಪರಂಪರೆಯಾದ ಧ್ಯಾನದ ಸಂದೇಶವು ಭೂಮಿಯನ್ನು ನಿಜಕ್ಕೂ ಆವರಿಸಿದೆ.
ಈ ಪುಸ್ತಕದ ಅಂತಿಮ ಅಧ್ಯಾಯದಲ್ಲಿ ಪರಮಹಂಸ ಯೋಗಾನಂದರು ವಿಶ್ವಾದ್ಯಂತ ಸಕಲ ಧರ್ಮಗಳ ಸಂತರು ಮತ್ತು ಋಷಿಗಳು ತಲೆ ತಲಾಂತರದಿಂದ ದೃಢೀಕರಿಸಿದ ಗಹನವಾದ ಭರವಸೆಯನ್ನು ಕೊಡುತ್ತಾರೆ:

“ಪರಮಾತ್ಮ ಪ್ರೇಮಮಯೀ; ಆತನ ಸೃಷ್ಟಿಯ ಯೋಜನೆ ಪ್ರೇಮಮೂಲವಾದುದೇ ಆಗಿರಬೇಕು. ಪಾಂಡಿತ್ಯದ ವಿವೇಚನೆಗಿಂತ ಆ ಬಗೆಯ ಸರಳ ಭಾವನೆ ಮಾನವ ಹೃದಯಕ್ಕೆ ನೆಮ್ಮದಿಯನ್ನು ತರಲಾರದೇನು? ಸತ್ಯದ ಹೃದಯವನ್ನು ಭೇದಿಸಿದ ಪ್ರತಿಯೊಬ್ಬ ಸಂತನೂ ವಿಶ್ವಾದ್ಯಂತ ದೈವೀಯೋಜನೆ ಕೆಲಸ ಮಾಡುತ್ತಿದೆಯೆಂದೂ ಹಾಗೂ ಅದು ಅತ್ಯಂತ ಸುಂದರವೂ ಆನಂದಮಯವೂ ಆದುದೆಂದೂ ಪ್ರಮಾಣಪೂರ್ವಕವಾಗಿ ಕಂಡಿದ್ದಾನೆ.”

ಯೋಗಿಯ ಆತ್ಮಕಥೆಯು ತನ್ನ ದ್ವಿತೀಯಾರ್ಧ ಶತಮಾನದಲ್ಲಿ ಮುಂದುವರಿಯುತ್ತಿರುವಂತೆ, ಈ ಸ್ಫೂರ್ತಿದಾಯಕ ಪುಸ್ತಕದ ಎಲ್ಲಾ ಓದುಗರೂ — ಯಾರು ಇದನ್ನು ಮೊದಲ ಬಾರಿಗೆ ಸಂಧಿಸುತ್ತಿರುವರೋ, ಹಾಗೆಯೇ ಯಾರಿಗೆ ಇದು ಜೀವನ ಪಥದಲ್ಲಿ, ಹಳೆಯ, ಆತ್ಮೀಯ ಸಂಗಾತಿಯಾಗಿದೆಯೋ — ಅವರು ಜೀವನದ ತೋರಿಕೆಯ ರಹಸ್ಯಗಳ ಅಂತರಾಳದಲ್ಲಿರುವ ಅಲೌಕಿಕ ಸತ್ಯದೆಡೆ, ತಮ್ಮ ಆತ್ಮಗಳು ಇನ್ನೂ ಹೆಚ್ಚಿನ ಆಳವಾದ ಶ್ರದ್ಧೆಯೊಂದಿಗೆ ತೆರೆಯುವುದನ್ನು ಕಾಣುವರೆಂದು ಆಶಿಸುತ್ತೇವೆ.

ಇದನ್ನು ಹಂಚಿಕೊಳ್ಳಿ