ಪಶ್ಚಿಮದಲ್ಲಿ ಯೋಗ ಪ್ರವರ್ತಕ

ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನ ಫಿಲ್ಹಾರ್ಮೋನಿಕ್ ಆಡಿಟೋರಮ್‌ನಲ್ಲಿ ಯೋಗಾನಂದ ಉಪನ್ಯಾಸ ನೀಡುತ್ತಿದ್ದಾರೆ.

1924 ರಿಂದ 1935 ರವರೆಗೆ, ಯೋಗಾನಂದರು ನ್ಯೂಯಾರ್ಕ್‌ನ ಕಾರ್ನೆಗೀ ಹಾಲ್‌ನಿಂದ ಲಾಸ್ ಏಂಜಲೀಸ್‌ನ ಫಿಲ್‌ಹಾರ್ಮೋನಿಕ್ ಆಡಿಟೋರಿಯಂವರೆಗೆ, ಅಮೆರಿಕದ ಅನೇಕ ದೊಡ್ಡ ಸಭಾಂಗಣಗಳಲ್ಲಿ ಕಿಕ್ಕಿರಿದ ಪ್ರೇಕ್ಷಕರಿಗೆ ಉಪನ್ಯಾಸ ನೀಡುತ್ತ ವ್ಯಾಪಕವಾಗಿ ಪ್ರಯಾಣ ಮಾಡಿದರು. ಲಾಸ್ ಏಂಜಲೀಸ್ ಟೈಮ್ಸ್ ವರದಿ ಮಾಡಿತು: “ಫಿಲ್‌ಹಾರ್ಮೋನಿಕ್ ಆಡಿಟೋರಿಯಮ್‌ನಲ್ಲಿ, 3000 ಆಸನಗಳ ಸಭಾಂಗಣವು ಅದರ ಗರಿಷ್ಠ ಸಾಮರ್ಥ್ಯಕ್ಕೆ ತುಂಬಿ, ಉಪನ್ಯಾಸ ಆರಂಭವಾಗುವ ಒಂದು ಗಂಟೆ ಮೊದಲೇ ಸಾವಿರಾರು ಜನರನ್ನು ಹಿಂತಿರುಗಿ ಕಳಿಸುತ್ತಿರುವ ಅಸಾಧಾರಣ ದೃಶ್ಯ ಕಂಡುಬರುತ್ತಿತ್ತು.”

ಸಾಂಟಾ ರೋಸಾದಲ್ಲಿ ಲೂಥರ್ ಬರ್ಬ್ಯಾಂಕ್ ಅವರೊಂದಿಗೆ ಯೋಗಾನಂದ.

ಯೋಗಾನಂದರು ಪ್ರಪಂಚದ ಶ್ರೇಷ್ಠ ಧರ್ಮಗಳ ಅಂತರ್ನಿಹಿತ ಏಕತೆಯನ್ನು ಒತ್ತಿ ಹೇಳಿದರು ಮತ್ತು ಭಗವಂತನ ನೇರ ವೈಯಕ್ತಿಕ ಅನುಭವವನ್ನು ಪಡೆಯಲು ಸಾರ್ವತ್ರಿಕವಾಗಿ ಅನ್ವಯಿಸುವ ವಿಧಾನಗಳನ್ನು ಕಲಿಸಿದರು. ಅವರ ಬೋಧನೆಗಳ ಶ್ರದ್ಧಾವಂತ ವಿದ್ಯಾರ್ಥಿಗಳಿಗೆ ಅವರು ಕ್ರಿಯಾ ಯೋಗದ ಆತ್ಮ- ಜಾಗೃತಗೊಳಿಸುವ ತಂತ್ರಗಳನ್ನು ಕಲಿಸಿದರು, ಪಶ್ಚಿಮದಲ್ಲಿ ಅವರಿದ್ದ ಮೂವತ್ತು ವರ್ಷಗಳಲ್ಲಿ 100,000 ಕ್ಕೂ ಹೆಚ್ಚು ಪುರುಷರು ಮತ್ತು ಮಹಿಳೆಯರಿಗೆ ದೀಕ್ಷೆಯನ್ನು ನೀಡಿದರು.

ಘನತೆವೆತ್ತ ಎಮಿಲಿಯೊ ಪೋರ್ಟೆಸ್ ಗಿಲ್, ಮೆಕ್ಸಿಕೋ ಅಧ್ಯಕ್ಷ ಮತ್ತು ಶ್ರೀ ಯೋಗಾನಂದ

ಅವರ ವಿದ್ಯಾರ್ಥಿಗಳಾದವರಲ್ಲಿ ತೋಟಗಾರಿಕಾ ತಜ್ಞ ಲೂಥರ್ ಬರ್‌ಬ್ಯಾಂಕ್‌, ತಾರಸ್ಥಾಯಿಯ ಅಪೆರಾ ಗಾಯಕಿ ಅಮೆಲಿಟಾ ಗಲ್ಲಿ-ಕುರ್ಚಿ, ಜಾರ್ಜ್ ಈಸ್ಟ್‌ಮನ್ (ಕೊಡಾಕ್ ಕ್ಯಾಮೆರಾದ ಸಂಶೋಧಕ), ಕವಿ ಎಡ್ವಿನ್ ಮಾರ್ಕಮ್ ಮತ್ತು ಸಿಂಫನಿ ಕಂಡಕ್ಟರ್ ಲಿಯೋಪೋಲ್ಡ್ ಸ್ಟೊಕೊವ್ಸ್ಕಿ ಸೇರಿದಂತೆ ವಿಜ್ಞಾನ, ವ್ಯಾಪಾರ ಮತ್ತು ಕಲಾವಿಭಾಗಗಳ ಅನೇಕ ಪ್ರಮುಖ ವ್ಯಕ್ತಿಗಳಿದ್ದರು. 1927 ರಲ್ಲಿ, ಅಧ್ಯಕ್ಷ ಕ್ಯಾಲ್ವಿನ್ ಕೂಲಿಡ್ಜ್ ಅಧಿಕೃತವಾಗಿ ಅವರನ್ನು ಶ್ವೇತಭವನದಲ್ಲಿ ಬರಮಾಡಿಕೊಂಡರು, ಅವರು ಯೋಗಾನಂದರ ಚಟುವಟಿಕೆಗಳ ಬಗ್ಗೆ ವೃತ್ತಪತ್ರಿಕೆಗಳಲ್ಲಿ ಬಂದ ವರದಿಗಳಲ್ಲಿ ಆಸಕ್ತಿ ತಳೆದಿದ್ದರು.

1929 ರಲ್ಲಿ, ಎರಡು ತಿಂಗಳ ಮೆಕ್ಸಿಕೋ ಪ್ರವಾಸದ ಸಮಯದಲ್ಲಿ, ಲ್ಯಾಟಿನ್ ಅಮೆರಿಕಾದಲ್ಲಿ ತಮ್ಮ ಕಾರ್ಯದ ಭವಿಷ್ಯದ ಬೆಳವಣಿಗೆಗೆ ಬೀಜಗಳನ್ನು ಬಿತ್ತಿದರು. ಅವರನ್ನು ಮೆಕ್ಸಿಕೋದ ಅಧ್ಯಕ್ಷ ಡಾ. ಎಮಿಲಿಯೊ ಪೋರ್ಟಿಸ್ ಗಿಲ್ ಸ್ವಾಗತಿಸಿದರು, ಅವರು ಯೋಗಾನಂದರ ಬೋಧನೆಗಳ ಜೀವಪರ್ಯಂತ ಅಭಿಮಾನಿಯಾದರು.

1930 ರ ದಶಕದ ಮಧ್ಯಭಾಗದಲ್ಲಿ, ಪರಮಹಂಸರು, ಸೆಲ್ಫ್-ರಿಯಲೈಝೇಷನ್‌ ಫೆಲೋಶಿಪ್ ಕಾರ್ಯವನ್ನು ಕಟ್ಟಲು ಸಹಾಯ ಮಾಡಬಹುದಾದ ಮತ್ತು ತಮ್ಮ ಜೀವಿತಾವಧಿಯು ಮುಗಿದ ನಂತರ ಕ್ರಿಯಾ ಯೋಗದ ಪ್ರಚಾರವನ್ನು ಮುಂದಕ್ಕೆ ಕೊಂಡೊಯ್ಯಬಹುದಾದ ಕೆಲವು ಆರಂಭಿಕ ಶಿಷ್ಯರನ್ನು ಕೂಡ ಭೇಟಿಯಾದರು — ಅವರಲ್ಲಿ ಇಬ್ಬರನ್ನು ಸೆಲ್ಫ್-ರಿಯಲೈಝೇಷನ್‌ ಫೆಲೋಷಿಪ್‌ಗೆ ತಮ್ಮ ಆಧ್ಯಾತ್ಮಿಕ ಉತ್ತರಾಧಿಕಾರಿಗಳನ್ನಾಗಿ ನೇಮಿಸಿದರು: ರಾಜರ್ಷಿ ಜನಕಾನಂದ (ಜೇಮ್ಸ್ ಜೆ. ಲಿನ್), ಅವರು 1932 ರಲ್ಲಿ ಕಾನ್ಸಾಸ್ ನಗರದಲ್ಲಿ ಗುರುಗಳನ್ನು ಭೇಟಿಯಾದರು; ಹಾಗೂ ಶ್ರೀ ದಯಾ ಮಾತಾ, ಅವರು ಹಿಂದಿನ ವರ್ಷ ಸಾಲ್ಟ್ ಲೇಕ್ ಸಿಟಿಯಲ್ಲಿ ಅವರ ತರಗತಿಗಳಿಗೆ ಬಂದಿದ್ದರು.

ಗುರು (ಪರಮಹಂಸ ಯೋಗಾನಂದ) ಮತ್ತು ಶಿಷ್ಯ (ಜೇಮ್ಸ್ ಜೆ. ಲಿನ್) ಲಾಸ್ ಏಂಜಲೀಸ್‌ನ YSS-SRF ಇಂಟರ್‌ನ್ಯಾಶನಲ್ ಹೆಡ್‌ಕ್ವಾರ್ಟರ್ಸ್‌ನಲ್ಲಿ ಧ್ಯಾನ ಮಾಡುತ್ತಿದ್ದಾರೆ.

1920 ಮತ್ತು 30 ರ ದಶಕದಲ್ಲಿ ಅವರ ಉಪನ್ಯಾಸ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಮತ್ತು ಎಸ್‌ಆರ್‌ಎಫ್ ಕೆಲಸಕ್ಕೆ ತಮ್ಮ ಜೀವನವನ್ನು ಮುಡಿಪಾಗಿಡಲು ಮುಂದಾದ ಇತರ ಶಿಷ್ಯರೆಂದರೆ ಡಾ. ಮತ್ತು ಶ್ರೀಮತಿ ಎಂ. ಡಬ್ಲ್ಯು. ಲೂಯಿಸ್‌, 1920 ರಲ್ಲಿ ಅವರನ್ನು ಬೋಸ್ಟನ್‌ನಲ್ಲಿ ಭೇಟಿಯಾದರು; ಜ್ಞಾನಮಾತಾ (ಸಿಯಾಟಲ್, 1924); ತಾರಾ ಮಾತಾ (ಸ್ಯಾನ್ ಫ್ರಾನ್ಸಿಸ್ಕೋ, 1924); ದುರ್ಗಾ ಮಾತಾ (ಡೆಟ್ರಾಯಿಟ್, 1929); ಆನಂದ ಮಾತಾ (ಸಾಲ್ಟ್ ಲೇಕ್ ಸಿಟಿ, 1931); ಶ್ರದ್ಧಾ ಮಾತಾ (ಟಕೋಮಾ, 1933); ಮತ್ತು ಶೈಲಸುತ ಮಾತಾ (ಸಾಂತಾ ಬಾರ್ಬರಾ, 1933).

ಹೀಗೆ, ಯೋಗಾನಂದರು ಮಹಾಸಮಾಧಿ ಹೊಂದಿದ ಅನೇಕ ವರ್ಷಗಳ ನಂತರವೂ ಮತ್ತು ಇಂದಿಗೂ, ಪರಮಹಂಸ ಯೋಗಾನಂದರಿಂದ ವೈಯಕ್ತಿಕ ಆಧ್ಯಾತ್ಮಿಕ ತರಬೇತಿಯನ್ನು ಪಡೆದ ಶಿಷ್ಯರಿಂದ ಸೆಲ್ಫ್-ರಿಯಲೈಝೇಷನ್‌ ಫೆಲೋಶಿಪ್ ಮಾರ್ಗದರ್ಶಿಸಲ್ಪಡುತ್ತಿದೆ.

ಪರಮಹಂಸ ಯೋಗಾನಂದ ಮತ್ತು ಫಾಯೆ ರೈಟ್, ಈಗ SRF ಎನ್ಸಿನಿಟಾಸ್ ಹರ್ಮಿಟೇಜ್‌ನಲ್ಲಿ ಶ್ರೀ ದಯಾ ಮಾತಾ

ಯೋಗಾನಂದರ ಬೋಧನಾ ಕಾರ್ಯದ ಆರಂಭಿಕ ವರ್ಷಗಳಲ್ಲಿ ಅವರ ಉಪನ್ಯಾಸಗಳು ಮತ್ತು ತರಗತಿಗಳು ಕೇವಲ ಆಗೊಮ್ಮೆ ಈಗೊಮ್ಮೆ ಮಾತ್ರ ರೆಕಾರ್ಡ್‌ ಆಗುತ್ತಿದ್ದವು. ಆದರೆ 1931ರಲ್ಲಿ ಶ್ರೀ ದಯಾ ಮಾತಾ (ಮುಂದೆ ಇವರು ವಿಶ್ವಾದ್ಯಂತ ಸಂಸ್ಥೆಯ ಅಧ್ಯಕ್ಷರಾದರು) ಅವರು, ಆಶ್ರಮವನ್ನು ಸೇರಿದಾಗ, ಇವರ ಜ್ಞಾನ ಮತ್ತು ಸ್ಫೂರ್ತಿಯನ್ನು ಅವುಗಳ ಮೂಲ ಸತ್ವ ಹಾಗೂ ಪರಿಪೂರ್ಣತೆಯನ್ನು ಉಳಿಸಿಕೊಂಡು ಮುಂಬರುವ ಪೀಳಿಗೆಗಳಿಗಾಗಿ ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ಗೆ ಪ್ರಕಟಿಸಲು ಅನುವಾಗುವಂತೆ, ಯೋಗಾನಂದರ ನೂರಾರು ಉಪನ್ಯಾಸಗಳು, ತರಗತಿಗಳು ಹಾಗೂ ಅನೌಪಚಾರಿಕ ಮಾತುಕತೆಗಳನ್ನು ನಿಷ್ಠೆಯಿಂದ ರೆಕಾರ್ಡ್‌ ಮಾಡುವ ಪವಿತ್ರ ಕಾರ್ಯವನ್ನು ಕೈಗೆತ್ತಿಕೊಂಡರು.

ಇದನ್ನು ಹಂಚಿಕೊಳ್ಳಿ