“ಏಸುವಿಗೆ ಹಾಗೂ ಭಾರತದ ಯೋಗಿಗಳು ಹಾಗೂ ಋಷಿಗಳಿಗೆ ಸಹಸ್ರಾಬ್ಧಿಯಿಂದ ತಿಳಿದಿದ್ದ ಧ್ಯಾನದ ಖಚಿತ ವಿಜ್ಞಾನದಿಂದ, ಭಗವಂತನನ್ನು ಅನ್ವೇಷಿಸುವ ಯಾರೇ ಆದರೂ ಭಗವಂತನ ಸರ್ವವ್ಯಾಪಿ ಪ್ರಜ್ಞೆಯನ್ನು ತನ್ನೊಳಗೆ ಸ್ವೀಕರಿಸಲು ಅವರ ಪ್ರಜ್ಞೆಯ ಸಾಮರ್ಥ್ಯವನ್ನು ಸರ್ವಜ್ಞತೆಯೆಡೆಗೆ ವಿಸ್ತರಿಸಿಕೊಳ್ಳಬಹುದು.”
— ಪರಮಹಂಸ ಯೋಗಾನಂದ
ಪರಿಜ್ಞಾನ, ಸೃಜನಶೀಲತೆ, ಸುರಕ್ಷತೆ, ಆನಂದ, ನಿರುಪಾಧಿಕ ಪ್ರೇಮ — ನಮಗೆ ನಿಜವಾದ ಹಾಗೂ ಅಂತ್ಯವಿಲ್ಲದ ಆನಂದವನ್ನು ತರುವಂಥದ್ದನ್ನು ಕಂಡುಕೊಳ್ಳುವುದು ನಿಜವಾಗಿಯೂ ಸಾಧ್ಯವಿದೆಯೇ?
ನಮ್ಮ ಅಂತರಾತ್ಮದೊಳಗೆ ದಿವ್ಯತೆಯನ್ನು ಅನುಭವಿಸುವುದು, ದಿವ್ಯಾನಂದವನ್ನು ನಮ್ಮ ಸ್ವಾನಂದವೆಂದು ಹಕ್ಕೊತ್ತಾಯ ಮಾಡುವುದು — ಇದನ್ನೇ ಪರಮಹಂಸ ಯೋಗಾನಂದರ ಕ್ರಿಯಾ ಯೋಗದ ಬೋಧನೆಗಳನ್ನು ನಮ್ಮ ಪ್ರತಿಯೊಬ್ಬರಿಗೂ ನೀಡುತ್ತದೆ.
ಕ್ರಿಯಾ ಯೋಗದ ಪವಿತ್ರ ವಿಜ್ಞಾನ, ಧ್ಯಾನದ ಉನ್ನತ ತಂತ್ರಗಳನ್ನು ಒಳಗೊಂಡಿದೆ. ಅವುಗಳ ಶ್ರದ್ಧಾಪೂರ್ವಕ ಅಭ್ಯಾಸವು, ಭಗವಂತನ ಸಾಕ್ಷಾತ್ಕಾರದತ್ತ ಮತ್ತು ಆತ್ಮವನ್ನು ಬಂಧನದ ಎಲ್ಲ ರೂಪಗಳಿಂದ ಮುಕ್ತ ಮಾಡುವತ್ತ ಕರೆದೊಯುತ್ತದೆ. ಇದು ಯೋಗದ ರಾಜೋಚಿತ ಅಥವಾ ಅತ್ಯುನ್ನತ ತಂತ್ರ, ದಿವ್ಯ ಸಂಸರ್ಗ. (ಓದಿ “ನಿಜವಾಗಿಯೂ, ಯೋಗವೆಂದರೇನು?”)
ಕ್ರಿಯಾ ಯೋಗದ ಇತಿಹಾಸ
ಕ್ರಿಯಾ ಯೋಗದ ಆಧ್ಯಾತ್ಮಿಕ ವಿಜ್ಞಾನವನ್ನು ಭಾರತದ ಜ್ಞಾನೋದಯ ಹೊಂದಿದ ಋಷಿಗಳು ಬಹಳ ಹಿಂದೆಯೇ ಪ್ರಕಾಶಪಡಿಸಿದರು. ಇದನ್ನು ಭಗವಾನ್ ಕೃಷ್ಣ ಭಗವದ್ಗೀತೆಯಲ್ಲಿ ಮೆಚ್ಚಿ ಕೊಂಡಾಡಿದ್ದಾನೆ. ಮಹರ್ಷಿ ಪತಂಜಲಿ ತನ್ನ ಯೋಗ ಸೂತ್ರಗಳಲ್ಲಿ ಇದರ ಬಗ್ಗೆ ಹೇಳಿದ್ದಾನೆ. ಧ್ಯಾನದ ಈ ಪ್ರಾಚೀನ ವಿಧಾನ ಏಸು ಕ್ರಿಸ್ತನಿಗೆ, ಹಾಗೂ ಅವನ ಶಿಷ್ಯರಾದ ಸೇಂಟ್ ಜಾನ್, ಸೇಂಟ್ ಪಾಲ್ ಹಾಗೂ ಇತರರಿಗೆ ತಿಳಿದಿತ್ತು ಎಂದು ಪರಮಹಂಸ ಯೋಗಾನಂದರು ಹೇಳಿದ್ದಾರೆ.
ಅಂಧಕಾರ ಯುಗಗಳಲ್ಲಿ ಕ್ರಿಯಾ ಯೋಗವು ಕಣ್ಮರೆಯಾಗಿತ್ತು. ಮಹಾವತಾರ್ ಬಾಬಾಜಿಯವರು ಇದನ್ನು ಆಧುನಿಕ ಯುಗಕ್ಕೆ ಮತ್ತೆ ಪರಿಚಯಿಸಿದರು. ನಮ್ಮ ಕಾಲದಲ್ಲಿ ಇದನ್ನು ಅವರ ಶಿಷ್ಯರಾದ ಲಾಹಿರಿ ಮಹಾಶಯರು (1828–1895) ಇದನ್ನು ಮುಕ್ತವಾಗಿ ಬೋಧಿಸಿದ ಮೊದಲಿಗರು. ನಂತರ, ಬಾಬಾಜಿಯವರು ಲಾಹಿರಿ ಮಹಾಶಯರ ಶಿಷ್ಯರಾದ ಸ್ವಾಮಿ ಶ್ರೀ ಯುಕ್ತೇಶ್ವರ ಗಿರಿ (1855–1936) ಯವರಿಗೆ ಪರಮಹಂಸ ಯೋಗಾನಂದರಿಗೆ ತರಬೇತಿ ನೀಡಿ ಈ ಆತ್ಮೋದ್ಧಾರದ ತಂತ್ರವನ್ನು ಪ್ರಪಂಚಕ್ಕೆ ನೀಡಲು ಅವರನ್ನು ಪಶ್ಚಿಮಕ್ಕೆ ಕಳಿಸಿ ಎಂದು ಹೇಳಿದರು.
ಪ್ರಪಂಚದಾದ್ಯಂತ ಇರುವ ಅನ್ವೇಷಕರಿಗೆ ಕ್ರಿಯಾ ಯೋಗದ ಪುರಾತನ ವಿಜ್ಞಾನವನ್ನು ತಿಳಿಯಪಡಿಸಲು ಪರಮಹಂಸ ಯೋಗಾನಂದರ ಪೂಜ್ಯ ಗುರುಗಳು ಅವರನ್ನು ಆಯ್ಕೆ ಮಾಡಿದರು. ಈ ಉದ್ದೇಶಕ್ಕಾಗಿಯೇ ಅವರು 1917ರಲ್ಲಿ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಹಾಗೂ 1920ರಲ್ಲಿ ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್ ಅನ್ನು ಆರಂಭಿಸಿದರು.
ಹಿಂದೆ ಕೇವಲ ಐಹಿಕ ಲೋಕವನ್ನು ತೊರೆದ ಮತ್ತು ಸಂನ್ಯಾಸಿಗಳಾಗಿ ಏಕಾಂತ ಜೀವನವನ್ನು ನಡೆಸುತ್ತಿದ್ದ ಕೆಲವರಿಗೆ ಮಾತ್ರ ಸೀಮಿತವಾಗಿದ್ದ ಪುರಾತನ ಕ್ರಿಯಾ ಯೋಗ ವಿಜ್ಞಾನವನ್ನು ಭಾರತದ ಮಹಾನ್ ಮಹಿಮರು ಪರಮಹಂಸ ಯೋಗಾನಂದರ ಹಾಗೂ ಅವರು ಸ್ಥಾಪಿಸಿದ (ವೈಎಸ್ಎಸ್/ಎಸ್ಆರ್ಎಫ್) ಆಧ್ಯಾತ್ಮಿಕ ಸಂಸ್ಥೆಗಳ ಮೂಲಕ ಪ್ರಪಂಚದಾದ್ಯಂತ ಇರುವ ಅನ್ವೇಷಕರಿಗೆ ಲಭಿಸುವಂತೆ ಮಾಡಿದ್ದಾರೆ.
ಯೋಗಾನಂದರು ಹೀಗೆ ಬರೆದಿದ್ದಾರೆ: “1920ರಲ್ಲಿ ನಾನು ಅಮೆರಿಕಕ್ಕೆ ಬರುವ ಮುನ್ನ ತಮ್ಮ ಆಶೀರ್ವಾದಗಳನ್ನು ನೀಡುತ್ತಾ ಮಹಾವತಾರ್ ಬಾಬಾಜಿ ಹೇಳಿದರು ‘ಪಶ್ಚಿಮದಲ್ಲಿ ಕ್ರಿಯಾ ಯೋಗದ ಸಂದೇಶವನ್ನು ಪ್ರಸಾರ ಮಾಡಲು ನಿನ್ನನ್ನೇ ನಾನು ಆಯ್ಕೆ ಮಾಡಿರುವುದು. ಬಹಳ ಹಿಂದೆಯೇ ಕುಂಭ ಮೇಳದಲ್ಲಿ ನಾನು ನಿನ್ನ ಗುರು ಯುಕ್ತೇಶ್ವರರನ್ನು ಭೇಟಿಯಾಗಿದ್ದೆ. ತರಬೇತಿಗಾಗಿ ನಿನ್ನನ್ನು ಆತನ ಬಳಿಗೆ ಕಳಿಸುವೆನೆಂದು ಆಗ ಆತನಿಗೆ ಹೇಳಿದ್ದೆ.’ ಆಗ ಬಾಬಾಜಿ ಭವಿಷ್ಯವನ್ನು ನುಡಿದಿದ್ದರು: ‘ದೈವಾನುಭೂತಿಯ ವೈಜ್ಞಾನಿಕ ತಂತ್ರವಾದ ಕ್ರಿಯಾ ಯೋಗವು ನಿರ್ಣಾಯಕವಾಗಿ ಎಲ್ಲ ದೇಶಗಳಿಗೂ ಹರಡಿ ಮಾನವನ ವೈಯಕ್ತಿಕವಾದ ಅನಾದ್ಯನಂತ ಪರಮಾತ್ಮನ ಇಂದ್ರಿಯಾನುಭೂತಿಯ ಮೂಲಕ ದೇಶ ದೇಶಗಳ ನಡುವೆ ಸೌಹಾರ್ದ ಬೆಳೆಯಲು ನೆರವಾಗುತ್ತದೆ.’ ”
ಕ್ರಿಯಾ ಯೋಗ ವಿಜ್ಞಾನ
ಯೋಗದ ಮೂಲ ಉದ್ದೇಶದ, ಶೀಘ್ರ ಹಾಗೂ ಅತಿಶಯ ಪರಿಣಾಮಕಾರಿ ಅನುಸಂಧಾನವು, ಚೈತನ್ಯ ಹಾಗೂ ಪ್ರಜ್ಞೆಯೊಂದಿಗೆ ನೇರವಾಗಿ ವ್ಯವಹರಿಸುವ ಧ್ಯಾನದ ಮಾರ್ಗಗಳನ್ನು ಬಳಸಿಕೊಳ್ಳುತ್ತದೆ. ಈ ನೇರ ಬಳಿ ಸಾರುವಿಕೆಯೇ ಪರಮಹಂಸ ಯೋಗಾನಂದರು ಬೋಧಿಸಿರುವ ಧ್ಯಾನದ ವಿಶಿಷ್ಠ ಪದ್ಧತಿಯ ಸ್ವರೂಪವನ್ನು ನಿರೂಪಿಸುತ್ತದೆ. ಕ್ರಿಯಾ ಯೋಗವು ರಾಜ ಯೋಗದ ಒಂದು ಉನ್ನತ ತಂತ್ರ. ಅದು ಹೃದಯ ಹಾಗೂ ಶ್ವಾಸಕೋಶಗಳ ಸಹಜ ಕ್ರಿಯೆಗಳನ್ನು ನಿಧಾನ ಮಾಡುತ್ತಾ ಶರೀರದಲ್ಲಿ ಪ್ರಾಣ ಶಕ್ತಿಯ ಸೂಕ್ಷ್ಮ ಹರಿವನ್ನು ಬಲಪಡಿಸುತ್ತದೆ ಮತ್ತು ಪುನಶ್ಚೈತನ್ಯಗೊಳಿಸುತ್ತದೆ. ತತ್ಪರಿಣಾಮವಾಗಿ, ಹಂತ ಹಂತವಾಗಿ ಒಂದು ಆಂತರಿಕ ಜಾಗೃತಿಯನ್ನು ಮೂಡಿಸುತ್ತಾ, ಮನಸ್ಸು ಅಥವಾ ಇಂದ್ರಿಯಗಳು ಅಥವಾ ಸಾಧಾರಣ ಮನುಷ್ಯನ ಭಾವೋದ್ವೇಗಗಳು ನೀಡುವುದಕ್ಕಿಂತ ಹೆಚ್ಚಾದ ಹೆಚ್ಚು ಆನಂದಮಯ ಹಾಗೂ ಹೆಚ್ಚು ಗಾಢವಾದ ಸಂತೃಪ್ತಿಯ ಅನುಭವವನ್ನು ತರುತ್ತದೆ. ಮಾನವನ ಶರೀರವು ನಾಶವಾಗುವಂಥದ್ದಲ್ಲ, ಬದಲಾಗಿ ಒಂದು ಜೀವಂತ ಆತ್ಮ ಎಂದು ಎಲ್ಲ ಸದ್ಗ್ರಂಥಗಳೂ ಘೋಷಿಸುತ್ತವೆ. ಈ ಗ್ರಾಂಥಿಕ ಸತ್ಯದ ಸಿಂಧುತ್ವಕ್ಕೆ ಕ್ರಿಯಾ ಯೋಗದ ಪುರಾತನ ವಿಜ್ಞಾನವು ಒಂದು ಮಾರ್ಗವನ್ನು ತೋರಿಸುತ್ತದೆ. ಕ್ರಿಯಾ ಯೋಗ ವಿಜ್ಞಾನದ ಶ್ರದ್ಧಾಪೂರ್ಣ ಅಭ್ಯಾಸದ ಖಚಿತವಾದ ಹಾಗೂ ಕ್ರಮಬದ್ಧ ಪರಿಣಾಮವನ್ನು ಸಂಬೋಧಿಸುತ್ತಾ ಪರಮಹಂಸ ಯೋಗಾನಂದರು ಹೀಗೆ ಉದ್ಘೋಷಿಸಿದ್ದಾರೆ: “ಇದು ಗಣಿತದ ರೀತಿಯಲ್ಲಿ ಕೆಲಸ ಮಾಡುತ್ತದೆ; ಇದು ವಿಫಲವಾಗುವ ಸಾಧ್ಯತೆಯೇ ಇಲ್ಲ.”
ಕ್ರಿಯಾ ಯೋಗ ಮಾರ್ಗದ ಧ್ಯಾನದ ತಂತ್ರಗಳು
‘ತನ್ನ ಕೊಡಗೈಯಿಂದ ಅವರಿಗೆ ಕೊಡಲು ಭಗವಂತನು ಸ್ವಸಂತೋಷದಿಂದಿರುವ ಹೃದಯಗಳನ್ನು ಅರಸುತ್ತಾನೆ….ʼ ಇದು ಎಷ್ಟು ಸುಂದರವಾಗಿದೆ, ಇದನ್ನೇ ನಾನು ನಂಬುವುದು. ತನ್ನ ಉಡುಗೊರೆಗಳನ್ನು ಕೊಡಲು ಭಗವಂತನು ಸ್ವಸಂತೋಷದಿಂದಿರುವ ಹೃದಯಗಳನ್ನು ಅರಸುತ್ತಾನೆ. ಅವನು ನಮಗೆ ಎಲ್ಲವನ್ನೂ ನೀಡಲು ಬಯಸುತ್ತಾನೆ, ಆದರೆ ಅದನ್ನು ಸ್ವೀಕರಿಸಲು ನಾವು ಶ್ರಮಪಡಲು ಬಯಸುವುದಿಲ್ಲ.”
ಪರಮಹಂಸ ಯೋಗಾನಂದರು ತಮ್ಮ ಯೋಗಿಯ ಆತ್ಮಕಥೆಯಲ್ಲಿ ಕ್ರಿಯಾ ಯೋಗದ ವಿವರಣೆಯನ್ನು ಕೊಟ್ಟಿದ್ದಾರೆ. ಪ್ರತ್ಯಕ್ಷ ತಂತ್ರವನ್ನು ಯೋಗದಾ ಸತ್ಸಂಗ ಪಾಠಮಾಲಿಕೆಗಳ ಶಿಷ್ಯರಿಗೆ, ಪ್ರಾಥಮಿಕ ಅವಧಿಯ ಅಧ್ಯಯನ ಹಾಗೂ ಪರಮಹಂಸ ಯೋಗಾನಂದರು ಬೋಧಿಸಿರುವ ಮೂರು ಪ್ರಾಥಮಿಕ ತಂತ್ರಗಳ ಅಭ್ಯಾಸದ ನಂತರ ಕೊಡಲಾಗುತ್ತದೆ.
ಒಂದು ಸಮಗ್ರ ವ್ಯವಸ್ಥೆ ಎಂದು ಪರಿಗಣಿಸಿದಾಗ, ಈ ಧ್ಯಾನದ ತಂತ್ರಗಳು ಒಬ್ಬ ಅಭ್ಯಾಸಿಗನಿಗೆ ಪುರಾತನ ಯೋಗ ವಿಜ್ಞಾನದ ದಿವ್ಯ ಉದ್ದೇಶದ ಅತ್ಯುನ್ನತ ಪ್ರಯೋಜನಗಳನ್ನು ಸಿದ್ಧಿಸಿಕೊಳ್ಳಲು ಸಾಧ್ಯವಾಗಿಸುತ್ತದೆ.
1. ಚೈತನ್ಯದಾಯಕ ವ್ಯಾಯಾಮಗಳು
1916ರಲ್ಲಿ ಪರಮಹಂಸ ಯೋಗಾನಂದರು ಸಿದ್ಧಪಡಿಸಿದ ಶರೀರವನ್ನು ಧ್ಯಾನಕ್ಕೆ ಸಿದ್ಧಮಾಡಲು ಬೇಕಾದ ಮನೋಶಾರೀರಿಕ ವ್ಯಾಯಾಮಗಳ ಸರಣಿ. ನಿಯತ ಅಭ್ಯಾಸವು ಮಾನಸಿಕ ಹಾಗೂ ಶಾರೀರಿಕ ಸಾಂತ್ವನವನ್ನು ನೀಡುತ್ತದೆ ಮತ್ತು ಕ್ರಿಯಾಶೀಲ ಸಂಕಲ್ಪ ಶಕ್ತಿಯನ್ನು ಹೆಚ್ಚಿಸುತ್ತದೆ. ಉಸಿರಾಟ, ಪ್ರಾಣ ಶಕ್ತಿ ಹಾಗೂ ಏಕಾಗ್ರ ಗಮನವನ್ನು ಉಪಯೋಗಿಸುತ್ತ ಈ ತಂತ್ರವು ಒಬ್ಬರಿಗೆ ವ್ಯವಸ್ಥಿತವಾಗಿ ತಮ್ಮ ಶರೀರದ ಎಲ್ಲ ಭಾಗಗಳನ್ನು ಶುದ್ಧಗೊಳಿಸುತ್ತ ಮತ್ತು ಸುಸ್ಥಿರಗೊಳಿಸುತ್ತ, ಅವರ ಅಪಾರ ಶಕ್ತಿಯನ್ನು ಶರೀರದೊಳಗೆ ಪ್ರಜ್ಞಾಪೂರ್ವಕವಾಗಿ ಸೆಳೆಯಲು ಸಹಾಯ ಮಾಡುತ್ತದೆ. ಮಾಡಲು ಸುಮಾರು 15 ನಿಮಿಷ ತೆಗೆದುಕೊಳ್ಳುವ ಚೈತನ್ಯದಾಯಕ ವ್ಯಾಯಾಮಗಳು ಉದ್ವೇಗ ಮತ್ತು ನರಗಳ ಒತ್ತಡವನ್ನು ನಿರ್ಮೂಲನ ಮಾಡಲು ಬಹಳ ಪರಿಣಾಮಕಾರಿಯಾದ ತಂತ್ರಗಳು. ಧ್ಯಾನಪೂರ್ವದಲ್ಲಿ ಇವುಗಳ ಅಭ್ಯಾಸ ಮಾಡುವುದು, ಜಾಗೃತಿಯ ಒಂದು ಶಾಂತ ಹಾಗೂ ಆಂತರೀಕರಿಸಿದ ಸ್ಥಿತಿಯನ್ನು ಪ್ರವೇಶಿಸುವುದಕ್ಕೆ ಹೆಚ್ಚು ಸಹಾಯಕವಾಗಿರುತ್ತದೆ.
2. ಏಕಾಗ್ರತೆಯ ಹಾಂಗ್-ಸಾ ತಂತ್ರ
ಏಕಾಗ್ರತೆಯ ಹಾಂಗ್-ಸಾ ತಂತ್ರವು ಒಬ್ಬರ ಏಕಾಗ್ರತೆಯ ಅಂತಸ್ಥ ಶಕ್ತಿಗಳನ್ನು ವೃದ್ಧಿಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಈ ತಂತ್ರದ ಅಭ್ಯಾಸದ ಮೂಲಕ ಒಬ್ಬರು ಬಾಹ್ಯ ಅಡಚಣೆಗಳಿಂದ ಚಿಂತನೆ ಮತ್ತು ಶಕ್ತಿಯನ್ನು ಹಿಂತೆಗೆದುಕೊಂಡು, ಯಾವುದೇ ಉದ್ದೇಶವನ್ನು ಸಾಧಿಸುವ ಅಥವಾ ಸಮಸ್ಯೆಯನ್ನು ಬಗೆಹರಿಸುವುದರ ಮೇಲೆ ಕೇಂದ್ರೀಕರಿಸುವುದನ್ನು ಕಲಿಯುತ್ತಾರೆ. ಅಥವಾ ಆ ಏಕಾಗ್ರಿತ ಗಮನವನ್ನು ಆಂತರ್ಯದಲ್ಲಿ ದಿವ್ಯ ಪ್ರಜ್ಞೆಯನ್ನೂ ಸಾಕ್ಷಾತ್ಕಾರ ಮಾಡಿಕೊಳ್ಳುವತ್ತ ನಿರ್ದೇಶಿಸುತ್ತಾರೆ.
ಭಗವಾನ್ ಕೃಷ್ಣ ಮತ್ತು ಕ್ರಿಯಾ ಯೋಗ
ಪರಮಹಂಸ ಯೋಗಾನಂದರ ಜೀವಿತೋದ್ದೇಶದ ಮುಖ್ಯವಾದ ಗುರಿಗಳಲ್ಲೊಂದೆಂದರೆ, “ಭಗವದ್ಗೀತೆಯಲ್ಲಿ ಭಗವಾನ್ ಕೃಷ್ಣ ಹೇಳಿದ ಹಾಗೂ ಮೂಲ ಕ್ರೈಸ್ತಧರ್ಮದಲ್ಲಿ ಏಸು ಕ್ರಿಸ್ತನು ಹೇಳಿರುವ ಮೂಲ ಯೋಗದ ಸಂಪೂರ್ಣ ಸಾಮರಸ್ಯ ಹಾಗೂ ಮೂಲ ಏಕತೆಯನ್ನು ಪ್ರಕಟಪಡಿಸುವುದು ಮತ್ತು ಈ ಸತ್ಯತೆಯ ಸಿದ್ಧಾಂತಗಳು ಎಲ್ಲ ಧರ್ಮಗಳ ಮೂಲ ವೈಜ್ಞಾನಿಕ ತಳಹದಿ ಎಂದು ತೋರಿಸುವುದು.” “ಇತರ ಭಕ್ತರು ಪ್ರಾಣದ ಉಚ್ಛ್ವಾಸದ ಗಾಳಿಯನ್ನು ಅಪಾನದ ನಿಶ್ವಾಸದ ಗಾಳಿಗರ್ಪಿಸಿ, ಅಪಾನದ ನಿಶ್ವಾಸದ ಗಾಳಿಯನ್ನು ಪ್ರಾಣದ ಉಚ್ಛ್ವಾಸದ ಗಾಳಿಗರ್ಪಿಸಿ, ಪ್ರಾಣಾಯಾಮದ ಶ್ರದ್ಧಾಪೂರ್ವಕ ಅಭ್ಯಾಸದಿಂದ (ಕ್ರಿಯಾ ಯೋಗದ ಪ್ರಾಣ-ನಿಯಂತ್ರಣದ ತಂತ್ರ) ಉಚ್ಛ್ವಾಸ ಹಾಗೂ ನಿಶ್ವಾಸದ ಕ್ರಿಯೆಯನ್ನು ಸ್ಥಗಿತಗೊಳಿಸುತ್ತಾರೆ (ಉಸಿರಾಟವು ಅನಾವಶ್ಯಕ ಎಂದು ನಿರೂಪಿಸುತ್ತ)”. —ಗಾಡ್ ಟಾಕ್ಸ್ ವಿತ್ ಅರ್ಜುನ ದ ಭಗವದ್ ಗೀತಾ, IV : 293. ಓಂ ತಂತ್ರ
ಒಬ್ಬರು ತಮ್ಮ ನೈಜ ಸ್ವಯಂನ ದಿವ್ಯ ಗುಣಗಳನ್ನು ಕಂಡುಕೊಂಡು ಅವನ್ನು ವೃದ್ಧಿಸಿಕೊಳ್ಳುವುದಕ್ಕೆ ಏಕಾಗ್ರತೆಯ ಶಕ್ತಿಯನ್ನು ಅತ್ಯುನ್ನತ ಮಾರ್ಗದಲ್ಲಿ ಹೇಗೆ ಉಪಯೋಗಿಸಬಹುದು ಎಂಬುದನ್ನು ಧ್ಯಾನದ ಓಂ ತಂತ್ರ ತೋರಿಸಿಕೊಡುತ್ತದೆ. ಈ ಪುರಾತನ ತಂತ್ರವು ಸರ್ವವ್ಯಾಪಿ ಭಗವಂತನ ಇರುವನ್ನು ಸರ್ವ ಸೃಷ್ಟಿಯ ಆಧಾರಭೂತವಾಗಿರುವ ಹಾಗೂ ಅದನ್ನು ಪೋಷಿಸುವ ಓಂ, ಶಬ್ದ ಅಥವಾ ಪವಿತ್ರಾತ್ಮ ಎಂದು ಹೇಗೆ ಮನಗಾಣಬಹುದು ಎಂಬುದನ್ನು ಕಲಿಸುತ್ತದೆ. ಈ ತಂತ್ರವು ಅರಿವನ್ನು ಶರೀರ ಹಾಗೂ ಮನಸ್ಸಿನ ಮಿತಿಯಿಂದಾಚೆಗೆ ವಿಸ್ತರಿಸಿ ಒಬ್ಬರ ಅಸೀಮ ಸಾಮರ್ಥ್ಯದ ಆನಂದಮಯ ಸಾಫಲ್ಯವನ್ನು ಹೊಂದುವಂತೆ ಮಾಡುತ್ತದೆ.
4. ಕ್ರಿಯಾ ಯೋಗ ತಂತ್ರ
ಕ್ರಿಯಾ, ಪ್ರಾಣಾಯಾಮದ ಮುಂದುವರಿದ ರಾಜ ಯೋಗ ತಂತ್ರವಾಗಿದೆ (ಪ್ರಾಣ ಶಕ್ತಿಯ ನಿಯಂತ್ರಣ). ಕ್ರಿಯಾ ಪ್ರಾಣ ಶಕ್ತಿಯ (ಪ್ರಾಣ) ಸೂಕ್ಷ್ಮ ಹರಿವನ್ನು ಬೆನ್ನುಹುರಿ ಮತ್ತು ಮಿದುಳಿನಲ್ಲಿ ಪುನಶ್ಚೇತನಗೊಳಿಸುತ್ತದೆ. ಭಾರತದ ಪುರಾತನ ಋಷಿಗಳು ಮಿದುಳು ಮತ್ತು ಬೆನ್ನುಹುರಿಯನ್ನು ಜೀವನವೃಕ್ಷ ಎಂದು ಪರಿಭಾವಿಸಿದ್ದರು. ಜೀವ ಹಾಗೂ ಪ್ರಜ್ಞೆಯ (ಚಕ್ರಗಳು) ಸೂಕ್ಷ್ಮ ಮಿದುಳು ಬಳ್ಳಿಯ ಕೇಂದ್ರಗಳ ಮೂಲಕ ಶರೀರದ ಎಲ್ಲ ನರಗಳು ಹಾಗೂ ಎಲ್ಲ ಅಂಗಾಂಗಗಳು ಹಾಗೂ ಜೀವಕೋಶಗಳು ಚಟುವಟಿಕೆಯಿಂದಿರುವ ಶಕ್ತಿಯು ಪ್ರವಹಿಸುತ್ತದೆ. ಕ್ರಿಯಾ ಯೋಗದ ಮಹಾನ್ ತಂತ್ರದ ಮೂಲಕ ಪ್ರಾಣ ಪ್ರವಹನವನ್ನು ನಿರಂತರವಾಗಿ ಬೆನ್ನುಹುರಿಯಲ್ಲಿ ಮೇಲೆ ಕೆಳಗೆ ಚಲಿಸುವುಂತೆ ಮಾಡುವುದರಿಂದ, ಒಬ್ಬರ ಆಧ್ಯಾತ್ಮಿಕ ವಿಕಸನ ಹಾಗೂ ಅರಿವನ್ನು ಶೀಘ್ರಗೊಳಿಸಬಹುದು ಎಂಬುದನ್ನು ನಮ್ಮ ಯೋಗಿಗಳು ಕಂಡುಹಿಡಿದಿದ್ದರು.
ಕ್ರಿಯಾ ಯೋಗದ ಸರಿಯಾದ ಅಭ್ಯಾಸವು ಹೃದಯ ಮತ್ತು ಶ್ವಾಸಕೋಶಗಳ ಹಾಗೂ ನರವ್ಯೂಹ ವ್ಯವಸ್ಥೆಯ ಸಹಜ ಚಟುವಟಿಕೆಗಳನ್ನು ಸಹಜವಾಗಿ ಕಡಿತಗೊಳಿಸಿ, ಶರೀರ ಹಾಗೂ ಮನಸ್ಸಿನ ಆಳವಾದ ಆಂತರಿಕ ಸ್ಥಿರತೆಯನ್ನು ತಂದು, ಗಮನವನ್ನು ಆಲೋಚನೆಗಳ, ಭಾವನೆಗಳ ಹಾಗೂ ಇಂದ್ರಿಯ ಗ್ರಹಿಕೆಗಳ ವಾಡಿಕೆಯ ಪ್ರಕ್ಷುಬ್ಧತೆಯಿಂದ ಮುಕ್ತ ಮಾಡಲು ಸಾಧ್ಯವಾಗಿಸುತ್ತದೆ. ಆ ಆಂತರಿಕ ಸ್ಥಿರತೆಯ ಸ್ಪಷ್ಟತೆಯಲ್ಲಿ, ಒಬ್ಬರು ಆಳವಾದ ಆಂತರಿಕ ಶಾಂತಿ ಹಾಗೂ ಒಬ್ಬರ ಆತ್ಮ ಹಾಗೂ ಭಗವಂತನೊಡನೆ ಶ್ರುತಿಗೂಡಿರುವುದನ್ನು ಮನಗಾಣುತ್ತಾರೆ.
ಕ್ರಿಯಾ ಯೋಗವನ್ನು ಹೇಗೆ ಕಲಿಯುವುದು
ಮೊದಲನೆ ಹೆಜ್ಜೆ, ಯೋಗದಾ ಸತ್ಸಂಗ ಪಾಠಗಳಿಗೆ ಮನವಿ ಸಲ್ಲಿಸುವುದು. ಮನೆಯಲ್ಲಿ ಪಾಠಗಳನ್ನು ಅಧ್ಯಯನ ಮಾಡುವ ಮೊದಲ ವರ್ಷದಲ್ಲಿ, ಶಿಷ್ಯರು ಧ್ಯಾನದ ಮೂರು ಪ್ರಾಥಮಿಕ ತಂತ್ರಗಳನ್ನು (ಮೇಲೆ ವಿವರಿಸಲಾಗಿದೆ) ಮತ್ತು ಪರಮಹಂಸಜಿಯವರ ಸಮತೋಲಿತ ಆಧ್ಯಾತ್ಮಿಕ ಬದುಕಿನ ತತ್ತ್ವಗಳನ್ನು ಕಲಿಯುತ್ತಾರೆ.
ಈ ಹಂತ ಹಂತದ ಪರಿಚಯಕ್ಕೆ ಒಂದು ಉದ್ದೇಶವಿದೆ. ಹಿಮಾಲಯವನ್ನು ಏರಲು ಬಯಸುವ ಒಬ್ಬ ಪರ್ವತಾರೋಹಿ ಶಿಖರಗಳನ್ನು ಏರುವ ಮೊದಲು ತನ್ನನ್ನು ತಾನು ವಾತಾವರಣಕ್ಕೆ ಹಾಗೂ ಪರಿಸ್ಥಿತಿಗೆ ಹೊಂದಿಸಿಕೊಳ್ಳಬೇಕು. ಹಾಗೆಯೇ ಒಬ್ಬ ಅನ್ವೇಷಕನಿಗೆ, ಅವನ ಅಥವಾ ಅವಳ ಅಭ್ಯಾಸಗಳನ್ನು ಹಾಗೂ ಆಲೋಚನೆಗಳನ್ನು, ಮನಸ್ಸನ್ನು ಏಕಾಗ್ರತೆ ಹಾಗೂ ಶ್ರದ್ಧೆಯಿಂದ ಹೊಂದಿಸಿಕೊಳ್ಳಲು ಮತ್ತು ಶರೀರದ ಪ್ರಾಣ ಶಕ್ತಿಯನ್ನು ನಿರ್ದೇಶಿಸುವುದಕ್ಕೆ ಅಭ್ಯಾಸ ಮಾಡಲು ಈ ಆರಂಭದ ಅವಧಿಯ ಅವಶ್ಯಕತೆಯಿದೆ. ಆಗ ಯೋಗಿಯು ಸಾಕ್ಷಾತ್ಕಾರದ ಬೆನ್ನುಹುರಿಯ ಮಾರ್ಗವನ್ನು ಏರಲು ಸಿದ್ಧನಾಗುತ್ತಾನೆ. ಒಂದು ವರ್ಷದ ಸಿದ್ಧತೆ ಹಾಗೂ ಅಭ್ಯಾಸದ ನಂತರ, ಶಿಷ್ಯರು ಕ್ರಿಯಾ ಯೋಗದ ದೀಕ್ಷೆಯನ್ನು ಪಡೆಯುವುದಕ್ಕೆ ಅರ್ಜಿ ಸಲ್ಲಿಸಲು ಮತ್ತು ವಿಧ್ಯುಕ್ತವಾಗಿ ಪರಮಹಂಸ ಯೋಗಾನಂದ ಹಾಗೂ ಅವರ ಪರಂಪರೆಯ ಜ್ಞಾನೋದಯ ಹೊಂದಿದ ಗುರುಗಳೊಡನೆ ಕಾಲಮಾನಿತ ಗುರು-ಶಿಷ್ಯ ಸಂಬಂಧವನ್ನು ಏರ್ಪಡಿಸಿಕೊಳ್ಳಲು ಅರ್ಹರಾಗುತ್ತಾರೆ.
ನೀವು ಈಗಾಗಲೇ ಯೋಗದಾ ಸತ್ಸಂಗ ಪಾಠಗಳಿಗೆ ದಾಖಲಾತಿ ಮಾಡಿಕೊಂಡಿರದೇ ಇದ್ದಲ್ಲಿ, ಈ ಪುಟಗಳಲ್ಲಿ ಕೆಲವು ಹೇಗೆ ಧ್ಯಾನ ಮಾಡಬೇಕು ಎಂಬುದರ ಬಗ್ಗೆ ಪ್ರಾರಂಭಿಕ ಸೂಚನೆಗಳನ್ನು ಕಾಣುತ್ತೀರಿ, ಧ್ಯಾನವು ತರುವ ಪ್ರಯೋಜನಗಳನ್ನು ಮನಗಾಣಲು ನೀವು ಅವನ್ನು ಈಗಲೇ ಉಪಯೋಗಿಸಬಹುದು.
ಗುರು-ಶಿಷ್ಯ ಸಂಬಂಧ
ಕ್ರಿಯಾ ಯೋಗವು ಯೋಗದಾ ಸತ್ಸಂಗ ಸೊಸೈಟಿ ನೀಡುವ ದೀಕ್ಷೆ. ಕ್ರಿಯಾ ದೀಕ್ಷೆಯನ್ನು ಪಡೆಯುವುದರಿಂದ, ಶಿಷ್ಯರು ಪರಮಹಂಸ ಯೋಗಾನಂದರನ್ನು ಅವರ ಗುರು (ಆಧ್ಯಾತ್ಮಿಕ ಮಾರ್ಗದರ್ಶಿ) ಎಂದು ಒಪ್ಪಿಕೊಂಡು ಪವಿತ್ರ ಗುರು-ಶಿಷ್ಯ ಸಂಬಂಧವನ್ನು ಏರ್ಪಡಿಸಿಕೊಳ್ಳುತ್ತಾರೆ. ಗುರು-ಶಿಷ್ಯ ಸಂಬಂಧದ ಬಗ್ಗೆ ಇನ್ನಷ್ಟು ಓದಿ.
ಕ್ರಿಯಾ ಯೋಗದ ಬಗ್ಗೆ ಇನ್ನಷ್ಟು ಓದಿ
ಪರಮಹಂಸ ಯೋಗಾನಂದರ ಪ್ರವಚನಗಳು ಹಾಗೂ ಬರಹಗಳಲ್ಲಿ ವಿವರಿಸಿರುವ ಕ್ರಿಯಾ ಯೋಗದ ಪ್ರಯೋಜನಗಳ ಬಗ್ಗೆ ಇನ್ನಷ್ಟು ಓದಿ.
ಆತ್ಮೋನ್ನತಿಯ ಸರ್ವೋತ್ಕೃಷ್ಟ ತಂತ್ರವಾಗಿ ಪರಮಹಂಸ ಯೋಗಾನಂದರ ಬರಹಗಳಿಂದ ಆಯ್ಕೆ ಮಾಡಿದ ಕ್ರಿಯಾ ಯೋಗದ ಸ್ವರೂಪ, ಪಾತ್ರ ಹಾಗೂ ಫಲದಾಯಕತೆ.
ನಕಾರಾತ್ಮಕ ಅಭ್ಯಾಸಗಳನ್ನು ಜಯಿಸುವುದಕ್ಕೆ ಒಂದು ನಿರ್ದಿಷ್ಟ ವಿಧಾನವೂ ಸೇರಿದಂತೆ ಮಿದುಳಿನ ಪ್ರಯೋಜನಕಾರಿ ಬದಲಾವಣೆಗಳನ್ನು ತರಲು ಕ್ರಿಯಾ ಯೋಗ ಹೇಗೆ ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ಇನ್ನಷ್ಟು ಓದಿ.
2011ರಲ್ಲಿ ಎಸ್ಆರ್ಎಫ್/ವೈಎಸ್ಎಸ್ ಕ್ರಿಯಾ ಯೋಗದ ಪುನರುತ್ಥಾನದ 150ನೇ ವರ್ಷದ ಸ್ಮರಣೋತ್ಸವವನ್ನು ಆಚರಿಸಿತು.
ಪರಮಹಂಸ ಯೋಗಾನಂದರು ಜಗದಾದ್ಯಂತ ಪ್ರಚುರಪಡಿಸಿ ಅನುಗ್ರಹಿಸಿದ ಈ ಆತ್ಮದ ಪವಿತ್ರ ವಿಜ್ಞಾನವನ್ನು ಸ್ವೀಕರಿಸಿದ ಸಹಸ್ರಾರು ಜನರಲ್ಲಿ ಕೆಲವರ ಹೇಳಿಕೆಗಳು.