ಧಾರ್ಮಿಕ ಮುಖ್ಯಸ್ಥರು

“ನಾನು ಪರಮಹಂಸ ಯೋಗಾನಂದರನ್ನು 1935ರಲ್ಲಿ ಕಲ್ಕತ್ತೆಯಲ್ಲಿ ಭೇಟಿಯಾದೆ. ಅಂದಿನಿಂದ ನಾನು ಅಮೆರಿಕೆಯಲ್ಲಿಯ ಅವರ ಕಾರ್ಯಕಲಾಪಗಳನ್ನು ನೋಡುತ್ತಾ ಬಂದಿದ್ದೇನೆ. ಹೇಗೆ ಅಂಧಕಾರದ ಮಧ್ಯದಲ್ಲಿ ಒಂದು ಉಜ್ವಲ ಬೆಳಕು ಬೆಳಗುತ್ತಿದೆಯೋ ಹಾಗೆ ಈ ಪ್ರಪಂಚದಲ್ಲಿ ಯೋಗಾನಂದರ ಉಪಸ್ಥಿತಿ. ಮಾನವರ ಮಧ್ಯದಲ್ಲಿ ನಿಜವಾದ ಅವಶ್ಯಕತೆ ಇದ್ದಾಗ ಮಾತ್ರ ಅಪರೂಪವಾಗಿ ಅಂತಹ ಒಂದು ಮಹಾನ್‌ ಆತ್ಮ ಭೂಮಿಗಿಳಿದು ಬರುತ್ತದೆ.”

— ಪರಮಪೂಜ್ಯ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ, ಕಾಂಚಿಪುರಂನ ಶಂಕರಾಚಾರ್ಯ

“[ಪರಮಹಂಸ ಯೋಗಾನಂದರ] ಯೋಗಿಯ ಆತ್ಮಕಥೆ ಹಲವಾರು ವರ್ಷಗಳಿಂದ ಒಂದು ಅತ್ಯಂತ ಹೆಚ್ಚು ಮಾರಾಟವಾಗುತ್ತಿರುವ ಕೃತಿಯಾಗಿದೆ. ಪ್ರಪಂಚದ ವಿವಿಧ ಭಾಗಗಳಲ್ಲಿ ಪಸರಿಸಿರುವ ಅವರ ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ ಕೆಂದ್ರಗಳು ಪ್ರಾಮಾಣಿಕವಾಗಿ ಅರಸುವ ಆತ್ಮಗಳಿಗೆ ಅತ್ಯಂತ ಪ್ರಿಯವಾದ ಧ್ಯಾನಶಿಬಿರಗಳಾಗಿವೆ.…ನಾನು ಅವರನ್ನು [ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ನ ಕೇಂದ್ರಕಾರ್ಯಾಲಯದಲ್ಲಿ] 1950ರಲ್ಲಿ ಗ್ರೇಟರ್‌ ಲಾಸ್‌ ಏಂಜಲೀಸ್‌ನಲ್ಲಿ ಭೇಟಿಯಾದಾಗ ಅವರು ನನ್ನ ಮೇಲೆ ಬೀರಿದ ಪ್ರಭಾವವು ನನಗೆ ನೆನಪಿದೆ.…ಅವರು ನಿಜಕ್ಕೂ ಮಹಾಪುರುಷರಾಗಿದ್ದರು. ಅವರ ಸಡಿಲವಾದ ಕೇಸರಿ ಬಣ್ಣದ ನಿಲುವಂಗಿಯು ಒಂದು ಸದೃಢ ದೇಹವನ್ನು ಆವರಿಸಿತ್ತು, ಮತ್ತು ಅವರ ಉಪಸ್ಥಿತಿಯ ಕ್ರಿಯಾತ್ಮಕತೆಯು, ಕೋಣೆಯನ್ನು ಒಂದು ದಿವ್ಯಶಕ್ತಿಯಿಂದ ತುಂಬಿಸಿತ್ತು. ನನಗೆ ನನ್ನ ಭಾವಾತಿರೇಕದ ಆಲೋಚನೆಯ ನೆನಪಿದೆ: 'ಅವರು ಬ್ರಹ್ಮಾಂಡದ ಹಂಬಲವನ್ನು ಅದರ ಪರಮಾನಂದದೊಂದಿಗೆ ಹೊತ್ತು ಸಾಗುತ್ತಾರೆ.' ಅವರ ಸುತ್ತ ಒಂದು ರೀತಿಯ ದಿವ್ಯ ಶಾಂತಿ ನೆಲೆಸಿತ್ತು ಮತ್ತು ನಮ್ಮ ದಿನನಿತ್ಯದ ಅನ್ವೇಷಣೆಯಲ್ಲಿ ನಾವು ಸಾಮಾನ್ಯವಾಗಿ ಅರಸುವ ರೀತಿಯಾಚೆಗಿನ ಪ್ರಶಾಂತತೆಯಿತ್ತು. ಅವರ ಜನಪ್ರಿಯತೆಗೆ ಕಾರಣ ಸ್ಪಷ್ಟವಾಗಿತ್ತು....

“ಅವರ ಯಶಸ್ಸು ಮನಮೋಹಕತೆಗಿಂತ ಹೆಚ್ಚಿನದಾಗಿತ್ತು. ಅವರ ಬಳಿ ಒಂದು ರಹಸ್ಯವಿತ್ತು, ಕ್ರಿಯಾ ಯೋಗದ ರಹಸ್ಯ (ಸಾರ್ವತ್ರಿಕ ಕ್ರಿಯೆಯ ಯೋಗ). ಇಂದು ಅದು, ಹಠ ಯೋಗದ ಜೊತೆ ಜೊತೆಗೆ, ಪಾಶ್ಚಿಮಾತ್ಯ ಜಗತ್ತಿನ ಆಸಕ್ತಿ ಹಾಗೂ ಗಮನಕ್ಕಾಗಿ ಪ್ರಧಾನವಾಗಿ ಸೆಣಸುತ್ತಿದೆ.”

— ಡಾ|| ಮಾರ್ಕಸ್‌ ಬಾಕ್, ಲೇಖಕರು-ಶಿಕ್ಷಣತಜ್ಞರು, ಪಾದ್ರಿಗಳು, ಯುನೈಟೆಡ್‌ ಚರ್ಚ್‌ ಆಫ್‌ ಕ್ರೈಸ್ಟ್‌

“ಸ್ವಾಮಿ ಯೋಗಾನಂದರ ಒಂದು ವಾರದ ತರಬೇತಿಯಲ್ಲಿ, ನಾನು ಪದವೀಧರನಾಗಿರುವ ಎರಡು ವಿಶ್ವವಿದ್ಯಾಲಯಗಳಲ್ಲಿ ಹಾಗೂ ಎರಡು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪಡೆದ ಶಿಕ್ಷಣಕ್ಕಿಂತ ಹೆಚ್ಚಿನ ನೈಜ ಶಿಕ್ಷಣವನ್ನು ಪಡೆದಿದ್ದೇನೆ. ಈ ಪಾಠ ಪ್ರವಚನಗಳ ಸರಣಿಯು ನನಗೆ ಒಂದು ಚಕಿತಗೊಳಿಸುವಂಥ ದಿವ್ಯಜ್ಞಾನವಾಗಿತ್ತು. ನಾನು ವ್ಯಾಖ್ಯಾನ ಹಾಗೂ ಸಾಕ್ಷಾತ್ಕಾರದ ನಡುವಿನ ಅತ್ಯಮೂಲ್ಯವಾದ ವ್ಯತ್ಯಾಸವನ್ನು ಕಲಿತುಕೊಂಡಿದ್ದೇನೆ…. ಸತ್ಯದ ನೈಜ ಅನುಭವವನ್ನು ಹೊಂದಿರುವ ಒಬ್ಬ ದಯಾಮಯ ಹಾಗೂ ಕ್ರಿಸ್ತನಂತಹ ಗುರುವಿನ ಪ್ರಭಾವದಡಿಯಲ್ಲಿ ನನ್ನ ಸಹೋದರ ಪಾದ್ರಿಗಳು ಬರಲಿ ಎಂದು ನಾನು ಆಶಿಸುತ್ತೇನೆ.”

— ದಿ ರೆವರೆಂಡ್‌ ಆರ್ಥರ್‌ ಪೋರ್ಟರ್‌, ಎಂ. ಎ., ಡಿ.ಡಿ., ಪಾದ್ರಿಗಳು, ಕಾಂಗ್ರಿಗೇಷನಲ್‌ ಚರ್ಚ್‌, ಲಂಡನ್‌

“ಸ್ವರ್ಗದಲ್ಲಾಗಲೀ ಅಥವಾ ಭೂಮಿಯ ಮೇಲಾಗಲೀ ಮನುಷ್ಯರ ಮತ್ತು ರಾಷ್ಟ್ರಗಳ ನಡುವೆ ಶಾಂತಿಯನ್ನು ಸ್ಥಾಪಿಸಿ, ಮನುಷ್ಯನ ಹೃದಯವನ್ನು ಪರಿಶುದ್ಧಗೊಳಿಸುವ ಯಾವುದಾದರೂ ಒಂದು ಶಕ್ತಿ ಇದೆ ಎಂದರೆ, ಆ ಶಕ್ತಿಯನ್ನು [ಯೋಗಾನಂದರ] ಬೋಧನೆಗಳಲ್ಲಿ ಕಾಣಬಹುದು.”

— ದಿ ರೆವರೆಂಡ್‌ ಎಡ್ವರ್ಡ್‌ ಎ. ಲೋಮ್ಯಾನ್‌ಕ್ಲೀವ್‌ಲ್ಯಾಂಡ್‌, ಓಹಿಯೋ

“ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ/ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ (ಪರಮಹಂಸ ಯೋಗಾನಂದರಿಂದ ಸ್ಥಾಪಿತವಾದದ್ದು)ನಲ್ಲಿ ನಾನು ಅತ್ಯುನ್ನತ ಆಧ್ಯಾತ್ಮಿಕತೆ, ಸೇವೆ, ಹಾಗೂ ಪ್ರೇಮವನ್ನು ಕಂಡಿದ್ದೇನೆ.”

— ಪರಮಪೂಜ್ಯ ಭಾರತಿ ಕೃಷ್ಣ ತೀರ್ಥ, ಪುರಿಯ ಶಂಕರಾಚಾರ್ಯ

“ಬೆಲೆಕಟ್ಟಲಾಗದ ಒಂದು ಅನರ್ಘ್ಯ ರತ್ನ, ಇಂಥವರನ್ನು ಜಗತ್ತು ಇನ್ನೂ ಕಾಣಬೇಕಾಗಿದೆ, ಪರಮಪೂಜ್ಯ ಶ್ರೀ ಶ್ರೀ ಪರಮಹಂಸ ಯೋಗಾನಂದರು ಭಾರತದ ಮಹಿಮಾನ್ವಿತ ಪುರಾತನ ಋಷಿ ಮುನಿಗಳ ಆದರ್ಶ ಪ್ರತಿನಿಧಿಯಾಗಿದ್ದಾರೆ.

“ಅವರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ನಿಷ್ಠಾವಂತ ಸೇವೆಯನ್ನು ಸಲ್ಲಿಸಿದ್ದಾರೆ. ಮನುಷ್ಯರಲ್ಲಿ ಸುಪ್ತವಾಗಿರುವ ಆಧ್ಯಾತ್ಮಿಕ ಚಾಲಕ ಶಕ್ತಿಯನ್ನು ಕ್ರಿಯಾಶೀಲವಾಗಿಸುತ್ತಾ ಎಲ್ಲರ ಆಧ್ಯಾತ್ಮಿಕ ಅಭಿವೃದ್ಧಿಗೆ ಅವರು ಮಹತ್ತರ ಸೇವೆಯನ್ನು ಸಲ್ಲಿಸಿದ್ದಾರೆ. ಭಗವಂತನ ಎಲ್ಲ ಮಕ್ಕಳಿಗೂ ನಿತ್ಯ ಮೂಲಗಳಾದ ವೇದಗಳು ಮತ್ತು ಉಪನಿಷತ್ತುಗಳಲ್ಲಿ ಅವ್ಯಾಹತವಾಗಿ ಹರಿಯುವ ಮಧುವನ್ನು ಸೇವಿಸಲು ಶ್ರೀ ಯೋಗಾನಂದರು ಸಾಧ್ಯವಾಗಿಸಿದ್ದಾರೆ.

“ಇಂದು ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ/ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ನ ಜಾಗತಿಕ ಕೇಂದ್ರಗಳು ಪರಮಹಂಸ ಯೋಗಾನಂದರನ್ನು ಸಚಿತ್ರವಾಗಿ ಪ್ರತಿಬಿಂಬಿಸುತ್ತವೆ. ಪ್ರಪಂಚದ ಮೇಲೆ ಶಾಂತಿ ಹಾಗೂ ಪರಮಾನಂದವನ್ನು ವರ್ಷಿಸುವ, ಜಾಗ ಬಿಡದಂತೆ ನೇಯ್ದ ಆಧ್ಯಾತ್ಮಿಕತೆಯ ಆಯಸ್ಕಾಂತದ ಬಲೆಯನ್ನು ಹರಡುತ್ತಾ ಅವು ತಾವೇ ತಾವಾಗಿ ಬಹು ಸಂಖ್ಯೆಯಲ್ಲಿ ವೃದ್ಧಿಸುತ್ತವೆ.”

— ಸ್ವಾಮಿ ಶಿವಾನಂದ, ದಿ ಡಿವೈನ್‌ ಲೈಫ್‌ ಸೊಸೈಟಿ, ರಿಷಿಕೇಶ್, ಭಾರತ

ಇದನ್ನು ಹಂಚಿಕೊಳ್ಳಿ