ಪರಮಹಂಸ ಯೋಗಾನಂದರು — ನಾನು ಅರಿತಿರುವಂತೆ,
ಶ್ರೀ ದಯಾ ಮಾತಾ ಅವರಿಂದ
ಅವರ ಪುಸ್ತಕ ಫೈಂಡಿಂಗ್ ದ ಜಾಯ್ ವಿದಿನ್ ಯು ದಿಂದ:
ಭಗವತ್-ಕೇಂದ್ರಿತ ಬದುಕಿಗಾಗಿ ವೈಯಕ್ತಿಕ ಸಲಹೆ
ವರ್ಷಗಳು ಉರುಳಿದಂತೆ, ಮನಸ್ಸು ಹೊಸ ಅನುಭವಗಳನ್ನು ಸಂಗ್ರಹಿಸುತ್ತದೆ, ಆದರೆ ಕಾಲವು ಸಾಮಾನ್ಯವಾಗಿ ಆ ಗತಕಾಲದ ಸ್ಮರಣೆಯನ್ನು ಮಸುಕುಗೊಳಿಸುತ್ತದೆ. ಆದರೆ ಆತ್ಮವನ್ನು ಸ್ಪರ್ಶಿಸುವ ಘಟನೆಗಳು ಎಂದಿಗೂ ಮಸುಕಾಗುವುದಿಲ್ಲ; ಅವು ನಮ್ಮ ಅಸ್ತಿತ್ವದ ನಿತ್ಯ-ಜೀವಂತ, ರೋಮಾಂಚಕ ಭಾಗವಾಗುತ್ತವೆ. ನನ್ನ ಗುರು ಪರಮಹಂಸ ಯೋಗಾನಂದರೊಂದಿಗಿನ ನನ್ನ ಭೇಟಿ ಹಾಗಿತ್ತು.
ಆಗ ನಾನಿನ್ನೂ ಹದಿನೇಳರ ಚಿಕ್ಕ ಹುಡುಗಿ, ಮತ್ತು ಜೀವನವು ಗೊತ್ತುಗುರಿಯಿಲ್ಲದ ಒಂದು ಉದ್ದವಾದ ಖಾಲಿ ಓಣಿ ಎಂದು ನನಗೆ ತೋರುತ್ತಿತ್ತು. ಭಗವಂತನನ್ನು ಅರಸುವ ಮತ್ತು ಅವನ ಸೇವೆ ಮಾಡುವ ಒಂದು ಸಾರ್ಥಕ ಅಸ್ತಿತ್ವಕ್ಕೆ ನನ್ನ ಹೆಜ್ಜೆಗಳನ್ನು ಮಾರ್ಗದರ್ಶನ ಮಾಡುವಂತೆ ಅವನಿಗೆ ನನ್ನ ನಿರಂತರವಾದ ಪ್ರಾರ್ಥನೆಯು ನನ್ನ ಪ್ರಜ್ಞೆಯಲ್ಲಿ ಸುತ್ತುತ್ತಿತ್ತು.
1931 ರಲ್ಲಿ ನಾನು ಸಾಲ್ಟ್ ಲೇಕ್ ಸಿಟಿಯ ದೊಡ್ಡ, ಕಿಕ್ಕಿರಿದ ಸಭಾಂಗಣವನ್ನು ಪ್ರವೇಶಿಸಿದಾಗ, ಪರಮಹಂಸಜಿ ವೇದಿಕೆಯ ಮೇಲೆ ನಿಂತಿರುವುದನ್ನು ನೋಡಿದಾಗ, ನಾನು ಹಿಂದೆಂದೂ ಕಂಡಿರದಿದ್ದ ಅಧಿಕಾರದಿಂದ ಅವರು ಭಗವಂತನ ಬಗ್ಗೆ ಮಾತನಾಡುವುದನ್ನು ನೋಡಿದಾಗ, ಆ ಹಂಬಲಕ್ಕೆ ಉತ್ತರವು ತತ್‌ಕ್ಷಣದ ಅರಿವಿಗೆ ಬಂದಿತು. ನಾನು ಸಂಪೂರ್ಣವಾಗಿ ಸ್ತಂಭಿತಳಾದೆ — ನನ್ನ ಉಸಿರು, ಆಲೋಚನೆಗಳು, ಸಮಯ, ಸ್ಥಗಿತಗೊಂಡಂತೆ ತೋರುತ್ತಿತ್ತು. ನನ್ನ ಅಸ್ತಿತ್ವದ ಮೇಲೆ ವೃಷ್ಟಿಯಾಗುತ್ತಿರುವ ಅನುಗ್ರಹದ ಪ್ರೀತಿಪೂರ್ವಕ, ಕೃತಜ್ಞತಾಪೂರ್ವಕ ಅಭಿಜ್ಞಾನವು, ಅದರೊಂದಿಗೆ, ನನ್ನೊಳಗಿಂದ ಏರಿಬರುತ್ತಿರುವ ಆಳವಾದ ನಿಶ್ಚಿತಾಭಿಪ್ರಾಯದ ಅರಿವನ್ನು ತಂದಿತು: “ನಾನು ಭಗವಂತನನ್ನು ಪ್ರೀತಿಸಲು ಸದಾ ಬಯಸಿದಂತೆಯೇ ಈ ಮನುಷ್ಯ ಭಗವಂತನನ್ನು ಪ್ರೀತಿಸುತ್ತಾರೆ. ಅವರು ಭಗವಂತನನ್ನು ಅರಿತಿದ್ದಾರೆ. ನಾನು ಅವರ ಅನುಯಾಯಿಯಾಗಿ ಹೋಗುತ್ತೇನೆ.”
ಘನತೆ ಮತ್ತು ಪ್ರಾಮಾಣಿಕತೆಯ ಆದರ್ಶಗಳನ್ನು ಎತ್ತಿಹಿಡಿಯುವುದು
ಆಧ್ಯಾತ್ಮಿಕ ಗುರುಗಳು ಹೇಗಿರಬೇಕು ಎಂಬುದಕ್ಕೆ ನಾನು ಪೂರ್ವಕಲ್ಪಿತ ಆದರ್ಶವನ್ನು ಹೊಂದಿದ್ದೆ. ಅಂತಹ ವ್ಯಕ್ತಿಯನ್ನು ಸಿಂಹಾಸನಾರೋಹಣ ಮಾಡಿಸಲು ನಾನು ನನ್ನ ಒಳಗಣ್ಣಿನಲ್ಲಿ ಒಂದು ಪೀಠವನ್ನು ರೂಪಿಸಿಕೊಂಡಿದ್ದೆ ಎಂದು ನೀವು ಹೇಳಬಹುದು. ನಾನು ಮನಸ್ಸಿನಲ್ಲೇ ಪೂಜ್ಯಭಾವದಿಂದ ನನ್ನ ಗುರುವನ್ನು ಅಲ್ಲಿ ಇರಿಸಿದೆ; ಮತ್ತು ಇಷ್ಟು ವರ್ಷಗಳಲ್ಲಿ ನಾನು ಅವರ ಉಪಸ್ಥಿತಿಯಲ್ಲಿರುವ ಸುಯೋಗ ದೊರೆತಾಗಲೆಲ್ಲ, ಅವರು ಒಮ್ಮೆಯೂ, ನೈತಿಕ ಸತ್ವ ಅಥವಾ ಕಾರ್ಯದಲ್ಲಿ, ಆ ಉದಾತ್ತ ಎತ್ತರದಿಂದ ಕೆಳಗಿಳಿಯಲಿಲ್ಲ.
ನಮ್ಮ ಯುಗದಲ್ಲಿ ಪ್ರಾಮಾಣಿಕತೆ, ಘನತೆ ಮತ್ತು ಆದರ್ಶವಾದಗಳು, ಸ್ವಾರ್ಥತೆಯ ಅಲೆಯ ಅಡಿಯಲ್ಲಿ ಕಣ್ಮರೆಯಾದಂತೆ ಕಂಡರೂ, ಗುರುದೇವರು ಮಾತ್ರ ರಾಜಿಯಾಗದೆ ಶಾಶ್ವತ ಆಧ್ಯಾತ್ಮಿಕ ಮೌಲ್ಯಗಳಿಗನುಸಾರ ಬದುಕಿದರು ಮತ್ತು ಅವುಗಳನ್ನು ಸದಾ ಶಿಷ್ಯರ ದೃಷ್ಟಿಯ ಎದುರಿನಲ್ಲಿ ಇರಿಸಿದ್ದರು. 1931 ರಲ್ಲಿ ತುರ್ತಾಗಿ ಹಣದ ಅಗತ್ಯವಿದ್ದ ಸಮಯ ನನಗೆ ನೆನಪಾಗುತ್ತದೆ. ಈ ಅವಧಿಯಲ್ಲಿ, ಹಣಕಾಸಿನ ಸಂಪನ್ಮೂಲಗಳು ಎಷ್ಟು ಕಡಿಮೆಯಿದ್ದುವೆಂದರೆ, ಗುರು ಮತ್ತು ಶಿಷ್ಯರು ತೆಳುವಾದ ಸೂಪ್ ಮತ್ತು ಬ್ರೆಡ್ ಅನ್ನು ಸೇವಿಸುತ್ತ ಅಥವಾ ಸಂಪೂರ್ಣವಾಗಿ ಉಪವಾಸ ಮಾಡುತ್ತ ಹೊಟ್ಟೆ ಹೊರೆಯುತ್ತಿದ್ದರು. ನಮ್ಮ ಮದರ್ ಸೆಂಟರ್ ಮೌಂಟ್ ವಾಷಿಂಗ್ಟನ್ ಸ್ವತ್ತಿನ ಮೇಲೆ ಅಡಮಾನ ಬಾಕಿ ಇತ್ತು. ಪರಮಹಂಸರು, ಹಣ ಸಂದಾಯಕ್ಕೆ ಸಮಯ ವಿಸ್ತರಣೆಯನ್ನು ಕೇಳಲು ಅಡಮಾನದಾರರ ಮನೆಗೆ ಹೋದರು. ಈ ಸಹೃದಯಿ ಮಹಿಳೆ ಸೌಜನ್ಯದಿಂದ ಗಡುವನ್ನು ವಿಸ್ತರಿಸಿದರು. ಅಂದರೂ, ಸಕಾಲದಲ್ಲಿ ಅಗತ್ಯ ಹಣ ಸಂಗ್ರಹಿಸುವುದು ಅಸಾಧ್ಯ ಎನಿಸಿತು.
ನಂತರ ಒಂದು ದಿನ ಉದ್ಯಮ ಪ್ರವರ್ತಕನೊಬ್ಬ ಗುರುದೇವರ ತರಗತಿಗಳಿಗೆ ಬಂದು ಅವರ ಬೋಧನೆಗಳಲ್ಲಿ ಆಸಕ್ತಿ ತೋರಿದ. ಆ ವ್ಯಕ್ತಿಯು, ಬೋಧನೆಗಳಲ್ಲಿ ಅವುಗಳ ಆಧ್ಯಾತ್ಮಿಕ ಮೌಲ್ಯವನ್ನಷ್ಟೇ ಅಲ್ಲದೆ, ಲಾಭಪ್ರದ ಸಾಮರ್ಥ್ಯವನ್ನೂ ನೋಡಿದ. “ನಿಮ್ಮ ಸಂಸ್ಥೆಯನ್ನು ಉನ್ನತ ದರ್ಜೆಗೇರಿಸುವ ಜವಾಬ್ದಾರಿಯನ್ನು ನನಗೆ ಬಿಡಿ, ಆಗ ಒಂದು ವರ್ಷದೊಳಗೆ ನಾನು ನಿಮ್ಮನ್ನು ನಕ್ಷೆಯಲ್ಲಿರಿಸುತ್ತೇನೆ. ಆಗ ನೀವು ಹತ್ತಾರು ಸಾವಿರ ವಿದ್ಯಾರ್ಥಿಗಳನ್ನು ಹೊಂದುತ್ತೀರಿ ಮತ್ತು ಡಾಲರ್‌ಗಳಲ್ಲಿ ಉರುಳುತ್ತೀರಿ” ಎಂದು ಅವನು ಪರಮಹಂಸರಿಗೆ ಭರವಸೆ ನೀಡಿದ.
ಅವನು ಪವಿತ್ರ ಬೋಧನೆಗಳನ್ನು ವಾಣಿಜ್ಯೀಕರಣಗೊಳಿಸುವ ತನ್ನ ಯೋಜನೆಯನ್ನು ವಿವರಿಸಿದ. ಗುರುದೇವರು ವಿನಯದಿಂದ ಆಲಿಸಿದರು. ಇದರಿಂದ ನಿಜವಾಗಿಯೂ ಅವರ ಹಣಕಾಸಿನ ಚಿಂತೆಗಳ ಅಂತ್ಯವಾಗುತ್ತಿತ್ತು ಮತ್ತು ತಾವು ಇನ್ನೂ ಎದುರಿಸುತ್ತಿದ್ದ ಕಷ್ಟಗಳನ್ನು ತಡೆಯಬಹುದಿತ್ತು. ಆದರೆ ಒಂದು ಕ್ಷಣದ ಹಿಂಜರಿಕೆಯೂ ಇಲ್ಲದೆ ಅವರು ಆ ವ್ಯಕ್ತಿಗೆ ಧನ್ಯವಾದಗಳನ್ನು ಅರ್ಪಿಸಿ, ಉತ್ತರಿಸಿದರು, “ಎಂದಿಗೂ ಇಲ್ಲ! ನಾನು ಎಂದಿಗೂ ಧರ್ಮವನ್ನು ವ್ಯಾಪಾರವಾಗಿ ಬಳಸುವುದಿಲ್ಲ. ಅವಶ್ಯಕತೆ ಏನೇ ಇದ್ದರೂ, ನಾನು ಈ ಕೆಲಸವನ್ನು ಅಥವಾ ನನ್ನ ಆದರ್ಶಗಳನ್ನು ಕೆಲವು ಕ್ಷುಲ್ಲಕ ಡಾಲರ್‌ಗಳಿಗಾಗಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ!”
ಎರಡು ತಿಂಗಳ ನಂತರ, ಮಿಝೋರಿಯ ಕನ್ಸಾಸ್ ಸಿಟಿಯಲ್ಲಿ ಬೋಧನೆ ಮಾಡುತ್ತಿರುವಾಗ, ಅವರು, ಹಿಂದಿನ ಅನೇಕ ಜನ್ಮಗಳ ಶ್ರೇಷ್ಠ ಶಿಷ್ಯರಾದ ರಾಜರ್ಶಿ ಜನಕಾನಂದರನ್ನು ಭೇಟಿಯಾದರು, ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ನಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದು ಅವರ ನಿಯತಿಯಾಗಿತ್ತು. ಈ ಮಹಾನ್ ಚೇತನವು, ಗುರುವನ್ನು ತನ್ನ ಸ್ವಂತದ ದಿವ್ಯ ಗುರುವೆಂದು ಮತ್ತು ಗುರುವಿನ ಬೋಧನೆಗಳನ್ನು ತನ್ನ ದೈನಂದಿನ ಜೀವನ ವಿಧಾನವೆಂದು ಆದರದಿಂದ ಸ್ವೀಕರಿಸಿ, ಸಂಪೂರ್ಣ ಅಡಮಾನವನ್ನು ತೀರಿಸಲು ಹಣವನ್ನು ನೀಡಿದರು. ಮೌಂಟ್ ವಾಷಿಂಗ್ಟನ್‌ನಲ್ಲಿರುವ ಟೆಂಪಲ್ ಆಫ್ ಲೀವ್ಸ್‌ನ ಕೆಳಗೆ ಉತ್ಸವಾಗ್ನಿಯನ್ನು (bonfire) ಮಾಡಿ ಅಡಮಾನವನ್ನು ಜ್ವಾಲೆಗೆ ಎಸೆಯುವಾಗಿನ ಸಂತೋಷ ವಿಶೇಷವಾಗಿತ್ತು. ಬಹಳ ಪ್ರಾಯೋಗಿಕ ಮನಸ್ಸಿನವರಾಗಿದ್ದ ಗುರುದೇವರು ಈ ಅವಕಾಶವನ್ನು, ಆಲೂಗೆಡ್ಡೆಗಳನ್ನು ಕೆಂಡಗಳ ಮಧ್ಯೆ ಸುಡಲು ಉಪಯೋಗಿಸಿಕೊಂಡರು. ಭಕ್ತರು ಗುರುಗಳೊಂದಿಗೆ ಉತ್ಸವಾಗ್ನಿಯ ಸುತ್ತಲೂ ಒಟ್ಟುಗೂಡಿದರು ಮತ್ತು ಅಡಮಾನವು ಚೆನ್ನಾಗಿ ಸುಟ್ಟುಹೋಗುತ್ತಿರುವಾಗ ಆಲೂಗಡ್ಡೆಯನ್ನು ಆನಂದಿಸಿದರು.
ದಿವ್ಯಮಾತೆಯ ಉಪಸ್ಥಿತಿಯ ಭರವಸೆ
ಇತರ ಘಟನೆಗಳೂ ಮತ್ತು ಗುರೂಜಿಯವರ ದಿವ್ಯ ಶಕ್ತಿಯ ಇತರ ಅಂಶಗಳೂ ನನ್ನ ನೆನಪಿನಲ್ಲಿ ಎದ್ದು ನಿಲ್ಲುತ್ತವೆ. ಅನೇಕ ಶಿಷ್ಯರಿಗೆ ಆಹಾರ, ವಸತಿ ಮತ್ತು ಆಧಾರ ಒದಗಿಸಬೇಕಿದ್ದು, ಅದರೊಂದಿಗೆ ಬೆಳೆಯುತ್ತಿರುವ ಸಂಸ್ಥೆಯ ಭಾರವನ್ನೂ ಅನುಭವಿಸಿದ ಅವರು ಭಗವಂತನೊಂದಿಗಿನ ಅಖಂಡ ಸಂಸರ್ಗಕ್ಕಾಗಿರುವ ತಮ್ಮ ಏಕ- ಮನಸ್ಕತೆಯ ಹಂಬಲವು ಕ್ಷೋಭೆಮುಕ್ತವಾಗಿರಲಿ ಎಂಬ ಬಯಕೆಯಿಂದ ಅರಿಝೋನಾದ ಮರುಭೂಮಿಗೆ ತೆರಳಿದರು. ಅವರು ಅಲ್ಲಿ ಏಕಾಂತದಲ್ಲಿ ಬದುಕುತ್ತ, ಸಂಸ್ಥೆಯ ಜವಾಬ್ದಾರಿಗಳ ಹೊರೆಗಳು ಮತ್ತು ಚಿತ್ತವಿಕ್ಷೇಪಗೊಳಿಸುವ ಕರ್ತವ್ಯಗಳಿಂದ ಮುಕ್ತಿಗಾಗಿ ತಮ್ಮ ಪ್ರೀತಿಯ ದಿವ್ಯ ಮಾತೆಯನ್ನು ಕುರಿತು ಧ್ಯಾನಿಸುತ್ತ ಪ್ರಾರ್ಥಿಸುತ್ತಿದ್ದರು. ಒಂದು ರಾತ್ರಿ ಅವರು ಧ್ಯಾನ ಮಾಡುತ್ತಿದ್ದಾಗ — “ಆಕೆಯ ಪ್ರತಿಕ್ರಿಯೆಗಾಗಿ ನನ್ನ ಹೃದಯವು ಹಂಬಲದಿಂದ ಬಿರಿಯುವುದೇನೋ ಎಂಬಂತ್ತಿತ್ತು,” ಎಂದು ಅವರು ಹೇಳಿದರು — ಆಕೆಯು ಅವರಿಗೆ ಕಾಣಿಸಿಕೊಂಡು ಈ ಹಿತವಾದ ಮಾತುಗಳನ್ನು ಹೇಳಿದಳು:
ಇರಲಿ ಬಾಳ ನಾಟ್ಯ ಅಥವಾ ಸಾವಿನ ಕುಣಿತ,
ಅರಿ ಅವು ನನ್ನಿಂದಲೇ ಬರುವವು ಎಂದು, ಹಾಗೇ ಆನಂದಿಸು.
ಪಡೆದಿರೆ ನೀ ಎನ್ನ, ಬಯಸುವೆ ಬೇರೆನ್ನ?
ತಾನು ಆರಾಧಿಸುವ ದಿವ್ಯಮಾತೆಯು ಜೀವನ್ಮರಣಗಳ ನಡುವೆ ಯಾವಾಗಲೂ ತನ್ನೊಂದಿಗೆ ಇದ್ದಾಳೆ ಎಂಬ ಭರವಸೆಯಿಂದ ಸಂತೋಷದಿಂದ ತುಂಬಿಹೋದ ಅವರು ಹೃದಯದಲ್ಲಿ ಶಾಂತಿ ಮತ್ತು ಸರ್ವ-ಶರಣಾಗತಿಯ ಪ್ರೀತಿಯೊಂದಿಗೆ, ತಮ್ಮ ಭುಜಗಳ ಮೇಲೆ ಆಕೆಯಿರಿಸಿದ್ದ ಉದ್ದಿಷ್ಟ ಕಾರ್ಯವನ್ನು ಮತ್ತೆ ಕೈಗೆತ್ತಿಕೊಳ್ಳಲು ಹಿಂದಿರುಗಿದರು.
ಗುರುದೇವರು ಮಹಾನ್ ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿದ್ದರು, ಭಗವತ್-ಸಾಕ್ಷಾತ್ಕಾರವನ್ನು ಹೊಂದಿರುವವರಲ್ಲಿ ಇರುವ ಸಹಜ ಅಭಿವ್ಯಕ್ತಿ. ಅಂತಹ ಶಕ್ತಿಗಳು ಉನ್ನತ ನಿಯಮಗಳ ಕಾರ್ಯವೈಖರಿ ಅಷ್ಟೆ ಎಂದು ಪರಮಹಂಸಜಿ ವಿವರಿಸಿದರು. ಅವರ ಬೋಧನೆಯ ಆರಂಭಿಕ ದಿನಗಳಲ್ಲಿ ಅವರು ಕೆಲವೊಮ್ಮೆ, ಸಂದೇಹಾಸ್ಪದ ಸಮಾಜದ ವಿಶ್ವಾಸವನ್ನು ಹುರಿದುಂಬಿಸಲು ಆ ನಿಯಮಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುತ್ತಿದ್ದರು. ಅವರು ಆ ಕ್ಷಣವೇ ಉಪಶಮನಗೊಳಿಸಿದ ಅನೇಕರಲ್ಲಿ ನಾನೂ ಒಬ್ಬಳು.
ನಂತರದ ವರ್ಷಗಳಲ್ಲಿ ಗುರುದೇವ ಹೇಳುತ್ತಿದ್ದರು, “ಭಗವಂತ ನನಗೆ ನೀಡಿದ ಶಕ್ತಿಯನ್ನು ನಾನು ಪ್ರದರ್ಶಿಸಿದಲ್ಲಿ, ನಾನು ಸಾವಿರಾರು ಜನರನ್ನು ಸೆಳೆಯಬಲ್ಲೆ. ಆದರೆ ಭಗವಂತನೆಡೆಗಿನ ಹಾದಿ ಸರ್ಕಸ್ ಅಲ್ಲ. ನಾನು ಸಿದ್ಧಿಗಳನ್ನು ಭಗವಂತನಿಗೆ ಹಿಂತಿರುಗಿಸಿದ್ದೇನೆ ಮತ್ತು ಅವನು ನನಗೆ ಹೇಳದ ಹೊರತು ನಾನು ಅವುಗಳನ್ನು ಎಂದಿಗೂ ಬಳಸುವುದಿಲ್ಲ. ಮಾನವನ ಆತ್ಮದಲ್ಲಿ ಭಗವತ್ಪ್ರೇಮವನ್ನು ಜಾಗೃತಗೊಳಿಸುವುದೇ ನನ್ನ ಗುರಿಯಾಗಿದೆ. ನಾನು ಒಂದು ಜನಸಮೂಹಕ್ಕಿಂತ ಒಂದು ಆತ್ಮವನ್ನು ಬಯಸುತ್ತೇನೆ ಮತ್ತು ನಾನು ಆತ್ಮಗಳ ಸಮೂಹವನ್ನು ಪ್ರೀತಿಸುತ್ತೇನೆ.” ಗುರುದೇವರು ಜನಸಮೂಹದಿಂದ ಹಿಂದೆ ಸರಿದರು ಮತ್ತು ಸಂಖ್ಯಾಬಾಹುಳ್ಯಕ್ಕಿಂತ ಗುಣಾತ್ಮಕತೆಯ ಬೆಳವಣಿಗೆಯ ಮೇಲೆ ಕೇಂದ್ರೀಕರಿಸಲು ಪ್ರಾರಂಭಿಸಿದರು. ಅವರು ತಮ್ಮ ಬೋಧನೆಗಳ ಉನ್ನತ ಆದರ್ಶಗಳು ಮತ್ತು ಆಧ್ಯಾತ್ಮಿಕ ಗುರಿಗಳಿಗೆ ಸ್ಪಂದಿಸುವ “ಆತ್ಮಗಳನ್ನು” ಜನಸಮೂಹದಲ್ಲಿ ಹುಡುಕಿ ತೆಗೆದರು.
ಸೇವೆ, ಜ್ಞಾನ ಮತ್ತು ದಿವ್ಯ ಪ್ರೇಮ
ಪತ್ರಿಕೆಯವರೊಬ್ಬರು ಸಂದರ್ಶನವೊಂದರಲ್ಲಿ ಒಮ್ಮೆ ನನ್ನನ್ನು ಕೇಳಿದರು, “ಪರಮಹಂಸ ಯೋಗಾನಂದರು ಭಕ್ತಿ, ಜ್ಞಾನ ಅಥವಾ ಕರ್ಮಯೋಗಿ ಇವುಗಳಲ್ಲಿ ಅವರು ಯಾವ ಯೋಗಿ ಎಂದು ನೀವು ಹೇಳುವಿರಿ?” ನಾನು ಉತ್ತರಿಸಿದೆ, “ಅವರು ಬಹುಮುಖಿಯಾಗಿದ್ದರು. ಅಮೆರಿಕಾದ ಜನರ ಹೃದಯ ಮತ್ತು ಮನಸ್ಸನ್ನು ತಲುಪಲು ಅಂತಹ ಒಂದು ಸ್ವಭಾವ, ನಿಲುವು ಮತ್ತು ತಿಳುವಳಿಕೆ ಇರುವವರೊಬ್ಬರು ಬೇಕಾಗಿತ್ತು. ಇದು, ಭಾರತದಲ್ಲಿನ ಜೀವನ ಮತ್ತು ಅಮೆರಿಕಾದಲ್ಲಿನ ಜೀವನದ ನಡುವಿನ ಅಂತರವನ್ನು ತಗ್ಗಿಸಲು ಅವರಿಗೆ ಅನುವು ಮಾಡಿಕೊಟ್ಟಿತು; ಅವರ ಬೋಧನೆಗಳು ಪೂರ್ವದಲ್ಲೂ ಪಶ್ಚಿಮದಲ್ಲೂ ಅನ್ವಯಿಸುವಂತಹ ಸಾರ್ವತ್ರಿಕ ಗುಣವನ್ನು ವ್ಯಕ್ತಪಡಿಸುತ್ತವೆ.”
ಕರ್ಮಯೋಗಿಯಾಗಿ, ಪರಮಹಂಸಜಿ ಈ ಜಗತ್ತಿನಲ್ಲಿ ಅಪರೂಪವಾಗಿರುವ ಸಮರ್ಪಣೆಯೊಂದಿಗೆ ಭಗವಂತನಿಗಾಗಿ ಮತ್ತು ಮನುಕುಲದ ಉನ್ನತಿಗಾಗಿ ಕೆಲಸ ಮಾಡಿದರು. ಇನ್ನೊಬ್ಬರಿಗೆ ಸೇವೆ ಮಾಡುವ ಅಥವಾ ಸಹಾಯ ಮಾಡುವ ಅವಕಾಶ ಸಿಕ್ಕಾಗ ಅವರು ಶಕ್ತಿಮೀರಿ ಪ್ರಯತ್ನಿಸದಿರುವುದನ್ನು ನಾವು ಎಂದೂ ನೋಡಿಲ್ಲ. ಕಷ್ಟಪಡುತ್ತಿರುವವರಿಗಾಗಿ ಅವರು ಅಳುತ್ತಿದ್ದರು ಮತ್ತು ಎಲ್ಲಾ ದುಃಖಗಳ ಮೂಲ ಕಾರಣವಾದ ಅಜ್ಞಾನವನ್ನು ತೊಡೆದುಹಾಕಲು ಅವಿಶ್ರಾಂತವಾಗಿ ಕೆಲಸ ಮಾಡಿದರು.
ಜ್ಞಾನಿಯಾಗಿ, ಅವರ ಬರಹಗಳು, ಉಪನ್ಯಾಸಗಳು ಮತ್ತು ವೈಯಕ್ತಿಕ ಸಲಹೆಯ ಮೂಲಕ ಅವರ ಜ್ಞಾನವು ಪುಸ್ತಕಗಳಲ್ಲಿ ಹರಿಯಿತು. ಅವರ ಯೋಗಿಯ ಆತ್ಮಕಥೆಯನ್ನು ಯೋಗದ ಅಧಿಕೃತ ಪಠ್ಯಪುಸ್ತಕವೆಂದು ಅಂಗೀಕರಿಸಲಾಗಿದೆ ಮತ್ತು ಇದನ್ನು ಅನೇಕ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿವಿಧ ಕೋರ್ಸ್‌ಗಳಲ್ಲಿ ಬೋಧನೆ ಮತ್ತು ಅಧ್ಯಯನ ಎರಡಕ್ಕೂ ಬಳಸಲಾಗುತ್ತದೆ. ಪರಮಹಂಸಜಿಯವರನ್ನು ಕೇವಲ ಬುದ್ಧಿಜೀವಿ ಎಂದು ಹೇಳಲು ಸಾಧ್ಯವಿಲ್ಲ. ಅವರ ಮಟ್ಟಿಗೆ, ಅನುಭೂತಿಯಿಲ್ಲದ ಬೌದ್ಧಿಕತೆಯು ಜೇನುತುಪ್ಪವಿಲ್ಲದ ಜೇನುಗೂಡಿನಂತೆ ನಿಷ್ಪ್ರಯೋಜಕವಾಗಿತ್ತು. ಅವರು ಧರ್ಮದಲ್ಲಿರುವ ಸಿದ್ಧಾಂತ ಮತ್ತು ಸೈದ್ಧಾಂತಿಕ ವಿಶ್ಲೇಷಣೆಯ ಮುಸುಕುಗಳನ್ನು ತೆಗೆದುಹಾಕಿದರು ಮತ್ತು ಸತ್ಯದ ಹೃದಯವನ್ನು, ಅಂದರೆ ಮನುಕುಲಕ್ಕೆ ಭಗವಂತನ ಬಗ್ಗೆ ತಿಳುವಳಿಕೆಯನ್ನು ಮಾತ್ರವಲ್ಲದೆ ಆತನನ್ನು ಅರಿತುಕೊಳ್ಳುವ ಮಾರ್ಗವನ್ನೂ ನೀಡುವ ಮೂಲಭೂತ ತತ್ವಗಳನ್ನು ತಿಳಿಯಪಡಿಸಿದರು.
ಅವರ ಅನುಯಾಯಿಗಳಿಗೆ, ಪರಮಹಂಸ ಯೋಗಾನಂದರು ಎಲ್ಲಕ್ಕಿಂತ ಹೆಚ್ಚಾಗಿ ಪ್ರೇಮಾವತಾರ, ಪರಮ ಭಕ್ತ ಎಂದು ಪರಿಚಿತರಾಗಿದ್ದಾರೆ. ಅವರ ವ್ಯಕ್ತಿಚಿತ್ರಣದಲ್ಲಿ ಮಹೋನ್ನತವಾದದ್ದೆಂದರೆ ಭಗವಂತನ ಮೇಲಿನ ಅಗಾಧ ಪ್ರೀತಿ, ಅವನನ್ನು ಅವರು ದಿವ್ಯ ಮಾತೆ ಎಂದು ಪೂಜ್ಯಭಾವನೆಯಿಂದ ಕಾಣುತ್ತಿದ್ದರು. ಇದೇ ಮೊದಲ ಶಾಸನ ಎಂದು ಏಸು ಹೇಳಿದ: “ನೀನು ನಿನ್ನ ಪ್ರಭುವಾದ ಭಗವಂತನನ್ನು ನಿನ್ನ ಪೂರ್ಣ ಹೃದಯದಿಂದ, ನಿನ್ನ ಪೂರ್ಣ ಆತ್ಮದಿಂದ ಮತ್ತು ನಿನ್ನ ಪೂರ್ಣ ಮನಸ್ಸಿನಿಂದ ಪ್ರೀತಿಸಬೇಕು.” ಪರಮಹಂಸಜಿ ಅಂತಹುದೇ ಪ್ರೀತಿಯನ್ನು ಪ್ರದರ್ಶಿಸಿದರು, ಅಮೆರಿಕದಲ್ಲಿ ಆರಂಭಿಕ ದಿನಗಳಲ್ಲಿ ಜನರು ಕಂಡಂತೆ, ಅವರು ಜನಸಮೂಹದೆದುರು ಮಾತನಾಡುತ್ತಿರಲಿ; ಅಥವಾ ಅವರ ಬೆಳೆಯುತ್ತಿರುವ ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್/ಯೋಗದಾ ಸತ್ಸಂಗ ಸೊಸೈಟಿಯ ವಿಶ್ವಾದ್ಯಂತದ ಅಗತ್ಯಗಳನ್ನು ನಿರ್ವಹಿಸುತ್ತಿರಲಿ; ಅಥವಾ ಆಧ್ಯಾತ್ಮಿಕ ತರಬೇತಿಗಾಗಿ ತನ್ನ ಬಳಿ ಬಂದವರಿಗೆ ಮಾರ್ಗದರ್ಶನ ನೀಡುತ್ತಿರಲಿ.
ಎಲ್ಲಿ ಆಧ್ಯಾತ್ಮಿಕ ಶಿಸ್ತಿನ ಅಗತ್ಯವಿತ್ತೋ ಅಲ್ಲಿ ಪರಮಹಂಸಜಿಯವರಿಗೆ ತೀವ್ರ ತಾಪವನ್ನು ಪ್ರದರ್ಶಿಸುವ ಸಾಮರ್ಥ್ಯವಿತ್ತು, ಆದರೆ ತಾಳ್ಮೆಯ ಅಗತ್ಯವಿದ್ದಾಗ, ಅಲ್ಲಿ ಸದಾ ಅಸೀಮ ಅನುಕಂಪ ಮತ್ತು ತಾಳ್ಮೆ ಇರುತ್ತಿತ್ತು. ಅವರ ಕಾರ್ಯದ ಬಗ್ಗೆ ಕೆಲವು ಪ್ರತಿಕೂಲ ವಿಮರ್ಶಕರ ದಾಳಿಯ ಬಗ್ಗೆ ನಾವು ಕೋಪಗೊಂಡಾಗ ಅವರು ನಮಗೆ ಹೇಳಿದ ಮಾತುಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ: “ಇತರ ಶಿಕ್ಷಕರು ಮತ್ತು ಸಂಸ್ಥೆಗಳ ವಿರುದ್ಧ ಎಂದಿಗೂ ಕಠಿಣ ಪದವನ್ನು ಬಳಸಬೇಡಿ. ಇತರರ ತಲೆಯನ್ನು ಕತ್ತರಿಸುವ ಮೂಲಕ ಎಂದಿಗೂ ಎತ್ತರವಾಗಿ ಕಾಣಿಸಿಕೊಳ್ಳಲು ಪ್ರಯತ್ನಿಸಬೇಡಿ. ಈ ಜಗತ್ತಿನಲ್ಲಿ ಎಲ್ಲರಿಗೂ ಸಾಕಷ್ಟು ಸ್ಥಳವಿದೆ, ಮತ್ತು ನಾವು ನಿರ್ದಯೆ ಮತ್ತು ದ್ವೇಷಕ್ಕೆ ಒಳ್ಳೆಯತನ ಮತ್ತು ಪ್ರೀತಿಯಿಂದ ಪ್ರತಿಕ್ರಿಯಿಸಬೇಕು.”
ಅವರು ಜಗತ್ತಿಗೆ “ಸಾರ್ವತ್ರಿಕ ಪ್ರಾರ್ಥನೆಯನ್ನು,” ನೀಡಿದರು, ಅದರ ವಿಷಯವು ಅವರ ಜೀವನದ ಹೃದಯವೇ ಆಗಿತ್ತು: “ಪ್ರೀತಿಯ ಭಗವಂತನೇ, ನಿನ್ನ ಪ್ರೇಮವು ನನ್ನ ಭಕ್ತಿಯ ದೇಗುಲದಲ್ಲಿ ಸದಾ ಬೆಳಗುತ್ತಿರಲಿ, ಮತ್ತು ಆ ನಿನ್ನ ಪ್ರೇಮವನ್ನು ಎಲ್ಲರ ಹೃದಯಗಳಲ್ಲಿ ನಾನು ಜಾಗೃತಗೊಳಿಸುವಂತಾಗಲಿ.”
“ಪ್ರೀತಿಯು ಮಾತ್ರ ನನ್ನ ಸ್ಥಾನವನ್ನು ಪಡೆಯಬಲ್ಲುದು”
ಗುರುದೇವರ ಜೀವನದ ಅಂತ್ಯವು ಸಮೀಪಿಸುತ್ತಿರುವಾಗ, ಅವರು ಭಾರತೀಯ ರಾಯಭಾರಿ ಡಾ. ಬಿನಯ್ ಆರ್. ಸೇನ್ (ಅವರು ಮರುದಿನ ಬೆಳಿಗ್ಗೆ ನಮ್ಮ ಸೆಲ್ಫ್-ರಿಯಲೈಝೇಷನ್ ಪ್ರಧಾನ ಕಛೇರಿಗೆ ಗುರೂಜಿಯನ್ನು ಭೇಟಿ ಮಾಡಲು ಬರುವವರಿದ್ದರು) ಅವರನ್ನು ಬರಮಾಡಿಕೊಳ್ಳಲು ತಯಾರಿ ನಡೆಸುತ್ತಿದ್ದರು. ಗುರೂಜಿಯವರು ಶಿಷ್ಯರನ್ನು ಆಶ್ರಮದ ಅಡುಗೆ ಮನೆಗೆ ಕರೆದು ಹೇಳಿದರು, "ಇಂದು ನಾವು ರಾಯಭಾರಿಗಾಗಿ ಸಾಂಬಾರುಗಳು ಮತ್ತು ಭಾರತೀಯ ಸಿಹಿತಿಂಡಿಗಳನ್ನು ತಯಾರಿಸೋಣ." ನಾವು ದಿನವಿಡೀ ಅಡುಗೆ ಮಾಡಿದೆವು, ಮತ್ತು ಗುರೂಜಿ ಬಹಳ ಸಂತೋಷದಿಂದಿದ್ದರು.
ಆ ಸಂಜೆಯ ಕೊನೆಯಲ್ಲಿ, ಅವರು ನನ್ನನ್ನು ಅವರ ಬಳಿಗೆ ಕರೆದು ಹೇಳಿದರು, "ಬಾ, ನಾವು ಸ್ವಲ್ಪ ನಡೆದಾಡೋಣ." ಆಶ್ರಮವು ಮೂರು ಅಂತಸ್ತಿನ ದೊಡ್ಡ ಕಟ್ಟಡ. ನಾವು ಮೂರನೇ ಮಹಡಿಯ ಹಜಾರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಅವರು ತಮ್ಮ ಗುರುಗಳಾದ ಸ್ವಾಮಿ ಶ್ರೀ ಯುಕ್ತೇಶ್ವರ್‌ಜಿಯವರ ಚಿತ್ರದ ಮುಂದೆ ನಿಂತರು. ಅವರು ಆ ಚಿತ್ರವನ್ನು ಕಣ್ಣು ಮಿಟುಕಿಸದೆ ಬಹಳ ಹೊತ್ತು ನೋಡಿದರು. ತದನಂತರ ಅವರು ಬಹಳ ಮೆಲ್ಲಗೆ ನನ್ನ ಕಡೆಗೆ ತಿರುಗಿ ಹೇಳಿದರು: "ಇನ್ನು ಕೇವಲ ಕೆಲವು ಗಂಟೆಗಳಷ್ಟೆ, ನಂತರ ನಾನು ಈ ಭೂಮಿಯಿಂದ ಹೋಗಿರುತ್ತೇನೆ ಎಂದು ನಿನಗೆ ತಿಳಿದಿದೆಯೇ?" ನನ್ನ ಕಂಗಳಲ್ಲಿ ನೀರು ತುಂಬಿತು. ಅವರು ಹೇಳಿದ್ದು ಆಗುತ್ತದೆ ಎಂದು ನನಗೆ ಅಂತರ್ಬೋಧಿತವಾಗಿ ತಿಳಿದಿತ್ತು. ಸ್ವಲ್ಪ ಸಮಯದ ಹಿಂದೆ, ಅವರು ತಮ್ಮ ದೇಹವನ್ನು ತೊರೆಯುವ ಬಗ್ಗೆ ನನ್ನೊಂದಿಗೆ ಮಾತನಾಡಿದಾಗ, ನಾನು ಅವರಿಗೆ ಅಳುತ್ತ ಕೇಳಿದ್ದೆ, “ಗುರುಗಳೇ, ನೀವು ನಮ್ಮ ಹೃದಯಗಳ ಮತ್ತು ನಿಮ್ಮ ಸಂಸ್ಥೆಯ ಉಂಗುರದಲ್ಲಿರುವ ವಜ್ರ. ನೀವಿಲ್ಲದೆ ನಾವು ಮುಂದುವರಿಯುವುದು ಹೇಗೆ? ” ಅವರ ಕಣ್ಣುಗಳು ದಿವ್ಯಾನಂದದ ಮೃದುವಾದ ಕೊಳಗಳಂತಿದ್ದವು, ಬಹಳ ಮಧುರವಾದ ಪ್ರೀತಿ ಮತ್ತು ಕರುಣೆಯಿಂದ ಅವರು ಉತ್ತರಿಸಿದರು: "ನಾನು ಹೋದ ಮೇಲೆ, ಪ್ರೀತಿಯು ಮಾತ್ರ ನನ್ನ ಸ್ಥಾನವನ್ನು ತೆಗೆದುಕೊಳ್ಳಬಲ್ಲುದು. ಭಗವತ್ಪ್ರೇಮದ ಅಮಲಿನಲ್ಲಿ ನೀವು ಎಷ್ಟು ಮುಳುಗಿರಬೇಕೆಂದರೆ, ನಿಮಗೆ ಭಗವಂತನನ್ನು ಬಿಟ್ಟು ಬೇರೇನೂ ಅರಿವಿಗೆ ಬರಬಾರದು; ಮತ್ತು ಆ ಪ್ರೀತಿಯನ್ನು ಎಲ್ಲರಿಗೂ ನೀಡಿರಿ.”
ಅಂತಿಮ ದಿನದಂದು, ಅವರು ಡೌನ್‌ಟೌನ್ ಲಾಸ್ ಏಂಜಲೀಸ್‌ನಲ್ಲಿ ರಾಯಭಾರಿಗಾಗಿ ಔತಣಕೂಟದಲ್ಲಿ ಮಾತನಾಡಬೇಕಿತ್ತು. ಅವರ ಸೇವೆ ಮಾಡುವ ನಾವು ಬೆಳಗ್ಗೆ ಬೇಗನೆ ಎದ್ದು ಅವರಿಗಾಗಿ ಏನಾದರೂ ಮಾಡುವುದಿದೆಯೇ ಎಂದು ನೋಡಲು ಅವರ ಬಾಗಿಲಿಗೆ ಹೋದೆವು. ನಾವು ಪ್ರವೇಶಿಸಿದಾಗ, ಅವರು ಆಗಾಗ್ಗೆ ಧ್ಯಾನ ಮಾಡುತ್ತಿದ್ದ ಮತ್ತು ಹೆಚ್ಚಿನ ಸಮಯ ಸಮಾಧಿಸ್ಥರಾಗಿರುತ್ತಿದ್ದ ಕುರ್ಚಿಯಲ್ಲಿ ತುಂಬಾ ಶಾಂತವಾಗಿ ಕುಳಿತಿದ್ದರು. ನಾವು ಮಾತನಾಡುವುದು ಅವರಿಗೆ ಇಷ್ಟವಿಲ್ಲದಿದ್ದಾಗ, ಅವರು ತಮ್ಮ ತುಟಿಗಳ ಮೇಲೆ ಬೆರಳನ್ನು ಇರಿಸುತ್ತಿದ್ದರು, ಅಂದರೆ, “ನಾನು ಮೌನವಾಗಿದ್ದೇನೆ,” ಎಂದರ್ಥ. ಅವರು ಹಾಗೆ ಮಾಡಿದಾಕ್ಷಣ, ಅವರ ಆತ್ಮದ ಹಿಂತೆಗೆತವನ್ನು ನಾನು ನೋಡಿದೆ, ಅವರು ಶರೀರಕ್ಕೆ ಆತ್ಮವನ್ನು ಬಂಧಿಸುವ ಪ್ರತಿಯೊಂದು ಗುಪ್ತ ಬಂಧನಗಳನ್ನೂ ಕ್ರಮೇಣ ಕಡಿದುಕೊಳ್ಳುತ್ತಿದ್ದರು. ನನ್ನ ಹೃದಯವು ದುಃಖದಿಂದ ತುಂಬಿತು, ಆದರೂ ಶಕ್ತಿಯೂ ಸಹ, ಏಕೆಂದರೆ ಅವರೆಡೆಗಿನ ನನ್ನ ಭಕ್ತಿಯಿಂದಾಗಿ, ಏನೇ ಆದರೂ, ನನ್ನ ಗುರುಗಳು ಎಂದಿಗೂ ನನ್ನ ಹೃದಯವನ್ನು ಬಿಟ್ಟುಹೋಗುವುದಿಲ್ಲ ಎಂದು ನನಗೆ ತಿಳಿದಿತ್ತು.
ಇಡೀ ದಿನ ಅವರು ಆ ಆಂತರಿಕ ಸ್ಥಿತಿಯಲ್ಲಿಯೇ ಇದ್ದರು. ಸಂಜೆಯ ಹೊತ್ತಿಗೆ, ನಾವು ಅವರೊಂದಿಗೆ ಔತಣಕೂಟ ನಡೆಯಲಿರುವ ದೊಡ್ಡ ಹೋಟೆಲ್‌ಗೆ ಹೋದೆವು. ಬೇಗ ಬಂದ ಗುರೂಜಿ ಮಹಡಿಯ ಮೇಲಿನ ಒಂದು ಪುಟ್ಟ ಕೋಣೆಯಲ್ಲಿ ಸದ್ದಿಲ್ಲದೆ ಧ್ಯಾನಸ್ಥರಾಗಿ ಕಾಯುತ್ತಿದ್ದರು. ನಾವು ಶಿಷ್ಯಂದಿರು ಅವರ ಸುತ್ತಲೂ ನೆಲದ ಮೇಲೆ ಕುಳಿತೆವು. ಸ್ವಲ್ಪ ಸಮಯದ ನಂತರ, ಅವರು ಒಬ್ಬರಾದ ಮೇಲೆ ಒಬ್ಬರಂತೆ ನಮ್ಮಲ್ಲಿ ಪ್ರತಿಯೊಬ್ಬರನ್ನೂ ದಿಟ್ಟಿಸಿ ನೋಡಿದರು. ಅವರು ನನ್ನನ್ನು ನೋಡುತ್ತಿದ್ದಂತೆ, "ನನ್ನ ಪ್ರೀತಿಯ ಗುರುಗಳು ನನಗೆ ವಿದಾಯದ ದರ್ಶನವನ್ನು ನೀಡುತ್ತಿದ್ದಾರೆ" ಎಂದು ನಾನು ಯೋಚಿಸಿದ್ದು ನೆನಪಿದೆ. ನಂತರ ಅವರು ಔತಣಕೂಟದ ಸಭಾಂಗಣಕ್ಕೆ ಹೋದರು.
ನಗರ, ರಾಜ್ಯ ಮತ್ತು ಭಾರತ ಸರ್ಕಾರದ ಅಧಿಕಾರಿಗಳನ್ನು ಒಳಗೊಂಡ ಪ್ರೇಕ್ಷಕರ ಸಂಖ್ಯೆ ದೊಡ್ಡದಾಗಿತ್ತು. ನಾನು ಭಾಷಣಕಾರರ ಟೇಬಲ್‌ನಿಂದ ಸ್ವಲ್ಪ ದೂರದಲ್ಲಿ ಕುಳಿತಿದ್ದೆ, ಆದರೆ ನನ್ನ ಮನಸ್ಸು ಮತ್ತು ದೃಷ್ಟಿ ಪೂಜ್ಯ ಗುರುವಿನ ಮುಖವನ್ನು ಬಿಟ್ಟು ಕದಲಲಿಲ್ಲ. ಅಂತಿಮವಾಗಿ, ಅವರು ಮಾತನಾಡುವ ಸಮಯ ಬಂದಿತು. ರಾಯಭಾರಿ ಸೇನ್ ಸಭೆಯನ್ನು ಉದ್ದೇಶಿಸಿ ಕೊನೆಯವರಾಗಿ ಮಾತನಾಡುವ ಮೊದಲು ಗುರುದೇವರು ಮಾತನಾಡಬೇಕಿತ್ತು. ಗುರೂಜಿ ತಮ್ಮ ಕುರ್ಚಿಯಿಂದ ಮೇಲೆದ್ದಂತೆ, ನನ್ನ ಹೃದಯದ ಒಂದು ಬಡಿತ ತಪ್ಪಿತು ಮತ್ತು ನಾನು ಯೋಚಿಸಿದೆ, “ಓಹ್, ಇದೇ ಆ ಕ್ಷಣ!”
ಅವರು ಭಗವಂತನ ಬಗ್ಗೆ ಎಷ್ಟು ಪ್ರೀತಿಯಿಂದ ಮಾತಾಡಲಾರಂಭಿಸಿದರೆಂದರೆ, ಇಡೀ ಶ್ರೋತೃವೃಂದವೇ ಒಬ್ಬ ವ್ಯಕ್ತಿಯಂತಿತ್ತು; ಯಾರೂ ಕದಲಲಿಲ್ಲ. ಅವರು ತಮ್ಮ ಹೃದಯದಿಂದ ಅವರೆಲ್ಲರ ಮೇಲೆ ವರ್ಷಿಸುತ್ತಿದ್ದ ಪ್ರೀತಿಯ ಪ್ರಚಂಡ ಶಕ್ತಿಯಿಂದ ಅವರು ಸ್ತಂಭೀಭೂತರಾಗಿದ್ದರು. ಆ ದಿವ್ಯಾನುಭವದಿಂದಾಗಿ ಆ ರಾತ್ರಿ ಅನೇಕರ ಜೀವನವು ಬದಲಾಯಿತು — ನಂತರದಲ್ಲಿ ಸಂನ್ಯಾಸಿಗಳಾಗಿ ಆಶ್ರಮವನ್ನು ಪ್ರವೇಶಿಸಿದ ಕೆಲವರದು ಮತ್ತು ನಂತರ ಸಂಸ್ಥೆಯ ಸದಸ್ಯರಾದ ಇನ್ನಿತರ ಅನೇಕರದೂ ಸೇರಿದಂತೆ. ಅವರ ಕೊನೆಯ ಮಾತುಗಳು ಅವರು ತುಂಬಾ ಪ್ರೀತಿಸುವ ಭಾರತವನ್ನು ಕುರಿತಾಗಿತ್ತು:
“ಎಲ್ಲಿ ಗಂಗೆ, ಕಾಡುಗಳು, ಹಿಮಾಲಯದ ಗುಹೆಗಳು ಮತ್ತು ಮಾನವರು ಭಗವಂತನ ಕನಸು ಕಾಣುವರೋ —
ನಾನು ಪವಿತ್ರಗೊಂಡಿದ್ದೇನೆ; ನನ್ನ ಶರೀರ ಆ ಭೂಮಿಯನ್ನು ಸ್ಪರ್ಶಿಸಿದೆ.”
ಅವರು ಈ ಮಾತುಗಳನ್ನು ಹೇಳುತ್ತಿದ್ದಂತೆ, ತಮ್ಮ ಕಣ್ಣುಗಳನ್ನು ಕೂಟಸ್ಥ ಕೇಂದ್ರದ ಕಡೆಗೆ ಎತ್ತಿದರು ಮತ್ತು ಅವರ ಶರೀರವು ನೆಲಕ್ಕೆ ಕುಸಿಯಿತು. ಕ್ಷಣಮಾತ್ರದಲ್ಲಿ, ನಮ್ಮ ಪಾದಗಳು ನೆಲಕ್ಕೆ ತಾಕುತ್ತಿಲ್ಲವೇನೋ ಎಂಬಷ್ಟು ವೇಗದಲ್ಲಿ ನಾವಿಬ್ಬರು ಶಿಷ್ಯರು [ದಯಾ ಮಾತಾ ಮತ್ತು ಆನಂದ ಮಾತಾ] ಅವರ ಪಕ್ಕದಲ್ಲಿದ್ದೆವು. ಅವರು ಸಮಾಧಿಸ್ಥರಾಗಿರಬಹುದು ಎಂದು ಯೋಚಿಸಿ, ನಾವು ಅವರ ಬಲ ಕಿವಿಯಲ್ಲಿ ಓಮ್ ಎಂದು ಮೃದುವಾಗಿ ಜಪಿಸಿದೆವು. (ಹಿಂದಿನ ವರ್ಷಗಳಲ್ಲಿ ಅವರು ಸಮಾಧಿ ಸ್ಥಿತಿಗೆ ಹೋದಾಗಲೆಲ್ಲ, ಸ್ವಲ್ಪ ಸಮಯದ ನಂತರ ಅವರ ಪ್ರಜ್ಞೆ ಮರಳದಿದ್ದರೆ, ಅವರ ಬಲ ಕಿವಿಯಲ್ಲಿ "ಓಮ್" ಎಂದು ಜಪಿಸುವ ಮೂಲಕ ನಾವು ಅವರನ್ನು ಆ ಸ್ಥಿತಿಯಿಂದ ಹೊರಗೆ ತರಬಹುದು ಎಂದು ಅವರು ನಮಗೆ ಹೇಳಿದ್ದರು.)
ನಾನು ಜಪಿಸುತ್ತಿರುವಂತೆಯೇ ಒಂದು ಅದ್ಭುತವಾದ ಅನುಭವವಾಯಿತು. ಅದನ್ನು ನಿಮಗೆ ಹೇಗೆ ವಿವರಿಸಬೇಕೆಂದು ನನಗೆ ತಿಳಿಯುತ್ತಿಲ್ಲ, ಆದರೆ ನಾನು ನನ್ನ ಪೂಜ್ಯ ಗುರುವಿನ ಬಳಿ ಮಂಡಿಯೂರಿ ಕುಳಿತಿದ್ದಾಗ, ಅವರ ಆತ್ಮವು ದೇಹವನ್ನು ತೊರೆಯುತ್ತಿರುವುದನ್ನು ನಾನು ನೋಡಿದೆ; ನಂತರ ಒಂದು ಪ್ರಚಂಡ ಶಕ್ತಿಯು ನನ್ನ ಅಸ್ತಿತ್ವವನ್ನು ಪ್ರವೇಶಿಸಿತು. ನಾನು “ಪ್ರಚಂಡ” ಎಂದು ಹೇಳುತ್ತೇನೆ ಏಕೆಂದರೆ ಅದು ಪ್ರೀತಿ, ಶಾಂತಿ ಮತ್ತು ತಿಳುವಳಿಕೆಯ ಅಗಾಧವಾದ ಆನಂದದಾಯಕ ಶಕ್ತಿಯಾಗಿತ್ತು. “ಏನಿದು?” ಎಂದು ನಾನು ಯೋಚಿಸಿದ ನೆನಪಿದೆ. ನನ್ನ ಪ್ರಜ್ಞೆಯು ಯಾವ ರೀತಿಯಲ್ಲಿ ಉನ್ನತೀಕರಿಸಲ್ಪಟ್ಟಿತ್ತು ಎಂದರೆ ನನಗೆ ಯಾವುದೇ ದುಃಖದ ಅನುಭವವಾಗಲಿಲ್ಲ, ನನಗೆ ಕಣ್ಣೀರು ಸುರಿಸಲಾಗಲಿಲ್ಲ; ಮತ್ತು ಆ ದಿನದಿಂದ ಇಂದಿನವರೆಗೆ ಅದು ಹಾಗೆಯೇ ಇದೆ, ಏಕೆಂದರೆ ಅವರು ನಿಜವಾಗಿಯೂ ನನ್ನೊಂದಿಗಿದ್ದಾರೆಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ.
ಸಾವಿಗೆ ಅವರ ಮೇಲೆ ಯಾವ ಹಕ್ಕೂ ಇರಲಿಲ್ಲ
ಯಾರೋ ನನ್ನನ್ನು ಕೇಳಿದರು, “ನಮ್ಮ ಗುರುಗಳು ತಮ್ಮ ದೇಹವನ್ನು ತೊರೆದಾಗಿನಿಂದ ನಿಮಗೆ ಕಾಣಿಸಿಕೊಂಡಿದ್ದಾರೆಯೇ?” ಹೌದು, ಅವರು ಕಾಣಿಸಿಕೊಂಡಿದ್ದಾರೆ. ನನ್ನ ಕಥೆಯನ್ನು ಮುಂದುವರಿಸುವಾಗ ನಾನು ಇದರ ಬಗ್ಗೆ ಹೆಚ್ಚು ಹೇಳುತ್ತೇನೆ. ಗುರೂಜಿಯವರ ಮರ್ತ್ಯರೂಪದ ಅಂತಿಮ ದರ್ಶನ ಪಡೆಯಲು ಸಾವಿರಾರು ಮಂದಿ ಆಗಮಿಸಿದ್ದರು. ಅವರ ಚರ್ಮವು ಹೊನ್ನಿನ ಬೆಳಕಿನಲ್ಲಿ ಸ್ನಾನ ಮಾಡಿದಂತೆ ಹೊಂಬಣ್ಣದ್ದಾಗಿತ್ತು; ಮತ್ತು ಪ್ರತಿಯೊಬ್ಬರಿಗೂ ಆಶೀರ್ವಾದ ಮಾಡುತ್ತಿರುವಂತೆ, ಅತ್ಯಂತ ಮಧುರವಾದ ಮತ್ತು ಸೌಮ್ಯವಾದ ಮಂದಹಾಸ ಅವರ ತುಟಿಗಳ ಮೇಲಿತ್ತು. ಗುರೂಜಿ ತಮ್ಮ ದೇಹವನ್ನು ತೊರೆದ ಇಪ್ಪತ್ತೊಂದು ದಿನಗಳವರೆಗೆ, ಆ ರೂಪವು ಪರಿಪೂರ್ಣವಾದ ಸಂರಕ್ಷಣೆಯ ಸ್ಥಿತಿಯಲ್ಲಿತ್ತು. ಕೊಳೆಯುವ ಯಾವೊಂದು ಲಕ್ಷಣವೂ ಇರಲಿಲ್ಲ. ಮತ್ತು ಅತ್ಯಂತ ಭಾವಶೂನ್ಯ ಪಶ್ಚಿಮ ಗೋಳಾರ್ಧದಲ್ಲಿಯೂ ಸಹ, ಪತ್ರಿಕೆಗಳು, ಈ ಅದ್ಭುತ ಘಟನೆಯ ಮುಖ್ಯಾಂಶಗಳು ಮತ್ತು ವರದಿಗಳಿಂದ ಕೊಂಡಾಡಿದವು. ಅವರ ದೇಹವನ್ನು ಗಮನಿಸಿದ ಶವ ಸಂಸ್ಕಾರ ನಿರ್ವಾಹಕರು “ಪರಮಹಂಸ ಯೋಗಾನಂದರ ಪ್ರಕರಣವು ನಮ್ಮ ಅನುಭವದಲ್ಲಿ ಅನನ್ಯವಾಗಿದೆ,” ಎಂದು ಹೇಳಿದ್ದಾರೆ.
ಅದಾದ ಸ್ವಲ್ಪ ಸಮಯದಲ್ಲೇ ಗುರುದೇವರ ಕಾರ್ಯದ ನಾಯಕತ್ವದ ಸಂಪೂರ್ಣ ಜವಾಬ್ದಾರಿ ನನ್ನ ಹೆಗಲ ಮೇಲೆ ಬಿತ್ತು.
ಒಬ್ಬ ಮಹಾನ್ ಗುರು ಇಹಲೋಕ ತ್ಯಜಿಸಿದಾಗ, ಗುರುವು ಪ್ರಾರಂಭಿಸಿದ ಪ್ರಚಾರಕಾರ್ಯವನ್ನು ಹೇಗೆ ಮಾರ್ಗದರ್ಶಿಸಬೇಕು ಎಂಬುದರ ಬಗ್ಗೆ ಕೆಲವು ಭಿನ್ನಾಭಿಪ್ರಾಯಗಳು ಉದ್ಭವಿಸುತ್ತವೆ. ನಾನು ಮುಖ್ಯಸ್ಥಳಾದ ನಂತರ ಬೆಳಿಗ್ಗೆ ಕಾರ್ಯದ ಚರ್ಚೆಯ ಸಮಯದಲ್ಲಿ ಪ್ರಶ್ನೆಗಳು ಉದ್ಭವಿಸಿದವು. ಕಾರ್ಯಭಾರ ನಿರ್ವಹಣೆ ಗೃಹಸ್ಥರ ಕೈಯಲ್ಲಿರಬೇಕೇ ಅಥವಾ ಸಂನ್ಯಾಸಿಗಳ ಕೈಯಲ್ಲಿರಬೇಕೇ? ಗುರೂಜಿಯವರು, ತಮ್ಮಂತಹ ಏಕ- ಮನಸ್ಕತೆಯ ಪರಿತ್ಯಾಗಿಗಳೊಂದಿಗೆ ಇರಬೇಕು ಎಂದು ನಮಗೆ ಹೇಳಿದ್ದರು; ಆದರೆ ಆ ನಿರ್ದೇಶನವನ್ನು ಕೆಲವು ಸದಸ್ಯರು ಪ್ರಶ್ನಿಸಿದರು. ನಿಜ, ಎಲ್ಲಾ ಭಕ್ತರ ಮೇಲೆ ಗುರೂಜಿಯವರ ಪ್ರೀತಿ ಒಂದೇ ತೆರನಾಗಿತ್ತು. ನನಗೂ ಯಾವುದೇ ತಾರತಮ್ಯ ಕಾಣಲಿಲ್ಲ; ಬಾಹ್ಯ ಅಂಶಗಳಿಂದ ಏಕೆ ಬಂಧಿಸಲ್ಪಡಬೇಕು? ಭಕ್ತನು ಭಗವಂತನನ್ನು ಪ್ರೀತಿಸುವ ಕಾರಣದಿಂದ ಭಕ್ತನಾಗುತ್ತಾನೆ, ಅವನು ಕಾವಿಯನ್ನು ಧರಿಸುವುದರಿಂದ ಅಲ್ಲ. ಆದರೂ ನನ್ನ ಮನಸ್ಸು ಚಿಂತಾಕ್ರಾಂತವಾಗಿತ್ತು.
ಆ ರಾತ್ರಿ, ನಾನು ಆಳವಾಗಿ ಧ್ಯಾನಿಸುತ್ತ ಮತ್ತು ಗುರೂಜಿಯವರಲ್ಲಿ ಪ್ರಾರ್ಥಿಸುತ್ತ ಅವರ ಉತ್ತರಕ್ಕಾಗಿ ಕೋರಿದೆ. ತುಂಬಾ ತಡವಾಗಿತ್ತು ಮತ್ತು ನಾನು ಇನ್ನೂ ಧ್ಯಾನಸ್ಥಳಾಗಿದ್ದೆ, ಆಗ ಇದ್ದಕ್ಕಿದ್ದಂತೆ ನನ್ನ ಶರೀರವು ಹಾಸಿಗೆಯಿಂದ ಮೇಲಕ್ಕೆದ್ದು, ಹಜಾರದಲ್ಲಿ ನಡೆದು ಗುರುದೇವರ ಕೋಣೆಯನ್ನು ಪ್ರವೇಶಿಸುವುದನ್ನು ನಾನು ಕಂಡೆ. ನಾನು ಹಾಗೆ ಮಾಡುತ್ತಿದ್ದಂತೆ, ನನ್ನ ಕಣ್ಣ ಮೂಲೆಯಿಂದ ಅವರ ಚದ್ದರ್ (ಶಾಲು) ಒಂದು ಸಣ್ಣ ಮಂದ ಮಾರುತಕ್ಕೆ ಸಿಕ್ಕಂತೆ ಪಟಪಟ ಹಾರುವುದನ್ನು ನಾನು ನೋಡಿದೆ. ನಾನು ತಿರುಗಿದೆ, ಅಲ್ಲಿ ನನ್ನ ಗುರುಗಳು ನಿಂತಿದ್ದರು! ಬಹಳ ಸಂತೋಷದಿಂದ ನಾನು ಅವರ ಬಳಿಗೆ ಓಡಿದೆ ಮತ್ತು ಅವರ ಪಾದದೂಳಿಯನ್ನು ತೆಗೆದುಕೊಳ್ಳಲು ಮೊಣಕಾಲೂರಿ, ಅವುಗಳನ್ನು ನನ್ನ ಹತ್ತಿರ ಹಿಡಿದೆ.
“ಗುರುಗಳೆ, ಗುರುಗಳೆ," ನಾನು ಅಳುತ್ತಿದ್ದೆ, "ನೀವು ಸತ್ತಿಲ್ಲ, ನೀವು ಹೊರಟುಹೋಗಿಲ್ಲ! ಸಾವಿಗೆ ನಿಮ್ಮ ಮೇಲೆ ಯಾವ ಹಕ್ಕೂ ಇಲ್ಲ. ” ಎಷ್ಟು ಮಧುರವಾಗಿ ಕೆಳಗೆ ಬಾಗಿ ನನ್ನ ಹಣೆಯನ್ನು ಸ್ಪರ್ಶಿಸಿದರು. ಅವರು ಹಾಗೆ ಮಾಡುತ್ತಿದ್ದಂತೆ, ಮರುದಿನ ಬೆಳಿಗ್ಗೆ ಸಭೆಯಲ್ಲಿ ನಾನು ನೀಡಬೇಕಾದ ಉತ್ತರವು ಆ ಕ್ಷಣದಲ್ಲಿ ನನಗೆ ತಿಳಿದಿತ್ತು. ಗುರೂಜಿ ನನ್ನನ್ನು ಹರಸಿದರು, ಮತ್ತು ನಾನು ಮತ್ತೊಮ್ಮೆ ನನ್ನ ಹಾಸಿಗೆಯ ಮೇಲೆ ಕುಳಿತಿರುವುದನ್ನು ಕಂಡೆ.
ಮರುದಿನ ಬೆಳಿಗ್ಗೆ, ನಾನು ಸಂಸ್ಥೆಯ ಡೈರೆಕ್ಟರ್‌ಗಳನ್ನು ಭೇಟಿ ಮಾಡಿ, ಗುರೂಜಿ ನನಗೆ ತಿಳಿಸಿದ ಉತ್ತರವನ್ನು ಹೇಳಿದೆ; ಮತ್ತು ಅಂದಿನಿಂದ ಅವರ ಕಾರ್ಯವು ಒಗ್ಗಟ್ಟಾಗಿದೆ ಮತ್ತು ಬೆಳೆಯುತ್ತಲೇ ಇದೆ. ಭಗವಂತನ ಆಶೀರ್ವಾದವೇ ಅಂಥದ್ದು.
ಚಿರಂಜೀವಿ ಗುರು
ಪರಮಹಂಸ ಯೋಗಾನಂದರು ಎಂದೆಂದಿಗೂ ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್/ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಗುರು ಮತ್ತು ಸರ್ವೋಚ್ಚ ಆಧ್ಯಾತ್ಮಿಕ ಮುಖ್ಯಸ್ಥರಾಗಿರುತ್ತಾರೆ. ಅವರು ಆರಂಭಿಸಿದ ಕಾರ್ಯವನ್ನು ಮುಂದುವರಿಸುವ ನಾವೆಲ್ಲರೂ ಅವರ ಶಿಷ್ಯರಾಗಿ ನಮ್ರತೆಯಿಂದ ಸೇವೆ ಸಲ್ಲಿಸುತ್ತೇವೆ. ಈ ಮಾರ್ಗಕ್ಕೆ ಬರುವ ಎಲ್ಲರ ಗಮನವನ್ನು ಮತ್ತು ಭಕ್ತಿಯನ್ನು ಭಗವಂತನ ಕಡೆಗೆ ತಿರುಗಿಸುವುದು ಮತ್ತು ಭಗವಂತನನ್ನು ಪರಿಚಯಿಸುವ ನಮ್ಮ ಗುರುಗಳ ಕಡೆಗೆ ಅವರನ್ನು ತಿರುಗಿಸುವುದು ನಮ್ಮ ಏಕೈಕ ಆಶಯವಾಗಿದೆ. ಅಂತಿಮ ಅರ್ಥದಲ್ಲಿ, ಭಗವಂತನೊಬ್ಬನೇ ಗುರು ಎಂದು ಗುರುದೇವರು ಸದಾ ನಮಗೆ ನೆನಪಿಸುವುದಕ್ಕೆ ತಡಮಾಡುತ್ತಿರಲಿಲ್ಲ. ಭಗವಂತನ ಸಾಧನವಾಗಿ, ಗುರುದೇವರ ಒಂದು ಆಶಯವೆಂದರೆ, ನಮ್ಮ ಆತ್ಮಗಳು, ಬೇರೆ ಯಾವುದರಿಂದಲೂ ಪಡೆಯಲು ಸಾಧ್ಯವಾಗದಂತಹುದೇನನ್ನು ಅರಸುತ್ತವೋ, ಅದನ್ನು ನಾವು ಪಡೆಯಲು ಸಾಧ್ಯವಾಗುವಂತೆ ನಮ್ಮನ್ನು ದಿವ್ಯ ಮೂಲಕ್ಕೆ ಸೆಳೆಯುವುದು. ಗುರುವಿಗೆ ನಿಷ್ಠರಾಗಿರುವುದು ಎಂದರೆ ಭಗವಂತನಿಗೆ ನಿಷ್ಠರಾಗಿರುವುದು. ಗುರುವಿನ ಮತ್ತು ಅವರ ಕಾರ್ಯದ ಸೇವೆ ಮಾಡುವುದೆಂದರೆ ಭಗವಂತನ ಸೇವೆ ಮಾಡುವುದು, ಎಂದರ್ಥ, ಏಕೆಂದರೆ ನಾವು ನಮ್ಮ ಮೊದಲ ನಿಷ್ಠೆಯನ್ನು ತೋರುವುದು ಭಗವಂತನಿಗೆ. ಗುರುವು ದೈವಿಕವಾಗಿ ನೇಮಿಸಲ್ಪಟ್ಟ ಆಧ್ಯಾತ್ಮಿಕ ಮಾಧ್ಯಮವಾಗಿದ್ದು, ಅವರ ಆಶೀರ್ವಾದ ಮತ್ತು ಪ್ರೇರಿತ ಬೋಧನೆಗಳ ಮೂಲಕ ನಾವು ಭಗವಂತನೆಡೆಗೆ ಹಿಂತಿರುಗುವ ಮಾರ್ಗವನ್ನು ಕಂಡುಕೊಳ್ಳುತ್ತೇವೆ.
ಗುರುಗಳು ಈ ಭೂತಲದಿಂದ ಹೋದ ನಂತರ ಭಕ್ತರಿಗೆ ಗುರು-ಶಿಷ್ಯರ ಸಂಬಂಧವನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟವಾಗಬಹುದು ಎಂದು ನಾನು ಭಾವಿಸುತ್ತಿದ್ದೆ. ನಾನು ಗುರೂಜಿಗೆ ಈ ಸಂದೇಹವನ್ನು ಹೇಳಲೇ ಇಲ್ಲ; ಆದರೂ ಅವರು ಹೆಚ್ಚಾಗಿ ನಮ್ಮ ಅನುಕ್ತ ಆಲೋಚನೆಗಳಿಗೆ ಉತ್ತರಿಸುತ್ತಿದ್ದರು. ಒಂದು ಸಂಜೆ ನಾನು ಅವರ ಪಾದದ ಬಳಿ ಕುಳಿತಿದ್ದೆ, ಆಗ ಅವರು ನನಗೆ ಹೇಳಿದರು: “ನಾನು ಹತ್ತಿರವಿರುವೆನೆಂದು ಭಾವಿಸುವವರಿಗೆ, ನಾನು ಹತ್ತಿರದಲ್ಲಿರುತ್ತೇನೆ. ಈ ಶರೀರ ಏನೂ ಅಲ್ಲ. ನೀವು ಈ ಭೌತಿಕ ರೂಪಕ್ಕೆ ಅಂಟಿಕೊಂಡಿದ್ದರೆ, ನನ್ನ ಅನಂತ ರೂಪದಲ್ಲಿ ನನ್ನನ್ನು ಕಂಡುಕೊಳ್ಳಲು ನಿಮಗೆ ಸಾಧ್ಯವಾಗುವುದಿಲ್ಲ. ಆದರೆ ನೀವು ಈ ಶರೀರವನ್ನು ಮೀರಿ ನೋಡಿದರೆ ಮತ್ತು ನಾನು ವಾಸ್ತವದಲ್ಲಿ ಇರುವಂತೆಯೇ ನನ್ನನ್ನು ನೋಡಿದರೆ, ಆಗ ನಾನು ಸದಾ ನಿಮ್ಮೊಂದಿಗೇ ಇದ್ದೇನೆ ಎಂದು ನಿಮಗೆ ತಿಳಿಯುತ್ತದೆ.”
ಕೆಲವು ಸಮಯದವರೆಗೆ ಆ ಹೇಳಿಕೆಯ ಸತ್ಯವನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಿಲ್ಲ. ಒಂದು ಸಂಜೆ, ನಾನು ಧ್ಯಾನ ಮಾಡುತ್ತಿದ್ದಾಗ, ಈ ಆಲೋಚನೆಯು ನನಗೆ ಬಂದಿತು: ಭೂಮಿಯ ಮೇಲೆ ಯೇಸು ಕ್ರಿಸ್ತನ ಸೇವೆಯ ಕೆಲವು ವರ್ಷಗಳಲ್ಲಿ ಅವನ ಸುತ್ತಲೂ ಇದ್ದ ಎಲ್ಲಾ ಶಿಷ್ಯರನ್ನು ಕುರಿತು ಯೋಚಿಸು. ಕೆಲವರು ಅವನ ಬಗ್ಗೆ ಉನ್ನತ ಭಾವನೆಯನ್ನಿರಿಸಿಕೊಂಡಿದ್ದರು; ಕೆಲವರು ಅವನಿಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದರು. ಆದರೆ ಜನಸಮೂಹದಲ್ಲಿದ್ದವರಲ್ಲಿ ಎಷ್ಟು ಜನ ಅವನನ್ನು ನಿಜವಾಗಿಯೂ ಅರ್ಥಮಾಡಿಕೊಂಡರು ಮತ್ತು ಕೊನೆಯವರೆಗೂ ಅನುಸರಿಸಿದರು? ಅವನ ಅತಿ ದೊಡ್ಡ ಪರೀಕ್ಷೆಯಲ್ಲಿ, ಹಾಗೂ ಅವನ ಕೊನೆ ಗಳಿಗೆಯಲ್ಲಿ ಎಷ್ಟು ಜನರು ಅವನ ಪರವಾಗಿ ನಿಂತು ಅವನನ್ನು ಬೆಂಬಲಿಸಿದರು? ಯೇಸುವಿನ ಪರಿಚಯವಿದ್ದ ಮತ್ತು ಅವನನ್ನು ಅನುಸರಿಸುವ ಅವಕಾಶವಿದ್ದ ಅನೇಕರು ಅವನ ಜೀವಿತ ಕಾಲದಲ್ಲಿಯೇ ಅವನನ್ನು ತ್ಯಜಿಸಿದರು. ಆದರೂ, ಏಸು ಕ್ರಿಸ್ತನು ಈ ಭೂಮಿಯನ್ನು ತೊರೆದ ಹನ್ನೆರಡು ಶತಮಾನಗಳ ನಂತರ, ಒಬ್ಬ ವಿನಮ್ರ, ವಿಶ್ವಾಸಪರ, ಸರಳ ಭಕ್ತ ಬಂದ, ಅವನು ತನ್ನ ಸುಂದರವಾದ ಜೀವನ ಮತ್ತು ಕ್ರಿಸ್ತನೊಂದಿಗೆ ಪರಿಪೂರ್ಣ ಶ್ರುತಿಗೂಡುವಿಕೆ ಮತ್ತು ಸಂಸರ್ಗದ ಮೂಲಕ, ಯೇಸು ಕಲಿಸಿದ ಎಲ್ಲದಕ್ಕೂ ವಿಶಿಷ್ಟ ಉದಾಹರಣೆಯಾಗಿದ್ದ ಮತ್ತು ಆ ಮೂಲಕ ಭಗವಂತನನ್ನು ಕಂಡುಕೊಂಡ. ಆ ವಿನಮ್ರ ಪುಟ್ಟ ಮನುಷ್ಯನೇ ಗುರೂಜಿ ತುಂಬಾ ಪ್ರೀತಿಸುತ್ತಿದ್ದ ಅಸ್ಸಿಸ್ಸಿಯ ಸಂತ ಫ್ರಾನ್ಸಿಸ್. ತನಗಿಂತಲೂ ಶತಮಾನಗಳ ಹಿಂದೆ ಭೂಮಿಯ ಮೇಲೆ ಕಾಣಿಸಿಕೊಂಡಿದ್ದ ತನ್ನ ಗುರುವಿನೊಂದಿಗೆ ಸಂತ ಫ್ರಾನ್ಸಿಸ್‌ಗೆ ಸಂಪೂರ್ಣವಾಗಿ ಶ್ರುತಿಗೂಡಲು ಸಾಧ್ಯವಾಗಿಸಿದ್ದ. ಅದೇ ಆಧ್ಯಾತ್ಮಿಕ ನಿಯಮ ಇಂದಿಗೂ ನಮಗೆ ಕೆಲಸ ಮಾಡುತ್ತದೆ ಎಂದು ನಾನು ಅರಿತುಕೊಂಡೆ.
ಭಗವಂತನಿಂದ ನೇಮಿಸಲ್ಪಟ್ಟ ನೈಜ ಗುರುವು ಚಿರಂಜೀವಿ. ಅವರಿಗೆ ತಮ್ಮವರ ಬಗ್ಗೆ ಅರಿವಿರುತ್ತದೆ ಮತ್ತು ಅವರು ತಮ್ಮ ಶಿಷ್ಯರಿರುವ ಲೋಕದಲ್ಲಿ ಇದ್ದರೂ, ಇಲ್ಲದಿದ್ದರೂ, ಅವರಿಗೆ ಸಹಾಯ ಮಾಡುತ್ತಾರೆ. ಭಕ್ತಿ ಮತ್ತು ಗುರು-ನೀಡಿದ ಆಳವಾದ ಧ್ಯಾನ ತಂತ್ರದ ಮೂಲಕ ತಮ್ಮನ್ನು ತಾವು ಗುರುದೇವರೊಂದಿಗೆ ಶ್ರುತಿಗೂಡಿಸಿಕೊಳ್ಳಲು ಶ್ರಮಿಸುವ ಪ್ರತಿಯೊಬ್ಬರೂ ಅವರ ಮಾರ್ಗದರ್ಶನದ, ಅವರ ಅನುಗ್ರಹದ, ಭರವಸೆಯನ್ನು ಇಂದಿಗೂ ಅಥವಾ ಮುಂದೆಂದೆದಿಗೂ, ಅವರು ಭೌತಿಕವಾಗಿ ನಮ್ಮೊಂದಿಗೆ ಇದ್ದಂತೆಯೇ ಅನುಭವಿಸುತ್ತಾರೆ. ಪರಮಹಂಸ ಯೋಗಾನಂದರು ನಿಧನರಾದ ಮೇಲೆ ಬಂದಿರುವ ಎಲ್ಲರಿಗೂ ಮತ್ತು ಅವರು ಭೂಮಿಯ ಮೇಲೆ ಜನ್ಮವೆತ್ತಿದ್ದಾಗ ಈ ಪೂಜ್ಯರನ್ನು ತಿಳಿದುಕೊಳ್ಳುವ ಅವಕಾಶವಿರಲಿಲ್ಲವಲ್ಲ ಎಂದು ಕೊರಗುವವರಿಗೂ ಇದು ಒಂದು ದೊಡ್ಡ ನೆಮ್ಮದಿ: ನೀವು ಧ್ಯಾನದಲ್ಲಿ ಮೌನವಾಗಿ ಕುಳಿತಾಗ ಅವರನ್ನು ಅರಿಯಲು ಸಾಧ್ಯವಿದೆ. ನಿಮ್ಮ ಭಕ್ತಿ ಮತ್ತು ಪ್ರಾರ್ಥನೆಯೊಂದಿಗೆ ಹೆಚ್ಚು ಹೆಚ್ಚು ಆಳವಾಗಿ ಹೋಗಿ, ಆಗ ನೀವು ಅವರ ಪವಿತ್ರ ಉಪಸ್ಥಿತಿಯನ್ನು ಅನುಭವಿಸುವಿರಿ. ಅವರ ಸ್ಥಾನದಲ್ಲಿ ಮುಂದುವರಿಯಬೇಕಿರುವ ನಾವು ಇದನ್ನು ಅರಿತುಕೊಳ್ಳದಿದ್ದರೆ ಮತ್ತು ಅನುಭವಿಸದಿದ್ದರೆ, ನಾವು ಅವರ ಕಾರ್ಯವನ್ನು ಮಾಡಲು ಅಶಕ್ತರಾಗುತ್ತೇವೆ. ನಾವು ಅವರ ಆಶೀರ್ವಾದ ಮತ್ತು ಮಾರ್ಗದರ್ಶನವನ್ನು ಅನುಭವಿಸುತ್ತಿರುವ ಕಾರಣದಿಂದಾಗಿ, ಅವರು ಭೌತಿಕ ರೂಪದಲ್ಲಿ ನಮ್ಮೊಂದಿಗೆ ಇದ್ದಾಗ ಎಷ್ಟು ಹತ್ತಿರವಿದ್ದರೋ ಇಂದೂ ಅಷ್ಟೇ ಹತ್ತಿರವಿದ್ದಾರೆಂದು ತಿಳಿದಿರುವುದರಿಂದಾಗಿ, ನಮಗೆ, ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್‌ನ ಸಂದೇಶವನ್ನು ಹರಡುವಲ್ಲಿ ನಮ್ಮ ಪಾತ್ರವನ್ನು ನಿರ್ವಹಿಸಲು ನಮ್ಮಲ್ಲಿ ಶಕ್ತಿ, ದೃಢತೆ, ಉತ್ಸಾಹ, ಭಕ್ತಿ ಮತ್ತು ಗಾಢನಂಬಿಕೆ ಇದೆ.
ಪರಮಹಂಸಜಿಯವರ ಜೀವನ ಮತ್ತು ಕಾರ್ಯಗಳು ಈಗಾಗಲೇ ಇತಿಹಾಸದ ಹಾದಿಯನ್ನು ಪ್ರಭಾವಿಸಲು ಸಾಕಷ್ಟು ಕೆಲಸ ಮಾಡಿವೆ ಮತ್ತು ಇದು ಆ ಪ್ರಭಾವದ ಪ್ರಾರಂಭವಷ್ಟೆ ಎಂದು ನನಗೆ ಮನವರಿಕೆಯಾಗಿದೆ. ಅವರು, ಮನುಕುಲದ ಮಾರ್ಗಗಳನ್ನು ಬೆಳಗಲು ಸತ್ಯದ (ಭಗವಂತನ) ಬೆಳಕಿನ ಅವತಾರಗಳಾಗಿ ಭೂಮಿಯ ಮೇಲೆ ವಾಸಿಸುತ್ತಿದ್ದ ದಿವ್ಯಾತ್ಮಗಳ ಸಮೂಹಕ್ಕೆ ಸೇರುತ್ತಾರೆ. ಜಗತ್ತು ಎಂದಿಗಾದರೂ ಆ ಬೆಳಕಿನ ಕಡೆಗೆ ತಿರುಗಲೇಬೇಕು, ಏಕೆಂದರೆ ಮನುಷ್ಯನು ತನ್ನ ಅಜ್ಞಾನದ ಕೈಯಿಂದಲೇ ನಾಶವಾಗಬೇಕೆನ್ನುವುದು ಭಗವಂತನ ಇಚ್ಛೆಯಲ್ಲ. ನಾಳೆಯ ದಿನ ಉತ್ತಮವಾಗಿರುತ್ತದೆ, ಅದು, ಮನುಕುಲವು ತನ್ನ ಕಣ್ಣುಗಳನ್ನು ತೆರೆದು ಮುಂಜಾನೆಯನ್ನು ನೋಡಲು ಕಾಯುತ್ತಿದೆ. ಆ ಹೊಸ ದಿನದ (ನವೋದಯದ) ಜ್ಯೋತಿಯನ್ನು ಹೊತ್ತವರೇ ಪರಮಹಂಸ ಯೋಗಾನಂದರು ಮತ್ತು ದಿವ್ಯ ತೇಜಸ್ಸನ್ನು (ಭಗವಂತನನ್ನು) ಪ್ರತಿಬಿಂಬಿಸಿದ ಇತರರು.
ಈಗಲೇ ಆರ್ಡರ್ ಮಾಡಿ ಫೈಂಡಿಂಗ್ ದ ಜಾಯ್ ವಿದಿನ್ ಯು