ಯೋಗಾನಂದರು ಮತ್ತು ಭಗವದ್ಗೀತೆ

ಯೋಗಾನಂದರು ಮತ್ತು ಭಗವದ್ಗೀತೆ

ಶ್ರೀ ದಯಾ ಮಾತಾ ಅವರಿಂದ

ಪರಮಹಂಸ ಯೋಗಾನಂದರ
ಗಾಡ್‌ ಟಾಕ್ಸ್‌ ವಿತ್‌ ಅರ್ಜುನ: ದಿ ಭಗವದ್ಗೀತಾ
ಪ್ರಸ್ತಾವನೆಯಿಂದ

“ಯಾವ ಸಿದ್ಧನಾದರೂ ಮಾನವಕುಲಕ್ಕೆ ಕೆಲವೊಂದು ಸತ್ಯಗಳನ್ನು ತಿಳಿಸದೇ ಈ ಭೂಮಿಯಿಂದ ಹೋಗುವುದಿಲ್ಲ. ಪ್ರತಿಯೊಂದು ಮುಕ್ತ ಆತ್ಮವೂ ತನ್ನ ಭಗವದ್‌-ಸಾಕ್ಷಾತ್ಕಾರದ ಬೆಳಕನ್ನು ಇತರರ ಮೇಲೆ ಪ್ರಕಾಶಿಸಲೇ ಬೇಕು.” ಎಷ್ಟು ಉದಾರತೆಯಿಂದ ಪರಮಹಂಸ ಯೋಗಾನಂದರು ಈ ಜವಾಬ್ದಾರಿಯನ್ನು ಪೂರೈಸಿದರು! — ಇವು ಅವರು ತಮ್ಮ ವಿಶ್ವಪರ್ಯಟನದ ಪ್ರಾರಂಭದಲ್ಲಿ ಹೇಳಿದ ಅಭಿಜಾತ ನುಡಿಗಳು. ಭವಿಷ್ಯದ ಪೀಳಿಗೆಗೆ ಅವರು ತಮ್ಮ ಉಪನ್ಯಾಸಗಳು ಮತ್ತು ಬರಹಗಳನ್ನು ಬಿಟ್ಟು ಹೆಚ್ಚಿನದೇನನ್ನೂ ಬಿಟ್ಟು ಹೋಗದೇ ಇದ್ದರೂ, ಅವರನ್ನು ದಿವ್ಯ ಬೆಳಕಿನ ಕೊಡುಗೈ ದಾನಿ ಎಂದು ನಿಜಕ್ಕೂ ಪರಿಗಣಿಸಲಾಗುತ್ತದೆ. ಅವರ ಭಗವಂತನೊಡನೆಯ ಸಂಸರ್ಗದಿಂದ ಯಥೇಚ್ಛವಾಗಿ ಹರಿದ ಸಾಹಿತ್ಯ ಕೃತಿಗಳಲ್ಲಿ, ಭಗವದ್ಗೀತೆಯ ಅನುವಾದ ಹಾಗೂ ಭಾಷ್ಯವನ್ನು ಗುರುಗಳ ಅತ್ಯಂತ ಸಮಗ್ರ ಕೊಡುಗೆ — ಕೇವಲ ಗಾತ್ರದಲ್ಲಲ್ಲ, ಅದರ ಸರ್ವತೋಮುಖ ವಿಚಾರಧಾರೆಯಿಂದಲೂ ಸಹ….

ಭಗವಾನ್‌ ಕೃಷ್ಣ ಗೀತೆಯಲ್ಲಿ ಹೇಳಿದ ಧ್ಯಾನದ ಯೋಗ ವಿಜ್ಞಾನದಲ್ಲಿ ಪರಮಹಂಸಜಿ ಅಸಾಧಾರಣ ಪ್ರಭುತ್ವವನ್ನು ಹೊಂದಿದ್ದರು. ಅವರು ಅನಾಯಾಸವಾಗಿ ಸಮಾಧಿಯ ಇಂದ್ರಿಯಾತೀತ ಸ್ಥಿತಿಗೆ ಹೋಗುವುದನ್ನು ನಾನು ಬಹಳಷ್ಟು ಸಲ ಗಮನಿಸಿದ್ದೇನೆ. ಅವರ ಭಗವತ್‌-ಸಂಸರ್ಗದಿಂದ ಹೊರಹೊಮ್ಮುತ್ತಿದ್ದ, ನುಡಿಗೆ ಸಿಲುಕದ ಶಾಂತಿ ಮತ್ತು ಆನಂದದಲ್ಲಿ ಅಲ್ಲಿ ನೆರೆದಿದ್ದ ನಾವೆಲ್ಲರೂ ಮೀಯುತ್ತಿದ್ದೆವು. ಕೇವಲ ಒಂದು ಸ್ಪರ್ಶದಿಂದ, ಒಂದು ನುಡಿಯಿಂದ, ಅಥವಾ ಒಂದು ನೋಟದಿಂದ ಅವರು ಇತರರಲ್ಲಿ ಭಗವಂತನ ಇರುವಿನ ಮಹತ್ತರ ಜಾಗೃತಿಯನ್ನು ಮೂಡಿಸಬಲ್ಲವರಾಗಿದ್ದರು, ಅಥವಾ ಅವರೊಡನೆ ಶ್ರುತಿಗೊಂಡ ಶಿಷ್ಯರಿಗೆ ಅತೀತಪ್ರಜ್ಞೆಯ ಆನಂದಪರವಶತೆಯ ಅನುಭವವನ್ನು ಅನುಗ್ರಹಿಸಬಲ್ಲವರಾಗಿದ್ದರು.

ಉಪನಿಷತ್ತುಗಳ ಒಂದು ಉದ್ಧೃತಭಾಗ ಹೀಗೆ ಹೇಳುತ್ತದೆ: “ಯಾವ ಋಷಿ ಸ್ವತಃ ಸದಾಕಾಲ, ನಿರಂತರ ಧ್ಯಾನದ ಫಲವಾದ, ಬ್ರಹ್ಮರೂಪಿ ಅಮೃತಪಾನದಲ್ಲಿ ತೊಡಗಿರುತ್ತಾನೋ, ಆ ಋಷಿಯು ಸನ್ಯಾಸಿಗಳಲ್ಲೇ ಮಹಾನ್‌ ಸನ್ಯಾಸಿ, ಅಂದರೆ ಪರಮಹಂಸನಾಗುತ್ತಾನೆ, ಮತ್ತು ಲೌಕಿಕ ದೋಷಗಳಿಂದ ಮುಕ್ತನಾದ ಒಬ್ಬ ದಾರ್ಶನಿಕ ಅಂದರೆ ಅವಧೂತನಾಗುತ್ತನೆ. ಅವನ ಒಂದು ನೋಟದಿಂದಲೇ ಇಡೀ ಜಗತ್ತು ಪವಿತ್ರವಾಗುತ್ತದೆ. ಅವನ ಸೇವೆಗೆ ತನ್ನನ್ನು ತಾನು ಅರ್ಪಿಸಿಕೊಂಡಿರುವ ಒಬ್ಬ ಅಜ್ಞಾನಿಯೂ ಕೂಡ ಮುಕ್ತನಾಗುತ್ತಾನೆ.”

ಪರಮಹಂಸ ಯೋಗಾನಂದರು ಒಬ್ಬ ನೈಜ ಗುರುವಿನ ವಿವರಣೆಗೆ ಹೊಂದುತ್ತಿದ್ದರು, ಭಗವತ್‌-ಸಾಕ್ಷಾತ್ಕಾರ ಹೊಂದಿದ ಒಬ್ಬ ಗುರು. ಅವರು ಪರಿಜ್ಞಾನ, ಕ್ರಿಯೆ ಹಾಗೂ ಭಗವಂತನ ಪ್ರೇಮದ ಒಂದು ಜೀವಂತ ಆಕರವಾಗಿದ್ದರು. ಗೀತೆ ಹೇಳುವ ಹಾಗೆ, ಅವರ ಸ್ವಾರ್ಥತ್ಯಾಗ ಹಾಗೂ ಸೇವಾ ಮನೋಭಾವವು, ಲೌಕಿಕ ವಿಷಯಗಳೆಡೆಗೆ ಮತ್ತು ಅವರ ಸಹಸ್ರಾರು ಅನುಯಾಯಿಗಳು ಅವರ ಮೇಲೆ ವರ್ಷಿಸುತ್ತಿದ್ದ ಪ್ರಶಂಸೆಗಳೆಡೆಗೆ ಸಂಪೂರ್ಣ ವೈರಾಗ್ಯವುಳ್ಳದಾಗಿತ್ತು. ಅವರ ಅದಮ್ಯ ಆಂತರಿಕ ಶಕ್ತಿ ಹಾಗೂ ಆಧ್ಯಾತ್ಮಿಕ ಶಕ್ತಿಗಳು ಮಧುರವಾದ ಸಹಜ ವಿನಯದಲ್ಲಿ ಅಡಕವಾಗಿದ್ದವು. ಅದರಲ್ಲಿ ಸ್ವಾರ್ಥ-ಕೇಂದ್ರಿತ ಅಹಂಗೆ ಯಾವುದೇ ಸ್ಥಾನವಿರಲಿಲ್ಲ. ಅವರು ತಮ್ಮ ಬಗ್ಗೆ ಹಾಗೂ ತಮ್ಮ ಕೆಲಸದ ಬಗ್ಗೆ ಸಂಬೋಧಿಸುವಾಗಲೂ, ಅದು ಯಾವುದೇ ವೈಯಕ್ತಿಕ ಸಾಧನೆಯ ಭಾವದಿಂದಾಗಿರಲಿಲ್ಲ. ತನ್ನ ಅಸ್ತಿತ್ವದ ನೈಜ ಆತ್ಮಪೂರಿತ ಭಗವತ್‌ ಸಾಕ್ಷಾತ್ಕಾರವನ್ನು ಸಿದ್ಧಿಸಿಕೊಂಡಮೇಲೆ, ಅವರಿಗೆ ಭಗವಂತನನ್ನು ಬಿಟ್ಟು ಬೇರೆ ಯಾವುದೇ ಅನನ್ಯತೆ ಇರಲಿಲ್ಲ.

ಶ್ರೀಕೃಷ್ಣನು ಅರ್ಜುನನಿಗೆ ತೋರ್ಪಡಿಸಿದ ದಿವ್ಯಜ್ಞಾನದ ಪರಾಕಾಷ್ಠೆಯು ಅಂದರೆ “ದರ್ಶನಗಳ ದರ್ಶನವು” (ವಿಶ್ವರೂಪ ದರ್ಶನ) ಗೀತೆಯ 11ನೆಯ ಅಧ್ಯಾಯದಲ್ಲಿ ಬರುತ್ತದೆ. ಭಗವಂತನು ತನ್ನ ವಿಶ್ವರೂಪವನ್ನು ತೋರಿಸುತ್ತಾನೆ: ಬ್ರಹ್ಮಾಂಡಗಳ ಮೇಲೆ ಬ್ರಹ್ಮಾಂಡಗಳು. ಊಹೆಗೆ ನಿಲುಕದಷ್ಟು ವಿಶಾಲವಾದದ್ದು. ಚೇತನದ ಅನಂತ ಸರ್ವಶಕ್ತಿಯಿಂದ ಸೃಷ್ಟಿಯಾದದ್ದು ಮತ್ತು ಪೋಷಿಸಲ್ಪಡುತ್ತಿರುವುದು. ಅದು ಏಕಕಾಲಕ್ಕೆ, ಉಪಪರಮಾಣುಗಳ ದ್ರವ್ಯದ ಅತ್ಯಂತ ಸಣ್ಣ ಕಣದ ಹಾಗೂ ಆಕಾಶಗಂಗೆಯ (ಗ್ಯಾಲಕ್ಸಿಯ) ಅಗಾಧತೆಗಳ ಬ್ರಹ್ಮಾಂಡೀಯ ಚಲನೆಯ ಅರಿವಿರುವುಂಥದ್ದು — ಅಸ್ತಿತ್ವದ ಭೌತಿಕ ಹಾಗೂ ಅಲೌಕಿಕ ಲೋಕಗಳ ಪ್ರತಿಯೊಂದು ಜೀವಿಯ ಪ್ರತಿಯೊಂದು ಆಲೋಚನೆಯ, ಭಾವನೆಯ, ಮತ್ತು ಕ್ರಿಯೆಯ ಅರಿವುಳ್ಳದ್ದು.

ಪರಮಹಂಸ ಯೋಗಾನಂದರು ಅಂತಹ ಒಂದು ಸರ್ವವ್ಯಾಪಿ ದರ್ಶನದಿಂದ ಅನುಗ್ರಹೀತರಾಗಿದ್ದಾಗ ನಾವು ಗುರುಗಳ ಚೇತನದ ಸರ್ವವ್ಯಾಪಿತ್ವವನ್ನು ಹಾಗೂ ಅವರ ಆಧ್ಯಾತ್ಮಿಕ ಪ್ರಭಾವದ ವಲಯವನ್ನು ಅನುಭವಿಸಿದ್ದೆವು. ಜೂನ್‌ 1948ರಲ್ಲಿ ಒಂದು ದಿನ ಸಂಧ್ಯಾಕಾಲದಿಂದ ಇಡೀ ರಾತ್ರಿ ಹಾಗೂ ಮುಂದಿನ ಬೆಳಿಗ್ಗೆಯ 10 ಗಂಟೆಯವರೆಗೂ, ತೆರೆದುಕೊಳ್ಳುತ್ತಿದ್ದ ವೈಶ್ವಿಕ ದರ್ಶನದ ಅವರ ಭಾವಪರವಶ ವಿವರಣೆಯ ಮೂಲಕ ನಮ್ಮಲ್ಲಿ ಕೆಲವು ಶಿಷ್ಯರು ಈ ವಿಶಿಷ್ಟ ಅನುಭವದ ಕಿಂಚಿತ್ತು ಅಂಶವನ್ನು ವೀಕ್ಷಿಸುವ ಸುಯೋಗವನ್ನು ಹೊಂದಿದ್ದೆವು.

ಆ ವಿಸ್ಮಯಕಾರಿ ಘಟನೆಯು, ಅವರ ಕಾಲ ಸಮೀಪಿಸುತ್ತಿದೆ ಎಂದು ಭವಿಷ್ಯವಾಣಿಯನ್ನು ನುಡಿದಿತ್ತು. ಮುಂದಿನ ದಿನಗಳಲ್ಲಿ ಪರಮಹಂಸಜಿ ಮೊಜಾವಿ ಡೆಸರ್ಟ್‌ನ ಒಂದು ಪುಟ್ಟ ಆಶ್ರಮದಲ್ಲಿ ಹೆಚ್ಚು ಹೆಚ್ಚು ಕಾಲ ಒಬ್ಬರೇ ಇರಲು ಆರಂಭಿಸಿದರು. ಉಳಿದಿರುವ ಸಮಯವನ್ನು ಎಷ್ಟು ಸಾಧ್ಯವೋ ಅಷ್ಟು ತಮ್ಮ ಬರಹಗಳನ್ನು ಪೂರೈಸುವುದಕ್ಕೆ ಮೀಸಲಾಗಿಟ್ಟರು. ತಮ್ಮ ಸಾಹಿತ್ಯಿಕ ಸಂದೇಶವನ್ನು ಜಗತ್ತಿಗೆ ಕೊಟ್ಟುಹೋಗಲು ಕೇಂದ್ರಿತಗೊಂಡ ಆ ಸಮಯವು, ಅವರ ಉಪಸ್ಥಿತಿಯಲ್ಲಿದ್ದ ನಮಗೆ ನಿಜವಾಗಿಯೂ ಒಂದು ಸುಯೋಗದ ಸಮಯವಾಗಿತ್ತು. ಅವರು ಸಂಪೂರ್ಣವಾಗಿ ತನ್ಮಯರಾಗಿರುತ್ತಿದ್ದರು. ಅವರು ತಮ್ಮೊಳಗೆ ಅವಲೋಕಿಸುತ್ತಿದ್ದ ಮತ್ತು ಬಾಹ್ಯದಲ್ಲಿ ಪ್ರಕಟಿಸುತ್ತಿದ್ದ ಸತ್ಯದ ಜೊತೆಗೆ ಸಂಪೂರ್ಣವಾಗಿ ಒಂದಾಗಿದ್ದರು. “ಅವರು ಕೆಲವು ನಿಮಿಷಗಳ ಕಾಲ ಉದ್ಯಾನವನದೊಳಗೆ ಬಂದರು,” ಎಂದು ಪರಮಹಂಸಜೀ ಅವರ ಆಶ್ರಯಧಾಮದ ಆವರಣದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಸನ್ಯಾಸಿ ಹೇಳಿದರು. “ಅವರ ಕಣ್ಣುಗಳು ಅತಿ ದೂರದಲ್ಲಿ ಏನನ್ನೋ ನೋಡುತ್ತಿರುವಂತಿತ್ತು. ಅವರು ನನಗೆ ಹೇಳಿದರು: ‘ಮೂರೂ ಜಗತ್ತುಗಳು ನನ್ನೊಳಗೆ ನೀರ್ಗುಳ್ಳೆಗಳಂತೆ ತೇಲಾಡುತ್ತಿವೆ.’ ಅವರಿಂದ ಹೊರಹೊಮ್ಮುತ್ತಿದ್ದ ಪರಿಶುದ್ಧ ಶಕ್ತಿಯು ವಸ್ತುತಃ ನನ್ನನ್ನು ಅವರಿಂದ ಕೆಲವು ಹೆಜ್ಜೆ ಹಿಂದೆ ಸರಿಸಿತು.”

“ಆ ಕೋಣೆಯಲ್ಲಿದ್ದ ಮಾನಸಿಕ ಪ್ರಭಾವ ನಂಬಲಸಾಧ್ಯವಾದುದಾಗಿತ್ತು; ನನಗೆ ಭಗವಂತನೊಳಗೆ ನಡೆಯುತ್ತಿರುವಂತಹ ಅನುಭವವಾಗುತ್ತಿತ್ತು” ಎಂದು ಗುರೂಜಿ ಕೆಲಸ ಮಾಡುತ್ತಿದ್ದ ಕೋಣೆಯನ್ನು ಪ್ರವೇಶಿಸಿದ ಒಬ್ಬ ಸನ್ಯಾಸಿ ನೆನಪಿಸಿಕೊಳ್ಳುತ್ತಾರೆ.

ಈ ಅವಧಿಯಲ್ಲಿ ಪರಮಹಂಸಜಿ ಒಬ್ಬ ಶಿಷ್ಯನಿಗೆ ಬರೆದರು: “ಈ ಭೌತಿಕ ಜಗತ್ತಿನೆಡೆಗೆ ನನ್ನ ಕಣ್ಣುಗಳನ್ನು ಮುಚ್ಚಿಕೊಂಡು, ಆದರೆ ಸ್ವರ್ಗದಲ್ಲಿ ಸದಾ ತೆರೆದಿಟ್ಟುಕೊಂಡು, ನಾನು ಇಡೀ ದಿನ ಧರ್ಮಶಾಸ್ತ್ರಗಳಿಗೆ ಸಂಬಂಧಿಸಿದ ವ್ಯಾಖ್ಯಾನಗಳನ್ನು ಹಾಗೂ ಪತ್ರಗಳ ಉಕ್ತಲೇಖನವನ್ನು ಮಾಡುತ್ತೇನೆ.”

ಗೀತಾ ಭಾಷ್ಯದ ಬಗ್ಗೆಯ ಪರಮಹಂಸಜೀಯವರ ಕಾರ್ಯವು ಕೆಲವು ವರ್ಷಗಳ ಹಿಂದೆಯೇ ಆರಂಭವಾಗಿತ್ತು (1932ರಲ್ಲಿ ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ ನಿಯತಕಾಲಿಕೆಯಲ್ಲಿ ಅದರ ಪ್ರಾರಂಭಿಕ ಸರಣಿಯು ಆರಂಭವಾಗಿತ್ತು) ಮತ್ತು ಅವರು ತಮ್ಮ ಏಕಾಂತ ಸ್ಥಳದಲ್ಲಿದ್ದ ಸಮಯದಲ್ಲಿ ಅದು ಪೂರ್ಣಗೊಂಡಿತು. ಅದರಲ್ಲಿ ಹಲವಾರು ವರ್ಷಗಳ ಅವಧಿಯಲ್ಲಿ ಬರೆದ ವಿಷಯವಸ್ತುವಿನ ಪುನರ್‌ ಪರಿಶೀಲನೆ, ಹಲವಾರು ಅಂಶಗಳ ಬಗ್ಗೆ ಸ್ಪಷ್ಟನೆ ಮತ್ತು ವಿಸ್ತರಣೆ, ಸರಣಿಯ ಹೊಸ ಓದುಗರಿಗೆ ಮಾತ್ರ ಅವಶ್ಯಕವೆಂದು ಕಂಡುಬಂದಿದ್ದ ಉದ್ಧೃತ ಭಾಗಗಳ ಪುನರಾವರ್ತನೆಯ ಸಂಕ್ಷೇಪಣ, ಹೊಸ ಪ್ರೇರಣೆಗಳ ಸೇರಿಸುವಿಕೆ, ಇತ್ಯಾದಿ ಒಳಗೊಂಡಿದ್ದವು — ಅವುಗಳಲ್ಲಿ ಯೋಗದ ಆಳವಾದ ಸೈದ್ಧಾಂತಿಕ ಅಂಶಗಳ ವಿವರಣೆಗಳೂ ಇದ್ದವು, ಅವುಗಳನ್ನು ಗುರುಗಳು ಪ್ರಾರಂಭಿಕ ವರ್ಷಗಳಲ್ಲಿ ಸಾಮಾನ್ಯ ಪ್ರೇಕ್ಷಕರಿಗೆ ತಿಳಿಸುವ ಪ್ರಯತ್ನವನ್ನು ಮಾಡಿರಲಿಲ್ಲ. ಅಲ್ಲಿಯವರೆಗೂ ಸಾಮಾನ್ಯ ಪ್ರೇಕ್ಷಕರು ವಿಜ್ಞಾನ ಕ್ಷೇತ್ರದ ರಹಸ್ಯವನ್ನು ಹೊರಗೆಡಹುವ ಆ ಆವಿಷ್ಕಾರಗಳ ಬಗ್ಗೆ ಪರಿಚತರಾಗಿರಲಿಲ್ಲ. ಆ ಆವಿಷ್ಕಾರಗಳು, ಗೀತೆಯ ವಿಶ್ವವಿಜ್ಞಾನ ಮತ್ತು ಮನುಷ್ಯನ ಭೌತಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಕೋನಗಳು ಪಶ್ಚಿಮದವರ ಮನಸ್ಸಿಗೆ ಹೆಚ್ಚು ಅರ್ಥವಾಗುವಂತೆ ಮಾಡಿವೆ — ಇವೆಲ್ಲವನ್ನೂ ಸಾಹಿತ್ಯಿಕ ರೂಪದ ಒಂದು ಗ್ರಂಥದಲ್ಲಿ ಸಿದ್ಧಪಡಿಸಬೇಕಾಗಿತ್ತು.

ಸಂಪಾದಕೀಯ ಕಾರ್ಯದಲ್ಲಿ ತಮಗೆ ಸಹಾಯ ಮಾಡಲು ಗುರುದೇವರು ತಾರಾಮಾತಾ (ಲೋರೀ ವೀ ಪ್ರೇಟ್‌) ಅವರ ಮೇಲೆ ನಿರ್ಭರರಾಗಿದ್ದರು. ತಾರಾ ಮಾತಾ ಅವರು ಗುರುಗಳ ಮಹೋನ್ನತ ಶಿಷ್ಯರಲ್ಲಿ ಒಬ್ಬರಾಗಿದ್ದು, ಅವರು ಗುರುಗಳನ್ನು 1924ರಲ್ಲಿ ಭೇಟಿಯಾದರು. ಇಪ್ಪತ್ತೈದು ವರ್ಷಗಳಿಗೂ ಹೆಚ್ಚು ಕಾಲ ಅವರು ಗುರುಗಳ ಜೊತೆ ಅವರ ಪುಸ್ತಕಗಳು ಹಾಗೂ ಅವರ ಇತರ ಬರಹಗಳ ಸಮಯದಲ್ಲಿ ಅವರೊಡನೆ ಕೆಲಸ ಮಾಡುತ್ತಿದ್ದರು. ಪರಮಹಂಸಜೀ ತಮ್ಮ ಜೊತೆಗಿದ್ದ ಈ ನಿಷ್ಠಾವಂತ ಶಿಷ್ಯೆಯು ವಹಿಸಿದ್ದ ಪ್ರಮುಖ ಪಾತ್ರದ ಬಗ್ಗೆ ಪ್ರಶಂಸೆ ಮಾಡದೆ ಮತ್ತು ತಮ್ಮ ಕೃತಜ್ಞತೆಯನ್ನು ಸಲ್ಲಿಸದೇ ಈ ಪುಸ್ತಕವು ಹೊರಬರುವುದಕ್ಕೆ ಬಿಡುತ್ತಿರಲಿಲ್ಲ ಎಂದು ನನಗೆ ಖಚಿತವಾಗಿ ಗೊತ್ತಿದೆ. ಅವರು ನನಗೆ ಹೇಳಿದರು: “ಆಕೆ ಒಬ್ಬ ಮಹಾನ್‌ ಯೋಗಿಯಾಗಿದ್ದಳು, ಆಕೆ ಹಲವಾರು ಜನ್ಮಗಳ ಕಾಲ ಈ ಭೌತಿಕ ಪ್ರಪಂಚದಿಂದ ದೂರವಿದ್ದು, ಭಾರತದಲ್ಲಿ ವಾಸಿಸುತ್ತಿದ್ದಳು. ಈ ಜನ್ಮದಲ್ಲಿ ಈ ಕಾರ್ಯಕ್ಕೆ ಸೇವೆ ಸಲ್ಲಿಸಲು ಪುನಃ ಜನ್ಮವೆತ್ತಿ ಬಂದಿದ್ದಾಳೆ.” ಹಲವಾರು ಸಾರ್ವಜನಿಕ ಸಂದರ್ಭಗಳಲ್ಲಿ ಅವರು ತಾರಾ ಮಾತಾ ಅವರ ಸಾಹಿತ್ಯಿಕ ಪರಿಣತಿ ಹಾಗೂ ಸೈದ್ಧಾಂತಿಕ ಜ್ಞಾನದ ಬಗ್ಗೆ ತಮ್ಮ ಮೌಲ್ಯಮಾಪನವನ್ನು ವ್ಯಕ್ತಪಡಿಸುತ್ತಿದ್ದರು: “ಆಕೆ ಈ ದೇಶದಲ್ಲಿ ಮಾತ್ರವಲ್ಲ ಬೇರೆ ಯಾವುದೇ ದೇಶದಲ್ಲಿ ಕೂಡ ಒಬ್ಬ ಪ್ರತಿಭಾನ್ವಿತ ಸಂಪಾದಕಳಾಗಿದ್ದಾಳೆ. ನನ್ನ ಗುರುಗಳಾದ ಶ್ರೀ ಯುಕ್ತೇಶ್ವರರನ್ನು ಹೊರತುಪಡಿಸಿ, ಲೋರಿಯನ್ನು ಬಿಟ್ಟು ಬೇರೆ ಯಾರ ಜೊತೆಯೂ ನಾನು ಭಾರತದ ದರ್ಶನದ ಬಗ್ಗೆ ಮಾತನಾಡುವುದನ್ನು ಇಷ್ಟು ಆನಂದಿಸಿಲ್ಲ.”

ತಮ್ಮ ಜೀವನದ ಮುಂದಿನ ವರ್ಷಗಳಲ್ಲಿ ಪರಮಹಂಸಜೀ ತಮ್ಮ ಇನ್ನೋರ್ವ ಸನ್ಯಾಸಿನಿ ಶಿಷ್ಯೆ ಮೃಣಾಲಿನಿ ಮಾತಾ ಅವರನ್ನು ತಮ್ಮ ಬರಹಗಳ ಸಂಪಾದನೆಗೆ ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡಲಾರಂಭಿಸಿದರು. ತಾವು ಯಾವುದಕ್ಕಾಗಿ ಅವರಿಗೆ ತರಬೇತಿ ನೀಡುತ್ತಿರುವರು ಎಂದು ನಮಗೆಲ್ಲ ಮನವರಿಕೆ ಮಾಡಿಕೊಟ್ಟಿದ್ದರು. ಗುರುದೇವರು ತಮ್ಮ ಬೋಧನೆಗಳ ಪ್ರತಿಯೊಂದು ವಿಷಯದ ಬಗ್ಗೆ ಅವರಿಗೆ ವೈಯಕ್ತಿಕ ಸೂಚನೆ ಸಲಹೆಗಳನ್ನು ನೀಡುವುದಷ್ಟೇ ಅಲ್ಲದೆ ತಮ್ಮ ಬರಹಗಳು ಹಾಗೂ ಉಪನ್ಯಾಸಗಳ ಸಿದ್ಧತೆ ಹಾಗೂ ಪ್ರಸ್ತುತಿಯ ಬಗ್ಗೆ ವ್ಯಕ್ತಿಗತ ಸೂಚನೆಯನ್ನೂ ನೀಡುತ್ತಿದ್ದರು.

ಒಂದು ದಿನ ತಮ್ಮ ಅಂತ್ಯಕಾಲ ಸಮೀಪಿಸುತ್ತಿದ್ದ ಸಮಯದಲ್ಲಿ ಅವರು ಹೇಳಿದರು: “ನನಗೆ ಲೋರಿಯ ಬಗ್ಗೆ ಬಹಳ ಚಿಂತೆಯಾಗಿದೆ. ಆಕೆಯ ಆರೋಗ್ಯ ನನ್ನ ಬರಹಗಳ ಕೆಲಸವನ್ನು ಪೂರ್ಣಗೊಳಿಸಲು ಬಿಡುವುದಿಲ್ಲ ಎಂದೆನಿಸುತ್ತಿದೆ.”

ಗುರುಗಳು ತಾರಾ ಮಾತಾ ಅವರ ಮೇಲೆ ಹೆಚ್ಚು ನಿರ್ಭರರಾಗಿರುವುದನ್ನು ತಿಳಿದಿದ್ದ ಮೃಣಾಲಿನಿ ಮಾತಾ ಕಳವಳದಿಂದ ನುಡಿದರು: “ಹಾಗಾದರೆ ಗುರುಗಳೇ, ಆ ಕೆಲಸವನ್ನು ಬೇರೆ ಯಾರು ಮಾಡಬಲ್ಲರು?”

ಗುರುಗಳು ತಮ್ಮ ನಿರ್ಣಾಯಕ ಧ್ವನಿಯಲ್ಲಿ ಉತ್ತರಿಸಿದರು: “ನೀನು ಅದನ್ನು ಪೂರ್ಣಗೊಳಿಸುವೆ.”

1952ರಲ್ಲಿ ಪರಮಹಂಸಜೀಯವರ ಮಹಾಸಮಾಧಿಯ ಕೆಲವು ವರ್ಷಗಳ ನಂತರ, ತಾರಾ ಮಾತಾ ಅವರು ಭಗವದ್ಗೀತೆಯ ಪ್ರತಿಯೊಂದು ಶ್ಲೋಕದ ಬಗ್ಗೆ ಗುರುಗಳ ಭಾಷ್ಯವನ್ನು ನಿಯತಕಾಲಿಕೆಯಲ್ಲಿ ಸರಣಿ ರೂಪದಲ್ಲಿ ನಿರಂತರವಾಗಿ ಪ್ರಕಟಿಸುತ್ತಾ ಹೋದರು (ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ/ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ನ ಸದಸ್ಯೆ ಹಾಗೂ ನಿರ್ದೇಶಕ ಮಂಡಳಿಯ ಪದಾಧಿಕಾರಿಯಾಗಿ, ಮತ್ತು ಸಂಸ್ಥೆಗಳ ಪ್ರಕಟಣೆಗಳ ಪ್ರಧಾನ ಸಂಪಾದಕಿಯಾಗಿ ಅನೇಕ ಗುರುತರ ಕಾರ್ಯಗಳ ನಡುವೆಯೂ). ಆದರೆ, ಪರಮಹಂಸಜೀಯವರು ಭವಿಷ್ಯ ನುಡಿದಿದ್ದ ಹಾಗೆ, ಗುರುಗಳು ನಿರ್ದೇಶಿಸಿದ ಹಾಗೆ ಗೀತೆಯ ಹಸ್ತಪ್ರತಿಯನ್ನು ಸಿದ್ಧಪಡಿಸುವ ಮೊದಲೇ ಆಕೆ ಇಹಲೋಕವನ್ನು ತ್ಯಜಿಸಿದರು. ಆ ಕಾರ್ಯವು ಮೃಣಾಲಿನಿ ಮಾತಾ ಅವರ ಮೇಲೆ ಬಿತ್ತು. ಆಕೆ, ಗುರೂಜೀ ನಿರೀಕ್ಷಿಸಿದ್ದ ಹಾಗೆ, ತಾರಾ ಮಾತಾರವರ ಮರಣನಾಂತರ ಆ ಕೆಲಸವನ್ನು ಸರಿಯಾಗಿ ಪೂರೈಸಬಲ್ಲ ಏಕಮಾತ್ರ ವ್ಯಕ್ತಿಯಾಗಿದ್ದಳು. ಏಕೆಂದರೆ ಆಕೆಗೆ ಗುರುಗಳು ನೀಡಿದ್ದ ತರಬೇತಿಯಿಂದ ಹಾಗೂ ಆಕೆ ಗುರುಗಳ ಚಿಂತನೆಗಳೊಂದಿಗೆ ಶ್ರುತಿಗೂಡಿದ್ದರಿಂದ….

ಭೂಮಿಯ ಮೇಲೆ ಪರಮಹಂಸ ಯೋಗಾನಂದರು ದ್ವಿಪಾತ್ರವನ್ನು ವಹಿಸಿದ್ದರು. ಅವರ ಹೆಸರು ಮತ್ತು ಕಾರ್ಯಗಳು ಅವರು ಸಂಸ್ಥಾಪಿಸಿದ ವಿಶ್ವವ್ಯಾಪಿ ಸಂಸ್ಠೆಯೊಂದಿಗೆ ಅಸದೃಶವಾಗಿ ಗುರುತಿಸಿಕೊಂಡಿತ್ತು: ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌/ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ; ಅವರ ಎಸ್‌ಆರ್‌ಎಫ್‌/ವೈಎಸ್‌ಎಸ್‌ ಕ್ರಿಯಾ ಯೋಗದ ಬೋಧನೆಗಳನ್ನು ಆದರದಿಂದ ಸ್ವೀಕರಿಸಿದ ಸಾವಿರಾರು ಜನರಿಗೆ ಅವರು ಅವರ ವೈಯಕ್ತಿಕ ಗುರುಗಳಾಗಿದ್ದಾರೆ. ಆದರೆ ಸಂಸ್ಕೃತದಲ್ಲಿ ಹೇಳುವ ಹಾಗೆ ಅವರು ಜಗದ್ಗುರುಗಳೂ ಆಗಿದ್ದರು. ಅವರ ಜೀವನ ಹಾಗೂ ಸಾರ್ವತ್ರಿಕ ಸಂದೇಶಗಳು ವಿವಿಧ ಹಾದಿಗಳ ಹಾಗೂ ಮತಗಳ ಅನುಯಾಯಿಗಳಿಗೆ ಪ್ರೇರಣೆ ಹಾಗೂ ಉದ್ಧಾರದ ಮೂಲವಾಗಿವೆ — ಅವರ ಆಧ್ಯಾತ್ಮಿಕ ಪರಂಪರೆಯು ಇಡೀ ಜಗತ್ತಿಗೆ ನೀಡಿದ ಒಂದು ವರವಾಗಿದೆ.

ನನಗೆ ಮಾರ್ಚ್‌ 7, 1952 ಅಂದರೆ ಭೂಮಿಯ ಮೇಲಿನ ಅವರ ಕಡೆಯ ದಿನದ ನೆನಪಾಗುತ್ತಿದೆ. ಗುರುದೇವರು ಬಹಳ ಮೌನವಾಗಿದ್ದರು, ಅವರ ಪ್ರಜ್ಞೆಯು ಮಾಮೂಲಿಗಿಂತಲೂ ಬಹಳ ಹೆಚ್ಚಾಗಿ ಆಂತರ್ಯದೊಳಗೆ ಸೆಳೆಯಲ್ಪಟ್ಟಿತ್ತು. ಆ ದಿನ, ಬಹಳಷ್ಟು ಸಲ ಅವರು ಕಣ್ಣುಗಳು ಈ ಸೀಮಿತ ಪ್ರಪಂಚದ ಮೇಲೆ ಕೇಂದ್ರಿತವಾಗದೆ, ಭಗವಂತನ ಇರವಿನ ಅಲೌಕಿಕ ಸಾಮ್ರಾಜ್ಯದಲ್ಲಿ ಕೇಂದ್ರಿತವಾಗಿದ್ದನ್ನು ನಾವು ಕೆಲವು ಶಿಷ್ಯರು ಗಮನಿಸಿದೆವು. ಅವರು ಮಾತನಾಡಿದ್ದೇ ಕಡಿಮೆ. ಏನಾದರೂ ನುಡಿದಿದ್ದೇ ಆದರೆ ಅವೆಲ್ಲವೂ ಅತ್ಯಂತ ಪ್ರೀತಿ, ಮೆಚ್ಚುಗೆ ಹಾಗೂ ದಯಾಪೂರ್ಣವೇ ಆಗಿದ್ದವು. ಆದರೆ ನನ್ನ ನೆನಪಿನಲ್ಲಿ ಅಚ್ಚೊತ್ತಿದ ಹಾಗೆ ಇರುವುದೆಂದರೆ, ಅವರ ಕೋಣೆಯನ್ನು ಪ್ರವೇಶಿಸಿದ ಪ್ರತಿಯೊಬ್ಬರ ಮೇಲೂ ಪ್ರಭಾವ ಬೀರುತ್ತಿದ್ದ ಅವರಿಂದ ಹೊರಹೊಮ್ಮುತ್ತಿದ್ದ ಅಗಾಧ ಶಾಂತಿ ಹಾಗೂ ಉತ್ಕಟ ದಿವ್ಯ ಪ್ರೇಮ. ದಿವ್ಯ ಮಾತೆಯೇ — ಕೋಮಲ ಪಾಲನೆ ಮತ್ತು ಅನುಕಂಪದ ಸಾಕಾರರೂಪವೇ ಆದ ಅನಂತ ಚೇತನದ ಆ ಅಂಶ, ಜಗತ್ತಿನ ಮುಕ್ತಿ ಸಾಧನವಾದ ಅನಿರ್ಬಂಧಿತ ಪ್ರೇಮ — ಅದು ಅವರನ್ನು ಸಂಪೂರ್ಣವಾಗಿ ಸ್ವಾಧಿನಪಡಿಸಿಕೊಂಡು, ಅವರ ಮೂಲಕ ಅವಳ ಇಡೀ ಸೃಷ್ಟಿಯನ್ನು ಆವರಿಸುವಂತಹ ಪ್ರೇಮದ ಅಲೆಗಳನ್ನು ಕಳಿಸುತ್ತಿರುವಂತೆ ಕಾಣುತ್ತಿತ್ತು.

ಅಂದು ಸಂಜೆ ಭಾರತದ ರಾಯಭಾರಿಗಳ ಗೌರವಾರ್ಥವಾಗಿ ಏರ್ಪಡಿಸಿದ್ದ ಒಂದು ದೊಡ್ಡ ಸ್ವಾಗತ ಕೂಟದಲ್ಲಿ ಪರಮಹಂಸಜಿ ಮುಖ್ಯ ಭಾಷಣಕಾರರಾಗಿದ್ದರು, ಮಹಾನ್‌ ಗುರುಗಳು ತಮ್ಮ ದೇಹವನ್ನು ತ್ಯಜಿಸಿ ಸರ್ವವ್ಯಾಪಿಯೆಡೆಗೆ ನಡೆದರು.

ಮಾನವಕೋಟಿಯ ಉದ್ಧಾರಕರಾಗಿ ಈ ಭೂಮಿಯ ಮೇಲೆ ಜನಿಸುವಂತಹ ಅಪೂರ್ವ ಆತ್ಮಗಳಂತೆಯೇ, ಪರಮಹಂಸಜೀಯವರ ಪ್ರಭಾವವು ಅವರ ನಂತರವೂ ಜೀವಂತವಾಗಿದೆ. ಅವರ ಅನುಯಾಯಿಗಳು ಅವರನ್ನು ಪ್ರೇಮಾವತಾರ, ಭಗವಂತನ ದಿವ್ಯ ಪ್ರೇಮದ ಅವತಾರ ಎಂದು ಪರಿಗಣಿಸುತ್ತಾರೆ. ತಮ್ಮ ಸೃಷ್ಟಿಕರ್ತನ ವಿಸ್ಮೃತಿಯಲ್ಲಿ ನಿದ್ರಿಸಿರುವಂತಹ ಹೃದಯಗಳಲ್ಲಿ ಭಗವಂತನ ಪ್ರೇಮವನ್ನು ಜಾಗೃತಗೊಳಿಸಲು ಮತ್ತು ಈಗಾಗಲೇ ಅವನನ್ನು ಅರಸುತ್ತಿರುವವರಿಗೆ ಮುಕ್ತಿಯ ಮಾರ್ಗವನ್ನು ತೋರಿಸಲು ಅವರು ಭೂಮಿಯ ಮೇಲೆ ಬಂದರು. ಗೀತೆಯ ಹಸ್ತಪ್ರತಿಯನ್ನು ಪರಿಶೀಲಿಸುವಾಗ, ಪರಮಹಂಸಜೀಯವರ ಭಾಷ್ಯಗಳಲ್ಲಿ ನಾವು ಸದಾ ಭಗವಂತನನ್ನು ಅರಸುವ ದಿವ್ಯ ಪ್ರೇಮದ ಒಂದು ಹೊಸ ಆಕರ್ಷಣ ಶಕ್ತಿಯನ್ನು, ಅಂದರೆ ಪ್ರತಿಯೊಬ್ಬ ಮಾನವಜೀವಿಯ ಸರ್ವೋತ್ಕೃಷ್ಟ ಗುರಿಯಾದ ಮತ್ತು ಇಡೀ ಮಾರ್ಗದಲ್ಲಿ ತನ್ನ ಆಸರೆಯ ಇರುವನ್ನು ಖಚಿತಪಡಿಸುವ ದಿವ್ಯ ಪ್ರೇಮದ ಆಯಸ್ಕಾಂತೀಯ ಸೆಳೆತವನ್ನು ಅನುಭವಿಸಿದೆ.

ನನ್ನ ಅಂತರಾಳದಲ್ಲಿ ಗುನುಗುನಿಸುತ್ತಿರುವ ಪರಮಹಂಸ ಯೋಗಾನಂದರ ಪೂರ್ಣ ಸಾರ್ವತ್ರಿಕ ಪ್ರಾರ್ಥನೆಯನ್ನು ನಾನು ಮತ್ತೆ ಮತ್ತೆ ಕೇಳುತ್ತಿದ್ದೇನೆ — ಅವರ ಜಾಗತಿಕ ಜೀವಿತೋದ್ದೇಶದ ಹಿಂದಿರುವ ಶಕ್ತಿಯನ್ನು ಮತ್ತು ಪವಿತ್ರ ಭಗವದ್ಗೀತೆಯ ದಿವ್ಯಜ್ಞಾನವನ್ನು ನಮಗೆ ನೀಡುವಲ್ಲಿ ಅವರ ಸ್ಫೂರ್ತಿಯನ್ನು ಅದು ಪ್ರಾಯಶಃ ಸ್ಪಷ್ಟವಾಗಿ ಚಿತ್ರಿಸುತ್ತದೆ:

ಭಗವಂತನೇ, ಜಗನ್ಮಾತೆಯೇ, ಸಖ, ಪ್ರಿಯ ದೇವ,
ನಿನ್ನ ಪ್ರೇಮವು ನನ್ನ ಭಕ್ತಿಯ ದೇಗುಲದಲ್ಲಿ ಸದಾ ಬೆಳಗುತ್ತಲಿರಲಿ
ಮತ್ತು ಎಲ್ಲ ಹೃದಯಗಳಲ್ಲಿ ನಿನ್ನ ಪ್ರೇಮವನ್ನು ನಾನು ಜಾಗೃತಗೊಳಿಸುವಂತಾಗಲಿ.

“ಹೊಸ ಸದ್ಗ್ರಂಥವೊಂದು ಉದಿಸಿದೆ”

ಪರಮಹಂಸ ಯೋಗಾನಂದರ
ಗಾಡ್‌ ಟಾಕ್ಸ್‌ ವಿತ್‌ ಅರ್ಜುನ: ಭಗವದ್ಗೀತೆಗೆ
ಶ್ರೀ ದಯಾ ಮಾತಾ ಅವರು ಬರೆದ ಹಿನ್ನುಡಿಯಿಂದ

ಏಕಾಂತಧಾಮದ ಆಶ್ರಮದಲ್ಲಿ ಭಗವದ್ಗೀತೆಯ ಮೇಲಿನ ಕೆಲಸದ ಹಲವಾರು ತಿಂಗಳುಗಳ ನಂತರ, ಒಂದು ದಿನ ಪರಮಹಂಸ ಯೋಗಾನಂದರು ಸಾಗರದ ಪಕ್ಕದಲ್ಲಿರುವ ಎನ್ಸಿನಿಟಾಸ್‌ನ ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ನ ಆಶ್ರಮದಲ್ಲಿ ಸ್ವಲ್ಪ ಕಾಲ ತಂಗಿದ್ದರು. ಆಗ ಬೆಳಗಿನ ಮೂರು ಘಂಟೆ ಇರಬಹುದು. ಆ ರಾತ್ರಿ ಅವರು ತಮ್ಮ ಗೀತೆಯ ಅನುವಾದ ಹಾಗೂ ಭಾಷ್ಯದ ಮೇಲೆ ತೀವ್ರವಾಗಿ ಏಕಾಗ್ರರಾಗಿದ್ದರು. ಅಂತೂ ಕೊನೆಯಲ್ಲಿ, ಹತ್ತಿರದಲ್ಲೇ ಮೌನವಾಗಿ ಕುಳಿತಿದ್ದ ಶಿಷ್ಯನ ಕಡೆ ತಿರುಗಿದರು. “ಈ ದಿನ ನೀನು, ನಾನು ಪೂರೈಸಲು ಬಂದ ಕಾರ್ಯದ ಮುಕ್ತಾಯಕ್ಕೆ ಸಾಕ್ಷಿಯಾಗುವಂತಹ ಮಹಾನ್‌ ಅನುಗ್ರಹವನ್ನು ಹೊಂದಿದ್ದೀಯ. ಆ ಕಾರ್ಯವನ್ನು ನನಗೆ ವಹಿಸಲಾಗಿತ್ತು, ಮತ್ತು ನಾನು ಈ ಗೀತೆಯನ್ನು ಬರೆಯುತ್ತೇನೆ ಎಂದು ಆಶ್ವಾಸನೆ ನೀಡಿದ್ದೆ — ಮತ್ತು ಅದು ಈಗ ನೆರವೇರಿದೆ. ಎಲ್ಲ ಮಹಾನ್‌ ಗುರುಗಳು [ಅಂದರೆ, ಎಸ್‌ಆರ್‌ಎಫ್‌/ವೈಎಸ್‌ಎಸ್‌ನ ಗುರುಗಳು] ಇಂದು ಈ ರಾತ್ರಿ ಈ ಕೋಣೆಯಲ್ಲಿದ್ದರು. ನಾನು ಅವರೊಂದಿಗೆ ಆಂತರ್ಯದಲ್ಲಿ ಮಾತನಾಡಿದ್ದೇನೆ. ಈಗ ಈ ಭೂಮಿಯ ಮೇಲಿನ ನನ್ನ ಇರುವು ನಿಮಿಷಗಳು, ಘಂಟೆಗಳು, ದಿನಗಳು ಅಥವಾ ವರ್ಷಗಳ ಕಾಲ ಇರಬಹುದು. ನನಗೆ ತಿಳಿದಿಲ್ಲ. ಅದು ದಿವ್ಯ ಮಾತೆಯ ಕೈಗಳಲ್ಲಿದೆ. ನಾನು ಕೇವಲ ಅವಳ ಕೃಪೆಯಿಂದ ಜೀವಿಸಿದ್ದೇನೆ.”

ನಂತರ ಆ ರಾತ್ರಿ ಅವರ ಕೆಲಸದಲ್ಲಿ ತಮ್ಮನ್ನು ಸುತ್ತುವರೆದಿರುವ ವಿಶೇಷ ಅನುಗ್ರಹವನ್ನು ಅವರೊಡನೆ ಹಂಚಿಕೊಳ್ಳಲು ಬಯಸಿ ಪರಮಹಂಸಜೀ ಇತರ ಹಿರಿಯ ಶಿಷ್ಯರನ್ನು ಕರೆಸಿದರು.

ತರುವಾಯ, ಒಬ್ಬರೇ ತಮ್ಮ ಮಲಗುವ ಕೋಣೆಯಲ್ಲಿದ್ದ ಪರಮಹಂಸಜೀ ಅವರ ದಿವ್ಯಾನುಭವಕ್ಕೆ ಒಂದು ಅತ್ಯದ್ಭುತ ಮುಂದಿನ ಪ್ರಸಂಗವಿತ್ತು. ಅವರು ನಮಗೆ ಹೇಳಿದರು: “ಕೋಣೆಯ ಮೂಲೆಯು ಪ್ರಕಾಶಮಾನವಾಗಿತ್ತು. ಒಂದು ಪರದೆಯ ಸಂದಿನಿಂದ ಮುಂಜಾನೆಯ ಕಿರಣಗಳು ಒಳಗೆ ಬರುತ್ತಿರಬಹುದು ಎಂದು ನಾನು ಭಾವಿಸಿದ್ದೆ. ಆದರೆ ನಾನು ನೋಡು ನೋಡುತ್ತಿದ್ದ ಹಾಗೆಯೇ ಆ ಬೆಳಕು ಹೆಚ್ಚು ಪ್ರಕಾಶಮಾನವಾಗಿ ವಿಸ್ತರಿಸಿತು.” ವಿನೀತರಾಗಿ, ಬಹಳ ಮೆಲುದನಿಯಲ್ಲಿ ಅವರು ಮುಂದುವರೆಸಿದರು: “ಆ ಪ್ರಕಾಶದ ಒಳಗಿನಿಂದ ಶ್ರೀ ಯುಕ್ತೇಶ್ವರ್‌ಜಿ ತಮ್ಮ ಕಣ್ಣುಗಳಲ್ಲಿ ಒಪ್ಪಿಗೆಯನ್ನು ಸೂಚಿಸುತ್ತಾ ಹೊರ ಬಂದರು.” …

ವರ್ಷಗಳ ಮುಂಚೆಯೇ ಶ್ರೀ ಯುಕ್ತೇಶ್ವರ್‌ಜಿ ಅವರಿಗೆ ಹೇಳಿದ್ದರು: “ನೀನು ವ್ಯಾಸರಿಗೆ ಪ್ರಕಟವಾದ ಕೃಷ್ಣಾರ್ಜುನರ ಸಂವಾದವನ್ನು ಕೇಳಿರುವೆಯಾದ್ದರಿಂದ ನೀನು ಭಗವದ್ಗೀತೆಯಲ್ಲಿರುವ ಎಲ್ಲ ಸತ್ಯವನ್ನೂ ಗ್ರಹಿಸಿದ್ದೀಯ. ಹೊರಡು, ಆ ಪ್ರಕಟಗೊಂಡ ಸತ್ಯವನ್ನು ನಿನ್ನ ವ್ಯಾಖ್ಯಾನದ ಮೂಲಕ ಕೊಡು: ಹೊಸ ಸದ್ಗ್ರಂಥವೊಂದು ಉದಿಸುತ್ತದೆ.”

ಈ ಹಸ್ತಪ್ರತಿಯ ಮೇಲಿನ ಹಲವಾರು ತಿಂಗಳುಗಳ ಹಾಗೂ ವರ್ಷಗಳ ಶ್ರಮದ ನಂತರ, ಪರಮಹಂಸಜಿ ಈಗ ಅವರ ಗುರುಗಳ ಭವಿಷ್ಯವಾಣಿಯ ಪೂರೈಕೆಯನ್ನು ಕಂಡರು. ಆನಂದದ ಮುಗುಳ್ನಗೆಯೊಂದಿಗೆ ತಮ್ಮ ಶಿಷ್ಯರಿಗೆ ಅವರ ಗೀತೆಯ ಭಾಷ್ಯವು ಪೂರ್ಣವಾಯಿತೆಂದು ತಿಳಿಸುತ್ತಾ ಶ್ರೀ ಯುಕೇಶ್ವರ್‌ಜಿ ತಮಗೆ ಹೇಳಿದ್ದನ್ನು ವಿನೀತವಾಗಿ ಮರುನುಡಿದರು: “ಹೊಸ ಸದ್ಗ್ರಂಥವೊಂದು ಉದಿಸಿದೆ.”

ಅವರು ಹೇಳಿದರು: “ನನ್ನ ಮಹಾನ್‌ ಗುರುಗಳು ಮತ್ತು ಭಗವದ್ಗೀತೆಯ ಮೂಲ ಪುರುಷರೊಡನೆ ನಾನು ಪರಮಾನಂದದಲ್ಲಿ ಮಿಳಿತವಾಗಿದ್ದರಿಂದ, ಗೀತೆಯನ್ನು ನನ್ನ ವಿವೇಚನೆಗೆ ತಿಳಿದಂತೆ ನಾನು ಬರೆದಿದ್ದೇನೆ. ನನ್ನಿಂದ ಹೊರ ಬಂದಿರುವ ಗೀತೆಯು ಅವರಿಗೆ ಸೇರಿದ್ದು. ನನ್ನ ಗುರುಗಳು ಏನು ಹೇಳಿದ್ದಾರೆಂದು ನನಗೆ ತಿಳಿದಿದೆ: ‘ಶತಮಾನಗಳ ಕಾಲ ವಿಭಿನ್ನ ವಿವರಣೆಗಳ ಹಲವಾರು ರೀತಿಯಲ್ಲಿ ಇಲ್ಲಿಯವರೆಗೂ ಕೇವಲ ಭಾಗಶಃ ಪ್ರಕಟಣೆಗೊಂಡಿದ್ದಂತಹ ಗೀತೆಗಿಂತ, ಹೊಸದೊಂದು ಗೀತೆಯು ಜಗತ್ತಿನ ಎಲ್ಲ ನೈಜ ಭಕ್ತರನ್ನೂ ತೋಯಿಸಲು ತನ್ನೆಲ್ಲ ತೇಜಸ್ಸಿನಿಂದ ಹೊರಬರುತ್ತಿದೆ.’”

ಗಾಡ್‌ ಟಾಕ್ಸ್‌ ವಿತ್‌ ಅರ್ಜುನ: ಭಗವದ್ಗೀತೆ, ಪರಮಹಂಸ ಯೋಗಾನಂದರಿಂದ

ಈಗಲೇ ಖರೀದಿಸಿ

ಇದನ್ನು ಹಂಚಿಕೊಳ್ಳಿ