ಕ್ರಿಯಾ ಯೋಗದ ಪ್ರಯೋಜನಗಳು

ಶ್ರೀ ಶ್ರೀ ಪರಮಹಂಸ ಯೋಗಾನಂದರ ಉಪನ್ಯಾಸಗಳು ಮತ್ತು ಬರಹಗಳಿಂದ:

Paramahansa Yogananda in Lake Shrine

ಕ್ರಿಯಾ ಯೋಗವು ಧರ್ಮದ ನೈಜ ಅನುಭವವನ್ನು ಕೊಡುತ್ತದೆ

“ನೀವು ಧ್ಯಾನ ಮಾಡಿದರೆ ನಿಮ್ಮ ಜೀವನವು ಆಧ್ಯಾತ್ಮಿಕ ಪ್ರಜ್ಞೆಯನ್ನು ಪ್ರತಿಬಿಂಬಿಸುತ್ತದೆ. ನನ್ನ ಪುಸ್ತಕ [ಯೋಗಿಯ ಆತ್ಮಕಥೆ], ಪ್ರಕಟವಾದಾಗಿನಿಂದ, ಎಲ್ಲರೂ ಕ್ರಿಯಾ ಯೋಗದ ಬಗ್ಗೆ ಕೇಳುತ್ತಿದ್ದಾರೆ. ಅದೇ ನನ್ನ ಉದ್ದೇಶವಾಗಿತ್ತು. ನಾನು ಮತಧರ್ಮಶಾಸ್ತ್ರದ ಅವಾಸ್ತವಿಕಗಳನ್ನು ನೀಡಲು ಬಂದಿಲ್ಲ, ಆದರೆ ಪ್ರಾಮಾಣಿಕರಾದವರು ಭಗವಂತನನ್ನು ನಿಜವಾಗಿಯೂ ತಿಳಿದುಕೊಳ್ಳಬಹುದಾದ ಒಂದು ತಂತ್ರವನ್ನು ನೀಡಲು ಬಂದಿದ್ದೇನೆ, ಅವನ ಬಗ್ಗೆ ಕೇವಲ ಸಿದ್ಧಾಂತವನ್ನು ಹೇಳುವುದಿಲ್ಲ ….ಕ್ರಿಯಾ ಅಭ್ಯಾಸವು ಧರ್ಮದ ನೈಜ ಅನುಭವವನ್ನು ನೀಡುತ್ತದೆ, ಅದು ಕೇವಲ ಭಗವಂತನ ಬಗ್ಗೆ ಮಾತನಾಡುವುದರಿಂದ ಬರುವುದಿಲ್ಲ. ಯೇಸು ಹೇಳಿದ್ದಾನೆ: ‘ನೀವು ನನ್ನನ್ನು ಪ್ರಭೂ, ಪ್ರಭೂ ಎಂದು ಏಕೆ ಕರೆಯುತ್ತೀರಿ ಮತ್ತು ನಾನು ಹೇಳುವದನ್ನು ಮಾಡುವುದಿಲ್ಲ?ʼ

“ಕ್ರಿಯಾ ಯೋಗದ ಮೂಲಕ ನಾನು ನನ್ನ ಆಧ್ಯಾತ್ಮಿಕ ಚಕ್ಷುವನ್ನು ತೆರೆದಾಗ, ಇಡೀ ಪ್ರಪಂಚವು ನನ್ನ ಪ್ರಜ್ಞೆಯಿಂದ ದೂರ ಹೋಗುತ್ತದೆ ಮತ್ತು ಭಗವಂತ ನನ್ನೊಂದಿಗಿರುತ್ತಾನೆ. ಮತ್ತು ಯಾಕಾಗಬಾರದು? ನಾನು ಅವನ ಮಗು. ಸಂತ ಇಗ್ನೇಷಿಯಸ್ ಹೇಳಿದ್ದಾನೆ, ‘ಭಗವಂತನು ಸಿದ್ಧ ಹೃದಯಗಳನ್ನು ಹುಡುಕುತ್ತಾನೆ, ಅವನು ಅವರಿಗೆ ತನ್ನ ಕೊಡುಗೆಗಳನ್ನು ನೀಡುತ್ತಾನೆ…’ ಅದು ಅತ್ಯಂತ ಸುಂದರ ಮತ್ತು ಅದನ್ನು ನಾನು ನಂಬುತ್ತೇನೆ. ಭಗವಂತ ತನ್ನ ಉಡುಗೊರೆಗಳನ್ನು ನೀಡಲು ಸಿದ್ಧ ಹೃದಯಗಳನ್ನು ಹುಡುಕುತ್ತಾನೆ. ಅವನು ನಮಗೆ ಎಲ್ಲವನ್ನೂ ನೀಡಲು ಸಿದ್ಧನಿದ್ದಾನೆ, ಆದರೆ ನಾವು ಸ್ವೀಕರಿಸುವ ಪ್ರಯತ್ನವನ್ನು ಮಾಡಲು ಸಿದ್ಧರಿಲ್ಲ.”

— ಪರಮಹಂಸ ಯೋಗಾನಂದ,
ಜರ್ನಿ ಟು ಸೆಲ್ಫ್-ರಿಯಲೈಝೇಷನ್

ಭಗವಂತನ ಆಶೀರ್ವಾದಗಳಿಗೆ ನಿಮ್ಮನ್ನು ತೆರೆದುಕೊಳ್ಳಿ

Divine Mother's eyes seeing devotees Prayers and Devotion

“ಭಕ್ತಿಯಿಂದ ಮಾಡಿದ ಪ್ರಾರ್ಥನೆಯು ಮುಕ್ತವಾಗಿ ಹರಿಯುವ ಭಗವಂತನ ಆಶೀರ್ವಾದಗಳಿಗೆ ತನ್ನನ್ನು ತಾನು ತೆರೆದುಕೊಳ್ಳುವ ಅದ್ಭುತ ಸಾಧನವಾಗಿದೆ, ಇದು ಮಾನವ ಜೀವನ ಮತ್ತು ಎಲ್ಲಾ ಪ್ರಯೋಜನಗಳ ಅನಂತ ಮೂಲದ ನಡುವಿನ ಅಗತ್ಯ ಕೊಂಡಿಯಾಗಿದೆ. ಆದರೆ ಮನಸ್ಸು ಬಾಹ್ಯದಲ್ಲಿ ಅಲೆದಾಡುತ್ತಿರುವಾಗ ಪ್ರಾರ್ಥನೆಯು ಪರಿಣಾಮಕಾರಿಯಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದಲೇ ಒಂದು ಗಂಟೆಯ ಕ್ರಿಯಾ ಯೋಗ ಧ್ಯಾನವು ಇಪ್ಪತ್ನಾಲ್ಕು ಗಂಟೆಗಳ ಸಾಮಾನ್ಯ ಪ್ರಾರ್ಥನೆಗಿಂತ ಹೆಚ್ಚಿನ ಪರಿಣಾಮವನ್ನು ಕೊಡುತ್ತದೆ.

“ಕ್ರಿಯಾ ತಂತ್ರವನ್ನು ಸ್ವಲ್ಪ ಸಮಯದವರೆಗಾದರೂ ಆಳವಾಗಿ ಅಭ್ಯಾಸ ಮಾಡುವವರು ಮತ್ತು ಅದರ ಪರಿಣಾಮವಾಗಿ ಉಂಟಾಗುವ ನಿಶ್ಚಲತೆಯಲ್ಲಿ ಧ್ಯಾನದಲ್ಲಿ ದೀರ್ಘಕಾಲ ಕುಳಿತುಕೊಳ್ಳುವವರು, ಪ್ರಾರ್ಥನೆಯ ಬಲವು ದ್ವಿಗುಣಗೊಳ್ಳುವುದನ್ನು, ಮೂರು ಪಟ್ಟು ಹೆಚ್ಚಾಗುವುದನ್ನು, ನೂರು ಪಟ್ಟು ಹೆಚ್ಚಾಗುವುದನ್ನು ಕಾಣುತ್ತಾರೆ. ಒಬ್ಬನು ಮೌನದ ಆಂತರಿಕ ಮಂದಿರವನ್ನು ಪ್ರವೇಶಿಸಿ, ಭಗವಂತನ ಪೂಜಾಪೀಠದ ಮುಂದೆ ಪ್ರಾರ್ಥನೆ ಮತ್ತು ಅವನ ಉಪಸ್ಥಿತಿಯ ಆವಾಹನೆಯೊಂದಿಗೆ ಪೂಜಿಸಿದರೆ, ಅವನು ಬೇಗನೆ ಬರುತ್ತಾನೆ. ಶರೀರದ ಸಂವೇದನಾ ಮೇಲ್ಮೈಯಿಂದ ಮತ್ತು ಅದರ ಪರಿಸರದಿಂದ ಪ್ರಜ್ಞೆಯನ್ನು ಹಿಂತೆಗೆದುಕೊಂಡು ಅದನ್ನು ಆತ್ಮ ಗ್ರಹಿಕೆಯ ಮಿದುಳು-ಮೇರುದಂಡದ ಮಂದಿರಗಳಲ್ಲಿ ಕೇಂದ್ರೀಕರಿಸಿದಾಗ, ಅದು ಪ್ರಾರ್ಥನೆ ಮಾಡಲು ಅತ್ಯಂತ ಪರಿಣಾಮಕಾರಿ ಸಮಯವಾಗಿರುತ್ತದೆ.”

— ಪರಮಹಂಸ ಯೋಗಾನಂದ,
ದ ಸೆಕೆಂಡ್‌ ಕಮಿಂಗ್‌ ಆಫ್‌ ಕ್ರೈಸ್ಟ್:‌
ದ ರಿಸರೆಕ್ಷನ್‌ ಆಫ್‌ ದ ಕ್ರೈಸ್ಟ್‌ ವಿದಿನ್‌ ಯು

ಕ್ರಿಯಾ ಯೋಗ—ಭಗವತ್ಸಂಪರ್ಕದ ಅತ್ಯುನ್ನತ ವಿಧಾನ

[ಭಗವದ್ಗೀತೆ IV:29]

ಕ್ರಿಯಾ ಯೋಗವನ್ನು ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಎರಡು ಬಾರಿ ಉಲ್ಲೇಖಿಸಿದ್ದಾನೆ. ಒಂದು ಶ್ಲೋಕವು ಹೀಗೆ ಹೇಳುತ್ತದೆ: “ಉಚ್ಛ್ವಾಸವನ್ನು ನಿಶ್ವಾಸಕ್ಕೆ ಕೊಟ್ಟು ಮತ್ತು ನಿಶ್ವಾಸವನ್ನು ಉಚ್ಛ್ವಾಸಕ್ಕೆ ಕೊಟ್ಟು, ಯೋಗಿಯು ಎರಡೂ ಉಸಿರುಗಳನ್ನು ತಟಸ್ಥಗೊಳಿಸುತ್ತಾನೆ; ಹೀಗೆ ಅವನು ಪ್ರಾಣವನ್ನು ಹೃದಯದಿಂದ ಬಿಡುಗಡೆ ಮಾಡುತ್ತಾನೆ ಮತ್ತು ಪ್ರಾಣಶಕ್ತಿಯನ್ನು ತನ್ನ ನಿಯಂತ್ರಣಕ್ಕೆ ತಂದುಕೊಳ್ಳುತ್ತಾನೆ.” ಅದರರ್ಥ ಹೀಗಿದೆ: “ಯೋಗಿಯು ಶ್ವಾಸಕೋಶ ಮತ್ತು ಹೃದಯದ ಕ್ರಿಯೆಯನ್ನು ಶಾಂತಗೊಳಿಸಿ ಪ್ರಾಣಶಕ್ತಿಯ ಹೆಚ್ಚುವರಿ ಪೂರೈಕೆಯನ್ನು ಪಡೆದುಕೊಳ್ಳುವ ಮೂಲಕ ಶರೀರದಲ್ಲಿ ಕೊಳೆಯುವಿಕೆಯನ್ನು ತಡೆಗಟ್ಟುತ್ತಾನೆ; ಅಪಾನ(ವಿಸರ್ಜಕ ಶಕ್ತಿ)ವನ್ನು ನಿಯಂತ್ರಿಸುವ ಮೂಲಕ ದೇಹದಲ್ಲಿ ಬೆಳವಣಿಗೆಗೆ ಸಂಬಂಧಿಸಿದ ರೂಪಾಂತರಗಳನ್ನು ಅವನು ತಡೆಗಟ್ಟುತ್ತಾನೆ. ಹೀಗೆ ಕ್ಷಯಿಸುವಿಕೆ ಮತ್ತು ಬೆಳವಣಿಗೆಯನ್ನು ತಟಸ್ಥಗೊಳಿಸಿ, ಯೋಗಿಯು ಪ್ರಾಣಶಕ್ತಿಯ ನಿಯಂತ್ರಣವನ್ನು ಕಲಿಯುತ್ತಾನೆ.”

“ಈ ಹತ್ತೊಂಬತ್ತನೆಯ ಶತಮಾನದಲ್ಲಿ ನಿನ್ನ ಮೂಲಕ ನಾನು ಪ್ರಪಂಚಕ್ಕೆ ಕೊಡುತ್ತಿರುವ ಈ ಕ್ರಿಯಾ ಯೋಗವೆಂಬುದು ಸಹಸ್ರಾರು ವರ್ಷಗಳ ಹಿಂದೆ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ವಿಜ್ಞಾನದ ಪುರುಜ್ಜೀವನವಷ್ಟೆ; ಅದೇ ಅನಂತರ ಪತಂಜಲಿ, ಕ್ರಿಸ್ತ, ಸಂತ ಜಾನ್, ಸಂತ ಪಾಲ್ ಮತ್ತಿತರ ಶಿಷ್ಯರ ತಿಳಿವಳಿಕೆಗೆ ಬಂದುದು,” ಎಂದು ಬಾಬಾಜಿಯವರು ಲಾಹಿರಿ ಮಹಾಶಯರಿಗೆ ಹೇಳಿದರು.

— ಪರಮಹಂಸ ಯೋಗಾನಂದ,
ಯೋಗಿಯ ಆತ್ಮಕಥೆ

ಕ್ರಿಯಾ ಯೋಗವು ಭಗವತ್ಸಂಪರ್ಕವನ್ನು ಸಾಧಿಸುವ ಅತ್ಯುನ್ನತ ವಿಧಾನವಾಗಿದೆ. ಭಗವಂತನಿಗಾಗಿ ನನ್ನ ಸ್ವಂತದ ಹುಡುಕಾಟದಲ್ಲಿ ನಾನು ಭಾರತದಾದ್ಯಂತ ಪಯಣಿಸಿದೆ ಮತ್ತು ಆಕೆಯ ಅನೇಕ ಶ್ರೇಷ್ಠ ಮಹಾತ್ಮರ ತುಟಿಗಳಿಂದ ವಿವೇಕಯುತ ವಾಣಿಯನ್ನು ಕೇಳಿದೆ. ಆದ್ದರಿಂದ ಯೋಗದಾ ಸತ್ಸಂಗ [ಸೆಲ್ಫ್-ರಿಯಲೈಝೇಷನ್] ಬೋಧನೆಗಳು ಭಗವಂತ ಮತ್ತು ಮಹಾತ್ಮರು ಮನುಕುಲಕ್ಕೆ ನೀಡಿದ ಅತ್ಯುನ್ನತ ಸತ್ಯಗಳು ಮತ್ತು ವೈಜ್ಞಾನಿಕ ತಂತ್ರಗಳಾಗಿವೆ ಎಂಬ ಮಾತನ್ನು ನಾನು ದೃಢೀಕರಿಸಬಲ್ಲೆ.

ಕ್ರಿಯಾ ಸಾಧನೆಯ ನಂತರ ಉಂಟಾಗುವ ಪರಿಣಾಮಗಳು, ಅವುಗಳೊಂದಿಗೆ ಅತ್ಯಂತ ಶಾಂತಿ ಮತ್ತು ಆನಂದವನ್ನು ತರುತ್ತವೆ. ಕ್ರಿಯಾ ಸಾಧನೆಯಿಂದ ಬರುವ ಆನಂದವು ಎಲ್ಲಾ ಆಹ್ಲಾದಕರ ಶಾರೀರಿಕ ಸಂವೇದನೆಗಳ ಆನಂದಗಳಿಗಿಂತ ದೊಡ್ಡದಾಗಿರುತ್ತದೆ. ‘ಸಂವೇದನಾ ಪ್ರಪಂಚಕ್ಕೆ ಆಕರ್ಷಿತನಾಗದೆ, ಯೋಗಿಯು ಆತ್ಮದಲ್ಲಿ ಅಂತರ್ನಿಹಿತವಾಗಿರುವ ನಿತ್ಯ ನೂತನ ಆನಂದವನ್ನು ಅನುಭವಿಸುತ್ತಾನೆ. ಪರಮಾತ್ಮನೊಂದಿಗೆ ಆತ್ಮದ ದಿವ್ಯವಾದ ಸಂಯೋಗದಲ್ಲಿ ತೊಡಗಿರುವ ಅವನು ಅವಿನಾಶೀ ಆನಂದವನ್ನು ಹೊಂದುತ್ತಾನೆ’ (ಭಗವದ್ಗೀತೆ V:21). ಧ್ಯಾನದಲ್ಲಿ ಅನುಭವಿಸಿದ ಆ ಆನಂದದಿಂದ ನಾನು ಸಾವಿರ ನಿದ್ರೆಗಳ ವಿಶ್ರಾಂತಿಯನ್ನು ಪಡೆದುಕೊಳ್ಳುತ್ತೇನೆ. ಅಭಿವೃದ್ಧಿ ಹೊಂದಿದ ಕ್ರಿಯಾ ಯೋಗಿಗೆ ನಿದ್ರೆಯು ವಾಸ್ತವಿಕವಾಗಿ ಅನಗತ್ಯವಾಗುತ್ತದೆ.

ಕ್ರಿಯಾ ಯೋಗದಿಂದ ಭಕ್ತನು ಸಮಾಧಿ ಸ್ಥಿತಿಯನ್ನು ಪ್ರವೇಶಿಸಿದಾಗ, ಅವನ ಕಣ್ಣುಗಳು, ಉಸಿರು ಮತ್ತು ಹೃದಯವು ನಿಶ್ಚಲವಾಗಿರುತ್ತವೆ, ಮತ್ತು ಇನ್ನೊಂದೇ ಪ್ರಪಂಚವು ಗೋಚರಿಸುತ್ತದೆ. ಉಸಿರು, ಶಬ್ದ ಮತ್ತು ಕಣ್ಣುಗಳ ಚಲನೆಗಳು ಈ ಜಗತ್ತಿಗೆ ಸೇರಿದವು. ಆದರೆ ಉಸಿರಾಟದ ಮೇಲೆ ನಿಯಂತ್ರಣವನ್ನು ಹೊಂದಿರುವ ಯೋಗಿಯು ಅಲೌಕಿಕ ಸೂಕ್ಷ್ಮ ಮತ್ತು ಕಾರಣ ಪ್ರಪಂಚಗಳನ್ನು ಪ್ರವೇಶಿಸಬಹುದು ಮತ್ತು ಅಲ್ಲಿ ಭಗವಂತನ ಸಂತರೊಂದಿಗೆ ಸಂವಹನ ನಡೆಸಬಹುದು ಅಥವಾ ವಿಶ್ವಪ್ರಜ್ಞೆಯನ್ನು ಪ್ರವೇಶಿಸಿ ಭಗವಂತನೊಂದಿಗೆ ಸಂವಹನ ನಡೆಸಬಹುದು. ಯೋಗಿಗೆ ಬೇರೆ ಯಾವುದರಲ್ಲೂ ಆಸಕ್ತಿ ಇರುವುದಿಲ್ಲ.

“ಯಾರು ನಾನು ಹೇಳಿದ್ದನ್ನು ನೆನಪಿನಲ್ಲಿರಿಸಿಕೊಂಡು, ಬೇರೆಲ್ಲದಕ್ಕೂ ಕಡಿಮೆ ಪ್ರಾಮುಖ್ಯತೆಯನ್ನು ನೀಡುವರೋ, ಅವರು ತಪ್ಪದೆ ಭಗವಂತನನ್ನು ಸೇರಿಕೊಳ್ಳುತ್ತಾರೆ.”

— ಪರಮಹಂಸ ಯೋಗಾನಂದ,
ಮ್ಯಾನ್ಸ್‌ ಇಟರ್ನಲ್‌ ಕ್ವೆಸ್ಟ್

ಕೆಟ್ಟ ಮಾನಸಿಕ ಅಭ್ಯಾಸಗಳು ಮತ್ತು ಕರ್ಮಗಳನ್ನು ಮೂಲೋತ್ಪಾಟನಗೊಳಿಸಿ

“ನಿಮ್ಮ ಪ್ರತಿಯೊಂದು ಅಭ್ಯಾಸವು ಮಿದುಳಿನಲ್ಲಿ ಒಂದು ನಿರ್ದಿಷ್ಟವಾದ ‘ತೋಡು’ ಅಥವಾ ಮಾರ್ಗವನ್ನು ಸೃಷ್ಟಿಸುತ್ತದೆ. ಈ ವಿನ್ಯಾಸಗಳು ನಿಮ್ಮನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸುವಂತೆ ಮಾಡುತ್ತವೆ, ಹೆಚ್ಚಿನ ವೇಳೆ ನಿಮ್ಮ ಇಚ್ಛೆಗೆ ವಿರುದ್ಧವಾಗಿ. ಮಿದುಳಿನಲ್ಲಿ ನೀವೇ ಸೃಷ್ಟಿಸಿಕೊಂಡ ತೋಡುಗಳನ್ನು ನಿಮ್ಮ ಜೀವನವು ಅನುಸರಿಸುತ್ತದೆ. ಆ ಅರ್ಥದಲ್ಲಿ ನೀವು ಸ್ವತಂತ್ರ ವ್ಯಕ್ತಿಯಲ್ಲ; ನೀವು ರೂಪಿಸಿದ ಅಭ್ಯಾಸಗಳಿಗೆ ನೀವು ಹೆಚ್ಚು ಕಡಿಮೆ ಬಲಿಪಶುವಾಗಿದ್ದೀರಿ. ಆ ವಿನ್ಯಾಸಗಳು ಎಷ್ಟು ಪಟ್ಟಾಗಿ ಕುಳಿತಿವೆ ಎಂಬುದರ ಮಟ್ಟಕ್ಕೆ ನೀವು ಸೂತ್ರದ ಗೊಂಬೆಯಾಗಿರುತ್ತೀರಿ. ಆದರೆ ಆ ದುರಭ್ಯಾಸಗಳ ಆದೇಶಗಳನ್ನು ನೀವು ತಟಸ್ಥಗೊಳಿಸಬಹುದು. ಹೇಗೆ? ಅದಕ್ಕೆ ವಿರುದ್ಧವಾದ ಉತ್ತಮ ಅಭ್ಯಾಸಗಳ ಮಿದುಳಿನ ವಿನ್ಯಾಸಗಳನ್ನು ಸೃಷ್ಟಿಸುವ ಮೂಲಕ. ಮತ್ತು ಧ್ಯಾನದಿಂದ ನೀವು ದುರಭ್ಯಾಸಗಳ ತೋಡುಗಳನ್ನು ಸಂಪೂರ್ಣವಾಗಿ ಅಳಿಸಿಹಾಕಲು ಸಾಧ್ಯವಿದೆ. ಬೇರೆ ದಾರಿಯಿಲ್ಲ. ಆದಾಗ್ಯೂ, ಒಳ್ಳೆಯ ಸಹವಾಸ ಮತ್ತು ಒಳ್ಳೆಯ ಪರಿಸರವಿಲ್ಲದೆ ನೀವು ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಸಾಧ್ಯವಿಲ್ಲ. ಮತ್ತು ಒಳ್ಳೆಯ ಸಹವಾಸ ಮತ್ತು ಧ್ಯಾನವಿಲ್ಲದೆ ದುರಭ್ಯಾಸಗಳಿಂದ ನಿಮ್ಮನ್ನು ನೀವು ಮುಕ್ತಗೊಳಿಸಿಕೊಳ್ಳಲು ಸಾಧ್ಯವಿಲ್ಲ….

“ಪ್ರತಿ ಬಾರಿ ನೀವು ಭಗವಂತನನ್ನು ಕುರಿತು ಆಳವಾಗಿ ಧ್ಯಾನಿಸಿದಾಗಲೂ, ನಿಮ್ಮ ಮಿದುಳಿನ ವಿನ್ಯಾಸಗಳಲ್ಲಿ ಪ್ರಯೋಜನಕಾರಿ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ನೀವೊಬ್ಬರು ಆರ್ಥಿಕವಾಗಿ ವೈಫಲ್ಯರು ಅಥವಾ ನೈತಿಕವಾಗಿ ವೈಫಲ್ಯರು ಅಥವಾ ಆಧ್ಯಾತ್ಮಿಕವಾಗಿ ವೈಫಲ್ಯರು ಎಂದುಕೊಳ್ಳೋಣ. ಆಳವಾದ ಧ್ಯಾನದ ಮೂಲಕ, ‘ನಾನು ಮತ್ತು ನನ್ನ ತಂದೆ ಒಂದೇ’ ಎಂದು ದೃಢೀಕರಿಸುವುದರಿಂದ, ನೀವು ಭಗವಂತನ ಮಗು ಎಂದು ಅರಿಯುವಿರಿ. ಆ ಆದರ್ಶವನ್ನು ಹಿಡಿದುಕೊಳ್ಳಿ. ನೀವು ಮಹದಾನಂದವನ್ನು ಅನುಭವಿಸುವವರೆಗೆ ಧ್ಯಾನ ಮಾಡಿ. ಆನಂದವು ನಿಮ್ಮ ಹೃದಯವನ್ನು ಸೋಕಿದಾಗ, ಭಗವಂತನು ನಿಮ್ಮ ಪ್ರಸಾರಕ್ಕೆ ಉತ್ತರಿಸಿದ್ದಾನೆ; ಅವನು ನಿಮ್ಮ ಪ್ರಾರ್ಥನೆಗಳಿಗೆ ಮತ್ತು ಸಕಾರಾತ್ಮಕ ಚಿಂತನೆಗೆ ಪ್ರತಿಕ್ರಿಯಿಸುತ್ತಿದ್ದಾನೆ ಎಂದರ್ಥ. ಇದು ಒಂದು ವಿಶಿಷ್ಟ ಮತ್ತು ನಿರ್ದಿಷ್ಟ ವಿಧಾನವಾಗಿದೆ:

“ಮಹತ್ತರ ಶಾಂತಿಯನ್ನು, ಮತ್ತು ನಂತರ ನಿಮ್ಮ ಹೃದಯದಲ್ಲಿ ಮಹದಾನಂದವನ್ನು ಅನುಭವಿಸಲು ಪ್ರಯತ್ನಿಸುತ್ತ, ಮೊದಲು, ‘ನಾನು ಮತ್ತು ನನ್ನ ತಂದೆ ಒಂದೇ’ ಎಂಬ ಚಿಂತನೆಯನ್ನು ಕುರಿತು ಧ್ಯಾನಿಸಿ. ಆ ಆನಂದ ಬಂದಾಗ, ‘ತಂದೆ, ನೀನು ನನ್ನೊಂದಿಗಿರುವೆ. ನನ್ನ ಮಿದುಳಿನ ಜೀವಕೋಶಗಳಲ್ಲಿರುವ ದೋಷಪೂರಿತ ಅಭ್ಯಾಸಗಳು ಮತ್ತು ಹಿಂದಿನ ಬೀಜ ಪ್ರವೃತ್ತಿಗಳನ್ನು ದಹಿಸಿ ಹಾಕಲು ನಾನು ನನ್ನೊಳಗಿರುವ ನಿನ್ನ ಶಕ್ತಿಯನ್ನು ಆಜ್ಞಾಪಿಸುತ್ತೇನೆ.’ ಧ್ಯಾನದಲ್ಲಿರುವ ಭಗವಂತನ ಶಕ್ತಿ ಅದನ್ನು ಮಾಡುತ್ತದೆ. ನೀವು ಪುರುಷ ಅಥವಾ ಮಹಿಳೆ ಎಂಬ ಸೀಮಿತ ಪ್ರಜ್ಞೆಯನ್ನು ತೊಡೆದುಹಾಕಿ; ನೀವು ಭಗವಂತನ ಮಗು ಎಂದು ಅರಿಯಿರಿ. ನಂತರ ಮನಸ್ಸಿನಲ್ಲೇ ದೃಢೀಕರಿಸಿ ಮತ್ತು ಭಗವಂತನಲ್ಲಿ ಪ್ರಾರ್ಥಿಸಿ: ‘ನಾನು, ನನ್ನ ಮಿದುಳಿನ ಜೀವಕೋಶಗಳಿಗೆ ಬದಲಾಗಲು, ನನ್ನನ್ನು ಸೂತ್ರದ ಗೊಂಬೆಯನ್ನಾಗಿ ಮಾಡಿದ ದುರಭ್ಯಾಸಗಳ ತೋಡುಗಳನ್ನು ನಾಶಮಾಡಲು ಆಜ್ಞಾಪಿಸುತ್ತೇನೆ. ಪ್ರಭುವೆ, ನಿನ್ನ ದಿವ್ಯ ಬೆಳಕಿನಲ್ಲಿ ಅವುಗಳನ್ನು ದಹಿಸಿಬಿಡು.’ ಮತ್ತು ನೀವು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಧ್ಯಾನ ತಂತ್ರಗಳನ್ನು, ಅದರಲ್ಲೂ ವಿಶೇಷವಾಗಿ ಕ್ರಿಯಾ ಯೋಗವನ್ನು ಅಭ್ಯಾಸ ಮಾಡಿದಾಗ, ಭಗವಂತನ ಬೆಳಕು ನಿಮಗೆ ದೀಕ್ಷಾಸ್ನಾನ ಮಾಡಿಸುವುದನ್ನು ನೀವು ನಿಜವಾಗಿಯೂ ಕಾಣುವಿರಿ.”

— ಪರಮಹಂಸ ಯೋಗಾನಂದ,
ದ ಡಿವೈನ್‌ ರೋಮಾನ್ಸ್

ಇದನ್ನು ಹಂಚಿಕೊಳ್ಳಿ