ಭಕ್ತಿ ಗಾಯನದ ಶಕ್ತಿ

ಪರಮಹಂಸ ಯೋಗಾನಂದರಿಂದ ವರ್ಡ್ಸ್‌ ಆಫ್‌ ಕಾಸ್ಮಿಕ್‌ ಚಾಂಟ್ಸ್‌ (ದಿವ್ಯ ಗೀತೆಗಳು) ಗೆ “ಮುನ್ನುಡಿ”

[ಅನೇಕ ಸಂಸ್ಕೃತಿಗಳ ಗಾಯನ ಸಂಪ್ರದಾಯಗಳು ಇಂದು ತಮ್ಮ ಸಹಜ ಮಾಧುರ್ಯತೆಗಾಗಿ ಮಾತ್ರವಲ್ಲದೆ ಅವುಗಳ ಆಧ್ಯಾತ್ಮಿಕ ಶಕ್ತಿಗಾಗಿಯೂ ಗುರುತಿಸಲ್ಪಟ್ಟಿವೆ. ಪರಮಹಂಸ ಯೋಗಾನಂದರು ಭಾರತದ ಭಕ್ತಿ ಗಾಯನ ಕಲೆಯನ್ನು ಪಶ್ಚಿಮಕ್ಕೆ ಪರಿಚಯಿಸುವಲ್ಲಿ ಆದ್ಯ ಪ್ರವರ್ತಕರಾಗಿದ್ದರು. 1930 ರ ದಶಕದಲ್ಲಿ ಬರೆದ ಅವರ ಪುಸ್ತಕ ವರ್ಡ್ಸ್ ಆಫ್ ಕಾಸ್ಮಿಕ್ ಚಾಂಟ್ಸ್‌ ಗೆ ಬರೆದ ಮುನ್ನುಡಿಯಲ್ಲಿ, “ಆಧ್ಯಾತ್ಮಿಕಗೊಳಿಸಿದ” ಗೀತೆಗಳು ಹೇಗೆ ಧ್ಯಾನದ ಸಿದ್ಧತೆಯಲ್ಲಿ ಮನಸ್ಸನ್ನು ಶಾಂತಗೊಳಿಸಲು ಮತ್ತು ಕೇಂದ್ರೀಕರಿಸಲು ನೆರವಾಗುತ್ತವೆ ಎಂಬುದನ್ನು ವಿವರಿಸುತ್ತಾರೆ:]

ಜನಪ್ರಿಯ ಹಾಡುಗಳು ಸಾಮಾನ್ಯವಾಗಿ ಭಾವುಕತೆ ಅಥವಾ ಕ್ಷಣಿಕ ಆಸಕ್ತಿಗಳಿಂದ ಪ್ರೇರಿತವಾಗುತ್ತವೆ. ಆದರೆ ಭಗವಂತನಿಂದ ಅಪರಿಮಿತ ಆನಂದದ ರೂಪದಲ್ಲಿ ಪ್ರತಿಕ್ರಿಯೆಯು ಪ್ರಜ್ಞಾಪೂರ್ವಕವಾಗಿ ಬರುವವರೆಗೆ, ಅವನ ಮೇಲಿನ ನಿಜವಾದ ಭಕ್ತಿಯ ಆಳದಿಂದ ಹುಟ್ಟಿದ ಮತ್ತು ನಿರಂತರವಾಗಿ, ಶ್ರಾವ್ಯವಾಗಿ ಅಥವಾ ಮಾನಸಿಕವಾಗಿ ಹಾಡಲ್ಪಟ್ಟ ಹಾಡೇ ಆಧ್ಯಾತ್ಮಿಕ ಗೀತೆ.

ಅಂತಹ ಹಾಡುಗಳು ಬೆಂಕಿ ಕಡ್ಡಿಯಂತೆ, ಭಕ್ತಿಯ ಅಡಿಗಲ್ಲಿನ ಮೇಲೆ ಗೀಚಿದಾಗಲೆಲ್ಲ ಭಗವಂತನ ಅರಿವಿನ ಅಗ್ನಿಯನ್ನು ಉತ್ಪತ್ತಿ ಮಾಡುತ್ತವೆ. ಸಾಮಾನ್ಯ ಹಾಡುಗಳು ಒದ್ದೆಯಾದ ಬೆಂಕಿ ಕಡ್ಡಿಗಳಂತಿದ್ದು ಅವು ದೈವ ಸಾಕ್ಷಾತ್ಕಾರದ ಯಾವುದೇ ಕಿಡಿಯನ್ನು ಉತ್ಪತ್ತಿ ಮಾಡುವುದಿಲ್ಲ.

ಈ ಪುಸ್ತಕದಲ್ಲಿನ ಪ್ರತಿಯೊಂದು ದಿವ್ಯ ಗೀತೆಯನ್ನು ಆಧ್ಯಾತ್ಮಿಕಗೊಳಿಸಲಾಗಿದೆ; ಅಂದರೆ, ವಿವಿಧ ಸಭೆಗಳಲ್ಲಿ ಹಾಡುವವರು ಭಗವಂತನಿಂದ ನಿಜವಾದ ಪ್ರತಿಕ್ರಿಯೆಯನ್ನು ಕಂಡುಕೊಳ್ಳುವವರೆಗೆ ಪ್ರತಿಯೊಂದು ಹಾಡನ್ನು ಗಟ್ಟಿಯಾಗಿ ಮತ್ತು ಮಾನಸಿಕವಾಗಿ ಹಾಡಿರುತ್ತಾರೆ. ಪ್ರತಿಯೊಬ್ಬ ಓದುಗರೂ, ಕಿವಿಗಿಂಪಾಗುವಂತೆ ಅಥವಾ ಭಾವನೆಗಳನ್ನು ಮೆಚ್ಚಿಸಲು ಹಾಡುವ ಸಾಮಾನ್ಯ ಸಂಗೀತದಂತಲ್ಲದೆ, ಈ ಗೀತೆಗಳನ್ನು ದಿವ್ಯ ಸಂಸರ್ಗಕ್ಕಾಗಿ ಬಳಸಲೆಂದು, ಆತ್ಮ-ಸಂಪೂರಿತ ಹಾಡುಗಳಂತೆ ಹಾಡುತ್ತಾರೆ ಎಂದು ಆಶಿಸಲಾಗುತ್ತದೆ.

ಶಬ್ದವು ವಿಶ್ವದಲ್ಲಿ ಅತ್ಯಂತ ಬಲಶಾಲಿ ಶಕ್ತಿಯಾಗಿದೆ

ಶಬ್ದ ಅಥವಾ ಕಂಪನವು ವಿಶ್ವದಲ್ಲಿ ಅತ್ಯಂತ ಬಲಶಾಲಿ ಶಕ್ತಿಯಾಗಿದೆ. ಸಂಗೀತವು ಒಂದು ದಿವ್ಯ ಕಲೆಯಾಗಿದ್ದು, ಅದನ್ನು ಮನರಂಜನೆಗಾಗಿ ಮಾತ್ರವಲ್ಲದೆ ಭಗವತ್ಸಾಕ್ಷಾತ್ಕಾರದ ಕಾರ್ಯವಿಧಾನವಾಗಿ ಬಳಸಬೇಕು. ಭಕ್ತಿಯ ಗಾಯನದಿಂದ ಉಂಟಾಗುವ ಕಂಪನಗಳು ವಿಶ್ವ ಕಂಪನ ಅಥವಾ ಓಂಕಾರದೊಂದಿಗೆ ಶ್ರುತಿಗೂಡುವಂತೆ ಮಾಡುತ್ತವೆ. “ಆರಂಭದಲ್ಲಿ ಶಬ್ದವಿತ್ತು ಮತ್ತು ಶಬ್ದವು ಭಗವಂತನೊಂದಿಗಿತ್ತು, ಮತ್ತು ಶಬ್ದವೇ ಭಗವಂತ” (ಜಾನ್‌ 1:1).

ಈ ಹಾಡುಗಳನ್ನು ಹಾಡುವವರಿಗೆ ಉತ್ತಮ ಫಲಿತಾಂಶಗಳು ಬೇಕಾಗಿದ್ದರೆ ಅವರು ಅವುಗಳನ್ನು ಏಕಾಂಗಿಯಾಗಿ ಅಥವಾ ನಿಜವಾದ ಭಗವದ್ಭಕ್ತರೊಂದಿಗೆ, ನಿರಂತರವಾಗಿ ಹೆಚ್ಚುತ್ತಿರುವ ಭಕ್ತಿ ಮತ್ತು ಭಾವದ ತೀವ್ರತೆಯಿಂದ ಹಾಡಬೇಕು. ಸ್ವರಲಿಪಿಗಳನ್ನು ಕಲಿತ ನಂತರ, ಒಬ್ಬರ ಅವಿಭಜಿತ ಗಮನವನ್ನು ಹೆಚ್ಚು ಹೆಚ್ಚು ಆಳವಾದ ಭಕ್ತಿಯಿಂದ ಅವುಗಳನ್ನು ಪುನರಾವರ್ತಿಸಲು ನೀಡಬೇಕು, ಹಾಡುವ ಆನಂದದಲ್ಲಿ ಮುಳುಗುವವರೆಗೆ ಗೀತೆಯಲ್ಲಿನ ಪದಗಳ ಅರ್ಥವನ್ನು ತಿಳಿದುಕೊಳ್ಳಲು ಸಂಪೂರ್ಣವಾಗಿ ಶ್ರಮಿಸಬೇಕು. ಈ ಆನಂದದಾಯಕ ಭಾವನೆಯೇ ಭಗವಂತನ ಮೊದಲ ಪ್ರತ್ಯಕ್ಷಾನುಭವ.

ಪ್ರಾಮಾಣಿಕತೆ, ದೃಢತೆ, ವಿಶ್ವಾಸ ಮತ್ತು ಅಂತರ್ಬೋಧೆಯಿಂದ ತುಂಬಿರುವ ಪದಗಳು ಅತ್ಯಂತ ಸ್ಫೋಟಕ ಕಂಪನ ಬಾಂಬ್‌ಗಳಂತಿದ್ದು, ಅದು ಕಷ್ಟಗಳ ಬಂಡೆಗಳನ್ನು ಸರಿಸಿ, ಬಯಸಿದ ಬದಲಾವಣೆಯನ್ನು ಸೃಷ್ಟಿಸುವ ಶಕ್ತಿಯನ್ನು ಹೊಂದಿರುತ್ತವೆ.

ಐದು ಸ್ಥಿತಿಗಳೆಂದರೆ: ಗಟ್ಟಿಯಾಗಿ ಹಾಡುವುದು—ಪಿಸುದನಿಯಲ್ಲಿ ಹಾಡುವುದು—ಮನಸ್ಸಿನಲ್ಲೇ ಹಾಡುವುದು-—ಸುಪ್ತಪ್ರಜ್ಞೆಯಲ್ಲಿ ಹಾಡುವುದು—ಅತೀತ ಪ್ರಜ್ಞೆಯಲ್ಲಿ ಹಾಡುವುದು. ಒಬ್ಬರ ಆಲೋಚನೆಗಳು ಮತ್ತು ಚಟುವಟಿಕೆಗಳ ಹಿನ್ನೆಲೆಯಲ್ಲಿ ಮನಸ್ಸು ಸಲೀಸಾಗಿ ಒಂದು ಗೀತೆಯನ್ನು ಪುನರಾವರ್ತಿಸಿದಾಗ, ಆಂತರಿಕ ಪ್ರಜ್ಞೆಯೊಂದೇ ಇದ್ದಾಗ ಸುಪ್ತಪ್ರಜ್ಞೆಯ ಪಠಣವು ಸ್ವಯಂಚಾಲಿತವಾಗುತ್ತದೆ.

ಅತೀತಪ್ರಜ್ಞೆಯ ಗಾಯನವು ಓಂಕಾರದ ಅನುಭೂತಿಗೆ ಕಾರಣವಾಗುತ್ತದೆ

ಅತೀತಪ್ರಜ್ಞೆಯ ಪಠಣವೆಂದರೆ, ಇದರಲ್ಲಿ ಆಂತರಿಕ ಪಠಣ ಕಂಪನಗಳು ಸಾಕಾರವಾಗಿ ಪರಿವರ್ತಿತವಾಗುತ್ತವೆ ಮತ್ತು ಅವು ಅತೀತಪ್ರಜ್ಞೆ, ಸುಪ್ತಪ್ರಜ್ಞೆ ಮತ್ತು ಜಾಗೃತ ಮನಸ್ಸುಗಳಲ್ಲಿ ಸ್ಥಾಪಿತವಾಗುತ್ತವೆ. ನಿಜವಾದ ವಿಶ್ವ ಸ್ಪಂದನ ಅಥವಾ ಓಂಕಾರದ ಮೇಲೆ, ಕಾಲ್ಪನಿಕ ಅಥವಾ ಬಾಹ್ಯ ಶಬ್ದದ ಮೇಲೆ ಅಲ್ಲ, ಅವಿಚ್ಛಿನ್ನವಾಗಿ ಗಮನವನ್ನು ಹಿಡಿದಿಟ್ಟುಕೊಳ್ಳುವುದು ನಿಜವಾದ ಅತೀತಪ್ರಜ್ಞಾ ಪಠಣದ ಆರಂಭವಾಗಿದೆ.

ಬೈಬಲ್‌ನಲ್ಲಿರುವ ದಶಾನುಶಾಸನಗಳಲ್ಲಿ ಒಂದು: “ಪ್ರಭುವಾದ ನಿನ್ನ ಭಗವಂತನ ಹೆಸರನ್ನು ನೀನು ವ್ಯರ್ಥವಾಗಿ ತೆಗೆದುಕೊಳ್ಳಬಾರದು.” ಭಗವಂತನ ಮೇಲೆ ಸಂಪೂರ್ಣ ಗಮನವಿಲ್ಲದೆ ಒಬ್ಬನು ಅನ್ಯಮನಸ್ಕನಾಗಿ ಪಠಣ ಅಥವಾ ಪ್ರಾರ್ಥನೆಯನ್ನು ಪುನರಾವರ್ತಿಸಿದರೆ, ಅವನು ದೇವರ ನಾಮವನ್ನು ವ್ಯರ್ಥವಾಗಿ ತೆಗೆದುಕೊಂಡಂತೆ; ಅಂದರೆ, ಫಲಿತಾಂಶವಿರುವುದಿಲ್ಲ, ಆ ನಾಮದ ಸರ್ವವ್ಯಾಪಿ ಶಕ್ತಿಯನ್ನು ಬಳಸಿಕೊಂಡಿರುವುದಿಲ್ಲ ಮತ್ತು ಭಗವಂತನ ಪ್ರತಿಕ್ರಿಯೆಯನ್ನು ಪಡೆದಿರುವುದಿಲ್ಲ. ಅಂತಹ ಗಿಣಿಪಾಠದ ಪ್ರಾರ್ಥನೆಗಳಿಗೆ ಭಗವಂತ ಉತ್ತರಿಸುವುದಿಲ್ಲ. ನಿರಂತರವಾಗಿ ಹೆಚ್ಚುತ್ತಿರುವ ತಿಳುವಳಿಕೆ ಮತ್ತು ಭಕ್ತಿಭಾವದೊಂದಿಗೆ ಪಠಣವನ್ನು ಪುನರಾವರ್ತಿಸುವುದೆಂದರೆ ಭಗವಂತನ ಹೆಸರನ್ನು ವ್ಯರ್ಥವಾಗಿಯಲ್ಲದೆ, ಪರಿಣಾಮಕಾರಿಯಾಗಿ ತೆಗೆದುಕೊಂಡಂತೆ.

ಈ ಆಧ್ಯಾತ್ಮೀಕರಿಸಿದ ಗೀತೆಗಳನ್ನು, ದಿವ್ಯ ಗೀತೆಗಳನ್ನು ನಿಜವಾದ ಭಕ್ತಿಯಿಂದ ಹಾಡುವವನು ಭಗವಂತನ ಸಂಸರ್ಗ ಮತ್ತು ಭಾವಪರವಶವಾದ ಆನಂದವನ್ನು ಮತ್ತು ಅವುಗಳ ಮೂಲಕ ದೇಹ, ಮನಸ್ಸು ಮತ್ತು ಆತ್ಮದ ಉಪಶಮನವನ್ನು ಕಂಡುಕೊಳ್ಳುತ್ತಾನೆ.

ಭಕ್ತನಿಗೆ ಭಗವಂತ ಉತ್ತರ ಕೊಟ್ಟಿದ್ದಾನೆ ಎಂಬುದಕ್ಕೆ ಆನಂದವೇ ಸಾಕ್ಷಿ

ತನ್ನ ಹೃದಯ ರೇಡಿಯೊದಲ್ಲಿ ಮಹಾನ್ ಆನಂದವು ತೇಲಿಹೋಗುವುದನ್ನು ಅನುಭವಿಸುವವರೆಗೆ, ಗಾಯಕನು, ಪುನರಾವರ್ತನೆಯಿಂದ ಹೆಚ್ಚುತ್ತಾ ಹೋಗುವ ಶಕ್ತಿಯನ್ನು ಬಳಸಿಕೊಂಡು ಈ ಪ್ರತಿಯೊಂದು ಗೀತೆಯನ್ನು ಒಂದಲ್ಲ, ಅನೇಕ ಬಾರಿ ಹಾಡಬೇಕು. ಈ ಆನಂದವನ್ನು ಅನುಭವಿಸಿದಾಗ ಭಗವಂತನು ಗಾಯಕನಿಗೆ ಉತ್ತರಿಸಿದ್ದಾನೆ ಮತ್ತು ಅವನ ಭಕ್ತಿಯು ಸರಿಯಾಗಿ ಶ್ರುತಿಗೂಡಿದೆ; ಹಾಗೂ ಪಠಣದಲ್ಲಿನ ಅವನ ಉತ್ಸಾಹದ ಪ್ರಸಾರವು ನಿಜವಾದುದು ಮತ್ತು ಆಳವಾದುದು ಎಂಬುದಕ್ಕೆ ಪುರಾವೆಯಾಗುತ್ತದೆ.

ಏಕಾಂತದಲ್ಲಿ ಅಥವಾ ಸಾಮೂಹಿಕ ಹಾಡುಗಾರಿಕೆಯಲ್ಲಿ ಅತ್ಯಂತ ಭಕ್ತಿಯಿಂದ ಈ ಹಾಡುಗಳನ್ನು ಪಠಿಸುವವನು, ನಂತರ ತನ್ನ ಮನಸ್ಸಿನ ಸುಪ್ತಪ್ರಜ್ಞೆಯ ಹಿನ್ನೆಲೆಯಲ್ಲಿ ಪುನರಾವರ್ತನೆಯಾಗುವುದನ್ನು ಕಾಣುತ್ತಾನೆ, ಅವನು ದೈನಂದಿನ ಚಟುವಟಿಕೆಯ ಸಂಗ್ರಾಮದಲ್ಲಿದ್ದಾಗಲೂ ಅದು ಅನಿರ್ವಚನೀಯ ಆನಂದವನ್ನು ತರುತ್ತದೆ.

ಕ್ರಮೇಣ‌ ಸುಪ್ತಪ್ರಜ್ಞೆಯ ಪುನರಾವರ್ತನೆಯು ಅತೀತಪ್ರಜ್ಞೆಯ ಸಾಕ್ಷಾತ್ಕಾರವಾಗಿ ಬದಲಾಗುತ್ತದೆ, ಇದು ಭಗವಂತನ ನಿಜವಾದ ಅನುಭೂತಿಯನ್ನು ತರುತ್ತದೆ. ಪಠಣವು ಸುಪ್ತಪ್ರಜ್ಞೆಯಾಗಿ ಮತ್ತು ನಂತರ ಅತೀತ ಪ್ರಜ್ಞೆಯ ಸಾಕ್ಷಾತ್ಕಾರವಾಗಿ ಬದಲಾಗುವವರೆಗೆ ಒಬ್ಬರು ಹೆಚ್ಚು ಹೆಚ್ಚು ಆಳವಾಗಿ ಜಪಿಸಬೇಕು, ಅದು ಒಬ್ಬರನ್ನು ದಿವ್ಯ ಉಪಸ್ಥಿತಿಗೆ ತರುತ್ತದೆ.

ಪ್ರತಿಯೊಬ್ಬ ಭಕ್ತನೂ ಈ ಹಾಡುಗಳನ್ನು ಹಾಡಲು ಒಂದು ನಿಯತ ಸಮಯವನ್ನು ಮೀಸಲಿಡಬೇಕು. ಮೊದಲು ಗಟ್ಟಿಯಾಗಿ, ನಂತರ ಪಿಸುದನಿಯಲ್ಲಿ, ನಂತರ ಮನಸ್ಸಿನಲ್ಲೇ ಜಪಿಸಿ. ಒಂದು ತಂಡವು, ಭಗವಂತನ ಹೆಸರಿನಲ್ಲಿ ಒಟ್ಟುಗೂಡಿಕೊಂಡು, ಈ ಪಠಣಗಳಲ್ಲಿ ಒಂದನ್ನು ಆರಿಸಿಕೊಂಡು, ಅದನ್ನು ಪಿಯಾನೋ ಅಥವಾ ಆರ್ಗನ್‌ನೊಂದಿಗೆ ಹಾಡಬೇಕು, ನಂತರ ನಿಧಾನವಾಗಿ, ನಂತರ ಯಾವುದೇ ಪಕ್ಕವಾದ್ಯವಿಲ್ಲದೆ ಪಿಸುದನಿಯಲ್ಲಿ ಮತ್ತು ಅಂತಿಮವಾಗಿ ಮನಸ್ಸಿನಲ್ಲಿಯೇ ಹಾಡಿಕೊಳ್ಳಿ. ಹೀಗೆ ಮಾಡಿದಾಗ ಭಗವಂತನ ಆಳವಾದ ಅನುಭೂತಿಯನ್ನು ಪಡೆಯಬಹುದು.

para-ornament

ಈ ಆತ್ಮ ಗಾಯನಗಳನ್ನು ಅಮೆರಿಕದ ಶ್ರೋತೃಗಳು ಅರ್ಥಮಾಡಿಕೊಳ್ಳುತ್ತಾರೆ

ಆತ್ಮ ಬಲದಿಂದ ಸಂಪೂರಿತವಾದ ಸಂಗೀತವು ಎಲ್ಲರ ಹೃದಯಗಳಿಗೆ ಅರ್ಥವಾಗುವಂತಹ ನಿಜವಾದ ಸಾರ್ವತ್ರಿಕ ಸಂಗೀತವಾಗಿದೆ. ಅಮೆರಿಕಾದ ಪ್ರೇಕ್ಷಕರ ಮುಂದೆ ಕಾಣಿಸಿಕೊಂಡ ವರ್ಷಗಳಲ್ಲಿ ನಾನು ಈ ಸತ್ಯದ ಅನೇಕ ನಿದರ್ಶನಗಳನ್ನು ಕಂಡಿದ್ದೇನೆ. ನಾನು ಏಪ್ರಿಲ್ 1926 ರಲ್ಲಿ ನ್ಯೂಯಾರ್ಕ್‌ನ ಕಾರ್ನೆಗೀ ಹಾಲ್‌ನಲ್ಲಿ ಉಪನ್ಯಾಸಗಳ ಸರಣಿಯನ್ನು ನೀಡುತ್ತಿದ್ದೆ ಮತ್ತು ಆ ಸಮಯದಲ್ಲಿ ನಾನು ಕೆಲವು ಸಂಗೀತ ಮಿತ್ರರಿಗೆ ಈ ಗೀತೆಗಳಲ್ಲಿ ಒಂದನ್ನು ಹಾಡುವ ಮತ್ತು ಹಿಂದಿನ ಪೂರ್ವಾಭ್ಯಾಸವಿಲ್ಲದೆ ಎಲ್ಲ ಶ್ರೋತೃಗಳನ್ನು ಅದರಲ್ಲಿ ಭಾಗವಹಿಸಲು ಕೇಳಿಕೊಳ್ಳುವ ಯೋಜನೆಯನ್ನು ಸೂಚಿಸಿದೆ. ಗಾಯನಗಳು ಅಮೇರಿಕನ್ನರ ತಿಳುವಳಿಕೆಗೆ ಹೊರತಾದದ್ದು ಎಂದು ನನ್ನ ಸ್ನೇಹಿತರು ಭಾವಿಸಿದರು.

ಸಂಗೀತವು ಭಗವಂತನೆಡೆಗಿರುವ ಆತ್ಮದ ಭಕ್ತಿಯ ವಿಶ್ವಭಾಷೆ ಹಾಗೂ ಪೌರ್ವಾತ್ಯ ಅಥವಾ ಪಾಶ್ಚಿಮಾತ್ಯ ಸಂಗೀತದ ಅರಿವಿರಲಿ, ಬಿಡಲಿ, ಎಲ್ಲ ಭಾವಪೂರ್ಣ ಜನರು ಹಾಡುವಾಗ ನನ್ನ ಹೃದಯದ ದಿವ್ಯ ಮೊರೆಯನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಆಕ್ಷೇಪಿಸಿದೆ.

ಒಂದು ಸಂಜೆ ನಾನು “ಓ ಗಾಡ್ ಬ್ಯೂಟಿಫುಲ್” ಹಾಡಲಾರಂಭಿಸಿದೆ ಹಾಗೂ ಈ ಹಾಡನ್ನು ಎಂದೂ ಕೇಳಿರದಿದ್ದ ಶ್ರೋತೃಗಳಿಗೆ ನನ್ನೊಡನೆ ಹಾಡಲು ಹೇಳಿದೆ. ಒಂದು ಗಂಟೆ ಇಪ್ಪತ್ತೈದು ನಿಮಿಷಗಳ ಕಾಲ ಇಡೀ ಶ್ರೋತೃವೃಂದದ ಸಾವಿರಾರು ಕಂಠಗಳು ಹರ್ಷಭರಿತ ಸ್ತುತಿಯ ದಿವ್ಯ ವಾತಾವರಣದಲ್ಲಿ “ಓ ಗಾಡ್ ಬ್ಯೂಟಿಫುಲ್” ಅನ್ನು ಹಾಡಿದವು.

ನಾನು ವೇದಿಕೆಯನ್ನು ಬಿಟ್ಟುಬಂದ ನಂತರವೂ ಪ್ರೇಕ್ಷಕರು ಆ ಹಾಡನ್ನು ಹಾಡುತ್ತಾ ಕುಳಿತಿದ್ದರು. ಮರುದಿನ ಅನೇಕ ಪುರುಷರು ಮತ್ತು ಮಹಿಳೆಯರು ಭಗವಂತನ ಅನುಭೂತಿಗೆ ಮತ್ತು ಪವಿತ್ರ ಪಠಣದ ಸಮಯದಲ್ಲಿ ಸಂಭವಿಸಿದ ಶರೀರ, ಮನಸ್ಸು ಮತ್ತು ಆತ್ಮದ ಉಪಶಮನಕ್ಕೆ ಸಾಕ್ಷಿಯಾದರು ಮತ್ತು ಇತರ ಸತ್ಸಂಗಗಳಲ್ಲಿ ಆ ಹಾಡನ್ನು ಪುನರಾವರ್ತಿಸಲು ಅನೇಕ ಕೋರಿಕೆಗಳು ಬಂದವು.

ಅಮೆರಿಕದ ಸಂಗೀತ ಮಂದಿರವಾದ ಮತ್ತು ಅನೇಕ ಶ್ರೇಷ್ಠ ಗಾಯಕರು ಮತ್ತು ಸಂಗೀತಗಾರರ ವಿಜಯೋತ್ಸವಗಳ ರಂಗವಾಗಿರುವ ಕಾರ್ನೆಗೀ ಹಾಲ್‌ನಲ್ಲಿನ ಈ ಅನುಭವವು, ಆತ್ಮ ಸಂಗೀತದ ಸಾರ್ವತ್ರಿಕ ಸ್ವರೂಪಕ್ಕೆ ಮತ್ತು ಪೂರ್ವದ ಭಕ್ತಿಗೀತೆಗಳ ಬಗ್ಗೆ ಪಾಶ್ಚಿಮಾತ್ಯರ ಅಶಿಕ್ಷಿತ ತಿಳುವಳಿಕೆಗೆ ಸಂದ ಸ್ವಯಂಪ್ರೇರಿತ ಗೌರವವಾಗಿದೆ.

ಆ ಸಂಜೆಯ ನಂತರ ನಾನು ಪಾಶ್ಚಾತ್ಯ ಮತ್ತು ಪೌರ್ವಾತ್ಯ ಶ್ರೋತೃಗಳೊಂದಿಗೆ ಸಾವಿರಾರು ಬಾರಿ ಈ ಕೀರ್ತನೆಗಳನ್ನು ಹಾಡಿದ್ದೇನೆ ಮತ್ತು ಭಗವಂತನ ದಿವ್ಯ ನಾಮವನ್ನು ಪ್ರೀತಿಯಿಂದ ಜಪಿಸುವ ಭಕ್ತರ ಮೇಲೆ ದಿವ್ಯ ಪ್ರಯೋಜನಗಳು ವೃಷ್ಟಿಯಾಗುವುದನ್ನು ನೋಡಿದ್ದೇನೆ.

ಲಾಸ್‌ ಏಂಜಲೀಸ್
ಡಿಸೆಂಬರ್‌ 4, 1938
ಪರಮಹಂಸ ಯೋಗಾನಂದರ ಪುಸ್ತಕ ವರ್ಡ್ಸ್‌ ಆಫ್‌ ಕಾಸ್ಮಿಕ್‌ ಚಾಂಟ್ಸ್ ನಿಂದ ಉದ್ಧರಿಸಲಾಗಿದೆ

para-ornament

ಹೆಚ್ಚಿನ ಅನ್ವೇಷಣೆಗಾಗಿ:

ಇದನ್ನು ಹಂಚಿಕೊಳ್ಳಿ