ಪರಮಹಂಸ ಯೋಗಾನಂದರನ್ನು ಕುರಿತು ಡಾಕ್ಟರ್‌ ಎಂ. ಡಬ್ಲ್ಯು. ಲೂಯಿಸ್‌

img1_mw_lewis

ಯೋಗಾನಂದ ಹಾಗೂ ಡಾ. ಎಂ. ಡಬ್ಲ್ಯು. ಲೂಯಿಸ್‌ರ ಮೊದಲ ಭೇಟಿ

ಬೋಸ್ಟನ್‌ನ ದಂತವೈದ್ಯರಾದ ಡಾ. ಮಿನೊಟ್ ಡಬ್ಲ್ಯು.ಲೂಯಿಸ್ ರು, ಗುರುಗಳು 1920ರಲ್ಲಿ ಅಮೇರಿಕಾಕ್ಕೆ‌ ಆಗಮಿಸಿದ ಸ್ವಲ್ಪ ಸಮಯದ ನಂತರ ಪರಮಹಂಸಜಿಯವರನ್ನು ಭೇಟಿಯಾದರು ಮತ್ತು ಅವರ ಆಜೀವ ಶಿಷ್ಯರಾದರು. ಅವರು ಉಪಾಧ್ಯಕ್ಷರಾಗಿ ಮತ್ತು ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ನ ಜನಪ್ರಿಯ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ ಅನೇಕ ವರ್ಷಗಳಲ್ಲಿ, ತಮ್ಮ ಶ್ರೋತೃಗಳೊಂದಿಗೆ ಪರಮಹಂಸಜಿ ಬಗ್ಗೆ ಉನ್ನತಿಗೇರಿಸುವಂತಹ ಕಥೆಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿದ್ದರು. ಪರಮಹಂಸಜಿಯವರೊಂದಿಗಿನ ಅವರ ಮೊದಲ ಭೇಟಿಯ ಕುರಿತಾದ ಅವರ ಕಥನವು ಅತ್ಯಂತ ಸ್ಫೂರ್ತಿದಾಯಕವಾದುದು. ಈ ಕೆಳಗಿನ ನಿರೂಪಣೆಯು ಡಾಕ್ಟರರು ಅನೇಕ ವರ್ಷಗಳಲ್ಲಿ ನೀಡಿದ ಹಲವಾರು ಉಪನ್ಯಾಸಗಳಿಂದ ಸಂಗ್ರಹಿಸಲಾದ ವಿವರಗಳನ್ನು ಒಳಗೊಂಡಿದೆ:

1920 ರ ಕೊನೆಯಲ್ಲಿ, ಪರಮಹಂಸ ಯೋಗಾನಂದರು ಅಮೇರಿಕಾಕ್ಕೆ ಆಗಮಿಸಿದ ಸ್ವಲ್ಪ ಸಮಯದ ನಂತರ, ಯುವ ಸ್ವಾಮಿಯನ್ನು ಬೋಸ್ಟನ್ ಪ್ರದೇಶದಲ್ಲಿನ ಯುನಿಟೇರಿಯನ್ ಚರ್ಚ್‌ನಲ್ಲಿ ಮಾತನಾಡಲು ಆಹ್ವಾನಿಸಲಾಯಿತು, ಅಲ್ಲಿ ಡಾ. ಲೂಯಿಸ್‌ನ ದೀರ್ಘಕಾಲದ ಸ್ನೇಹಿತೆ ಶ್ರೀಮತಿ ಆಲಿಸ್ ಹೇಸಿ ಕೂಟದ ಸದಸ್ಯೆಯಾಗಿದ್ದರು. ಶ್ರೀಮತಿ ಹೇಸಿ (ಅವರಿಗೆ ಪರಮಹಂಸರು ನಂತರ ಸೋದರಿ ಯೋಗಮಾತಾ ಎಂದು ಹೆಸರಿಸಿದರು), ಡಾ. ಲೂಯಿಸ್‌ರ ಆಧ್ಯಾತ್ಮಿಕತೆಯಲ್ಲಿನ ಆಸಕ್ತಿಯನ್ನು ತಿಳಿದಿದ್ದರು ಮತ್ತು “ನೀವು ಸ್ವಾಮಿ ಯೋಗಾನಂದರನ್ನು ಭೇಟಿಯಾಗಬೇಕು,” ಎಂದು ಅವರಿಗೆ ಮನಮುಟ್ಟುವಂತೆ ಸೂಚಿಸಿದರು.

ಯೂನಿಟಿ ಹೌಸ್‌ನಲ್ಲಿ ಕ್ರಿಸ್‌ಮಸ್‌ನ ಮುನ್ನಾ ದಿನಕ್ಕಾಗಿ ಭೇಟಿಯನ್ನು ನಿಗದಿ ಪಡಿಸಲಾಯಿತು, ಅಲ್ಲಿ ಗುರುಗಳಿಗೆ ಒಂದು ಕೊಠಡಿ ಇತ್ತು. ಈ ಭೇಟಿಗಾಗಿ ಡಾಕ್ಟರು ತಮ್ಮ ಮನೆಯಿಂದ ಹೊರಟಾಗ, ಇದು ಸ್ವಲ್ಪ ಸಮಯದವರೆಗೆ ಮಾತ್ರ ಎಂದು ಭಾವಿಸಿದ್ದರು. ತಮ್ಮ ಪತ್ನಿ ಮಿಲ್ಡ್ರೆಡ್‌ಗೆ ಅವರು, ಕ್ರಿಸ್‌ಮಸ್‌ ಗಿಡವನ್ನು ಅಲಂಕರಿಸಲು ಹೇಳಿ, ತಾನು ಶೀಘ್ರದಲ್ಲೇ ಹಿಂತಿರುಗುವುದಾಗಿ ಹೇಳಿದರು.

ಯೂನಿಟಿ ಹೌಸ್‌ಗೆ ಹೋಗುತ್ತಿರುವಾಗ ದಾರಿಯಲ್ಲಿ, ಧಾರ್ಮಿಕ ಶಿಕ್ಷಕರಂತೆ ನಟಿಸುವ ಬೂಟಾಟಿಗರಿಂದ ಮೋಸಹೋಗುವ ಅಥವಾ ತಪ್ಪು ದಾರಿಗೆ ಎಳೆಯಲ್ಪಡುವುದರ ವಿರುದ್ಧ ಪೋಷಕರ ಎಚ್ಚರಿಕೆಗಳನ್ನು ಡಾಕ್ಟರು ನೆನಪಿಸಿಕೊಂಡರು; ಅವರ ಮನೋಭಾವ ಸಂಶಯದಿಂದ ಕೂಡಿತ್ತು.

ಪರಮಹಂಸಜಿ, ಡಾ. ಲೂಯಿಸ್ ಅವರನ್ನು ಪ್ರೀತಿಯಿಂದ ಬರಮಾಡಿಕೊಂಡರು. ಯುವ ದಂತವೈದ್ಯರಿಗೆ ಮನಸ್ಸಿನಲ್ಲಿ ಅನೇಕ ಆಧ್ಯಾತ್ಮಿಕ ಪ್ರಶ್ನೆಗಳಿದ್ದವು ಹಾಗೂ ಪರಮಹಂಸಜಿ, ಅವರಿಗೆ ತೃಪ್ತಿಕರ ಉತ್ತರಗಳನ್ನು ನೀಡಿದರು. ಅನೇಕ ವರ್ಷಗಳ ನಂತರ, ವೈದ್ಯರು ಈ ವಿಶೇಷ-ಘಟನೆಯ ಬಗ್ಗೆ ಹೇಳಿದರು, “ನಾನು ‘ಮಿಝೋರಿಯವನುʼ ಮತ್ತು ನನಗೆ ಪುರಾವೆ ಬೇಕಾಗಿತ್ತು. ಅದಕ್ಕಿಂತ ಕೆಟ್ಟದ್ದೆಂದರೆ, ನಾನು ನ್ಯೂ ಇಂಗ್ಲೆಂಡ್‌ನಿಂದ ಬಂದವನು, ಮತ್ತು ನಾನು ಕಂಡುಕೊಳ್ಳಬೇಕಾಗಿತ್ತು!”

1920 ರಲ್ಲಿ ಕ್ರಿಸ್ಮಸ್‌ನ ಆ ಮುನ್ನಾದಿನದಂದು ಅವರು ಪರಮಹಂಸಜಿಯವರಿಗೆ ಹೇಳಿದರು: “ಬೈಬಲ್ ನಮಗೆ ಹೇಳುತ್ತದೆ: ‘ಶರೀರದ ಬೆಳಕು ಕಣ್ಣು: ಆದ್ದರಿಂದ ನಿನ್ನ ಕಣ್ಣು ಒಂದೇ ಆಗಿದ್ದರೆ, ನಿನ್ನ ಇಡೀ ಶರೀರವು ಬೆಳಕಿನಿಂದ ತುಂಬಿಕೊಳ್ಳುತ್ತದೆ.’ ನೀವು ಇದನ್ನು ವಿವರಿಸಬಹುದೇ?”

“ನಾನು ಹಾಗೆ ಅಂದುಕೊಂಡಿದ್ದೇನೆ,” ಗುರುಗಳು ಉತ್ತರಿಸಿದರು.

ಡಾಕ್ಟರ್‌ಗೆ ಇನ್ನೂ ಅನುಮಾನವಿತ್ತು. “ನಾನು ಅನೇಕ ಜನರನ್ನು ಕೇಳಿದ್ದೇನೆ, ಆದರೆ ಯಾರಿಗೂ ಅದರ ಅರ್ಥ ತಿಳಿದಿಲ್ಲವೆಂಬಂತೆ ಕಾಣುತ್ತದೆ,” ಎಂದು ಅವರು ಹೇಳಿದರು.

“ಕುರುಡನು ಕುರುಡನನ್ನು ಮುನ್ನಡೆಸಬಲ್ಲನೆ? ಇಬ್ಬರೂ ತಪ್ಪು ತಿಳುವಳಿಕೆಯ ಒಂದೇ ಹೊಂಡಕ್ಕೆ ಬೀಳುತ್ತಾರೆ ಅಷ್ಟೆ,” ಪರಮಹಂಸಜೀ ಪ್ರತಿಕ್ರಿಯಿಸಿದರು.

“ನೀವು ಇವುಗಳನ್ನು ನನಗೆ ತೋರಿಸಬಲ್ಲಿರಾ?”

“ನಾನು ಹಾಗೆ ಅಂದುಕೊಂಡಿದ್ದೇನೆ,” ಗುರುಗಳು ಪುನರುಚ್ಚರಿಸಿದರು.

“ಓ ದೇವರೇ! ಹಾಗಾದರೆ, ದಯವಿಟ್ಟು ನನಗೆ ತೋರಿಸಿ!”

ನೆಲದ ಮೇಲೆ ಹುಲಿಯ ಚರ್ಮವನ್ನು ಹಾಸಿ, ಗುರುಗಳು ಡಾಕ್ಟರಿಗೆ, ಅದರ ಮೇಲೆ ಪದ್ಮಾಸನ ಹಾಕಿಕೊಂಡು ಕುಳಿತುಕೊಳ್ಳಲು ಹೇಳಿದರು ಹಾಗೂ ತಾವು ಅವರ ಎದುರು ಕುಳಿತರು. ಡಾಕ್ಟರರ ಕಣ್ಣುಗಳೊಳಗೆ ನೇರವಾಗಿ ನೋಡುತ್ತಾ, ಪರಮಹಂಸಜಿ ಕೇಳಿದರು: “ನಾನು ನಿಮ್ಮನ್ನು ಪ್ರೀತಿಸುವಂತೆ ನೀವು ಯಾವಾಗಲೂ ನನ್ನನ್ನು ಪ್ರೀತಿಸುವಿರಾ?”

ಡಾಕ್ಟರು ಸಕಾರಾತ್ಮಕವಾಗಿ ಉತ್ತರಿಸಿದರು. ಆಗ ಗುರು ಹೇಳಿದರು, “ನಿಮ್ಮ ಪಾಪಗಳನ್ನು ಕ್ಷಮಿಸಲಾಗಿದೆ ಮತ್ತು ನಿಮ್ಮ ಜೀವನದ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ.”

“ಈ ಮಾತುಗಳಿಂದ,” ಡಾಕ್ಟರ್ ನಂತರ ವಿವರಿಸಿದರು, “ನನ್ನ ಭುಜಗಳಿಂದ ದೊಡ್ಡದೊಂದು ಹೊರೆಯನ್ನು ಎತ್ತಲ್ಪಟ್ಟಂತೆ ಆಯಿತು. ಇದು ನಿಜವೇ. ನಾನು ಕರ್ಮ ಮತ್ತು ಭ್ರಮೆಯ ಪರ್ವತಗಳಿಂದ ಮುಕ್ತನಾದಂತೆನಿಸಿ ದೊಡ್ಡ ನೆಮ್ಮದಿಯನ್ನು ಅನುಭವಿಸಿದೆ. ದೊಡ್ಡ ಭಾರವೊಂದು ಎತ್ತಲ್ಪಟ್ಟಿತು, ಮತ್ತು ಎತ್ತಲ್ಪಟ್ಟ ಭಾರವು ಅಂದಿನಿಂದ ಹಾಗೇ ಇದೆ. ಅನೇಕ ಕಷ್ಟಗಳು ಬಂದವು — ಬೇಕಾದಷ್ಟು — ಆದರೆ ಆ ಭಾರ ಮತ್ತೆಂದೂ ಹಿಂದಿರುಗಲಿಲ್ಲ.”

ಕಥೆಯನ್ನು ಮುಂದುವರಿಸುತ್ತಾ, ಡಾ. ಲೂಯಿಸ್ ಹೇಳಿದರು:

“ನಂತರ ಗುರುಗಳು ತಮ್ಮ ಹಣೆಯನ್ನು ನನ್ನ ಹಣೆಯ ಮೇಲಿಟ್ಟರು. ಅವರು, ನನಗೆ ಕಣ್ಣುಗಳನ್ನು ಮೇಲಕ್ಕೆತ್ತಿ ಭ್ರೂಮಧ್ಯದ ಬಿಂದುವನ್ನು ನೋಡಲು ಹೇಳಿದರು, ನಾನು ಹಾಗೇ ಮಾಡಿದೆ. ಮತ್ತು ಅಲ್ಲಿ ನಾನು ಆಧ್ಯಾತ್ಮಿಕ ಚಕ್ಷುವಿನ ದೊಡ್ಡ ಬೆಳಕನ್ನು ನೋಡಿದೆ. ನಾನು ಏನನ್ನು ನೋಡಬೇಕೆಂದು ಗುರುಗಳು ಸೂಚಿಸಿರಲಿಲ್ಲ. ಅವರು ಯಾವುದೇ ರೀತಿಯಲ್ಲಿ ಸಲಹೆ ನೀಡುವ ಮೂಲಕ ನನ್ನ ಮೇಲೆ ಪ್ರಭಾವ ಬೀರಲಿಲ್ಲ. ನಾನು ನೋಡಿದ್ದು ತಾನಾಗಿಯೇ ಬಂದದ್ದು.

“ನಾನು ಸಂಪೂರ್ಣವಾಗಿ ಪ್ರಜ್ಞಾಪೂರ್ಣನಾಗಿದ್ದೆ, ಸಂಪೂರ್ಣವಾಗಿ ಜಾಗೃತನಾಗಿದ್ದೆ, ಸಂಪೂರ್ಣವಾಗಿ ಎಚ್ಚರದಿಂದಿದ್ದೆ, ಮತ್ತು ನಾನು ಆಧ್ಯಾತ್ಮಿಕ ಚಕ್ಷುವನ್ನು ಕಂಡೆ ಏಕೆಂದರೆ ಗುರುಗಳು ನನ್ನ ಮನಸ್ಸಿನ ಅಲೆಗಳನ್ನು ಶಾಂತಗೊಳಿಸುವ ಮೂಲಕ ನನ್ನ ಆತ್ಮದ ಅಂತರ್ಬೋಧೆಯೇ ಅದನ್ನು ನನಗೆ ತೋರಿಸುವಂತೆ ಅವಕಾಶ ಮಾಡಿಕೊಟ್ಟರು. ನಾನು ದೊಡ್ಡ ಹೊನ್ನ ಬೆಳಕಿನಲ್ಲಿ ಮತ್ತೂ ಮುಂದಕ್ಕೆ ನೋಡಿದಾಗ, ನನ್ನೊಳಗಿನ ಕ್ರಿಸ್ತ ಪ್ರಜ್ಞೆಯನ್ನು ಪ್ರತಿನಿಧಿಸುವ ಅಥವಾ ಪ್ರಕಟಪಡಿಸುವ ಒಳಗಿನ ಗಾಢ-ನೀಲಿ ಕೇಂದ್ರ, ಮತ್ತು ಅಂತಿಮವಾಗಿ ಮಧ್ಯದಲ್ಲಿರುವ, ವಿಶ್ವಪ್ರಜ್ಞೆಯ ಮೂರ್ತ ರೂಪವಾದ ಸಣ್ಣ ರಜತ ನಕ್ಷತ್ರದೊಂದಿಗೆ ಇಡೀ ಆಧ್ಯಾತ್ಮಿಕ ಚಕ್ಷು ರೂಪುಗೊಂಡಿತು. [ಶಬ್ದಾರ್ಥ ಸಂಗ್ರಹದಲ್ಲಿ “ಆಧ್ಯಾತ್ಮಿಕ ಚಕ್ಷು” ನೋಡಿ.]

“ಖಂಡಿತವಾಗಿಯೂ, ನಮ್ಮಲ್ಲಿ ಪ್ರತಿಯೊಬ್ಬರ ಒಳಗಿರುವ ಆಂತರಿಕ ವಾಸ್ತವತೆಯನ್ನು ನನಗೆ ತೋರಿಸಬಲ್ಲ ವ್ಯಕ್ತಿಯೊಬ್ಬರನ್ನು ಕಂಡುಕೊಂಡಿದ್ದರಿಂದ ನನಗೆ ಮಾತೇ ಹೊರಡದಂತಾಗಿತ್ತು. ಅವರು ಸಾಮಾನ್ಯ ವ್ಯಕ್ತಿಯಲ್ಲ, ಅಂತಹ ಆಧ್ಯಾತ್ಮಿಕ ವಿಷಯಗಳ ಬಗ್ಗೆ ತಮಗೆ ತಿಳಿದಿದೆ ಎಂದು ತೋರ್ಪಡಿಸಿಕೊಳ್ಳುವ ಸಾಮಾನ್ಯ ಜನರಿಗಿಂತ ಬಹಳ ವಿಭಿನ್ನರು ಎಂದು ನಾನು ಅರಿತುಕೊಂಡೆ.

“ನಾವು ಕೆಲವು ನಿಮಿಷಗಳ ಕಾಲ ಮಾತನಾಡಿದೆವು, ನಂತರ ಅವರು ಮತ್ತೊಮ್ಮೆ ತಮ್ಮ ಹಣೆಯನ್ನು ನನ್ನ ಹಣೆಯ ಮೇಲೆ ಒತ್ತಿದರು; ಆಗ ನಾನು ಸಹಸ್ರ ದಳ ಪದ್ಮದ ದೊಡ್ಡ ಬೆಳಕನ್ನು ನೋಡಿದೆ [ಮೆದುಳಿನ ಮೇಲ್ಭಾಗದಲ್ಲಿರುವ ಅತ್ಯುನ್ನತ ಆಧ್ಯಾತ್ಮಿಕ ಕೇಂದ್ರ] — ಬೆಳ್ಳಿಯ ಎಲೆಗಳ ಅನೇಕ ದಳಗಳಿಂದ ಕೂಡಿದ ಅದು ಅತ್ಯಂತ ಮನೋಜ್ಞವಾದ ದೃಗ್ಗೋಚರ ವಿಷಯವಾಗಿತ್ತು. ಸಾವಿರ ದಳಗಳ ಪದ್ಮದ ಕೆಳಭಾಗದಲ್ಲಿ, ಮಿದುಳಿನ ಬುಡದಲ್ಲಿ ದೊಡ್ಡ ಅಪಧಮನಿಗಳ ಗೋಡೆಗಳನ್ನು ಸ್ಥೂಲತರ ಬೆಳಕಿನಲ್ಲಿ ನಾನು ನೋಡಿದೆ. ಮತ್ತು ನೋಡುನೋಡುತ್ತಿದ್ದಂತೆ, ಅಪಧಮನಿಗಳೊಳಗಿನ ಬೆಳಕಿನ ಸಣ್ಣ ಕಿಡಿಗಳು ನನ್ನ ಕಣ್ಣ ಮುಂದೆ ಹಾದುಹೋಗುವಾಗ ಗೋಡೆಗಳಿಗೆ ಢಿಕ್ಕಿ ಹೊಡೆಯುತ್ತ ಪುಟಿದೇಳುತ್ತಿದ್ದವು. ಇವು ಭಗವಂತನ ಬೆಳಕಿನಾಟದಲ್ಲಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿರುವಂತೆ, ಪ್ರತಿಯೊಂದೂ, ಸೂಕ್ಷ್ಮ ಬೆಳಕಿನ ಸಣ್ಣ ಕಿಡಿಯನ್ನು ಪ್ರಕಟಪಡಿಸುತ್ತಿದ್ದ ರಕ್ತದ ಕಣಗಳಾಗಿದ್ದವು.

“ಈ ಅದ್ಭುತ ದೃಶ್ಯಗಳನ್ನು ನೋಡಿದುದರಿಂದ, ನಾನು ಅಂತಹ ಸಾಕ್ಷಾತ್ಕಾರವುಳ್ಳ ವ್ಯಕ್ತಿಯನ್ನು ಭೇಟಿಯಾಗಿದ್ದಕ್ಕಾಗಿ ಅತ್ಯಂತ ಕೃತಜ್ಞನಾಗಿದ್ದೇನೆ. ಮತ್ತು, ʼನಾನು ನಿಮ್ಮನ್ನು ಶಿಸ್ತಿಗೊಳಪಡಿಸಲು ನೀವು ನನಗೆ ಅನುಮತಿಯಿತ್ತರೆ ಮತ್ತು ನಾನು ಹಾಕಿದ ಮಾರ್ಗವನ್ನು ನಿಯತವಾಗಿ ಅನುಸರಿಸಿದರೆ, ಇವುಗಳು ಸದಾ ನಿಮ್ಮೊಂದಿಗೆ ಇರುತ್ತವೆ.ʼ ಎಂದು ಗುರುಗಳು ಹೇಳಿದ್ದು ನನಗೆ ನೆನಪಿದೆ. ಹಾಗೇ ಮಾಡಲು ನಾನು ಪ್ರಯತ್ನಿಸಿದೆ, ಮತ್ತು ಗುರುಗಳು ಹೇಳಿದ ಮಾತು ನಿಜವಾಯಿತು ಎಂದು ನಾನು ಘೋಷಿಸಬಲ್ಲೆ.”

ಪರಮಹಂಸಜಿ ಇದನ್ನೂ ಹೇಳಿದರು: “ನೀವು ಎಂದಿಗೂ ನನ್ನ ಕಣ್ತಪ್ಪಿಸುವುದಿಲ್ಲ ಎಂದು ನೀವು ಭಾಷೆ ಕೊಡಬೇಕೆಂದು ನಾನು ಬಯಸುತ್ತೇನೆ.” ಡಾಕ್ಟರು ಭಾಷೆಯಿತ್ತರು.

ಗುರು ಮತ್ತು ಶಿಷ್ಯರ ನಡುವಿನ ಈ ಒಪ್ಪಂದದ ಬಗ್ಗೆ ಡಾಕ್ಟರು ನಂತರ ಹೇಳಿದರು, “ಅನೇಕ ಬಾರಿ ಇದು ತುಂಬಾ ಕಷ್ಟಕರವಾಗಿತ್ತು, ಏಕೆಂದರೆ ಗುರುವಿನ ಶಿಸ್ತು ಸುಲಭವಲ್ಲ; ಆದರೆ ಅದು ಯಾವಾಗಲೂ ನಿಮ್ಮ ಅತ್ಯುನ್ನತ ಒಳಿತಿಗಾಗಿದ್ದು, ನಿಮ್ಮನ್ನು ಬೆಳಕಿನ ನೆಲೆಯತ್ತ ಮಾರ್ಗದರ್ಶನ ಮಾಡುತ್ತದೆ.”

ಆಧ್ಯಾತ್ಮಿಕ ಚಕ್ಷುವಿನ ಬೆಳಕನ್ನು ಹೇಗೆ ನೋಡಬೇಕೆಂದು ಡಾ. ಲೂಯಿಸ್‌ಗೆ ತೋರಿಸಿದ ನಂತರ ಮತ್ತು ಅವರಿಗೆ ಇತರ ಆಧ್ಯಾತ್ಮಿಕ ಸೂಚನೆಗಳನ್ನು ನೀಡಿದ ನಂತರ, ಇತರ ಅಮೆರಿಕನ್ನರು ಈ ಬೋಧನೆಗಳಲ್ಲಿ ಆಸಕ್ತಿ ಹೊಂದಿರುತ್ತಾರೆ ಎಂದು ನೀವು ಭಾವಿಸುವಿರಾ ಎಂದು ಪರಮಹಂಸಜಿ ಕೇಳಿದರು.

“ಹೌದು, ನಾನು ಹಾಗೆ ಭಾವಿಸುತ್ತೇನೆ,” ಡಾಕ್ಟರ್‌ ಉತ್ತರಿಸಿದರು.

“ಹಾಗಾದರೆ,” ಗುರುಗಳು ಹೇಳಿದರು, “ನಾನು ನಿಮಗೆ ಕಲಿಸಿದುದನ್ನು ನೀವು ಅಭ್ಯಾಸ ಮಾಡಿದ ನಂತರ, ಈ ಧ್ಯಾನದ ತಂತ್ರಗಳು ನಿಮಗೆ ಇಷ್ಟವಾದರೆ ಮತ್ತು ನಿಮಗೆ ಪ್ರಯೋಜನವಾದರೆ, ನೀವು ಇತರರಿಗೆ ಅವುಗಳ ಬಗ್ಗೆ ತಿಳಿದುಕೊಳ್ಳಲು ನೆರವಾಗುವಿರಾ?”

“ನಾನು ಖಂಡಿತವಾಗಿ ನೆರವಾಗುವೆ,” ಎಂದು ವೈದ್ಯರು ಹೇಳಿದರು.

1920 ನೇ ಇಸವಿಯ ಆ ಕ್ರಿಸ್‌ಮಸ್ ದಿನದ ಮುಂಜಾನೆಯಂದು ಡಾಕ್ಟರು ಪರಮಹಂಸಜಿಯವರ ಭೇಟಿಯಿಂದ ಮನೆಗೆ ಹಿಂದಿರುಗಿದಾಗ ಎರಡು ಗಂಟೆಯಾಗಿತ್ತು. ಅವರ ದೀರ್ಘಾವಧಿಯ ಅನುಪಸ್ಥಿತಿಯಿಂದ ಶ್ರೀಮತಿ ಲೂಯಿಸ್ ಸಹಜವಾಗಿಯೇ ಗಾಬರಿಯಾಗಿದ್ದರು; ಆದರೆ ಅವರ ಮುಖವನ್ನು ನೋಡಿದ ಮೇಲೆ, ಪರಮಹಂಸಜಿಯೊಂದಿಗೆ ಆದ ತನ್ನ ಗಂಡನ ಭೇಟಿಯು ಒಂದು ಪರಿವರ್ತನಾ ಅನುಭವವಾಗಿದೆ ಎಂದು ಆಕೆಗೆ ಅರ್ಥವಾಯಿತು.

ಅದರ ನಂತರ, ಈ ದೈವಿಕ ಜಾಗೃತಿಯ ಬಗ್ಗೆ ಆಗಾಗ್ಗೆ ಹೇಳುವಾಗ ಡಾಕ್ಟರು ಹೇಳುತ್ತಿದ್ದರು, “ಅದು ನನ್ನ ಮೊದಲ ನಿಜವಾದ ಕ್ರಿಸ್ಮಸ್ ಆಗಿತ್ತು!”

ತಮ್ಮ ಗುರುವಿನೊಂದಿಗೆ ಆದ ಆ ಮೊದಲ ಭೇಟಿಯಿಂದ ತಮ್ಮ ಮೇಲೆ ಉಂಟಾದ ಪ್ರಭಾವವನ್ನು ವಿವರಿಸುತ್ತಾ, ಅವರು ನಂತರ ಬರೆದರು: “ನಾವು ಹುಲಿ ಚರ್ಮದ ಹಾಸಿನ ಮೇಲೆ ಒಟ್ಟಿಗೆ ಕುಳಿತು ಭಗವಂತನ ಉಪಸ್ಥಿತಿಯನ್ನು ಆನಂದಿಸುತ್ತಿರುವಾಗ, ನಾನು ಅವರ ಮುಖವನ್ನು ನೋಡಿದೆ, ಅಲ್ಲಿ ಶ್ರೇಷ್ಠ ಸಾಮರ್ಥ್ಯದ ಭಾವನೆಯ ಯಾವುದೇ ಪ್ರದರ್ಶನ ನನಗೆ ಕಾಣಲಿಲ್ಲ. ಅದನ್ನು ಅವರು ಬೇಕಾದಂತೆ ವ್ಯಕ್ತಪಡಿಸಬಹುದಾಗಿತ್ತು; ಏಕೆಂದರೆ, ಅಂತಹ ಮಹಾನ್ ಶಾಂತತೆ ಮತ್ತು ಅನುಭೂತಿಯಿಂದ ದೈವಿಕ ಪ್ರಜ್ಞೆಯನ್ನು ಅನುಭವಿಸುವಂತೆ ಇನ್ನೊಬ್ಬರಿಗೆ ಸಹಾಯ ಮಾಡುವುದೆಂದರೆ ಅದು ಅಲ್ಪ ಸಾಧನೆಯೇನಲ್ಲ. ಅದರ ಬದಲಿಗೆ, ಅಲ್ಲಿ ಭಗವಂತನ ಮಕ್ಕಳಲ್ಲಿ ಮತ್ತೊಬ್ಬರು, ನಮ್ಮೆಲ್ಲರ ತಂದೆಯಾದ ಪ್ರಭುವಿನ ಉಪಸ್ಥಿತಿ ಮತ್ತು ಆನಂದವನ್ನು ಆನಂದಿಸಲು ತನ್ನಂತೆಯೇ ಸಮರ್ಥರಾಗಿದ್ದಾರೆ ಎಂಬ ನಮ್ರತೆ, ಪ್ರೀತಿ ಮತ್ತು ಅತ್ಯುನ್ನತ ತೃಪ್ತಿಯ ಭಾವವಿತ್ತು. ಅಂತಹ ನಮ್ರತೆ ನನಗೆ ಆಳವಾದ ಸ್ಫೂರ್ತಿಯಾಗಿತ್ತು ಮತ್ತು ಸದಾಕಾಲಕ್ಕೆ ಸ್ಫೂರ್ತಿಯಾಗಿರುತ್ತದೆ. ನನ್ನ ಅಭಿಪ್ರಾಯದಲ್ಲಿ, ಇದು ನಿಜವಾದ ಶ್ರೇಷ್ಠತೆಯ ಲಕ್ಷಣವಾಗಿದೆ.”

ಅನೇಕ ವರ್ಷಗಳ ನಂತರ ಎನ್ಸಿನಿಟಾಸ್‌ನಲ್ಲಿರುವ ಸೆಲ್ಫ್-‌ರಿಯಲೈಝೇಷನ್‌ ಆಶ್ರಮ ಕೇಂದ್ರದ ಸಮರ್ಪಣಾ ಸಮಾರಂಭದಲ್ಲಿ, ಈ ಘಟನೆಯನ್ನು ಹೇಳುತ್ತಾ ಡಾಕ್ಟರು ಹೇಳಿದರು:

“ಆದ್ದರಿಂದಲೇ, ಸ್ನೇಹಿತರೇ, ನಾನು ಸೆಲ್ಫ್-‌ರಿಯಲೈಝೇಷನ್‌ ಫೆಲೋಶಿಪ್‌ನಲ್ಲಿ ಆಸಕ್ತಿಯನ್ನು ಹೊಂದಿದ್ದೇನೆ ಮತ್ತು ಆದ್ದರಿಂದಲೇ ನಾನು ಸಹಾಯ ಮಾಡಲು ಪ್ರಯತ್ನಿಸಿದೆ; ಏಕೆಂದರೆ ಪರಮಹಂಸ ಯೋಗಾನಂದರಿಂದ ಏನೋ ಒಳ್ಳೆಯದೇ, ಏನೋ ದೊಡ್ಡ ಒಳ್ಳೆಯದೇ ಬರುತ್ತದೆ ಎಂದು ನನಗೆ ತಿಳಿದಿತ್ತು. ಅಮೆರಿಕ ನನಗೆ ಬಹಳಷ್ಟನ್ನು ನೀಡಿದೆ ಮತ್ತು ನಾನು ಅದಕ್ಕಾಗಿ ಕೃತಜ್ಞನಾಗಿದ್ದೇನೆ; ಆದರೆ ಅಮೆರಿಕ ನನಗೆ ನೀಡದ ಒಂದು ವಿಷಯವಿದೆ, ಮತ್ತು ಅದೆಂದರೆ, ಭಾರತದಿಂದ ನಾನು ಪಡೆದ ಆಧ್ಯಾತ್ಮಿಕ ಸಾಕ್ಷಾತ್ಕಾರ ಮತ್ತು ತಿಳುವಳಿಕೆ; ಅವು ಪರಮಹಂಸ ಯೋಗಾನಂದರಿಂದ ನನ್ನಲ್ಲಿಗೆ ಬಂದವು.”

ಇದನ್ನು ಹಂಚಿಕೊಳ್ಳಿ