ಲೇಖಕರು ಮತ್ತು ಸಂಪಾದಕರು

"ಅನೇಕ ವರ್ಷಗಳ ಹಿಂದೆ ಪರಮಹಂಸ ಯೋಗಾನಂದರ ಬಳಿಗೆ ನಾನು ಅನ್ವೇಷಕನಾಗಿ ಬರಲಿಲ್ಲ, ಆದರೆ ಸಹಾನುಭೂತಿಯದಾದರೂ ವಿಶ್ಲೇಷಣಾತ್ಮಕ ಮತ್ತು ವಿಮರ್ಶಾತ್ಮಕ ಬರಹಗಾರನಾಗಿ ಬಂದೆ. ನಾನು ಅವರಲ್ಲಿ ಅಪರೂಪದ ಸಂಯೋಜನೆಯನ್ನು ಕಂಡುಕೊಂಡಿದ್ದೇನೆ. ತಮ್ಮ ಪರಮ ಧರ್ಮದ ಪ್ರಾಚೀನ ತತ್ವಗಳಲ್ಲಿ ಅಚಲವಾಗಿರುತ್ತಲೇ, ಅವರಿಗೆ ಉದಾರ ಹೊಂದಾಣಿಕೆಯ ಗುಣವಿತ್ತು, ಅದರಿಂದಾಗಿ, ಅವರು ಹಿಂದು ಮತ್ತು ಭಾರತೀಯನಾಗಿರುವಂತೆಯೇ, ಕ್ರಿಶ್ಚಿಯನ್ನರೂ ಅಮೆರಿಕನ್ನರೂ ಆದರು. ಚುರುಕು ಬುದ್ಧಿ ಮತ್ತು ಅದಮ್ಯ ಉತ್ಸಾಹದಿಂದಾಗಿ, ಜಗತ್ತಿನ ಧಾರ್ಮಿಕ ಅನ್ವೇಷಕರಲ್ಲಿ ಸಮನ್ವಯ ಮತ್ತು ಸತ್ಯವನ್ನು ಪ್ರೋತ್ಸಾಹಿಸಲು ತಕ್ಕ ವ್ಯಕ್ತಿಯಾಗಿದ್ದರು. ಜನಸಮುದಾಯಕ್ಕೆ ಅವರು ಶಾಂತಿ ಮತ್ತು ಸಂತೋಷವನ್ನು ತಂದುಕೊಟ್ಟರು."

— ಡಾ. ವೆಂಡೆಲ್‌ ಥಾಮಸ್‌, ಲೇಖಕರು ಮತ್ತು ಮಾಜಿ ಪ್ರೊಫೆಸರ್‌, ಕಾಲೇಜ್‌ ಆಫ್‌ ದ ಸಿಟಿ ಆಫ್‌ ನ್ಯೂಯಾರ್ಕ್

"ಮಾನವ ಭ್ರಾತೃತ್ವಕ್ಕಾಗಿ ಮತ್ತು ಪೂರ್ವ ಹಾಗೂ ಪಶ್ಚಿಮಗಳ ನಡುವಣ ಪ್ರಪಂಚದ ಶ್ರೇಷ್ಠ ಧರ್ಮಗಳ ನಿಕಟ ತಿಳುವಳಿಕೆಯ ಪರವಾಗಿ ಗುರು ಯೋಗಾನಂದರು ಮಾಡಿದ ಕೆಲಸವನ್ನು ತಿಳಿದವರು ಮತ್ತು ನೇರವಾಗಿ ಅಥವಾ ಅವರ ಬರಹಗಳ ಮೂಲಕ ಪರೋಕ್ಷವಾಗಿ ಅವರ ಸಂಪರ್ಕಕ್ಕೆ ಬಂದವರು ಅವರದೊಂದು ಅನನ್ಯ ಆಧ್ಯಾತ್ಮಿಕ ಶಕ್ತಿ ಎಂದು ಅರಿತಿದ್ದರು....

"ಮಹಾತ್ಮ ಗಾಂಧಿಯವರು ಒಮ್ಮೆ ಯೋಗಾನಂದರ ಬಗ್ಗೆ ನನ್ನೊಂದಿಗೆ ಬಹಳ ಮೆಚ್ಚುಗೆಯಿಂದ ಮಾತನಾಡಿದ್ದು ನನಗೆ ನೆನಪಿದೆ. ಎಲ್ಲಾ ರಾಜಕಾರಣಿಗಳು ಒಟ್ಟಾಗಿ ಮಾಡಿರುವುದಕ್ಕಿಂತಲೂ, ಭಾರತ ಮತ್ತು ಪಶ್ಚಿಮದ ನಡುವಣ ಆಳವಾದ ತಿಳುವಳಿಕೆಗಾಗಿ ನಿಜವಾದ ಭರವಸೆಯ ಸಂದೇಶವನ್ನು ತಂದವರು ಯೋಗಾನಂದರಂತಹ ಆಧ್ಯಾತ್ಮಿಕ ಮಹಾಪುರುಷರು, ಎಂದು ಅವರು ಹೇಳಿದರು."

— ಡಾ. ಕ್ಯಾಮಿಲ್ಲೆ ಹೋನಿಗ್, ಸಾಹಿತ್ಯ ಸಂಪಾದಕರು, ದ ಕ್ಯಾಲಿಫೋರ್ನಿಯಾ ಜ್ಯೂಯಿಷ್‌ ವಾಯಿಸ್

"ಈಗ ನಮ್ಮೊಡನಿರದ ಪರಮಹಂಸ ಯೋಗಾನಂದರು, ಮುಂದಿನ ಎಲ್ಲ ಕಾಲಕ್ಕೂ, ಹೊಸ ಜಗತ್ತಿಗೆ ಭಾರತದ ಉನ್ನತ ಸಂಸ್ಕೃತಿಯ ರಾಯಭಾರಿಗಳಲ್ಲಿ ಒಬ್ಬರು ಎಂದು ಪರಿಗಣಿಸಲ್ಪಡುತ್ತಾರೆ. ಅಮೆರಿಕ ಮಾತ್ರವಲ್ಲದೆ ಎಲ್ಲ ಖಂಡಗಳಲ್ಲೂ ಇರುವ ಅಸಂಖ್ಯಾತ ಸೆಲ್ಫ್-ರಿಯಲೈಝೇಷನ್‌ ಫೆಲೋಷಿಪ್‌ ಕೇಂದ್ರಗಳೇ ಭೂಮಿಯ ಮೇಲಿನ ಅವರ ಜೀವಿತೋದ್ದೇಶದ ಯಶಸ್ಸಿಗೆ ಸ್ಪಷ್ಟ ಪುರಾವೆಗಳು."

— ಡಾ. ಡಬ್ಲ್ಯು. ವೈ. ಇವಾನ್ಸ್-ವೆಂಟ್ಸ್‌, ಎಂ.ಎ., ಡಿ.ಲಿಟ್.‌,ಡಿ.ಎಸ್‌ಸಿ., ಜೀಸಸ್‌ ಕಾಲೇಜ್‌, ಆಕ್ಸ್‌ಫರ್ಡ್

"ಪರಮಹಂಸ ಯೋಗಾನಂದರು ಈ ಪೀಳಿಗೆ ಕಂಡಂತಹ ವಿವೇಚನೆ ಮತ್ತು ಮಾನವೀಯತೆಯುಳ್ಳ ಅತ್ಯುತ್ತಮ ವ್ಯಕ್ತಿಗಳಲ್ಲಿ ಒಬ್ಬರು."

— ಡಾ. ಫ್ರಾನ್ಸಿಸ್ ರೋಲ್ಟ್-ವೀಲರ್, ಎಲ್‌ʼ ಅಸ್ಟ್ರೋಸೋಫಿ, ನೈಸ್, ಫ್ರಾನ್ಸ್‌ನ ಸಂಪಾದಕರು, ಆಧ್ಯಾತ್ಮಿಕ ವಿದ್ವಾಂಸರು

"ಅವರು ಪ್ರೇರಿತರಾಗಿದ್ದರು....ಶ್ರೇಷ್ಠರಲ್ಲಿ ಒಬ್ಬರು. ಅವರು ಎಲ್ಲ ರೀತಿಯಲ್ಲೂ ವಿಶೇಷ ವ್ಯಕ್ತಿಯಾಗಿದ್ದರು. ಅವರು ಏನು ಹೇಳಿದರೂ ಅದು ಜನರಿಗೆ ಸಹಾಯಕವಾಗಿತ್ತು. ಅವರು ಜನರಿಗೆ ಶುದ್ಧವಾದ, ಕಲಬೆರಕೆಯಿಲ್ಲದ ವಿಶ್ವಾಸಕ್ಕೆ, ಸಾರ್ವತ್ರಿಕ ರೀತಿಯ ವಿಶ್ವಾಸಕ್ಕೆ ದಾರಿ ತೋರಿದರು....

"ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ [ಎಸ್‌ಆರ್‌ಎಫ್] ಎಂಬ ಹೆಸರೇ ಅವರ ಕೆಲಸವನ್ನು ಕುರಿತು ಹೇಳುತ್ತದೆ ಎಂದು ನಾನು ಭಾವಿಸುತ್ತೇನೆ — ಇದು ತಮ್ಮನ್ನು ತಾವು ಅರಿತುಕೊಳ್ಳುತ್ತಿರುವ ಜನರ ಸಹಭಾಗಿತ್ವವಾಗಿದೆ, ಅವರ ಸ್ವಂತದ ಸಾಮರ್ಥ್ಯವನ್ನು....ನಾನು ಯಾವುದೇ ಎಸ್‌ಆರ್‌ಎಫ್‌ ಕೇಂದ್ರವನ್ನು ಪರಿಶೀಲಿಸಿದಾಗಲೂ, ಅದು ಎಲ್ಲೇ ಇದ್ದರೂ, ಪೆಸಿಫಿಕ್‌ ಪ್ಯಾಲಿಸೇಡ್ಸ್‌ ನಲ್ಲಿರುವ ಲೇಕ್‌ ಶ್ರೈನ್‌ ಆಗಿರಲಿ, ಅಥವಾ ಮೌಂಟ್‌ ವಾಷಿಂಗ್ಟನ್‌ (ಎಸ್‌ಆರ್‌ಎಫ್‌ ಕೇಂದ್ರ ಕಾರ್ಯಾಲಯ) ಆಗಿರಲಿ ಅಥವಾ ಬೇರೆಲ್ಲೇ ಇರಲಿ, ನನಗೆ ಬಹಳವಾಗಿ ಆಕರ್ಷಿಸಿದ ಅಂಶವೆಂದರೆ, ಶಾಂತಿ. ಅವರು ಶಾಂತಿಯ ಬಗ್ಗೆ ಮಾತನಾಡಿದ್ದಷ್ಟೇ ಅಲ್ಲ, ಅವರು ಶಾಂತಿಯನ್ನು ತೋರ್ಪಡಿಸಿಕೊಂಡದ್ದಷ್ಟೇ ಅಲ್ಲ, ಅವರು ವಾಸ್ತವವಾಗಿ ಶಾಂತಿಯಲ್ಲಿ ನಂಬಿಕೆ ಇರಿಸಿದ್ದರು. ಅವರು ವಾಸ್ತವವಾಗಿ ಶಾಂತಿಯುತ ಜೀವನವನ್ನು ನಡೆಸಿದರು....ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್, ತನ್ನ ಸಂಸ್ಥಾಪಕರಾದ ಯೋಗಾನಂದರ ಪ್ರತಿಬಿಂಬವಾಗಿದೆ."

— ಡ್ಯಾನ್‌ ಥ್ರ್ಯಾಪ್‌, ಮಾಜಿ ಧಾರ್ಮಿಕ ಸಂಪಾದಕರು, ಲಾಸ್‌ ಏಂಜಲೀಸ್‌ ಟೈಮ್ಸ್

"ನನಗೆ ಪ್ರವರ್ತನಗೊಳಿಸುವ ಬಗ್ಗೆ ಎಲ್ಲವೂ ತಿಳಿದಿದೆ, ಏಕೆಂದರೆ ನಾನೇ ಪ್ರವರ್ತಕಳಾಗಿದ್ದೆ. ಮತದಾನದ ಹಕ್ಕಿಗಾಗಿ ಹೋರಾಡಬೇಕಾಗಿದ್ದ ನಾವು ಪೂರ್ವಾಗ್ರಹ ಮತ್ತು ಬೇರೂರಿದ ಆಲೋಚನೆಗಳನ್ನು ಎದುರಿಸುತ್ತಿದ್ದೆವು....ಅಮೆರಿಕದ ಭೌತಿಕ ಅಡಿಪಾಯವನ್ನು ಹಾಕಿದವರಷ್ಟೇ ನಾವೂ ಕೂಡ ಪ್ರವರ್ತಕರಾಗಿದ್ದೇವೆ. ಅನೇಕ ವರ್ಷಗಳಿಂದ ಪೌರ್ವಾತ್ಯ ಋಷಿಗಳ ತತ್ತ್ವಶಾಸ್ತ್ರದ ವಿದ್ಯಾರ್ಥಿಯಾಗಿದ್ದ ನಾನು ಸ್ವಾಮಿ ಯೋಗಾನಂದರ ಪಾದಗಳಿಗೆ ನನ್ನ ಪುಟ್ಟ ಗೌರವಾದರಗಳನ್ನು ಸಲ್ಲಿಸಲು ಹರ್ಷಿಸುತ್ತೇನೆ....

"ಅವರೊಬ್ಬ ಅದ್ಭುತ ಜಗದ್ಗುರು, ಏಕೆಂದರೆ ಅವರ ಬೋಧನೆಗಳಿಂದಾಗಿ ಈ ಶತಮಾನವು ಪರಿಪಕ್ವವಾಗಿದೆ. ಅವರು ಈ ದೇಶದ ದಕ್ಷತೆ ಮತ್ತು ಪೂರ್ವದ ಆಧ್ಯಾತ್ಮಿಕತೆಯ ನಡುವಿನ ಸಂಪರ್ಕ ಅಧಿಕಾರಿ ಎಂದು ನನಗೆ ತೋರುತ್ತದೆ. ಪ್ರತಿಯೊಂದಕ್ಕೂ ಇನ್ನೊಂದರ ಅಗತ್ಯವಿದೆ ಮತ್ತು ಪ್ರತಿಯೊಂದೂ ಎರಡರ ಮಿಶ್ರಣವನ್ನು ಹೊಂದಿರಬೇಕು....ಸ್ವಾಮಿ ಯೋಗಾನಂದರಂತಹ ನಾಯಕನ ಅವಶ್ಯಕತೆ ತುಂಬಾ ಇದೆ....ಅವರ ತತ್ವವು ಚಿಂತಕರಿಗೆ, ಭೌತವಾದದಿಂದ ಅತೃಪ್ತರಾದವರಿಗೆ ಮತ್ತು ಸತ್ಯದ ಪ್ರಕಾಶದ ಮುಂದೆ ನೆರಳಿನಂತೆ ಪಲಾಯನ ಮಾಡುವ ಕ್ಷಣಿಕವಾದವುಗಳಿಂದ, ಅವಾಸ್ತವವಾದವುಗಳಿಂದ ಬೇಸತ್ತವರಿಗೆ ಅಪ್ಯಾಯವಾಗುತ್ತದೆ."

— ಹೆಸ್ಟರ್ ಎಂ. ಪೂಲ್, ಲೇಖಕಿ ಮತ್ತು ಮಹಿಳಾ ಮತದಾರರ ಚಳವಳಿಯ ಪ್ರವರ್ತಕಿ

"ಅವರು ಸ್ಥಾಪಿಸಿದ ಫೆಲೋಶಿಪ್ ಎರಡು ವಿಷಯಗಳನ್ನು ಗುರಿಯಾಗಿರಿಸಿಕೊಂಡಿದೆ: ಆತ್ಮವನ್ನು ಭಗವಂತನ ಒಂದು ಕಿಡಿಯೆಂಬ ಅರಿವಿನ ಮೂಲಕ ಭಗವಂತನೊಂದಿಗೆ ಸಂಪರ್ಕ, ಮತ್ತು ಇಡೀ ಮನುಕುಲದೊಂದಿಗೆ ಸಹಭಾಗಿತ್ವ. ನಿಜವಾಗಿ ಯೋಗಾನಂದರು, ವಿಜ್ಞಾನ ಮತ್ತು ಧರ್ಮದ ನಡುವಣ ಅಂತರ್ನಿಹಿತ ಏಕತೆಯನ್ನು ಅರಿತುಕೊಳ್ಳುವಂತೆ ಮಾಡುವ ಮೂಲಕ ಅವುಗಳನ್ನು ಸಮನ್ವಯಗೊಳಿಸಿ, ಆಧ್ಯಾತ್ಮಿಕ ಮತ್ತು ಭೌತಿಕ ಸ್ತರಗಳ ನಡುವೆ ಶೋಚನೀಯವಾಗಿ ಅಗತ್ಯವಿರುವ ಮರುಹೊಂದಾಣಿಕೆಗಾಗಿ ಪ್ರಯತ್ನಿಸುತ್ತಿದ್ದರು. ಪರಮಹಂಸ ಯೋಗಾನಂದರು ಪವಾಡಸದೃಶ ಕೆಲಸಗಳನ್ನು ಮಾಡಿದರು. ಅವರ ಕಣ್ಣುಗಳು ಮತ್ತು ಉಪನ್ಯಾಸಗಳ ಮೂಲಕ ಹೊರಹೊಮ್ಮುವ ಅವರ ಕಾಂತೀಯ ವ್ಯಕ್ತಿತ್ವವನ್ನು ನಾನು ಇನ್ನೂ ನೆನಪಿಸಿಕೊಳ್ಳುತ್ತೇನೆ. ನಾನು ಅವರನ್ನು ಪಶ್ಚಿಮಕ್ಕೆ ಪೂರ್ವದ ಸಂದೇಶವಾಹಕರು ಎಂದು ಕರೆದಿದ್ದೇನೆ. ನಿಜವಾಗಿಯೂ, ಅವರು ತಮ್ಮ ಎಲ್ಲಾ ಸಹಜೀವಿಗಳಿಗೆ ಸಂತೋಷದ ಮಾರ್ಗವನ್ನು ತೋರಿದರು. ಭಾರತವು ತನ್ನ ಮಗನ ಬಗ್ಗೆ ಹೆಮ್ಮೆಪಡುತ್ತದೆ, ಎಂತಹ ಉದಾತ್ತ, ಎಂತಹ ಸ್ನೇಹಮಯ, ದೇವತಾ ಮನುಷ್ಯ ಮತ್ತು ವಿಶ್ವಮಾನವ."

— ಶ್ರೀ ಭೂಪೀಂದ್ರ ನಾಥ್ ಸರ್ಕಾರ್, ಭಾರತೀಯ ಶಿಕ್ಷಣತಜ್ಞ ಮತ್ತು ಬರಹಗಾರ, ಕಲ್ಕತ್ತಾ ಹಿಂದೂಸ್ತಾನ್ ಸ್ಟ್ಯಾಂಡರ್ಡ್

ಇದನ್ನು ಹಂಚಿಕೊಳ್ಳಿ