ಶಿಕ್ಷಣತಜ್ಞರು ಮತ್ತು ವೈಜ್ಞಾನಿಕ ಸಮುದಾಯ

“ಯೋಗಾನಂದರು ಅಮೆರಿಕನ್ನರಿಗೆ ಹಿಂದೂ ಧರ್ಮದ ವ್ಯಾಖ್ಯಾನಕಾರರಾಗಿ ಬಹಳ ಉನ್ನತ ಸ್ಥಾನದಲ್ಲಿದ್ದಾರೆ. ಅವರು ವಿದ್ವಾಂಸರ ನಡುವೆಯೂ ಸಹ ಬಹಳ ಗೌರವಾನ್ವಿತರಾಗಿದ್ದರು.”

— ಟೆಡ್ ಸಾಲೊಮನ್, ಧಾರ್ಮಿಕ ಅಧ್ಯಯನಗಳ ಪ್ರಾಧ್ಯಾಪಕ, ಅಯೋವಾ ರಾಜ್ಯ ವಿಶ್ವವಿದ್ಯಾಲಯ (ನಿವೃತ್ತ) ಮತ್ತು ಡ್ರೇಕ್ ವಿಶ್ವವಿದ್ಯಾಲಯ

“ಯೋಗಾನಂದರು ಭಗವತ್ಪೂರಿತ ದಾರ್ಶನಿಕ ಮತ್ತು ಸಂತ, ತತ್ವಜ್ಞಾನಿ ಮತ್ತು ಕವಿಯಾಗಿದ್ದು, ಅವರು ಅಂತಿಮ ವಾಸ್ತವತೆಯ ಅಸಂಖ್ಯಾತ ಅಂಶಗಳನ್ನು ಬಹುಸಂಖ್ಯೆಯಲ್ಲಿ ಅನುಭವಿಸಿದ್ದಾರೆ.... ಆಧ್ಯಾತ್ಮಿಕ ಅಸ್ತಿತ್ವದ ರಹಸ್ಯಗಳಲ್ಲಿ ಹೆಚ್ಚಿನ ಜನರಿಗಿಂತ ಮತ್ತಷ್ಟು ಹೆಚ್ಚು ಭೇದಿಸಿರುವ ಅಪರೂಪದ ಪ್ರತಿಭೆ.”

— ರೇಮಂಡ್ ಪೈಪರ್, ಪ್ರೊಫೆಸರ್ ಎಮೆರಿಟಸ್ ಆಫ್ ಫಿಲಾಸಫಿ, ಸಿರಾಕ್ಯೂಸ್ ವಿಶ್ವವಿದ್ಯಾಲಯ, ನ್ಯೂಯಾರ್ಕ್

“ಯೋಗಾನಂದರು ಒಂದು ಚಿತ್ರಣವಾಗಿ ಮಾರ್ಪಟ್ಟಿದ್ದಾರೆ — ವಿಶ್ವ ಚೇತನದಿಂದ ಆನಂದಪರವಶರಾದ ಗಮನಾರ್ಹ, ಆಳವಾದ, ಸ್ನೇಹಪರವಾದ, ಕಾವ್ಯಾತ್ಮಕ, ಭಾವಪರವಶ ವ್ಯಕ್ತಿ — ಅವರು ಅಮೆರಿಕದ ಧಾರ್ಮಿಕ ಜೀವನದ ನಕ್ಷೆಯನ್ನೇ ಬದಲಾಯಿಸಿದರು.”

— ರಾಬರ್ಟ್ ಎಸ್. ಎಲ್ವುಡ್, ಪಿಎಚ್.ಡಿ., ಚೇರ್ಮನ್, ಸ್ಕೂಲ್ ಆಫ್ ರಿಲಿಜನ್, ಯೂನಿವರ್ಸಿಟಿ ಆಫ್ ಸದರ್ನ್ ಕ್ಯಾಲಿಫೋರ್ನಿಯಾ

“ಪರಮಹಂಸ ಯೋಗಾನಂದರು ಜಗತ್ತಿಗೆ ನೀಡಿದ ಕೊಡುಗೆಯೆಂದರೆ, ನೈಜ‌ ‘ಭಗವತ್ ಸಾಕ್ಷಾತ್ಕಾರ’ದಿಂದ ಪರಮಾತ್ಮನೊಂದಿಗೆ ನಾವು ಹೊಂದಬಹುದಾದ ಅನ್ಯೋನ್ಯತೆಯನ್ನು ನಮಗೆ ನೆನಪಿಸುವುದು.”

— ರಾಬರ್ಟ್ ಜೆ. ವಿಕ್ಸ್, ಪಿಎಚ್‌.ಡಿ. ಅಧ್ಯಕ್ಷರು, ಮೇರಿಲ್ಯಾಂಡ್‌ನ ಪ್ಯಾಸ್ಟೋರಲ್ ಕೌನ್ಸೆಲಿಂಗ್ ಲೊಯೊಲಾ ಕಾಲೇಜಿನಲ್ಲಿ ಪದವಿ ಕಾರ್ಯಕ್ರಮಗಳು

“ಅವರು ಮಹಾತ್ಮರಾಗಿದ್ದರು ಮತ್ತು ಅಮೆರಿಕದ ಸಾಂಸ್ಕೃತಿಕ ಜೀವನದಲ್ಲಿ ಶಾಶ್ವತ ನೆನಪು ಮತ್ತು ಪ್ರಭಾವವನ್ನು ಬಿಟ್ಟುಹೋಗಿದ್ದಾರೆ.”

— ಡಾ. ಡಾಗೋಬರ್ಟ್ ರೂನ್ಸ್, ಅಧ್ಯಕ್ಷರು, ಫಿಲಾಸಫಿಕಲ್ ಲೈಬ್ರರಿ, ನ್ಯೂಯಾರ್ಕ್

“ಪರಮಹಂಸ ಯೋಗಾನಂದರು ಭಾರತದ ಭಗವತ್ ಸಾಕ್ಷಾತ್ಕಾರದ ಸಾರ್ವಕಾಲಿಕ ಭರವಸೆಯನ್ನು ಪಶ್ಚಿಮಕ್ಕೆ ತಂದುದಷ್ಟೇ ಅಲ್ಲದೆ, ಜೀವನದ ಎಲ್ಲಾ ಹಂತಗಳ ಆಧ್ಯಾತ್ಮಿಕ ಆಕಾಂಕ್ಷಿಗಳು ಆ ಗುರಿಯತ್ತ ವೇಗವಾಗಿ ಪ್ರಗತಿ ಹೊಂದುವ ಪ್ರಾಯೋಗಿಕ ವಿಧಾನವನ್ನೂ ಸಹ ತಂದರು…ಮೊದಮೊದಲು ಪಾಶ್ಚಿಮಾತ್ಯ ದೇಶಗಳಲ್ಲಿ ಅತ್ಯುನ್ನತ ಮತ್ತು ಅಮೂರ್ತ ಮಟ್ಟದಲ್ಲಿ ಮಾತ್ರ ಮೆಚ್ಚುಗೆ ಪಡೆದಿದ್ದ ಭಾರತದ ಆಧ್ಯಾತ್ಮಿಕ ಪರಂಪರೆಯು ಈಗ ಭಗವಂತನನ್ನು ಅರಿಯ ಬಯಸುವ ಎಲ್ಲರಿಗೂ ಅಭ್ಯಾಸ ಮತ್ತು ಅನುಭವವಾಗಿ ದೊರೆಯುತ್ತಲಿದೆ, ಅದು ನಂತರದಲ್ಲಲ್ಲ, ಇಲ್ಲೇ ಮತ್ತು ಈಗಲೇ....ಯೋಗಾನಂದರು ಅತ್ಯಂತ ಉನ್ನತವಾದ ಚಿಂತನೆಯ ವಿಧಾನಗಳನ್ನು ಸರ್ವರ ಕೈಗೆಟಕುವಂತೆ ಇರಿಸಿದ್ದಾರೆ.”

— ಕ್ವಿನ್ಸಿ ಹೋವೆ, ಜೂನಿಯರ್, ಪಿಎಚ್‌.ಡಿ., ಪ್ರಾಚೀನ ಭಾಷೆಗಳ ಪ್ರಾಧ್ಯಾಪಕ, ಸ್ಕ್ರಿಪ್ಸ್ ಕಾಲೇಜ್, ಕ್ಲೇರ್ಮಾಂಟ್, ಕ್ಯಾಲಿಫೋರ್ನಿಯಾ

“ಪ್ರತಿಯೊಂದು ಸಂಪ್ರದಾಯದ ಧರ್ಮಗ್ರಂಥಗಳೂ, ಮನುಕುಲದ ಎಲ್ಲಾ ಧಾರ್ಮಿಕ ಸಂಪ್ರದಾಯಗಳಿಗೆ ಸೇರಿದ ಜನರ ಪರಂಪರೆಯಾಗಲಿರುವಂತಹ ಒಂದು ಯುಗದ ಹೊಸ್ತಿಲಲ್ಲಿ ನಾವಿದ್ದೇವೆ, ಹಿಂದೆ ಅವು ಕೇವಲ ಒಂದು ಸಂಪ್ರದಾಯದ ಅಮೂಲ್ಯ ಆಸ್ತಿಯಾಗಿದ್ದವು, ಸುವಾರ್ತೆಗಳು ಕ್ರೈಸ್ತಧರ್ಮಕ್ಕೆ ಸೇರಿರುವಂತೆ. ಈ ವ್ಯಾಖ್ಯಾನ ಶಾಸ್ತ್ರದ ಜಾಗತೀಕರಣವು ಮುಂದುವರೆದಂತೆ, ಧರ್ಮದ ಚೌಕಟ್ಟಿನೊಳಗಿರುವವರಿಗಿಂತ, ವಿದ್ಯುಕ್ತವಾಗಿ ಹೊರಗಿರುವ ಹೆಚ್ಚು ಹೆಚ್ಚು ಜನಗಳೇ ಧರ್ಮಗ್ರಂಥಗಳ ಬಗ್ಗೆ ಟೀಕೆ ಮಾಡಲಾರಂಭಿಸಬಹುದು, ಏಕೆಂದರೆ ವಿಶ್ವ ಧರ್ಮಗಳ ಅಧ್ಯಯನವು ನಿಜವಾಗಿಯೂ ಜಾಗತಿಕವಾದರೆ, ಒಂದು ಪವಿತ್ರ ಗ್ರಂಥವನ್ನು ಬಳಸಿಕೊಳ್ಳುವ ಯಾವುದೇ ಸಂಪ್ರದಾಯದಲ್ಲಿ ಹೊರಗಿನ ಜನರ ಸಂಖ್ಯೆಯು ಒಳಗಿನವರಾಗಿ ಬಳಸುವವರಿಗಿಂತ ಹೆಚ್ಚಾಗಬಹುದು. ನನ್ನ ಮಟ್ಟಿಗೆ ಪರಮಹಂಸ ಯೋಗಾನಂದರು ಅಂತಹ ಭವಿಷ್ಯದ ಸಂಕೇತವಾಗಿ ಎದ್ದು ಕಾಣುತ್ತಾರೆ.”

— ಡಾ. ಅರವಿಂದ್ ಶರ್ಮಾ, ಪಿಎಚ್‌.ಡಿ., ಬರ್ಕ್ಸ್ ತುಲನಾತ್ಮಕ ಧರ್ಮದ ಪ್ರಾಧ್ಯಾಪಕ, ಮೆಕ್‌ಗಿಲ್ ವಿಶ್ವವಿದ್ಯಾಲಯ

“[ಯೋಗಾನಂದರ ಬೋಧನೆಗಳು] ಮನುಷ್ಯನ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ವಭಾವಗಳನ್ನು ತರಬೇತುಗೊಳಿಸಲು ಮತ್ತು ಸಮನ್ವಯಗೊಳಿಸಲು ಸೂಕ್ತವಾಗಿವೆ....

“ಏಕಾಗ್ರತೆ ಮತ್ತು ಧ್ಯಾನದ ಸರಳ ಹಾಗೂ ವೈಜ್ಞಾನಿಕ ವಿಧಾನಗಳಿಂದ, ಜೀವನದ ಎಷ್ಟೋ ಜಟಿಲ ಸಮಸ್ಯೆಗಳನ್ನು ಪರಿಹರಿಸಬಹುದು ಮತ್ತು ಈ ಭೂಮಿಯ ಮೇಲೆ ಶಾಂತಿ ಮತ್ತು ಸದ್ಭಾವನೆಗಳು ನೆಲೆಸುತ್ತವೆ. [ಯೋಗಾನಂದರ] ಯೋಗ್ಯ ಶಿಕ್ಷಣದ ಅಭಿಪ್ರಾಯವು ಅನುಭಾವದಿಂದ ಕೂಡಿದ್ದಾಗಲಿ ಅಪ್ರಯೋಜಕವಾದದ್ದಾಗಲಿ ಆಗಿರದೆ ಕೇವಲ ಸಾಮಾನ್ಯ ಅನುಭವದ ವಿಷಯವಾಗಿದೆ; ಹಾಗಲ್ಲದಿದ್ದರೆ ನಾನದಕ್ಕೆ ಒಪ್ಪುತ್ತಿರಲಿಲ್ಲ....ನನಗೆ ತಿಳಿದಿರುವ ಯಾವುದಕ್ಕಿಂತಲೂ ಹೆಚ್ಚಾಗಿ ಧರ್ಮಯುಗವನ್ನು ನೆಲೆಗೊಳಿಸುವ ಹತ್ತಿರಕ್ಕೆ ಬರುತ್ತದೆ.”

— ಲೂಥರ್‌ ಬರ್‌ಬ್ಯಾಂಕ್, ತೋಟಗಾರಿಕಾ ತಜ್ಞ

“ಅವರ ದೈಹಿಕ ಶಿಕ್ಷಣ ವ್ಯವಸ್ಥೆಯ ಸೌಂದರ್ಯವೆಂದರೆ, ಪ್ರಾಚೀನ ಯೋಗ ಪದ್ಧತಿಯೊಂದಿಗೆ ಪಾಶ್ಚಿಮಾತ್ಯ ವಿಧಾನಗಳ ಸಮರಸವಾದ ಸಂಯೋಜನೆ....ಅವರು ವಿದ್ಯಾರ್ಥಿಗಳ ದೇಹ, ಮನಸ್ಸು ಮತ್ತು ಆತ್ಮದ ಬೆಳವಣಿಗೆಯಲ್ಲಿ ಸಾಮರಸ್ಯವನ್ನು ಬಯಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಅಧ್ಯಯನದಲ್ಲಿ, ಜ್ಞಾನದ ವಿವಿಧ ಕ್ಷೇತ್ರಗಳಲ್ಲಿ, ಅಂದರೆ: ಕಲೆ, ಸಾಹಿತ್ಯ ಮತ್ತು ವಿಜ್ಞಾನಗಳಲ್ಲಿ. ಇತ್ತೀಚಿನ ಆವಿಷ್ಕಾರಗಳು ಅವರಿಗೆ ಸುಲಭವಾಗಿ ಸಿಗುವಂತಿರಬೇಕೆಂದು ಅವರು ಬಯಸಿದ್ದರು. ಆದರೆ ಅವರು ಈ ಕ್ಷೇತ್ರದಲ್ಲಿಯೂ ಪ್ರವರ್ತಕರಾಗಿದ್ದರು. ಉದ್ಯೋಗಾಧಾರಿತ ಶಿಕ್ಷಣದಿಂದ ವಿದ್ಯಾರ್ಥಿಗಳು ಸಮಾಜಕ್ಕೆ ಉಪಯುಕ್ತವಾಗಬಹುದು ಎಂಬ ದೃಷ್ಟಿಯಿಂದ ಅವರು ಅದರ ಅವಶ್ಯಕತೆಯನ್ನು ದೃಶ್ಯೀಕರಿಸಿಕೊಂಡಿದ್ದರು....

“ಆ ಸಮಯದಲ್ಲಿ ನಮ್ಮ ಮುಖಂಡರು ಪರಮಹಂಸ ಯೋಗಾನಂದರ ಶಿಕ್ಷಣದ ಆದರ್ಶಗಳನ್ನು ಅಳವಡಿಸಿಕೊಳ್ಳಲಿಲ್ಲ ಎಂಬುದು ವಿಷಾದದ ಸಂಗತಿ. ಐವತ್ತು ವರ್ಷಗಳ ನಂತರ, ತಜ್ಞರು ಉದ್ಯೋಗಾಧಾರಿತ ಶಿಕ್ಷಣ ಮತ್ತು ಕೆಲಸದ ಅನುಭವದ ಅಗತ್ಯವಿದೆ ಎಂದು ಈಗ ಅರಿತುಕೊಂಡಿದ್ದಾರೆ....

“ಅವರ ಶಿಕ್ಷಣದ ಪರಿಕಲ್ಪನೆಯೆಂದರೆ, ಇಂದ್ರಿಯಗಳ ಮೇಲೆ ಪ್ರಭುತ್ವವನ್ನು ಸಾಧಿಸಿದಂತಹ, ಪ್ರೀತಿ, ನಿಷ್ಕಪಟತೆ, ಪ್ರಾಮಾಣಿಕತೆ, ಸಹಿಷ್ಣುತೆ ಮತ್ತು ವಿಶ್ವಾಸದ ಸಾರ್ವತ್ರಿಕ ತತ್ವಗಳನ್ನು ದೃಷ್ಟಾಂತವಾಗಿರಿಸಿಕೊಂಡಂತಹ, ಹಾಗೂ ಇಚ್ಛಾಶಕ್ತಿ, ಆತ್ಮ ವಿಶ್ವಾಸ ಮತ್ತು ಸ್ವಾವಲಂಬನೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗಿರುವಂತಹ ಪರಿಪೂರ್ಣ ಮನುಷ್ಯನನ್ನು ಬೆಳೆಸುವುದು.”

— ಡಾ. ತಾರಾ ಮುಖರ್ಜಿ, ಉಪಕುಲಪತಿ, ಬಿಹಾರ ವಿಶ್ವವಿದ್ಯಾಲಯ, ಭಾರತ

“[ಪರಮಹಂಸ ಯೋಗಾನಂದ]ರು ಬೃಹತ್‌ ಪ್ರಮಾಣದ ಕೆಲಸವನ್ನು ಮಾಡಿದ್ದಾರೆ. ಅವರು ಶ್ರದ್ಧೆಯುಳ್ಳ ಅನೇಕ ಅನ್ವೇಷಕರಿಗೆ ಆಂತರ್ಯದಲ್ಲಿರುವ ಅಗೋಚರ ಬೆಳಕನ್ನು ಕಂಡುಕೊಳ್ಳಲು, ಅವರ ದಿವ್ಯಾತ್ಮವನ್ನು ಅರಿತುಕೊಳ್ಳಲು ಮತ್ತು ಅವರಿಗೆ ಅವರೇ ಒಡೆಯರಾಗಲೂ ನೆರವಾದರು. ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್‌-ರಿಯಲೈಝೇಷನ್‌ ಫೆಲೋಶಿಪ್ ತನ್ನ ಪವಿತ್ರ ಕೆಲಸವನ್ನು ದುಃಖತಪ್ತ ಮನುಕುಲಕ್ಕಾಗಿ ಇನ್ನಷ್ಟು ತೀವ್ರವಾಗಿ ಮತ್ತು ಯಶಸ್ವಿಯಾಗಿ ಮುಂದುವರಿಸುತ್ತದೆ ಎಂದು ನಮಗೆ ಮನವರಿಕೆಯಾಗಿದೆ.”

— ಪ್ರೊಫೆಸರ್ ವ್ಲಾಡಿಮಿರ್ ನೋವಿಕಿ, ಪ್ರೇಗ್, ಜೆಕೊಸ್ಲೊವಾಕಿಯಾ

“ನಮ್ಮ ಕಾಲದ ಅತ್ಯಂತ ಗಮನಾರ್ಹ ಪ್ರವೃತ್ತಿಯೆಂದರೆ ಪ್ರಜ್ಞೆ ಮತ್ತು ವಸ್ತುವಿನ ನಡುವಿನ ಸಂಬಂಧದ ವೈಜ್ಞಾನಿಕ ತಿಳುವಳಿಕೆಯ ಅನುಕ್ರಮವಾದ ಹೊರಹೊಮ್ಮುವಿಕೆ....ವೈದ್ಯರು ಮತ್ತು ಅವರ ರೋಗಿಗಳೂ ಸಹ ನಮ್ಮ ದೈನಂದಿನ ಆರೋಗ್ಯ ಮತ್ತು ಯೋಗಕ್ಷೇಮವು ನಮ್ಮ ಮನಸ್ಥಿತಿಯ ಮೇಲೆ ಎಷ್ಟು ಅವಲಂಬಿತವಾಗಿದೆ ಎಂಬುದನ್ನು ಈಗ ಕಾಣಲಾರಂಭಿಸಿದ್ದಾರೆ. ಹೃದಯದಿಂದ, ಹೊಟ್ಟೆಯವರೆಗೆ ಹಾಗೂ ಪ್ರತಿ-ರಕ್ಷಣಾ ವ್ಯವಸ್ಥೆ (immuno-system) ಯೂ ಸೇರಿದಂತೆ ಪ್ರತಿಯೊಂದು ಶಾರೀರಿಕ ವ್ಯವಸ್ಥೆಯ ಕಾರ್ಯನಿರ್ವಹಣೆಯ ಮೇಲೆ ವ್ಯಕ್ತಿತ್ವ, ಭಾವಾವೇಶಗಳು ಮತ್ತು ಜೀವನಶೈಲಿಯ ಪ್ರಭಾವವನ್ನು ಅಂಕಿಅಂಶಗಳ ನಿಖರತೆಯೊಂದಿಗೆ ದಾಖಲಿಸಿರುವ ಉನ್ನತ ಸಂಶೋಧನೆಯ ಎದುರಿನಲ್ಲಿ, ನಮ್ಮ ಶರೀರಗಳ ಸ್ಥಿತಿಯು ಕೇವಲ ಭೌತಿಕ ಅಂಶಗಳಿಂದ ನಿರ್ಧರಿಸಲ್ಪಡುತ್ತದೆ ಎಂಬ ನಂಬಿಕೆಯು ನಾಶವಾಗುತ್ತಿದೆ. ಶರೀರ, ಮನಸ್ಸು ಮತ್ತು ಆತ್ಮದ ಪರಸ್ಪರ ಸಂಬಂಧವನ್ನು ಬಹಿರಂಗಪಡಿಸುವ, ಈ ಸಂಶೋಧನೆಗಳು ದೀರ್ಘಕಾಲೀನ ನೋವಿನ ಚಿಕಿತ್ಸೆಯಲ್ಲಿ ಆಳವಾದ ಪ್ರಭಾವವನ್ನು ಬೀರಿವೆ ಮತ್ತು ಪರಮಹಂಸ ಯೋಗಾನಂದರು ಅನೇಕ ವರ್ಷಗಳ ಹಿಂದೆ ಕಲಿಸಿರುವ “ಬದುಕುವುದು-ಹೇಗೆ” ತತ್ವಗಳ ಅಪಾರ ಮೌಲ್ಯವನ್ನು ವ್ಯಕ್ತಪಡಿಸುವ ನೋವಿನ ದೃಷ್ಟಿಕೋನಕ್ಕೆ ಕಾರಣವಾಗಿವೆ.

“ಯೋಗಾನಂದ ಮತ್ತು ಇತರರ ಕಾರ್ಯದಿಂದ ಯೋಗದ ವಿಜ್ಞಾನದಲ್ಲಿ ನವೀಕೃತ ಆಸಕ್ತಿಯು ಬೆಳೆದಿದೆ, ಅದರಲ್ಲೂ ಹೆಚ್ಚಾಗಿ ಅಮೆರಿಕದಲ್ಲಿ, ಅಲ್ಲಿ ಹಲವಾರು ಯೋಗ ತಂತ್ರಗಳನ್ನು ಪ್ರಾಯೋಗಿಕ ಅಧ್ಯಯನಗಳ ಮೂಲಕ ಯುಕ್ತಾಯುಕ್ತವಾಗಿ ಪರಿಶೀಲಿಸಲಾಗಿದೆ ಮತ್ತು ವೈದ್ಯಕೀಯ ವೃತ್ತಿಯಲ್ಲಿ ಅಂಗೀಕಾರವನ್ನು ಗಳಿಸಿದೆ, ಅದರಲ್ಲೂ ಮುಖ್ಯವಾಗಿ ಕ್ಲಿನಿಕಲ್ ಸೈಕಾಲಜಿ ಮತ್ತು ದೀರ್ಘಕಾಲದ ನೋವಿನಿಂದ ನರಳುತ್ತಿರುವ ರೋಗಿಗಳ ನಿರ್ವಹಣೆಯ ಕ್ಷೇತ್ರದಲ್ಲಿ.”

— ಸ್ಟೀವನ್ ಎಫ್. ಬ್ರೆನಾ, ಎಂ.ಡಿ., ರಿಹ್ಯಾಬಿಲಿಟೇಶನ್ ಮೆಡಿಸಿನ್‌ನ ಕ್ಲಿನಿಕಲ್ ಪ್ರೊಫೆಸರ್, ಎಮೋರಿ ಯುನಿವರ್ಸಿಟಿ; ಬೋರ್ಡ್‌ನ ಅಧ್ಯಕ್ಷರು, ನೋವು ನಿಯಂತ್ರಣ ಮತ್ತು ಪುನರ್ವಸತಿ ಇನ್ಸ್ಟಿಟ್ಯೂಟ್ ಆಫ್ ಜಾರ್ಜಿಯಾ

“ಪರಮಹಂಸ ಯೋಗಾನಂದರ ಜೀವನ ಮತ್ತು ಕಾರ್ಯಗಳು ಮನಸೆಳೆಯುತ್ತವೆ….[ಅವರ] ಖ್ಯಾತಿಯು ಸುಗಂಧದಂತೆ ಹರಡಿದೆ....ಅಮೆರಿಕಾ ಮತ್ತು ಜಗತ್ತಿನ ಅತ್ಯಂತ ದೂರದ ದಿಗಂತಗಳವರೆಗೆ. ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್- ರಿಯಲೈಝೇಷನ್ ಫೆಲೋಶಿಪ್‌ನ ಲಾಂಛನದಡಿಯಲ್ಲಿ, ಅವರು ಅನೇಕ ದೇಶಗಳಲ್ಲಿ ಹಲವಾರು ಧ್ಯಾನ ಕೇಂದ್ರಗಳನ್ನು ಸ್ಥಾಪಿಸಿದರು. ಆಶ್ರಮಗಳು, ಮಂದಿರಗಳು ಮತ್ತು ಅವರ ಕಾರ್ಯದ ಕೇಂದ್ರಗಳು ಭಾರತದ ಶ್ರೇಷ್ಠ ಯೋಗ ವಿಜ್ಞಾನ ಅಭ್ಯಾಸದ ಪವಿತ್ರ ಸ್ಥಳಗಳಾಗಿವೆ....

“ಈ ಆಧುನಿಕ ಯುಗದಲ್ಲಿ, ಪಾಶ್ಚಿಮಾತ್ಯರ ಲೌಕಿಕತೆಯ ಹೊರತಾಗಿಯೂ, ಪೂರ್ವದ ಯೋಗಿಯಾದ ಪರಮಹಂಸ ಯೋಗಾನಂದರ ಆಧ್ಯಾತ್ಮಿಕ ಸಾಧನೆಗಳಲ್ಲಿ ಅಲ್ಲಿನ ಅಸಂಖ್ಯಾತ ಜನರು ಬಹಳ ಆಸಕ್ತಿಯನ್ನು ತೋರಿಸಿರುವುದು ಪ್ರಶಂಸನೀಯವಾಗಿದೆ. ಮಹಾನ್ ಸಂತರ ಆಧ್ಯಾತ್ಮ ಜ್ಞಾನವು ವ್ಯಾಕುಲಗೊಂಡ ಮಾನವ ಮನಸ್ಸಿಗೆ ಆಳವಾದ ಆಕರ್ಷಣೆ ಮತ್ತು ವಾಗ್ದಾನದ ಭರವಸೆಯನ್ನು ಕೊಡುತ್ತದೆ. ಹೀಗಾಗಿ, ಅನೇಕರು ಪರಮಹಂಸ ಯೋಗಾನಂದರ ಜೀವನದಿಂದ ಪ್ರೇರಿತರಾಗಿದ್ದಾರೆ....
“ಕ್ರಿಯಾ ಯೋಗದಂತಹ ಆತ್ಮ ವಿಜ್ಞಾನದ ಅಭ್ಯಾಸವು ಕಾಡುಗಳು ಮತ್ತು ಪರ್ವತದ ಗುಹೆಗಳಲ್ಲಿ ಏಕಾಂತದಲ್ಲಿರುವ ತಪಸ್ವಿಗಳಿಗೆ ಸೀಮಿತವಾಗಿದೆ ಎಂದು ಸಾಮಾನ್ಯವಾಗಿ ಭಾವಿಸಲಾಗಿತ್ತು. ಸಾಮಾನ್ಯ ಕೌಟುಂಬಿಕ ಜೀವನದಲ್ಲಿರುವ ಒಬ್ಬ ವ್ಯಕ್ತಿಯು ಜಗತ್ತಿನ ಯಾವುದೇ ಭಾಗದಲ್ಲಿರಲಿ, ಅವನು ಕ್ರಿಯಾ ಯೋಗವನ್ನು ಅತ್ಯುನ್ನತ ಆಧ್ಯಾತ್ಮಿಕ ಪ್ರಯೋಜನದೊಂದಿಗೆ ಸ್ವೀಕರಿಸಬಹುದು ಮತ್ತು ಅಭ್ಯಾಸ ಮಾಡಬಹುದು ಎಂಬುದನ್ನು ತೋರಿಸುವುದೇ ಪರಮಹಂಸ ಯೋಗಾನಂದರ ಧ್ಯೇಯವಾಗಿತ್ತು. ಅವರು ಮನುಕುಲಕ್ಕೆ ಅತ್ಯುನ್ನತ ಸೇವೆಯನ್ನು ಸಲ್ಲಿಸಿದ್ದಾರೆ.”

— ಡಾ. ಅಶುತೋಷ್ ದಾಸ್, ಎಂ.ಎ., ಪಿಹೆಚ್.ಡಿ., ಡಿ. ಲಿಟ್., ಪ್ರೊಫೆಸರ್, ಕಲ್ಕತ್ತಾ ವಿಶ್ವವಿದ್ಯಾಲಯ

ಇದನ್ನು ಹಂಚಿಕೊಳ್ಳಿ