ಡಾ. ಬಿನಯ್ ರಂಜನ್ ಸೇನ್ ಅವರಿಂದ
ಡಾ. ಬಿನಯ್ ರಂಜನ್ ಸೇನ್ ಅವರು ಸಂಯುಕ್ತ ಸಂಸ್ಥಾನಕ್ಕೆ ಭಾರತದ ಮಾಜಿ ರಾಯಭಾರಿ ಮತ್ತು ಸಂಯುಕ್ತ ರಾಷ್ಟ್ರಗಳ ಆಹಾರ ಮತ್ತು ಕೃಷಿ ಸಂಸ್ಥೆಯ ಮಹಾನಿರ್ದೇಶಕರಾಗಿದ್ದರು. ಇದನ್ನು ಅವರು ಶ್ರೀ ದಯಾ ಮಾತಾರ ಫೈಂಡಿಂಗ್ ದಿ ಜಾಯ್ ವಿದಿನ್ ಯು ಗೆ 1990ರಲ್ಲಿ ಮುನ್ನುಡಿಯಾಗಿ ಬರೆದಿರುವರು.
ಸುಮಾರು ನಲವತ್ತು ವರ್ಷಗಳ ಹಿಂದೆ ಪರಮಹಂಸ ಯೋಗಾನಂದರನ್ನು ಭೇಟಿಯಾಗುವ ಅದೃಷ್ಟ ನನ್ನದಾಗಿತ್ತು. ಅವರ ಅಗ್ರಮಾನ್ಯ ಶಿಷ್ಯರಾದ ಶ್ರೀ ದಯಾ ಮಾತಾರ ಈ ಉಪನ್ಯಾಸಗಳ ಸಂಪುಟದಲ್ಲಿ ಆ ದಿವ್ಯ ಚೇತನದ ಅಂತಃಸ್ಫೂರ್ತಿ ಹಾಗೂ ಬೋಧನೆಗಳನ್ನು ತುಂಬಾ ಸುಂದರವಾಗಿ ತಿಳಿಸಲಾಗಿದೆ. ಪರಮಹಂಸರನ್ನು ಭೇಟಿಯಾದ ಅನುಭವವು ನನ್ನ ಜೀವಮಾನದಲ್ಲಿ ಮರೆಯಲಾಗದ ಘಟನೆಗಳಲ್ಲಿ ಒಂದಾಗಿ ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ, ಅದು 1952 ರ ಮಾರ್ಚ್‌ನಲ್ಲಿ. 1951 ರ ಕೊನೆಯಲ್ಲಿ, ನಾನು ಸಂಯುಕ್ತ ಸಂಸ್ಥಾನಕ್ಕೆ ಭಾರತದ ರಾಯಭಾರಿಯಾಗಿ ನನ್ನ ಕರ್ತವ್ಯಗಳನ್ನು ವಹಿಸಿಕೊಂಡಿದ್ದೆ ಮತ್ತು ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡುವ ಅಧಿಕೃತ ಪ್ರವಾಸದಲ್ಲಿದ್ದೆ. ನಾನು ಲಾಸ್ ಏಂಜಲೀಸ್‌ಗೆ ಆಗಮಿಸಿದ ನಂತರ, ನನ್ನ ಮನಸ್ಸಿನಲ್ಲಿದ್ದ ಮೊಟ್ಟಮೊದಲ ಆಲೋಚನೆಯು ಪರಮಹಂಸಜಿಯನ್ನು ಭೇಟಿಯಾಗುವುದಾಗಿತ್ತು. ಅವರ ಸೆಲ್ಫ್-ರಿಯಲೈಝೇಷನ್ ಬೋಧನೆಯು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮಾತ್ರವಲ್ಲದೆ ಪ್ರಪಂಚದ ಇತರ ಅನೇಕ ದೇಶಗಳಲ್ಲಿಯೂ ಕೂಡ ಹೆಚ್ಚಿನ ಆಧ್ಯಾತ್ಮಿಕ ಪ್ರಭಾವವನ್ನು ಬೀರುತ್ತಿತ್ತು.
ಪರಮಹಂಸಜಿ ಮತ್ತು ಅವರ ಕಾರ್ಯದ ಬಗ್ಗೆ ನಾನು ಸಾಕಷ್ಟು ಕೇಳಿದ್ದರೂ ಸಹ, ಮೌಂಟ್ ವಾಷಿಂಗ್ಟನ್‌ನಲ್ಲಿರುವ ಸೆಲ್ಫ್-ರಿಯಲೈಝೇಷನ್ ಕೇಂದ್ರದಲ್ಲಿ ಏನನ್ನು ಕಂಡೆನೋ ಅದಕ್ಕೆ ನಾನು ಸಾಕಷ್ಟು ಸಿದ್ಧನಾಗಿರಲಿಲ್ಲ. ನಾನು ಬಂದ ಕ್ಷಣದಿಂದ, ನಮ್ಮ ಪವಿತ್ರ ಗ್ರಂಥಗಳಲ್ಲಿ ಓದಿದ ಮೂರು ಸಾವಿರ ವರ್ಷಗಳ ಹಿಂದಿನ ಪ್ರಾಚೀನ ಆಶ್ರಮಗಳಲ್ಲಿ ಒಂದಕ್ಕೆ ಹೋದಂತೆ ನನಗೆ ಭಾಸವಾಯಿತು. ಇಲ್ಲಿ ಮಹಾನ್ ಋಷಿ ತಮ್ಮ ಶಿಷ್ಯರಿಂದ ಸುತ್ತುವರಿಯಲ್ಪಟ್ಟಿದ್ದರು. ಎಲ್ಲರೂ ಸನ್ಯಾಸಿಯ ಕೇಸರಿ ವಸ್ತ್ರಗಳನ್ನು ಧರಿಸಿದ್ದರು. ಆಧುನಿಕ ಯುಗದ ತುಮುಲದಿಂದ ಅಪ್ಪಳಿಸಲ್ಪಡುತ್ತಿರುವ ಸಾಗರದಲ್ಲಿ ಅದು ದೈವೀ ಶಾಂತಿ ಮತ್ತು ಪ್ರೇಮದ ದ್ವೀಪದಂತೆ ತೋರುತ್ತಿತ್ತು.
ಪರಮಹಂಸಜಿ ನನ್ನ ಹೆಂಡತಿಯನ್ನು ಮತ್ತು ನನ್ನನ್ನು ಸ್ವಾಗತಿಸಲು ಬಾಗಿಲಲ್ಲಿ ನಿಂತಿದ್ದರು. ಅವರ ದರ್ಶನದ ಪ್ರಭಾವ ಎಣಿಕೆಗೆ ಮೀರಿದ್ದಾಗಿತ್ತು. ನನಗೆ ಹಿಂದೆಂದೂ ತಿಳಿದಿರದ ರೀತಿಯಲ್ಲಿ ಅದು ನನ್ನನ್ನು ಉನ್ನತಿಗೇರಿಸಿದ್ದನ್ನು ನಾನು ಅನುಭವಿಸಿದೆ. ನಾನು ಅವರ ಮುಖವನ್ನು ನೋಡುತ್ತಿದ್ದಂತೆ, ಅವರಿಂದ ಅಕ್ಷರಶಃ ಹೊರಹೊಮ್ಮುತ್ತಿದ್ದ ಆಧ್ಯಾತ್ಮಿಕತೆಯ ಬೆಳಕಿನ ತೇಜಸ್ಸಿನಿಂದ ನನ್ನ ಕಣ್ಣುಗಳು ಕೋರೈಸಿದವು. ಅವರ ಅನಂತ ಸೌಮ್ಯತೆ, ಅವರ ಕೃಪಾಕರ ಅಂತಃಕರಣಗಳು ಬೆಚ್ಚಗಿನ ಸೂರ್ಯಪ್ರಕಾಶದಂತೆ ನನ್ನ ಹೆಂಡತಿಯನ್ನು ಮತ್ತು ನನ್ನನ್ನು ಆವರಿಸಿದವು.
ನಂತರದ ದಿನಗಳಲ್ಲಿ, ಗುರುಗಳು ನಮ್ಮೊಂದಿಗೆ ಇರಲು ತಮಗೆ ಸಾಧ್ಯವಿರುವ ಪ್ರತಿ ನಿಮಿಷವನ್ನು ನೀಡಿದರು. ನಾವು ಭಾರತದ ಕಷ್ಟಗಳ ಬಗ್ಗೆ ಮತ್ತು ಅದರ ಜನರ ಪರಿಸ್ಥಿತಿಗಳನ್ನು ಉತ್ತಮಗೊಳಿಸಲು ನಮ್ಮ ನಾಯಕರ ಯೋಜನೆಗಳ ಬಗ್ಗೆ ಬಹಳ ಮಾತನಾಡಿದೆವು. ಅವರು ಆತ್ಮಾನುಭವುಳ್ಳ ವ್ಯಕ್ತಿಯಾಗಿದ್ದರೂ ಸಹ, ಅವರ ತಿಳುವಳಿಕೆ ಮತ್ತು ಒಳನೋಟಗಳು ಅತ್ಯಂತ ಲೌಕಿಕ ಸಮಸ್ಯೆಗಳೆಡೆಗೂ ವಿಸ್ತರಿಸುವುದನ್ನು ನಾನು ಅವರಲ್ಲಿ ಗಮನಿಸಿದೆ. ನಾನು ಅವರಲ್ಲಿ ಭಾರತದ ಪ್ರಾಚೀನ ಜ್ಞಾನದ ಸಾರವನ್ನು ಹೊತ್ತು ಜಗತ್ತಿಗೆ ಹರಡುತ್ತಿರುವ ಭಾರತದ ನಿಜವಾದ ರಾಯಭಾರಿಯನ್ನು ಕಂಡೆ.
ಬಿಲ್ಟ್‌ಮೋರ್ ಹೋಟೆಲ್‌ನಲ್ಲಿನ ಔತಣಕೂಟದಲ್ಲಿ ಅವರೊಂದಿಗಿನ ಕಟ್ಟಕಡೆಯ ದೃಶ್ಯವು ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಅಚ್ಚೊತ್ತಿದಂತಿದೆ. ಆ ಘಟನೆಗಳನ್ನು ಬೇರೆಡೆಗೆ ವಿವರಿಸಲಾಗಿದೆ; ಅದು ನಿಜವಾಗಿಯೂ ಮಹಾಸಮಾಧಿಯ ದೃಶ್ಯವಾಗಿತ್ತು. ಅಂತಹವರಿಗೆ ಮಾತ್ರ ಸಾಧ್ಯವಾಗುವ ರೀತಿಯಲ್ಲಿ ಮಹಾನ್ ಚೇತನವೊಂದು ಹೊರಟುಹೋಯಿತು ಎಂಬುದು ತಕ್ಷಣಕ್ಕೇ ಸ್ಪಷ್ಟವಾಗುತ್ತಿತ್ತು. ನಮ್ಮಲ್ಲಿ ಯಾರೊಬ್ಬರಿಗೂ ಶೋಕಿಸಬೇಕೆಂದೆನಿಸಿತೆಂದು ನಾನು ಭಾವಿಸುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅದೊಂದು ದೈವೀ ಘಟನೆಗೆ ಸಾಕ್ಷಿಯಾದ ಉದಾತ್ತತೆಯ ಭಾವನೆಯಾಗಿತ್ತು.
ಅಂದಿನಿಂದ ನನ್ನ ಕೆಲಸವು ನನ್ನನ್ನು ಅನೇಕ ದೇಶಗಳಿಗೆ ಕರೆದೊಯ್ದಿದೆ. ದಕ್ಷಿಣ ಅಮೇರಿಕಾ, ಯುರೋಪ್ ಮತ್ತು ಭಾರತದಲ್ಲಿ, ಪರಮಹಂಸಜಿಯವರ ದಿವ್ಯ ಬೆಳಕನ್ನು ಸ್ಪರ್ಶಿಸಿದ ಜನರು ನನ್ನ ಬಳಿಗೆ ಬಂದು ಈ ಮಹಾನ್ ಪುರುಷರ ಬಗ್ಗೆ ಕೆಲವು ಮಾತುಗಳನ್ನು ಹೇಳುವಂತೆ ಕೇಳಿದ್ದಾರೆ. ಅವರೆಲ್ಲ ವ್ಯಾಪಕವಾಗಿ ಪ್ರಕಟವಾಗಿದ್ದ ಗುರುಗಳ ಜೀವನದ ಅಂತಿಮ ದಿನಗಳ ಛಾಯಾಚಿತ್ರಗಳಲ್ಲಿ ಉಪಸ್ಥಿತನಿದ್ದ ನನ್ನನ್ನು ನೋಡಿದ್ದರು. ಬಂದವರೆಲ್ಲರಲ್ಲಿ, ಈ ಸಂದಿಗ್ಧ ಕಾಲದಲ್ಲಿ ತಮ್ಮ ಬದುಕಿಗೆ ಮಾರ್ಗದರ್ಶನ ನೀಡಲು ಯಾವುದಾದರೂ ದಿಕ್ ಪ್ರಜ್ಞೆ ದೊರೆಯಬೇಕೆಂಬ ತುಡಿತ, ಹಂಬಲವನ್ನು ನಾನು ಕಂಡೆ. ಗುರುಗಳ ಮಹಾಸಮಾಧಿಯೊಂದಿಗೆ ಅವರು ಆರಂಭಿಸಿದ ಕಾರ್ಯವು ಕೊನೆಗೊಳ್ಳುವ ಬದಲು ಜಗತ್ತಿನ ತುಂಬೆಲ್ಲಾ ಇನ್ನೂ ಹೆಚ್ಚಿನ ಜನರ ಮೇಲೆ ತನ್ನ ಬೆಳಕನ್ನು ಬೀರುತ್ತಿರುವುದನ್ನು ನಾನು ನೋಡಲಾರಂಭಿಸಿದೆ.
ಅವರ ಪರಂಪರೆಯು ಅವರ ಸಂತ ಸದೃಶ ಶಿಷ್ಯರಾದ ಶ್ರೀ ದಯಾ ಮಾತಾ ಅವರಿಗಿಂತ ಇನ್ನೆಲ್ಲಿಯೂ ಹೆಚ್ಚು ಪ್ರಕಾಶಮಾನವಾಗಿ ಹೊಳೆಯಲಾರದು. ಪರಮಹಂಸರು ತಾವು ಹೋದ ನಂತರ ತಮ್ಮ ಹೆಜ್ಜೆಗಳನ್ನು ಅನುಸರಿಸುವಂತೆ ಅವರನ್ನು ಸಿದ್ಧಪಡಿಸಿದರು. ತಮ್ಮ ಮಹಾಸಮಾಧಿಯ ಮೊದಲು ಅವರು ಶ್ರೀ ದಯಾ ಮಾತಾರಿಗೆ ಹೇಳಿದರು, “ನಾನು ಹೊರಟು ಹೋದಾಗ, ಪ್ರೇಮ ಮಾತ್ರ ನನ್ನ ಸ್ಥಾನವನ್ನು ತೆಗೆದುಕೊಳ್ಳುತ್ತದೆ.” ಎಂದು. ಸುಮಾರು ನಲವತ್ತು ವರ್ಷಗಳ ಹಿಂದೆ, ಸೆಲ್ಫ್-ರಿಯಲೈಝೇಷನ್ ಕೇಂದ್ರಕ್ಕೆ ನೀಡಿದ ನನ್ನ ಮೊದಲ ಭೇಟಿಯಲ್ಲಿ, ನನ್ನಲ್ಲಿ ಪ್ರಭಾವ ಉಂಟುಮಾಡಿದ ಅದೇ ದೈವೀ ಪ್ರೇಮ ಮತ್ತು ದಯಾಪರತೆಯ ಮನೋಭಾವವನ್ನು, ನನ್ನಂತೆಯೇ ಪರಮಹಂಸಜಿಯವರನ್ನು ಭೇಟಿಯಾಗುವ ಸೌಭಾಗ್ಯವನ್ನು ಪಡೆದವರು, ದಯಾಮಾತಾಜಿಯವರಲ್ಲಿ ಪ್ರತಿಬಿಂಬಿತವಾಗುವುದನ್ನು ಕಾಣುತ್ತಾರೆ. ಈ ಸಂಪುಟದಲ್ಲಿ ದಾಖಲಾದ ಅವರ ಮಾತುಗಳಲ್ಲಿ, ಮಹಾನ್ ಗುರುಗಳಿಂದ ಅವರ ಜೀವನದಲ್ಲಿ ಹೊರಹೊಮ್ಮಿದ ಮತ್ತು ನನ್ನದೇ ಜೀವನದಲ್ಲಿ ಅಳಿಸಲಾಗದ ರೀತಿಯಲ್ಲಿ ಸ್ಪರ್ಶಿಸಿದ ಜ್ಞಾನ ಮತ್ತು ಪ್ರೇಮದ ಅಮೂಲ್ಯವಾದ ಉಡುಗೊರೆ ಇದೆ.
ನಮ್ಮ ಪ್ರಪಂಚವು ಹೊಸ ಯುಗದತ್ತ ಸಾಗುತ್ತಿರುವಾಗ, ನಾವು ಹಿಂದೆಂದಿಗಿಂತಲೂ ಅಂಧಕಾರ ಮತ್ತು ಗೊಂದಲಗಳಿಂದ ಹೆದರಿಸಲ್ಪಟ್ಟಿದ್ದೇವೆ. ದೇಶಕ್ಕೆ ವಿರುದ್ಧವಾಗಿ ದೇಶ, ಧರ್ಮದ ವಿರುದ್ಧ ಧರ್ಮ, ಮನುಷ್ಯನ ವಿರುದ್ಧ ಪ್ರಕೃತಿ, ಈ ರೀತಿಯ ಹಳೆಯ ವಿಧಾನಗಳನ್ನು, ಸಾರ್ವತ್ರಿಕ ಪ್ರೀತಿ, ತಿಳುವಳಿಕೆ ಮತ್ತು ಇತರರ ಬಗ್ಗೆ ಕಾಳಜಿಯ ಹೊಸ ಮನೋಭಾವದಿಂದ ಮೇಲೆತ್ತಬೇಕಾಗಿದೆ. ಇದು ಭಾರತದ ದಾರ್ಶನಿಕರ ಶಾಶ್ವತ ಸಂದೇಶ — ಪರಮಹಂಸ ಯೋಗಾನಂದರು ನಮ್ಮ ಕಾಲಕ್ಕೆ ಮತ್ತು ಮುಂದಿನ ಪೀಳಿಗೆಗೆ ತಂದ ಸಂದೇಶ. ಅವರು ಬಿಟ್ಟು ಹೋದ ಜ್ಯೋತಿಯು ಈಗ ಶ್ರೀ ದಯಾಮಾತಾಜಿಯವರ ಕೈಯಲ್ಲಿದೆ. ಅದು ಜೀವನಕ್ಕೆ ದಿಕ್ಕನ್ನು ಅರಸುತ್ತಿರುವ ಲಕ್ಷಾಂತರ ಜನರಿಗೆ ದಾರಿದೀಪವಾಗಲಿ ಎಂದು ನಾನು ಆಶಿಸುತ್ತೇನೆ.