ಒಂದು ಆಧ್ಯಾತ್ಮಿಕ ಪ್ರತಿಷ್ಠಾನ

Yogananda writing.

ಭವಿಷ್ಯದ ಪೀಳಿಗೆಗೆ ತಮ್ಮ ಸಂದೇಶವನ್ನು ಹೊತ್ತೊಯ್ಯುವ ಬರಹಗಳಿಗೆ ತಮ್ಮನ್ನು ತೊಡಗಿಸಿಕೊಳ್ಳಲು ಮತ್ತು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ / ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ನ ಆಧ್ಯಾತ್ಮಿಕ ಮತ್ತು ಲೋಕೋಪಕಾರಿ ಕಾರ್ಯಗಳಿಗೆ ಭದ್ರ ಬುನಾದಿಯನ್ನು ಹಾಕಲೆಂದು ಪರಮಹಂಸ ಯೋಗಾನಂದರು 1930 ರ ದಶಕದಲ್ಲಿ, ತಮ್ಮ ರಾಷ್ಟ್ರವ್ಯಾಪಿ ಸಾರ್ವಜನಿಕ ಉಪನ್ಯಾಸ ಕಾರ್ಯಕ್ರಮದಿಂದ ಸ್ವಲ್ಪಮಟ್ಟಿಗೆ ಹಿಂದೆ ಸರಿಯಲಾರಂಭಿಸಿದರು.

ಅವರ ಮಾರ್ಗದರ್ಶನದ ಅಡಿಯಲ್ಲಿ, ಅವರು ತಮ್ಮ ತರಗತಿಗಳ ವಿದ್ಯಾರ್ಥಿಗಳಿಗೆ ನೀಡಿದ ವೈಯಕ್ತಿಕ ಮಾರ್ಗದರ್ಶನ ಮತ್ತು ಬೋಧನೆಗಳನ್ನು, ಗೃಹಾಧ್ಯಯನಕ್ಕಾಗಿ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಲೆಸನ್ಸ್‌ ಎಂಬ ಸಮಗ್ರ ಸರಣಿಯಾಗಿ ಸಂಯೋಜಿಸಲಾಯಿತು.

Yogananda in Encinitas.

ಕ್ಯಾಲಿಫೋರ್ನಿಯಾದ ಎನ್ಸಿನಿಟಾಸ್‌ನಲ್ಲಿ ಪೆಸಿಫಿಕ್ ಮಹಾಸಾಗರದ ಮೇಲಿರುವ ಸುಂದರವಾದ ಆಶ್ರಮವನ್ನು, ಗುರುಗಳು ಭಾರತದಲ್ಲಿದ್ದಾಗ, ಅವರ ಅನುಪಸ್ಥಿತಿಯಲ್ಲಿ ಅವರ ಪ್ರಿಯ ಶಿಷ್ಯ ಶ್ರೀ ಶ್ರೀ ರಾಜರ್ಷಿ ಜನಕಾನಂದ ಅವರು ಗುರುಗಳಿಗಾಗಿ ನಿರ್ಮಿಸಿದರು. ಇಲ್ಲಿ ಗುರುಗಳು ತಮ್ಮ ಆತ್ಮಕಥೆ ಮತ್ತು ಇತರ ಬರಹಗಳನ್ನು ಬರೆಯುತ್ತ ಅನೇಕ ವರ್ಷಗಳನ್ನು ಕಳೆದರು ಮತ್ತು ಧ್ಯಾನಶಿಬಿರ ಕಾರ್ಯಕ್ರಮವನ್ನು ಆರಂಭಿಸಿದರು, ಅದು ಇಂದಿಗೂ ಮುಂದುವರೆದಿದೆ.

ಅವರು ಹಲವಾರು ಸೆಲ್ಫ್-ರಿಯಲೈಝೇಷನ್‌ ಫೆಲೋಶಿಪ್ ಮಂದಿರಗಳನ್ನು (ಎನ್ಸಿನಿಟಾಸ್, ಹಾಲಿವುಡ್ ಮತ್ತು ಸ್ಯಾನ್ ಡಿಯಾಗೋ) ಸ್ಥಾಪಿಸಿದರು. ಅಲ್ಲಿ ವ್ಯಾಪಕ ಆಧ್ಯಾತ್ಮಿಕ ವಿಷಯಗಳನ್ನು ಕುರಿತು ಎಸ್‌ಆರ್‌ಎಫ್‌ ಸದಸ್ಯರು ಮತ್ತು ಸ್ನೇಹಿತರಿಂದ ಕೂಡಿದ ಶ್ರದ್ಧಾನ್ವಿತ ಪ್ರೇಕ್ಷಕರೆದುರಿಗೆ ನಿಯತವಾಗಿ ಮಾತನಾಡುತ್ತಿದ್ದರು. ಶ್ರೀ ಶ್ರೀ ದಯಾ ಮಾತಾರವರಿಂದ ಶೀಘ್ರಲಿಪಿಯಲ್ಲಿ ದಾಖಲಿಸಲ್ಪಟ್ಟ ಈ ಅನೇಕ ಉಪನ್ಯಾಸಗಳನ್ನು ಯೋಗಾನಂದಜಿಯವರ ಉಪನ್ಯಾಸಗಳು ಮತ್ತು ಪ್ರಬಂಧ ಸಂಗ್ರಹಗಳ ಮೂರು ಸಂಪುಟಗಳಲ್ಲಿ ಮತ್ತು ಯೋಗದಾ ಸತ್ಸಂಗ ಮ್ಯಾಗಝೀನ್‌ನಲ್ಲಿ ವೈಎಸ್‌ಎಸ್/ಎಸ್‌ಆರ್‌ಎಫ್ ಪ್ರಕಟಿಸಿದೆ.

Photo of Yogananda on Autobiography of a Yogi.

ಯೋಗಾನಂದರ ಜೀವನಗಾಥೆಯಾದ, ಯೋಗಿಯ ಆತ್ಮಕಥೆಯನ್ನು 1946 ರಲ್ಲಿ ಪ್ರಕಟಿಸಲಾಯಿತು (ಮತ್ತು ನಂತರದ ಆವೃತ್ತಿಗಳಲ್ಲಿ ಅವರು ಕಥನವನ್ನು ಗಮನಾರ್ಹವಾಗಿ ವಿಸ್ತರಿಸಿದರು). ದೀರ್ಘಕಾಲದಿಂದ ಜನಪ್ರಿಯವೆನಿಸಿಕೊಂಡ ಈ ಪುಸ್ತಕವು ಮೊದಲ ಬಾರಿಗೆ ಕಾಣಿಸಿಕೊಂಡಾಗಿನಿಂದ ನಿರಂತರವಾಗಿ ಪ್ರಕಟಣೆಯಲ್ಲಿದೆ ಮತ್ತು 50 ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಿತವಾಗಿದೆ. ಇದನ್ನು ಆಧುನಿಕ ಆಧ್ಯಾತ್ಮಿಕ ಮೇರುಕೃತಿಯೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ.

Paramahansa Yogananda and his disciples in Lake Shrine.

1950 ರಲ್ಲಿ, ಪರಮಹಂಸಜಿಯವರು ಲಾಸ್ ಏಂಜಲೀಸ್‌ನಲ್ಲಿರುವ ಸೆಲ್ಫ್-ರಿಯಲೈಝೇಷನ್‌ ಫೆಲೋಷಿಪ್‌ನ ಅಂತರರಾಷ್ಟ್ರೀಯ ಪ್ರಧಾನ ಕಛೇರಿಯಲ್ಲಿ ಜಾಗತಿಕ ಘಟಿಕೋತ್ಸವವನ್ನು ನೆರವೇರಿಸಿದರು — ಇದು ಒಂದು ವಾರದ ಕಾರ್ಯಕ್ರಮವಾಗಿತ್ತು. ಇಂದು ಇದು ಪ್ರಪಂಚದಾದ್ಯಂತ ಪ್ರತಿ ವರ್ಷ ಸಾವಿರಾರು ಜನರನ್ನು ಆಕರ್ಷಿಸುತ್ತಿದೆ. ಅವರು ಪೆಸಿಫಿಕ್ ಪಾಲಿಸೇಡ್ಸ್‌ನಲ್ಲಿರುವ ಸುಂದರವಾದ ಎಸ್‌ಆರ್‌ಎಫ್ ಲೇಕ್ ಶ್ರೈನ್‌ನನ್ನೂ ಸಮರ್ಪಿಸಿದರು. ಅದರ ಹತ್ತು ಎಕರೆಗಳ ಸರೋವರ ತೀರದ ಧ್ಯಾನ ಉದ್ಯಾನಗಳಲ್ಲಿ ಮಹಾತ್ಮ ಗಾಂಧಿಯವರ ಚಿತಾಭಸ್ಮದ ಒಂದು ಭಾಗವನ್ನು ಪ್ರತಿಷ್ಠಾಪಿಸಲಾಗಿದೆ. ಆಗಿನಿಂದ ಅದು ಕ್ಯಾಲಿಫೋರ್ನಿಯಾದ ಪ್ರಮುಖ ಆಧ್ಯಾತ್ಮಿಕ ಹೆಗ್ಗುರುತುಗಳಲ್ಲಿ ಒಂದಾಗಿದೆ.

ಇದನ್ನು ಹಂಚಿಕೊಳ್ಳಿ