ನಂತರದ ಆವೃತ್ತಿಗಳಿಗೆ ಯೋಗಾನಂದರ ಆಶಯಗಳು

ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ನ ಆವೃತ್ತಿಗಳಲ್ಲಿ ಮಾತ್ರ, ಲೇಖಕರ ಎಲ್ಲಾ ಆಶಯಗಳನ್ನು ಯೋಗಿಯ ಆತ್ಮಕಥೆಯ ಅಂತಿಮ ಪಠ್ಯದಲ್ಲಿ ಅಳವಡಿಸಲಾಗಿದೆ. ಬೇರೆ ಯಾವ ಅವೃತ್ತಿಗಳಲ್ಲೂ ಅದು ಇರುವುದಿಲ್ಲ — 1924 ರಿಂದ 1952 ರಲ್ಲಿ ಅವರು ನಿಧನರಾಗುವವರೆಗೆ ಅವರು ಯಾವ ಸಂಪಾದಕರೊಂದಿಗೆ ಕೆಲಸ ಮಾಡಿದರೋ ಅವರಿಗೆ ವೈಯಕ್ತಿಕವಾಗಿ ಅದನ್ನು ತಿಳಿಸಿದ್ದರು ಹಾಗೂ ಅವರು ತಮ್ಮ ಕೃತಿಗಳ ಪ್ರಕಟಣೆಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಅವರಿಗೇ ವಹಿಸಿದ್ದರು.

ಯೋಗಿಯ ಆತ್ಮಕಥೆಯ ಓದುಗರು ಕೆಲವೊಮ್ಮೆ ಪ್ರಸ್ತುತ ಆವೃತ್ತಿ ಮತ್ತು 1946 ರಲ್ಲಿ ಪ್ರಕಟವಾದ ಮೊದಲ ಆವೃತ್ತಿಯ ನಡುವಿನ ವ್ಯತ್ಯಾಸಗಳನ್ನು ಕೇಳುತ್ತಾರೆ.

ಪರಮಹಂಸಜಿಯವರ ಆತ್ಮಚರಿತ್ರೆಯ ಮೂರು ಆವೃತ್ತಿಗಳು ಅವರ ಜೀವಿತಾವಧಿಯಲ್ಲಿ ಕಾಣಿಸಿಕೊಂಡವು. 1951 ರಲ್ಲಿ ಪ್ರಕಟವಾದ ಮೂರನೇ ಆವೃತ್ತಿಯಲ್ಲಿ ಅವರು ಗಮನಾರ್ಹ ಬದಲಾವಣೆಗಳನ್ನು ಮಾಡಿದರು — ಪಠ್ಯವನ್ನು ಸಂಪೂರ್ಣವಾಗಿ ಪರಿಷ್ಕರಿಸಿದರು. ಕೆಲವೊಂದು ವಿಷಯಗಳನ್ನು ತೆಗೆದು ಹಾಕಿದರು. ವಿವಿಧ ಅಂಶಗಳನ್ನು ವಿಸ್ತರಿಸಿದರು ಮತ್ತು ಹೊಸ ಅಂತಿಮ ಅಧ್ಯಾಯ “1940 ರಿಂದ – 1951 ರ ವರೆಗಿನ ಅವಧಿ” (ಸುದೀರ್ಘವಾದ ಅಧ್ಯಾಯಗಳಲ್ಲಿ ಒಂದು) ವನ್ನು ಸೇರಿಸಿದರು. ಮೂರನೇ ಆವೃತ್ತಿಯ ನಂತರ ಅವರು ಮಾಡಿದ ಇನ್ನೂ ಕೆಲವು ಪರಿಷ್ಕರಣೆಗಳನ್ನು 1956 ರಲ್ಲಿ ಬಿಡುಗಡೆಯಾದ ಏಳನೇ ಆವೃತ್ತಿಯ ಪ್ರಕಟಣೆಯವರೆಗೂ ಅಳವಡಿಸಲಾಗಿರಲಿಲ್ಲ.

ಯೋಗಿಯ ಆತ್ಮಕಥೆಯ ಏಳನೇ ಆವೃತ್ತಿಯಲ್ಲಿ ಮುದ್ರಿಸಲಾದ, ಪ್ರಕಾಶಕರ ಈ ಕೆಳಗಿನ ಟಿಪ್ಪಣಿಯು ಪುಸ್ತಕದ ಬಗ್ಗೆ ಲೇಖಕರಿಗಿದ್ದ ಆಶಯಗಳನ್ನು ತಿಳಿಸುತ್ತದೆ:

“ಈ 1956ರ ಅಮೆರಿಕದ ಆವೃತ್ತಿಯು ಪರಮಹಂಸ ಯೋಗಾನಂದರು 1949ರಲ್ಲಿ ಲಂಡನ್, ಇಂಗ್ಲೆಂಡ್ ಆವೃತ್ತಿಗಾಗಿ ಮಾಡಿದ ತಿದ್ದುಪಡಿಗಳನ್ನು ಹಾಗೂ 1951ರಲ್ಲಿ ಲೇಖಕರು ಮಾಡಿದ ಹೆಚ್ಚುವರಿ ಪರಿಷ್ಕರಣೆಗಳನ್ನು ಒಳಗೊಂಡಿದೆ. 1949ರ ಅಕ್ಟೋಬರ್ 25ರಂದು ‘ಲಂಡನ್ ಆವೃತ್ತಿಗಾಗಿ ಮಾಡಿದ ಟಿಪ್ಪಣಿ’ ಯಲ್ಲಿ ಪರಮಹಂಸ ಯೋಗಾನಂದರು, ‘ಈ ಪುಸ್ತಕದ ಲಂಡನ್ ಆವೃತ್ತಿ ಬಿಡುಗಡೆಯಾಗುತ್ತಿರುವುದರಿಂದ ನನಗೆ ಪಠ್ಯವನ್ನು ಪರಿಷ್ಕರಿಸುವ ಹಾಗೂ ಪುನಃ ವಿಸ್ತಾರಗೊಳಿಸುವ ಅವಕಾಶ ಒದಗಿದೆ. ಕೊನೆಯ ಅಧ್ಯಾಯದಲ್ಲಿ ಹೊಸ ವಿಷಯವನ್ನಷ್ಟೇ ಅಲ್ಲದೆ, ಅಮೆರಿಕನ್ ಆವೃತ್ತಿಯ ಓದುಗರ ಪ್ರಶ್ನೆಗಳಿಗೆ, ಹಲವಾರು ಅಡಿಟಿಪ್ಪಣಿಗಳಲ್ಲಿ ಉತ್ತರಗಳನ್ನೂ ಸೇರಿಸಿದ್ದೇನೆ’ ಎಂದು ಬರೆದಿದ್ದಾರೆ.

“ಲೇಖಕರು 1951ರಲ್ಲಿ ಮಾಡಿದ ನಂತರದ ತಿದ್ದುಪಡಿಗಳನ್ನು ಅಮೆರಿಕದ ನಾಲ್ಕನೆಯ (1952) ಆವೃತ್ತಿಯಲ್ಲಿ ತರಲು ಯೋಜಿಸಲಾಗಿತ್ತು. ಆ ಸಮಯದಲ್ಲಿ ಯೋಗಿಯ ಆತ್ಮಕಥೆ (ಆಟೋಬಯಾಗ್ರಫಿ ಆಫ್ ಎ ಯೋಗಿ)ಯ ಹಕ್ಕುಗಳು ನ್ಯೂಯಾರ್ಕ್ ಪ್ರಕಟಣಾಲಯಕ್ಕೆ ಸೇರಿದ್ದವು. 1946ರಲ್ಲಿ ನ್ಯೂಯಾರ್ಕ್‌ನಲ್ಲಿ ಪುಸ್ತಕದ ಪ್ರತಿಯೊಂದು ಪುಟವನ್ನೂ ವಿದ್ಯುನ್ಮುದ್ರಣ (ಎಲೆಕ್ಟ್ರೋಟೈಪ್ ಪ್ಲೇಟ್) ಫಲಕವನ್ನಾಗಿ ಮಾಡಲಾಗಿತ್ತು. ಅದರಿಂದಾಗಿ, ಒಂದು ಅಲ್ಪ ವಿರಾಮವನ್ನು ಸೇರಿಸಬೇಕಿದ್ದರೂ ಇಡೀ ಪುಟದ ಲೋಹದ ಫಲಕವನ್ನು ಕತ್ತರಿಸಿ ತೆಗೆದು, ಬೇಕಾದ ಅಲ್ಪ ವಿರಾಮವಿರುವ ಪಂಕ್ತಿಯನ್ನು ಸೇರಿಸಿ ಪುನಃ ಬೆಸುಗೆ ಹಾಕಬೇಕಾಗುತ್ತಿತ್ತು. ಹಲವಾರು ಫಲಕಗಳಿಗೆ ಮತ್ತೆ ಬೆಸುಗೆ ಹಾಕಲು ತಗಲುತ್ತಿದ್ದ ಖರ್ಚಿನಿಂದಾಗಿ, ನ್ಯೂಯಾರ್ಕ್ ಪ್ರಕಾಶಕರು ನಾಲ್ಕನೆಯ ಆವೃತ್ತಿಯಲ್ಲಿ ಲೇಖಕರ 1951ರ ತಿದ್ದುಪಡಿಗಳನ್ನು ಸೇರಿಸಲಿಲ್ಲ.

“1953ರ ಕೊನೆಯಲ್ಲಿ ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್ (ಎಸ್.ಆರ್.ಎಫ್.) ನ್ಯೂಯಾರ್ಕ್ ಪ್ರಕಾಶಕರಿಂದ ಯೋಗಿಯ ಆತ್ಮಕಥೆ (ಆಟೋಬಯಾಗ್ರಫಿ ಆಫ್ ಎ ಯೋಗಿ)ಯ ಎಲ್ಲಾ ಹಕ್ಕುಗಳನ್ನು ಖರೀದಿಸಿತು. ಎಸ್.ಆರ್.ಎಫ್. ಈ ಪುಸ್ತಕವನ್ನು 1954 ಮತ್ತು 1955ರಲ್ಲಿ (ಐದನೆಯ ಮತ್ತು ಆರನೆಯ ಆವೃತ್ತಿಗಳು) ಪುನರ್ಮುದ್ರಣ ಮಾಡಿತು. ಆದರೆ ಆ ಎರಡು ವರ್ಷಗಳಲ್ಲಿ ಎಸ್.ಆರ್.ಎಫ್. ಸಂಪಾದಕೀಯ ವಿಭಾಗಕ್ಕೆ ಇತರ ಕರ್ತವ್ಯಗಳು ಒದಗಿ ಬಂದು ಲೇಖಕರ ಅಗಾಧವಾದ ಪರಿಷ್ಕರಣೆಗಳನ್ನು ಎಲೆಕ್ಟ್ರೋಟೈಪ್ ಪ್ಲೇಟ್‌ಗಳ ಮೇಲೆ ಮೂಡಿಸುವ ಕೆಲಸವನ್ನು ಮಾಡಲಾಗಲಿಲ್ಲ. ಆದಾಗ್ಯೂ ಈ ಕೆಲಸವನ್ನು ಏಳನೆಯ ಆವೃತ್ತಿಯಲ್ಲಿ ಸಕಾಲಕ್ಕೆ ನೆರವೇರಿಸಲಾಯಿತು.”

1946 ಮತ್ತು 1956 ರ ನಡುವಿನ ಎಲ್ಲಾ ಬದಲಾವಣೆಗಳನ್ನು, ತೆಗೆದುಹಾಕುವುದು ಮತ್ತು ಸೇರ್ಪಡೆಗಳನ್ನು ಪರಮಹಂಸಜಿಯವರ ಕೋರಿಕೆಯ ಮೇರೆಗೆ ಮಾಡಲಾಗಿದೆ. ಇತರ ಸಂಪಾದಕೀಯ ಪರಿಷ್ಕರಣೆಗಳನ್ನು — ಎಲ್ಲವೂ ತೀರಾ ಗೌಣವೇ — ನಂತರ ಮಾಡಲಾಯಿತು. ಅದಕ್ಕಾಗಿ ಅವರು, 25 ವರ್ಷಗಳಿಗೂ ಹೆಚ್ಚು ಕಾಲ ನಿಕಟವಾಗಿ ಕೆಲಸ ಮಾಡಿದ ತಮ್ಮ ದೀರ್ಘಾವಧಿಯ ಸಂಪಾದಕರಾದ ತಾರಾ ಮಾತಾರಿಗೆ ತಮ್ಮ ನಿಧನಕ್ಕೂ ಮುನ್ನ ನೀಡಿದ ಮಾರ್ಗದರ್ಶನದ ಪ್ರಕಾರ ಮಾಡಲಾಯಿತು. ಆಕೆಯಲ್ಲಿ ಅವರು ತಮ್ಮ ಸೂಚನೆಗಳಿಗನುಸಾರವಾಗಿ ತಮ್ಮ ಬರಹಗಳ ಮರಣೋತ್ತರದ ಪ್ರಕಾಶನ ಮಾಡುವರು ಎಂಬ ಸಂಪೂರ್ಣ ವಿಶ್ವಾಸವನ್ನಿರಿಸಿದ್ದರು.

ವರ್ಷಗಳು ಕಳೆದಂತೆ ಈ ಪುಸ್ತಕವು ಹೆಚ್ಚು ಹೆಚ್ಚು ವ್ಯಾಪಕವಾದ ಪ್ರೇಕ್ಷಕರನ್ನು ತಲುಪುತ್ತದೆ ಎಂದು ಪರಮಹಂಸಜಿಯವರು ಮೊದಲೇ ಸ್ಪಷ್ಟವಾಗಿ ಕಂಡಿದ್ದರಿಂದ, ಅವರು ತಮ್ಮ ಸಂಪಾದಕರಿಗೆ ಪ್ರಾಸಂಗಿಕ ಅಡಿಟಿಪ್ಪಣಿಗಳು, ಚಿತ್ರಗಳು, ಶೀರ್ಷಿಕೆಗಳು ಇತ್ಯಾದಿಗಳನ್ನು, ಅಂದಂದಿನ ಜ್ಞಾನಕ್ಕನುಗುಣವಾಗಿ ಸೇರಿಸಲು ಸೂಚಿಸಿದರು.

1956 ರಿಂದ ಮಾಡಲಾದ ಬದಲಾವಣೆಗಳು, ಅನೇಕ ದಶಕಗಳಿಂದ ನಿರಂತರವಾಗಿ ಮುದ್ರಣದಲ್ಲಿರುವ ಯಾವುದೇ ಪುಸ್ತಕದ ನಂತರದ ಆವೃತ್ತಿಗಳಲ್ಲಿ ಪ್ರಕಾಶಕರು ಸಾಮಾನ್ಯವಾಗಿ ಮಾಡಬಹುದಾದ ಸಂಪಾದಕೀಯ ಹೊಂದಾಣಿಕೆಗಳನ್ನು ಒಳಗೊಂಡಿರುತ್ತದೆ (ಉದಾ., ಲೇಖಕರ ಇತರ ಪುಸ್ತಕಗಳ ಪಟ್ಟಿಯನ್ನು ನವೀಕರಿಸುವುದು; ಪ್ರಸ್ತುತ ಓದುಗರಿಗೆ ಬೇಕಾಗಬಹುದಾದ ಅಡಿಟಿಪ್ಪಣಿಗಳ ಸೇರ್ಪಡೆ – ಅದು ಲೇಖಕರದ್ದಲ್ಲ, ಪ್ರಕಾಶಕರಿಂದ ಸೇರಿಸಲ್ಪಟ್ಟದ್ದು ಎಂದು ಸ್ಪಷ್ಟವಾಗಿ ಮುದ್ರಿಸಲಾಗಿರುತ್ತದೆ; ಲೇಖಕರ ಹೆಚ್ಚುವರಿ ಫೋಟೋಗಳು ಮತ್ತು ಅವರ ಚಟುವಟಿಕೆಗಳು; ಪುಸ್ತಕದ ಮುಂದಿನ ಮತ್ತು ಹಿಂದಿನ ವಿಷಯಗಳಿಗೆ ಬೇಕಾದ ಬದಲಾವಣೆಗಳು, ಇತ್ಯಾದಿ).

ಯೋಗಿಯ ಆತ್ಮಕಥೆ (ಆಟೋಬಯಾಗ್ರಫಿ ಆಫ್ ಎ ಯೋಗಿ)ಯ ಪ್ರಾರಂಭಿಕ ಆವೃತ್ತಿಗಳಲ್ಲಿ ಲೇಖಕರ ಬಿರುದನ್ನು, ಸ್ಪಷ್ಟವಾಗಿ ಅಥವಾ ಸಂಪೂರ್ಣವಾಗಿ ಉಚ್ಚಾರ ಮಾಡದ ಸ್ವರಗಳನ್ನು ಉಚ್ಚರಿಸದ ಬಂಗಾಳಿ ಪದ್ಧತಿಯನ್ನು ಪ್ರತಿಬಿಂಬಿಸುತ್ತಾ, ಪರಮ ಶಬ್ದದ ಕೊನೆಯ ಸ್ವರ ‘ಅ’ ವನ್ನು ಬಿಟ್ಟು “ಪರಮ್‌ಹಂಸ” ಎಂದು ಬರೆಯಲಾಗಿತ್ತು. ವೇದವನ್ನಾಧರಿಸಿದ ಈ ಬಿರುದಿನ ಪವಿತ್ರವಾದ ಅರ್ಥವನ್ನು ತಿಳಿಸುವ ಸಲುವಾಗಿ, ನಂತರದ ಮುದ್ರಣಗಳಲ್ಲಿ ಸಂಸ್ಕೃತದ ಅಧಿಕೃತ ಲಿಪ್ಯಂತರವನ್ನು ಉಪಯೋಗಿಸಲಾಗಿದೆ. “ಪರಮಹಂಸ” ಪದದಲ್ಲಿ ಪರಮ ಎನ್ನುವುದು “ಅತ್ಯುಚ್ಚ ಅಥವಾ ಸರ್ವೋನ್ನತ” ಎಂದೂ ಹಂಸ ಎನ್ನುವುದು ತನ್ನ ನಿಜವಾದ ದೈವೀ ಸ್ವರೂಪದ ಅತ್ಯುನ್ನತ ಸಾಕ್ಷಾತ್ಕಾರವನ್ನು ಹಾಗೂ ಪರಮಾತ್ಮನೊಂದಿಗೆ ಆ ಸ್ವರೂಪದ ಐಕ್ಯತೆಯನ್ನು ಪಡೆದ ವ್ಯಕ್ತಿಯನ್ನು ಸೂಚಿಸುತ್ತದೆ.

1946 ರ ಮೊದಲ ಆವೃತ್ತಿಗೆ ಹೋಲಿಸಿದರೆ, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ನ ಆತ್ಮಕಥೆಯ ಪ್ರಸ್ತುತ ಆವೃತ್ತಿಗಳು, ಲೇಖಕರು ಹಾಗೂ ಅವರ ಚಟುವಟಿಕೆಗಳ ಸಂಪೂರ್ಣ ನೋಟವನ್ನು ಆಸಕ್ತ ಓದುಗರಿಗೆ ಒದಗಿಸಲು, ಸಂಸ್ಥೆಯ ಸಂಗ್ರಹಗಳಿಂದ ತೆಗೆದುಕೊಳ್ಳಲಾದ, ಪರಮಹಂಸ ಯೋಗಾನಂದರ ಹೆಚ್ಚುವರಿ 20 ಪುಟಗಳ ಫೋಟೋಗಳನ್ನು ಮತ್ತು ಪುಸ್ತಕದಲ್ಲಿ ಚರ್ಚಿಸಲಾದ ಇತರ ವಿಷಯಗಳನ್ನು ಒಳಗೊಂಡಿರುತ್ತವೆ.

ಇದನ್ನು ಹಂಚಿಕೊಳ್ಳಿ