ಪರಮಹಂಸ ಯೋಗಾನಂದರನ್ನು ಕುರಿತು ರಾಜರ್ಷಿ ಜನಕಾನಂದ

ರಾಜರ್ಷಿ ಜನಕಾನಂದರಿಂದ

ರಾಜರ್ಷಿ ಜನಕಾನಂದ: ಎ ಗ್ರೇಟ್‌ ವೆಸ್ಟರ್ನ್‌ ಯೋಗಿ ಯಿಂದ ಪುನರ್ಮುದ್ರಿಸಲಾದುದು ಈಗಲೇ ಆರ್ಡರ್‌ ಮಾಡಿ

ಈ ಕೆಳಗಿನ ವಿವರಣೆಯನ್ನು ಜನವರಿ 3, 1937 ರಂದು ಲಾಸ್ ಏಂಜಲೀಸ್‌ನ ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ ಅಂತರರಾಷ್ಟ್ರೀಯ ಕೇಂದ್ರ ಕಛೇರಿಯಲ್ಲಿ ನೀಡಿದ ಭಾಷಣದಿಂದ ತೆಗೆದುಕೊಳ್ಳಲಾಗಿದೆ. ಆ ಸಂದರ್ಭವು, ಪರಮಹಂಸಜಿಯವರು ತಮ್ಮ ಹದಿನೆಂಟು ತಿಂಗಳ ಭಾರತ ಮತ್ತು ಯುರೋಪ್ ಪ್ರವಾಸದಿಂದ ಹಿಂದಿರುಗಿದ ಸಂದರ್ಭವನ್ನು ಆಚರಿಸುವ ಔತಣಕೂಟವಾಗಿತ್ತು. ರಾಜರ್ಷಿ ಜನಕಾನಂದ (1892-1955) ರು ವೈಎಸ್‌ಎಸ್‌/ಎಸ್‌ಆರ್‌ಎಫ್‌ ನ ಅಧ್ಯಕ್ಷರಾಗಿ ಪರಮಹಂಸ ಯೋಗಾನಂದರ ಮೊದಲ ಆಧ್ಯಾತ್ಮಿಕ ಉತ್ತರಾಧಿಕಾರಿಯಾಗಿದ್ದರು.

ಉಪಶಮನಕಾರಕ ಬೆಳಕಿನ ಒಂದು ಅನುಭವ

ಐದು ವರ್ಷಗಳ ಹಿಂದಷ್ಟೇ ನಾನು ಪರಮಹಂಸ ಯೋಗಾನಂದರನ್ನು ಮೊದಲ ಬಾರಿಗೆ ಭೇಟಿಯಾಗುವ ದೊಡ್ಡ ಭಾಗ್ಯವನ್ನು ಪಡೆದೆ. ನಾನು ಯಾವಾಗಲೂ ಸತ್ಯ ಮತ್ತು ಧರ್ಮದಲ್ಲಿ ಆಸಕ್ತಿ ಹೊಂದಿದ್ದೆ, ಆದರೂ ನಾನು ಎಂದಿಗೂ ಯಾವುದೇ ಚರ್ಚ್‌ನ ಸದಸ್ಯನಾಗಿರಲಿಲ್ಲ. ನನ್ನ ಜೀವನವು ಉದ್ಯಮದಲ್ಲಿ ಮುಳುಗಿಹೋಗಿತ್ತು; ಆದರೆ ನನ್ನ ಆತ್ಮವು ಅಶಾಂತವಾಗಿತ್ತು ಮತ್ತು ನನ್ನ ಶರೀರವು ಕ್ಷೀಣಿಸುತ್ತಿತ್ತು ಮತ್ತು ನನ್ನ ಮನಸ್ಸು ಪ್ರಕ್ಷುಬ್ಧವಾಗಿತ್ತು. ನಾನು ಎಷ್ಟು ಉದ್ವಿಗ್ನನಾಗಿರುತ್ತಿದ್ದೆನೆಂದರೆ, ನನಗೆ ನಿಶ್ಚಲವಾಗಿ ಕುಳಿತುಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ.

ನಾನು ಪರಮಹಂಸಜಿಯವರನ್ನು ಭೇಟಿಯಾದ ನಂತರ ಮತ್ತು ಅವರೊಂದಿಗೆ ಸ್ವಲ್ಪ ಸಮಯ ಇದ್ದ ನಂತರ, ನಾನು ಬಹಳ ಶಾಂತವಾಗಿ ಕುಳಿತಿರುತ್ತೇನೆ ಎಂದು ನನಗೆ ಅರಿವಾಯಿತು; ನಾನು ನಿಶ್ಚಲವಾಗಿದ್ದೆ; ನಾನು ಉಸಿರಾಡುತ್ತಿರುವಂತೆ ಕಾಣಲಿಲ್ಲ. ನನಗೆ ಅದರ ಬಗ್ಗೆ ಆಶ್ಚರ್ಯವಾಯಿತು ಮತ್ತು ನಾನು ಪರಮಹಂಸಜಿಯತ್ತ ನೋಡಿದೆ. ಆಳವಾದ ಬಿಳಿ ಬೆಳಕು ಕಾಣಿಸಿಕೊಂಡಿತು, ಅದು ಇಡೀ ಕೋಣೆಯನ್ನು ತುಂಬುವಂತೆ ಕಾಣುತ್ತಿತ್ತು. ನಾನು ಆ ಅದ್ಭುತ ಬೆಳಕಿನ ಭಾಗವಾದೆ. ಆ ಸಮಯದಿಂದ ನಾನು ನರೋದ್ರೇಕದಿಂದ ಮುಕ್ತನಾಗಿದ್ದೇನೆ.

ನಾನು ನಿಜವಾಗಿ ಅಸ್ತಿತ್ವವುಳ್ಳದ್ದೇನೋ ಒಂದನ್ನು, ನನಗೆ ಅಪಾರ ಮೌಲ್ಯವುಳ್ಳದ್ದೇನೋ ಒಂದನ್ನು ಕಂಡುಕೊಂಡಿದ್ದೇನೆ ಎಂದು ನನಗೆ ಅರಿವಾಯಿತು. ಅದು ನನಗೆ ಖಚಿತವಾಗಬೇಕಿತ್ತು. ನನಗೆ ಉಪಶಮನಕಾರಕ ಬೆಳಕಿನ ಅನುಭವವಾಗುವವರೆಗೆ ನನಗೆ ಈ ಹಿಂದೆ ತಿಳಿದಿರದಿದ್ದ ಆಧ್ಯಾತ್ಮಿಕ ಲೋಕಕ್ಕೆ ಪ್ರವೇಶವನ್ನು ಕಂಡುಕೊಂಡಿದ್ದೇನೆ ಎಂದು ನನಗೆ ಅರಿವಾಗಿರಲಿಲ್ಲ.

ಈ ಬೋಧನೆಗಳಲ್ಲಿರುವ ಆಕರ್ಷಕ ಗುಣವೆಂದರೆ, ಒಬ್ಬನು ಕುರುಡು ನಂಬಿಕೆಗಳನ್ನು ಅವಲಂಬಿಸಬೇಕಾಗಿಲ್ಲ. ಅವನು ಅನುಭವಿಸುತ್ತಾನೆ. ಅವನಿಗೆ ತಿಳಿದಿದೆ ಎಂದು ಅವನಿಗೆ ತಿಳಿದಿರುತ್ತದೆ, ಏಕೆಂದರೆ ಅವನು ಅನುಭವಿಸುತ್ತಾನೆ. ಸಾಮಾನ್ಯವಾಗಿ ಮನುಷ್ಯನು ತನ್ನ ಆಲೋಚನೆಗಳು ಮತ್ತು ತಾನು ಆಘ್ರಾಣಿಸುವಂತಹ, ರುಚಿ ನೋಡುವಂತಹ, ಸ್ಪರ್ಶಿಸುವಂತಹ, ನೋಡುವಂತಹ ಮತ್ತು ಕೇಳುವಂತಹ ಭೌತ ಪ್ರಪಂಚದ ಬಗ್ಗೆ ಮಾತ್ರ ಅರಿವುಳ್ಳವನಾಗಿರುತ್ತಾನೆ. ಆದರೆ ತನಗೆ ಆಲೋಚಿಸಲು ಮತ್ತು ತನ್ನ ಇಂದ್ರಿಯಗಳ ಮೂಲಕ ಬಾಹ್ಯ ಪ್ರಪಂಚವನ್ನು ಗ್ರಹಿಸಲು ಸಾಧ್ಯವಾಗಿಸುವಂತಹ, ಅಂತರಾಳದಲ್ಲಿರುವ ಆತ್ಮದ ಬಗ್ಗೆ ಅವನಿಗೆ ಅರಿವಿರುವುದಿಲ್ಲ. ಆಲೋಚನೆಗಳು ಮತ್ತು ಇಂದ್ರಿಯಗಳ ಹಿಂದೆಯೇ ತೆರೆಮರೆಯಲ್ಲಿರುವ ಅದರ (ಭಗವಂತ) ಬಗ್ಗೆ ಅವನಿಗೆ ಏನೂ ತಿಳಿದಿರುವುದಿಲ್ಲ. ಒಬ್ಬರು ಈ ಚೇತನದ, ನೈಜ ಚೇತನದ (ಭಗವಂತ) ಉಪಸ್ಥಿತಿಯನ್ನು ಅರಿತುಕೊಳ್ಳಲು; ಮತ್ತು ಆ ಚೇತನದೊಂದಿಗೆ ತನ್ನ ಪ್ರಜ್ಞೆಯ ಸಂಯೋಗವನ್ನು ಸಾಧಿಸಲು ಕಲಿಯಬೇಕು.

ವಿವೇಕರಹಿತ ಸಂಪತ್ತು ಸಂತೋಷವನ್ನು ನೀಡುವುದಿಲ್ಲ

ನಾನು ಪರಮಹಂಸಜಿಯನ್ನು ಭೇಟಿಯಾಗುವ ಮೊದಲು, ನಾನು ಆಗ ಇದ್ದುದಕ್ಕಿಂತ ಹೆಚ್ಚು ಪೂರ್ಣ ಪ್ರಮಾಣದಲ್ಲಿ ಮನುಷ್ಯನು ಅರಿವುಳ್ಳವನಾಗಿರಬಹುದೆಂಬ ಆಲೋಚನೆಯೇ ನನಗೆ ಹೊಳೆದಿರಲಿಲ್ಲ. ಆದರೂ, ಪ್ರಾಪಂಚಿಕ ವಿಷಯಗಳನ್ನು ಆನಂದಿಸಿದ ನಾನು ತಾಳಲಾರದ ಸಂಕಟದ ಹಂತಕ್ಕೆ ಬಂದಿದ್ದೆ; ಏಕೆಂದರೆ, ನಾನು ಒಂದು ಕ್ಷಣದ ಹಿಂದೆ ಹೇಳಿದಂತೆ, ನನ್ನ ಆತ್ಮವು ಅಶಾಂತವಾಗಿತ್ತು ಮತ್ತು ನನ್ನ ದೇಹವು ಅಸ್ವಸ್ಥವಾಗಿತ್ತು. ಯಾವುದೂ ನನ್ನನ್ನು ತೃಪ್ತಿಪಡಿಸುವಂತೆ ಕಾಣಲಿಲ್ಲ. ಶ್ರೀಮಂತರನ್ನು, ಅಪಾರ ಆಸ್ತಿ ಹೊಂದಿರುವವರನ್ನು ವೀಕ್ಷಿಸಲು ನಿಮಗೆ ಅವಕಾಶವಿದ್ದಿದ್ದರೆ, ಅವರಲ್ಲಿ ಹೆಚ್ಚಿನವರು ಅತೃಪ್ತರು ಮತ್ತು ಅಸಂತುಷ್ಟರು ಎಂದು ನೀವು ಕಂಡುಕೊಂಡಿರುತ್ತೀರಿ. ವಿವೇಕರಹಿತ ಸಂಪತ್ತು ಸಂತೋಷವನ್ನು ನೀಡುವುದಿಲ್ಲ. ನಾವೆಲ್ಲರೂ ಜೀವನದಲ್ಲಿ ಆನಂದವನ್ನು ಅರಸುತ್ತಿದ್ದೇವೆ; ನಾವು ಮಾಡುವ ಪ್ರತಿಯೊಂದರಲ್ಲೂ ನಾವು ಸಂತೋಷವನ್ನು ಅರಸುತ್ತೇವೆ.

ಆತ್ಮ-ಸಾಕ್ಷಾತ್ಕಾರದ ಮಾರ್ಗ — ಯೋಗ ಮತ್ತು ಭಕ್ತಿಯ ಸಂಮಿಶ್ರಣ

ಆತ್ಮ ಸಾಕ್ಷಾತ್ಕಾರದ ಮಾರ್ಗದಲ್ಲಿ ಒಬ್ಬನು ಮತ್ತೆ ಜೀವಂತವಾಗುತ್ತಾನೆ. ಅವನು ನಿಜವಾಗಿಯೂ ಬದುಕಿರುತ್ತಾನೆ. ಅವನು ತನ್ನೊಳಗಿನ ದಿವ್ಯ ಚೇತನವನ್ನು ಗ್ರಹಿಸಬಲ್ಲವನಾಗಿರುತ್ತಾನೆ. ಅವನು ಸರ್ವವ್ಯಾಪಿ ಪರಮಾತ್ಮನೊಂದಿಗೆ ತನ್ನ ಆತ್ಮದ ಸಂಯೋಗವನ್ನು ಅನುಭವಿಸುತ್ತಾನೆ. ಪರಮಹಂಸಜಿಯವರು ಬೋಧಿಸಿರುವ ಆತ್ಮ-ಸಾಕ್ಷಾತ್ಕಾರದ ಮಾರ್ಗವು ವೈಜ್ಞಾನಿಕವಾದುದಾಗಿದೆ. ಇದು ಯೋಗದ ಒಂದು ಸಂಯೋಜನೆಯಾಗಿದೆ — ಒಬ್ಬನು ತನ್ನೊಳಗೇ ಅನುಷ್ಠಾನ ಮಾಡುವಂತಹ ವಿಜ್ಞಾನ — ಮತ್ತು ಭಗವಂತನಲ್ಲಿ ಭಕ್ತಿ. ಯೋಗ ಮತ್ತು ಭಕ್ತಿ ಒಟ್ಟಾಗಿ ಮನುಷ್ಯನನ್ನು ತನ್ನದೇ ದೈವತ್ವದ ಸಾಕ್ಷಾತ್ಕರಣಕ್ಕೆ ತರುತ್ತವೆ.

ಧರ್ಮಕ್ಕೆ ಒಂದೇ ಉದ್ದೇಶವಿರಲು ಸಾಧ್ಯ: ತನ್ನ ಸ್ವಂತದ ಚೇತನವೇ ಸರ್ವವ್ಯಾಪಿ ಚೇತನವೆಂಬ ಜ್ಞಾನ. ಆ ಪ್ರಾಪ್ತಿಯೇ ಸ್ವರ್ಗ. ನನ್ನ ಸ್ವಂತ ಅನುಭವದಿಂದ ನಾನು ಈ ಅಭಿಪ್ರಾಯವನ್ನು ದೃಢವಾಗಿ ಹೊಂದಿದ್ದೇನೆ: ಆತ್ಮ ಸಾಕ್ಷಾತ್ಕಾರವನ್ನು ಸಾಧಿಸಲು ಯಶಸ್ವೀ ಪ್ರಯತ್ನವನ್ನು ಮಾಡದೆ, ಮನುಷ್ಯನು ಪರಮಾತ್ಮನಲ್ಲಿ ಮೋಕ್ಷ ಅಥವಾ ಅಂತಿಮ ಸ್ವಾತಂತ್ರ್ಯವನ್ನು ಸಾಧಿಸಲು ಸಾಧ್ಯವಿಲ್ಲ.

ಪಾಶ್ಚಾತ್ಯ ಮತ್ತು ಪೌರಸ್ತ್ಯ ಸಂಪನ್ಮೂಲಗಳ ಸಂಯೋಜನೆಯ ಅಗತ್ಯವಿದೆ

ಅಮೆರಿಕವು ಭೌತಿಕ ಸಾಧನೆಗಳಲ್ಲಿ ಶ್ರೀಮಂತವಾಗಿದೆ. ಮತ್ತು ಭಾರತವು ಅಮೂರ್ತ ಚೇತನದ ಜ್ಞಾನದಲ್ಲಿ ಶ್ರೀಮಂತವಾಗಿದೆ. ಇವೆರಡರ ಸಂಯೋಜನೆಯು ಆದರ್ಶ ವಿಶ್ವ ನಾಗರಿಕತೆಗೆ ಕಾರಣವಾಗುತ್ತದೆ.

ಕೇವಲ ಭೌತ ಜಗತ್ತಿನಲ್ಲಿ, ಭೌತಿಕತೆಯ ಪ್ರಜ್ಞೆಯಲ್ಲಿ ವಾಸಿಸುವವನು ಸ್ವಾಮ್ಯದಲ್ಲಿರುವ ಸ್ವತ್ತುಗಳಿಗೆ ಬಂಧಿತನಾಗಿರುತ್ತಾನೆ. ಬಾಂಧವ್ಯವು ದಾಸ್ಯವನ್ನು ಬೆಳೆಸುತ್ತದೆ. ನಾವು ಚಟಗಳು ಮತ್ತು ಸಂಪತ್ತಿಗೆ ದಾಸರಾಗುತ್ತೇವೆ. ನಮ್ಮನ್ನು ಗುಲಾಮರನ್ನಾಗಿ ಮಾಡುವುದು ಸ್ವಾಮ್ಯದಲ್ಲಿರುವ ಸ್ವತ್ತುಗಳಲ್ಲ, ಬದಲಿಗೆ, ಅಜ್ಞಾನ ಮತ್ತು ಬಾಂಧವ್ಯಗಳು.

ವಸ್ತುವಿಷಯಗಳಿಗೆ ಅಂಟಿಕೊಂಡಿರುವವನು ಎಂದಿಗೂ ಸ್ವತಂತ್ರನಾಗಿರುವುದಿಲ್ಲ. ತಾನು ಖಂಡಿತವಾಗಿ ಕಳೆದುಕೊಳ್ಳುವಂತಹ ವಿಷಯಗಳಲ್ಲಿ ಅವನು ತನ್ನ ವಿಶ್ವಾಸವನ್ನು ಇರಿಸಿದ್ದಾನೆ. ಒಂದು ಸ್ವತ್ತು ಮಾತ್ರ ಶಾಶ್ವತವಾದುದಾಗಿದೆ: ಅಮೂರ್ತ ಚೇತನ. ಯಾವುದರಿಂದಲೇ ಆದರೂ ಅಮೂರ್ತ ಚೇತನವನ್ನು ಹೊರತೆಗೆಯಿರಿ, ಆಗ ಅದಕ್ಕೆ ಯಾವುದೇ ಆಕರ್ಷಣೆ ಇರುವುದಿಲ್ಲ. ಜೀವನವು ನಿಜವಾಗಿಯೂ ಅಮೂರ್ತ ಚೇತನವೇ ಆಗಿದೆ.

ಸಾವನ್ನಪ್ಪಿದಾಗ ಎರಡು ವಿಷಯಗಳು ನಮ್ಮೊಂದಿಗೆ ಇರುತ್ತವೆ: ಚೇತನ ಮತ್ತು ಪ್ರಜ್ಞೆ. ನಾವು ಚೇತನ ಮತ್ತು ಪ್ರಜ್ಞೆಯನ್ನು ಬಿಟ್ಟು ಎಲ್ಲವನ್ನೂ ತೊಡೆದುಹಾಕಬಹುದು. ಅವು ಮಾತ್ರ ನಮ್ಮೊಂದಿಗೆ ಶಾಶ್ವತವಾಗಿ ಇರುತ್ತವೆ. ಸೆಲ್ಫ್-‌ರಿಯಲೈಝೇಷನ್‌ ಫೆಲೋಷಿಪ್ ಬೋಧನೆಗಳು ಸರಿಯಾದ ಗ್ರಹಿಕೆಯನ್ನು — ಅಮೂರ್ತ ಚೇತನದ ಅರಿವು ಮತ್ತು ಆಂತರಿಕ ಅನುಭವವನ್ನು ಹೇಗೆ ಬೆಳೆಸಿಕೊಳ್ಳುವುದು ಎಂಬುದನ್ನು ತೋರಿಸುತ್ತವೆ.

ಪರಮಹಂಸಜಿಯವರು ತಮ್ಮ ವಿದ್ಯಾರ್ಥಿಗಳಿಗೆ ಯಾವುದನ್ನೂ ಕೇವಲ ನಂಬಿಕೆಯಿಂದ ಸ್ವೀಕರಿಸಲು ಕೇಳಿಕೊಳ್ಳುವುದಿಲ್ಲ. “ಕ್ರಿಯಾ ಯೋಗವನ್ನು ಅಭ್ಯಾಸ ಮಾಡಿ,” ಅವರು ಹೇಳುತ್ತಾರೆ, “ಮತ್ತು ನಿಮ್ಮೊಳಗಿನ ಆತ್ಮದ ಮಹಿಮೆಗಳನ್ನು ನೀವೇ ಕಂಡುಕೊಳ್ಳಿ.”

ಪರಮಹಂಸಜಿ: ಪ್ರೇಮದ ಸಾಕಾರ

ಒಬ್ಬ ಗುರುವು ಭಗವಂತನ ದೂತನಂತೆ. ನಮ್ಮ ಪ್ರೀತಿಯ ಪರಮಹಂಸಜಿಯವರಲ್ಲಿ ನಾವು ಪ್ರೀತಿ ಮತ್ತು ನಿಸ್ವಾರ್ಥತೆಯ ಸಾಕಾರರೂಪವನ್ನೇ ಕಾಣುತ್ತೇವೆ. ಅವರು ದಿವ್ಯಾನಂದದ ಒಡೆಯ. ಅವರ ಸಂಪರ್ಕವು ಜ್ಞಾನೋದಯ ಹೊಂದಿದ ಗುರುಗಳೆಲ್ಲರ ಪರಂಪರೆಯವರೆಗೆ ಹೋಗುತ್ತದೆ. ಪಾಶ್ಚಾತ್ಯ ಮನಸ್ಸಿಗೆ ಈ ಹೇಳಿಕೆ ಸ್ವಲ್ಪ ವಿಚಿತ್ರವೆನಿಸಬಹುದು, ಆದರೆ ಇದು ನಿಜ. ಗುರುಗಳೆಲ್ಲರು ಪರಸ್ಪರ ಸಂಬಂಧ ಹೊಂದಿರುತ್ತಾರೆ. ಅವರು ಅಮೂರ್ತ ಚೇತನದೊಂದಿಗೆ ಸಂಪರ್ಕ ಹೊಂದಿರುತ್ತಾರೆ ಮತ್ತು ಅವರ ಶಕ್ತಿಗಳ ಮೂಲಕ ಆ ಅಮೂರ್ತ ಚೇತನವನ್ನು ಇತರ ಜನರಿಗೆ ಸಂವಹನ ಮಾಡಲಾಗುತ್ತದೆ. ಭಗವತ್‌ ಪ್ರಜ್ಞೆಯನ್ನು ಪ್ರಾಪ್ತಿಸಿಕೊಳ್ಳಲು ನಮಗೆ ನೆರವಾಗುವ ಗುರುವನ್ನು ಭಾರತವು (ಅನೇಕ ಜನರು ಹಾವಾಡಿಗರ ನಾಡು ಎಂದು ಭಾವಿಸುವ ದೇಶ) ನಮ್ಮ ನಾಡಿಗೆ ಕಳುಹಿಸಿದ್ದು ನಮಗೆ ಎಂತಹ ವರಪ್ರಸಾದವಾಗಿದೆ.

ಅಮೂರ್ತ ಚೇತನದೊಂದಿಗೆ ಸಂವಹನ ನಡೆಸುವವರಿಗೆ, ಬೇರೆ ಯಾವುದೇ ರೀತಿಯಲ್ಲಿ ಅನುಭವಿಸಿರದಂತಹ ಸೌಂದರ್ಯ, ಸೌಹಾರ್ದ ತಿಳಿದಿರುತ್ತದೆ.

ಒಬ್ಬ ಸಂತನ ಸಹವಾಸವನ್ನು ಆನಂದಿಸುವುದು ಎಷ್ಟು ಅಲೌಕಿಕ! ಜೀವನದಲ್ಲಿ ನನಗೆ ಪ್ರಾಪ್ತವಾದ ಎಲ್ಲಾ ವಿಷಯಗಳಲ್ಲಿ, ಪರಮಹಂಸಜಿ ನನಗೆ ದಯಪಾಲಿಸಿದ ಆಶೀರ್ವಾದಗಳನ್ನು ನಾನು ಅವೆಲ್ಲವುಗಳಿಗಿಂತ ಹೆಚ್ಚು ಅಮೂಲ್ಯವೆಂದು ಪರಿಗಣಿಸುತ್ತೇನೆ.

ಪ್ರಾಚೀನ ಹಿಂದೂಗಳು ಆತ್ಮ ವಿಜ್ಞಾನವನ್ನು ಅಭಿವೃದ್ಧಿಪಡಿಸಿದರು

ನಾನು ಮೊದಲಿಗೆ ಪೂರ್ವಾಗ್ರಹಪೀಡಿತನಾಗಿದ್ದೆ ಎಂದು ಒಪ್ಪಿಕೊಳ್ಳಬೇಕು. ಹಿಂದೊಮ್ಮೆ ಹಿಂದೂಗಳನ್ನು ಹಾವಾಡಿಗರೆಂದು ಭಾವಿಸಿದವರಲ್ಲಿ ನಾನೂ ಒಬ್ಬ. ಈಗ ನಾನು ಭಾರತವನ್ನು ಗೌರವಿಸುತ್ತೇನೆ, ಅದರ ಸಂತರು ಎಲ್ಲಾ ವಿಜ್ಞಾನಗಳಲ್ಲಿ ಅತ್ಯುನ್ನತವಾದುದಾದ ಯೋಗವನ್ನು ಅಂದರೆ ಆತ್ಮ-ಶೋಧನೆಯ ತಂತ್ರಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಇದನ್ನು ಹಂಚಿಕೊಳ್ಳಿ