ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ (ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್) ಬೋಧನೆಗಳು ಭಗವಾನ್ ಕೃಷ್ಣನ ಮೂಲ ಯೋಗ ಮತ್ತು ಯೇಸು ಕ್ರಿಸ್ತನ ಮೂಲ ಕ್ರಿಶ್ಚಿಯನ್ ಧರ್ಮವನ್ನು ಆಧರಿಸಿವೆ. ವೈಎಸ್ಎಸ್/ಎಸ್ಆರ್‌ಎಫ್ ಆಧ್ಯಾತ್ಮಿಕ ಪರಂಪರೆಯು ಈ ಎರಡು ಮಹಾನ್ ಅವತಾರಗಳನ್ನು ಮತ್ತು ಸಮಕಾಲೀನ ಶ್ರೇಷ್ಠ ಗುರುಗಳ ಶ್ರೇಣಿಯನ್ನು ಒಳಗೊಂಡಿದೆ: ಮಹಾವತಾರ ಬಾಬಾಜಿ, ಲಾಹಿರಿ ಮಹಾಶಯಾಜಿ, ಸ್ವಾಮಿ ಶ್ರೀ ಯುಕ್ತೇಶ್ವರಜಿ, ಮತ್ತು ಪರಮಹಂಸ ಯೋಗಾನಂದಜಿ (ವೈಎಸ್ಎಸ್/ಎಸ್ಆರ್‌ಎಫ್ ಗುರುಗಳ ಸಾಲಿನಲ್ಲಿ ಕೊನೆಯವರು).
ಈ ಮಹಾನುಭಾವರಲ್ಲಿ ಪ್ರತಿಯೊಬ್ಬರೂ ಯೋಗದಾ ಸತ್ಸಂಗ ಸೊಸೈಟಿ (ವೈಎಸ್ಎಸ್) ಆಫ್ ಇಂಡಿಯಾದ ಕ್ರಿಯಾ ಯೋಗದ ಆಧ್ಯಾತ್ಮಿಕ ವಿಜ್ಞಾನವನ್ನು ಆಧುನಿಕ ಜಗತ್ತಿಗೆ ಪರಿಚಯಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. (ಮತ್ತಷ್ಟು ಓದಲು ಛಾಯಾಚಿತ್ರಗಳನ್ನು ಕ್ಲಿಕ್ ಮಾಡಿ.)
ಕ್ರಿಯಾ ಯೋಗದಲ್ಲಿ ಪವಿತ್ರ ದೀಕ್ಷೆ ಪಡೆದ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಎಲ್ಲಾ ಸದಸ್ಯರು (ಸನ್ಯಾಸಿಗಳು ಮತ್ತು ಸಾಮಾನ್ಯ ಸದಸ್ಯರು) ಪರಮಹಂಸ ಯೋಗಾನಂದಜಿಯವರ ಶಿಷ್ಯರಾಗಿದ್ದಾರೆ. ಶಿಷ್ಯರು ಅವರನ್ನು ತಮ್ಮ ವೈಯುಕ್ತಿಕ ಗುರು ಎಂದು ಗೌರವಿಸಿ ಆರಾಧಿಸುತ್ತಾರೆ, ಅದೇ ರೀತಿ ಅವರ ಪರಂಪರೆಯ ಗುರುಗಳೂ ಸಹ ವೈ ಎಸ್ ಎಸ್ ನ ಶಿಷ್ಯರಿಗೆ ಪೂಜನೀಯರಾಗಿದ್ದಾರೆ. ಗುರು-ಶಿಷ್ಯ ಸಂಬಂಧದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಓದಿ.
ಗುರು-ಪರಂಪರೆ — ಗುರುವಿನ ಆಧ್ಯಾತ್ಮಿಕ ಅಧಿಕಾರದ ಹಸ್ತಾಂತರ
ಗುರುವಿನ ಪರಂಪರೆಯನ್ನು ಮುಂದುವರಿಸಲು ನೇಮಿತ ಶಿಷ್ಯನಿಗೆ ಗುರು ತಮ್ಮ ಆಧ್ಯಾತ್ಮಿಕ ಅಧಿಕಾರವನ್ನು ಹಸ್ತಾಂತರಿಸುವುದನ್ನು ಗುರು-ಪರಂಪರೆ ಎಂದು ಕರೆಯಲಾಗುತ್ತದೆ. ಈ ಪ್ರಕಾರ, ಪರಮಹಂಸ ಯೋಗಾನಂದರ ನೇರ ಗುರು ಪರಂಪರೆ ಎಂದರೆ, ಮಹಾವತಾರ ಬಾಬಾಜಿ, ಲಾಹಿರಿ ಮಹಾಶಯ ಮತ್ತು ಸ್ವಾಮಿ ಶ್ರೀ ಯುಕ್ತೇಶ್ವರ.
ಪರಮಹಂಸ ಯೋಗಾನಂದರು ತಮ್ಮ ನಿಧನಕ್ಕೂ ಮುನ್ನ, ತಾವು ವೈಎಸ್ಎಸ್ ಗುರುಗಳ ಸಾಲಿನಲ್ಲಿ ಕೊನೆಯವರಾಗಿರಬೇಕೆಂಬುದು ದೇವರ ಇಚ್ಛೆಯೆಂದು ಘೋಷಿಸಿದರು. ಅವರ ಸಂಸ್ಥೆಯಲ್ಲಿ ನಂತರದ ಯಾವುದೇ ಶಿಷ್ಯರಾಗಲಿ ಅಥವಾ ಮುಖ್ಯಸ್ಥರಾಗಲಿ ಎಂದಿಗೂ ಗುರುವಿನ ಉಪಾಧಿಯನ್ನು ಹೊಂದುವುದಿಲ್ಲ. (ಈ ದೈವಿಕ ಶಾಸನವು ಧಾರ್ಮಿಕ ಇತಿಹಾಸದಲ್ಲಿ ಅನನ್ಯವೇನಲ್ಲ. ಸಿಖ್ ಧರ್ಮವನ್ನು ಸ್ಥಾಪಿಸಿದ ಮಹಾನ್ ಸಂತ ಗುರು ನಾನಕ್ ಅವರ ನಿಧನದ ನಂತರ, ಗುರುಗಳ ಸಾಲು ಸಹಜವಾಗಿಯೇ ಮುಂದುವರಿಯಿತು. ಆ ಸಾಲಿನಲ್ಲಿ ಹತ್ತನೆಯ ಗುರು ತಾವು ಆ ಸಾಲಿನಲ್ಲಿ ಕೊನೆಯವರು ಎಂದು ಘೋಷಿಸಿದರು, ಆಮೇಲೆ ಬೋಧನೆಗಳನ್ನೇ ಗುರು ಎಂದು ಪರಿಗಣಿಸಲಾಯಿತು.)
ಪರಮಹಂಸಜಿಯವರು ತಮ್ಮ ನಿಧನದ ನಂತರ, ಅವರು ಸ್ಥಾಪಿಸಿದ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ ಮೂಲಕ ತಮ್ಮ ಕೆಲಸವನ್ನು ಮುಂದುವರಿಸುವುದಾಗಿ ಭರವಸೆ ನೀಡಿದ್ದರು. ಅವರು ಹೀಗೆ ಹೇಳಿದರು, “ನಾನು ಹೋದ ಮೇಲೆ ಬೋಧನೆಗಳು ಗುರುವಾಗುತ್ತವೆ….ಬೋಧನೆಗಳ ಮೂಲಕ ನೀವು ನನ್ನೊಂದಿಗೆ ಮತ್ತು ನನ್ನನ್ನು ಕಳುಹಿಸಿದ ಮಹಾನ್ ಗುರುಗಳೊಂದಿಗೆ ಶ್ರುತಿಗೊಂಡಿರುತ್ತೀರಿ.”
ವೈ ಎಸ್ ಎಸ್/ಎಸ್ ಆರ್ ಎಫ್ ನ ನಾಯಕತ್ವದ ಉತ್ತರಾಧಿಕಾರಿಯ ಬಗ್ಗೆ ಕೇಳಿದಾಗ, ಅವರು ಹೀಗೆ ಉತ್ತರಿಸಿದರು, “ಆತ್ಮಸಾಕ್ಷಾತ್ಕಾರ ಹೊಂದಿರುವ ಪುರುಷರು ಮತ್ತು ಮಹಿಳೆಯರು ಯಾವಾಗಲೂ ಈ ಸಂಸ್ಥೆಯ ಮುಖ್ಯಸ್ಥರಾಗಿರುತ್ತಾರೆ. ಅವರು ಈಗಾಗಲೇ ದೇವರು ಮತ್ತು ಗುರುಗಳಿಗೆ ಪರಿಚಿತರಾಗಿದ್ದಾರೆ. ಅವರು ಎಲ್ಲಾ ಆಧ್ಯಾತ್ಮಿಕ ಮತ್ತು ಸಾಂಸ್ಥಿಕ ವ್ಯವಹಾರಗಳಲ್ಲಿ ನನ್ನ ಆಧ್ಯಾತ್ಮಿಕ ಉತ್ತರಾಧಿಕಾರಿ ಮತ್ತು ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಾರೆ.”
ಗುರುವಿನ ಉತ್ತರಾಧಿಕಾರಿಗಳು
ಶ್ರೀ ಶ್ರೀ ರಾಜರ್ಷಿ ಜನಕಾನಂದ
ರಾಜರ್ಷಿ ಜನಕಾನಂದರವರು ಪರಮಹಂಸ ಯೋಗಾನಂದರ ನಂತರ 1952 ರಲ್ಲಿ ವೈಎಸ್ಎಸ್/ಎಸ್ಆರ್‌ಎಫ್‌ನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು. ಅವರು ಮೇ 5, 1892 ರಂದು ಲೂಯಿಸಿಯಾನದ ಆರ್ಚಿಬಾಲ್ಡ್ ನಲ್ಲಿ ಜನಿಸಿದರು; ಅವರ ಪೂರ್ವಾಶ್ರಮದ ಹೆಸರು ಜೇಮ್ಸ್ ಜೆ. ಲಿನ್; ಮತ್ತು ಅವರು 1932 ರಲ್ಲಿ ಕಾನ್ಸಾಸ್ ನಗರದಲ್ಲಿ ಗುರುಗಳ ಉಪನ್ಯಾಸ ಸರಣಿಯಲ್ಲಿ ಪರಮಹಂಸ ಯೋಗಾನಂದರನ್ನು ಭೇಟಿಯಾದರು.
ಕ್ರಿಯಾ ಯೋಗದಲ್ಲಿ ಅವರ ತ್ವರಿತ ಪ್ರಗತಿಯಿಂದಾಗಿ, ಪರಮಹಂಸಜಿ, ಅವರನ್ನು ಪ್ರೀತಿಯಿಂದ “ಸಂತ ಲಿನ್” ಎಂದು ಸಂಬೋಧಿಸಿದರು. 1951 ರಲ್ಲಿ ಯೋಗಾನಂದರು ಅವರಿಗೆ ರಾಜರ್ಷಿ ಜನಕಾನಂದ (ಪ್ರಾಚೀನ ಭಾರತದಲ್ಲಿ ಆಧ್ಯಾತ್ಮಿಕತೆಯಲ್ಲಿ ಹೆಸರುವಾಸಿಯಾಗಿದ್ದ ಜನಕರಾಜನ ನೆನಪಿನಲ್ಲಿ) ಎಂಬ ಸನ್ಯಾಸಾಶ್ರಮದ ಹೆಸರನ್ನು ನೀಡಿದರು ಮತ್ತು ವೈ ಎಸ್ ಎಸ್/ಎಸ್ ಆರ್ ಎಫ್ ಕಾರ್ಯಕ್ಕೆ ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನು ಅವರಿಗೆ ಹಸ್ತಾಂತರಿಸಿದರು.
ರಾಜರ್ಷಿ ಜನಕಾನಂದರ ಬಗ್ಗೆ ಇನ್ನಷ್ಟು ಓದಿ.
ಮಹಾನ್ ಪಾಶ್ಚಾತ್ಯ ಯೋಗಿಯಾಗಿದ್ದ ರಾಜರ್ಷಿ ಜನಕಾನಂದರ ಆದರ್ಶ ಜೀವನವು 1955ರ ಫೆಬ್ರವರಿ 20ರಂದು ಅಂತ್ಯವಾಯಿತು.
ಶ್ರೀ ಶ್ರೀ ದಯಾ ಮಾತಾ
ಶ್ರೀ ಶ್ರೀ ದಯಾ ಮಾತಾ ಅವರು 1955 ರಲ್ಲಿ ರಾಜರ್ಷಿ ಜನಕಾನಂದರ ನಂತರ ವೈ ಎಸ್ ಎಸ್/ಎಸ್ ಆರ್ ಎಫ್ ನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು.
ಜನವರಿ 31, 1914 ರಂದು ಸಾಲ್ಟ್ ಲೇಕ್ ಸಿಟಿಯಲ್ಲಿ ಜನಿಸಿದ ಫೇ ರೈಟ್ ಎಂಬ ಹೆಸರಿನ ಅವರು, 1931ರಲ್ಲಿ ಪರಮಹಂಸ ಯೋಗಾನಂದಜಿಯವರು ಅಲ್ಲಿ ಉಪನ್ಯಾಸಗಳನ್ನು ಮತ್ತು ತರಗತಿಗಳನ್ನು ನೀಡಲು ಬಂದಾಗ ಅವರನ್ನು ಭೇಟಿಯಾದರು. ಅಲ್ಪಕಾಲದಲ್ಲಿಯೇ, ಅವರು ಸಂನ್ಯಾಸಿನಿಯಾಗಿ ಅವರ ಆಶ್ರಮವನ್ನು ಪ್ರವೇಶಿಸಿದರು.
ಇಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲ, ಶ್ರೀ ದಯಾ ಮಾತಾರವರು ಹೆಚ್ಚೂ ಕಡಿಮೆ ಸದಾ ಗುರುಗಳೊಂದಿಗೆ ಇರುತ್ತಿದ್ದ ಆಪ್ತ ಶಿಷ್ಯರ ಸಣ್ಣ ಗುಂಪಿನ ಭಾಗವಾಗಿದ್ದರು. ವರ್ಷಗಳು ಕಳೆದಂತೆ, ಗುರುಗಳು ಅವರಿಗೆ ಹೆಚ್ಚು ಹೆಚ್ಚಿನ ಜವಾಬ್ದಾರಿಯನ್ನು ಒಪ್ಪಿಸಿದರು, 1930ರ ದಶಕದಲ್ಲಿ ಅವರು ಇನ್ನೂ ಯುವತಿಯಾಗಿದ್ದಾಗಲೇ ವೈಯಕ್ತಿಕವಾಗಿ ಅವರನ್ನು ವೈ ಎಸ್ ಎಸ್ /ಎಸ್ ಆರ್ ಎಫ್ ನ ನಿರ್ದೇಶಕರ ಮಂಡಳಿಯಲ್ಲಿ ಅಧಿಕಾರಿಯಾಗಿ ನೇಮಿಸಿದರು. ತಮ್ಮ ಜೀವನದ ಕೊನೆಯ ಅವಧಿಯಲ್ಲಿ, ಯೋಗಾನಂದರು ಅವರಿಗೆ ಎಸ್ ಆರ್ ಎಫ್ ನ ಅಂತರರಾಷ್ಟ್ರೀಯ ಪ್ರಧಾನ ಕಚೇರಿಯ ಉಸ್ತುವಾರಿಯನ್ನು ವಹಿಸಿದರು ಮತ್ತು ಅವರು ವಹಿಸಬೇಕಾದ ವಿಶ್ವವ್ಯಾಪಿ ಪಾತ್ರದ ಬಗ್ಗೆ ಶಿಷ್ಯರೊಂದಿಗೆ ಮುಕ್ತವಾಗಿ ಮಾತನಾಡಲು ಪ್ರಾರಂಭಿಸಿದರು. ಅವರ ದೇಹತ್ಯಾಗದ ಸ್ವಲ್ಪ ಸಮಯದ ಮೊದಲು, ಅವರು: “ಈಗ ನನ್ನ ಕೆಲಸವು ಮುಗಿದಿದೆ; ನಿನ್ನ ಕೆಲಸ ಪ್ರಾರಂಭವಾಗುತ್ತದೆ,” ಎಂದು ಆಕೆಗೆ ಹೇಳಿದರು.
ಶ್ರೀ ದಯಾ ಮಾತಾ ಬಗ್ಗೆ ಇನ್ನಷ್ಟು ಓದಿ.
ಪರಮಹಂಸಜಿಯವರು ಶ್ರೀ ದಯಾ ಮಾತಾರನ್ನು ತಮ್ಮ ಜಾಗತಿಕ ಸಂಸ್ಥೆಯ ಭವಿಷ್ಯದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದ್ದು, 1962 ರಲ್ಲಿ ದಯಾ ಮಾತಾರವರ ಭಾರತದ ಯಾತ್ರೆಯ ಸಂದರ್ಭದಲ್ಲಿ ಮಹಾವತಾರ್ ಬಾಬಾಜಿಯವರೊಂದಿಗೆ ಅವರಿಗಾದ ಭೇಟಿಯ ಸಂದರ್ಭದಲ್ಲಿ ಮಹಾವತಾರ್ ಬಾಬಾಜಿಯವರಿಂದ ದೃಢೀಕರಿಸಲ್ಪಟ್ಟಿತು.
ವೈಎಸ್ಎಸ್/ಎಸ್ಆರ್‌ಎಫ್ ನ ಅಧ್ಯಕ್ಷರಾಗಿ 55 ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಂತರ ಶ್ರೀ ದಯಾ ಮಾತಾರವರು ನವೆಂಬರ್ 30, 2010 ರಂದು ವಿಧಿವಶರಾದರು.
ಶ್ರೀ ಶ್ರೀ ಮೃಣಾಲಿನಿ ಮಾತಾ
ನಮ್ಮೆಲ್ಲರ ಪ್ರೀತಿಯ ಸಂಘಮಾತಾ ಮತ್ತು ಅಧ್ಯಕ್ಷರಾಗಿದ್ದ ಶ್ರೀ ಶ್ರೀ ಮೃಣಾಲಿನಿ ಮಾತಾರವರು ಆಗಸ್ಟ್ 3, 2017 ರಂದು ದೇವರಲ್ಲಿ ಶಾಶ್ವತ ಸಂತೋಷ ಮತ್ತು ಸ್ವಾತಂತ್ರ್ಯದಲ್ಲಿರಲು ಈ ಪ್ರಪಂಚವನ್ನು ಶಾಂತಿಯುತವಾಗಿ ತೊರೆದರು. ಪರಮಹಂಸ ಯೋಗಾನಂದರ ಬೋಧನೆಗಳಿಂದ ತಮ್ಮ ಜೀವನಗಳನ್ನು ಬದಲಾಯಿಸಿಕೊಂಡಿದ್ದ ಲಕ್ಷಾಂತರ ಸತ್ಯಾನ್ವೇಷಕರ ಪಾಲಿಗೆ ಜ್ಞಾನ, ಪ್ರೀತಿ ಮತ್ತು ತಿಳುವಳಿಕೆಯ ದಾರಿ ದೀಪವಾಗಿದ್ದ ಶ್ರೀ ಮೃಣಾಲಿನಿ ಮಾತಾರವರು ಎಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲ ಗುರುಗಳ ಆಧ್ಯಾತ್ಮಿಕ ಮತ್ತು ಮಾನವೀಯ ಕಾರ್ಯಗಳಿಗೆ ತಮ್ಮನ್ನು ಸಮರ್ಪಿಸಿಕೊಂಡರು.
ಸ್ವಾಮಿ ಚಿದಾನಂದ ಗಿರಿ
ಸ್ವಾಮಿ ಚಿದಾನಂದ ಗಿರಿಯವರು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ (ವೈಎಸ್ಎಸ್/ಎಸ್ಆರ್‌ಎಫ್) ನ ಅಧ್ಯಕ್ಷ ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ ನಿರ್ದೇಶಕರ ಮಂಡಳಿ ಹರ್ಷಿಸುತ್ತದೆ, ಶ್ರೀ ಮೃಣಾಲಿನಿ ಮಾತಾರವರು ಜನವರಿ 2011 ರಿಂದ ಆಗಷ್ಟ್ ತಿಂಗಳು ಅವರು ನಿಧನರಾಗುವವರೆಗೆ ಈ ಸ್ಥಾನದಲ್ಲಿ ಸೇವೆ ಸಲ್ಲಿಸಿದರು. ಆಗಸ್ಟ್ 30, 2017 ರ ಬುಧವಾರ ಎಸ್ ಆರ್ ಎಫ್ ನ ನಿರ್ದೇಶಕರ ಮಂಡಳಿಯಿಂದ ಸರ್ವಾನುಮತದಿಂದ ಚಿದಾನಂದಗಿರಿಯವರ ನೇಮಕಾತಿಯನ್ನು ಮಾಡಲಾಯಿತು.