ವೈಎಸ್ಎಸ್/ಎಸ್ಆರ್‌ಎಫ್ ನಿರ್ದೇಶಕರ ಮಂಡಳಿಯಿಂದ ವಿಶೇಷ ಸಂದೇಶ

ಸಂಸ್ಮರಣೆಯಲ್ಲಿ: ಶ್ರೀ ದಯಾ ಮಾತಾ
(31 ಜನವರಿ,1914 – 30 ನವಂಬರ್, 2010)

ನಮ್ಮ ಪ್ರೀತಿಯ ಸಂಘಮಾತಾ ಮತ್ತು ಅಧ್ಯಕ್ಷರ ಮೇಲಿನ ಆಳವಾದ ಗೌರವ ಮತ್ತು ಪ್ರೀತಿಯಿಂದ, ಶ್ರೀ ದಯಾ ಮಾತಾ ನವೆಂಬರ್ 30, 2010 ರಂದು (ಡಿಸೆಂಬರ್ 1, 2010, IST) ತಮ್ಮ ಮರ್ತ್ಯ ಶರೀರವನ್ನು ತ್ಯಜಿಸಿದ ಸಮಾಚಾರವನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ತಮ್ಮ ಉಪಸ್ಥಿತಿಯಿಂದ ಅಗಾಧವಾಗಿ ಪ್ರಭಾವಿಸಲ್ಪಟ್ಟ ಅಸಂಖ್ಯಾತ ಸದಸ್ಯರು ಮತ್ತು ಸ್ನೇಹಿತರಿಗೆ ಅವರು ನಮ್ಮ ಗುರುಗಳ ಬೋಧನೆಗಳು ಹಾಗೂ ಜೀವಿತದ ಕಾರ್ಯಗಳ ಮೂರ್ತ ಸ್ವರೂಪವೇ ಆಗಿದ್ದರು ಮತ್ತು ಅವರ ನಿರುಪಾಧಿಕ ಪ್ರೇಮವು ವಿಶ್ವಾದ್ಯಂತ ಆಧ್ಯಾತ್ಮ ಕುಟುಂಬದ ಪ್ರತಿಯೊಬ್ಬರ ಜೀವನವನ್ನೂ ಅನುಗ್ರಹಿಸಲು ಬಹು ಖಚಿತವಾಗಿ ಮುಂದುವರೆಯುತ್ತದೆ.

ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ ನಿರ್ದೇಶಕರ ಮಂಡಳಿಯಿಂದ ಒಂದು ವಿಶೇಷ ಸಂದೇಶ.

Sri Daya Mata — Third spiritual head of YSS/SRF.2 ಡಿಸೆಂಬರ್, 2010
 

ಆತ್ಮೀಯರೇ,

ಡಿಸೆಂಬರ್ 1, 2010, ರಂದು ನಮ್ಮ ಪ್ರೀತಿಪಾತ್ರ ಶ್ರೀ ಶ್ರೀ ದಯಾ ಮಾತಾ, ಸಂಘಮಾತಾ ಮತ್ತು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಸೊಸೈಟಿಯ ಅಧ್ಯಕ್ಷರಾಗಿದ್ದವರು, ತಮ್ಮ ಭೌತಿಕ ಶರೀರವನ್ನು ಪ್ರಶಾಂತವಾಗಿ ತ್ಯಜಿಸಿದರು. ಅವರ ಜೀವನ, ಭಗವಂತನ ಪ್ರೇಮ ಹಾಗೂ ಪ್ರಕಾಶದಿಂದ ಕಾಂತಿಯುತವಾಗಿದ್ದು, ವಿಶಾಲವಾದ ಅವನ ಸರ್ವವ್ಯಾಪಿ ಪ್ರೇಮಸಾಗರದಲ್ಲಿ ಲೀನವಾಯಿತು. ಜಗನ್ಮಾತೆಯು ಅವರನ್ನು ಅಷ್ಟು ಕಾಲ ನೆಲೆಸುವಂತೆ ಮಾಡಿ, ತನ್ನ ಮಾತೃ ಪ್ರೇಮ ಹಾಗೂ ಕರುಣೆಗಳಿಂದ ನಮ್ಮೆಲ್ಲರ ಜೀವನಗಳನ್ನು ಸ್ಪರ್ಶಿಸಿ, ಅನುಗ್ರಹಿಸಲು ಅವಕಾಶ ನೀಡಿದುದಕ್ಕೆ, ನಾವು ಅದೆಷ್ಟು ಕೃತಜ್ಞರಾಗಿದ್ದೇವೆ. ನಮ್ಮ ಹೃದಯಗಳು ಅವರನ್ನು ನಮ್ಮೊಡನೆ ಮತ್ತೆಯೂ ಇರಿಸಿಕೊಳ್ಳಲು ಹಂಬಲಿಸುತ್ತಿವೆ. ಆದರೂ ನಾವು ನಮ್ಮ ದುಃಖದಿಂದ ಅವರು ಈ ಜಗತ್ತಿನಿಂದ ಆಚೆಗೆ ಪಡೆದಿರುವ ದಿವ್ಯ ಸ್ವಾಗತದ ಸ್ವರ್ಗೀಯ ಆನಂದವನ್ನು ಅಂದಗೆಡಿಸುವುದಿಲ್ಲ, ಅಥವಾ ಗುರುದೇವ ಶ್ರೀ ಶ್ರೀ ಪರಮಹಂಸ ಯೋಗಾನಂದರು ಆಕೆಯ ಹೆಗಲಿಗೇರಿಸಿದ್ದ ಅಗಾಧವಾದ ಆಧ್ಯಾತ್ಮಿಕ ಹೊಣೆಗಾರಿಕೆಗಳನ್ನು ಉದಾತ್ತವಾಗಿ, ಧೈರ್ಯದಿಂದ ಮತ್ತು ಪರಿಪೂರ್ಣವಾಗಿ ಪೂರೈಸಿದ್ದಕ್ಕಾಗಿ, ಆಕೆಯ ಆತ್ಮಕ್ಕೆ ಊಹಿಸಲಸಾಧ್ಯವಾದ ಆನಂದ ದೊರೆತುದಕ್ಕೆ ನಾವು ಆಕೆಯ ಬಗ್ಗೆ ಅಸೂಯೆ ಪಡುವುದಿಲ್ಲ.

ಹದಿನೇಳರ ಹರೆಯದ ನಾಚಿಕೆ ಸ್ವಭಾವದ ಹುಡುಗಿಯಾಗಿ ಆಕೆಯು ಆಶ್ರಮಕ್ಕೆ ಬಂದಾಗಿನಿಂದಲೂ, ಗುರೂಜಿಯವರು, ಅತ್ಯಂತ ವಿಶ್ವಾಸವಿಡಬಹುದಾದ ಒಬ್ಬ ಶಿಷ್ಯೆಯನ್ನು ಆಕೆಯಲ್ಲಿ ಕಂಡರು — ಭಗವಂತನನ್ನು ಎಲ್ಲಕ್ಕಿಂತ ಮಿಗಿಲಾಗಿ ಹಂಬಲಿಸುವ ನಿಜವಾದ ಭಕ್ತೆ, ತಮ್ಮ ಕಾರ್ಯದ “ಗೂಡಿನ ಮೊಟ್ಟೆ” ಯಾಗಿ, ಆಧ್ಯಾತ್ಮ ಮಾರ್ಗದಲ್ಲಿ ಅಸಂಖ್ಯಾತ ಆತ್ಮಗಳಿಗೆ ಮಾತೆಯಾಗಬಲ್ಲವಳಾಗಿರುವುದನ್ನು ಕಂಡರು. ಆಕೆಯ ಹೃದಯದ ಗ್ರಹಿಕೆಯ ಮೂಲಕ, ಅವರು ಆಕೆಯ ಜೀವನವನ್ನು ತೆರೆದಿಡಲು ಮಾರ್ಗದರ್ಶನ ಮಾಡಿ, ಆಕೆಯಲ್ಲಿ, ತಮ್ಮ ಗುರುವಿನ ಇಚ್ಛೆಯನ್ನು ಪೂರೈಸುವ ಏಕಮಾತ್ರ ಇಚ್ಛೆಯಿಂದ ಮತ್ತು ಭಗವಂತನಲ್ಲಿ ಅಸೀಮ ಭಕ್ತಿಯಿಂದ, ಮುಂದಿನ ವರ್ಷಗಳಲ್ಲಿ ಪ್ರತಿಯೊಂದು ಸವಾಲನ್ನೂ ಎದುರಿಸಲು ಅವಶ್ಯವಾದ ಆಧ್ಯಾತ್ಮ ಶಕ್ತಿಯನ್ನು ತುಂಬಿದರು. ಮುಂಬರುವ ವರ್ಷಗಳಲ್ಲಿ ಆಕೆಯು ಪಶ್ಚಿಮ ಹಾಗೂ ಪೂರ್ವದಲ್ಲಿ, ಗುರುಗಳ ಕಾರ್ಯಗಳಿಗೆ ಒಂದು ಸದೃಢ ಅಡಿಪಾಯ ಹಾಕಿದರು, ಹಾಗೂ ಗುರುವಿನ ಉದ್ದೇಶ ಮತ್ತು ಉತ್ಸಾಹದೊಂದಿಗಿನ ತಮ್ಮ ಸಂಪೂರ್ಣ ಶ್ರುತಿಗೂಡುವಿಕೆಯಿಂದ ಅದನ್ನು ಮಾರ್ಗದರ್ಶಿಸಿದರು. ಆಕೆಯು ಅವರ ವಿವೇಕಯುತ ನುಡಿಗಳನ್ನು ನಿಷ್ಠೆಯಿಂದ ದಾಖಲಿಸಿದರು ಮತ್ತು ದೃಢವಾಗಿ ಅವರ ಪವಿತ್ರ ಬೋಧನೆಗಳ ಪರಿಶುದ್ಧತೆಯನ್ನು, ಮುಂಬರುವ ಅನೇಕ ತಲೆಮಾರುಗಳ ಭಕ್ತರಿಗಾಗಿ ಎತ್ತಿ ಹಿಡಿದಿರುವರು.

ನಮ್ಮ ಪ್ರೀತಿಯ ದಯಾ ಮಾತಾಜಿಯವರು, ಗುರುಗಳ ಈ ಮುಂದಿನ ಮಾತುಗಳನ್ನು ಪರಿಪೂರ್ಣ ವಿಧೇಯತೆಯಿಂದ ತುಂಬಿ ಜೀವನ ನಡೆಸುವ ಮೂಲಕ, ಗುರುದೇವರು ಅವರ ಹೃದಯವನ್ನು ಕಲಕಿದಂತೆ, ನಮ್ಮ ಹೃದಯಗಳನ್ನೂ ಭಗವಂತನ ಹಂಬಲಕ್ಕಾಗಿ ಕಲಕಿರುವರು: “ನೀನು ಭಗವಂತನ ಪ್ರೇಮವನ್ನು ಅದೆಷ್ಟು ಪಾನ ಮಾಡಿರಬೇಕೆಂದರೆ, ನಿನಗೆ ಭಗವಂತನಲ್ಲದೆ ಬೇರೇನೂ ತಿಳಿದಿರಬಾರದು ಮತ್ತು ಆ ಪ್ರೇಮವನ್ನು ಎಲ್ಲರಿಗೂ ನೀಡಬೇಕು.” ಆ ಬ್ರಹ್ಮಾನಂದ ಪ್ರಜ್ಞೆಯಲ್ಲಿ ಮುಳುಗಿ ಆಕೆಯು ಭಗವಂತನ ಎಲ್ಲ ಮಕ್ಕಳಿಗೆ ಸಹಾನುಭೂತಿ ತೋರುತ್ತಿದ್ದರು. ಪ್ರಪಂಚಾದ್ಯಂತ ಆತ್ಮಗಳು ತಮ್ಮ ಆಳವಾದ ಭಾವನೆಗಳನ್ನು ಮತ್ತು ಕಾಳಜಿಗಳನ್ನು ಅವರಿಗೆ ಸುರಿಸಿದರು. ಮತ್ತು ಆಕೆಯು ದಿವ್ಯಮಾತೆಯ ಕೋಮಲ ಪ್ರೇಮದಲ್ಲಿ, ಅವರನ್ನು ತನ್ನ ಆಲೋಚನೆಗಳು ಹಾಗೂ ಪ್ರಾರ್ಥನೆಗಳಲ್ಲಿ ಹಿಡಿದಿಟ್ಟರು. ಅವರ ಹೃದಯದ ವಿಶಾಲತೆಯ ಮೂಲಕ, ಅನೇಕರು ಬಹುಶಃ ಪ್ರಥಮ ಬಾರಿಗೆ, ಅನಿರ್ಬಂಧಿತ ಪ್ರೇಮ ಎಂದರೆ ಏನು ಎಂಬುವುದನ್ನು ಅನುಭವಿಸಿದರು. ಆಕೆ ಕೇವಲ ಸೇವೆ ಮಾಡಲು ಇಚ್ಛಿಸಿದ್ದರು ಮತ್ತು ಅವರ ಆಲೋಚನೆಯು ಎಂದಿಗೂ ತನಗಾಗಿ ಇರಲಿಲ್ಲ, ಹೊರತು “ಆ ಆತ್ಮಕ್ಕೆ ಯಾವ ರೀತಿ ಸಹಾಯ ಮಾಡಲಿ?” ಎಂಬುದರ ಬಗ್ಗೆಯೇ ಇರುತ್ತಿತ್ತು.

ಅವರ ಅಸ್ತಿತ್ವದ ಸಾರವೇ ಕೇವಲ ಪ್ರೇಮವಾಗಿತ್ತು ಮತ್ತು ನಮ್ಮ ಆತ್ಮಗಳು ಆಳವಾಗಿ ಪ್ರತಿಕ್ರಯಿಸುತ್ತಿದ್ದವು. ಗೌರವಯುತ ಧನ್ಯವಾದಗಳೊಡನೆ ಅವರ ಅನುಗ್ರಹಿತ ಜೀವನದ ಉಡುಗೊರೆಗಾಗಿ ನಾವು ಭಗವಂತನಿಗೆ ಹಾಗೂ ಗುರೂಜಿಯವರಿಗೆ ನಮಿಸುತ್ತೇವೆ. ನಾವು ನಿಮ್ಮನ್ನು ಪ್ರಾರ್ಥನೆಯಲ್ಲಿ ಸೇರಿಕೊಳ್ಳಲು ಆಹ್ವಾನಿಸುತ್ತಿದ್ದೇವೆ. ಏಕೆಂದರೆ ನಮ್ಮಲ್ಲಿ ಪ್ರತಿಯೊಬ್ಬರಿಗೂ, ಪೂಜ್ಯ ಗುರುದೇವರ ಕಾರ್ಯಕ್ಕಾಗಿ ಮತ್ತು ಈ ವಿಶ್ವಕ್ಕೆ ಅವರು ನೀಡಿರುವ ಎಲ್ಲದಕ್ಕೂ ನಾವು ಅಂತರಂಗದಲ್ಲಿ, ಅವರ ಆತ್ಮದ ಪಥವನ್ನು, ಕೃತಜ್ಞತೆಯ ಪುಷ್ಪಗಳಿಂದ ಅಲಂಕರಿಸೋಣ. ಅವರು ನಮ್ಮಲ್ಲಿ ತುಂಬಿದ ಧೈರ್ಯ ಮತ್ತು ದಿವ್ಯ ಉತ್ಸಾಹಗಳಿಂದ ಮುಂದುವರೆಯುತ್ತಾ, ನಮ್ಮ ಪ್ರೀತಿಪಾತ್ರ ಮಾ ರವರ ಗೌರವಾರ್ಥ, ಅವರ ಚರಣಗಳಲ್ಲಿ ಅತ್ಯಂತ ಮಹತ್ವದ ಶ್ರದ್ಧಾಂಜಲಿಯನ್ನು ಸಲ್ಲಿಸೋಣ. – ದಿವ್ಯ ಜೀವನವನ್ನು ನಡೆಸುತ್ತಾ, ಭಗವಂತನನ್ನು ನಿಸ್ವಾರ್ಥದಿಂದ ಪ್ರೇಮಿಸುತ್ತಾ ಮತ್ತು ಪರಸ್ಪರ ಒಬ್ಬರನ್ನೊಬ್ಬರು ಅವನ ಅಂಶವೆಂದು ತಿಳಿದು ಪ್ರೀತಿಸುತ್ತ, ಆಕೆಯ ಉದಾಹರಣೆಯನ್ನು ಅನುಸರಿಸುವುದಾಗಿ ವಾಗ್ದಾನ ಮಾಡುವ ಮೂಲಕ. ಪರಿಶುದ್ಧ ಪ್ರೇಮದ ಅದೃಶ್ಯ ಬಂಧನದಿಂದ, ಒಂದು ದಿನ ನಾವು ಭಗವಂತನ ಅಸೀಮ ಆನಂದದಲ್ಲಿ ಪುನಃ ಭೇಟಿಯಾಗುವವರೆಗೆ ಅವರನ್ನು ನಮ್ಮ ಹೃದಯಗಳಲ್ಲಿ ಅತೀ ಹತ್ತಿರವಾಗಿ ಇರಿಸಿಕೊಳ್ಳೋಣ.

ದಿವ್ಯ ಸ್ನೇಹದಲ್ಲಿ, ನಿಮ್ಮವಳು

ಶ್ರೀ ಶ್ರೀ ಮೃಣಾಲಿನಿ ಮಾತಾ

ವೈ ಎಸ್ಎಸ್ ಮತ್ತು ಎಸ್ಆರ್ ಎಫ್ ನಿರ್ದೇಶಕರ ಮಂಡಳಿಯ ಪರವಾಗಿ

ನಮ್ಮ ಪ್ರೀತಿಯ ಶ್ರೀ ಶ್ರೀ ದಯಾ ಮಾತಾ ರವರ ಗೌರವಾರ್ಥ ಸಂಸ್ಮರಣ ಸತ್ಸಂಗಗಳನ್ನು ಭಾರತದಾದ್ಯಂತ ಎಲ್ಲಾ ವೈಎಸ್ಎಸ್ ಆಶ್ರಮಗಳು ಮತ್ತು ಪ್ರಧಾನ ಧ್ಯಾನ ಕೇಂದ್ರಗಳು ಮತ್ತು ಮಂಡಳಿಗಳಲ್ಲಿ ಡಿಸೆಂಬರ್ 5, 2010 ಅಥವಾ ಡಿಸೆಂಬರ್ 12, 2010 ರಂದು ಆಚರಿಸಲಾಗುವುದು.

ಮಾಹಿತಿಗಾಗಿ ದಯಮಾಡಿ ನಿಮ್ಮ ಸ್ಥಳೀಯ ಆಶ್ರಮ, ಕೇಂದ್ರ ಅಥವಾ ಮಂಡಳಿಯನ್ನು ಸಂಪರ್ಕಿಸಿ. ಫೋನ್ ನಂಬರ್‌ಗಳು, ಇಮೇಲ್‌ ಐಡಿಗಳು ಮತ್ತು ನಮ್ಮ ಕೇಂದ್ರಗಳ ವಿಳಾಸಗಳನ್ನು ನಮ್ಮ ವೆಬ್‌ಸೈಟ್‌ನಲ್ಲಿ ಇಲ್ಲಿ ನೋಡಬಹುದು.

ಇದನ್ನು ಹಂಚಿಕೊಳ್ಳಿ