ಸ್ವಾಮಿ ಶ್ರೀ ಯುಕ್ತೇಶ್ವರರು

Sri Yukteswar divine guru of Paramahansa Yogananda

ಸ್ವಾಮಿ ಶ್ರೀ ಯುಕ್ತೇಶ್ವರರು ಮೇ 10, 1855 ರಂದು ಭಾರತದ ಬಂಗಾಳದ ಸಿರಾಂಪುರದಲ್ಲಿ ಜನಿಸಿದರು. ಶ್ರೀ ಯುಕ್ತೇಶ್ವರರು ಲಾಹಿರಿ ಮಹಾಶಯರ ಶಿಷ್ಯರಾಗಿದ್ದರು ಮತ್ತು ಜ್ಞಾನಾವತಾರವೆಂಬ ಆಧ್ಯಾತ್ಮಿಕ ಔನ್ನತ್ಯವನ್ನು ಪಡೆದಿದ್ದರು.

ಪಶ್ಚಿಮದ ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಪೂರ್ವದ ಆಧ್ಯಾತ್ಮಿಕ ಪರಂಪರೆಯ ಸಂಯೋಜನೆಯು ಆಧುನಿಕ ಪ್ರಪಂಚದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ದುಃಖವನ್ನು ನಿವಾರಿಸಲು ಬಹಳ ಸಹಾಯ ಮಾಡುತ್ತದೆ ಎಂಬುದನ್ನು ಶ್ರೀ ಯುಕ್ತೇಶ್ವರರು ಗುರುತಿಸಿದ್ದರು. 1894 ರಲ್ಲಿ ಲಾಹಿರಿ ಮಹಾಶಯರ ಗುರುಗಳಾದ ಮಹಾವತಾರ ಬಾಬಾಜಿಯೊಂದಿಗಿನ ಅವರ ಗಮನಾರ್ಹ ಭೇಟಿಯಿಂದ ಈ ವಿಚಾರಗಳು ನಿರ್ದಿಷ್ಟ ರೂಪ ತಾಳಿದವು.

“ಸ್ವಾಮೀಜಿ, ನನಗೋಸ್ಕರ ನೀವು ಇನ್ನೊಂದು ಕೆಲಸ ಮಾಡಬೇಕು. ಕ್ರೈಸ್ತ ಹಾಗೂ ಹಿಂದೂ ಧರ್ಮಗಳ ಅಂತರ್ನಿಹಿತ ಸಾಮರಸ್ಯವನ್ನು ಕುರಿತು ಒಂದು ಸಣ್ಣ ಪುಸ್ತಕವನ್ನು ಬರೆಯಬಾರದೇ? ಮಾನವರ ಮತೀಯ ಭಿನ್ನಾಭಿಪ್ರಾಯಗಳಿಂದಾಗಿ ಅವುಗಳ ಮೂಲಭೂತ ಸಾಮರಸ್ಯವು ಈಗ ಮರೆಯಾಗಿದೆ. ಭಗವತ್ಪ್ರೇರಿತ ಪುತ್ರರು ಆಡಿರುವ ಸತ್ಯಗಳು ಒಂದೇ ಎಂಬುದನ್ನು ಸಮಾನಾಂತರ ಉದಾಹರಣೆಗಳಿಂದ ತೋರಿಸಿಕೊಡಿ.” ಎಂದು ಬಾಬಾಜಿ ಅವರಿಗೆ ಹೇಳಿದರು.

ಶ್ರೀ ಯುಕ್ತೇಶ್ವರರು ಹೀಗೆ ಹೇಳಿದರು: “ರಾತ್ರಿಯ ನಿಶ್ಶಬ್ದತೆಯಲ್ಲಿ ಬೈಬಲ್ ಹಾಗೂ ಸನಾತನಧರ್ಮ ಗ್ರಂಥಗಳಲ್ಲಿ ಬರುವ ಪರಸ್ಪರ ಹೋಲಿಕೆಗಳನ್ನು ಸಂಗ್ರಹಿಸುವಲ್ಲಿ ತೊಡಗಿದೆ. ಯೇಸು ಪ್ರಭುವಿನ ವಾಕ್ಯಗಳನ್ನು ಉದಾಹರಿಸಿ ಆತನ ಉಪದೇಶಗಳೂ ವೇದಗಳ ದಿವ್ಯ ಜ್ಞಾನವೂ ಸಾರತಃ ಒಂದೇ ಎಂದು ತೋರಿಸಿದೆ. ನನ್ನ ಪರಮ ಗುರುವಿನ ಅನುಗ್ರಹದಿಂದ ದಿ ಹೋಲಿ ಸೈನ್ಸ್ (ಪವಿತ್ರ ವಿಜ್ಞಾನ) ಎಂಬ ನನ್ನ ಗ್ರಂಥ ಕೆಲವೇ ಸಮಯದಲ್ಲಿ ಪೂರ್ಣಗೊಂಡಿತು.”

ಯುವ ಪರಮಹಂಸ ಯೋಗಾನಂದರು ಬಂದುದು ಸ್ವಾಮಿ ಶ್ರೀ ಯುಕ್ತೇಶ್ವರರ ಬಳಿಗೆಯೇ. 1894 ರಲ್ಲಿ ತಮ್ಮನ್ನು ಭೇಟಿಯಾದಾಗ ಮಹಾವತಾರ ಬಾಬಾಜಿಯವರು: “ಸ್ವಾಮೀಜಿ, ಪೌರ್ವಾತ್ಯ ಪಾಶ್ಚಾತ್ಯರ ನಡುವೆ ಸೌಹಾರ್ದಯುತ ವಿನಿಮಯ ಆಗುವ ದೆಸೆಯಲ್ಲಿ ನೀವು ಮಾಡಬೇಕಾದ ಪಾತ್ರವೂ ಇದೆ. ಕೆಲವು ವರ್ಷಗಳ ನಂತರ ನಾನೊಬ್ಬ ಶಿಷ್ಯನನ್ನು ನಿಮ್ಮ ಬಳಿಗೆ ಕಳಿಸಿಕೊಡುತ್ತೇನೆ. ಪಶ್ಚಿಮದಲ್ಲಿ ಯೋಗವನ್ನು ಪ್ರಚಾರಮಾಡುವುದಕ್ಕಾಗಿ ನೀವವನಿಗೆ ತಯಾರಿ ಕೊಡಬೇಕು. ಆಧ್ಯಾತ್ಮಿಕ ಅನ್ವೇಷಣೆಯಲ್ಲಿರುವ ಅಲ್ಲಿನ ಅನೇಕ ಜೀವಿಗಳ ಸ್ಪಂದನಗಳು ಪ್ರವಾಹರೂಪದಲ್ಲಿ ನನ್ನ ಬಳಿಗೆ ಬರುತ್ತಿವೆ. ಅಮೆರಿಕ ಯೂರೋಪುಗಳಲ್ಲಿ ಜಾಗೃತಗೊಳಿಸಲ್ಪಡಲು ಕಾಯುತ್ತಿರುವ ಸಂಭಾವ್ಯ ಸಂತರನ್ನು ಗ್ರಹಿಸುತ್ತಿದ್ದೇನೆ.” ಎಂದು ಹೇಳಿದರೆಂದು ಮಹಾನ್‌ ಗುರುವು ತಮ್ಮ ಯುವ ಶಿಷ್ಯನಿಗೆ ಹೇಳಿದರು.

ಇದನ್ನು ತಿಳಿಸಿದ ನಂತರ ಶ್ರೀ ಯುಕ್ತೇಶ್ವರರು ಯೋಗಾನಂದಜಿಗೆ, “ಮಗು, ಅನೇಕ ವರ್ಷಗಳ ಹಿಂದೆ ಬಾಬಾಜಿಯವರು ನನ್ನ ಬಳಿಗೆ ಕಳಿಸಿಕೊಡುತ್ತೇವೆಂದು ಹೇಳಿದ್ದ ಶಿಷ್ಯನು ನೀನೇ” ಎಂದು ಹೇಳಿದರು.

ಶ್ರೀ ಯುಕ್ತೇಶ್ವರರ ಆಧ್ಯಾತ್ಮಿಕ ತರಬೇತಿ ಮತ್ತು ಶಿಸ್ತಿನ ಅಡಿಯಲ್ಲಿ, ಶ್ರೀ ಯೋಗಾನಂದರು ಪಶ್ಚಿಮದಲ್ಲಿ ತಮ್ಮ ವಿಶ್ವವ್ಯಾಪಿ ಪ್ರಚಾರಕಾರ್ಯವನ್ನು ಪ್ರಾರಂಭಿಸಲು ಸಿದ್ಧರಾಗಿದ್ದರು. ಶ್ರೀ ಯುಕ್ತೇಶ್ವರರು ತಮ್ಮ ಆಧ್ಯಾತ್ಮಿಕ ಅನುಜ್ಞೆ ಮತ್ತು ಆಶ್ರಮದ ಆಸ್ತಿಗಳಿಗೆ ಪರಮಹಂಸ ಯೋಗಾನಂದರನ್ನು ಏಕೈಕ ಉತ್ತರಾಧಿಕಾರಿ ಎಂದು ಹೆಸರಿಸಿದರು.

ಪರಮಹಂಸಜಿಯವರು ಹದಿನೈದು ವರ್ಷಗಳ ಕಾಲ ಅಮೆರಿಕಾದಲ್ಲಿದ್ದು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವಾಮಿ ಶ್ರೀ ಯುಕ್ತೇಶ್ವರರು ಮಾರ್ಚ್ 9, 1936 ರಂದು ಮಹಾಸಮಾಧಿಯನ್ನು ಪ್ರವೇಶಿಸಿದರು.

ಇದನ್ನು ಹಂಚಿಕೊಳ್ಳಿ