ಆತ್ಮೀಯರೇ,
ನಿಮಗೆಲ್ಲರಿಗೂ ಪರಮಹಂಸ ಯೋಗಾನಂದರ ಆಶ್ರಮಗಳಿಂದ ದಿವ್ಯ ಮಿತ್ರತ್ವ ಮತ್ತು ಪ್ರೇಮ ಸಹಿತವಾದ ಆನಂದಮಯ ಕ್ರಿಸ್ಮಸ್ ಶುಭಾಶಯಗಳು! ಆತ್ಮ-ಜಾಗೃತಿಗೊಳಿಸುವಂಥ ಅವರ ದಿವ್ಯಜ್ಞಾನದಿಂದ ಪ್ರಕಟವಾದ ಕ್ರಿಸ್‌ಮಸ್‌ನ ನಿಜವಾದ ಅರ್ಥದಿಂದ ನಿಮ್ಮ ಜೀವನವು ಹೊಸದಾಗಿ ಪ್ರಕಾಶಿಸಲ್ಪಡಲಿ — ಕ್ರಿಸ್‌ಮಸ್‌ನ ನಿಜವಾದ ಅರ್ಥವೆಂದರೆ, ನಿಮ್ಮ ಆಂತರ್ಯದೊಳಗೆ ಕ್ರಿಸ್ತ [ಕೂಟಸ್ಥ] ಪ್ರಜ್ಞೆಯ ಜನನ, ಅದು ಪ್ರಭು ಯೇಸುವಿನಲ್ಲಿ ಮೂರ್ತೀಭವಿಸಿತ್ತು ಹಾಗೂ ನಿತ್ಯ ಪ್ರೇಮ ಮತ್ತು ದಿವ್ಯ ಸಾಮರಸ್ಯವಾಗಿ ಇಡೀ ಸೃಷ್ಟಿಯಲ್ಲಿ ಸದಾ ಪ್ರಕಾಶಿಸುತ್ತಿದೆ.
ಸತ್ಯ, ಪರಿಶುದ್ಧತೆ ಮತ್ತು ಪಾವಿತ್ರ್ಯಕ್ಕೆ ಒಂದು ಉದಾಹರಣೆಯನ್ನು ಸ್ಥಾಪಿಸಲು ಯೇಸುವು ಭೂಮಿಯ ಮೇಲೆ ಜನಿಸಿದನು — ಕೇವಲ ಅಮೂರ್ತ ಕಲ್ಪನೆಯಾಗಲ್ಲ ಬದಲಾಗಿ ಮಾನವ ಸಂಕುಲಕ್ಕೆ ಉದ್ದೇಶಿತವಾದ ಸಾರ್ವತ್ರಿಕ ಸಾಮರಸ್ಯವನ್ನು ತ್ವರೆಗೊಳಿಸುವ ಒಂದು ಶಕ್ತಿಶಾಲಿ ವಿಕಸನೀಯ ಶಕ್ತಿಯಾಗಿ. ಪವಿತ್ರವಾದದ್ದು ಮತ್ತು ದೈವಿಕವಾದದ್ದರ ಬಗ್ಗೆ ಮನುಷ್ಯ ತೋರುತ್ತಿರುವ ನಿರ್ಲಕ್ಷ್ಯದಿಂದಾಗಿ, ನಿರೀಶ್ವರತೆ ಮತ್ತು ಅಧರ್ಮ ತಾಂಡವವಾಡುತ್ತಿದೆ ಎಂಬಂತೆ ಕಂಡುಬರುತ್ತಿರುವ ಈ ನಮ್ಮ ಕಾಲದಲ್ಲಿ, ನಮ್ಮೆಲ್ಲರ ಒಳಗಿರುವ ಅಮರ ಆತ್ಮಗಳಲ್ಲಿ ಯೇಸುವು ಹೊಂದಿದ್ದ ಎಲ್ಲ ದೈವೀ ಗುಣಗಳು ಇವೆ ಎಂಬ ಅರಿವನ್ನು ನಾವು ಸಕ್ರಿಯವಾಗಿ ಚಾಲನೆಗೊಳಿಸೋಣ.ಅವನು ನಿರ್ದುಷ್ಟವಾಗಿ ಪ್ರಕಟಪಡಿಸಿದ ಉಪಶಮನಕಾರಕ ಶಾಂತಿ ಮತ್ತು ಸರ್ವಾಲಿಂಗನದ ಪ್ರೇಮ; ಅವನ ಅಂತರ್ಬೋಧಿತ ಜ್ಞಾನ ಮತ್ತು ಅದಮ್ಯ ವಿಶ್ವಾಸ, ಇವು ಅವನ ಅನಂತ ಪರಮಾತ್ಮನೊಡನೆಯ ದೈನಂದಿನ ಧ್ಯಾನಸ್ಥ ಸಂಸರ್ಗ ಮತ್ತು ನಿರಂತರ ಏಕತೆಯಿಂದಾಗಿ ಪುನರುಜ್ಜೀವನಗೊಂಡಿವೆ — ಬೆಳಕು ಮತ್ತು ಶಕ್ತಿಯ ಈ ಪ್ರಕಾಶಮಾನ ಆಕರಗಳು ನಿಮ್ಮ ಅಸ್ತಿತ್ವದ ಮೌನದಾಳದಲ್ಲೂ ಇವೆ, ಅವು ನೀವು ನಿಮ್ಮ ಸಮ್ಮತಿ ಮತ್ತು ಆಧ್ಯಾತ್ಮಿಕ ಹುರುಪಿನಿಂದ ಅವುಗಳನ್ನು ಪ್ರಜ್ವಲಿಸುವಂತೆ ಮಾಡಲಿ ಎಂದು ಕಾಯುತ್ತಿವೆಯಷ್ಟೆ.
ಯೇಸು ಕ್ರಿಸ್ತ ಮತ್ತು ಎಲ್ಲ ಮಹಾನ್ ಗುರುಗಳು ಬಾಳಿದ ಹಾಗೆ ಬಾಳಲು ಎದೆಗಾರಿಕೆ ಇರಬೇಕಾಗುತ್ತದೆ — ಎಲ್ಲರೆಡೆಗೂ ಅನಿರ್ಬಂಧಿತ ಪ್ರೀತಿ, ಸೇವಾಶೀಲತೆ ಮತ್ತು ಕ್ಷಮೆಯನ್ನು ವ್ಯಕ್ತಪಡಿಸುವುದು, ಭಗವಂತನೆಡೆಗೆ ಏಕಮುಖ ನಿಷ್ಠೆ ಮತ್ತು ಭಕ್ತಿ — ಮತ್ತು ಜೊತೆಗೆ ಹಾಗೆ ಬಾಳುವುದು ಸರ್ವೋತ್ಕೃಷ್ಟ ಆನಂದ ಮತ್ತು ನಮ್ಮ ಅಜೇಯ ಪರಮ ಸತ್ವದ ಅರಿವನ್ನು ನೀಡುತ್ತದೆ. ಇತರರಿಗೆ ತಿಳಿವು ಮತ್ತು ಮನತುಂಬಿದ ಅನುಕಂಪವನ್ನು ಕೊಡಲು ನಾವು ಪ್ರತಿಸಾರಿ ಪ್ರಯತ್ನಿಸಿದಾಗಲೂ, ಪ್ರತಿಸಾರಿಯೂ ನಾವು ನಮ್ಮಲ್ಲಿ ಅತ್ಯುತ್ತಮವಾಗಿ ಕಾಣಿಸುವ ಯಾವುದಾದರೂ ದಿವ್ಯ ಗುಣಗಳೊಂದಿಗೆ ಇತರರಿಗಾಗಿ ಕೈ ಚಾಚಿದಾಗ, ನಾವು ನಿಜವಾಗಿಯೂ ಕ್ರಿಸ್ಮಸ್‌ನ ಉದ್ದೇಶವನ್ನು ಸಂಭ್ರಮಿಸುತ್ತಿರುತ್ತೇವೆ: ಕ್ರಿಸ್ತ ಪ್ರಜ್ಞೆ ನಮ್ಮೊಳಗೆ ಉದಯಿಸುತ್ತಿರುತ್ತದೆ.
ಕ್ರಿಸ್ಮಸ್ ಸಮಯದಲ್ಲಿ ಕ್ರಿಸ್ತ-ಪ್ರೇಮದ ದಿವ್ಯಾನುಗ್ರಹ ಮತ್ತು ವಿಶೇಷ ಸ್ಪಂದನಗಳು ಉನ್ನತ ಲೋಕಗಳಿಂದ ಹೊರಹೊಮ್ಮಿ ಗ್ರಹಣಶಕ್ತಿಯುಳ್ಳವರೆಲ್ಲರ ಪ್ರಜ್ಞೆಯನ್ನು ವ್ಯಾಪಿಸುತ್ತವೆ. ಈ ಅಲೌಕಿಕ ಹೊರಹೊನಲು, ನಮ್ಮ ಆತ್ಮದ ಪ್ರೀತಿ ಮತ್ತು ಭಕ್ತಿಯನ್ನು ಹಿಂದೆಂದಿಗಿಂತಲೂ ಹೆಚ್ಚು ಸ್ಥಿರ ಸಂಕಲ್ಪದೊಡನೆ ಭಗವಂತ ಮತ್ತು ಕ್ರಿಸ್ತನ ಪಾದಗಳಿಗೆ ಸಮರ್ಪಿಸಲು ಹೆಚ್ಚು ಗಾಢವಾಗಿ ಧ್ಯಾನ ಮಾಡಲು ಸಾಧ್ಯವಾಗಿಸುತ್ತದೆ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಈ ಕ್ರಿಸ್‌ಮಸ್ ಋತುವಿನ ಉತ್ಸವದ ಬಾಹ್ಯ ಚಟುವಟಿಕೆಗಳನ್ನು ಆನಂದಿಸುತ್ತಿರುವಾಗ, ಮತ್ತು ಗಾಢವಾದ ಧ್ಯಾನದಲ್ಲಿ ಯೇಸುವಿನ ಜನನದ ಆಂತರಿಕ ಆಚರಣೆಯನ್ನು ಗಮನಿಸುತ್ತಿರುವಾಗ, ಭಗವಂತನೊಂದಿಗಿನ ನಿಮ್ಮ ಆರಾಧನೀಯ ಏಕತೆಯನ್ನು ಸದಾ ನೆನಪಿಸುವ ಕ್ರಿಸ್ತ ಪ್ರಜ್ಞೆಯ ಪಿಸುನುಡಿಗಳನ್ನು ನೀವು ಅನುಭವಿಸುವಂತಾಗಲಿ, ಹಾಗೂ ಅದು “ಜಗತ್ತಿಗೆ ಆನಂದವನ್ನು” ಮತ್ತು ನಿಮ್ಮ ಮನೆ ಮತ್ತು ಕುಟುಂಬವರ್ಗದವರಿಗೆ ಆನಂದವನ್ನು ತರಲಿ.
ಭಗವಂತ, ಯೇಸು ಕ್ರಿಸ್ತ ಮತ್ತು ಗುರುಗಳ ಎಣೆಯಿಲ್ಲದ ಆಶೀರ್ವಾದಗಳು,
ಸ್ವಾಮಿ ಚಿದಾನಂದ ಗಿರಿ


















