ಹೊಸ ವರ್ಷ 2019
“ಹೊಸ ವರ್ಷದ ಶುಭೋದಯದೊಂದಿಗೆ ಮುಚ್ಚಲ್ಪಟ್ಟಿರುವ ಎಲ್ಲಾ ಮಿತಿಗಳ ಬಾಗಿಲುಗಳು ತೆರೆಯಲಿ ಮತ್ತು ಆ ಬಾಗಿಲುಗಳ ಮೂಲಕ ಹಾದು, ಎಲ್ಲಿ ನನ್ನ ಜೀವನದ ಎಲ್ಲಾ ಅರ್ಥಪೂರ್ಣ ಕನಸುಗಳು ನನಸಾಗುವವೋ ಆ ಆಲಯದೊಳಗೆ ಪ್ರವೇಶಿಸುವಂತಾಗಲಿ.”
— Sri Sri Paramahansa Yogananda
ಹೊಸ ವರ್ಷದ ಶುಭ ಆರಂಭದಂದು, ನಾವು ಗುರುದೇವ ಪರಮಹಂಸ ಯೋಗಾನಂದರ ಆಶ್ರಮದಿಂದ ನಿಮಗೆ ಮತ್ತು ನಮ್ಮ ಆಧ್ಯಾತ್ಮಿಕ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ನಮ್ಮ ಪ್ರೀತಿಯ ಶುಭಾಶಯಗಳನ್ನು ತಿಳಿಸುತ್ತಿದ್ದೇವೆ. ಕ್ರಿಸ್ತ ಜಯಂತಿಯಂದು ನೀವು ನಮ್ಮ ದಿವ್ಯ ಸ್ನೇಹದ ಪ್ರತೀಕವಾಗಿ ಕಳುಹಿಸಿದ ಅಭಿನಂದನೆಗಳಿಗಾಗಿ ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಮುಂದಿನ ವರ್ಷದಲ್ಲಿ ನಿಮ್ಮ ಎಲ್ಲ ಅರ್ಹ ಧ್ಯೇಯಗಳು ಪೂರ್ಣಗೊಳ್ಳಲು ಆ ಭಗವಂತನು ಸಹಾಯ ಮಾಡಲೆಂದು ನಾವು ನಮ್ಮ ಹೊಸ ವರ್ಷದ ಧ್ಯಾನದಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಿದ್ದೇವೆ.
ಮೇಲೆ ಕೊಟ್ಟಿರುವ ಗುರುವಿನ ಅದ್ಭುತ ಸಕಾರಾತ್ಮಕ ವಚನವನ್ನು ನೀವು ಆಳವಾಗಿ ಧ್ಯಾನಿಸಿ ಮತ್ತು ನಿಮ್ಮ ಅಚಲ ಏಕಾಗ್ರತೆಯಿಂದ ಗ್ರಹಿಸಿದ, ಆ ನುಡಿಗಳಲ್ಲಿ ಹರಿಯುತ್ತಿರುವ ಆ ದಿವ್ಯಶಕ್ತಿಯು ನಿಮ್ಮ ಕಾರ್ಯಗಳನ್ನು ಪುನಃ ಪ್ರಾರಂಭಿಸಲು ಪ್ರೇರೇಪಿಸಲಿ. ಇದು ನಿಮ್ಮ ಇಚ್ಚಾಶಕ್ತಿಯನ್ನು ಬಲಗೊಳಿಸಲಿ ಮತ್ತು ಆ ಭಗವಂತನ ಕೃಪೆಯಿಂದ ನಿಮ್ಮ ಎಲ್ಲಾ ತೊಂದರೆಗಳನ್ನು ನಿವಾರಿಸಿಕೊಳ್ಳುವೆನೆಂಬ ಆತ್ಮವಿಶ್ವಾಸವನ್ನು ನಿಮ್ಮಲ್ಲಿ ತುಂಬಲಿ. ಇತ್ತೀಚೆಗೆ ನಡೆಸಿದ ಕ್ರಿಸ್ತಜಯಂತಿಯ ಧ್ಯಾನ ಕಾರ್ಯಕ್ರಮದಲ್ಲಿ ನೀವು ಬಯಸಿದಂತೆ ಆಗುವಿರೆಂಬ ವಿಶ್ವಾಸದ ಅಪರಿಮಿತ ಶಕ್ತಿಯ ಅನುಭವವನ್ನು ಪಡೆದಿರುವಿರೆಂದು ಭಾವಿಸುತ್ತೇನೆ. ಈಗ ಆ ಭರವಸೆಯ ಬೆಳಕಿನೆಡೆ ಸಾಗುವ ಶುಭ ಸಮಯ ಇಂದು ಬಂದಿದೆ — ನಿಮ್ಮ ಪ್ರೀತಿಯ ಕನಸುಗಳನ್ನು ನನಸನ್ನಾಗಿಸುವ ಮತ್ತು ಆಧ್ಯಾತ್ಮಿಕ ಸಾಧನೆಯನ್ನು ಗಾಢವಾಗಿಸುವ ಧೃಡ ನಿರ್ಧಾರಕ್ಕೆ ಚೈತನ್ಯವನ್ನು ತುಂಬಿರಿ.
ಧ್ಯಾನ ಅಥವಾ ಆಳವಾದ ಪ್ರಾರ್ಥನೆಯಲ್ಲಿ ನೀವು ಮಾಡುವ ಹೊಸ ವರ್ಷದ ಸಂಕಲ್ಪಗಳಿಗೆ ನವ ಶಕ್ತಿಯು ತುಂಬುವುದಂತೂ ನಿಶ್ಚಿತ. ಏಕೆಂದರೆ ನಿಮ್ಮ ಸುಪ್ತ ಪ್ರಜ್ಞೆಯಿಂದ ಹರಿದು ಬರುವ ದಿವ್ಯ ಚೈತನ್ಯವು ಅವುಗಳಿಗೆ ಜೀವಂತಿಕೆಯನ್ನು ತುಂಬುವಲ್ಲಿ ಸಹಾಯ ಮಾಡುತ್ತದೆ. ನೀವು ಯಾವುದಾದರೂ ಒಂದು ಅಥವಾ ಹಲವು ಅರ್ಹ ಧ್ಯೇಯಗಳ ಮೇಲೆ ಮತ್ತು ನೀವು ಬೆಳೆಸಿಕೊಳ್ಳಲು ಇಚ್ಚಿಸುವ ಗುಣಗಳು, ಉದಾಹರಣೆಗೆ — ಪ್ರಶಾಂತತೆ, ಸಮಚಿತ್ತತೆ ಅಥವಾ ಕರುಣೆ ಹಾಗೂ ಬೇರೆಯವರನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ — ಹೀಗೆ ಯಾವುದೇ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದರೆ, ಅದರ ಮೇಲೆ ನಿಮ್ಮ ಚಿತ್ತವನ್ನು ಕೇಂದ್ರೀಕರಿಸಿ ಎಂದು ಪರಮಹಂಸಜಿಯವರು ಉಪದೇಶಿಸಿದ್ದಾರೆ. ಮುಂಬರುವ ತಿಂಗಳುಗಳಲ್ಲಿ, ನಿಮ್ಮ ಧ್ಯಾನದಲ್ಲಿ, ನೀವು ಸಾಧಿಸಲು ಬಯಸುವ ಯಶಸ್ಸಿನ ಚಿತ್ರಣವನ್ನು ನಿಮ್ಮ ಅಂತರಂಗದ ಒಳನೋಟದಲ್ಲಿ ಸ್ಥಿರವಾಗಿ ಚಿತ್ರಿಸಿಕೊಳ್ಳಿ ಮತ್ತು ವೈಎಸ್‌ಎಸ್/ಎಸ್‌ಆರ್‌ಎಫ್ ತಂತ್ರಗಳ ಅಭ್ಯಾಸದಲ್ಲಿ ಅನುಭವಕ್ಕೆ ಬರುವ ಆ ಪ್ರಶಾಂತ ಭಾವದಿಂದ ಅದನ್ನು ಸ್ವೀಕರಿಸಿ ಮತ್ತು ಒಂದು ಸರಳ, ನೇರ ಸಕಾರಾತ್ಮಕ ವಚನವನ್ನು ನೀವು ಸಾಧಿಸಬಯಸುವ ಆಶಯವು ನಿಮ್ಮ ಮನದ ಒಂದು ಭಾಗವಾಗುವವರೆಗೂ ಪದೇ ಪದೇ ಪುನರಾವರ್ತಿಸಿಕೊಳ್ಳಿ. ಇದು, ನೀವು ಏನನ್ನಾದರೂ ಸಾಕಾರಗೊಳಿಸಿಕೊಳ್ಳಲು ಬಯಸಿದಲ್ಲಿ, ಅದು ಎಷ್ಟೇ ಚಿಕ್ಕ ಸಂಗತಿಯಾದರೂ, ನೀವು ಮನದಲ್ಲಿ ಚಿತ್ರಿಸಿಕೊಂಡ ಚಿತ್ರಣವು ವಾಸ್ತವರೂಪಕ್ಕೆ ಬರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ನಿಮ್ಮ ನಕಾರಾತ್ಮಕ ಆಲೋಚನೆಗಳನ್ನು ದೂರ ತಳ್ಳಿ, ನಿಮ್ಮ ಕೀಳರಿಮೆಯ ಭಾವನೆಗಳನ್ನು ನೀವು ಯಶಸ್ವಿಯಾಗುವಿರೆಂಬ ಧೃಡ ನಿರ್ಧಾರವಾಗಿ ಪರಿವರ್ತಿಸಿದಾಗ ನೀವು ಇನ್ನೂ ಶೀಘ್ರವಾಗಿ ಪ್ರಗತಿಯನ್ನು ಕಾಣುವಿರಿ. ನೀವು ಪ್ರಜ್ಞಾಪೂರ್ವಕವಾಗಿ ಜೀವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಜೀವನದ ಗತಿಯನ್ನು ನಿರ್ಧರಿಸುವ — ನಿಮ್ಮ ಹವ್ಯಾಸಗಳು, ನಿಮ್ಮ ಸಹಚರರು, ನಿಮ್ಮ ಹೊರಗಿನ ವಾತಾವರಣ ಅಥವಾ ನಿಮ್ಮ ನಿಜವಾದ ವ್ಯಕ್ತಿತ್ವ, ನಿಮ್ಮ ಚೈತನ್ಯ — ಇವುಗಳ ಬಗ್ಗೆ ಸದಾ ಅರಿವಿನಿಂದಿರಿ. ನೀವು ಪ್ರತಿದಿನ, ಪ್ರತಿಕ್ಷಣ ಏನನ್ನು ಯೋಚಿಸುವಿರಿ ಅಥವಾ ಏನನ್ನು ಮಾಡುವಿರಿ ಎಂದು ನಿರ್ಧರಿಸುವ ಶಕ್ತಿ ನಿಮ್ಮಲ್ಲಿಯೇ ಇದೆ. ನಿಮ್ಮ ಆಲೋಚನೆಗಳು ಮತ್ತು ಕಾರ್ಯಗಳನ್ನು ನಿಮ್ಮ ವಿವೇಚನಾಯುಕ್ತ ಚೇತನದಿಂದ ಹಾಗೂ ಮುಕ್ತ ಇಚ್ಚಾಶಕ್ತಿಯಿಂದ ಆರಿಸಿಕೊಳ್ಳಿ. ನಂತರ ಯಾವುದೂ ನಿಮ್ಮನ್ನು ಮುಕ್ತಿಯೆಡೆಗಿನ ಪಯಣದಿಂದ ಹಿಮ್ಮೆಟ್ಟಿಸಲಾರದು.
ನೀವು ಈ ಹೊಸ ವರ್ಷದಲ್ಲಿ ಮಾಡಬಹುದಾದ ಅತ್ಯುತ್ತಮ ಸಂಕಲ್ಪವೆಂದರೆ, ನಿಮ್ಮ ಹೃದಯ ಮತ್ತು ಮನಸ್ಸುಗಳನ್ನು ದೈವತ್ವದ ಕಡೆಗೆ ನಿರಂತರವಾಗಿ ಹರಿಸುವುದು. ನೀವು ಆ ಸರ್ವಶಕ್ತನಾದ ಭಗವಂತನ ಸಹಾಯದಿಂದ ಏನನ್ನು ಬೇಕಾದರೂ ಸಾಧಿಸಬಹುದು. ನಿಮಗೆ ಬೇಡವಾದ ಹವ್ಯಾಸಗಳನ್ನು ಈ ಆಂತರಿಕ ಸಂವಹನದ ಅಗ್ನಿಯಲ್ಲಿ ಮತ್ತು ಭಗವಂತನ ಪರಿವರ್ತನಾ ಸ್ಪರ್ಶದಿಂದ ಕರಗಿಸಬಹುದು. ಅಂತಿಮವಾಗಿ ನೀವು ಮಾಯೆಯ ಪ್ರಭಾವದಿಂದ ಬಿಡುಗಡೆ ಹೊಂದುವಿರಿ. ನೀವು ನಿಮ್ಮ ಆಲೋಚನೆಗಳು ಮತ್ತು ಕಾರ್ಯಗಳ ಮೇಲೆ ವಿಜಯವನ್ನು ಸಾಧಿಸುವಿರಿ ಮತ್ತು ಅದರ ಮೂಲಕ ನಿಮ್ಮ ನಿಯತಿಯನ್ನು ನಿಯಂತ್ರಿಸಬಲ್ಲಿರಿ. ತನ್ನನ್ನು ತಾನು ಜಯಿಸಬಲ್ಲವನೇ ನಿಜವಾದ ವಿಜಯಶಾಲಿ ಎಂದು ಗುರೂಜಿಯವರು ನಮಗೊಮ್ಮೆ ಹೇಳಿದ್ದರು. “ನಿಮ್ಮ ಪರಿಸ್ಥಿತಿಯ ಪ್ರಭಾವದಿಂದ ಪ್ರೇರಿತವಾದ ಪ್ರಜ್ಞೆ ಮತ್ತು ನಿಮ್ಮ ಆಧ್ಯಾತ್ಮಿಕ ಶಕ್ತಿಯನ್ನು ಅಪಾರವಾಗಿ ವಿಸ್ತರಿಸಲು ಸಾಧ್ಯವಾಗುವಂತೆ ಮಾಡುವುದೇ ನಿಮ್ಮ ವಿಜಯವಾಗಿದೆ. ಎಲ್ಲಾ ಪರಿಮಿತಿಗಳನ್ನು ದಾಟಿ, ನೀವು ಎಷ್ಟು ದೂರ ಹೋಗಲು ಬಯಸುವಿರೋ ಅಷ್ಟು ದೂರಕ್ಕೆ ಹಾರಿ ದಿಗ್ವಿಜಯಶಾಲಿಗಳಾಗಿ ಅತ್ಯುನ್ನತ ಅಸ್ತಿತ್ವದಲ್ಲಿ ಜೀವಿಸಿ.” ಹೊಸ ವರ್ಷವು ನಿಮ್ಮ ಎಲ್ಲಾ ಪ್ರಯತ್ನಗಳನ್ನು ಉನ್ನತ ವಿಜಯದತ್ತ ಕೊಂಡೊಯ್ಯಲಿ ಎಂದು ಹಾರೈಸುತ್ತೇವೆ.
ನಿಮಗೆ ಹಾಗೂ ನಿಮ್ಮ ಪ್ರೀತಿಪಾತ್ರರೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು,
ಸ್ವಾಮಿ ಚಿದಾನಂದ ಗಿರಿ


















