ಸ್ವರ್ಗದಿಂದ ಬಂದ ಬೆಳಕಿನಂತೆ

img1_mukti_mata

ಮುಕ್ತಿ ಮಾತಾರಿಂದ

ಅರವತ್ತು ವರ್ಷಗಳಿಗೂ ಹೆಚ್ಚು ಕಾಲ ಪರಮಹಂಸ ಯೋಗಾನಂದರ ಶಿಷ್ಯೆಯಾಗಿದ್ದ, ಮುಕ್ತಿ ಮಾತಾ (1922-2008)ರವರು 1945 ರಲ್ಲಿ ಗುರುಗಳನ್ನು ಭೇಟಿಯಾದರು ಹಾಗೂ ಅವರು ಸೆಲ್ಫ್-ರಿಯಲೈಝೇಷನ್‌ ಫೆಲೋಷಿಪ್‌ನ ಮಿನಿಸ್ಟರ್‌ ಆಗಿದ್ದರು. ಇಲ್ಲಿ ಉದ್ಧರಿಸಿರುವ ಸಿಡಿ ರೆಕಾರ್ಡಿಂಗ್‌ನಲ್ಲಿ, ಅವರು ಪರಮಹಂಸಜಿಯೊಂದಿಗೆ ಆದ ತಮ್ಮ ಕೆಲವು ಅನುಭವಗಳನ್ನು ಸ್ಮರಿಸಿಕೊಂಡಿದ್ದಾರೆ.

ಅವರೇ ಒಂದು ವಿಶ್ವದಂತಿದ್ದರು: ಸರ್ವವನ್ನೂ ಬಲ್ಲವರು, ಸರ್ವವನ್ನೂ ಗ್ರಹಿಸುವವರು. ಮತ್ತು ಅವರ ಬಳಿಗೆ ಬಂದ ಪ್ರತಿಯೊಂದು ಆತ್ಮಕ್ಕೂ ಅವರು ಹೊಂದಿದ್ದ ಪ್ರೀತಿ: ಅದ್ಭುತ, ಅಸಾಮಾನ್ಯ, ಪರಿಶುದ್ಧ, ಸ್ವರ್ಗದಿಂದ ಬಂದ ಬೆಳಕಿನಂತೆ.

ನನಗೆ 1945 ರ ಕೊನೆಯಲ್ಲಿ ಅನಿರೀಕ್ಷಿತವಾಗಿ ಸೆಲ್ಫ್-ರಿಯಲೈಝೇಷನ್‌ ಬೋಧನೆಗಳ ಮತ್ತು ಗುರುಗಳ ಪರಿಚಯವಾಯಿತು. ನನ್ನ ಜೀವನದಲ್ಲಿ ಏನೋ ಒಂದು ಬರುತ್ತಿದೆ ಎಂದು ನನಗೆ ಅಂತರ್ಬೋಧಿತವಾಗಿ ತಿಳಿದಿತ್ತು ಹಾಗೂ ಹೇಳಿದೆ, “ಪ್ರಭುವೇ, ನೀನು ಅಸ್ತಿತ್ವದಲ್ಲಿರುವುದೇ ಆದರೆ, ಅದನ್ನು ನನಗೆ ಸಾಬೀತುಪಡಿಸುವಂತೆ ನಿನಗೆ ಸವಾಲು ಹಾಕುತ್ತೇನೆ.” ಇದು ಬಹಳ ಬಲವಾದ ಬೇಡಿಕೆಯಾಗಿತ್ತು. ಎರಡು ವಾರಗಳ ನಂತರ, ಒಬ್ಬ ಸ್ನೇಹಿತರು ಬಂದು, “ನಾವು ಹಾಲಿವುಡ್‌ಗೆ ಹೋಗೋಣ,” ಎಂದು ಹಾಗೇ ಮಾತನಾಡುತ್ತ ಹೇಳಿದರು.

ನಾವು ಚರ್ಚ್‌ಗೆ ಹೋಗುತ್ತೇವೆ ಎಂದು ನಾನು ಕನಸೂ ಕಂಡಿರಲಿಲ್ಲ — ಸೆಲ್ಫ್-ರಿಯಲೈಝೇಷನ್‌ ಫೆಲೋಷಿಪ್ ಚರ್ಚ್. ಮತ್ತು ನನ್ನ ಸ್ನೇಹಿತರು ನನಗೆ ಹೆಸರು ಹೇಳಿದಾಗ, ನಾನು ಯೋಚಿಸಿದೆ, “ಸರಿ, ಇದರ ಅರ್ಥವೇನು?” ಬಹುಶಃ ಧರ್ಮದ ಬಗ್ಗೆ ಯಾವುದೋ ರೀತಿಯ ತಾತ್ವಿಕ ಆಲೋಚನೆಗಳನ್ನು ಚರ್ಚಿಸುವ ತಾತ್ವಿಕ ಪಾದ್ರಿ ಇರಬಹುದು, ಎಂದೆಲ್ಲ ನಾನು ಯೋಚಿಸಿದೆ.

ಆದರೆ ಗುರುಗಳು ಕಾಣಿಸಿಕೊಂಡಾಗ ಮತ್ತು ನಾನು ಅವರನ್ನು ನೋಡಿದಾಗ ನಾನು ಯೋಚಿಸಿದೆ, “ಇವರು ಸಾಮಾನ್ಯ ಮನುಷ್ಯರಲ್ಲ. ಈ ವ್ಯಕ್ತಿ ಭಗವಂತನನ್ನು ಅರಿತಿದ್ದಾರೆ.” ನಾನು ಆಗಾಗ್ಗೆ ಯೋಚಿಸುತ್ತೇನೆ, “ನೀವು ಯಾರಿಗಾದರೂ ಸರ್ವಜ್ಞತೆಯನ್ನು ಹೇಗೆ ವಿವರಿಸಬಹುದು?” ನಮ್ಮ ಪ್ರತಿಯೊಂದು ಆಲೋಚನೆ, ಪ್ರತಿ ಭಾವನೆ, ನಾವು ಎಲ್ಲಿಂದ ಬಂದಿದ್ದೇವೆ, ಎಲ್ಲಿಗೆ ಹೋಗುತ್ತಿದ್ದೇವೆ ಎಂದು ಅವರಿಗೆ ತಿಳಿದಿತ್ತು. (ಸದ್ಯ ಯಾರೋ ಒಬ್ಬರಿಗೆ ತಿಳಿದಿತ್ತು!) ಆದರೆ ಹಾಲಿವುಡ್ ಮಂದಿರದಲ್ಲಿ ಆ ಮೊದಲ ಪರಿಚಯದ ನಂತರ, ನಾನು ಕಟ್ಟಡವನ್ನು ಬಿಟ್ಟು ಹೊರಟಾಗ, ನಾನು ಭೌತಿಕವಾಗಿ ಹೊರನಡೆಯುತ್ತಿದ್ದೇನೆ ಅಷ್ಟೇ ಹೊರತು ಅನ್ಯಥಾ ಅಲ್ಲ ಎಂದು ನನಗೆ ತಿಳಿದಿತ್ತು.

ನಾನು ಬೆಳೆಯುತ್ತಿದ್ದಾಗ, ಪ್ರತಿ ಎರಡು ಅಥವಾ ಮೂರು ವರ್ಷಗಳಿಗೊಮ್ಮೆ ನಾನು ಒಂದು ಜೋಡಿ ಕಂದು ಕಂಗಳಿಂದ ಆಕರ್ಷಿಸಲ್ಪಡುತ್ತಿದ್ದೆ. ಮತ್ತು ಆ ಕಂಗಳಲ್ಲಿ ನಾನು ಅನಂತತೆಯ ಅಭಿವ್ಯಕ್ತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದೆ. ಮತ್ತು ನನ್ನ ಏಕಾಗ್ರತೆಯು ಕೆಲವೊಮ್ಮೆ ಎಷ್ಟು ಕೇಂದ್ರಿತವಾಗಿರುತ್ತಿತ್ತೆಂದರೆ ಅವು (ಕಂಗಳು) ನನಗಾಗಿ ಸಜೀವವಾದಂತೆನಿಸುತ್ತಿತ್ತು; ಅವು ನಿಜವೇ ಆಗಿದ್ದವು. ಮತ್ತು ನಂತರ ನಾನು ಗುರುಗಳನ್ನು ನೋಡಿದಾಗ, ಆ ಕಣ್ಣುಗಳನ್ನೇ ಕಂಡೆ.

ಅವರೇ ಒಂದು ವಿಶ್ವದಂತಿದ್ದರು: ಸರ್ವವನ್ನೂ ಬಲ್ಲವರು, ಸರ್ವವನ್ನೂ ಗ್ರಹಿಸುವವರು. ಮತ್ತು ಅವರ ಬಳಿಗೆ ಬಂದ ಪ್ರತಿಯೊಂದು ಆತ್ಮಕ್ಕೂ ಅವರು ಹೊಂದಿದ್ದ ಪ್ರೀತಿ: ಅದ್ಭುತ, ಅಸಾಮಾನ್ಯ, ಪರಿಶುದ್ಧ, ಸ್ವರ್ಗದಿಂದ ಬಂದ ಬೆಳಕಿನಂತೆ.

ಇದನ್ನು ಹಂಚಿಕೊಳ್ಳಿ