ಲಾಹಿರಿ ಮಹಾಶಯರೊಂದಿಗಿನ ಒಂದು ಅಸಾಧಾರಣ ಭೇಟಿ

ಸನಂದ ಲಾಲ್‌ ಘೋಷರಿಂದ

ಮೇಜ್ದಾ: ದ ಫ್ಯಾಮಿಲಿ ಅಂಡ್‌ ದ ಅರ್ಲಿ ಲೈಫ್‌ ಆಫ್‌ ಪರಮಹಂಸ ಯೋಗಾನಂದ ಎಂಬ ಪುಸ್ತಕದಿಂದ. ಲೇಖಕರು ಯೋಗಾನಂದರ ತಮ್ಮ ಮತ್ತು ಅವರನ್ನು ಮೇಜ್ದಾ ಎಂದು ಕರೆಯುತ್ತಿದ್ದರು, ಬಂಗಾಳಿಯಲ್ಲಿ ಮೇಜ್ದಾ ಎಂದರೆ ಎರಡನೇ ಹಿರಿಯಣ್ಣ. ಈ ಕೆಳಗಿನ ಕಥೆಯ ಭಾಗವೂ ಆಗಿರುವ ಅವರ ಹಿರಿಯ ಸಹೋದರನ ಹೆಸರು ಅನಂತ.

ಈಗಲೇ ಆರ್ಡರ್‌ ಮಾಡಿ

ಅನಂತನ ಡೈರಿಯ ಪ್ರಕಾರ, ಮೇ 3, 1906 ರಲ್ಲಿ ನಾವು ಬರೇಲಿಯಿಂದ ಚಿತ್ತಗಾಂಗ್‌ಗೆ ಸ್ಥಳಾಂತರಗೊಂಡೆವು. ಇಲ್ಲಿ ಮೇಜ್ದಾ ಅಕ್ಕಪಕ್ಕದ ಮನೆಗಳ ಅಂಗಳದಲ್ಲಿರುವ ಮರಗಳಿಂದ ಹಣ್ಣುಗಳನ್ನು ಕೀಳಲು ನನ್ನನ್ನು ಕರೆದುಕೊಂಡು ಹೋಗುತ್ತಿದ್ದ. ಒಂದು ಮನೆಯಲ್ಲಿ ಕೆಲವು ಸುಂದರವಾದ ದೊಡ್ಡ ಹಂಸಗಳಿದ್ದವು. ಮೇಜ್ದಾ ಗರಿಯ ಲೇಖನಿ ಮಾಡಬೇಕೆಂದುಕೊಂಡ, ಆದ್ದರಿಂದ ಅವನು ಆಕರ್ಷಕವಾದ ಪಕ್ಷಿಗಳಲ್ಲಿ ಒಂದರಿಂದ ಗರಿಯನ್ನು ಕಿತ್ತುಕೊಂಡ. ಇದು ಗೊತ್ತಾಗಿ ಮಾಲೀಕರು ಅನಂತನಿಗೆ ದೂರು ನೀಡಿದರು. ನಮ್ಮ ಅಣ್ಣ ಮೇಜ್ದಾನ ತುಂಟತನವನ್ನು ಕೊನೆಗಾಣಿಸಲು ಪ್ರಯತ್ನಿಸಿದ ಮತ್ತು ಹಗಲು ಹೊತ್ತಿನಲ್ಲಿ ಅವನನ್ನು ಹದ್ದುಬಸ್ತಿನಲ್ಲಿರಿಸುವುದೇ ಉತ್ತಮ ಮಾರ್ಗವೆಂದು ನಿರ್ಧರಿಸಿದ. ಆದ್ದರಿಂದ ಅವನು ಮೇಜ್ದಾ ಮತ್ತು ನನ್ನನ್ನು ತಾನೇ ಸ್ಥಳೀಯ ಶಾಲೆಗೆ ಕರೆದೊಯ್ದು ಸೇರಿಸಿದ. ಮೇಜ್ದಾ ತನ್ನ ಉತ್ತರ ಪತ್ರಿಕೆಗೆ ಚೆನ್ನಾಗಿ ಉತ್ತರಿಸುತ್ತಿದ್ದ; ನಾನು ಕೇವಲ ಉತ್ತೀರ್ಣನಾಗುತ್ತಿದ್ದೆನಷ್ಟೆ.

ಒಂದು ದಿನ, ಮೇಜ್ದಾ ಮತ್ತು ನನಗೆ ಹೇಳಲಾಯಿತು: “ಬಂದರಿನ ಕಡೆ ಹೋಗಬೇಡಿ. ನದಿಯ ಮುಖದಿಂದ ದೂರವಿರಿ.”

ನಾನಂದುಕೊಂಡೆ: “ಮೇಜ್ದಾ ಇದನ್ನೆಂದಿಗೂ ಪಾಲಿಸುವುದಿಲ್ಲ. ಇದನ್ನೇ ಅವನು ವಿರೋಧಿಸುವುದು.” ನಿಸ್ಸಂದೇಹವಾಗಿ, ಅವನು ತನ್ನೊಂದಿಗೆ ನನ್ನನ್ನು ನದಿಯ ಮುಖದೆಡೆಗೆ ಕರೆದೊಯ್ಯಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.

ಮಕ್ಕಳಾದ ನಮಗೆಲ್ಲರಿಗೂ ಪ್ರತಿದಿನ ಸಂಜೆಯೊಳಗೆ ಮನೆಗೆ ಬಂದು, ಮಾರ್ಜನ ಮಾಡಿಕೊಂಡು, ಆರು ಗಂಟೆಗೆ ನಮ್ಮ ಹೋಂವರ್ಕ್‌ ಅನ್ನು ಪ್ರಾರಂಭಿಸಲು ಅನಂತ ಹೇಳಿದ್ದ. ಚಿತ್ತಗಾಂಗ್‌ನಲ್ಲಿರುವ ಬಂದರು, ಮನೆಯಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿತ್ತು. ಹೀಗಾಗಿ, ಶಾಲೆಯಿಂದ ಹಿಂತಿರುಗಿದ ಮೇಲೆ, ತಿಂಡಿ ತಿಂದ ನಂತರ, ನಮಗೆ ಹೋಗಿಬರುವ ಎಂಟು ಕಿಲೋಮೀಟರ್ ದೂರವನ್ನು ಕ್ರಮಿಸಿ ನಿಗದಿತ ಸಮಯಕ್ಕೆ ಹಿಂತಿರುಗಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ನಾವು ಬಂದರಿನವರೆಗೆ ಓಡುತ್ತಿದ್ದೆವು, ಸ್ವಲ್ಪ ಸಮಯದವರೆಗೆ ಹಡಗುಗಳನ್ನು ವೀಕ್ಷಿಸಿ, ನಂತರ ಮನೆಗೆ ಓಡಿಬರುತ್ತಿದ್ದೆವು. ಈ ಎಲ್ಲಾ ಓಡಾಟದಿಂದ, ಮೇಜ್ದಾ ಅತ್ಯುತ್ತಮ ಕ್ರೀಡಾಪಟುವಾದ. ನಾನೂ ಬಹಳ ಒಳ್ಳೆಯ ಕ್ರೀಡಾಪಟುವೇ ಆದೆ; ಆದರೆ ಮೇಜ್ದಾನಷ್ಟಲ್ಲ.

ನದಿಯ ಮುಖದೆಡೆಗಿನ ಹಾದಿಯು ಹಲವಾರು ತಗ್ಗು ಬೆಟ್ಟಗಳ ಮಾರ್ಗದಲ್ಲಿ ಸಾಗುತ್ತಿತ್ತು. ನಮ್ಮ ದಾರಿಯುದ್ದಕ್ಕೂ ಮರಗಳಲ್ಲಿ ಹಣ್ಣುಗಳು ಹೇರಳವಾಗಿ ನೇತಾಡುತ್ತಿದ್ದವು. ಒಂದು ದಿನ ಮೇಜ್ದಾ ಹೇಳಿದ, “ಕೇಳಿಸಿಕೊ, ನಾವು ಇಂದು ಸಂಜೆ ಹಿಂತಿರುಗುವಾಗ ಕೆಲವು ಲಿಚಿಗಳನ್ನು ಆರಿಸಿಕೊಳ್ಳೋಣ. ಮುಸ್ಸಂಜೆಯಲ್ಲಿ ಯಾರೂ ನಮ್ಮನ್ನು ನೋಡುವುದಿಲ್ಲ.”

ನುಡಿದಂತೆಯೇ ನಡೆದೆವು! ಮೇಜ್ದಾ ಕೆಲವು ರಸಭರಿತ, ಮಧುರವಾದ ಲಿಚಿಗಳನ್ನು ಆರಿಸುತ್ತಿದ್ದಾಗ ಯಾರೋ ತನ್ನ ಹೆಸರನ್ನು ಕರೆಯುತ್ತಿರುವುದು ಕೇಳಿಸಿತು. ಗಾಬರಿಯಿಂದ, ಮೇಜ್ದಾ ಸ್ತಬ್ಧವಾಗಿ ನಿಂತ. ಸಾಹಸದ ಎಲ್ಲಾ ಪ್ರಜ್ಞೆ ಥಟ್ಟನೆ ಕೊನೆಗೊಂಡಿತು! ಜಾಗರೂಕತೆಯಿಂದ ಧ್ವನಿ ಬಂದ ದಿಕ್ಕಿನತ್ತ ಸಾಗಿದೆವು. ಸಂಧ್ಯಾಕಾಲ ವೇಗವಾಗಿ ಮಸುಕಾಗುತ್ತಿತ್ತು ಮತ್ತು ಕತ್ತಲೆಯಲ್ಲಿ ನಮಗೆ ಹೆಚ್ಚು ಮುಂದೆ ನೋಡಲಾಗುತ್ತಿರಲಿಲ್ಲ, ಆದರೆ ನಾವು ಶೀಘ್ರದಲ್ಲೇ ಬಿಳಿ ಬಟ್ಟೆಯನ್ನು ಧರಿಸಿದ ವ್ಯಕ್ತಿಯನ್ನು ಗುರುತಿಸಿದೆವು. ನಾವು ಸ್ವಲ್ಪ ಭಯಪಡುತ್ತಿರುವುದನ್ನು ಕಂಡು, ಅವರು ನಮ್ಮನ್ನು ಸ್ನೇಹದಿಂದ ಹತ್ತಿರಕ್ಕೆ ಕರೆದರು. ಅವರು ಇಲ್ಲಿ ಕಾವಲುಗಾರನಾಗಿದ್ದಿದ್ದರೆ, ಅವರಿಗೆ ಮೇಜ್ದಾನ ಹೆಸರು ಹೇಗೆ ಗೊತ್ತಿತ್ತು?

ನಾವು ನಿಧಾನವಾಗಿ ಮಂದಹಾಸ ಬೀರುತ್ತಿರುವ ವ್ಯಕ್ತಿಯ ಕಡೆಗೆ ಸಾಗಿದೆವು. ಅವರ ರೂಪವು ಅದ್ಭುತವಾದ ಬೆಳಕಿನಿಂದ ಕಾಂತಿಯುತವಾಗಿ ಕಾಣುತ್ತಿತ್ತು. ಬೆಳಕು ಎಲ್ಲಿಂದ ಬರುತ್ತಿದೆ ಎಂದು ನಾನು ಸುತ್ತಲೂ ನೋಡಿದೆ. ಮೇಜ್ದಾ ಥಟ್ಟನೆ ಸಂತನಿಗೆ ನಮಸ್ಕರಿಸಿ, ಅವರ ಪಾದಗಳನ್ನು ಮುಟ್ಟಿದ. ಆ ಸಂತ ಮೇಜ್ದಾನನ್ನು ಅಪ್ಪಿಕೊಂಡು ಅವನ ತಲೆಗೆ ಮುತ್ತಿಟ್ಟರು. ನಾನೂ ಪೂಜ್ಯ ಸಂತರಿಗೆ ನಮಸ್ಕರಿಸಿದೆ. ಆಶೀರ್ವಾದದ ಸನ್ನೆಯೊಂದಿಗೆ, ಅವರು ನಮಗೆ, “ಜಯಸ್ತು!” (“ವಿಜಯ ನಿಮ್ಮದಾಗಲಿ!”) ಎಂದರು. ನಂತರ ಅವರು ಮೇಜ್ದಾನೊಂದಿಗೆ ಮಾತನಾಡಿದರು:

“ಮುಕುಂದ, ನಾನು ಇಂದು ನಿನ್ನ ಬಳಿಗೆ ಬರುವುದು ದೈವೇಚ್ಛೆಯಾಗಿತ್ತು. ನಾನು ನಿನಗೆ ಹೇಳುವುದನ್ನು ನೆನಪಿನಲ್ಲಿಟ್ಟುಕೊ. ಭಗವಂತನ ಇಷ್ಟಾರ್ಥಗಳನ್ನು ಪೂರೈಸಲು ನೀನು ಅವನ ಪ್ರತಿನಿಧಿಯಾಗಿ ಭೂಮಿಗೆ ಬಂದಿರುವೆ. ನಿನ್ನ ಶರೀರವು ಅವನ ಮಂದಿರ, ಅದು ಪ್ರಾರ್ಥನೆ ಮತ್ತು ಧ್ಯಾನದಿಂದ ಪವಿತ್ರೀಕರಿಸಲ್ಪಟ್ಟಿದೆ. ಭೌತಿಕ ವಿಷಯಾಸಕ್ತಿಗಳು ಅಥವಾ ಸಂತುಷ್ಟಿಗಳ ಬೆಂಬತ್ತಿ ಹೋಗಬೇಡ. ನೈಜ ಸಂತೋಷಕ್ಕೆ ಕಾರಣವಾಗುವ ಮಾರ್ಗವನ್ನು ನೀನು ತೋರಿಸುವೆ; ಮತ್ತು ನಿನ್ನ ಆಧ್ಯಾತ್ಮಿಕ ಜ್ಞಾನದಿಂದ ನೀನು ಅಜ್ಞಾನದಲ್ಲಿ ತೊಳಲಾಡುತ್ತಿರುವವರನ್ನು ಪಾರು ಮಾಡುವೆ. ನೀನು ಮಹಾ ಪುರುಷನೊಂದಿಗೆ (ಭಗವಂತನೊಂದಿಗೆ) ಒಂದಾಗಿರುವೆ ಎಂಬುದನ್ನು ಎಂದಿಗೂ ಮರೆಯಬೇಡ, ಧ್ಯಾನದಲ್ಲಿ ಅತ್ಯಂತ ಯಶಸ್ವಿಯಾದವರು ಮಾತ್ರ ಇದನ್ನು ಪ್ರಾಪ್ತಿಸಿಕೊಳ್ಳುತ್ತಾರೆ. ನಿನ್ನ ಶರೀರ, ಮನಸ್ಸು ಮತ್ತು ಜೀವನವು ಭಗವಂತನ ಚಿಂತನೆಯಿಂದ ಎಂದಿಗೂ ಒಂದು ಕ್ಷಣವೂ ಪಥಭ್ರಷ್ಟವಾಗಬಾರದು. ಪರಮಪಿತನ(ಭಗವಂತನ) ಆಶೀರ್ವಾದ ನಿನ್ನ ಮೇಲಿದೆ. ಅವನಲ್ಲಿ ನಿನ್ನ ವಿಶ್ವಾಸ ಸಂಪೂರ್ಣವಾಗಿರಬೇಕು. ಅವನು ನಿನ್ನನ್ನು ಎಲ್ಲಾ ಅಪಾಯಗಳಿಂದ ರಕ್ಷಿಸುತ್ತಾನೆ. ಈ ಜಗತ್ತಿನಲ್ಲಿ ಅವನು ಮಾತ್ರ ಶಾಶ್ವತ; ಉಳಿದುದೆಲ್ಲವೂ ಕ್ಷಣಿಕ ಮತ್ತು ಅವಿಶ್ವಸನೀಯ. ಒಂದು ದಿನ ನಿನ್ನ ಯೋಗದ ಆದರ್ಶಗಳು ಇಡೀ ಮನುಕುಲಕ್ಕೆ ಸ್ಫೂರ್ತಿ ನೀಡುತ್ತವೆ. ಮುಕುಂದ, ಮುಂದೆ ಸಾಗು!”

ನಾನು ಚಡಪಡಿಸುತ್ತಿದ್ದೆ, ಏಕೆಂದರೆ ಸಮಯ ಮೀರುತ್ತಿತ್ತು ಮತ್ತು ಕತ್ತಲಾಗುತ್ತಿತ್ತು. ಮನೆ ತಲುಪಲು ನಾವು ಬಹಳ ದೂರ ಹೋಗಬೇಕಾಗಿತ್ತು. ತಂದೆಯಿಂದ ಬೈಗಳು ಮತ್ತು ಅನಂತನಿಂದ ಹೊಡೆತಗಳನ್ನು ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಸಂತರು ನನ್ನ ಆಲೋಚನೆಯನ್ನು ಗ್ರಹಿಸಿದರು ಮತ್ತು ಹೇಳಿದರು, “ಆತಂಕ ಪಡಬೇಡಿ. ಚಿಂತೆಯಿಲ್ಲದೆ ಹೋಗಿ; ನೀವು ತಡವಾಗಿ ಬಂದಿರುವುದನ್ನು ಯಾರೂ ಗಮನಿಸುವುದಿಲ್ಲ.”

ನಾವು ಮನೆಗೆ ಹೊರಟೆವು. ಸ್ವಲ್ಪ ದೂರ ಕ್ರಮಿಸಿದ ನಂತರ ನಾವು ಹಿಂತಿರುಗಿ ನೋಡಿ, ಸಂತರು ಮೇಲೆತ್ತಿದ ಕೈಗಳಿಂದ ನಮ್ಮನ್ನು ಆಶೀರ್ವದಿಸುತ್ತಿರುವುದನ್ನು ಕಂಡೆವು. ನಂತರ ಅವರು ಅದೃಶ್ಯವಾದರು. ನಾನು ಮೇಜ್ದಾನ ಕಡೆಗೆ ತಿರುಗಿ ಮಾತನಾಡಿದೆ, ಆದರೆ ಅವನು ಆಲಿಸುತ್ತಿರಲಿಲ್ಲ. ಅವನು ತಲೆ ತಗ್ಗಿಸಿ, ಆಲೋಚನಾಪರನಾಗಿ ನಡೆಯುತ್ತಿದ್ದ. ನಾವು ಮನೆ ತಲುಪಿದ ಮೇಲೆ, ಮೇಜ್ದಾ ನೇರವಾಗಿ ಅವನ ಪ್ರಾರ್ಥನಾ ಕೋಣೆಗೆ ಹೋದ. ತಂದೆ ಮತ್ತು ಅನಂತ ಎಲ್ಲಿದ್ದಾರೆ ಎಂದು ನಾನು ವಿಚಾರಿಸಿದೆ. ಅನಂತನನ್ನು ಸ್ನೇಹಿತನ ಮನೆಗೆ ಆಹ್ವಾನಿಸಲಾಗಿದೆ ಮತ್ತು ತಂದೆ ಇನ್ನೂ ಕಚೇರಿಯಲ್ಲಿನ ಒಂದು ಮುಖ್ಯ ಸಭೆಯಿಂದ ಹಿಂತಿರುಗಿಲ್ಲ ಎಂದು ನನಗೆ ತಿಳಿದುಬಂತು. ಎಂತಹ ಸಂತೋಷ! ನಾವು ತಡವಾಗಿ ಹಿಂದಿರುಗಿದ ಬಗ್ಗೆ ಅವರಿಗೆ ತಿಳಿದಿರಲಿಲ್ಲ. ಮೇಜ್ದಾಗೆ ಹೇಳಲು ನಾನು ಪ್ರಾರ್ಥನಾ ಕೋಣೆಗೆ ಧಾವಿಸಿದೆ.

ಆದರೆ ಮೇಜ್ದಾ ನನ್ನೆಡೆಗೇ ಬರುತ್ತಿದ್ದ. ಅವನು ನನ್ನ ಕೈಹಿಡಿದು ಗೋಡೆಯ ಮೇಲೆ ನೇತುಹಾಕಿದ ಫೋಟೋದತ್ತ ಕರೆದೊಯ್ದ. ನಾವು ಅದರ ಮುಂದೆ ಒಂದು ಕ್ಷಣ ನಿಂತೆವು, ನಂತರ ಅವನು ಹೇಳಿದ, “ನೀನು ಅವರನ್ನು ಗುರುತಿಸಬಲ್ಲೆಯಾ? ನಮ್ಮೊಂದಿಗೆ ಮಾತನಾಡಿದ್ದು ಅವರೇ ಅಲ್ಲವೇ?”

ನನಗೆ ಆಶ್ಚರ್ಯವಾಯಿತು. ಹೌದು ಅವರೇ — ಅದೇ ಮಂದಹಾಸ. ಆದರೆ ಅವರು ಬಹಳ ಹಿಂದೆಯೇ ತೀರಿಹೋಗಿದ್ದರು. ಅವರು ಈಗ ನಮ್ಮ ಬಳಿಗೆ ಹೇಗೆ ಬಂದಿರಲು ಸಾಧ್ಯ? ಬಹಳ ವರ್ಷಗಳ ಹಿಂದೆಯೇ ತೀರಿಹೋಗಿದ್ದವರೊಂದಿಗೆ ನಾವು ಹೇಗೆ ಮಾತನಾಡಿರಲು ಸಾಧ್ಯ? ಅವರು ನಮ್ಮನ್ನು ಆಶೀರ್ವದಿಸಿದರು, ಮೇಜ್ದಾನನ್ನು ಅಪ್ಪಿಕೊಂಡರು ಮತ್ತು ಅವನ ತಲೆಗೆ ಮುತ್ತಿಟ್ಟರು. ವಿಸ್ಮಯದಿಂದ ನನಗೆ ಮಾತು ಹೊರಡದಾಯಿತು. ನಾನು ಸುಮ್ಮನೆ ಮೇಜ್ದಾ ಕಡೆ ನೋಡಿದೆ. ಮೇಜ್ದಾ ಮತ್ತು ನಾನು ಮಹಾನ್ ಲಾಹಿರಿ ಮಹಾಶಯರನ್ನು ನೋಡಿದ್ದೇವೆ ಮತ್ತು ಅವರೊಂದಿಗೆ ಮಾತನಾಡಿದ್ದೇವೆ ಎಂಬುದರಲ್ಲಿ ಯಾವುದೇ ಸಂಶಯವಿರಲಿಲ್ಲ! ಭಾರತದಾದ್ಯಂತ ಗೃಹಸ್ಥರು ಮತ್ತು ಋಷಿಗಳೆಂಬ ಭೇದವಿಲ್ಲದೆ ಸಲಹೆಗಾಗಿ ಯಾರ ಬಳಿಗೆ ಬರುತ್ತಿದ್ದರೋ ಆ ಸಂತ; ಆಶೀರ್ವಾದ ಮತ್ತು ಆಧ್ಯಾತ್ಮಿಕ ಬೋಧನೆಗಳನ್ನು ಪಡೆಯಲು ಜನರು ಅಂತ್ಯವಿಲ್ಲದ ಪ್ರವಾಹರೂಪದಲ್ಲಿ ಯಾರ ಬಳಿಗೆ ಬರುತ್ತಿದ್ದರೋ ಆ ಬೋಧಕ. ಮೇಜ್ದಾ ಜೊತೆ, ನಾನೂ ಯೋಗಾವತಾರರನ್ನು ನನ್ನ ಕಂಗಳಿಂದ ನೋಡಿದೆ ಮತ್ತು ಅವರೊಂದಿಗೆ ಮಾತನಾಡಿದೆ. ಆ ಅದ್ಭುತ ಅನುಭವದ ನೆನಪಾದಾಗಲೆಲ್ಲ ನನಗೆ ಇಂದಿಗೂ ರೋಮಾಂಚನವಾಗುತ್ತದೆ. ಅದು ನನ್ನ ನೆನಪಿನಲ್ಲಿ ಶಾಶ್ವತವಾಗಿ ಉಳಿದಿದೆ. ನಾನು ಅನುಗ್ರಹೀತನಾಗಿದ್ದೇನೆ: ಅವರ ಅಂತ್ಯವಿಲ್ಲದ ಕರುಣೆ, ಅವರ ಅತ್ಯುತ್ಕೃಷ್ಟ ಅನುಗ್ರಹ ನನ್ನ ಮೇಲಿದೆ. ನನ್ನ ಕೃತಜ್ಞತೆಗೆ ಎಣೆಯೇ ಇಲ್ಲ.

ಇದನ್ನು ಹಂಚಿಕೊಳ್ಳಿ