“ನಿಮ್ಮ ಪ್ರಜ್ಞೆಯ ತೊಟ್ಟಿಲು ಪುಟ್ಟ ಏಸುವಿನ ಅನಂತತೆಯನ್ನು ಹಿಡಿದಿಡುವಷ್ಟು ದೊಡ್ಡದಾಗಿರಲು
ಅನುವಾಗುವಂತೆ, ಎಲ್ಲಾ ಮಿತಿಗಳನ್ನು ಕಡಿದುಹಾಕಿ”
—ಪರಮಹಂಸ ಯೋಗಾನಂದ
ಗುರುದೇವ ಪರಮಹಂಸ ಯೋಗಾನಂದರ ಆಶ್ರಮಗಳಿಂದ ನಿಮಗೆಲ್ಲರಿಗೂ ಕ್ರಿಸ್ತ ಜಯಂತಿಯ ಹಾರ್ದಿಕ ಶುಭಾಶಯಗಳು, ಮತ್ತು ಪ್ರೀತಿಯ ಪ್ರಭು ಏಸುವಿನ ಹುಟ್ಟುಹಬ್ಬವನ್ನು ಗೌರವಿಸುವ ಈ ಪವಿತ್ರ ಋತುವಿನಲ್ಲಿ ಅವನ ಜೀವನವನ್ನು ಆವರಿಸಿಕೊಂಡಿದ್ದ ಅಗಣಿತ ಕ್ರಿಸ್ತ-ಪ್ರೇಮದ ಅನುಭವವನ್ನು ನೀವು ನಿಮ್ಮ ಭಕ್ತಿ ಮತ್ತು ಧ್ಯಾನದಿಂದ ಶ್ರುತಿಗೊಂಡ ಪ್ರಜ್ಞೆಯ ಮೂಲಕ ಅನುಭವಿಸುವಂತಾಗಲೆಂದು ನಾವು ಪ್ರಾರ್ಥಿಸುತ್ತೇವೆ. ಯಾರು ಪರಿಶುದ್ಧವಾಗಿ ಪ್ರಭುವಿನ ಬೆಳಕನ್ನು ಪ್ರತಿಫಲಿಸಬಲ್ಲರೋ ಅವರ ಮೂಲಕ ಬರುವಂತಹ ಅವನ ಅನುಗ್ರಹದ ಸ್ಪರ್ಶಕ್ಕೆ, ಹೃದಯ ಮತ್ತು ಮನಸ್ಸುಗಳು ತೆರೆದಾಗ, ನಮ್ಮನ್ನು ಆ ದೈವದಿಂದ ಬೇರೆಯಾಗಿಸುವ ಮಾಯಾ ಪರದೆ ಕಳಚಿ ಬೀಳುತ್ತದೆ. ಸಂಘರ್ಷಗಳಿಂದ ತುಂಬಿದ ಈ ವಿಶ್ವದ ಕತ್ತಲೆಯು ಹಿಂದೆ ಸರಿದು ನಮ್ಮೊಳಗೆ ಶಾಂತಿ ನೆಲೆಸುತ್ತದೆ. ನಮ್ಮ ನೈಜ, ಅಸೀಮ ಸ್ವರೂಪದ ಆತ್ಮ- ಸ್ಮೃತಿಯೊಂದಿಗೆ, ಹೊಸ ಭರವಸೆಯು ನಮ್ಮೊಳಗೆ ಏಳುತ್ತದೆ. ಇವೇ ವಿಶ್ವವ್ಯಾಪಿ ಕ್ರಿಸ್ತ ಪ್ರಜ್ಞೆಯ ನಿತ್ಯ ನೂತನ ಕೊಡುಗೆಗಳಾಗಿವೆ.
ಏಸುವಿನ ಯಶಸ್ವೀ ಜೀವನದ ಉದ್ದೇಶ, ನಮ್ಮಲ್ಲಿ ಧೈರ್ಯ ಮತ್ತು ವಿಶ್ವಾಸವನ್ನು ಬಡಿದೆಬ್ಬಿಸುವುದಾಗಿದೆ, ಅಂದರೆ, ಅದರಿಂದಾಗಿ, ಭಗವಂತನ ಅನುಗ್ರಹಗಳು ಮತ್ತು ನಮ್ಮ ಆಂತರಿಕ ಗ್ರಹಣಶೀಲತೆಯ ಮೂಲಕ ಜಾಗೃತಗೊಳ್ಳುವುದಕ್ಕಾಗಿ ಕಾಯುತ್ತಿರುವ ನಮ್ಮೊಳಗಿರುವ ದಿವ್ಯಪ್ರಜ್ಞೆಯನ್ನು ನಾವೂ ಪ್ರಕಟಿಸುವಂತಾಗಲಿ ಎಂದು. ವ್ಯಕ್ತಿಗತ ಹೃದಯಗಳು ಬದಲಾದಂತೆ, ಸತ್ಯ ಮತ್ತು ಪ್ರೀತಿಯ ನಿಯಮಗಳನ್ನು ಆಧಾರವಾಗಿಟ್ಟುಕೊಂಡು ಬದುಕುತ್ತಿರುವವರ ಪ್ರಭಾವಗಳಿಂದ ಮತ್ತು ಉನ್ನತ ಸ್ಪಂದನಗಳಿಂದ ಮನುಕುಲದ ಪ್ರಜ್ಞೆಯೂ ಬದಲಾಗುತ್ತದೆ. ಯೇಸುವಿನಲ್ಲಿ ಮೂರ್ತೀಭವಿಸಿದ್ದ ಅನಂತ ಕ್ರಿಸ್ತನನ್ನು ಸ್ವೀಕರಿಸಲು ನಾವು ನಮ್ಮ ಪ್ರಜ್ಞೆಯನ್ನು ವಿಸ್ತರಿಸುತ್ತಿರುವಂತೆ, ಆ ಪರಿವರ್ತನೆಯಲ್ಲಿ ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದು ಪಾತ್ರವಿದೆ. ನಮ್ಮ ಮತ್ತು ವಿಶ್ವವ್ಯಾಪಿ ಕ್ರಿಸ್ತನ ಉಪಸ್ಥಿತಿಯ ನಡುವೆ ಯಾವುದೇ ಅಡೆತಡೆಗಳಿಲ್ಲ, ಅದು ಕೇವಲ ನಮ್ಮ ಮನಸ್ಸು ಮತ್ತು ಹೃದಯಗಳಲ್ಲಿದೆ. “ನಿಮ್ಮ ಪ್ರಜ್ಞೆಗೆ ಗ್ರಾಹ್ಯವಾಗುವಂತೆ ಕ್ರಿಸ್ತನು ನಿಮ್ಮ ಬಳಿಗೆ ಬರಬೇಕೆಂದು ನೀವು ಬಯಸುವಿರಾದರೆ, ನೀವು ಎಲ್ಲಾ ಅಡೆತಡೆಗಳನ್ನು ಒಡೆಯಬೇಕು,” ಎಂದು ಗುರುದೇವರು ಹೇಳಿದ್ದಾರೆ. ಮಾಯೆ ಹಾಗೂ ಅಹಂನ ಭಯಗಳು ಮತ್ತು ಪೂರ್ವಗ್ರಹಗಳಿಂದ ನಿರ್ಮಿತವಾದ ತಡೆಗೋಡೆಗಳನ್ನು ನೀವು ಇಚ್ಛಿಸಿದಲ್ಲಿ ನಿಮ್ಮ ವಿಶಾಲ ಪ್ರಜ್ಞೆಯಿಂದ ತೆಗೆದುಹಾಕಬಹುದೆಂಬ ಬಿಡುಗಡೆಗೊಳಿಸುವಂತಹ ಆಲೋಚನೆಯನ್ನು ನಿಮ್ಮ ಕ್ರಿಸ್‌ಮಸ್‌ನ ತಯಾರಿಯಲ್ಲಿ ಇಟ್ಟುಕೊಳ್ಳಿ. ಅಸಮಾಧಾನಗಳು, ವಿಮರ್ಶಾತ್ಮಕ ಅಥವಾ ಸ್ವ-ಕೇಂದ್ರಿತ ಆಲೋಚನೆಗಳಿಂದ ನಾವು ಮನಸ್ಸನ್ನು ತೆರವುಗೊಳಿಸಿದಾಗ ಮತ್ತು ಏಸು ವ್ಯಕ್ತಪಡಿಸಿದ ಸಹಾನುಭೂತಿ ಮತ್ತು ಎಲ್ಲರನ್ನೂ ಒಳಗೊಳ್ಳುವ ಮನೋಭಾವ, ಅಂದರೆ ಬಾಹ್ಯ ಮನ್ನಣೆಯ ಅವಶ್ಯಕತೆಯಿಲ್ಲದ ವಿನಮ್ರತೆ ಮತ್ತು ತೀವ್ರತರವಾದ ಪೀಡನೆಗಳ ನಡುವೆಯೂ ಅವನನ್ನು ಹಗೆತನದಿಂದ ಪ್ರಭಾವಿತವಾಗದಂತೆ ಮಾಡಿದ, ಎಲ್ಲವನ್ನೂ ಕ್ಷಮಿಸುವಂತಹ ಪ್ರೀತಿಯನ್ನು ನಾವು ನಮ್ಮ ಅಸ್ತಿತ್ವದೊಳಗೆ ಅರಗಿಸಿಕೊಂಡಾಗ ಎಂತಹ ಉಪಶಮನದಾಯಕ ಶಾಂತಿಯ ಅನುಭವವಾಗುತ್ತದೆ. ಆತ್ಮ-ಸ್ವಾತಂತ್ರ್ಯಕ್ಕೆ ಕಾರಣವಾಗುವ ಆ ಗುಣಗಳನ್ನು ನೀವು ಪೋಷಿಸಿದಾಗ, ಕ್ರಿಸ್‌ಮಸ್‌ನ ನಿಜವಾದ ಜೀವಾಳವಾದ ಕ್ರಿಸ್ತನ-ಪ್ರೀತಿ ಮತ್ತು ಕ್ರಿಸ್ತನ-ಶಾಂತಿಗಳು ನಿಮ್ಮ ಹೃದಯವನ್ನು ಪ್ರವೇಶಿಸಲು ನೀವು ಅನುಮತಿಸುತ್ತೀರಿ.
ಆಂತರಿಕ ಸಂಸರ್ಗದ ಆಳವಾಗುತ್ತಿರುವ ಮೌನದಲ್ಲಿ ಏಸುವಿಗೆ ತಿಳಿದಿದ್ದಂತಹ ಭಗವಂತನ ಅತ್ಯುನ್ನತ ಅನುಭವವು ತೆರೆದುಕೊಳ್ಳುತ್ತದೆ. ಹಿಡಿದಿಡಲು ಸಾಧ್ಯವಾಗದಂತಹ ಎಣೆಯಿಲ್ಲದ ಪ್ರೀತಿಯು ಹೃದಯದಲ್ಲಿ ತುಂಬಲಾರಂಭಿಸುತ್ತದೆ, ಮತ್ತು ಎಲ್ಲ ಆತ್ಮಗಳನ್ನು ನಮ್ಮವೇ ಎಂಬಂತೆ ಆವರಿಸುತ್ತ ವಿಶಾಲವಾಗುತ್ತಿರುವ ವೃತ್ತದಲ್ಲಿ ಉಕ್ಕಿಹರಿಯುತ್ತದೆ. ಈ ಏಕತೆಯ ಭಾವವೇ ದೇವನು ನಮಗೆಲ್ಲರಿಗೂ ಕೊಡುವಂತಹ ಅತ್ಯುನ್ನತ ಉಡುಗೊರೆ. ಸರ್ವವ್ಯಾಪಿ ಕ್ರಿಸ್ತನನ್ನು ನಿಮ್ಮ ಆತ್ಮದ ಮಂದಿರದಲ್ಲಿ ಆಹ್ವಾನಿಸಿ, ನಿಮ್ಮ ಚಿಂತನೆ ಮತ್ತು ಕಾರ್ಯಗಳಿಂದ ಗೌರವಿಸುತ್ತಿರುವಂತೆ, ನಿಮಗೆ ಕ್ರಿಸ್ತಜಯಂತಿಯ ಆನಂದವು ಸಂಪೂರ್ಣವಾಗಿ ಲಭಿಸಲಿ ಮತ್ತು ಹೊಸ ವರ್ಷದ ಎಲ್ಲಾ ದಿನಗಳಲ್ಲೂ, ಸದಾ ವೃದ್ಧಿಸುತ್ತಿರುವ ಕ್ರೈಸ್ತಭಾವದ ಅರಿವು ನಿಮ್ಮ ಜೀವನದಲ್ಲಿ ನಿಮ್ಮೊಂದಿರಲಿ.
ನಿಮಗೂ ಮತ್ತು ನಿಮ್ಮ ಪ್ರೀತಿಪಾತ್ರರೆಲ್ಲರಿಗೂ ಕ್ರಿಸ್ತಜಯಂತಿಯ ಹಾರ್ದಿಕ ಶುಭಾಶಯಗಳು,

ಶ್ರೀ ಮೃಣಾಲಿನಿ ಮಾತಾ
ಕಾಪಿರೈಟ್ © 2013 ಸೆಲ್ಫ್ -ರಿಯಲೈಝೇಷನ್ ಫೆಲೋಷಿಪ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
















