ಯೋಗದ ಅಂತರಾಳವೇನು?

"ಆತ್ಮವು ಚೇತನದೊಂದಿಗೆ ಸಂಯೋಗವಾಗುವುದೇ ಯೋಗ — ಪ್ರತಿಯೊಬ್ಬರೂ ಅರಸುತ್ತಿರುವ ಮಹದಾನಂದೊಂದಿಗೆ ಪುನರ್ಮಿಲನ. ಇದು ಎಷ್ಟು ಸುಂದರವಾದ ನಿರೂಪಣೆಯಲ್ಲವೇ? ಚೇತನದ ನಿತ್ಯ ನೂತನ ಆನಂದದಲ್ಲಿ, ನೀವು ಕಾಣುವ ಆನಂದವು ಬೇರೆ ಯಾವುದೇ ಆನಂದಕ್ಕಿಂತ ಮಹತ್ತರವಾದದ್ದು, ಮತ್ತು ಯಾವುದೂ ಕೂಡ ನಿಮ್ಮನ್ನು ನಿರುತ್ಸಾಹಗೊಳಿಸಲಾರದು ಎಂಬುದನ್ನು ನೀವು ಮನಗಾಣುತ್ತೀರಿ."

ಪರಮಹಂಸ ಯೋಗಾನಂದ

ಪುರಾತನ ಕಾಲದಿಂದಲೂ ಧ್ಯಾನವು ಭಾರತೀಯ ತತ್ವಚಿಂತನೆಯ ಅಂತರಾಳವಾಗಿದೆ. ಇದರ ಉದ್ದೇಶವನ್ನು ಯೋಗ ಪದದ ವಾಚ್ಯಾರ್ಥದಲ್ಲಿ ಕಾಣಬಹುದು: “ಸಂಯೋಗ” — ವೈಯಕ್ತಿಕ ಪ್ರಜ್ಞೆ ಅಥವಾ ಆತ್ಮವು ಅನಂತತೆಯೊಂದಿಗೆ, ನಿತ್ಯಾನಂದದೊಂದಿಗೆ ಅಥವಾ ಚೇತನದೊಂದಿಗೆ ಸಂಯೋಗಗೊಳ್ಳುವುದು.

ಚೇತನದ ಆನಂದಮಯ ಪ್ರಜ್ಞೆಯಲ್ಲಿನ ಈ ಸಂಯೋಗವನ್ನು ಸಿದ್ಧಿಸಿಕೊಳ್ಳಲು — ಮತ್ತು ಹೀಗೆ ನಮ್ಮನ್ನು ನಾವು ಎಲ್ಲ ರೀತಿಯ ಕ್ಲೇಶಗಳಿಂದ ಮುಕ್ತಗೊಳಿಸಿಕೊಳ್ಳ — ಒಂದು ಕಾಲ-ಪರೀಕ್ಷಿತ ಮತ್ತು ವ್ಯವಸ್ಥಿತ ಪ್ರಕ್ರಿಯೆಯನ್ನು ಅನುಸರಿಸಿ ಮಾಡುವ ಧ್ಯಾನದ ಸಹನಶೀಲ ಅಭ್ಯಾಸವು ಬೇಕಾಗುತ್ತದೆ. ಅಂದರೆ, ನಾವು ಒಂದು ವಿಜ್ಞಾನವನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ.

ರಾಜ ಯೋಗವೇ ಭಗವತ್‌-ಸಾಕ್ಷಾತ್ಕಾರದ ಸಮಗ್ರವಾದ ವಿಜ್ಞಾನ — ಯೋಗ ಗ್ರಂಥಗಳಲ್ಲಿ ಉಲ್ಲೇಖಿಸಿರುವ ಧ್ಯಾನ ಹಾಗೂ ಯುಕ್ತ ಕ್ರಿಯೆಯ ಹಂತ ಹಂತದ ವಿಧಾನಗಳು, ಇವನ್ನು ಭಾರತದ ಸನಾತನ ಧರ್ಮದ ಸಾರಭೂತ ಅಭ್ಯಾಸಗಳೆಂದು ಸಹಸ್ರಾರು ವರ್ಷಗಳಿಂದ ನಮಗಾಗಿ ಕೊಡಲಾಗಿದೆ. ಈ ಕಾಲಾತೀತ ಹಾಗೂ ಸಾರ್ವತ್ರಿಕ ಯೋಗ ವಿಜ್ಞಾನವೇ ಎಲ್ಲ ನೈಜ ಧರ್ಮಗಳ ಅಂತರಾಳದಲ್ಲಿರುವ ಗಹನವಾದ ಬೋಧನೆಗಳಿಗೆ ಆಧಾರವಾಗಿದೆ.

ಯೋಗದಾ ಸತ್ಸಂಗದ ರಾಜ ಯೋಗದ ಬೋಧನೆಗಳು, ಕ್ರಿಯಾ ಯೋಗದ ತಳಹದಿಯ ಮೇಲೆ ರೂಪಿತವಾಗಿರುವ ದೇಹ, ಮನಸ್ಸು ಹಾಗೂ ಆತ್ಮವು ಪರಿಪೂರ್ಣವಾಗಿ ತೆರೆದುಕೊಳ್ಳುವ ಜೀವನಶೈಲಿಯೆಡೆಗಿನ ಮಾರ್ಗದ ಸ್ಥೂಲ ವಿವರಣೆಯನ್ನು ನೀಡುತ್ತವೆ. ಇದರಲ್ಲಿ ಭಗವದ್ಗೀತೆಯಲ್ಲಿ ಭಗವಾನ್‌ ಕೃಷ್ಣ ಮತ್ತು ಯೋಗ ಸೂತ್ರಗಳಲ್ಲಿ ಋಷಿ ಪತಂಜಲಿ ಹೇಳಿರುವ ಆದರೆ ವಿಶದೀಕರಿಸದ ಪ್ರಾಣಾಯಾಮದ (ಪ್ರಾಣ-ಶಕ್ತಿಯ ನಿಯಂತ್ರಣ) ತಂತ್ರವು ಸೇರಿದೆ. ಹಲವು ಶತಮಾನಗಳ ಹಿಂದೆಯೇ ಮಾನವಕೋಟಿಯಿಂದ ಕಣ್ಮರೆಯಾಗಿದ್ದ ಕ್ರಿಯಾ ಯೋಗವನ್ನು ಇಂದಿನ ಪೀಳಿಗೆಗಾಗಿ ಪ್ರಖ್ಯಾತ ಯೋಗ ಪುರುಷರ ಪರಂಪರೆಯಾದ: ಮಹಾವತಾರ್‌ ಬಾಬಾಜಿ, ಲಾಹಿರಿ ಮಹಾಶಯ, ಸ್ವಾಮಿ ಶ್ರೀ ಯುಕ್ತೇಶ್ವರ್ ಹಾಗೂ ಪರಮಹಂಸ ಯೋಗಾನಂದರಿಂದ, ಮತ್ತೆ ಬಳಕೆಗೆ ಬಂದಿದೆ.

ಕ್ರಿಯಾ ಯೋಗ ವಿಜ್ಞಾನವನ್ನು ಪಶ್ಚಿಮಕ್ಕೆ ತರಲು ಮತ್ತು ಜಗದಾದ್ಯಂತ ಪ್ರಸಾರಮಾಡಲು ಪರಮಹಂಸ ಯೋಗಾನಂದರನ್ನು ಅವರ ಪೂಜ್ಯ ಗುರುಗಳ ಪರಂಪರೆಯು ಆಯ್ಕೆಮಾಡಿತು; ಮತ್ತು ಈ ಉದ್ದೇಶಕ್ಕಾಗಿಯೇ ಅವರು 1920ರಲ್ಲಿ ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ ಅನ್ನು ಸ್ಥಾಪಿಸಿದರು. 

ಸಮತೋಲಿತ ಕ್ರಿಯಾ ಯೋಗ ಮಾರ್ಗದಲ್ಲಿ ಮುಖ್ಯವಾದದ್ದು ಯೋಗದಾ ಸತ್ಸಂಗ ಪಾಠಗಳಲ್ಲಿ ಪರಮಹಂಸ ಯೋಗಾನಂದರು ಕಲಿಸಿರುವ ಧ್ಯಾನದ ವೈಜ್ಞಾನಿಕ ತಂತ್ರಗಳ ದಿನನಿತ್ಯದ ಅಭ್ಯಾಸ. ಧ್ಯಾನವನ್ನು ಅಭ್ಯಾಸ ಮಾಡುವುದರಿಂದ, ನಾವು ಕೊನೆಯಿಲ್ಲದ ಶಾಂತಿ, ಪ್ರೇಮ, ಪರಿಜ್ಞಾನ ಹಾಗೂ ಆನಂದವನ್ನು ನಮ್ಮ ಅಸ್ತಿತ್ವದ ಸಹಜ ಪ್ರಕೃತಿಯಂತೆ ಮನಗಾಣಲು, ಶರೀರ ಹಾಗೂ ಮನಸ್ಸಿನ ಚಂಚಲತೆಯನ್ನು ಹೇಗೆ ನಿಶ್ಚಲಗೊಳಿಸುವುದು ಎಂಬುದನ್ನು ಕಲಿಯುತ್ತೇವೆ — ನಮ್ಮ ಸುತ್ತಮುತ್ತಲಿನ ಜಗತ್ತಿನಲ್ಲಿ ಏನೇ ಆಗುತ್ತಿದರೂ ಸಹ.

"ಹೆಚ್ಚು ಹೆಚ್ಚು ಧ್ಯಾನ ಮಾಡಿ. ಅದು ಎಷ್ಟು ಅದ್ಭುತವಾದುದೆಂದು ನಿಮಗೆ ತಿಳಿದಿಲ್ಲ. ದುಡ್ಡು, ಮಾನವ ಪ್ರೇಮ ಅಥವಾ ನೀವು ಯೋಚಿಸಲು ಸಾಧ್ಯವಿರುವ ಬೇರಾವುದನ್ನೋ ಅರಸುತ್ತ ಕಾಲ ಕಳೆಯುವ ಬದಲು ಧ್ಯಾನ ಮಾಡುವುದು ಹೆಚ್ಚು ಉನ್ನತವಾದದ್ದು. ನೀವು ಹೆಚ್ಚು ಧ್ಯಾನ ಮಾಡಿದಷ್ಟೂ, ಚಟುವಟಿಕೆಯ ಸಮಯದಲ್ಲಿ ನಿಮ್ಮ ಮನಸ್ಸು ಆಧ್ಯಾತ್ಮಿಕ ಸ್ತರದಲ್ಲಿ ಹೆಚ್ಚು ಕೇಂದ್ರಿತವಾದಷ್ಟೂ ನೀವು ಹೆಚ್ಚು ಮಗುಳ್ನಗಲು ಸಾಧ್ಯವಾಗುತ್ತದೆ. ನಾನು ಆ ಸ್ಥಿತಿಯಲ್ಲಿ, ಭಗವಂತನ ಪರಮಾನಂದದ ಪ್ರಜ್ಞೆಯಲ್ಲಿ ಸದಾ ಇರುತ್ತೇನೆ. ನನ್ನ ಮೇಲೆ ಯಾವುದೂ ಪರಿಣಾಮ ಬೀರುವುದಿಲ್ಲ. ನಾನು ಏಕಾಂಗಿಯಾಗಿದ್ದೇನೆಯೋ ಅಥವಾ ಜನರೊಡನಿದ್ದೇನೆಯೋ, ಭಗವಂತನ ಆನಂದ ಸದಾ ನನ್ನೊಡನಿರುತ್ತದೆ. ನಾನು ನನ್ನ ಮುಗುಳ್ನಗೆಯನ್ನು ನನ್ನಲ್ಲಿ ಹಿಡಿದಿಟ್ಟುಕೊಂಡಿದ್ದೇನೆ; ಆದರೆ ಅದನ್ನು ಶಾಶ್ವತವಾಗಿ ಗೆಲ್ಲುವುದು ಕಠಿಣ ಪರಿಶ್ರಮವಾಗಿತ್ತು! ಅವೇ ಮುಗುಳ್ನಗೆಗಳು ನಿಮ್ಮ ಆಂತರ್ಯದಲ್ಲೂ ಇವೆ. ಆತ್ಮದ ಅದೇ ಸಂತೋಷ ಮತ್ತು ಪರಮಾನಂದ ನಿಮ್ಮಲ್ಲೇ ಇವೆ. ನೀವೇನೂ ಅದನ್ನು ಸಂಪಾದಿಸಬೇಕಾಗಿಲ್ಲ; ಆದರೆ ಅದನ್ನು ಮತ್ತೆ ಪುನಃ ಪಡೆಯಬೇಕಷ್ಟೆ."

ಪರಮಹಂಸ ಯೋಗಾನಂದ

ಇದನ್ನು ಹಂಚಿಕೊಳ್ಳಿ