ಎಸ್‌ಆರ್‌ಎಫ್‌ ಅಂತರರಾಷ್ಟ್ರೀಯ ಕೇಂದ್ರಕಾರ್ಯಾಲಯದ 100ನೇ ವರ್ಷದ ಆಚರಣೆ

January 3, 2025

“ನನಗಿದ್ದ ಕನಸುಗಳನ್ನು ಮತ್ತು ನಾನು ಅದರ ಬಗ್ಗೆ ಕೆಲಸ ಮಾಡಿದ್ದನ್ನು, ಭಗವಂತ ಪೂರೈಸಿದ್ದಾನೆ — ಮತ್ತು ನಾನು ಅಂದುಕೊಂಡದ್ದಕ್ಕಿಂತ ಹೆಚ್ಚಾಗಿಯೇ. ಇದು ಏಕೆಂದರೆ, ಮೌಂಟ್‌ ವಾಷಿಂಗ್ಟನ್‌ ಕೇಂದ್ರವು ಸದಾ ಭಗವಂತನ ಉದ್ದೇಶ ಸಾಧನೆಗಾಗಿ ಶ್ರಮಿಸಿದ್ದರಿಂದ ಈ ಯೋಜನೆಗಳು ಸಫಲವಾಗಿವೆ.”

— ಪರಮಹಂಸ ಯೋಗಾನಂದ

ಇಸವಿ 2025 ಪರಮಹಂಸ ಯೋಗಾನಂದರು ಲಾಸ್‌ ಎಂಜಲೀಸ್‌ನ ಮೌಂಟ್‌ ವಾಷಿಂಗ್ಟನ್‌ ಮೇಲೆ ಸ್ಥಾಪಿಸಿದ ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ನ ಅಂತರರಾಷ್ಟ್ರೀಯ ಕೇಂದ್ರಕಾರ್ಯಾಲಯದ 100ನೇ ವರ್ಷವನ್ನು ಆಚರಿಸುತ್ತದೆ. 25 ವರ್ಷಗಳಿಗಿಂತಲೂ ಹೆಚ್ಚು ಕಾಲ ಅವರು ಇಲ್ಲೇ ನೆಲೆಸಿದ್ದರು, ಬೋಧಿಸಿದರು ಮತ್ತು ಭಗವಂತನೊಡನೆ ಸಂವಹನ ನಡೆಸಿದರು. ಮತ್ತು ಈ ಆಶ್ರಮದ ಕಾರ್ಯಾಲಯದಿಂದ ಅವರ ಉಪನ್ಯಾಸಗಳು, ಬರಹಗಳು ಮತ್ತು ಧ್ವನಿಮುದ್ರಿತ ಪ್ರವಚನಗಳನ್ನು ಪ್ರಕಟಿಸಿ ಜಗದಾದ್ಯಂತ ಎಲ್ಲರಿಗೂ ಲಭ್ಯವಾಗುವಂತೆ ಮಾಡಲಾಗುತ್ತಿದೆ.

1934ರಲ್ಲಿ, ಎಸ್‌ಆರ್‌ಎಫ್‌ ಅಂತರರಾಷ್ಟ್ರೀಯ ಕಾರ್ಯಾಲಯದ ಮುಂಭಾಗದಲ್ಲಿ ಪರಮಹಂಸ ಯೋಗಾನಂದರು. (ಡಿಜಿಟಲ್‌ ಮಾಧ್ಯಮದ ಸಹಾಯದಿಂದ ಕಪ್ಪು-ಬಿಳುಪಿನ ಈ ಚಿತ್ರವನ್ನು ಬಣ್ಣದ ಚಿತ್ರವನ್ನಾಗಿ ಮಾಡಲಾಗಿದೆ.)

ಭಾರತದ ಒಬ್ಬ ಯುವ ಸ್ವಾಮಿ ಲಾಸ್‌-ಏಂಜಲೀಸ್‌ನ ಹೃದಯ ಭಾಗದ ಹತ್ತಿರದಲ್ಲಿರುವ ಈ 12 ಎಕರೆ ಸ್ವತ್ತನ್ನು ಹೇಗೆ ಪಡೆದುಕೊಂಡರು? ಈ ಕಥೆಯು ಬಹಳ ವರ್ಷಗಳ ಹಿಂದೆಯೇ ಭಾರತದಲ್ಲಿ ಆರಂಭವಾಗುತ್ತದೆ. ಯುವಕರಾಗಿದ್ದ ಪರಮಹಂಸ ಯೋಗಾನಂದರು ಕಾಶ್ಮೀರಕ್ಕೆ ಭೇಟಿ ನೀಡಿದ್ದಾಗ ಶಂಕರರ ಪುರಾತನ ದೇವಸ್ಥಾನವನ್ನು ದೃಷ್ಟಿಸಿ ನೋಡುತ್ತಿದ್ದಾಗ ಅವರಿಗೆ ಒಂದು ಮಾನವಾತೀತ ಪ್ರಜ್ಞೆಯ ಅನುಭವವಾಯಿತು. ಬೆಟ್ಟದ ತುದಿಯಲ್ಲಿರುವ ದೇವಾಲಯವು ಮೌಂಟ್ ವಾಷಿಂಗ್ಟನ್‌ನ ಮೇಲಿರುವ ಮಹಲಾಗಿ ರೂಪಾಂತರಗೊಳ್ಳುವುದನ್ನು ಅವರು ಕಂಡರು, ನಂತರ ಅಲ್ಲಿ ಅವರು ತಮ್ಮ ಕೇಂದ್ರಕಾರ್ಯಲಯವನ್ನು ಸ್ಥಾಪಿಸಿದರು, ಅದನ್ನು ಅವರು ಪ್ರೀತಿಯಿಂದ ಮದರ್ ಸೆಂಟರ್ ಎಂದು ಕರೆಯುತ್ತಿದ್ದರು. ಆ ಅಸಾಧಾರಣ ನೋಟವು ಎಷ್ಟು ಸ್ಪಷ್ಟವಾಗಿತ್ತೆಂದರೆ, ಈ ಭವ್ಯವಾದ ಕಟ್ಟಡದ ಒಳಗಿನ ಮಹಡಿಗೆ ಹೋಗುವ ಮೆಟ್ಟಿಲುಗಳಂತಹ ವಿವರಗಳನ್ನು ಕೂಡ ಕಂಡೆ ಎಂದು ಪರಮಹಂಸಜಿ ನಂತರ ನೆನಪಿಸಿಕೊಂಡರು.

ಬೋಸ್ಟನ್‌ ಮತ್ತು ಪೂರ್ವ ತೀರದ ನಗರಗಳಲ್ಲಿ ಬೋಧಿಸುತ್ತ ಹಲವಾರು ವರ್ಷಗಳನ್ನು ಕಳೆದ ನಂತರ, ಪರಮಹಂಸರು ಖಂಡಾಂತರ ಉಪನ್ಯಾಸ ಪ್ರವಾಸದ ಕೊನೆಯಲ್ಲಿ, ಡಿಸೆಂಬರ್‌ 1924ರಲ್ಲಿ ಲಾಸ್‌ ಏಂಜಲೀಸ್‌ಗೆ ಬಂದಿಳಿದರು. ತತ್‌ಕ್ಷಣ ಅವರ ಸಂದೇಶವು ಶಕ್ತಿ ಉತ್ಸಾಹಗಳಿಂದ ತುಡಿಯುತ್ತಿರುವ ಪಶ್ಚಿಮ ತೀರದ ನಗರದಲ್ಲಿ ಆಶಾದಾಯಕ ಪ್ರತಿಕ್ರಿಯೆಯನ್ನು ಪಡೆಯಿತು ಮತ್ತು ನಗರ ಮಧ್ಯಭಾಗದಲ್ಲಿದ್ದ ಫಿಲ್‌ಹಾರ್ಮೋನಿಕ್‌ ಸಭಾಂಗಣದಲ್ಲಿ ಸಾವಿರಾರು ಜನರು ಅವರ ಉಪನ್ಯಾಸಗಳನ್ನು ಕೇಳಲು ಬಂದರು. “ನಾವು ಒಂದು ಕೇಂದ್ರವನ್ನು ಸ್ಥಾಪಿಸಬಹುದಾದ ಜಾಗವನ್ನು ಇಲ್ಲಿ ಲಾಸ್‌ ಏಂಜಲೀಸ್‌ನಲ್ಲಿ, ಕಿನ್ನರರ ನಗರದಲ್ಲಿ, ಹುಡುಕೋಣ. ಇಲ್ಲಿ ನಾನು ಬಹಳ ಅದ್ಭುತವಾದ ಆಧ್ಯಾತ್ಮಿಕ ಸ್ಪಂದನವನ್ನು ಕಾಣುತ್ತಿದ್ದೇನೆ,” ಎಂದು ಅವರು ಒಂದು ದಿನ ತಮಗೆ ಸಹಾಯ ಮಾಡುತ್ತಿದ್ದ ಶಿಷ್ಯರಿಗೆ ಹೇಳಿದರು.

ಅವರು ಮತ್ತು ಅವರ ಶಿಷ್ಯರ ಒಂದು ಸಣ್ಣ ತಂಡ ಮೌಂಟ್‌ ವಾಷಿಂಗ್ಟನ್‌ನ ಮರಗಳು ತುಂಬಿದ ಪ್ರದೇಶದವರೆಗೂ ಒಂದು ಸಣ್ಣ ಜಮೀನನ್ನು ನೋಡಲು ಹೋಗಿದ್ದರು, ಆಗ ಕಡೆಯಲ್ಲಿ ಅವರು ಒಮ್ಮೆ ಬಹಳ ಆಕರ್ಷಕವಾಗಿದ್ದ ಮೌಂಟ್‌ ವಾಷಿಂಗ್ಟನ್‌ ಹೋಟೆಲಿನ ದೊಡ್ಡ ಕಟ್ಟಡವನ್ನು ಹಾದು ಹೋದರು.

ಮೌಂಟ್‌ ವಾಷಿಂಗ್ಟನ್‌ ಹೋಟೆಲಿನ 1909ರ ಸುಮಾರಿನ ಪೋಸ್ಟ್‌ಕಾರ್ಡ್ ಚಿತ್ರ

ಪರಮಹಂಸ ಯೋಗಾನಂದರಿಗೆ ಕುತೂಹಲ ಕೆರಳಿತು. ಆ ಸ್ವತ್ತನ್ನು ಮತ್ತೆ ನೋಡಲು ಹಿಂದೆ ಹೋಗುವಂತೆ ಅವರಿಗೆ ಹೇಳಿದರು. ಅವರು ಕಾರಿನಿಂದ ಇಳಿದು ಆ ಖಾಲಿ ಇದ್ದ ಆದರೆ ಭವ್ಯವಾದ ಕಟ್ಟಡದ ಮುಂಭಾಗದಲ್ಲಿದ್ದ ವಾಹನ ಪಥದ ಮುಂದೆ ನಿಂತು ನೋಡುತ್ತಾ, “ಈ ಜಾಗ ನಮ್ಮದೆಂದು ಅನಿಸುತ್ತಿದೆ!” ಎಂದು ಹೇಳಿದರು.

ಅವರ ಶಿಷ್ಯರ ಉದಾರ ಸಹಾಯದಿಂದ ಮತ್ತು ಗುರುಗಳು ಮಾಡಿಕೊಂಡ ಎರಡು ಭೋಗ್ಯಗಳಿಂದ, 1925ರಲ್ಲಿ ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ನ ಅಂತರರಾಷ್ಟ್ರೀಯ ಕೇಂದ್ರಕಾರ್ಯಾಲಯವು ಉಗಮವಾಯಿತು. ಅವರ ಆಧ್ಯಾತ್ಮಿಕ ಕಾರ್ಯಕ್ರಮಕ್ಕೆ ಒಂದು ಶಾಶ್ವತ ನೆಲೆ ಸಿಕ್ಕಿದ್ದು, ಪರಮಹಂಸ ಯೋಗಾನಂದರಿಗೆ ಹೆಚ್ಚು ಹೆಚ್ಚು ಸತ್ಯಾನ್ವೇಷಕರನ್ನು ತಲುಪಲು ಸಾಧ್ಯವಾಯಿತು.

ಪರಮಹಂಸಜಿಯವರ ನಿರ್ದೇಶನದಲ್ಲಿ, ಆ ಜಾಗವು ಉದ್ಯಾನವನದಂತಹ ಆವರಣಗಳು, ಭವ್ಯವಾದ ವೃಕ್ಷಗಳು ಮತ್ತು ಧ್ಯಾನದ ಉದ್ಯಾನವನಗಳಿಂದ ರೂಪಿತಗೊಂಡ ಒಂದು ಪ್ರಶಾಂತವಾದ ವಿಶ್ರಾಂತಿಧಾಮವಾಯಿತು – ಸದಾ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಲಾಸ್‌ ಏಂಜಲೀಸ್‌ನಲ್ಲಿ ಶಾಂತಿ ಹಾಗೂ ಸಾಮರಸ್ಯದ ಒಂದು ಆರಾಧನಾ ಮಂದಿರವಾಯಿತು. ಮದರ್‌ ಸೆಂಟರ್‌ನಲ್ಲಿರುವ ಅವರು ವಾಸಿಸುತ್ತಿದ್ದ ಜಾಗವನ್ನು ಇಂದಿಗೂ ಒಂದು ಮಂದಿರದಂತೆ ಕಾಪಾಡಿಕೊಂಡು ಬರಲಾಗಿದೆ, ಮತ್ತು ಅಲ್ಲಿಯ ಗ್ರಂಥಭಂಡಾರ ಹಾಗೂ ಸ್ವಾಗತ ಕೋಣೆಯಲ್ಲಿ ಅವರು ಉಪಯೋಗಿಸುತ್ತಿದ್ದ ವಸ್ತುಗಳನ್ನು ಪ್ರದರ್ಶಿಸಲಾಗಿದೆ. ವರ್ಷವಿಡೀ ಅವರು ನಡೆಸುತ್ತಿದ್ದ ಸತ್ಸಂಗಗಳ ಪೂಜಾಮಂದಿರವನ್ನು ಪ್ರತಿದಿನ ಪ್ರಾರ್ಥನೆ ಮತ್ತು ಧ್ಯಾನಕ್ಕಾಗಿ ತೆರೆದಿಡಲಾಗಿದೆ; ಮತ್ತು ಅವರು ಅಗಾಗ್ಗೆ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದ ಸುಂದರ ಹೊರಾಂಗಣ “ಟೆಂಪಲ್‌ ಆಫ್‌ ಲೀವ್ಸ್‌” ಕೂಡ ಪ್ರಶಾಂತ ಚಿಂತನೆಗೆ ಸಂದರ್ಶಕರನ್ನು ಆಮಂತ್ರಿಸುತ್ತದೆ.

1925ರಲ್ಲಿ ಹೊಸದಾಗಿ ಕೊಂಡುಕೊಂಡ ಕಟ್ಟಡದ ಮುಂಭಾಗದಲ್ಲಿ ಪರಮಹಂಸ ಯೋಗಾನಂದರು
“ಟೆಂಪಲ್‌ ಆಫ್‌ ಲೀವ್ಸ್‌”
ಉದ್ಯಾನವನಗಳಲ್ಲಿ ಧ್ಯಾನ ಮಾಡುತ್ತಿರುವ ಸಂದರ್ಶಕರು

ಎಸ್‌ಆರ್‌ಎಫ್‌ ಕೇಂದ್ರಕಾರ್ಯಾಲಯದ ಆವರಣವನ್ನು ವ್ಯಾಪಿಸಿರುವ ಪರಮಹಂಸಜಿಯವರ ದಿವ್ಯ ಪ್ರಜ್ಞೆಯ ಶಕ್ತಿಯುತ ಸ್ಪಂದನಗಳಿಂದಾಗಿ, ಯಾರು ಗ್ರಹಣಾಕಾಂಕ್ಷಿ ಹೃದಯದಿಂದ ಅಲ್ಲಿಗೆ ಭೇಟಿ ನೀಡಿದ್ದಾರೋ ಅವರು, ಅದು ತಮ್ಮ ಬದುಕಿನಲ್ಲಿ ನೀಡಿದ ಪರಿವರ್ತಕ ಪ್ರಭಾವವನ್ನು ದೃಢೀಕರಿಸಿದ್ದಾರೆ.

ನಿಮಗೆ ತಿಳಿದಿರುವ ಹಾಗೆ, ಮಾರ್ಚ್‌ 2024ರಲ್ಲಿ ನಾವು ಪರಮಹಂಸಜಿಯವರ ಕಟ್ಟೊಲವಿನ ಮದರ್‌ ಸೆಂಟರ್‌ ಅನ್ನು ಮುಂದಿನ ನೂರು ವರ್ಷಗಳು ಮತ್ತು ಅದರಾಚೆಗೂ ಕಾರ್ಯ ನಿರ್ವಹಿಸಲು ತೆಗೆದುಕೊಂಡು ಹೋಗುವ ಯೋಜನೆಯಾದ ಎಸ್‌ಆರ್‌ಎಫ್‌ನ ಅಂತರರಾಷ್ಟ್ರೀಯ ಕೇಂದ್ರಕಾರ್ಯಾಲಯದ ಬದಲಾವಣೆಗಳು ಮತ್ತು ಪುನಃಸ್ಥಾಪನೆಯ ದೊಡ್ಡ ಆಯೋಜನೆಯನ್ನು ಲಾಸ್‌ ಎಂಜಲೀಸ್‌ ನಗರಪಾಲಿಕೆಗೆ ಸಲ್ಲಿಸಿದ್ದೇವೆ. ಅಂತರರಾಷ್ಟ್ರೀಯ ಕೇಂದ್ರಕಾರ್ಯಾಲಯದ ಕಟ್ಟಡಕ್ಕೆ ಮಾಡಲಿರುವ ಪ್ರಧಾನ ಭೂಕಂಪ ನಿರೋಧಕ ಮತ್ತು ಜೀವ-ರಕ್ಷಕ ಸುಧಾರಣೆಗಳಷ್ಟೇ ಅಲ್ಲದೆ, ಯೋಜನೆಯಲ್ಲಿ ಪರಮಹಂಸ ಯೋಗಾನಂದರ ಗೌರವಾರ್ಥವಾಗಿ ಒಂದು ಪುಟ್ಟ ಉದ್ಯಾನ ಮಂದಿರದ ನಿರ್ಮಾಣವೂ ಸೇರಿದೆ. ಅನುಮತಿ ಪ್ರಕ್ರಿಯೆಯ ಭಾಗವಾಗಿ ನಾವು ನಗರಪಾಲಿಕೆಯ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ ಮತ್ತು ಮುಂಬರುವ ತಿಂಗಳುಗಳಲ್ಲಿ ಯೋಜನೆಯ ಮುಂದುವರಿಕೆಯನ್ನು ನಿಮ್ಮೊಡನೆ ಹಂಚಿಕೊಳ್ಳಲು ಎದುರು ನೋಡುತ್ತಿದ್ದೇವೆ.

ಧ್ಯಾನ ಉದ್ಯಾನಗಳಲ್ಲಿ ನೆಲೆಸಲಿರುವ ಭವಿಷ್ಯದ ಉದ್ಯಾನ ಮಂದಿರದ ಚಿತ್ರಣ

ಪರಮಹಂಸಜಿಯವರ ಹೃದಯಕ್ಕೆ ಬಹಳ ಆಪ್ತವಾದ ಮತ್ತು ಯೋಗದ ಸಾರ್ವತ್ರಿಕ ವಿಜ್ಞಾನವನ್ನು ಎಲ್ಲರ ಬಳಿ ತರಲು ಬಯಸಿದ ಅವರ ನಿಯೋಗದ ಕೇಂದ್ರ ಬಿಂದುವಾಗಿದ್ದ ಎಸ್‌ಆರ್‌ಎಫ್‌ ಮದರ್‌ ಸೆಂಟರ್‌ನ ಒಂದು ವಾಸ್ತವಾಭಾಸದ ಯಾತ್ರೆಯನ್ನು ಕೈಗೊಳ್ಳಿ ಎಂದು ನಾವು ನಿಮ್ಮನ್ನು ಸ್ವಾಗತಿಸುತ್ತೇವೆ.

ಇದನ್ನು ಹಂಚಿಕೊಳ್ಳಿ