ಪ್ರಾರ್ಥನೆಗಳು ಮತ್ತು ದೃಢೀಕರಣಗಳು

ದೃಢೀಕರಣದ ಸಿದ್ಧಾಂತ ಹಾಗೂ ಸೂಚನೆಗಳು ಓ ಸರ್ವವ್ಯಾಪಿ ರಕ್ಷಕನೇ….ಜೀವನ್ಮರಣಗಳಲ್ಲಿ, ಖಾಯಿಲೆ, ಬರ, ಅಂಟುಬೇನೆ ಅಥವಾ ಬಡತನದಲ್ಲಿ, ನಾನು ಸದಾ ನಿನ್ನ ಹತ್ತಿರದಲ್ಲಿರುವಂತಾಗಲಿ. ಬಾಲ್ಯಾವಸ್ಥೆ, ಯೌವ್ವನ, ವಯಸ್ಸು ಹಾಗೂ ಜಗತ್ತಿನ ವಿಪ್ಲವಗಳ ಬದಲಾವಣೆಗಳಿಂದ ಮಾರ್ಪಾಡಾಗದಂತಹ ಅಮರ ಚೇತನ ನಾನು ಎಂಬುದನ್ನು ಅರಿಯಲು ನನಗೆ ಸಹಾಯ ಮಾಡು.
ಭಗವಂತನೇ, ನಿನ್ನ ಅಸೀಮ ಹಾಗೂ ಸರ್ವಉಪಶಮನಕಾರಕ ಶಕ್ತಿಯು ನನ್ನೊಳಗಿದೆ. ನನ್ನ ಆಜ್ಞಾನದ ಅಂಧಕಾರದೊಳಗೆ ನಿನ್ನ ಬೆಳಕು ಅಭಿವ್ಯಕ್ತಿಯಾಗಲಿ. ಎಲ್ಲೆಲ್ಲಿ ಈ ಉಪಶಮನಕಾರಕ ಬೆಳಕು ಪ್ರಕಾಶಿಸುತ್ತಿದೆಯೋ, ಅಲ್ಲಿ ಪರಿಪೂರ್ಣತೆಯಿದೆ. ಆದ್ದರಿಂದ, ನನ್ನೊಳಗೆ ಪರಿಪೂರ್ಣತೆಯಿದೆ.
ನನ್ನ ಆತ್ಮದಲ್ಲಿ ಎಲ್ಲ ಜ್ಞಾನ ಹಾಗೂ ಶಕ್ತಿ ಈಗಾಗಲೇ ಇವೆ ಎಂದು ಪ್ರತ್ಯಕ್ಷಜ್ಞಾನದಿಂದ ಅರಿಯುತ್ತ ನಾನು ನನ್ನ ದಿವ್ಯ ಜನ್ಮಸಿದ್ಧ ಹಕ್ಕನ್ನು ಕೇಳುತ್ತಿದ್ದೇನೆ.
ಪ್ರೀತಿಪಾತ್ರ ಭಗವಂತನೇ, ಆನಂದದಲ್ಲಿ ದುಃಖದಲ್ಲಿ, ಬದುಕಿನಲ್ಲಿ ಸಾವಿನಲ್ಲಿ ನಿನ್ನ ಕಾಣದ ಸರ್ವರಕ್ಷಕ ಹೊದಿಕೆ ಸದಾ ನನ್ನನ್ನು ಆವರಿಸಿದೆ ಎಂಬುದನ್ನು ನಾನು ತಿಳಿಯುವಂತೆ ಮಾಡು.
ಭಗವಂತ, ನನ್ನೊಳಗೆ ಮತ್ತು ನನ್ನ ಸುತ್ತಮುತ್ತಲಿದ್ದಾನೆ, ನನ್ನನ್ನು ರಕ್ಷಿಸುತ್ತಿದ್ದಾನೆ; ಆದ್ದರಿಂದ ಅವನ ಮಾರ್ಗದರ್ಶಿತ ಬೆಳಕನ್ನು ಅಡ್ಡಿಪಡಿಸುವ ನನ್ನ ಭಯವನ್ನು ದೂರಮಾಡುತ್ತೇನೆ.
ಭಗವಂತನ ಸಾಮರ್ಥ್ಯವು ಅಸೀಮವಾದುದು ಎಂದು ನಾನು ಅರಿತಿದ್ದೇನೆ; ಹಾಗೂ ನಾನು ಅವನ ಪ್ರತಿರೂಪವಾಗಿರುವುದರಿಂದ ನನ್ನಲ್ಲೂ ಎಲ್ಲ ಅಡ್ಡಿ ಆತಂಕಗಳನ್ನು ಎದುರಿಸುವ ಸಾಮರ್ಥ್ಯವಿದೆ.
ನನ್ನಲ್ಲಿ ಪರಮಾತ್ಮನ ಸೃಜನಶೀಲ ಶಕ್ತಿಯಿದೆ. ಅಸೀಮ ಬುದ್ಧಿಶಕ್ತಿಯು ನನ್ನನ್ನು ಮಾರ್ಗದರ್ಶಿಸುತ್ತದೆ ಮತ್ತು ಪ್ರತಿಯೊಂದು ಸಮಸ್ಯೆಯನ್ನೂ ಬಗೆಹರಿಸುತ್ತದೆ.
ನಾನು ವಿರಮಿಸುತ್ತ ನನ್ನೆಲ್ಲ ಮಾನಸಿಕ ಹೊರೆಗಳನ್ನು ಬದಿಗಿರಿಸಿ, ನನ್ನ ಮೂಲಕ ಭಗವಂತನು ತನ್ನ ಪರಿಪೂರ್ಣ ಪ್ರೇಮ, ಶಾಂತಿ ಮತ್ತು ಜ್ಞಾನವನ್ನು ವ್ಯಕ್ತಪಡಿಸಲು ಸಮ್ಮತಿ ನೀಡುತ್ತೇನೆ.

ಇದನ್ನು ಹಂಚಿಕೊಳ್ಳಿ